ಆತ್ಮಹತ್ಯೆ-ಒಂದು ವಿಶ್ಲೇಷಣೆ
‘ಮಾನವಜನ್ಮ ಬಲು ದೊಡ್ಡದು… ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ದಾಸರು ಹಾಡಿದುದು ನೆನಪಾಗುವುದು, ಪತ್ರಿಕೆಗಳಲ್ಲಿ ರಾರಾಜಿಸುವ, ರೇಡಿಯೋ ಹಾಗೂ ಟಿವಿ ಸುದ್ದಿಗಳಲ್ಲಿ ಬರುವ ಹೆಚ್ಚುತ್ತಿರುವ ಆತ್ಮಹತ್ಯೆಯ ಸುದ್ದಿಗಳನ್ನು ಓದಿದಾಗ. ಆತ್ಮಹತ್ಯೆ ಎನ್ನುವುದು ಈಗ ಅತ್ಯಂತ ಸಾಮಾನ್ಯ ಸುದ್ದಿಯಂತಾಗಿಬಿಟ್ಟಿದೆ. ಈಗಿನ ಪೀಳಿಗೆ ಜೀವನದ ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆಯೇ . ಪರಿಹಾರ ಎಂದು ತಿಳಿದಂತಿದೆ.
ಪಶು ಪಕ್ಷಿ, ಕ್ರಿಮಿ ಕೀಟ ಇವೆಲ್ಲವುಗಳಿಗಿಂತ ದೇವರು ನಮಗೆ ಒಂದು ಹೆಚ್ಚಿನ ಶಕ್ತಿ ಕೊಟ್ಟಿದ್ದಾನೆ. ಅದು ಬುದ್ದಿ ಶಕ್ತಿ. ನಾವು ಅದರ ಸದುಪಯೋಗವನ್ನು ಮಾಡಿಕೊಂಡು ನಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದನ್ನು ಬಿಟ್ಟು, ಮನಸ್ಸಿನ ಸ್ಥಿಮಿತವನ್ನು ಕಳೆದುಕೊಂಡು ಆವೇಶದಿಂದ ಇಂಥ ಅವಿವೇಕದ ನಿರ್ಣಯಗಳನ್ನು ಮಾಡುತ್ತೇವೆ. ಇದೊಂದು ಅಸಾಮಾನ್ಯ ನಡೆವಳಿಕೆಯೆಂದೇ ಹೇಳಬಹುದು. ವ್ಯಕ್ತಿ ತಾನು ಸತ್ತು ತಾತ್ಕಾಲಿಕ ಪರಿಹಾರ ಕಂಡುಕೊಂಡರೂ ಬದುಕುಳಿದಿರುವ ತನ್ನ ಕುಟುಂಬದ ಸದಸ್ಯರಿಗೆ ಅನೇಕ ರೀತಿಯ ಸಮಸ್ಯೆಗಳನ್ನು ಸೃಷ್ಟಿ ಮಾಡಿಟ್ಟು ಹೋಗುತ್ತಾನೆ.
ಈ ಆತ್ಮಹತ್ಯೆಗಳಿಗೆ ಕಾರಣವಾದರೂ ಏನು ಎಂಬುದರ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇವು ಸಮಾಜದ ವಲಯ, ಸಂಸ್ಕೃತಿಗಳಿಗನುಗುಣವಾಗಿ ಭಿನ್ನ ಭಿನ್ನವಾಗಿರುತ್ತವೆ. ಪ್ರತಿಯೊಂದು ಆತ್ಮಹತ್ಯೆಗೂ ಹಿನ್ನೆಲೆಯಾಗಿ ವಿಭಿನ್ನ ಕಾರಣಗಳೇ ಇರುತ್ತವೆ. ಆದರೂ ಸಾಮಾನ್ಯವಾಗಿ ಊಹಿಸಬಹುದಾದ ಕಾರಣಗಳೆಂದರೆ ನೆರೆಹೊರೆಯ ಪರಿಸರ, ಜವಾಬ್ದಾರಿ ನಿಭಾಯಿಸುವುದರಲ್ಲಿ ಆಗುವ ಪ್ರಮಾದಗಳು, ಆತ್ಮಗೌರವಕ್ಕೆ ಉಂಟಾಗುವ ಧಕ್ಕೆ, ಸಮಾಜವು ತನ್ನನ್ನು ಕಡೆಗಣಿಸುತ್ತಿದೆ ಎಂಬ ಆತಂಕ, ನಿಂದನೆ, ಅಪಹಾಸ್ಯಗಳಿಗೆ ಗುರಿಯಾಗುವುದರ ಸಂಶಯ, ಆರ್ಥಿಕ ಅಸಮತೋಲನ, ಕೌಟುಂಬಿಕ ಜೀವನದ ಏರುಪೇರು, ಪ್ರೀತಿ ಪ್ರಣಯಗಳಲ್ಲಿ ಮೋಸ ಹೋಗುವುದು, ಜೀವನದಲ್ಲಿ ಸತತ ಸೋಲನ್ನನುಭವಿಸುವುದು ಇವೆಲ್ಲವೂ ಜೀವನದ ಜಿಗುಪ್ಸೆಗೆ ಕಾರಣವಾಗುತ್ತವೆ. ಅಷ್ಟೇ ಅಲ್ಲ, ಕೆಲವೊಮ್ಮೆ ಗುಣವಾಗದ ರೋಗಗಳು, ಪರೀಕ್ಷೆಗಳಲ್ಲಿ ನಾಪಾಸಾಗುವುದು, ಅಥವಾ ಕಡಿಮೆ ಅಂಕ ಗಳಿಸುವುದು, ಕೆಟ್ಟ ಗೆಳೆಯರ ಸಹವಾಸದಿಂದಾಗಿ ಕೆಟ್ಟ ಚಟಗಳನ್ನು ಕಲಿಯುವುದು, ವೃತ್ತಿ ಜೀವನದಲ್ಲಿಯ ಏರುಪೇರು, ಮಾಧ್ಯಮಗಳ ಅಪಪ್ರಚಾರ, ಧ್ಯೇಯಗಳ ಉಲ್ಲಂಘನೆ, ಸೋತ ಶಿಕ್ಷಣ ವ್ಯವಸ್ಥೆ, ಉದ್ಯೋಗ ಸಿಗದೆ ಇರುವುದು, ಉದ್ಯೋಗ ಮಾಡುವ ಸ್ಥಳಗಳಲ್ಲಿಯ ಮಾನಸಿಕ, ದೈಹಿಕ ದೌರ್ಜನ್ಯ ಇವೂ ಕಾರಣವಾಗುತ್ತವೆ.
ಇತ್ತೀಚಿನ ವರ್ಷಗಳಲ್ಲಿ ನಮ್ಮ ಅನ್ನದಾತ ಕೂಡ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಮಳೆ ಕೈಕೊಟ್ಟು ಬೆಳೆ ಕೈಗೆ ಹತ್ತಲಿಲ್ಲವಾದಾಗ, ಸರಿಯಾದ ಬೆಳೆ ಬಂದೂ ಅದಕ್ಕೆ ತಕ್ಕಂತೆ ಬೆಲೆ ಬಾರದಾದಾಗ, ಮಾಡಿದ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಅರಿತಾಗ ರೈತರು ಬಹಳಷ್ಟು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನು ಹೆಣ್ಣು ಮಕ್ಕಳು ವರದಕ್ಷಿಣೆ ಕಿರುಕುಳ, ಗಂಡು ಮಕ್ಕಳು ಹುಟ್ಟಲಿಲ್ಲವೆಂದು ಗಂಡ ಅಥವಾ ಅತ್ತೆ ಮನೆಯಲ್ಲಿ ಕಿರುಕುಳ ನೀಡಿದಾಗ, ಪ್ರೇಮ ಪ್ರಕರಣದಲ್ಲಿ ಮೋಸಹೋದಾಗ ಆತ್ಮಹತ್ಯೆಗೆ ಶರಣಾಗುತ್ತಾರೆ. ಇತ್ತೀಚೆಗಿನ ಈ ಬದಲಾದ ವೇಗದ ಜಗತ್ತಿನಲ್ಲಿ ಕಂಡು ಬರುವ ಮುಖ್ಯ ಬೆಳವಣಿಗೆ ಎಂದರೆ ಈಗೀಗ ಮಕ್ಕಳು ಕೂಡ ಆತ್ಮಹತ್ಯೆಗೆ ತೊಡಗಿದ್ದಾರೆ. ಕುಣಿದು ಕುಪ್ಪಳಿಸುವ ವಯಸ್ಸಿನಲ್ಲಿ ಅತ್ಯಂತ ಕ್ಷುಲ್ಲಕ ಕಾರಣಗಳಿಗಾಗಿ ಇಂಥ ಪ್ರಯತ್ನ ಮಾಡುವುದು ದುರಂತದ ಪರಮಾವಧಿ ಎಂದೆ ಹೇಳಬಹುದು.
ಈ ಆತ್ಮಹತ್ಯೆಗಳನ್ನು ಹೇಗೆ ತಡೆಯಬಹುದು? ಈ ನಿಟ್ಟಿನಲ್ಲಿ ಕೂಡ ನಿಖರವಾದ ಅಧ್ಯಯನ ನಡೆದಿವೆ. ಈ ಆತ್ಮಹತ್ಯಾ ಮನೋಭಾವಕ್ಕೆ ಕಾರಣವನ್ನು ಕಂಡು ಹಿಡಿದು ಅವುಗಳನ್ನು ನಿವಾರಿಸುವುದರ ಬಗ್ಗೆ ಕೂಡ ಪ್ರಯತ್ನಗಳು ನಡೆದಿವೆ. ಆತ್ಮಹತ್ಯೆಯು ಒಂದು ಮಾನಸಿಕ ತುರ್ತು ಪರಿಸ್ಥಿತಿಯಿದ್ದಂತೆ. ಇದಕ್ಕೆ ವಯಸ್ಸು, ಜಾತಿ, ಲಿಂಗ, ಶ್ರೀಮಂತಿಕೆ, ಬಡತನ ಎಂಬ ತಾರತಮ್ಯ ಇರುವುದಿಲ್ಲ. ಇವು ಎಲ್ಲ ವರ್ಗಗಳಲ್ಲಿಯೂ ನಡೆಯುತ್ತವೆ. ಪ್ರತಿ ವರ್ಷ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದು ಒಂದು ಸಮೀಕ್ಷೆ ಹೇಳುತ್ತದೆ. NCRB ಎಂದರೆ ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿಯ ಒಂದು ದಾಖಲೆಯ ಪ್ರಕಾರ ಕಳೆದ ಒಂದು ದಶಕದ ಅವಧಿಯಲ್ಲಿ ದೇಶದಲ್ಲಿ ಆತ್ಮಹತ್ಯೆಯ ಪ್ರಮಾಣವು 26.7℅ ನಷ್ಟು ಹೆಚ್ಚಾಗಿದೆ. ಅದರಲ್ಲೂ ಹದಿವಯಸ್ಸಿನ ಯುವಜನರ ಅಂದರೆ 15-19ರ ವಯಸ್ಸಿನವರ ಪಾಲು ಇನ್ನೂ ಹೆಚ್ಚು.
ಯುವಜನತೆ ಎಂದರೆ ದೇಶದ ಬೆನ್ನೆಲುಬು ಇದ್ದಂತೆ. ಈ ಯುವಜನತೆಯೆ ಹೀಗೆ ಅವಿವೇಕದ ನಿರ್ಣಯ ತೆಗೆದುಕೊಳ್ಳತೊಡಗಿದರೆ ದೇಶದ ಗತಿಯೇನು? ಇನ್ನೂ ಒಂದು ಸಮೀಕ್ಷೆಯ ಪ್ರಕಾರ ಒಂದು ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದೆ. ಪುರುಷರೆ ಸ್ತ್ರೀಯರಿಗಿಂತ ಹೆಚ್ಚಿನ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆಂಬುದು ಅತ್ಯಂತ ಆಶ್ಚರ್ಯಕರವಲ್ಲವೆ? ಆದರೆ ಇದು ನಿಜ. ಈ ಹದಿಹರೆಯದ ವಯಸ್ಸಿನವರಲ್ಲಿ ಖಿನ್ನತೆಯ ಪ್ರಮಾಣ ಹೆಚ್ಚು. ಒಟ್ಟು 30% ನಷ್ಟು ಹದಿಹರೆಯದ ವಯಸ್ಸಿನವರು ಖಿನ್ನತೆಯಿಂದ ಬಳಲುತ್ತಾರೆ. ಅದರಲ್ಲೂ 11% ನಷ್ಟು ಕಾಲೇಜು ವಿದ್ಯಾರ್ಥಿಗಳು, 7.5% ನಷ್ಟು ಶಾಲೆಗೆ ಹೋಗುವ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ. ಇದಕ್ಕೆ ಕಾರಣ 62.7% ನಷ್ಟು ಶೈಕ್ಷಣಿಕ ಒತ್ತಡ, 25.4% ನಷ್ಟು ಕೌಟುಂಬಿಕ ಸಮಸ್ಯೆಗಳು, 11.8% ನಷ್ಟು ಸ್ನೇಹಿತರೊಂದಿಗಿನ ಸಮಸ್ಯೆಗಳು. ಅಷ್ಟೇ ಅಲ್ಲ, ಈಗಿನ ಹುಡುಗರು ಖಿನ್ನತೆಯಿಂದ ಬಳಲುತ್ತಿರುವುದಕ್ಕೆ ಇನ್ನೊಂದು ಮುಖ್ಯ ಕಾರಣ ಡ್ರಗ್ಸ್. ಇದಕ್ಕೆ ದಾಸರಾದ ಮಕ್ಕಳ ಮನೋಸ್ಥಿತಿ ಬಹಳಷ್ಟು ಚಂಚಲವಾಗಿರುವುದರಿಂದ ಅವರು ಸಣ್ಣ ಪುಟ್ಟ ಕಾರಣಗಳಿಗೆಲ್ಲ ಆತ್ಮಹತ್ಯೆಗೆ ಶರಣಾಗುತ್ತಾರೆ. ಹದಿಹರೆಯದ ಮಕ್ಕಳ ದೇಹ ಹಾಗೂ ಮನಸ್ಸುಗಳು ತೀವ್ರ ಬದಲಾವಣೆ ಹೊಂದುತ್ತಿರುವುದರಿಂದ ಅವರಿಗೆ ಆ ಸಮಯದಲ್ಲಿ ಪಾಲಕರ ಸಹಾಯ, ಸಹಕಾರಗಳ ಅವಶ್ಯಕತೆ ಇರುತ್ತದೆ. ಎಲ್ಲ ತಂದೆ ತಾಯಿಯರು ಇಂಥ ಮನೋಸ್ಥಿತಿಯನ್ನು ಅರಿತು ಅವರ ಭಾವನೆಗಳಿಗೆ ಸ್ಪಂದಿಸುವರೆಂದು ಹೇಳುವುದು ಸಾಧ್ಯವಿಲ್ಲ. ಅವರೂ ಕೂಡ ತಮ್ಮದೇ ಆದ ಅನೇಕ ಆರ್ಥಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿರುವಾಗ ಅವರಿಗೆ ಮಕ್ಕಳ ಬಗ್ಗೆ ಚಿಂತಿಸುವದಕ್ಕೆ ಸಮಯವೇ ಇರದು. ಎಲ್ಲ ಸಮಸ್ಯೆಗಳಿಗೂ ದುಡ್ಡು ಪರಿಹಾರ… ಮಕ್ಕಳಿಗೆ ಕೈತುಂಬಾ ಹಣ ಕೊಟ್ಟರೆ ಸುಖದಿಂದ ಇರುತ್ತಾರೆಂಬ ಕುರುಡು ನಂಬಿಕೆ ಇವು ಇಂಥ ಚಟಗಳಿಗೆ ದಾಸರಾಗಲು ಪ್ರೇರೇಪಿಸುತ್ತವೆ. ಅಥವಾ ಕುಟುಂಬದ ನೀರಸ ವಾತಾವರಣ ಕೂಡ ಕಾರಣವಾಗುತ್ತದೆ. ಕೌಟುಂಬಿಕ ಸಂಬಂಧಗಳಲ್ಲಿ ಆತ್ಮೀಯತೆ ಇರದೇ ಹೋದಲ್ಲಿ, ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರು ಮರಣ ಹೊಂದಿದ್ದಲ್ಲಿ, ವಿಚ್ಛೇದನ ಹೊಂದಿದ್ದಲ್ಲಿ ಕೂಡ ಚಟಗಳಿಗೆ ದಾಸರಾಗುತ್ತಾರೆ. ಅದಲ್ಲದೆ ಮಕ್ಕಳ ಸಾಮರ್ಥ್ಯ ಏನಿದೆ ಎಂಬುದನ್ನು ಅರಿಯದೆ ಮಕ್ಕಳ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಂಡರೂ ಮಕ್ಕಳು ಆ ಎತ್ತರಕ್ಕೆ ಏರಲಾರದೆ ಖಿನ್ನತೆಯನ್ನು ಹೊಂದುತ್ತಾರೆ. ಒಮ್ಮೊಮ್ಮೆ ಪಾಲಕರು ಮಕ್ಕಳ ಭಾವನಾತ್ಮಕ ನೋವುಗಳಿಗೆ ಸ್ಪಂದಿಸುವುದಿಲ್ಲ. ಆಗಲೂ ಆತ್ಮಹತ್ಯೆಗೆ ಪ್ರಯತ್ನಿಸಬಹುದು.
ಇನ್ನು ಕೆಲವು ಬಾರಿ ಎಲ್ಲವೂ ಸರಿಯಾಗಿದ್ದರೂ ತಂದೆ ತಾಯಿಯರು ಮಕ್ಕಳನ್ನು ಅತಿ ಕಟ್ಟುನಿಟ್ಟಿನಲ್ಲಿ ಬೆಳೆಸಿದರೂ ಕೂಡ ಮಕ್ಕಳಿಗೆ ಬೇಸರವಾಗುತ್ತದೆ. ಪ್ರೀತಿ ನಶಿಸಿ ಹೋಗಿ ಆ ಸ್ಥಳದಲ್ಲಿ ದ್ವೇಷವು ಬೆಳೆಯುತ್ತದೆ. ಕೆಲವೊಮ್ಮೆ ತಂದೆ ತಾಯಿಯರಿಂದ ದೂರವಾದರೂ ಆತ್ಮೀಯ ಸ್ನೇಹಿತರಿಂದ ದೂರವಾದರೂ ಮಕ್ಕಳು ಮಾನಸಿಕವಾಗಿ ಖಿನ್ನತೆಗೆ ಈಡಾಗುವ ಸಂಭವವಿರುತ್ತದೆ.
ಇದನ್ನು ತಡೆಗಟ್ಟುವುದು ಹೇಗೆ? ಈ ನಿಟ್ಟಿನಲ್ಲಿ ಸಮಾಜದ ಪ್ರಯತ್ನವೂ ಬೇಕಲ್ಲವೆ? ಪ್ರತಿಯೊಂದು ಆರಂಭಕ್ಕೂ ಅಂತ್ಯವೊಂದು ಇದ್ದೇ ಇರುತ್ತದಲ್ಲವೇ? ಆ ಅಂತ್ಯ ಸ್ವಾಭಾವಿಕವಾಗಿರಬೇಕಲ್ಲವೇ?
ಜೀವನದ ವಿಷಯದಲ್ಲಿ ಒಂದು ಚೌಕಟ್ಟು ಹಾಕಿಕೊಂಡು ಅದರಂತೆಯೇ ನಮ್ಮ ಜೀವನವನ್ನು ಸಾಗಿಸಬೇಕು, ಹೀಗೆಯೆ ಬದುಕಬೇಕು, ಎನ್ನುವುದಕ್ಕಿಂತ ಆ ಚೌಕಟ್ಟಿನಿಂದ ಹೊರಬಂದು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು. ಸತ್ತು ಸಾಧಿಸುವುದು ಏನೂ ಇಲ್ಲ. ಅದರಿಂದ ಸಮಸ್ಯೆ ಬಗೆಹರಿಯದು. ಜೀವನದಲ್ಲಿ ಪ್ರಯತ್ನ ನಮ್ಮದು. ಪರಿಣಾಮ ನಮ್ಮ ಕೈಯಲ್ಲಿಲ್ಲ. ನಮ್ಮ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ನಮ್ಮ ಆಳ, ಅಳತೆಗಳನ್ನು ತಿಳಿದು ಬಯಕೆಗಳನ್ನು ನಿರ್ಧರಿಸಬೇಕು. ಆಶೆಯೇ ದುಃಖದ ಮೂಲವೆಂದು ತಿಳಿದು ತೀರ ನಿರಾಶಾವಾದಕ್ಕೆ ಜೋತು ಬೀಳಬೇಕಾಗಿಲ್ಲ. ಆಶೆಯೇ ಬಂಧನವಾಗಬಾರದು. ಕೇವಲ ಹಗಲುಗನಸು ಕಾಣುವುದರಿಂದ ನಮ್ಮ ಬಯಕೆಗಳು ಸಫಲವಾಗವು. ಸತತ ಪ್ರಯತ್ನವೂ ಜೊತೆಗೆ ಪರಿಶ್ರಮವೂ ಬೇಕಾಗುತ್ತದೆ. ಅವು ಸಫಲವಾಗದೆಹೋದಲ್ಲಿ ನಿರಾಶೆಯೂ ಸಹಜ. ಆದರೆ ಅದು ಅತಿರೇಕಕ್ಕೆ ಹೋಗಬಾರದು. ಅದೇ ಆತ್ಮಹತ್ಯೆಗೆ ಕಾರಣವಾಗುತ್ತದೆ. ಅಲ್ಲದೆ ಆತ್ಮಹತ್ಯೆಗೆ ಯೋಚಿಸುವವರೂ ಕೂಡ ಅದಕ್ಕೆ ಮುನ್ನ ತಮ್ಮ ಸಮಸ್ಯೆಯ ಬಗ್ಗೆ ಸೂಕ್ಷ್ಮವಾಗಿ ಆಲೋಚಿಸಬೇಕು. ತಮ್ಮ ಸಮಸ್ಯೆಯ ಬಗ್ಗೆ ಸ್ನೇಹಿತರು, ತಂದೆ ತಾಯಿ, ಸೋದರ ಸೋದರಿಯರು… ಹೀಗೆ ಯಾರು ತಮಗೆ ಆಪ್ತರೆನಿಸುವರೋ ಅವರೊಂದಿಗೆ ಒಮ್ಮೆ ಚರ್ಚೆ ಮಾಡಬೇಕು. ಅದತೆರನ ಸಮಸ್ಯೆಗಳು ಇತರರಿಗೆ ಬಂದಾಗ ಅವರು ಯಾವ ರೀತಿಯಲ್ಲಿ ಎದುರಿಸಿದರು ಎನ್ನುವುದರ ಬಗೆಗೂ ತಿಳಿಯುತ್ತದೆ. ಅಲ್ಲದೆ ಸೂಕ್ತ ಮಾರ್ಗದರ್ಶನವೂ ದೊರೆಯುತ್ತದೆ.
ಆದರೆ ಒಂದು ಸಮಸ್ಯೆ ಎಂದರೆ ಈ ಆತ್ಮಹತ್ಯೆಯ ಪ್ರವೃತ್ತಿಯನ್ನು ಪತ್ತೆ ಮಾಡುವುದು ಹೇಗೆ? ಅಧ್ಯಯನದ ಪ್ರಕಾರ ಕೆಲವು ಕುಟುಂಬಗಳಲ್ಲಿ ಆತ್ಮಹತ್ಯೆಯ ಸ್ವಭಾವವು ಆನುವಂಶಿಕವಾಗಿ ಬಂದಿರುತ್ತದೆ. ವ್ಯಕ್ತಿಯು ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿರುವುದು, ಮಾನಸಿಕ ಖಿನ್ನತೆಗೊಳಗಾಗಿರುವುದು, ತಮ್ಮ ಮೇಲೆ ತಮಗೇ ಭರವಸೆ ಇರದಿರುವುದು, ಅತ್ಯುತ್ಸಾಹದ ನಡವಳಿಕೆ ಇವೆಲ್ಲವೂ ಆತ್ಮಹತ್ಯೆಯ ಆಲೋಚನೆ ಅವರ ಮನದಲ್ಲಿ ಇರುವುದಕ್ಕೆ ಇಂಬು ಕೊಡುತ್ತವೆ. ಮಾನಸಿಕ ಹಾಗೂ ದೈಹಿಕ ದೌರ್ಜನ್ಯಕ್ಕೆ ಒಳಗಾಗಿರುವವರು, ಅದರಲ್ಲೂ ದೈಹಿಕ ದೌರ್ಜನ್ಯಕ್ಕೆ ಒಳಗಾಗಿರುವವರು ಅತಿ ಹೆಚ್ಚು ಪ್ರಮಾಣದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆಂದು ಅಧ್ಯಯನಗಳು ಹೇಳುತ್ತವೆ. ಅಂಥವರಿಗೆ ಹೇಳುವ ಒಂದು ಸಮಾಧಾನದ ಮಾತು ಕೂಡ ಅವರನ್ನು ಆತ್ಮಹತ್ಯೆಯಿಂದ ವಿಮುಖರನ್ನಾಗಿಸುತ್ತದೆ. ಅಂಥವರನ್ನು ಗುರುತಿಸುವುದೂ ಕೂಡ ಸ್ವಲ್ಪ ಪ್ರಯತ್ನ ಪಟ್ಟರೆ ಸಾಧ್ಯವಾಗುತ್ತದೆ. ಉಭಯ ಕುಶಲೋಪರಿಯ ಕೆಲ ಮಾತುಗಳೊಳಗೇ ಅವರು ತಮಗೆ ಜೀವನ ಬೇಜಾರಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಂಥ ಸಂದರ್ಭದಲ್ಲಿ ಅದರ ಮೂಲವನ್ನು ಕಂಡು ಹಿಡಿಯಬೇಕು. ಸಹಾಯ ಹಸ್ತ ಚಾಚಬೇಕು. ಸಹಾನುಭೂತಿಯ ಮಾತುಗಳನ್ನು ಆಡಬೇಕು. ಸಮಸ್ಯೆಯ ಬಗ್ಗೆ ವಿವರವಾಗಿ ತಿಳಿಯಬೇಕು. ಅವರ ಆತ್ಮಹತ್ಯೆಯಿಂದ ಅವರ ಕುಟುಂಬದ ಸದಸ್ಯರು ಅನುಭವಿಸಬಹುದಾದ ಸಮಸ್ಯೆಗಳ ಬಗ್ಗೆ ತಿಳಿಸಿ ಹೇಳಬೇಕು. ಆದರೆ ಕೆಲವು ಬಾರಿ ಹೀಗೆ ಹೇಳುವುದರಿಂದ ಅವರ ಆತ್ಮಹತ್ಯೆಯ ನಿರ್ಧಾರ ಇನ್ನಷ್ಟು ಗಟ್ಟಿಗೊಳ್ಳಬಹುದು. ಆದ್ದರಿಂದ ಮೊದಲು ಅವರ ಸಮಸ್ಯೆಯ ಬಗ್ಗೆ ಸಹಾನುಭೂತಿಯಿಂದ ಕೇಳಿ, ತಿಳಿದುಕೊಂಡು, ಅವರ ಬದುಕಿನ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ಅವರ ಮನೋಗತ ತಿಳಿದು ಕೈಲಾದಷ್ಟು ಸಹಾಯ ಮಾಡಬೇಕು. ಅವರನ್ನು ಒಂಟಿಯಾಗಿ ಬಿಡಬಾರದು. ಅದರಿಂದಾಗಿ ಅವರಿಗೆ ಆತ್ಮಹತ್ಯೆಯ ಆಲೋಚನೆ ಮರುಕಳಿಸುವ ಸಂದರ್ಭವೂ ಇರುತ್ತದೆ. ಅವರು ಒಬ್ಬರೇ ಇದ್ದಾಗ, ಕೆಲಸವಿಲ್ಲದೆ ಖಾಲಿಯಾಗಿದ್ದಾಗ ಅಂಥ ಆಲೋಚನೆಗಳು ಹೆಚ್ಚಾಗುತ್ತವೆ. ಆದರೆ, ಕುಟುಂಬದವರ ಜೊತೆಗೆ, ಸ್ನೇಹಿತರ ಜೊತೆಗೆ ತಮ್ಮ ಇಷ್ಟಾನಿಷ್ಟಗಳ ಚರ್ಚೆಯಿಂದಾಗಿ ಆತ್ಮಹತ್ಯೆಯ ಆಲೋಚನೆಯಿಂದ ವಿಮುಖರಾಗಬಹುದು.
ಮಾಲತಿ ಮುದಕವಿ