ಅತ್ಯಾಚಾರ ಪ್ರಕರಣಗಳು- ವಿಳಂಬ ನ್ಯಾಯ ಮತ್ತು ಜನರ ಮನಸ್ಥಿತಿ

ಅತ್ಯಾಚಾರವನ್ನು ಬೇರೆಲ್ಲ ಅಪರಾಧಗಳಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಅತ್ಯಂತ ಕಠಿಣವಾದ ಶಿಕ್ಷೆಯನ್ನೇ ಅಪೇಕ್ಷಿಸುತ್ತಾರೆ ಜನ. ವಿಳಂಬ ನ್ಯಾಯದಿಂದ ರೋಸಿ ಹೋಗಿರುವ ಅವರು ಎನ್‌ಕೌಂಟರ್‌ ಮೂಲಕ ಜಾರಿಯಾದ ‘ಶಿಕ್ಷೆ’ಗೆ ಈ ಕಾರಣದಿಂದಲೇ ಅಷ್ಟೊಂದು ಸಂಭ್ರಮಿಸಿದರೇ? ಹೈದರಾಬಾದಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ದೇಶವನ್ನೇ ನಲುಗಿಸಿದೆ. ಇದರ ಬೆನ್ನಲ್ಲೇ ಆರೋಪಿಗಳನ್ನು ಸೆರೆಹಿಡಿದ ಹೈದರಾಬಾದ್ ಪೊಲೀಸರು, ಸ್ಥಳ ಮಹಜರಿಗೆ ಹೋದಾಗ, ಅವರನ್ನು ಎನ್‌ಕೌಂಟರ್ ಹೆಸರಲ್ಲಿ ಕೊಂದರು‌. ಅತ್ಯಾಚಾರ ಪ್ರಕರಣದ ಕ್ರೌರ್ಯ ಕಂಡು ಆಕ್ರೋಶಗೊಂಡಿದ್ದ ಜನ, ಅದನ್ನು ಎಸಗಿದವರಿಗೆ ತಕ್ಷಣವೇ ತಕ್ಕ ಶಿಕ್ಷೆಯಾಯಿತೆಂದು ಎನ್‌ಕೌಂಟರನ್ನು ಸಂಭ್ರಮಿಸಿದರು. ಪೊಲೀಸರನ್ನು ಅಭಿನಂದಿಸಿ, ಅವರ ಮೇಲೆ ಹೂಮಳೆಗರೆದರು. ಸಾಮಾನ್ಯ ಜನರಷ್ಟೇ ಅಲ್ಲದೆ ದೇಶದ ಹಲವಾರು ಪ್ರಭಾವಿ ನಾಯಕರೂ ಹೈದರಾಬಾದ್ ಪೊಲೀಸರ ನಡೆಯನ್ನು ಶ್ಲಾಘಿಸಿ, ದೇಶದ ಇತರೆಡೆಯ ಪೊಲೀಸರೂ ಇವರನ್ನು ಮಾದರಿಯಾಗಿ ಸ್ವೀಕರಿಸಬೇಕು ಎಂದರು. ಕಾನೂನು ರಚಿಸುವ ಜವಾಬ್ದಾರಿ ಹೊಂದಿರುವ ಶಾಸಕರು, ಸಂಸದರು ಕಾನೂನು ಬಾಹಿರ ಚಟುವಟಿಕೆಯನ್ನು ಶ್ಲಾಘಿಸಿ, ಅದರ ಕರ್ತೃಗಳನ್ನು ಅಭಿನಂದಿಸುವ ಏಕೈಕ ದೇಶ ಭಾರತವೇ ಇರಬೇಕು! ಅತ್ಯಾಚಾರದಂತಹ ದಾರುಣ ಪ್ರಕರಣಗಳು ಬೆಳಕಿಗೆ ಬಂದಾಗ ಸಾರ್ವಜನಿಕ ಆಕ್ರೋಶ ಮುಗಿಲು ಮುಟ್ಟುವುದು ಸಹಜ. ಆದರೆ, ಈ ಆಕ್ರೋಶ ಸಾಂವಿಧಾನಿಕ ಚೌಕಟ್ಟಿನೊಳಗೆ ನಾವು ತರಬಹುದಾದ ಬದಲಾವಣೆಗಳ ಕುರಿತು ಚರ್ಚೆಗಳನ್ನು ಪ್ರಾರಂಭಿಸಬೇಕು. ಸಾಂವಿಧಾನಿಕ ಚೌಕಟ್ಟಿನ ಹೊರಗಡೆಯಿರುವ ಸುಲಭ ಹಾಗೂ ತಾತ್ಕಾಲಿಕ ಪರಿಹಾರಗಳಿಗೆ ಮೊರೆಹೋಗಿ, ಅವುಗಳು ಆ ಪ್ರಕರಣಗಳ ಮಟ್ಟಿಗೆ ತಕ್ಷಣಕ್ಕೆ ತರುವ ತೃಪ್ತಿಯನ್ನು ಸಂಭ್ರಮಿಸಿ, ಅಲ್ಲಿಗೆ ಇಡೀ ವಿಚಾರವನ್ನೇ ಬಿಟ್ಟುಬಿಡುವ ಸ್ಥಿತಿ ಸೃಷ್ಟಿಯಾಗಬಾರದು. ಅತ್ಯಾಚಾರದಂತಹ ಮೂಲಭೂತ‌ ಸಮಸ್ಯೆಯೊಂದನ್ನು ಬಗೆಹರಿಸುವುದು ಸುಲಭದ ಕೆಲಸವಲ್ಲ. ಅದರ ಕುರಿತು ಸುದೀರ್ಘ ಚರ್ಚೆಗಳು ನಡೆಯುತ್ತಲೇ ಇರಬೇಕು. ಈ ಚರ್ಚೆಗಳು ರಾಜಕೀಯ, ಸಾಮಾಜಿಕ ಮತ್ತು ನ್ಯಾಯಾಂಗದ ಸುಧಾರಣೆಗಳನ್ನು ತರುವಲ್ಲಿ ಯಶಸ್ವಿಯಾಗಬೇಕು. ಇಲ್ಲದಿದ್ದರೆ ಇಂತಹ ಸಾರ್ವಜನಿಕ ಆಕ್ರೋಶಗಳಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ, ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ. ಎನ್‌ಕೌಂಟರ್ ತರಹದ ‘ಶಿಕ್ಷೆ’ಗಳನ್ನು ಜನ ಇಷ್ಟರ ಮಟ್ಟಿಗೆ ಸ್ವಾಗತಿಸಿರುವುದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು: ಅತ್ಯಾಚಾರವನ್ನು ಬೇರೆಲ್ಲ ಅಪರಾಧಗಳಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಬೇರೆ ಅಪರಾಧಗಳಿಗಿಂತ ಹೆಚ್ಚು ಕಠಿಣ ಶಿಕ್ಷೆಯನ್ನು ಅಪೇಕ್ಷಿಸುವುದು. ಎರಡು: ಅತ್ಯಾಚಾರ ಎಸಗಿದವರಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆ ತಕ್ಕ ಶಿಕ್ಷೆ ವಿಧಿಸಿ ನ್ಯಾಯವನ್ನು ಎತ್ತಿಹಿಡಿಯುತ್ತದೆ ಎಂಬ ನಂಬಿಕೆಯನ್ನು ಜನ ಕಳೆದುಕೊಂಡಿರುವುದು. ಇವೆರಡರ ಕುರಿತೂ ಚರ್ಚಿಸುವ ಅವಶ್ಯಕತೆಯಿದೆ. ‘ಪುರುಷ ಪ್ರಾಧಾನ್ಯ’ವು ಸಮಾಜದ ಚಿಂತನೆಗಳನ್ನೂ, ವೈಯಕ್ತಿಕ ಚಿಂತನೆಗಳನ್ನೂ ಆಳುತ್ತದೆ. ಅವುಗಳ ಮೇಲೆ ಪರಿಣಾಮ ಬೀರುತ್ತದೆ. ಅತ್ಯಾಚಾರವನ್ನು ನಾವು ನೋಡುವ ದೃಷ್ಟಿಕೋನವೂ ಇದರಿಂದ ಹೊರತಾಗಿಲ್ಲ. ಅತ್ಯಾಚಾರಕ್ಕೊಳಗಾದ ಮಹಿಳೆಯ ಭವಿಷ್ಯವೇ ಹಾಳಾಯಿತೆಂದು ಸಮಾಜ ನಂಬುತ್ತದೆ. ಅವಳದಷ್ಟೇ ಅಲ್ಲದೆ ಆಕೆಯ ಇಡೀ ಕುಟುಂಬದ ಹಾಗೂ ಸಮುದಾಯದ ಘನತೆ-ಗೌರವವೇ ಮಣ್ಣು ಪಾಲಾಯಿತೆಂದು ನಿರ್ಧರಿಸಿ ಬಿಡುತ್ತದೆ. ಆದ್ದರಿಂದಲೇ ಬೇರೆ ಅಪರಾಧಗಳಿಗಿಂತ ಅತ್ಯಾಚಾರವನ್ನು ಜನ ಹೆಚ್ಚು ಗಂಭೀರವಾಗಿ ಪರಿಗಣಿಸಿ, ಅದರ ಬಗ್ಗೆ ಹೆಚ್ಚು ಆಕ್ರೋಶ ವ್ಯಕ್ತಪಡಿಸುವುದು. ಕಾಮವಷ್ಟೇ ಅತ್ಯಾಚಾರಕ್ಕೆ ಕಾರಣವಾಗಿರುವುದಿಲ್ಲ. ಶತಮಾನಗಳಿಂದ ನಡೆಯುತ್ತಿರುವ ಸಾಮಾಜಿಕ ದಬ್ಬಾಳಿಕೆಯಿಂದ ಕ್ರಮೇಣವಾಗಿ ಹೊರಬಂದು ಎಲ್ಲ ರೀತಿಯಲ್ಲೂ ಸಬಲರಾಗುತ್ತ ‘ಪುರುಷ ಪ್ರಧಾನ’ ವ್ಯವಸ್ಥೆಯನ್ನು ಪ್ರಶ್ನಿಸುತ್ತಿರುವ ಹೆಂಗಸರು ಬಹಳಷ್ಟು ಗಂಡಸರಲ್ಲಿ ಅಭದ್ರತೆ ಮೂಡಿಸುತ್ತಿದ್ದಾರೆ. ತೀವ್ರ ಅಭದ್ರತೆಯಿಂದ ಬಳಲುವ ಕೆಲವು ಗಂಡಸರು ಮಹಿಳೆಯರನ್ನು ಹತ್ತಿಕ್ಕಿ ತಮ್ಮ ಶಕ್ತಿ ಹಾಗೂ ಸಾಮಾಜಿಕ ಸ್ಥಾನ ಸ್ಥಾಪಿಸುವ ಸಲುವಾಗಿ ಅತ್ಯಾಚಾರ ಎಸಗುತ್ತಾರೆ.‌ ಅತ್ಯಾಚಾರ ಎಸಗುವುದರಿಂದ‌ ಮಹಿಳೆಯರನ್ನು ಹತ್ತಿಕ್ಕಬಹುದೆಂಬ ಯೋಚನೆ ಎಲ್ಲಿಂದಲೋ ಸುಮ್ಮನೆ ಬರುವುದಲ್ಲ. ಅತ್ಯಾಚಾರವೆಸಗುವವರೂ ನಮ್ಮ ಸಮಾಜದಲ್ಲಿ ಬದುಕುವವರೇ. ಅತ್ಯಾಚಾರವು ಹೆಣ್ಣಿನ ಘನತೆ-ಗೌರವವನ್ನು ಶಾಶ್ವತವಾಗಿ ನಾಶ ಮಾಡಿಬಿಡುತ್ತದೆಂಬ‌ ಸಾಮಾಜಿಕ ಕಲ್ಪನೆಯೇ ಅವರ ಈ ಯೋಚನೆಯ ಹಿಂದಿರುವುದು. ಪ್ರತೀ ಯುದ್ಧ, ಕೋಮುಗಲಭೆಗಳಲ್ಲೂ ವೈರಿಗಳ ಸೊಲ್ಲಡಗಿಸಲು, ವೈರಿ ಸಮುದಾಯದ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವುದಿದೆ. ಆದರೆ, ಹೆಣ್ಣಿನ, ಆಕೆಯ ಮನೆತನದ, ಸಮುದಾಯದ ಗೌರವ ಆಕೆಯ ಗುಪ್ತಾಂಗದಲ್ಲಿ ಅಡಗಿರುವುದಿಲ್ಲವೆಂದು ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ಚಿಂತನೆ ಬದಲಾದರೆ ಅತ್ಯಾಚಾರ ಪ್ರಕರಣಗಳ ಪ್ರಮಾಣವನ್ನು ಗಣನೀಯವಾಗಿ‌ ತಗ್ಗಿಸಬಹುದು.‌ ಆದರೆ, ಇಂತಹ ಚಿಂತನೆಗಳನ್ನು ಹಾಯಾಗಿ ಬೆಳೆಯಲು ಬಿಟ್ಟಲ್ಲಿ ಅತ್ಯಾಚಾರ ಎಸಗುವವರಿಗೆ ಎಂತಹ ಕಠಿಣ ಶಿಕ್ಷೆ ಕೊಟ್ಟರೂ ಅತ್ಯಾಚಾರ‌ ಪ್ರಕರಣಗಳು ಕಡಿಮೆಯಾಗುವುದಿಲ್ಲ. ಅತ್ಯಾಚಾರ‌ ಪ್ರಕರಣಗಳನ್ನು ಸಶಕ್ತವಾಗಿ ನಿರ್ವಹಿಸುವಂತೆ ನ್ಯಾಯಾಂಗ ವ್ಯವಸ್ಥೆಯನ್ನು ನಾವು ಸಜ್ಜು ಮಾಡಬೇಕಿದೆ. 2012ರ ದೆಹಲಿ ಅತ್ಯಾಚಾರ ಪ್ರಕರಣದ ನಂತರ ಅತ್ಯಾಚಾರ ಕುರಿತ ಕಾನೂನುಗಳಲ್ಲಿ ಬಹಳಷ್ಟು ಬದಲಾವಣೆಗಳಾದವು. ಶಿಕ್ಷೆಗಳು ಕಠಿಣಗೊಂಡವು. ನ್ಯಾಯಮೂರ್ತಿ ವರ್ಮಾ ಸಮಿತಿಯು ಅತ್ಯಾಚಾರ ಪ್ರಕರಣಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಲು ಸರ್ಕಾರಕ್ಕೆ ಹಾಗೂ ನ್ಯಾಯಾಂಗಕ್ಕೆ ಹಲವಾರು ಶಿಫಾರಸುಗಳನ್ನು ಮಾಡಿತು. ಇವೆಲ್ಲದರ ಹೊರತಾಗಿಯೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ‌. ಅತ್ಯಾಚಾರ ಕುರಿತು ಅರಿವು ಹೆಚ್ಚಾಗಿರುವುದರಿಂದ, ಮಾಧ್ಯಮಗಳು ಅದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿರುವುದರಿಂದ ಅತ್ಯಾಚಾರದ ಪ್ರಕರಣಗಳ ಕುರಿತು ಜನ ಹೆಚ್ಚಾಗಿ ತಿಳಿದುಕೊಳ್ಳುತ್ತಿದ್ದಾರೆ. ಇವೆರಡೂ ಸೇರಿ ಜನರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲಿರುವ ನಂಬಿಕೆ ಕಡಿಮೆಯಾಗಿದೆ. ಅತ್ಯಾಚಾರ ಎಸಗಿದವರಿಗೆ‌‌ ಕಾನೂನಿನ ಚೌಕಟ್ಟಿನಲ್ಲಿ ತಕ್ಕ ಶಿಕ್ಷೆ ನೀಡಲು ನ್ಯಾಯಾಲಯಗಳಿಗೆ ಸಾಧ್ಯವೇ ಇಲ್ಲವೆಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಇದರಿಂದ ಎರಡು ಸಮಸ್ಯೆಗಳು ಉಂಟಾಗುತ್ತವೆ. ಒಂದು: ಜನ ಎನ್‌ಕೌಂಟರ್‌ಗಳನ್ನು ಸ್ವಾಗತಿಸುವುದಷ್ಟೇ ಅಲ್ಲದೆ ಅವುಗಳನ್ನೇ ಎಲ್ಲ ಪ್ರಕರಣಗಳಿಗೂ ಅಪೇಕ್ಷಿಸುತ್ತಾರೆ. ಎರಡು: ಕಾನೂನಿನ ಹೆದರಿಕೆಯೇ ಇಲ್ಲದೆ‌ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಲೇ ಇರುತ್ತವೆ. ಶಿಕ್ಷೆಯ ಕಾಠಿಣ್ಯಕ್ಕಿಂತಲೂ ಅತ್ಯಾಚಾರಗಳನ್ನು ಹೆಚ್ಚಾಗಿ ತಡೆಯುವುದು ಶಿಕ್ಷೆಯ ಖಚಿತತೆ. ಅತ್ಯಾಚಾರವೆಸಗಿದರೆ ನಿರ್ದಿಷ್ಟ ಅವಧಿಯೊಳಗೆ ನ್ಯಾಯಾಂಗ ವ್ಯವಸ್ಥೆ ಖಂಡಿತ ಶಿಕ್ಷೆ ನೀಡುತ್ತದೆಂಬುದು ಸಂಭಾವ್ಯ ಅಪರಾಧಿಗಳಿಗೆ ಮನದಟ್ಟಾದರೆ ಅವರು ಕಾನೂನಿಗೆ ಹೆದರಿ ಅತ್ಯಾಚಾರ ಎಸಗದಂತೆ ನೋಡಿಕೊಳ್ಳಬಹುದು. ಅತ್ಯಾಚಾರ ಪ್ರಕರಣಗಳಲ್ಲಿ ಯಾವ ಶಿಕ್ಷೆ ಸೂಕ್ತವೆಂದು ಚರ್ಚಿಸುವುದಕ್ಕಿಂತ, ನಿರ್ದಿಷ್ಟ ಅವಧಿಯೊಳಗೆ ಹೇಗೆ ನ್ಯಾಯ ಒದಗಿಸುವುದೆಂದು ಚರ್ಚಿಸಬೇಕಿದೆ. ಅಪರಾಧಿಗಳಿಗೆ ನೀಡುವ ಶಿಕ್ಷೆ ಯಾವುದೆಂಬುದನ್ನು ನಿಶ್ಚಯಿಸುವ ಅಧಿಕಾರವನ್ನು ‘ಸಾರ್ವಜನಿಕ ಆಕ್ರೋಶ’ಕ್ಕೆ ಬಿಡಬಾರದು. ಅತ್ಯಾಚಾರ ಪ್ರಕರಣಗಳಲ್ಲೂ ನ್ಯಾಯ ಒದಗಿಸುವುದರಲ್ಲಿ ಪೊಲೀಸರ ಪಾತ್ರ ಮುಖ್ಯ. ಆದರೆ ಪೊಲೀಸರ ಜವಾಬ್ದಾರಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಅವರ ಅಪರಾಧವನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸುವುದೇ ಹೊರತು ಆರೋಪಿಗಳಿಗಳನ್ನು ತಾವೇ ಶಿಕ್ಷಿಸುವುದಲ್ಲ. ಅಪರಾಧ ಸಾಬೀತಾಗುವವರೆಗೂ ಆರೋಪಿ ಅಪರಾಧಿಯಾಗುವುದಿಲ್ಲವೆಂಬುದು ಕಾನೂನಿನ ಮೂಲಭೂತ ಸೂತ್ರ. ಹಾಗಾಗಿ ಅಪರಾಧ ಸಾಬೀತಾಗುವ ಮೊದಲೇ ಆರೋಪಿಗಳನ್ನು ಕೊಲ್ಲುವುದು ಕಾನೂನುಬಾಹಿರ ಚಟುವಟಿಕೆ. ನಮ್ಮ ಪೊಲೀಸರು ದೇವಲೋಕದಿಂದ ಇಳಿದು ಬಂದಿರುವವರಲ್ಲ. ಅಪರಾಧ ಸಾಬೀತಾಗದ ಆರೋಪಿಗಳನ್ನು, ಅದರಲ್ಲೂ ಆರೋಪಿಗಳು ಬಡ ಹಾಗೂ ಶೋಷಿತ ವರ್ಗಗಳಿಗೆ ಸೇರಿದವರಾಗಿದ್ದರೆ ಅವರನ್ನು ಪೊಲೀಸರು ಅಮಾನುಷವಾಗಿ ನಡೆಸಿಕೊಳ್ಳುತ್ತಾರೆ ಎಂದು ಹಲವಾರು ಅಧ್ಯಯನಗಳು ತೋರಿಸುತ್ತವೆ‌. ಎನ್‌ಕೌಂಟರ್ ಮಾದರಿಯಲ್ಲಿ ಕೊಲ್ಲಲಾದ ಬಹುತೇಕ ಆರೋಪಿಗಳು ಬಡ ಹಾಗೂ ಶೋಷಿತ ವರ್ಗಗಳಿಗೆ ಸೇರಿದವರು ಎಂಬುದನ್ನೂ ಅಧ್ಯಯನಗಳು ತೋರಿಸಿವೆ. ಹಣ, ಜಾತಿ ಅಥವಾ ಸಾಮಾಜಿಕ ಬಲವಿರುವ ಆರೋಪಿಗಳು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟ ಉದಾಹರಣೆಗಳು ಬೆರಳೆಣಿಕೆಯಷ್ಟು. ಹೈದರಾಬಾದ್ ಪ್ರಕರಣದ ನಾಲ್ಕು ಜನ ಹಣ, ಜಾತಿ ಅಥವಾ ಸಾಮಾಜಿಕ ಬಲ ಇದ್ದವರಾಗಿದ್ದರೆ ಅವರನ್ನು ಇದೇ ರೀತಿ ಎನ್‌ಕೌಂಟರಿನಲ್ಲಿ ಕೊಲ್ಲುತ್ತಿದ್ದರೇ ಎಂಬ ಪ್ರಶ್ನೆ ಕೇಳಬೇಕಿದೆ. ಬಡ ಹಾಗೂ ಶೋಷಿತ ವರ್ಗಗಳಿಗೆ ಸೇರಿದ ಆರೋಪಿಗಳನ್ನು ಅಪರಾಧ ಸಾಬೀತಾಗುವ ಮುನ್ನವೇ ಶಿಕ್ಷಿಸುವ ಕೆಟ್ಟ ವ್ಯವಸ್ಥೆಯನ್ನು ಸಮಾಜ ಒಪ್ಪಬೇಕೇ, ಸ್ವಾಗತಿಸಬೇಕೇ, ಸಂಭ್ರಮಿಸಬೇಕೇ ಅನ್ನುವ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕಿದೆ. ಹೆಂಗಸರು ತಮ್ಮನ್ನು ನಂಬಿ, ತಮ್ಮ ಬಳಿ ಧೈರ್ಯದಿಂದ ಬರುವಂತಹ ನಡವಳಿಕೆಯನ್ನು ಪೊಲೀಸರು ತೋರಿಸಿಲ್ಲ. ಹಾಗಾಗಿಯೇ ಹೈದರಾಬಾದ್ ಪ್ರಕರಣದಲ್ಲೂ ಮಹಿಳೆಯು ಸಹಾಯ ಕೇಳಲು ಪೊಲೀಸರ ಬದಲು ತನ್ನ ಸಹೋದರಿಯನ್ನು ಸಂಪರ್ಕಿಸಿದ್ದಳು. ದೂರು ಕೊಡಲು ಮುಂದೆ ಬರುವ ಮಹಿಳೆಯರನ್ನು ಪೊಲೀಸರು ಪ್ರಶ್ನಿಸುವ, ಸಂತ್ರಸ್ತೆ ಹೇಳಿದ್ದನ್ನು ನಂಬದೇ ಅವರ ನಡತೆಯನ್ನೇ ಪ್ರಶ್ನಿಸುವ ಧೋರಣೆ ಮಹಿಳೆಯರನ್ನು ಪೊಲೀಸ್ ಠಾಣೆಗಳಿಂದ ದೂರವಿಡುತ್ತದೆ. ಮಹಿಳೆಯರಿಗೆ ಸಂಬಂಧಪಟ್ಟ ವಿಚಾರಗಳನ್ನು ಹೇಗೆ ಸೂಕ್ಷ್ಮವಾಗಿ ನಿಭಾಯಿಸಬೇಕೆಂಬ ತರಬೇತಿಯನ್ನು ಪೊಲೀಸರಿಗೆ ನೀಡಬೇಕಿದೆ. ಇದನ್ನೂ ಓದಿ ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಎನ್‌ಕೌಂಟರ್ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಸುಲಭವಾಗಿ ಕಾನೂನನ್ನು ಮುರಿಯುವಂತಿರಬಾರದು. ಬಡವರು, ಶೋಷಿತರು, ಮಹಿಳೆಯರೂ ಪೊಲೀಸರನ್ನು ಕಂಡರೆ ಭಯಬೀಳದಂತಹ ಸ್ಥಿತಿಯತ್ತ ನಾವು ನಮ್ಮ ಸಮಾಜವನ್ನು ತೆಗೆದುಕೊಂಡು ಹೋಗಬೇಕು. ಪೊಲೀಸರು ಮಾಡಿದ್ದನ್ನೆಲ್ಲ ಸಂಭ್ರಮಿಸುವ ಮೊದಲು ನೂರು ಬಾರಿ ಯೋಚಿಸೋಣ, ಪ್ರಶ್ನಿಸೋಣ.

author- ರಕ್ಷಿತ್‌ ಪೊನ್ನಾಥಪುರ

courtsey:prajavani.net

https://www.prajavani.net/artculture/article-features/late-justice-and-people-mind-689907.html

Leave a Reply