ಅವ ಬೆನ್ನು ಹಿಂದ ಸದಾ ಇರಬೇಕು…!

ಈಗಿನ ಕಾಲ ಎಷ್ಟು ವಿಚಿತ್ರ ಆಗೇದ ಅಂದ್ರ ಹಿಂದು ನಿಂತು ಬೆನ್ನು ತಟ್ಟೊ ಮಂದಿಗಿಂತ, ಬೆನ್ನಿಗೆ ಚೂರಿ ಹಾಕೊ ಮಂದಿನ ಭಾಳ ಆಗ್ಯಾರ. ಅದೇನು ಹೊಸದಲ್ಲ ಬಿಡ್ರಿ. ಮಹಾಭಾರತದ ಕಾಲದಿಂದಲೂ ನಡಕೊತ ಬಂದದ. ಹುಟ್ಟಿನಿಂದ ಸಾವಿನ ತನಕ ನಮ್ಮ ಹಿಂದ ಯಾವಾಗಲೂ ಒಬ್ಬ ವ್ಯಕ್ತಿ ಇದ್ದ ಇರ್ತಾನ. ಅವ ಇರಲಿಕ್ಕೆ ಬೇಕು. ಇಲ್ಲಾ ಅಂದ್ರ ನಮಗ ಜೀವನ ನಡೆಸೋದು ಭಾಳ ತ್ರಾಸ ಆಗ್ತದ. ಹೊಳಿಗೆಯೊಳಗ ಹೂರಣ ತುಂಬಿದಂಗ, ನಮ್ಮ ತಲಿಯೊಳಗ ವಿದ್ಯೆ ತುಂಬಲಿಕ್ಕೆ, ಜಗತ್ತಿನ್ಯಾಗ ಒಳ್ಳೆದು ಯಾವುದು? ಕೆಟ್ಟದ್ದು ಯಾವುದು? ತೋರಸ್ಲಿಕ್ಕೆ ಅವ ಸದಾ ನಮ್ಮ ಜೊತೆ ಇರಬೇಕು.

ಆ ವ್ಯಕ್ತಿ ನಮ್ಮ ಮುಂದ ಅನೇಕ ರೂಪದೊಳಗ ಬಂದು ಹೋಗ್ತಾನ. ಹೆಚ್ಚಾನೆಚ್ಚು ನಾವ ಅವನನ್ನ ಹುಡುಕಿಕೊಂಡು ಹೋಗಬೇಕು ಅಂತ ಹೇಳಿದ್ರ ತಪ್ಪಾಗುದಿಲ್ಲ. ಅವ ನಮಗ ತಾಯಿ-ತಂದೆ, ಸ್ನೇಹಿತ, ಬಂಧು ಎಲ್ಲ ಸ್ಥಾನ ತುಂಬಿ ಸಲಹುತಾನ. ಬಹುಶಃ ನಾ ಯಾರು ಬಗ್ಗೆ ಹೇಳಲಿಕತ್ತೆನಿ ನಿಮಗ ಗೊತ್ತಾಗಿರಬಹುದು. ನಮ್ಮ ದಾಹ ತಣಿಸಲಿಕ್ಕೆ ಎರಡಕ್ಷರದ ‘ಜಲ’ ಇರಬೇಕು. ಉಸಿರಾಡಲಿಕ್ಕೆ ಎರಡಕ್ಷರದ ‘ವಾಯು’ ಇರಬೇಕು. ಮೋಕ್ಷಮಾರ್ಗ ಪಡಿಲಿಕ್ಕೆ ಎರಡಕ್ಷರದ ‘ಭಕ್ತಿ’ ಇರಬೇಕು. ಹಂಗ ಜೀವನದೊಳಗ ನಮ್ಮನ್ನ ಕೈ ಹಿಡಿದು ಮುಂದೆ ನಡೆಸಲಿಕ್ಕೆ ಎರಡಕ್ಷರದ ‘ಗುರು’ ಎಂಬ ವ್ಯಕ್ತಿ ಇರಲಿಕ್ಕೆ ಬೇಕು. ನಮ್ಮ ಪರಂಪರೆ ಒಳಗ ಗುರುವನ್ನ ಯಾವತ್ತು ವ್ಯಕ್ತಿ ರೂಪದೊಳಗ ನೋಡೆ ಇಲ್ಲ. ಮಾತೃ, ಪಿತೃಗಳ ನಂತರ ‘ಆಚಾರ್ಯ ದೇವೊ ಭವ ‘ ಅಂತ ಹೇಳಿದವರು ನಾವು. ಗುರು ಅಂದ್ರ ಸಾಕ್ಷಾತ್ ದೇವರು ಇದ್ದಂಗ. ಅವ ನಮ್ಮನ್ನ ಉದ್ಧರಸ್ಲಿಕ್ಕೆ ಇದಾನ. ಒಂದು ಮಾತಿನ್ಯಾಗ ಗುರು ಯಾರು ಅಂತ ಹೇಳಬಹುದು. ನಮ್ಮಲ್ಲಿರುವ ಅಂಧಕಾರ ಹೊಗಲಾಡಿಸಿ, ಜ್ಞಾನದ ಬೆಳಕು ಚೆಲ್ಲುವವನೇ ಗುರು. ಅವ ನಮ್ಮ ಮುಂದ ಯಾವ ರೂಪದೊಳಗ ಬೇಕಾದರೂ ಬರಬಹುದು. ಬ್ರಹ್ಮನ ರೂಪದೊಳಗ ಬಂದು ನಮ್ಮೊಳಗ ಜ್ಞಾನ ಹುಟ್ಟಿಸ್ತಾನ, ವಿಷ್ಣುನ ರೂಪದಾಗ ಬಂದು ನಮ್ಮನ್ನ ಸಲುಹಿ, ಮುಂದೆ ನಡೆಸ್ತಾನ, ಮಹೇಶ್ವರನ ರೂಪದಾಗ ಬಂದು ನಮ್ಮಲ್ಲಿರುವ ಅಂಧಕಾರವನ್ನ ನಾಶ ಮಾಡ್ತಾನ. ನಾ ನಿಮಗ ಇಲ್ಲೆ ಗುರು ಯಾರು? ಅವನ ಮಹತ್ವ ಏನು ಅಂತ ಜಾಸ್ತಿ ಹೆಳಂಗಿಲ್ಲ. ಯಾಕಂದ್ರ ಅದನ್ನ ನೀವು ಬಹಳ ಕಡೆ ಕೇಳಿ ತಿಳಿಕೊಂಡಿರ್ತಿರಿ.

ಅಕಸ್ಮಾತ ಗುರು ನಮ್ಮ ಜೀವನದೊಳಗ ಇರಲಿಲ್ಲಾಂದ್ರ ಏನಾಗ್ತಿತ್ತು. ಎಷ್ಟೋ ಜನ ಮಾತಾಡುವಾಗ ಹೇಳತಿದ್ರು ‘ನಮ್ಮ ಕಾಲದಾಗ ನಮಗ ಹೇಳಿಕೊಡವರು ಯಾರು ಇದ್ದಿದ್ದಿಲ್ಲ. ಇಲ್ಲಾಂದ್ರ ನಾವು ಎಲ್ಲೊ ಇರ್ತಿದ್ವಿ. ಆಗ ನಮಗ ಏನು ಮಾಡಬೇಕು ಅಂತನೂ ಗೊತ್ತಾಗಲಿಲ್ಲ. ಅದಕ್ಕ ನಮ್ಮ ಮಕ್ಕಳಿಗೂ ಹಂಗ ಆಗಬಾರದು ಅಂತ ಚೊಲೊ ಕಡೆ ವಿದ್ಯಾಭ್ಯಾಸ ಕೊಡಸ್ಲಿಕತ್ತೆವಿ.’ ಎಷ್ಟೊ ಮಂದಿ ಹಿಂಗ ತಿಳಿಕೊಂಡಿರ್ತಾರ, ಶಾಲ್ಯಾಗ/ಕಾಲೇಜಿನ್ಯಾಗ ಕಲಿಸಿದ ಮಾಸ್ತರಗಳು ನಮಗ ಗುರುಗಳು ಅಂತ. ಹೌದು ಖರೆ. ಅವರು ಗುರುಗಳ ಆದರ ನಮಗೇನು ಏನು ಬೇಕು ಅದನ್ನ ಕಲಿಸ್ತಾರೇನು? ಗೂಗಲ್ ಒಳಗೊ, ಅಮರಕೋಶದೊಳಗ ಹುಡುಕಿ ನೋಡ್ರಿ ಗುರು ಅನ್ನೋ ಶಬ್ದಕ್ಕ ಭಾಳ ಅಷ್ಟು ಅರ್ಥ ಸಿಗ್ತಾವ. ಗುರು ಅಂದ್ರ ಹಂಗ ಇರಬೇಕು, ಹಿಂಗ ಇರಬೇಕು ಅಂತ ಬರದಿದ್ದನ್ನ ಓದ್ತೆವಿ. ಈ ಬಿ.ಎಡ್., ಎಮ್.ಎಡ್. ಮಾಸ್ತರಕಿ ಮಾಡಲಿಕ್ಕೆ ಇರೋ ಕೋರ್ಸಗಳೊಳಗು ಪಾಠ ಮಾಡೊಬೇಕಾದ್ರ ಹಿಂಗ ಇರಬೇಕು. ಹಿಂದಿನ ದಿವಸ ತಯಾರಿ ಮಾಡ್ಕೊಂಡು ಹೋಗಬೇಕು ಅಂತೆಲ್ಲ ಹೇಳ್ತಾರ. ವಿದ್ಯಾರ್ಥಿಗಳಿಗೆ ಏನು ಕಲಿಸಬೇಕು ಅಂತ ಗೊತ್ತಿರ್ತದ. ಆದರ ದುರಾದೃಷ್ಟ ಹೆಂಗ ಕಲಿಸಬೇಕು ಅನ್ನೋದ ಗೊತ್ತಿರುದಿಲ್ಲ. ಒಬ್ಬ ವಿದ್ಯಾರ್ಥಿಗಿಂತ ಇನ್ನೊಬ್ಬ ವಿದ್ಯಾರ್ಥಿಗೆ ವಿಷಯಗಳನ್ನ ಗ್ರಹಿಸೊ ಶಕ್ತಿ ಹೆಚ್ಚು ಕಮ್ಮಿ ಇರ್ತದ. ಅದಕ್ಕ ಮಾಸ್ತರ ಏನು ಕಲಿತಾನೊ ಬಿಡ್ತಾನೊ ಗೊತ್ತಿಲ್ಲ. ಆದರ ಮೊದಲು ವಿದ್ಯಾರ್ಥಿಗಳ ಮನಸ್ಥಿತಿ ಅರ್ಥ ಮಾಡಿಕೊಬೇಕು. ಅವ ಎದರೊಳಗ ಮುಂದ ಇದಾನ, ಎದರೊಳಗ ಹಿಂದ ಇದಾನ ಅನ್ನೊದು ತಿಳಿಕೊಂಡ್ರ ಅವನಿಗೂ ಕಲಿಸ್ಲಿಕ್ಕೆ ಅನುಕೂಲ ಆಗ್ತದ.

ಅದಕ್ಕ ಹಿಂದಿನ ಕಾಲದಾಗ ಗುರುಕುಲ ಪದ್ಧತಿ ಇತ್ತು. ಈಗಲೂ ಅದ ಆದರ ಬೆರಳೆಣಿಕೆಯಷ್ಟು. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಇರ್ತಿತ್ತು. ಈಗಿನಂಗ ಒಂದೊಂದು ಕ್ಲಾಸ್‍ನ್ಯಾಗ ಐವತ್ತು, ನೂರು ಕುರಿ ಹಿಂಡು ತುಂಬಿದಂಗ ತುಂಬತಿರ್ಲಿಲ್ಲ. ಪಾಠ ಕಲಿಸೊಕ್ಕಿಂತ ಮುಂಚೆನ ರೊಕ್ಕ ರೊಕ್ಕ ಅಂತ ಬಡಕೊತ ಇರಲಿಲ್ಲ. ಅರ್ಜುನನಿಗಿಂತಲೂ ನಿಪುಣನಿದ್ದ ಏಕಲವ್ಯ. ಗುರು ಸಿಗಲಾರದ್ದಕ್ಕ ಸ್ವತಃ ಅವನೇ ಬಿಲ್ವಿದ್ಯೆ ಅಭ್ಯಾಸ ಮಾಡಿದ. ಆದರ ಕೊನೆಗೆ ಅವನಿಗಾದ ಗತಿ? ಈಗಲೂ ನಮ್ಮ ನಡುವ ಏಕಲವ್ಯನಂಥವರು ಭಾಳ ಜನ ಇದ್ದಾರ. ಪ್ರತಿಭೆ ಅದ ಆದರ ಅದನ್ನ ಸರಿ ದಾರಿಗೆ ನಡಿಸಲಿಕ್ಕೆ ಗುರು ಇಲ್ಲ. ಇದ್ದರೂ ನಮ್ಮ ಗುರಿ ಅವನಿಗೆ ತಿಳಿದಿರಂಗಿಲ್ಲ. ಗುರಿ ನಾವು ನಿಶ್ಚಯ ಮಾಡಬೇಕು ಆಮೇಲೆ ಅದರ ತಕ್ಕಂಗ ಗುರು ಹುಡುಕಬೇಕು. ಗುರುವಿಗೆ ನಮ್ಮ ಗುರಿ ಗೊತ್ತಿದ್ದಾಗ ಮಾತ್ರ ನಾವು ಸಾಧಿಸಲಿಕ್ಕೆ ಆಗ್ತದ. ಅಂತಃ ಗುರು ಎಲ್ಲರಿಗೂ ಸಿಗಲಿ, ಸಿಕ್ಕಾಗ ಅವ ಸದಾ ನಮ್ಮ ಬೆನ್ನ ಹಿಂದ ಇರಲಿ.

 

-ನಿತೀಶ ಡಂಬಳ
ಧಾರವಾಡ

Leave a Reply