‘ಒಂದೂರಿನಲ್ಲಿ ಒಬ್ಬಳು ಮಡಕೆಯಕ್ಕಾ ಅನ್ನೋ ಹುಡುಗಿಯಿದ್ದಳಂತೆ. ಅವಳ ಅಮ್ಮ ಆವಳಷ್ಟೇ ಉದ್ದದ ಮಡಕೆಯನ್ನು ಕುಂಬಾರನ ಕೈಯಲ್ಲಿ ಮಾಡಿಸಿ ಅವಳಿಗೆ ಹಾಕಿಸಿದ್ದಳಂತೆ. ಇದರಿಂದ ನೋಡೋರಿಗೆ ಅವಳ ಕಣ್ಣುಗಳು ಮಾತ್ರ ಕಾಣಿಸ್ತಿದ್ವಂತೆ. ಎಲ್ಲರೂ ಅವಳು ಕುರೂಪಿ ಇರಬೇಕು, ಅದಕ್ಕೇ ಮಡಕೆಯಲ್ಲಿ ಅಡಗಿದ್ದಾಳೆ ಅಂತ ಮಾತನಾಡಿಕೊಳ್ಳುತ್ತಿದ್ದರಂತೆ. ಆದರೆ ವಾಸ್ತವನೇ ಬೇರೆಯಾಗಿತ್ತು…’ ಹೀಗೆ ಅಜ್ಜಿ ಕಥೆ ಹೇಳಲು ಪ್ರಾರಂಭ ಮಾಡಿದಳೆಂದರೆ ಸಾಕು, ನಮ್ಮೆಲ್ಲರ ಕಣ್ಣು ದೊಡ್ಡದಾಗಿ ಅವಳನ್ನೇ ನೋಡುತ್ತಿದ್ದವು. ಆಗೆಲ್ಲ ರಜೆಗೆಂದು ಹಳ್ಳಿಗೆ ಹೋಗುತ್ತಿದ್ದ ನಮ್ಮೆಲ್ಲರಿಗೆ ಆಟಕ್ಕೆ ಏನಿಲ್ಲದಿದ್ದರೂ ಅಜ್ಜಿಯ ಕಥೆ ಬೇಕಿತ್ತು. ಅವಳು ಬರಿದಾಗದ ಬತ್ತಳಿಕೆಯಿಂದ ಪ್ರತಿದಿನ ಒಂದೊಂದು ಕಥೆಗಳನ್ನು ಬಿಡುತ್ತಿದ್ದರೆ ನಮಗೆ ಇಡೀ ತಿಂಗಳು ಹಬ್ಬವೋ ಹಬ್ಬ. ಇದರ ಚಿತ್ರಣ ಈಗಿನ ಮಕ್ಕಳಿಗೆ, ಅದರಲ್ಲೂ ನಗರದ ಮಕ್ಕಳಿಗೆ ಇಲ್ಲವೇ ಇಲ್ಲ ಎನ್ನಬಹುದು. ಈಗೇನಿದ್ದರೂ ಆನ್‌ಲೈನ್‌ನಲ್ಲಿ ತಮಗೆ ಬೇಕಾದ ಭಾಷೆಗಳಲ್ಲಿ ಕಥೆಗಳನ್ನು ನೋಡುವುದು, ಅಲೆಕ್ಸಾದಿಂದ ಕೇಳುವುದು ಅಭ್ಯಾಸ. ಆದರೆ ಅಜ್ಜಿ, ಅಪ್ಪ, ಅಮ್ಮನ ಬಾಯಿಯಿಂದ ಕೇಳಿದ ಕಥೆಗೆ ಇವ್ಯಾವುವೂ ಸಾಟಿಯೇ ಅಲ್ಲ. ಅಲ್ಲಿ ಕಥೆಯ ಜೊತೆಗೆ ನೀತಿ ಪಾಠವೂ ಆಗುತ್ತಿತ್ತು. ಕೇಳುತ್ತಾ ನಮ್ಮದೇ ಯೋಚನಾಲಹರಿಯಲ್ಲಿ ತೇಲುತ್ತಿದ್ದ ನಮ್ಮ ಯೋಚನಾ ಶಕ್ತಿಯೂ ಹೆಚ್ಚಾಗುತ್ತಿತ್ತು. ಕಥೆಯ ಮೂಲಕ ಬದಲಾವಣೆ ಈಗಿನ ವಿಭಕ್ತ ಕುಟುಂಬಗಳಲ್ಲಿ ಅದನ್ನು ಬಯಸುವುದೂ ಕಷ್ಟವೇ. ಆದರೆ ತಾಯಿ ಮನಸ್ಸು ಮಾಡಿದರೆ ಅದು ಸಾಧ್ಯ. ಅದರ ಜವಾಬ್ದಾರಿಯನ್ನು ಆಕೆ ವಹಿಸಬಹುದು. ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಕಥೆ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ ನೀವು ಮಗುವಿಗೆ ಸುಳ್ಳು ಹೇಳಬಾರದು, ಒಗ್ಗಟ್ಟಿನ ಮಹತ್ವ.. ಹೀಗೆ ಮಾತಿನಲ್ಲಿ ಬುದ್ಧಿ ಹೇಳುವುದಕ್ಕಿಂತ ನಾವೆಲ್ಲಾ ಕೇಳಿ ಬೆಳೆದ ‘ಒಗ್ಗಟ್ಟಿನಲ್ಲಿ ಬಲವಿದೆ’ ಎನ್ನುವಂತಹ ಕಥೆಗಳನ್ನು ಹೇಳಿದರೆ ಸಾಕು. ನಿಮಗೆ ತರಲು ಸಾಧ್ಯವಾಗದಿದ್ದ ಮಗುವಿನಲ್ಲಿನ ಬದಲಾವಣೆಯನ್ನು ಆ ಒಂದು ಕಥೆ ಮಾಡುತ್ತದೆ. ಜೊತೆಗೆ ಕಥೆಯ ಸಾರ ಮಗುವಿನ ಮನಸ್ಸಲ್ಲಿ ಸದಾ ಹಸಿರಾಗಿಯೇ ಉಳಿಯುತ್ತದೆ. ಗೃಹಿಣಿಯರಿಗಿಂತ ಕೆಲಸಕ್ಕೆ ಹೋಗುವ ಮಹಿಳೆಯರೇ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಕಥೆಗಳಿಗಾಗಿ ಸಮಯ ಕೊಡುವುದು ಸ್ವಲ್ಪ ಕಷ್ಟ ಎನ್ನುವವರು ರಾತ್ರಿ ಮಲಗುವ ಮುನ್ನ ಹತ್ತು ನಿಮಿಷ ಅವರಿಗಾಗಿ ಮೀಸಲಿಡಬಹುದು. ವಿದೇಶಗಳಲ್ಲಿ ಬಹುತೇಕ ಅಪ್ಪ– ಅಮ್ಮಂದಿರು ತಮ್ಮ ಮಕ್ಕಳಿಗೆ ಪ್ರತಿರಾತ್ರಿ ‘ಬೆಡ್ ಸ್ಟೋರೀಸ್’ಗಳನ್ನು ಹೇಳುವ ಪರಿಪಾಠ ಹೊಂದಿದ್ದಾರೆ. ಮೊದಲೆಲ್ಲ ನಮ್ಮಲ್ಲಿಯೂ ಅಜ್ಜಿ, ತಾತ ಮೊಮ್ಮಕ್ಕಳಿಗಾಗಿ ಪ್ರತಿ ರಾತ್ರಿ ಅದನ್ನೆ ತಾನೆ ಮಾಡುತ್ತಿದ್ದದ್ದು. ಈಗಲೂ ಕೆಲವು ಮನೆಗಳಲ್ಲಿ ಇರಬಹುದು. ಇದರಿಂದ ಮಗು ಒಂದೊಳ್ಳೆ ಸಂದೇಶದೊಂದಿಗೆ, ತನ್ನದೇ ಆದ ಕಲ್ಪನೆಯೊಂದಿಗೆ ಚೆನ್ನಾಗಿ ನಿದ್ರಿಸುತ್ತದೆ. ಕಥೆಗಳು ಎಲ್ಲಾ ವಯೋಮಾನದವರಿಗೂ ಇಷ್ಟವಾಗುತ್ತವೆ. ಕಥೆಗಳ ಮುಖಾಂತರವೇ ಎಲ್ಲರಿಗೂ ಹತ್ತಿರವಾಗುವವರೂ ಇದ್ದಾರೆ. ಹಾಗಾಗಿ ಮಕ್ಕಳಿಗೆ ಹತ್ತಿರವಾಗಲು ಕಥೆಗಳು ಒಂದು ಉತ್ತಮ ಸಾಧನವಾಗಬಹುದು. ಶಾಲೆಯಲ್ಲಿ ಎಲ್ಲಾ ವಿಷಯಗಳ ಶಿಕ್ಷಕರಿಗಿಂತಲೂ ‘ಕಥೆ ಹೇಳುವ’ ಶಿಕ್ಷಕರೆಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಕಥೆಗಳ ಮುಖಾಂತರವೇ ಮಗು ತನ್ನ ಮನಸ್ಸಿನಲ್ಲಿರುವುದನ್ನೂ ನಿಮ್ಮೊಡನೆ ಹಂಚಿಕೊಳ್ಳುತ್ತದೆ. ‘ಅಮ್ಮಾ, ಇವತ್ತು ಸ್ಕೂಲಲ್ಲಿ ಏನಾಯ್ತು ಗೊತ್ತಾ?’ ಎಂದು ಶುರು ಮಾಡುವಾಗಲೆ ನಡೆದ ಘಟನೆಯೊಂದು ಕಥೆಯ ರೂಪ ಪಡೆದಿರುತ್ತದೆ. ಇನ್ನು ವಿವೇಕಾನಂದ, ಮಾರ್ಟಿನ್ ಲೂಥರ್ ಕಿಂಗ್, ಗಾಂಧೀಜಿ ಮೊದಲಾದವರು ತಮ್ಮ ಭಾಷಣಗಳಲ್ಲಿ ಕಥೆಗಳನ್ನು ಹೇಳುವ ಮೂಲಕವೇ ತಾನೇ ಜನರಿಗೆ ಹತ್ತಿರವಾದದ್ದು! ಅನುಭವಿಸಿ ಹೇಳಿ ಕಥೆಗಳನ್ನು ಓದುವುದಕ್ಕಿಂತ ಅನುಭವಿಸಿ ಹೇಳುವುದು ಮುಖ್ಯ. ಧ್ವನಿಯಲ್ಲಿನ ಏರಿಳಿತ, ಕಥೆಯಲ್ಲಿ ಪ್ರಾಣಿಗಳಿದ್ದರೆ ಅದರ ಕೂಗಿನ ಶಬ್ದ, ಮುಖದಲ್ಲಿ ಅಭಿವ್ಯಕ್ತಿಗೊಳಿಸುವ ಭಾವ ಎಲ್ಲವೂ ಕಥೆಯೊಂದಿಗೆ ಬೆರೆತು ಮಗು ಮತ್ತಷ್ಟು ಆನಂದಿಸಲು ಸಹಾಯ ಮಾಡುತ್ತದೆ. ಅವರೂ ಅದನ್ನು ಅನುಕರಿಸುತ್ತಾರೆ. ಕೆಲವೊಮ್ಮೆ ಮಕ್ಕಳಿಗೂ ಕಥೆ ಹೇಳುವಂತೆ ಪ್ರೇರೇಪಿಸಿ ಅವರಿಗೂ ಅವಕಾಶ ನೀಡಿ. ಅವರು ಹೇಳುವಾಗ ಗಮನವಿಟ್ಟು ಕೇಳಿ. ನೀತಿಕಥೆಗಳು ನೀವೂ ಮಗುವಿಗಾಗಿ ಒಂದಿಷ್ಟು ಓದುವುದನ್ನು ಅಭ್ಯಾಸ ಮಾಡಿಕೊಂಡಂತಾಗುತ್ತದೆ. ಸುಲಭವಾಗಿ ಕೈಗೆ ಸಿಕ್ಕ ಅಥವಾ ನೀವೇ ಊಹಿಸಿದ ಕಥೆಗಳನ್ನು ಹೇಳುವ ಬದಲು ಪಂಚತಂತ್ರ, ಈಸೋಪನ ನೀತಿ ಕಥೆಗಳು, ರಾಮಾಯಣ ಮತ್ತು ಮಹಾಭಾರತದ ಕಥೆಗಳು ಮಗುವಿಗೆ ಸಾಕಷ್ಟನ್ನು ಕಲಿಸುತ್ತವೆ. ಮಾಹಿತಿ ಅರ್ಥೈಸಿಕೊಳ್ಳುವಂತಹ ವಿಚಾರಗಳನ್ನೂ ಕಥೆಗಳ ರೂಪದಲ್ಲಿ ಹೇಳಬಹುದು. ಉದಾಹರಣೆಗೆ ಇತ್ತೀಚಿಗೆ ಯುನಿಸೆಫ್ ತೊಗಲು ಬೊಂಬೆಗಳನ್ನು ಬಳಸಿ ಸಣ್ಣ ಮಕ್ಕಳಿಗೆ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ಮತ್ತು ಮುಂಜಾಗ್ರತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ತಿಳಿಸಬಹುದು ಎಂದು ಹೇಳಿದೆ.
author – ಕೋಕಿಲ ಎಂ.ಎಸ್.
https://www.prajavani.net/artculture/article-features/amma-please-tell-one-story-714527.html