ಅಧಿಕ ಮಾಸ – ಸಂಕ್ಷಿಪ್ತ ವಿವರಣೆ

ರವಿ ಅಶ್ವಿನಿ ನಕ್ಷತ್ರದ ಆರಂಭದ ಬಿಂದುವಿನಿಂದ ಪ್ರಾರಂಭಿಸಿ ಕ್ರಾಂತಿವ್ರತ್ತದಲ್ಲಿ ಸಂಚರಿಸುತ್ತ ತಿರುಗಿ ಅದೇ ಬಿಂದುವಿನ ಬಳಿ ಬರುವ ಕಾಲಾವಧಿಗೆ ಒಂದು ಸೌರ ವರ್ಷ ಎನ್ನುತ್ತಾರೆ. ಸೂರ್ಯ ಸಿದ್ಧಾಂತದ ಪ್ರಕಾರ ಸೌರ ವರ್ಷದ ಕಾಲಾವದಿ ೩೬೫ ದಿವಸ ೧೫ ಘಟಿಕ ೨೨ ಪಳ ೫೨.೫೮ ವಿಪಳ ಎಂದು ಹೇಳಲಾಗಿದೆ.

ಚಂದ್ರ ಹಾಗೂ ರವಿ ಒಂದು ಯುತಿ ಬಿಂದುವಿನಿಂದ (ಅಮಾವಾಸ್ಯೆ) ತಮ್ಮ ದೈನಂದಿನ ಗತಿಯಿಂದ ಸಂಚರಿಸುತ್ತ ಮುಂದಿನ ಯುತಿ ಬಿಂದುವಿನ (ಅಮಾವಾಸ್ಯೆ) ವರೆಗೆ ತಲುಪುವ ಕಾಲಕ್ಕೆ ಒಂದು ಚಾಂದ್ರಮಾಸ ಎನ್ನುತ್ತಾರೆ. ಒಂದು ಚಂದ್ರ ಮಾಸದ ಅವಧಿ ಸುಮಾರು ೨೯ ದಿವಸ ೩೧ ಘಟಿಕ ೫೦.೧೨ ಪಲಾದಷ್ಟು ಇರುತ್ತದೆ. ಚಂದ್ರ ಹಾಗೂ ಸೂರ್ಯರ ನಡುವಿನ ಅಂತರ ೧೨ ಅಂಶವಾದಾಗ ಒಂದು ತಿಥಿ ಪೂರ್ಣ ಆಗುತ್ತದೆ. ಕ್ರಾಂತಿವ್ರತ್ತ ಗೊಲಾಕಾರವಾಗಿರದೆ ಅಂಡಾಕಾರ ಆಗಿರುತ್ತದೆ. ಆದುದರಿಂದ ಚಂದ್ರ ಹಾಗೂ ಸೂರ್ಯರ ದೈನಂದಿನ ಗತಿಯಲ್ಲಿ ಬದಲಾವಣೆಗಳಗುತ್ತವೆ.ಇದರಿಂದಾಗಿ ಪ್ರತೀ ದಿನದ ತಿಥಿಯ ಮುಕ್ತಾಯದ ವೇಳೆ ಭಿನ್ನ ಭಿನ್ನವಾಗಿರುತ್ತದೆ. ಹೀಗೆ ೩೦ ತಿಥಿಗಳಿಗೆ ಒಂದು ಚಂದ್ರಮಾಸ ಹಾಗೂ ೧೨ ಚಂದ್ರ ಮಾಸಗಳಿಗೆ (೩೬೦ ತಿಥಿಗಳಿಗೆ) ಒಂದು ಚಂದ್ರ ವರ್ಷ ಪೂರ್ಣ ಆಗುತ್ತದೆ. ಈ ರೀತಿ ಒಂದು ಸೌರವರ್ಷದಲ್ಲಿ ೩೭೧ ತಿಥಿಗಳಿರುತ್ತವೆ. ಆದುದರಿಂದ ಚಂದ್ರ ವರ್ಷ ಸೌರವರ್ಷಕ್ಕಿಂತ ೧೧ ದಿವಸ ಚಿಕ್ಕದಾಗಿರುತ್ತದೆ. ಈ ರೀತಿ ಉಳಿದ ತಿಥಿಗಳ ಸಂಖ್ಯೆ ೩೦ ಆದಾಗ ಒಂದು ಅಧಿಕ ಮಾಸವಾಗುತ್ತದೆ. ಆ ಚಂದ್ರಮಾಸದಲ್ಲಿ ೧೩ ಮಾಸಗಳಿರುತ್ತವೆ. ಒಂದು ಅಧಿಕ ಮಾಸದ ನಂತರ ೩೨.೫ ಮಾಸಗಳ ನಂತರ ಮತ್ತೊಮ್ಮೆ ಅಧಿಕ ಮಾಸ ಬರುತ್ತದೆ. ಈ ರೀತಿ ಚಂದ್ರ ವರ್ಷ ಹಾಗು ಸೌರ ವರ್ಷಗಳಲ್ಲಿನ ಕಾಲಾವಧಿಯ ಭೇದವನ್ನು ಕಡಿಮೆ ಮಾಡಲಾಗಿದೆ. ಇದೆ ರೀತಿ ಇಂಗ್ಲೀಷ ದಿನದರ್ಶಿಕೆಯಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಫೆಬ್ರುವರಿ ತಿಂಗಳಿನಲ್ಲಿ ೨೯ ತಾರೀಖುಗಳಿದ್ದು ಆ ವರ್ಷವನ್ನು ಲಿಪ್ ವರ್ಷ ಎನ್ನುತ್ತಾರೆ.

ವಿಜ್ಞಾನದ ಪ್ರಕಾರ ಚಂದ್ರ ಭೂಮಿಯ ಸುತ್ತ ತಿರುಗಲು ೨೯.೫ ದಿವಸ ಬೇಕಾಗುತ್ತದೆ. ಇದಕ್ಕೆ ಮಾಸ ಅನ್ನುತ್ತಾರೆ. ೧೨ ಮಾಸಗಳೆಂದರೆ ೩೫೪ ದಿನಗಳಾಗುತ್ತವೆ. ಭೂಮಿ ಸೂರ್ಯವ ಸುತ್ತಲು ತಿರುಗಲು ೩೬೫ ದಿನಗಳು ಬೇಕಗುವವು. ಈ ಎರಡು ಕಾಲಮಾನಗಳಲ್ಲಿನ ವರ್ಷದ ಅಂತರ ೧೧ ದಿನಗಳಾಗುತ್ತದೆ. ಈ ರೀತಿ ೩ ವರ್ಷಕ್ಕೆ ಒಮ್ಮೆ ಅಧಿಕ ಮಾಸ ಬರುತ್ತದೆ.

ರವಿ ಮೀನ ರಾಶಿಯಲ್ಲಿದ್ದಾಗ ಪ್ರಾರಂಭ ಆಗುವಾಗ ಬರುವ ಮಾಸಕ್ಕೆ ಚೈತ್ರ ಮಾಸವೆನ್ನುತ್ತಾರೆ. ಮುಂದೆ ಮೇಷ ರಾಶಿಯಲ್ಲಿದ್ದಾಗ ವೈಶಾಖ ಮಾಸವಿರುತ್ತದೆ. ಈ ರೀತಿ ರವಿ ಮಕರ ರಾಶಿಯಲ್ಲಿದ್ದಾಗ ಮಕರ ಸಂಕ್ರಮಣ ಆಗುತ್ತದೆ. ಈ ರೀತಿ ರವಿಯ ರಾಶಿ ಭ್ರಮಣವಾಗುತಿರುವಾಗ ಕೆಲವು ಸಲ ರವಿ ಒಂದು ರಾಶಿಯಲ್ಲಿರುವಾಗ ಎರಡು ಚಂದ್ರ ಮಾಸಗಳು ಹ್ರಾರಂಭ ಆಗುತ್ತವೆ. ಇಂತಹ ಮಾಸಗಳಲ್ಲಿ ಒಂದು ಮಾಸದಲ್ಲಿ ರವಿಯ ಮಾಸ ಪ್ರವೇಶ ಆಗುವದಿಲ್ಲ. ಅಂತಹ ಮಾಸಗಳಿಗೆ ಅಧಿಕ ಮಾಸವೆನ್ನುತ್ತಾರೆ. ಮುಂದಿನ ಮಾಸಕ್ಕೆ ನಿಜ ಅಥವಾ ಶುದ್ಧ ಮಾಸ ಎನ್ನುತ್ತಾರೆ. ಏಕೆಂದರೆ ಮುಂದಿನ ಮಾಸದಲ್ಲಿ ರವಿ ಮುಂದಿನ ರಾಶಿ ಪ್ರವೇಶಿಸಿರುತ್ತಾನೆ. ಈ ವರ್ಷ ಆಷಾಢ ಮಾಸ ಅಧಿಕ ಮಾಸ ಆಗಿರುತ್ತದೆ.

ಇದೆ ರೀತಿಯಲ್ಲಿ ಒಂದು ಮಾಸದಲ್ಲಿ ಎರಡು ಸಂಕ್ರಮಣಗಳಾದರೆ ಅದು ಕ್ಷಯ ಮಾಸವಗುತ್ತದೆ. ಕ್ಷಯಮಾಸಗಳು ಸುಮಾರು ೧೪೧ ಮಾಸ ಅಥವಾ ೧೯ ವರ್ಷಗಳಿಗೊಮ್ಮೆ ಬರುತ್ತವೆ. ೧೯ ವರ್ಷಗಳ ನಂತರ ಕ್ಷಯ ಮಾಸ ಬಂದರೆ ಅದರ ಹಿಂದು ಮುಂದಿನ ವರ್ಷಗಳಲ್ಲಿ ಅಧಿಕ ಮಾಸ ಬರುತ್ತದೆ. ಫಾಲ್ಗುಣ , ಚೈತ್ರ, ವೈಶಾಖ , ಜ್ಯೇಷ್ಠ , ಆಷಾಢ ಶ್ರಾವಣ, ಭಾದ್ರಪದ, ಅಶ್ವಿನ, ಕಾರ್ತಿಕ , ಈ ಮಾಸಗಳು ಅಧಿಕ ಮಾಸಗಳಾಗುವ ಸಾಧ್ಯತೆ ಇರುತ್ತದೆ. ಕಾರ್ತಿಕ , ಮಾರ್ಗಶೀರ್ಷ ಪುಷ್ಯ ಮಾಸಗಳು ಕ್ಷಯ ಮಾಸಗಳಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಈ ಮೂರು ಮಾಸಗಳಲ್ಲಿ ರವಿಯ ಗತಿ ಹೆಚ್ಚಾಗಿದ್ದು ಒಂದೇ ಮಾಸದಲ್ಲಿ ರವಿಯ ಎರಡು ರಾಶಿ ಪ್ರವೇಶ ಆಗುವ ಶಕ್ಯತೆ ಇರುತ್ತದೆ . ಆದರೆ ಮಾಘ ಮಾಸ ಅಧಿಕ ಅಥವಾ ಕ್ಷಯ ಮಾಸವಾಗುವದಿಲ್ಲ.

ಲೇಖನ – ಶೇಷಗಿರಿ ಜಂಬಿಗಿ
ಚಿತ್ರ: ಗೂಗಲ್
(ಟಿಪ್ಪಣಿ – ಈ ಮೊದಲು ನಾನು ಇ-ಲೀಪ್ ತಂತ್ರ ಜ್ಞಾನ ಉಪಯೋಗಿಸಿ ಲೇಖನಗಳನ್ನು ಬರೆಯುತ್ತಿದ್ದೆ. ಈಗ ಪ್ರಥಮ ಬಾರಿಗೆ ಫೊನೆಟಿಕ್ ತಂತ್ರಜ್ಞಾನ ಉಪಯೋಗಿಸಿ ಲೇಖನವನ್ನು ಬರೆದಿದ್ದೇನೆ. ಯಾವುದೇ ತಪ್ಪುಗಳಾಗಿದ್ದರೆ ಓದುಗರು ತಿಳಿಸಬೇಕು)

2 Comments

  1. ಒಳ್ಳೆಯ ಲೇಖನ. ವಿವರಣೆ ಸರಳ ಹಾಗು ಮಾಹಿತಿಯುಕ್ತವಾಗಿದೆ.

  2. ಧನ್ಯವದಗಳು.
    ಉಪಯುಕ್ತ ಲೇಖನ

Leave a Reply