ಆವರ್ತಕ !
ಕೆಲ ದಶಕಗಳ ಹಿಂದೆ ಬೈಸಿಕಲ್ಲಿಗೆ ಹಿಂಬದಿಯ (ಕೆಲವೊಮ್ಮೆ ಮುಂದಿನ ಚಕ್ರಕ್ಕೆ) ಚಕ್ರದ ಹತ್ತಿರ ಡೈನಮೋ ಎಂದು ಕರೆಯುವ ಬಾಟಲಿ ಆಕಾರದ ಒಂದು ಸಾಧನವಿರುತ್ತಿತ್ತು. ಈ ಡೈನಮೋವನ್ನು ಆಲ್ಟರ್ನೇಟರ್ (ಆವರ್ತಕ) ಎನ್ನುವರು. ಆವರ್ತಕವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಒಂದು ವಿದ್ಯುತ್ಕಾಂತೀಯ ಸಾಧನ. ಪಕ್ಕದಲ್ಲೇ ಇರುವ ಒತ್ತುಗುಂಡಿಯನ್ನು ಅದುಮಿದರೆ ಈ ಡೈನಮೋದ ತುದಿಗೆ ಹೊಂದಿಸಿದ ಚಕ್ರವೊಣದು ಸೈಕಲ್ ಚಕ್ರದ ಟೈರ್ ಗೆ ತಾಗಿ ಚಕ್ರ ಚಲಿಸುವಾಗ ತಾನೂ ತಿರುಗುತ್ತಾ, ವಿದ್ಯುತ್ ಉತ್ಪಾದಿಸುತ್ತಿತ್ತು. ಈ ವಿದ್ಯುತ್ತನ್ನು ಒಂದು ವಯರ್ ನಿಂದ ಸೈಕಲ್ಲಿನ ಮುಂಭಾಗದ ಹೆಡ್ ಲೈಟಿಗೂ, ಹಿಂದೆ ಇದ್ದ ಚಿಕ್ಕ (ಕೆಂಪು ಬೆಳಕು ಬೀರುವ) ಬಲ್ಬಿಗೂ ಜೋಡಿಸಿ ಬೆಳಕು ಬೀರುವಂತೆ ಮಾಡಲಾಗಿತ್ತು. ಒಂದು ಕಾಲದಲ್ಲಿ ಸೈಕಲ್ಲಿಗೆ ರಾತ್ರಿ ವೇಳೆ ಸೀಮೆ ಎಣ್ಣೆಯ ಬುಡ್ಡಿ ಅಥವಾ ಡೈನಮೋ ದೀಪ ಇರಲೇ ಬೇಕಿತ್ತು. ಲೈಟ್ ಇಲ್ಲದಿದ್ದರೆ ಪೊಲೀಸರು ದಂಡ ವಿಧಿಸುತ್ತಿದ್ದರು.
ಹೊಸ್ಮನೆ ಮುತ್ತು