ಆಹಾ ಆ ಬಾಲ್ಯವೆಷ್ಟು ಚೆನ್ನ!
ಪ್ರಕೃತಿಯ ನಿಯಮದಂತೆ ಬಾಲ್ಯ ಯೌವನ ಹಾಗೂ ಮುಪ್ಪು ಪ್ರತಿಯೊಬ್ಬರ ಬಾಳಿನಲ್ಲೂ ಅನಿವಾರ್ಯ. ಅದರಲ್ಲಿ ಬಾಲ್ಯದ ನೆನಹುಗಳು ಸವಿಯಾಗಿದ್ದರಂತೂ ತೀರಿತು ಅದು ಹಾಗೇ ಉಳಿಯಬೇಕೆನ್ನುವ ಅಪೇಕ್ಷೆ ಎಲ್ಲರದು.
ಚಿಕ್ಕಂದಿನಲ್ಲಿ ಸ್ವಲ್ಪ ಜಾಣರ ಪಟ್ಟಿಯಲ್ಲಿ ನಾನೂ ಒಬ್ಬಳಿದ್ದೆ, ಜಮಖಂಡಿಯ ಪಿ.ಬಿ. ಹಾಯಸ್ಕೂಲಿನಲ್ಲಿ ಆರನೇ ಇಯತ್ತೆ ಇರಬಹುದು. ಶಾಲೆ ವಿವಿಧ ಕ್ರೀಡೆ, ಭಾಷಣ ನಿಬಂಧ ಸ್ಪರ್ಧೆಗಳಲ್ಲೆಲ್ಲ ನಾನೇ ಮೊದಲಿಗಳಾಗಿದ್ದೆ ಎಂದರೆ ಅತಿಶಯೋಕ್ತಿಯೇನಲ್ಲ. ಅವತ್ತು ಬಹುಮಾನದ ವಿತರಣೆಯ ಸಮಾರಂಭವಿತ್ತು. ಮುಖ್ಯ ಅತಿಥಿಗಳಾಗಿ ರಾಮತೀರ್ಥ ರಾಜನ ಮೊಮ್ಮಗ ಬರುವವನಿದ್ದ. ನಮ್ಮ ಕ್ಲಾಸ್ ಟೀಚರ ಬಂಗಾರಿ ಮೇಡಂ ಎಂದಿದ್ದರು. ಕ್ಲಾಸಿನಲ್ಲಿ ಒಳಗೆ ಬಂದು ‘ಎಲ್ಲರೂ ಶಿಸ್ತಾಗಿ ಬರ್ರೀ, ಛಂದಾಗಿ ಸಮವಸ್ತ್ರಕ್ಕೆ ಇಸ್ತ್ರೀ ಮಾಡಿಕೊಂಡು ಹಾಕ್ಕೊಂಡು ಬರ್ರಿ, ಗದ್ದಲಾ ಮಾಡಬ್ಯಾಡ್ರಿ….’ ಇತ್ಯಾದಿಗಳ ಬೋಧನೆ ಮಾಡಿದ್ದರಲ್ಲ. ಆಗ ಮನೆಯಲ್ಲಿ ಇಸ್ತ್ರೀ ಇರುತ್ತಿರಲಿಲ್ಲ. ಆದರೆ ಒಲೆ ಅಂತೂ ಸದಾಕಾಲ ಉರಿಯುತ್ತಿರುತ್ತಿತ್ತು. ಮನೆಗೆ ಕಾಯಂ ಜನ ಬರುತ್ತಿದ್ದರಿಂದ ಅವರ ಊಟ ಚಹಾ ಇಲ್ಲಿಯೇ ಹಾಗೇ ನಡೆದಿರುತ್ತಿತ್ತು. ಆ ಉರಿಯುತ್ತಿರುವ ಕೆಂಡದ ತುಣುಕುಗಳನ್ನು ಇಕ್ಕಳದಿಂದ ಒಂದು ತಂಬಿಗೆಯಲ್ಲಿ ಹಾಕಿ ಇಸ್ತ್ರೀ ಮಾಡಿಕೊಳ್ಳಬೇಕಾಗುತ್ತಿತ್ತು. ಹಾಗೆ ಇಸ್ತ್ರೀ ಮಾಡಿದ ಬಟ್ಟೆಗಳನ್ನು ಅತ್ಯಂತ ಜತನದಿಂದ ಚೂರು ಮುದ್ದೆಯಾಗದಂತೆ ಧರಿಸಿ ನೀಟಾಗಿ ಶಾಲೆಗೆ ಹೋದೆ, ಮೊದಲ ಸಾಲಿನಲ್ಲೇ ನನ್ನನ್ನು ಕರೆದು ಕೂಡಿಸಿದವರು ಗೊಳಸಂಗಿ ಮೇಡಂ. ನನ್ನ ಮೇಲೆ ಅವರಿಗೆ ವಿಶೇಷ ಅಕ್ಕರೆ, ಸರಿ ಕಾತುರದಿಂದ ರಾಜಕುವರನ ಹಾದಿ ಕಾಯುತ್ತ ಕುಳಿತೆವು. ಕೊನೆಗೂ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ರಾಜಕುವರ ಆಗಮಿಸಿದ. ನಾವೆಲ್ಲ ಎದ್ದು ನಿಂತೆವು. ನಮ್ಮ ಕಲ್ಪನೆಯಲ್ಲಿ ಭದ್ರವಾಗಿ ಕೂತಿದ್ದ ರಾಜಕುವರ ಆತನಾಗಿರಲಿಲ್ಲ. ಡಾ. ರಾಜಕುಮಾರರ ಸಿನೇಮಾ ಬಹಳಷ್ಟು ನೋಡುತ್ತಿದ್ದೆವಾದ್ದರಿಂದ ರಾಜಕುಮಾರರಂತೆ ತೆಳ್ಳಗೆ, ಬೆಳ್ಳಗೆ, ಆಕರ್ಷಣೀಯವಾಗಿರಬಹುದೆಂದು ಅಂದುಕೊಂಡ ನಮಗೆ ನಿರಾಶೆ ಕಾಯ್ದಿತ್ತು. ಎರಡು ಗಲ್ಲದಲ್ಲಿ ಒಂದೊಂದು ಆಪಲ್ ಇಟ್ಟಕೊಂಡಂತೆ ಬಾತುಕೊಂಡಿದ್ದವು. ಕೈಗಳೂ ಸಾಕಷ್ಟು ದಪ್ಪಗಿದ್ದವು. ಹೊಟ್ಟೆಯಂತೂ ವಿಶಾಲವಾಗಿ ಹರಡಿಕೊಂಡು ಅದರ ಮೇಲೆ ಬೇಕಾದರೆ ಪ್ಲೇಟು ಕಪ್ಪು ಇಟ್ಟುಕೊಂಡು ನಾಷ್ಟಾ ಮಾಡಬಹುದಾಗಿತ್ತು! ಕಾಲುಗಳಂತೂ ಬಾಳೆದಿಂಬಿನಂತೆ ಕಂಬಗಳಂತೆ ಗೋಚರಿಸುತ್ತಿದ್ದವು. ಆದರೆ ಬಣ್ಣ ಮಾತ್ರ ಕೆಂಪು ಕೆಂಪು! ಒಟ್ಟಿನಲ್ಲಿ ಗುಜ್ಜಾನೆ ಮರಿಯಂತೆ ಕಾಣುತ್ತಿದ್ದ. ಅವರ ಪಕ್ಕದಲ್ಲಿ ಅಧ್ಯಕ್ಷೀಯ ಸ್ಥಾನದಲ್ಲಿ ನಮ್ಮ ಪಕ್ಕದ ಮನೆಯ ಸ್ವಾತಂತ್ರ್ಯಯೋಧರಾದ ಶ್ಯಾಮರಾಮ ವಾಟವೆಯವರು ಅಸೀನರಾಗಿದ್ದರು. ಸ್ವಾಗತ ಭಾಷಣ, ಅತಿಥಿಗಳ ಭಾಷಣ ಮುಂತಾದವುಗಳನ್ನು ತಾಳ್ಮೆಯಿಂದ ಆಲಿಸುತ್ತಾ ಕುಳಿತಿದ್ದೆವು. ಯಾಕೆಂದರೆ ನಮಗೆ ಸಿಗುವ ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಕೊನೆಗೆ ಇಟ್ಟುಕೊಂಡಿದ್ದರಲ್ಲ! ಅದಕ್ಕಾಗಿಯಾದರೂ ನಾವು ಕೂಡಲೇಬೇಕಾಗಿತ್ತು! ಅಂತೂ ಕೊನೆಯ ಕ್ಷಣ ಬಹುಮಾನ ವಿತರಣೆಯ ಕಾರ್ಯಕ್ರಮ ಬಂದೇ ಬಿಟ್ಟಿತು. ಮೊದಲಿಗೇ ನನ್ನ ಹೆಸರನ್ನು ಕೂಗಲಾಗಿತ್ತು. ಐದು ಸ್ಪರ್ಧೆಗಳಲ್ಲೂ ನನ್ನದೇ ಮೊದಲ ನಂಬರು ಬಂದಿದ್ದರಿಂದ ನಾನೂ ಅಷ್ಟೇ ಬಿಗುಮಾನದಿಂದ ಸ್ಟೇಜಿನೆಡೆಗೆ ನಡೆದೆ. ಬಹುಮಾನವನ್ನು ನನಗೆ ಕೊಡುವವ ರಾಜಕುವರ! ಎಂದರೆ ಕೇಳಬೇಕೇ ನನ್ನ ಉತ್ಸಾಹ. ಆತ ಹೇಗಿದ್ದರೂ ರಾಜನ ಮೊಮ್ಮಗನಲ್ಲವೇ? ಆತನಿಂದ ಬಹುಮಾನ ತೆಗೆದುಕೊಳ್ಳುವುದು ಹೆಮ್ಮೆಯ ವಿಷಯ ತಾನೇ, ನೇರವಾಗಿ ಹೋಗಿದ್ದೇ ಬಹುಮಾನವನ್ನು ಆತನಿಂದ ಪಡೆದು ಹಾಗೇ ಶೇಕ್ ಹ್ಯಾಂಡ್ ಮಾಡುತ್ತಾ ನಿಂತುಬಿಟ್ಟೆ. ಸಭೆಯಲ್ಲಿಯ ಮೆಚ್ಚುಗೆಯ ಕರತಾಡನ ಮುಗಿದು ಶಿಳ್ಳೆ ಆರಂಭವಾಗಿದ್ದವು. ಸ್ಟೇಜಿನ ಮೇಲಿನವರೂ ಸಣ್ಣಗೆ ನಗುತ್ತಿದ್ದವರು ಜೋರಾಗಿಯೇ ನಗತೊಡಗಿದರು. ನಾನೂ ಕೂಡ ನಗುತ್ತಾ ಮೆತ್ತಗಿನ ಮಕಮಲ್ಲಿನಂತಹ ಆತನ ಕೈಯಿಂದ ಬಿಡಿಸಿಕೊಂಡು ಕೆಳಗಿಳಿದು ಬಂದೆ!
ಮನೆಗೆ ಬಂದಾಗ ನಮ್ಮ ತಂದೆಯ ಹತ್ತಿರ ಮಾತನಾಡುತ್ತ ಕುಳಿತ ಶ್ಯಾಮರಾವ್ ವಾಟವೆಯವರು! ನಾನು ಮನೆಯಲ್ಲಿ ಯಾವತ್ತಿಗೂ ಯಾವುದೇ ಬಹುಮಾನ ಬಂದರೂ ಅದನ್ನು ಹೇಳುತ್ತಿರಲಿಲ್ಲ. ಬಹುಮಾನ ಕೊಟ್ಟಾಸ ಮೇಲೆಯೇ ಅದನ್ನು ತೋರಿಸುತ್ತಿದ್ದೆ. ಹೀಗಾಗಿ ಮನೆಯಲ್ಲಿ ಯಾರಿಗೂ ಬಹುಮಾನದ ವಿಷಯ ಮೊದಲು ತಿಳಿದಿರಲಿಲ್ಲ. ಆದರೆ ಶ್ಯಾಮರಾವ್ ವಾಟನೆಯವರು ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ‘ವಕೀಲರ (ನಮ್ಮ ತಂದೆಗೆ) ನಿಮ್ಮ ಮಗಳು ಭಾಳ ಧಾಡಸೀ ಇದ್ದಾಳ ನೋಡ್ರಿ, ಅಷ್ಟೆಲ್ಲಾ ಮಂದಿ ಕುತ್ತಿದ್ರೂ ಅಕೀ ಏನ ಹೆದರಲಿಲ್ಲ. ರಾಜಾನ ಮೊಮ್ಮಗನ ಕೈಹಿಡಿದು ಶೇಕಹ್ಯಾಂಡ್ ಮಾಡೇ ಬಹುಮಾನ ತೆಗೆದುಕೊಂಡು ಬಂದ್ಲು’ (ಆಗ ಈಗಿನಷ್ಟು ಫ್ರೀ ಇರಲಿಲ್ಲವಾದ್ದರಿಂದ ಅವರಿಗೆ ಅದು ಕೌತುಕದ ವಿಷಯವಾಗಿತ್ತು.)
ನನಗೋ ಬಹಳ ಮುಜುಗರವಾಗುತ್ತಿತ್ತು. ಆಗ ನಮ್ಮ ತಂದೆಯವರು, ‘ಅಲಾ ನಿನ ನಮಗ ಗೊತ್ತಿಲ್ಲಲ್ಲ. ಎದಕ್ಕೆಲ್ಲಾ ಬಂದಾವ ಬಹುಮಾನ’ ಮೆಚ್ಚುಗೆಯಿಂದಲೂ ಕೌತುಕದಿಂದಲೂ ಕೇಳಿದಾಗ ನನಗೆ ಬಂದ ಬಹುಮಾನವನ್ನೆಲ್ಲ ಅವರ ಮುಂದೆ ಹಿಡಿದಾಗ ಅವರು ಬಹಳೇ ಸಂತೋಷಪಟ್ಟರು. ನನಗೆ ಬಹುಮಾನ ಬಂದದ್ದಕ್ಕೂ ಸಾರ್ಥಕವಾಯಿತು ಎಂಬ ಭಾವನೆ ಮೂಡಿ ಮರೆಯಾಯಿತು.
ಆಗ ನಾನು ೯ ವರ್ಷದವಳಿದ್ದೆ. ಪ್ರತಿ ವರ್ಷ ನಮಗೆ ರಜೆ ಪ್ರಾರಂಭವಾದ ಮೇಲೆ ಹಿರೇಪಡಸಲಗಿ ಎಂಬ ಗ್ರಾಮದಲ್ಲಿದ್ದ ನಮ್ಮ ಸೋದರತ್ತೆ ನಮ್ಮನ್ನು ಕರೆದೊಯ್ಯಲು ಬರುತ್ತಿದ್ದಳು. ಅವಳೊಂದಿಗೆ ಆ ಊರಿಗೆ ಹೋಗುವುದೆಂದರೆ, ನಮಗೆ ಬಹಳೇ ಖುಷಿ. ಅದೇ ರೀತಿ ಅವಳಿಗೂ ನಮಗೆಷ್ಟು ತಿನಿಸಿದರೂ ಕಡಿಮೆಯೇ. ಮನೆಯಲ್ಲೇ ಎಮ್ಮೆ ಸಾಕಿದ್ದರಿಂದ ಯಥೇಚ್ಛವಾಗಿ ಹಾಲು, ಕೆನೆ ಬೆಣ್ಣೆ……ಊರ ಬದಿಗೆ ಇರುವ ನದಿಯಲ್ಲಿ ಎಲ್ಲರೊಂದಿಗೆ ಬೆಳಿಗ್ಗೆ ಸ್ನಾನಕ್ಕೆ ಹೋದರೆ ಬರುವುದು ಮಧ್ಯಾಹ್ನವೇ, ಬಿರುಬೇಸಿಗೆ ದಿನವಾದ್ದರಿಂದ ಕೃಷ್ಣಾನದಿಯಲ್ಲಿ ನೀರು ಕಡಿಮೆ ಆಗಿರುತ್ತಿತ್ತು. ಕೆಲವು ಸಲ ಬತ್ತಿ ಹೋಗಿರುತ್ತಿತ್ತು. ನದಿಯಲ್ಲೇ ನಡೆದುಕೊಂಡು ಆಚೆ ದಂಡೆಗೆ ಹೋಗಬಹುದಾಗಿತ್ತು. ಆಚೆ ಬದಿಗೆ ನಾಗನೂರು ಎಂಬ ಹಳ್ಳಿ ಇತ್ತು. ಅಲ್ಲಿ ಮಾವಿನಕಾಯಿ ಪೇರಲ ಗಿಡಗಳು ಸಾಕಷ್ಟು ಇದ್ದ ಕಾರಣ ನಾವೆಲ್ಲ ಮಕ್ಕಳೂ ಸೇರಿ ಅವುಗಳಿಗೆ ಮುತ್ತಿಗೆ ಹಾಕುತ್ತಿದ್ದೆವು. ಅಂಗಿಯಿಂದ ತೊಟ್ಟಿಕ್ಕುವ ನೀರು, ನೀರನಿಂದೆದ್ದಾದ ಚಳಿ ಒಂದೂ ನಮ್ಮನ್ನು ಬಾಧಿಸುತ್ತಿರಲಿಲ್ಲ. ಯಥೇಚ್ಛವಾಗಿ ಮಾವಿನಕಾಯಿಗಳನ್ನೂ, ಪೇರಲ, ಬಾರೀ ಹಣ್ಣುಗಳನ್ನು ಹರಿದು ತಿಂದು ಮತ್ತೆ ನೀರಲ್ಲಿ ಆಟ…..ಮೋಜೆಂದರೆ ಅದೇ. ಇವತ್ತಿನ ಮಕ್ಕಳನ್ನು ನೋಡಿದರೆ ಅಯ್ಯೋ ಪಾಪ ಎಂದೆನಿಸುವುದು.
ಈ ದಿನ ನಮ್ಮ ಕಾಕಾನ ಮಗ ಒಂದು ದೊಡ್ಡ ಕುಂಬಳಕಾಯಿಯನ್ನು ತಂದಿದ್ದ. ಅದು ಈಜು ಕುಂಬಳಕಾಯಿ. ನಮಗೆ ಈಜು ಕಲಿಸುವುದಾಗಿ ಹೇಳಿದ್ದ. ಆ ದಿನ ಜಾಸ್ತಿ ನೀರಿದ್ದ ಕಡೆಗೆ ನಮ್ಮನ್ನೆಲ್ಲ ಹೊರಡಿಸಿದ. ನಾವೆಲ್ಲ ಚಿಕ್ಕವರಾದ್ದರಿಂದ ಆತನೇ ನಮ್ಮ ಗುಂಪಿಗೆ ಲೀಡರ್, ಅವನು ಏನು ಹೇಳ್ತಾನೋ ಹಾಗೇ ಕೇಳುತ್ತಾ ನಡೆದಿದ್ದೆವು. ನಾನು ಎಲ್ಲರಕ್ಕಿಂತ ಚಿಕ್ಕವಳಾಗಿದ್ದೆ ಹಾಗೂ ಹಠ ಮಾತ್ರ ದೊಡ್ಡದಾಗಿತ್ತು. ನನಗೇ ಮೊದಲು ಈಜು ಕಲಿಸು ಎಂದು ಆತನಿಗೆ ದುಂಬಾಲು ಬಿದ್ದೆ, ಆಯಿತು ಎಂದು ಆ ದೊಡ್ಡ ಕುಂಬಳಕಾಯಿಯನ್ನು ಸುತಳಿಯ ಸಹಾಯದಿಂದ ನನ್ನ ಹೊಟ್ಟೆಗೆ ಕಟ್ಟಿದ. ‘ನಾನು ಈಜುತ್ತ ಮುಂದ ಮುಂದ ಹೋಗ್ತೀನಿ ನೀನು ನನ್ಹಿಂದನ ಬಾ, ಕಾಲು ಕೈಯೂ ಬಡಿಯುವುದನ್ನು ಮರೀಬ್ಯಾಡ’ ಅಂತ ಜಾಣಾಸಿ ಜೇಳಿ ಮುನ್ನಡೆದ. ನಾನೂ ಅವನ್ಹಿಂದೆನೇ ಕಾಲು ಬಡಿಯುತ್ತಾ ಕೈ ಮುಂದೆ ಚಾಚಿ ಒಗೆಯುತ್ತಾ ನಡೆದೆ. ನನಗೇನೋ ಒಂಥರಾ ಸಂಭ್ರಮ. ನಾನು ನೀರ ಮೇಲೆ ತೇಲುತ್ತಿದ್ದೆ ಕುಂಬಳಕಾಯಿಯ ಕಾರಣದಿಂದ ಈಜು ಬಂದೇ ಬಿಟ್ಟಿತು ಎಂಬ ಖುಷಿ ನನಗೆ. ನೀರಿನ ಮಧ್ಯಕ್ಕೆ ಹೋದೆ. ಎಂಥದೋ ಸೆಳೆತ ಕೆಳಗಿನಿಂದ, ಮುಂದೆ ನೋಡಿದರೆ ಅಪ್ಪು ಆಚೆ ಬದಿಯ ದಂಡೆಗೆ ಸಮೀಪದಲ್ಲಿದ್ದಾನೆ. ಹಾಗೇ ಕೈ ಬಡಿದೆ ಜೋರಾಗಿ ಕೂಗಿದೆ. ಆತನಿಂದ ಉತ್ತರವಿಲ್ಲ. ಮತ್ತೆ ಕೆಳಗೆ ಎಳೆದಂತಾಗಿ ನೀರಲ್ಲಿ ಮುಳುಗಿ ಮೇಲೆ ಬಂದೆ. ಇನ್ನೊಂದು ಸಲ ಕೂಡ ಹಾಗೇ ಆದಾಗ ಕಣ್ಣುಕತ್ತಲಿಟ್ಟಿತು. ಸಾಕಷ್ಟು ನೀರು ಕುಡಿದಿದ್ದೆ. ನನಗೇನೂ ತಿಳಿಯದ ಹಾಗಾಯಿತು. ಅಷ್ಟರಲ್ಲಿ ಯಾರದೋ ಕೈ ನನ್ನನ್ನು ಬಳಸಿದಂತಾಗಿ ಒಂದು ಕೈಯಿಂದ ಈಜುತ್ತಾ ದಂಡೆಗೆ ಮುಟ್ಟಿಸಿ ಎಳೆದು ಡಬ್ಬ ಮಲಗಿಸಿ ಕುತ್ತಿಗೆ ಬೆನ್ನು ಒತ್ತುತ್ತಿದ್ದರೆ ಬುಳಕ್ಕ….ಬುಳಕ್ಕ…. ಎಂದು ನನ್ನ ಬಾಯಿಂದ ಧಾರಾಕಾರವಾಗಿ ನೀರು, ನಂತರ ಕಣ್ತೆರೆದು ನೋಡಿದರೆ ಸುತ್ತಲೆಲ್ಲ ನಮ್ಮ ಕಕ್ಕನ ಮಕ್ಕಳು ಅಳುತ್ತಾ ನಿಂತಿವೆ.
ನೀರಿನ ನಡುಮಧ್ಯದಲ್ಲಿ ಹೋದಾಗ ನನ್ನ ಹೊಟ್ಟೆಗೆ ಕಟ್ಟಿದ ಸುತಳಿ ಬಿಚ್ಚಿ ಕುಂಬಳಕಾಯಿ ನೀರಿನಲ್ಲಿ ಹರಿದು ಹೋಯಿತು ಅದರ ಸಹಾಯದಿಂದ ಈಜುತ್ತಿದ್ದನಾದ್ದರಿಂದ ಅದಿಲ್ಲದೆ ನೀರಿನಲ್ಲಿ ಮುಳುಗತೊಡಗಿದ್ದೆ. ಅಪ್ಪು ಆದರೋ ತನ್ನದೇ ಗುಂಗಿನಲ್ಲಿ ಈಜುತ್ತಾ ಮುನ್ನಡೆದಿದ್ದ. ನಾನು ಮುಳುಗುತ್ತಿರುವುದನ್ನು ನೋಡಿದ ದಂಡೆಯಲ್ಲಿದ್ದ ನಮ್ಮ ಕಕ್ಕನ ಮಕ್ಕಳು ಚೀರುತ್ತಾ ಆತನನ್ನು ಕೂಗತೊಡಗಿದ್ದಾರೆ. ನಾನು ಬರುತ್ತಿದ್ದೇನೋ ಇಲ್ಲವೋ ಎಂದು ಖಾತ್ರಿ ಮಾಡಿಕೊಳ್ಳಲು ಆತ ಹಿಂತಿರುಗಿ ನೋಡಿದ್ದೇ ನಾನು ಮುಳುಗಿದ್ದು ತಿಳಿದಿದೆ. ದಂಡೆಯಲ್ಲಿಯವರ ಆಳು, ಕೂಗು ಆತನನ್ನು ಎಚ್ಚರಿಸಿದೆ. ಆತ ಎಂಥ ಸ್ಟೀಡಿನಲ್ಲಿ ಈಜಿ ನಾನಿದ್ದ ಕಡೆಗೆ ಬಂದನೋ ಒಂದೇ ಕೈಯ್ಯಲ್ಲಿಯೇ ನನ್ನನ್ನು ನೀರಿನಿಂದ ಎಳೆದು ತಾನು ಒಂದೇ ಕೈಯ್ಯಲ್ಲಿ ಈಜುತ್ತಾ ಬಂದ. ದಂಡೆಯಲ್ಲಿ ಹಾಕಿ ನಾನು ಕುಡಿದ ನೀರನ್ನೆಲ್ಲ ಹೊರ ಹಾಕಿಸಿದಾಗಲೇ ನನಗೆ ಎಚ್ಚರ, ಹಾಗೂ ಆತನಿಗೂ ಸಮಾಧಾನ, ಆವತ್ತು ಆತ ನನ್ನನ್ನು ಉಳಿಸಿರದಿದ್ದರೆ…..ನಾನಿವತ್ತು ಈ ಘಟನೆಯನ್ನು ಬರೀತಾನೇ ಇರಲಿಲ್ಲ!
ಬಾಲ್ಯದಲ್ಲಿಯ ಇಂಥ ಘಟನೆಗಳನ್ನು ನೆನಪಿಸಿಕೊಂಡಾಗ ಈಗಲೂ ಮೈ ಝುಂ ಎನ್ನುತ್ತದೆ.