ಅನುವಾದ ಸಾಹಿತ್ಯ ಭಾಗ ೩
ಭಾಷಾವೈಶಿಷ್ಟ್ಯಗಳ ಬಳಕೆಯ ಅಪರೂಪದ, ಆಡುಭಾಷೆಯ ನುಡಿಗಟ್ಟುಗಳು ಒಂದು ರೀತಿಯಲ್ಲಿ ಭಾಷೆಯಿಂದ ಬೇರ್ಪಡಿಸಲಾಗದ ಅಭಿವ್ಯಕ್ತಿಗಳಾಗಿವೆ. ಅವುಗಳು ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿರುತ್ತವೆ, ಅವುಗಳಲ್ಲಿ ಒಳಗೊಂಡಿರುವ ಅಂಶಗಳಿಂದ ಸ್ವತಂತ್ರವಾಗಿರುತ್ತವೆ. ಒಮ್ಮೊಮ್ಮೆ ಈ ನುಡಿಗಟ್ಟುಗಳು ಶಬ್ದಶಃ ಅನುವಾದ ಹೊಂದಿದಾಗ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ನನಗೆ ಶ್ರೀಮತಿ ಇಂದ್ರಾಯಣಿ ಸಾಹುಕಾರರವರ ಮೇನಕಾ ಹಾಗೂ ಏಕ್ ಹೋತಾ ಸಿಕಂದರ ಕಾದಂಬರಿಗಳನ್ನು ಅನುವಾದ ಮಾಡುವಾಗ ಕೆಲವು ನುಡಿಗಟ್ಟುಗಳನ್ನು ಹೇಗೆ ಅರ್ಥ ಕೆಡದಂತೆ ಅನುವಾದಿಸಬೇಕೆಂಬ ಸಮಸ್ಯೆ ಉಂಟಾಗಿತ್ತು.. ‘ಸೋನ್ಯಾ ಪೇಕ್ಷಾ ಪಿವಳಾ’.. ಬಹಳ ಒಳ್ಳೆಯದಾಯಿತು ಎಂಬ ಅರ್ಥದಲ್ಲಿ ಇದನ್ನು ಉಪಯೋಗಿಸುತ್ತಾರೆ. ನಮ್ಮ ಕನ್ನಡದಲ್ಲಿ ನಾವು ಬಂಗಾರದಕಿಂತ ಹಳದಿ ಆಯಿತು ಎಂದು ಹೇಳುವುದೇ ಇಲ್ಲ! ಹಾಗೆ ಹೇಳಿದ್ದೇ ಆದರೆ ಎಂಥ ಆಭಾಸವಲ್ಲವೇ! ಏಕ್ ಹೋತಾ ಸಿಕಂದರ್ ಕಾದಂಬರಿಯನ್ನು ಅನುವಾದಿಸುವಾಗ ಕೂಡ ಕೆಲವು ಸಮಸ್ಯೆಗಳನ್ನು ನಾನು ಲೇಖಕಿಗೇ ನೇರವಾಗಿ ಫೋನ್ ಮಾಡಿ ಕೇಳಬೇಕಾಯಿತು. ಇನ್ನು ಮಂಜೂಷಾ ಅಮಡೇಕರರ ‘ಜೆ ಕೃಷ್ಣಮೂರ್ತಿಯವರ’ ಬಗೆಗಿನ ಒಂದು ಜೀವನ ಚರಿತ್ರೆಯ ಸಂದರ್ಭ. ಅದರಲ್ಲಿಯೂ ನನಗೆ ಇಂಥ ಅನೇಕ ಸಮಸ್ಯೆಗಳು ಎದುರಾದವು. ಆಗ ನಾನು ಅವರಿಗೇ ಫೋನ್ ಮಾಡಿ ನನ್ನ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದೆ. ಉದಾಹರಣೆಗೆ ಕರಿಯ ಮೆಣಸಿನ ಮರದ ಕೆಳಗೆ ಕೃಷ್ಣಮೂರ್ತಿಯವರು ಅಸ್ವಸ್ಥರಾಗಿ ವೇದನೆಯನ್ನು ಅನುಭವಿಸಿದರು… ಎಂದು ಹೇಳುತ್ತಾರೆ. ನನಗೆ ಕರಿಮೆಣಸಿನ ಮರವಿರುವ ಬಗ್ಗೆ ನಂಬಿಕೆಯೇ ಬರಲಿಲ್ಲ! ಅದನ್ನು ಮಂಜೂಷಾ ಅವರನ್ನೇ ಕೇಳಿದೆ. ಕರಿಮೆಣಸಿನ ಬಳ್ಳಿ ಮಾತ್ರ ಇರುತ್ತದೆ ಎಂದೂ ಹೇಳಿದ್ದೆ. ಆಗ ಅವರು ತಾವು ಅದನ್ನು ಇಂಗ್ಲಿಷ್ನಿಂದ ಅನುವಾದಿಸಿರುವುದಾಗಿಯೂ, ಕರಿಮೆಣಸು ಶಬ್ದವನ್ನು ಬಿಟ್ಟು ಒಂದು ದೊಡ್ಡ ಮರ ಎಂದು ಉಪಯೋಗಿಸಲೂ ಹೇಳಿದ್ದರು!
ಹೀಗೆ ಲೇಖಕರ ಆಲೋಚನೆಗಳನ್ನು ವಿರೂಪಗೊಳಿಸದೆ ಅಥವಾ ವ್ಯಾಖ್ಯಾನಕ್ಕೆ ಬದಲಾಯಿಸದೆ, ತೊಂದರೆಗಳನ್ನು ಎದುರಿಸಿದಾಗ, ಅನುವಾದಕನು ತನ್ನನ್ನು “ಹೆಚ್ಚು ಕಡಿಮೆ ಸರಿ” ಅನುವಾದ ಮಾಡಲು ಎಂದಿಗೂ ಅನುಮತಿಸಬಾರದು. ಕೊಟ್ಟಿರುವ ಪದ, ಅಭಿವ್ಯಕ್ತಿ ಅಥವಾ ವಾಕ್ಯವನ್ನು ಭಾಷಾಂತರಿಸಲು ತನ್ನ ಅಸಮರ್ಥತೆಯನ್ನು ಒಪ್ಪಿಕೊಳ್ಳಬೇಕು. ಬಲ್ಲವರ ಜೊತೆ ಚರ್ಚಿಸಬೇಕು. ಅನುವಾದಿಸದೆ ಅದೇ ಮೂಲ ಶಬ್ದವನ್ನು ಇಟ್ಟುಬಿಡಬೇಕು.
ರಂಗನಾಥ್ ರಾಮಚಂದ್ರ ರಾವ್ ಎಂಬ ನನ್ನ ತೆಲುಗು ಸ್ನೇಹಿತರೊಬ್ಬರಿದ್ದಾರೆ. ಅವರು ಕನ್ನಡದಿಂದ ಸಾಕಷ್ಟು ಕೃತಿಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ. ಆದರೂ ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ ಕಾದಂಬರಿಯನ್ನು ಅನುವಾದಿಸುವಾಗ ನಮ್ಮ ಧಾರವಾಡ ಜಿಲ್ಲೆಯ ನರಗುಂದದ ಕಡೆಯ ಆಡುಭಾಷೆಯ ಕೆಲವು ಶಬ್ದಗಳು ಅವರಿಗೆ ಅರ್ಥವಾಗದಾದಾಗ ನನ್ನನ್ನು ಸಂಪರ್ಕಿಸುತ್ತಿದ್ದರು. ಶ್ರೀ ಜಯಂತ ಕಾಯ್ಕಿಣಿಯವರ “ತೂಫಾನ್ ಮೇಲ್” ಅನುವಾದಿಸುವಾಗ ಕೂಡ ಅವರು ಕೆಲ ಶಬ್ದಗಳಿಗಾಗಿ ನನ್ನನ್ನು ಸಂಪರ್ಕಿಸಿದುದಿದೆ. ಹೀಗೆ ಆಯಾ ಪ್ರಾಂತ್ಯದ ಭಾಷೆಗಳಲ್ಲಿ ವೈವಿಧ್ಯತೆಯಿದ್ದು ಅಲ್ಲಿಯ ಜನರಿಗೇ ಅರ್ಥವಾಗುವಂಥವು.
ಯಾವಾಗಲೂ ಲೇಖಕ ತಾನು ಬರೆಯುವ ಕೃತಿಯು ಅನುವಾದ ಮಾಡುವಾಗ ಅನುವಾದಕನಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಬರೆಯುವುದಿಲ್ಲ. ಅದು ಅವನ ಸ್ವಯಂಸ್ಫೂರ್ತಿ. ಆದರೆ ಅನುವಾದಕನು ಮೂಲ ಲೇಖಕನ ಕೃತಿಯ ಆಶಯಕ್ಕೆ ಚ್ಯುತಿ ಬಾರದಂತೆ ಅನುವಾದ ಮಾಡುವಾಗ ಇಂಥ ಅನೇಕ ಆತಂಕಗಳನ್ನು ಎದುರಿಸಬೇಕಾಗುತ್ತದೆ.
ಪರಿಪೂರ್ಣವಾಗಿ ತೃಪ್ತಿಕರವಾಗಿರಬಹುದಾದಂಥ ಅನುವಾದದಲ್ಲಿ ಅಡಕವಾಗಿರಬೇಕಾದ ಪ್ರಧಾನ ಅಂಶಗಳು ಅಂದರೆ,
೧) ನಾವು ಆಯ್ದುಕೊಂಡ ವಸ್ತು ಮುಖ್ಯ ಹಾಗು ಪ್ರಸ್ತುತವಾಗಿರಬೇಕು.
೨) ಮೂಲ ಕೃತಿಯಲ್ಲಿನ ವ್ಯಾಕರಣಕ್ಕೆ ಹೊಂದಿಕೊಂಡು ಅನುವಾದ ಮಾಡಬೇಕು.
೩) ಮೂಲ ಲೇಖಕರ ಭಾವಕ್ಕೆ ಚ್ಯುತಿ ಬರಬಾರದು.
ಅನುವಾದಕರು ಸೃಜನಶೀಲ ಲೇಖಕರು ಅಲ್ಲವೆಂದು ಹೇಳುವರಾದರೂ ನನ್ನ ಮಟ್ಟಿಗೆ ಇದು ದ್ವಿಸೃಷ್ಟಿ. ನಾವು ಒಳ್ಳೆಯ ಕೃತಿಯೊಂದನ್ನು ಆಯ್ಕೆ ಮಾಡಿರುವಾಗ ಓದುಗರಿಗೆ ಅದರ ಮೂಲ ಕೃತಿಯನ್ನು ಓದಿದಷ್ಟೇ ಖುಷಿ ಆಗಬೇಕು. ಆಗ ಅನುವಾದದ ಮೂಲಕ ನಾವು ಒಂದು ಕೃತಿಯ ಮರುಸೃಷ್ಟಿ ಮಾಡುತ್ತಿದ್ದೇವೆ ಎಂಬ ತೃಪ್ತಿ ಇರುತ್ತದೆ.
ಪರಿಪೂರ್ಣವಾಗಿ ತೃಪ್ತಿಕರವಾದಂಥ ಅನುವಾದ ಮಾಡಬೇಕಾದರೆ ಭಾಷೆಯ ಮೇಲೆ ಪ್ರಭುತ್ವವಿರಬೇಕು. ಯಾವ ಭಾಷೆಯಿಂದ ಅನುವಾದ ಮಾಡುತ್ತೇವೆಯೋ ಅದರ ಆಂತರಿಕ ಸ್ವಭಾವ ಬಗ್ಗೆ ಜ್ಞಾನವಿರಬೇಕು. ಮಾತ್ರವಲ್ಲದೆ ಮೂಲ ಕೃತಿಯ ಲೇಖಕರ ಜತೆ ಸಂಪೂರ್ಣವಾದ ಸಹಭಾಗಿತ್ವ ಮತ್ತು ಪಾರದರ್ಶಕತೆ ಇರಬೇಕು. ಮುಖ್ಯವಾಗಿ ಎರಡೂ ಸಂಸ್ಕೃತಿಗಳ ಬಗ್ಗೆ ಮಾಹಿತಿ ಇರಬೇಕು.
ನಾನು ಶ್ರೀಮತಿ ಜ್ಯೋತಿ ಪುಜಾರಿಯವರ ಫಾಶೀ ಚ್ಯಾ ಸಾಕ್ಷಿದಾರ್ ಎಂಬ ಕಾದಂಬರಿಯನ್ನು ಅನುವಾದ ಮಾಡಲು ಆಯ್ಕೆ ಮಾಡಿದ್ದೆ. ಅದು ಜೈಲಿನಲ್ಲಿ ಫಾಶಿಗೇರಿಸುವ ಕೆಲಸ ಮಾಡುವ ಒಬ್ಬ ವ್ಯಕ್ತಿಯ ಕಥೆ. ಮನೋವೈಜ್ಞಾನಿಕ ಕಥೆಯದು. ಜ್ಯೋತಿಯವರು ನಾಗಪುರದವರು. ಆ ಕಾದಂಬರಿಯ ಭಾಷೆಯು ನಾಗಪುರದ ಹತ್ತಿರದ ಹಳ್ಳಿಯದು. ಆಗ ನಾನು ಆಶ್ರಯಿಸಿದ್ದು ನನ್ನ ನಾದಿನಿಯ ಮಗನನ್ನು! ಅವನು ಮರಾಠವಾಡಾದವನಾದರೂ ನನಗೆ ಸಹಾಯ ಮಾಡಿದ. ಅದರಲ್ಲಿ ಒಂದು ಪದ್ಧತಿಯ ವಿವರಣೆ ಇದೆ. ಮದುವೆಯಾಗದಿರುವಂಥ ಮನೆಗೆ ಚೊಚ್ಚಲ ಮಗಳಾಗಿ ಹುಟ್ಟಿದ ಹುಡುಗಿಯು ಭುಲಾಬಾಯೀ ಹಾಗೂ ಭುಲೋಜಿಯ ಮಣ್ಣಿನ ಮೂರ್ತಿಗಳನ್ನು ಎಂದರೆ ಪಾರ್ವತಿ, ಪರಮೇಶ್ವರರನ್ನು ಬೊಂಬೆಯ ರೂಪದಲ್ಲಿ ಪೂಜಿಸುವಂಥದು. ಅವನು ಅದನ್ನು ನನಗೆ ವಿವರಿಸಿದುದರಿಂದ ನನಗೆ ಬಹಳ ಅನುಕೂಲವಾಗಿತ್ತು.
ಭಾಷಾಂತರಕಾರನು ಸರ್ವಜ್ಞನಾಗಿರುವುದು ಸಾಧ್ಯವಿಲ್ಲವಾದ್ದರಿಂದ ಕೋಶ, ನಿಘಂಟು ಮೊದಲಾದವುಗಳ ಸಹಾಯವನ್ನು ಮಾತ್ರವಲ್ಲದೆ ಅರಿತವರನ್ನು ಕೂಡ ಆಶ್ರಯಿಸಿ ವಿಶಿಷ್ಟ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ವಿಶಿಷ್ಟ ಶಾಸ್ತ್ರ, ಸಂಸ್ಕೃತಿ, ಇತಿಹಾಸ ಮತ್ತು ರಾಜಕೀಯ ಬೆಳವಣಿಗೆಗಳ ಮುನ್ನೆಲೆಯಲ್ಲಿ ಮಾಹಿತಿಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ.
ಅಲ್ಲದೆ ಮೂಲ ಲೇಖಕರ ಅನುಮತಿಯನ್ನಂತೂ ಮೊದಲೇ ತರಿಸಿ ಇಟ್ಟುಕೊಂಡೇ ಅನುವಾದವನ್ನು ಪ್ರಾರಂಭ ಮಾಡಬೇಕು. ಇಲ್ಲವಾದರೆ ಒಮ್ಮೊಮ್ಮೆ ತೊಂದರೆ ಆನುಭವಿಸಬೇಕಾಗುತ್ತದೆ. ಕೆಲವು ಲೇಖಕರು ಬಾಯಿಮಾತಿನಿಂದ ಒಪ್ಪಿಗೆ ಕೊಟ್ಟಿದ್ದಾರೆ ಎಂದುಕೊಂಡು ಅನುವಾದ ಆರಂಭಿಸಿ ಅದು ಮುಗಿಯಲು ಬಂದಾಗ ಅವರನ್ನು ಸಂಪರ್ಕಿಸಿದರೆ ಅವರು ದೊಡ್ಡ ಮೊತ್ತದ ಹಣದ ಬೇಡಿಕೆಯನ್ನು ಇಡಬಹುದು. ಅಥವಾ ನಮ್ಮ ಅನುವಾದ ಇನ್ನೂ ಪ್ರಕಟಣೆಯ ಹಂತದಲ್ಲಿರುವಾಗಲೇ ಮತ್ತೊಬ್ಬರಿಗೆ ಅನುವಾದದ ಹಕ್ಕುಗಳನ್ನು ಕೊಟ್ಟಿದ್ದು, ಅವರು ಆಗಲೇ ಪ್ರಕಟಿಸಿ ಪುಸ್ತಕ ಬಿಡುಗಡೆ ಕೂಡ ಮಾಡಿರಬಹುದು! ಆಗ ಕೋರ್ಟ್ ಕಟ್ಟೆ ಏರಬೇಕಾಗಿಯೂ ಬರಬಹುದು!
ಆದರೂ ಅನುವಾದದಲ್ಲಿ ತೃಪ್ತಿಯೂ ಇರುತ್ತದೆ. ಅನುವಾದ ಮಾಡುವುದು ಕೂಡಾ ಸೃಷ್ಟಿಯೇ. ಆದರೆ ಅದು ಮರುಸೃಷ್ಟಿ. ನೀವೊಂದು ಪುಸ್ತಕವನ್ನು ಓದುವಾಗ ಅದು ಅನುವಾದಿತ ಕೃತಿ ಎಂದೆನಿಸಿಕೊಳ್ಳದೆ ಮೂಲ ಪುಸ್ತಕದಂತೆ ಓದಿಸಿಕೊಂಡು ಹೋಗಿ ಓದಿದ ನಂತರ ಓದುಗ ಇದು ಅನುವಾದಿತ ಕೃತಿಯೇ ಎಂದು ಅಚ್ಚರಿ ಪಟ್ಟುಕೊಳ್ಳುತ್ತಾನಲ್ಲ, ಅದುವೇ ಅನುವಾದಕನಿಗೆ ನಿಜವಾದ ಪ್ರಶಸ್ತಿ ಇದ್ದಂತೆ. ಅನುವಾದದಲ್ಲಿ ಪರಿಪೂರ್ಣತೆ ಸಿಗಬೇಕಾದರೆ ಅನುವಾದಕನು ಮೂಲ ಸಾಹಿತಿಯಾಗಿ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ. ಹಾಗೆಯೇ ಮೂಲ ಭಾವ, ಪದಗಳ ಆತ್ಮೀಯತೆಯನ್ನು ಉಳಿಸುತ್ತಾ, ಇನ್ನೊಂದು ಭಾಷೆಯ ಸೌಂದರ್ಯವನ್ನು ಆವಾಹಿಸಬೇಕು.
ಈಗ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣವನ್ನೂ ಕೂಡ ಕನ್ನಡದಲ್ಲಿ ಕೊಡುವ ಪದ್ಧತಿ ಜಾರಿಗೆ ಬರಲಿದೆ. ಆದರೆ ವೈಜ್ಞಾನಿಕ, ವೈದ್ಯಕೀಯ ಮತ್ತು ತಾಂತ್ರಿಕ ಸಾಹಿತ್ಯದಲ್ಲಿ ಪಾರಿಭಾಷಿಕ ಶಬ್ದಗಳ ಅನುವಾದವು ತುಂಬಾ ಕಷ್ಟಕರ. ವೈದ್ಯಕೀಯ ಪದಗಳ ಅನುವಾದದಲ್ಲಿಯಂತೂ ಅತ್ಯಂತ ಜಾಗರೂಕತೆ ವಹಿಸಬೇಕಾಗುತ್ತದೆ. ಸಾಮಾನ್ಯ ಸಾಹಿತ್ಯದ ಭಾಷೆಯಿಂದ ಭಿನ್ನವಾಗಿರುವ ಮುಖ್ಯ ಶಬ್ದಕೋಶ ನಿಧಿಯ ಪದಗಳ ಬಳಕೆಯಿಂದಾಗಿ ವೈಜ್ಞಾನಿಕ, ವೈದ್ಯಕೀಯ ಮತ್ತು ತಾಂತ್ರಿಕ ಸಾಹಿತ್ಯದ ಶಬ್ದಕೋಶವು ಕಾದಂಬರಿಯ ಶಬ್ದಕೋಶಕ್ಕಿಂತ ಹೆಚ್ಚು ಬಡವಾಗಿದೆ ಎಂದು ಎನ್ನಿಸುತ್ತದೆ.
ಸಾಮಾನ್ಯವಾಗಿ, ಒಂದು ಭಾಷೆಯಿಂದ ಇನ್ನೊಂದಕ್ಕೆ ಭಾಷಾಂತರಿಸುವ ರೀತಿಯಲ್ಲಿ ಎರಡು ವಿಧಾನಗಳನ್ನು ನಾವು ಗಮನಿಸುತ್ತೇವೆ. ಮೊದಲನೆಯದು ಅಕ್ಷರಶಃ ಸಮಾನಾರ್ಥಕ ಶಬ್ದಗಳನ್ನು ಉಪಯೋಗಿಸುವುದು. ಇದರಲ್ಲಿ ಎರಡು ಭಾಷೆಗಳಲ್ಲಿ ಸಾಧ್ಯವಾದಷ್ಟು ಸಮಾನವಾದ ಪದಗಳನ್ನು ಉಪಯೋಗಿಸಲು ಪ್ರಯತ್ನಿಸಲಾಗುತ್ತದೆ. ಇದರಿಂದಾಗಿ ವ್ಯಾಕರಣದ ವ್ಯತ್ಯಾಸಗಳು ಕೂಡ ಸಹಜವಾಗಿ ಆಗಬಹುದು. ಆದರೂ ಇಲ್ಲಿ ಅಂಥವುಗಳಿಗೆ ಹೆಚ್ಚಿನ ಮಹತ್ವವನ್ನು ನೀಡದೆ ಸನ್ನಿವೇಶಕ್ಕೆ ಗಮನ ಹರಿಸಬಹುದೇನೋ. ಇನ್ನೊಂದು ವಿಧಾನವೆಂದರೆ ಪ್ಯಾರಾಫ್ರೇಸಿಂಗ್. express the meaning of (something written or spoken) using different words, especially to achieve greater clarity. ಬೇರೆ ಶಬ್ದಗಳನ್ನು ಉಪಯೋಗಿಸಿದರೂ ಸ್ಪಷ್ಟತೆಯ ದೃಷ್ಟಿಯಿಂದ ಆ ಶಬ್ದವು ಉಚಿತವಾಗಿರಬೇಕು. ಇದನ್ನು ಉಚಿತ ಅನುವಾದವೆಂದು ಕರೆಯಲಾಗುತ್ತದೆ.
ಭಾಷಾಂತರ ಎಂಬುದು ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಮತ್ತು ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ನಡೆದಿದೆ. ಅನುವಾದವು ಯಶಸ್ವಿಯಾಗಬೇಕಾದರೆ ಅನುವಾದಕನು ಉನ್ನತ ಮಟ್ಟದ ಸೃಜನ ಸಾಮರ್ಥ್ಯವನ್ನು ಪಡೆದಿರಬೇಕು. ಅವನ ಭಾಷೆಯಲ್ಲಿ ಅಭಿವ್ಯಕ್ತಿಯ ಪ್ರಭುತ್ವ ಇರಬೇಕು. ಕಲ್ಪನಾ ಸಾಮರ್ಥ್ಯದ ಮೂಲಕ ಭಾವವನ್ನು ಭೇದಿಸಿ ಆ ಜೀವಂತ ಅನುಭವವನ್ನು ಮೂಲದ ಶಬ್ದ ಹಾಗೂ ರೂಪಗಳಿಗೆ ಸಮಾನವಾದ ಶಬ್ಧ ಹಾಗೂ ರೂಪಗಳಲ್ಲಿ ಅಭಿವ್ಯಕ್ತಿಗೊಳಿಸಬೇಕು. ಒಂದು ಭಾಷೆಯಲ್ಲಿ ರಚಿತವಾಗಿರುವ ಬರಹಗಳನ್ನು ಬಹುಮುಖಿ ದೃಷ್ಟಿಕೋನಗಳಲ್ಲಿ ಅಧ್ಯಯನ ಮಾಡುವುದೇ ಅನುವಾದ. ಅನುವಾದವು ಮೂಲ ಕೃತಿಗಿಂತಲೂ ಮತ್ತು ಅನುವಾದಕನು ಮೂಲಕರ್ತೃವಿಗಿಂತಲೂ ಕಳಪೆ ಎಂಬ ಭಾವನೆ ದೂರವಾಗಿ ಅನುವಾದಕನು ಎರಡು ಕಾಲಘಟ್ಟಗಳ ನಡುವೆ, ಎರಡು ಸಂಸ್ಕೃತಿಗಳ ನಡುವೆ, ಎರಡು ಹೃದಯಗಳ ನಡುವೆ ಸ್ನೇಹಪೂರ್ಣ ಸಂಪರ್ಕವನ್ನು ಕಲ್ಪಿಸುವ ಸಾಂಸ್ಕೃತಿಕ ರಾಯಭಾರಿ ಎಂಬ ಸಂಗತಿಗೆ ಮಾನ್ಯತೆ ದೊರೆಯಬೇಕು. ಹೀಗೆ ಅನುವಾದ ಮತ್ತು ಭಾಷಾಂತರ ಈ ಎರಡು ಉದ್ದಿಷ್ಟಾರ್ಥವನ್ನು ಹೇಳುತ್ತವೆ. ಎರಡರಲ್ಲಿ ಯಾವುದೂ ಹೆಚ್ಚು ಅಲ್ಲ, ಕಡಿಮೆಯೂ ಅಲ್ಲ. ಎರಡೂ ಅನನ್ಯವಾದವುಗಳಾಗಿವೆ ಎಂದು ಹೇಳಬಹುದು. ಮೂಲ ಸಾಹಿತ್ಯವು ಓದುಗರ ಮನಸೆಳೆಯುವಂತೆ ಅನುವಾದದ ಮೂಲಕ ಸೃಷ್ಟಿಯಾದ ಸಾಹಿತ್ಯವು ಕೂಡ ಬೇರೊಂದು ಭಾಷೆಯ ಓದುಗರ ಮನ ಸೆಳೆಯಬೇಕು. ಎಂದರೇ ಆ ಭಾಷಾಂತರವು ಸಫಲವಾಗುತ್ತದೆ.