ಯೌವನದ ಉತ್ಸಾಹ, ಉನ್ಮತ್ತತೆಯ ಅಪಾಯ
‘ಮೀಸೆ ಬಂದವರಿಗೆ ದೇಶ ಕಾಣುವುದಿಲ್ಲ’ ಎಂಬುದು ಗಾದೆಮಾತು. ಗಾದೆಯ ಅರ್ಧ ಮಾತ್ರ ಹೇಳಿದ್ದೇನೆ. ಉಳಿದರ್ಧ ಭಾಷೆಯ ಸಂಕೋಚ. ಪೂರ್ತಿ ಹೇಳಿಬಿಡುವುದೇನೂ ಕಷ್ಟವಲ್ಲ, ಆದರೆ ಭಾಷೆಗೂ ಒಂದು ಸಾಮಾಜಿಕ ಘನತೆಯಿದೆ. ಆ ಘನತೆಯಿಂದ ಭಾಷೆ ಬಳಸಿದರೆ ಚಂದ. ಇಲ್ಲದಿದ್ದರೆ ಭಾಷೆಯ ಚೆಲುವನ್ನು ಹಾಳು ಮಾಡಿದಂತೆ. ಈಗ ನಮ್ಮ ಸಾಮಾಜಿಕ ಬದುಕಿನಲ್ಲಿ ಭಾಷೆ ಹೀಗೆ ಅಂದಗೆಟ್ಟಿದೆ. ಭಾಷೆಯೇನು, ಎಲ್ಲದರ ಅಂದವನ್ನೂ ನಾವು ಈಗ ಅಭಿವೃದ್ಧಿಯ ಹೆಸರಿನಲ್ಲಿ ಹಾಳು ಮಾಡುತ್ತಿದ್ದೇವೆ. ಹಾಗೆ ಮನುಷ್ಯನ ಕ್ರೌರ್ಯಕ್ಕೊಳಗಾಗಿ ವಿಕೃತಿಗೊಳ್ಳುತ್ತಿರುವುದು ಪ್ರಕೃತಿ.
ಯೌವನವೂ ಮಾನವನಿಗೆ ಪ್ರಕೃತಿಯ ಕೊಡುಗೆ. ಪ್ರಕೃತಿಗಾದರೋ ಮತ್ತೆ ನವಚೈತನ್ಯ ಪಡೆಯುವ ಶಕ್ತಿಯಿದೆ. ಆದರೆ ಮನುಷ್ಯ ಒಮ್ಮೆ ಪಡೆದ ಯೌವನವನ್ನು ಮತ್ತೆ ಪಡೆಯಲಾರ. ಯೌವನವನ್ನು ಕಾಪಾಡಿಕೊಳ್ಳುವ ಮನುಷ್ಯ ಪ್ರಯತ್ನ ನಿರಂತರ. ಮನೋಭಾವದಲ್ಲಿ ಅದು ಸಾಧ್ಯವಾಗಬಹುದು, ಆದರೆ ದೈಹಿಕ ಬದಲಾವಣೆಯನ್ನು ತಡೆಯಲಾಗುವುದಿಲ್ಲ. ಕಾಲನ ತುಳಿತಕ್ಕೆ ಸಿಕ್ಕಿದ ಜೀವ ಪರಿಣಾಮ ಅನುಭವಿಸಲೇಬೇಕು. ದೇಹದ ಒಪ್ಪವನ್ನು ಕೆಡಿಸುವ ಮುಪ್ಪನ್ನು ಒಪ್ಪಿಕೊಳ್ಳಲೇಬೇಕು. ಮುಪ್ಪಿಗೂ ತನ್ನದೇ ಆದ ಚೆಲುವಿದೆ ಎನ್ನುವುದು ಬೇರೆ ಮಾತು. ಆದರೆ ಯೌವನಕ್ಕೆ ಅದು ಸಾಟಿಯೇ?
ಯೌವನದ ಚೆಲುವು, ಗತ್ತು-ಗಮ್ಮತ್ತುಗಳು ಅನನ್ಯ; ಬದುಕಿನ ಭಾಗ್ಯ. ಏನನ್ನಾದರೂ ಸಾಧಿಸುತ್ತೇನೆನ್ನುವ ಆ ಅದಮ್ಯ ಉತ್ಸಾಹ ಸುಂದರ ಭವಿಷ್ಯ ರೂಪಿಸಿಕೊಳ್ಳುವ ರಚನಾತ್ಮಕ ತೊಡಗುವಿಕೆಯಾಗಬಹುದು ಅಥವಾ ಬದುಕಿನ ಗತಿಯನ್ನೇ ಬದಲಾಯಿಸಿಬಿಡುವ ವಿನಾಶಕಾರಿ ಚಟುವಟಿಕೆಗೆ ದಾರಿ ಮಾಡಿಕೊಡಬಹುದು. ಬಾಲ್ಯ ಕಳೆದು ತಾರುಣ್ಯ ಮೈತುಂಬಿಕೊಳ್ಳುವ ಬಗೆಯಲ್ಲಿಯೇ ಹೊಸ ರೋಮಾಂಚಕಾರಿ ಜಗತ್ತಿಗೆ ನಾವು ಪ್ರವೇಶಿಸುತ್ತಿರುತ್ತೇವೆ. ಆ ಅನುಭವವನ್ನು ಹರಿಹರ ತನ್ನ ‘ನಂಬಿಯಣ್ಣನ ರಗಳೆ’ಯಲ್ಲಿ ಸೌಂದರಪೆರುಮಾಳ್ಗೆ ಯೌವನ ಬಂದ ಸಂದರ್ಭವನ್ನು ವಿವರಿಸುವಾಗ ಸೊಗಸಾಗಿ ಸೂಕ್ಷ್ಮವಾಗಿ ವರ್ಣಿಸಿದ್ದಾನೆ- ‘ಸೊಗಯಿಸಲ್ ತೊಡಗಿತ್ತು ಪರಿಮಳಂ ನಾಸಿಕಕೆ/ಬಗೆಗೊಳಿಸತೊಡಗಿತ್ತು ಮಿಗೆ ರೂಪು ಲೋಚನಕೆ/ರಸನಿನಾದದ ಸವಿಗೆ ಕಿವಿಗಳೆಡೆಯಾಡುತಿರೆ/ಪೊಸ ವೀಳೆಯದ ಸುಖಕೆ ರಸನೆಯೆಳಸುತ್ತಮಿರೆ/ರಮಣಿಯರ ಸೋಂಕನಂಗಂ ಬಯಸಿ ಕೆತ್ತುತಿರೆ/ ಕಮನೀಯಭೋಗಮಂ ಮನವೆಳಸಿ ನೆನೆವುತಿರೆ/ಇಂತು ಸರ್ವೆಂದ್ರಿಯಂ ಸಂದಣಿಸಿ ಕಣ್ದೆರೆಯೆ/ಸಂತತಂ ನವಯೌವನಕ್ಕೆ ರತಿ ಬಾಯೊರೆಯೆ/ಚಂದ್ರಂಗೆ ಸಕಳಕಳೆಗಳ್ ನೆರೆವ ಮಾಳ್ಕೆಯಿಂ/ಅಂದು ಹದಿನಾರು ಹರೆಯಮದಾಗಲರ್ತಿಯಿಂ’.
ನಮ್ಮ ಇಂದ್ರಿಯಗಳಲ್ಲಾಗುವ ಬದಲಾವಣೆಗಳ ಮೂಲಕ ಹರಿಹರ ಯೌವನದ ಬರವನ್ನು ಚಿತ್ರಿಸುತ್ತಿದ್ದಾನೆ. ಶಬ್ದ ಸ್ಪರ್ಶ ರೂಪ ರಸ ಗಂಧ/ನಾಸಿಕ, ಲೋಚನ, ಕಿವಿ, ರಸನೆ, ಅಂಗ- ಹೀಗೆ ಪಂಚೇಂದ್ರಿಯಗಳೆಲ್ಲದರಲ್ಲೂ ಬದಲಾವಣೆ ಸಂಭವಿಸಿ ಹೊಸ ಅನುಭವಕ್ಕೆ ನಮ್ಮ ಇಂದ್ರಿಯಗಳು ತುಡಿಯುತ್ತವೆ. ಹೀಗೆ ನಮ್ಮೆಲ್ಲ ಇಂದ್ರಿಯಗಳನ್ನು ಆವರಿಸಿಕೊಳ್ಳುವುದರಲ್ಲೇ ಅದರ ಶಕ್ತಿಯಿರುವುದು. ಯಾವುದೇ ಆಗಲಿ ನಮ್ಮನ್ನು ಹೀಗೆ ಇಡಿಯಾಗಿ ಆಕ್ರಮಿಸಿಕೊಂಡಾಗ ನಾವು ಅದರ ವಶವರ್ತಿಯಾಗುತ್ತೇವೆ, ವಿಶಿಷ್ಟ ಅನುಭೂತಿ ಪಡೆಯುತ್ತೇವೆ. ‘ಬೆಳಗು’ ಕವಿತೆಯಲ್ಲಿ ಬೇಂದ್ರೆ ಇಂಥದೇ ಅನುಭೂತಿಯನ್ನು ಕಟ್ಟಿಕೊಡುತ್ತಾರೆ. ಮೂಡಲ ಮನೆಯ ಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲ ತೊಯ್ಯುತ್ತಿರುವಾಗ ‘ಕಂಡಿತು ಕಣ್ಣು ಸವಿದಿತು ನಾಲಗೆ/ಪಡೆದೀತೀ ದೇಹಾ/ಸ್ಪರ್ಶಾ- ಪಡೆದೀತೀ ದೇಹಾ/ಕೇಳಿತು ಕಿವಿಯು ಮೂಸಿತು ಮೂಗು/ತನ್ಮಯವೀ ಗೇಹಾ/ದೇವರ- ದೀ ಮನಸಿನ ಗೇಹಾ’. ‘ಬೆಳಕ’ನ್ನು ಪಂಚೇಂದ್ರಿಯಗಳೆಲ್ಲ ಒಂದೇ ಬಿಂದುವಿನಲ್ಲಿ ಅನುಭವಿಸಿದುವಂತೆ. ಹೀಗೆ ನಮ್ಮೆಲ್ಲ ಇಂದ್ರಿಯಗಳೂ ಒಂದೇ ಸಂಗತಿಯಲ್ಲಿ ತನ್ಮಯವಾಗುವ ಧ್ಯಾನಶೀಲ ಸ್ಥಿತಿಯೇ ಆನಂದದ ಪರಾಕಾಷ್ಠೆಯ ನೆಲೆ. ಕುಂತಲ್ಲಿ ನಿಂತಲ್ಲಿ ನಿದ್ದೆ ಕನಸುಗಳಲ್ಲಿ ಕಾಡುವ ಕ್ಷಣಗಳನ್ನು ಯೌವನ ಸೃಷ್ಟಿಸುತ್ತದೆ. ‘ನಿನ್ನ ನೆನಪೇ ನನ್ನ ಹಿಂಡುವುದು ಹಗಲಿನಲಿ/ಇರುಳಿನಲಿ ಕಾಣುವುದು ನಿನ್ನ ಕನಸು’ ಎಂದು ಹಂಬಲಿಸುವುದು ಇಂತಹ ಸ್ಥಿತಿಯಲ್ಲಿಯೇ. ಯೌವನದ ಪ್ರಮುಖ ಲಕ್ಷಣ ಉತ್ಸಾಹ ಹಾಗೂ ಸಾಹಸ; ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ತವಕ; ಎಲ್ಲ ಬಗೆಯ ಬಂಧನಗಳಿಂದ ಬಿಡುಗಡೆ ಪಡೆಯ ಬಯಸುವ ಸ್ವಾತಂತ್ರ್ಯದ ಹಂಬಲ; ಅತಿ ಎನ್ನಿಸುವ ಸ್ವಾಭಿಮಾನದ ಸ್ವರತಿ; ಕನಸು ಕಾಣುವ ಬೆಳದಿಂಗಳ ಕಂಗಳು; ಮಾತನಾಡುವ ಮೊದಲೇ ಕೈ ಮುಂದಾಗುವ ದುಡುಕಿನ ತುಡುಗು; ಯಾರನ್ನಾದರೂ, ಏನನ್ನಾದರೂ ಎದುರಿಸಬಲ್ಲೆ ಎನ್ನುವ ಭಂಡಧೈರ್ಯ. ಅಡಿಗರು ಹೇಳುವ ಹಾಗೆ- ತನ್ನ ರಾಜಕುಮಾರತನದ ಮೀಸೆಯ ಚಿಗುರು/ದೇಶ ಕಾಣದ ಹಾಗೆ ನೆರೆದು, ಕತ್ತಿನ ಕುಣಿಕೆ/ಹರಿದು ಹರವೋ ಹರ. ಹುಲ್ಲು, ದರೆ, ಗಿಡ, ಹೊದರು/ಎಲ್ಲವನ್ನೆತ್ತೆತ್ತಿ ಕುತ್ತಿ ತೀರದ ತುರಿಕೆ/ಮೊಳೆವ ಕೊಂಬಿಗೆ. ಅರಬ್ಬಿಠಾಕಣ ಸವಾರಿಯ ಪೊಗರು/ನಾಣಿ ಮಗ ಶೀನಿಗೆ. ಆಕಾಶ ಕೈಗೆಟುಕದಿದ್ದಕ್ಕೆ,/ಕೋಶಾವಸ್ಥೆ ಮರಳಿ ಬಾರದ್ದಕ್ಕೆ, ತನಗಿಂತ ಮೊದಲೇ ತನ್ನಪ್ಪ ಹುಟ್ಟಿದ್ದಕ್ಕೆ/ರೊಚ್ಚು; ಕೊಚ್ಚುತ್ತಾನೆ ಗಾಳಿಮೋಪು;/ರೇಗಿ ಕಿರುಚುತ್ತಾನೆ ಭಾರಿ ರೋಫು/ಹೂಂಕರಿಸಿ ಹಾರುತ್ತಾನೆ ಮೂರು ಗುಪ್ಪು’.
ಹರೆಯದ ಗುಣ ಸ್ವಭಾವಗಳು ಇಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲ್ಪಟ್ಟಿವೆ. ಇಲ್ಲಿ ಯಾವುದಕ್ಕೂ ತರ್ಕವಿಲ್ಲ. ತನ್ನ ಸಾಮರ್ಥ್ಯದ ಅರಿವಿಲ್ಲದೆ ಎಲ್ಲದಕ್ಕೂ ರೇಗುವುದು, ಏನಾಗದಿದ್ದರೂ ಕುಳಿತ ಕಡೆಯೇ ಕುಣಿದು ಘರ್ಜಿಸುವುದು ತಾರುಣ್ಯದ ರೀತಿ. ಆಕಾಶ ಕೈಗೆಟುಕಲಿಲ್ಲವೆಂದು, ತನಗಿಂತ ತನ್ನಪ್ಪ ಮೊದಲೇ ಏಕೆ ಹುಟ್ಟಬೇಕಿತ್ತೆಂದು ಇವನಿಗೆ ರೊಚ್ಚು. ಕೊಚ್ಚಿಕೊಳ್ಳುವುದು ಈ ನೆಲೆಯಲ್ಲಿ ತೀರ ಸಹಜ ಗತಿ.
‘ಮೊದಲೇ ಕೋತಿ. ಅದಕ್ಕೆ ಹೆಂಡ ಕುಡಿಸಿ, ಬಾಲಕ್ಕೆ ಮುಳ್ಳು ಚುಚ್ಚಿದರೆ ಅದು ಹೇಗಾಡಬೇಡ?’- ಇದು ನಮ್ಮ ಜನಪದರಲ್ಲಿ ಯೌವನವನ್ನು ವರ್ಣಿಸುವ ಆಡುಮಾತಿನ ರೀತಿ. ಇಂತಹ ಕೋತಿಯೇ ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಹನುಮಂತನಾಗಿ ವಿಕಾಸವಾಗಬಹುದು. ‘ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ’. ಹಾಗಲ್ಲದಿದ್ದಾಗ ತಾನು ಮಾತ್ರ ಕೆಡುವುದಲ್ಲದೆ ತನ್ನ ಸುತ್ತಮುತ್ತಲಿನ ಎಲ್ಲವನ್ನೂ ಹಾಳು ಮಾಡಬಹುದು. ‘ಕಟ್ಟಿರುವ ಕಣ್ಣಿ ಹರಕೊಂಡು ಢುರಕಿ ಹೊಡೆದು ಹಿಡಿಯ ಬಂದಣ್ಣಗಳ ಕೊಸರಿ ಕೈಮೀರಿ ಬೇಲಿ ಹಾರುವ ಹೋರಿಯ ಪೊಗರು ಯೌವನದ ಬಗೆ’. ಎಲ್ಲ ರೀತಿಯ ನೀತಿ ನಿಯಮಗಳನ್ನು ಉಲ್ಲಂಘಿಸುವುದರಲ್ಲೇ ಖುಷಿ. ಕೆಲವೊಮ್ಮೆ ಅದು ಕ್ರಾಂತಿಕಾರಿಯಾದ ಮಹತ್ವದ ಹೆಜ್ಜೆಯಾಗಬಹುದು, ಇಲ್ಲವೇ ವಿಧ್ವಂಸಕಾರಿ ಕೃತ್ಯವಾಗಿ ವಿನಾಶಕಾರಿ ನೆಲೆ ತಲುಪಬಹುದು. ಯೌವನದ ಈ ಅದಮ್ಯ ಚೇತನವನ್ನು ನಿಯಂತ್ರಿಸುವುದೇ ವಿವೇಕ. ಇದರ ಹೊಣೆ ನಿಸ್ಸಂದೇಹವಾಗಿ ಹಿರಿಯರಿಗೆ ಸೇರಿದ್ದು.
ಇತ್ತೀಚಿಗೆ ನಮ್ಮ ತರುಣರು ನಡೆದುಕೊಳ್ಳುತ್ತಿರುವ ಕ್ರಮ ನನ್ನನ್ನು ಈ ಬಗೆಯ ಚಿಂತನೆಗೆ ಹಚ್ಚಿದೆ. ರಾಷ್ಟ್ರಮಟ್ಟದಲ್ಲಿ ಹೊಸಪೀಳಿಗೆ ನವಭಾರತ ನಿರ್ವಣದ ಕನಸು ಕಾಣುತ್ತ ಬದಲಾವಣೆ ತರಲು ಪ್ರಯತ್ನಿಸುತ್ತಿರುವುದು ಕಣ್ಣ ಮುಂದಿರುವಂತೆಯೇ ನಮ್ಮ ಸುತ್ತಮುತ್ತ ಯುವಜನಾಂಗ ಕ್ಷುಲ್ಲಕ ವಿಷಯಗಳಿಗೆ ದಾಂಧಲೆ ಮಾಡುತ್ತ ಸಹಜೀವಿಗಳಿಗೆ ಮೂಗು ಮುರಿಯುವಂತೆ ಹೊಡೆದು ಜೈಲು ಸೇರುತ್ತಿರುವುದನ್ನೂ ನಾವು ಗಮನಿಸುತ್ತಿದ್ದೇವೆ. ಹೊಡೆದಾಟಕ್ಕೆ ಕಾರಣ ಬೇಕೆ?
ನಡುರಾತ್ರಿ ಯುವಕರ ಗುಂಪೊಂದು ನಗರದ ಪ್ರತಿಷ್ಠಿತ ಹೋಟೆಲಿಗೆ ಹೋಗುತ್ತದೆ. ಹೋಟೆಲಿನ ವ್ಯವಹಾರದ ವೇಳೆ ಮುಗಿದು ಬಾಗಿಲು ಹಾಕಿ ಸಿಬ್ಬಂದಿ ಮಲಗುವ ಸಿದ್ಧತೆಯಲ್ಲಿರುತ್ತಾರೆ. ಅವರು ಮತ್ತೆ ಬೆಳಗ್ಗೆ ಕೆಲಸಕ್ಕೆ ಸಿದ್ಧವಾಗಬೇಕು. ಆ ವೇಳೆಯಲ್ಲಿ ಈ ಗುಂಪು ದಢದಢ ಬಾಗಿಲು ಬಡಿದು, ಬಲವಂತವಾಗಿ ಬಾಗಿಲು ತೆರೆಸಿ ತಮಗೆ ಆಹಾರ ಪದಾರ್ಥಗಳನ್ನು ಸಿದ್ಧಮಾಡಿಕೊಡಬೇಕೆಂದು ಒತ್ತಾಯ ಹೇರುತ್ತದೆ. ಸಿಬ್ಬಂದಿ ಇದಕ್ಕೆ ಒಪ್ಪದಿದ್ದಾಗ ತಮ್ಮ ‘ಆಜ್ಞೆ’ಯನ್ನು ಪಾಲಿಸದ ಆ ಹುಲುನೌಕರರಿಗೆ ಎಂತಹ ಕೊಬ್ಬು ಎಂದು ಹೂಂಕರಿಸಿದ ತರುಣರ ಗುಂಪು ಅವರ ಮೇಲೆ ಹಲ್ಲೆ ಮಾಡುತ್ತದೆ. ವಿಷಯ ಪೊಲೀಸ್ ಸ್ಟೇಷನ್ ಮೆಟ್ಟಿಲೇರುತ್ತದೆ. ಆ ಗುಂಪಿನ ನಾಯಕ ಪ್ರಭಾವಿ ರಾಜಕಾರಣಿಯ ಮಗ. ಸರಿ, ಮುಂದೆ ಏನಾಯಿತೆಂಬುದನ್ನು ನಾನು ವಿವರಿಸುವ ಅಗತ್ಯವಿಲ್ಲ.
ಮತ್ತೊಂದು ಪ್ರಸಂಗ- ಪ್ರತಿಷ್ಠಿತ ಹೋಟೆಲಿನಲ್ಲಿ ಯುವಕರ ಗುಂಪೊಂದು ತಿಂದು ಹಾಡಿ ಕುಣಿದು ನರ್ತಿಸುತ್ತಿರುತ್ತದೆ. ಅವರ ಮಗ್ಗುಲಲ್ಲೇ ಇಬ್ಬರು ಯುವಕರು ತಮ್ಮ ಪಾಡಿಗೆ ತಾವು ಊಟ ಮಾಡುತ್ತಿರುತ್ತಾರೆ. ಅವರನ್ನೂ ಈ ಗುಂಪು ತಮ್ಮ ಜತೆ ಸೇರಲು ಒತ್ತಾಯಿಸುತ್ತದೆ. ಅವರು ನಿರಾಕರಿಸುತ್ತಾರೆ. ಇವರ ‘ಆಜ್ಞೆ’ಯನ್ನು ನಿರಾಕರಿಸಬಹುದೇ? ಅವರಿಗೆ ಮೂಳೆ ಮುರಿಯುವ ಹಾಗೆ ಹೊಡೆದು ಗುಂಪು ಅಟ್ಟಹಾಸ ಮಾಡುತ್ತದೆ. ಬಲವಂತವಾಗಿ ತಮ್ಮ ತಾಳಕ್ಕೆ ಕುಣಿಯುವಂತೆ ಮಾಡುತ್ತದೆ. ಅಲ್ಲಿದ್ದ ಇತರರು ಹಾಗೂ ಸಿಬ್ಬಂದಿ ಅದಕ್ಕೆ ಮೂಕಪ್ರೇಕ್ಷಕರಾಗಿರುತ್ತಾರೆ. ಹಲ್ಲೆಗೊಳಗಾದ ಆ ಹುಡುಗರು ಆಸ್ಪತ್ರೆ ಸೇರುತ್ತಾರೆ. ಈ ಪ್ರಕರಣವೂ ಪೊಲೀಸ್ ಸ್ಟೇಷನ್ವರೆಗೆ ಹೋಗುತ್ತದೆ. ಮತ್ತದೇ ‘ಕತೆ’.
ಇಂತಹ ಪ್ರಸಂಗಗಳು ಅನೇಕ. ನನ್ನ ಸ್ನೇಹಿತರ ಮಗ ಬೈಕ್ನಲ್ಲಿ ಹೋಗುತ್ತಿದ್ದ. ಮತ್ತೊಬ್ಬ ಬೈಕ್ ಸವಾರ ಇವನನ್ನು ಹಿಂದಿಕ್ಕಿ ಮುಂದೆ ಹೋಗಿದ್ದಾನೆ. ಇವನಿಗೆ ಸಿಟ್ಟು ಬಂದಿದೆ. ತನ್ನನ್ನು ಹಂಗಿಸಲೆಂದೇ ಹಾಗೆ ಮುಂದೆ ಹೋಗಿದ್ದಾನೆ, ಅದು ತನಗಾದ ಅವಮಾನ ಎಂದು ಭಾವಿಸಿದ ಈತ ಅವನನ್ನು ಹಿಂದೆಹಾಕಲು ತಾನು ಹೋಗಬೇಕಾಗಿದ್ದ ಗಮ್ಯವನ್ನು ಮರೆತು ಅವನನ್ನು ಹಿಂಬಾಲಿಸಿದ್ದಾನೆ. ಆತನೂ ತರುಣ, ಇವನಿಗೇನು ಕಮ್ಮಿ? ತನ್ನ ವಾಹನದ ವೇಗ ಹೆಚ್ಚಿಸಿದ್ದಾನೆ. ಈಗ ಇವನಿಗೆ ಮತ್ತಷ್ಟು ಉತ್ಸಾಹ. ಇಬ್ಬರೂ ಜನಸಂದಣಿಯ ರಸ್ತೆಯಲ್ಲಿ ರೇಸಿನ ರೀತಿ ಬೈಕ್ ಓಡಿಸಿ ಕಡೆಗೆ ಆಯ ತಪ್ಪಿ ಮುಂದಿನ ಸವಾರ ಬಿದ್ದಿದ್ದಾನೆ, ಹಿಂದಿನವನು ಹೋಗಿ ಅವನಿಗೆ ಗುದ್ದಿದ್ದಾನೆ. ಕಡೆಗೆ ಇಬ್ಬರೂ ಆಸ್ಪತ್ರೆ ಸೇರಿದ್ದಾರೆ. ಇಬ್ಬರ ಮೇಲೂ ಪೊಲೀಸರು ಕೇಸು ಹಾಕಿದ್ದಾರೆ. ನನ್ನ ಸ್ನೇಹಿತ ಪ್ರಭಾವಿ ವ್ಯಕ್ತಿ.
ಇದು ಯೌವನದ ಸೊಕ್ಕು. ಇಂತಹ ಕಡೆಗಳಲ್ಲಿ ನಾವು ಪ್ರಧಾನವಾಗಿ ಕಾಣುವುದು 2 ಸಂಗತಿಗಳು. ಒಂದು ಯೌವನಕ್ಕೆ ಜತೆಯಾಗಿರುವ ಹಣದ ಗತ್ತು. ಮತ್ತೊಂದು ಅದರ ಜತೆಗೂಡಿರುವ ಅಧಿಕಾರದ ಅಹಂಕಾರ. ಇವೆರಡೂ ಒಂದೆಡೆ ಇರುವುದು ರಾಜಕೀಯದ ವ್ಯಕ್ತಿಗಳು, ಉನ್ನತ ಅಧಿಕಾರಿವಲಯ ಹಾಗೂ ಉದ್ಯಮಪತಿಗಳಲ್ಲಿ. ಇಂಥವರ ಮಕ್ಕಳು, ಚಿನ್ನದ ಚಮಚವನ್ನು ಕೈನಲ್ಲಿ ಹಿಡಿದೇ ಹುಟ್ಟಿರುತ್ತಾರೆ. ಕೂದಲು ಕೊಂಕದಂತೆ ಅವರನ್ನು ಬೆಳೆಸಿರುತ್ತಾರೆ. ಎಲ್ಲ ಬಗೆಯ ಸವಲತ್ತುಗಳೂ ಬೆರಳ ತುದಿ ಯಲ್ಲಿರುತ್ತವೆ. ಯಾರಿಗೂ ತಲೆಬಾಗದ ಅಹಂಕಾರ ತಲೆಗೇರಿರುತ್ತದೆ. ಅಡಿಗರು ಹೇಳುತ್ತಾರೆ- ‘ಕಲಿಸು ಬಾಗುವುದನ್ನು, ಬಾಗದೆ ಸೆಟೆವುದನ್ನು’. ನಮಗಿಂತ ಉನ್ನತ ಚೇತನಕ್ಕೆ ಬಾಗುವುದೂ ಗೊತ್ತಿರಬೇಕು, ಹಾಗೆಯೇ ಅಯೋಗ್ಯರ ವಿರುದ್ಧ ಸೆಟೆದು ನಿಲ್ಲುವುದೂ ಸಾಧ್ಯವಾಗಬೇಕು. ಆದರೆ ಇಂಥವರಿಗೆ ಸೆಟೆವುದು ಮಾತ್ರ ಗೊತ್ತಿರುತ್ತದೆ, ಬಾಗುವ ವಿನಯ ಕಿಂಚಿತ್ತೂ ಇರುವುದಿಲ್ಲ. ಆತ್ಮಾಭಿಮಾನವಿರಬೇಕು, ನಿಜಕ್ಕೂ ಅದೊಂದು ಮೌಲ್ಯ. ಆತ್ಮಾಭಿಮಾನಕ್ಕೆ ಪೆಟ್ಟುಬಿದ್ದಾಗ ತಾಳಿಕೊಳ್ಳಬಾರದು ನಿಜ, ಆದರೆ ಅದು ಅಹಂಕಾರವಾಗದ ಹಾಗೆ ಎಚ್ಚರ ವಹಿಸಬೇಕು. ವಿನಯವಿಲ್ಲದ ಆತ್ಮಾ ಭಿಮಾನ ಅಹಂಕಾರವಾಗುತ್ತದೆ; ಆತ್ಮವಿಶ್ವಾಸವಿಲ್ಲದ ವಿನಯ ದೌರ್ಬಲ್ಯವಾಗುತ್ತದೆ.
ಯೌವನಕ್ಕೆ ಕುರುಡು ಕಾಂಚಾಣದ ಮದ, ಕುಟುಂಬದ ಅಧಿಕಾರದ ಅಹಂಕಾರ ಸೇರಿಕೊಂಡರೆ ಯೌವನದ ಉತ್ಸಾಹ ಉನ್ಮತ್ತತೆಗೆ ಅವಕಾಶ ಮಾಡಿಕೊಡುತ್ತದೆ. ಆಗ ಆಗುವ ಅನಾಹುತ ಆತನನ್ನು ಮಾತ್ರವಲ್ಲ, ಸುತ್ತಮುತ್ತಲಿನವರನ್ನೂ ‘ಬಲಿ’ ತೆಗೆದುಕೊಳ್ಳುತ್ತದೆ. ಇತ್ತೀಚೆಗೆ ಇಂತಹ ಅನೇಕ ನಿದರ್ಶನಗಳು ನಮ್ಮ ಕಣ್ಮುಂದಿವೆ. ಇದಕ್ಕೆ ಕಾರಣ ನಿಸ್ಸಂದೇಹವಾಗಿ ತಾರುಣ್ಯ ಮಾತ್ರವಲ್ಲ, ಆ ಹದಿಹರೆಯದ ವಯಸ್ಸಿನಲ್ಲಿ ಹಿರಿಯರು ಸರಿಯಾದ ಮಾರ್ಗದರ್ಶನ ಮಾಡದಿರುವುದು. ಮಕ್ಕಳನ್ನು ಪ್ರೀತಿಸಬಾರದೆಂದು ಯಾರು ಹೇಳುತ್ತಾರೆ? ಆದರೆ ಪ್ರೀತಿ ‘ಮೋಹ’ವಾಗಿ ಮಾಡಿದ್ದೆಲ್ಲ ಸರಿ ಎನ್ನುವ ಮನೋಭಾವಕ್ಕೆ ಅವಕಾಶವಾಗದಂತೆ ಎಚ್ಚರ ವಹಿಸುವುದು ‘ದೊಡ್ಡವರು’ ಎನ್ನಿಸಿಕೊಂಡವರ ವೈಯಕ್ತಿಕ ಹೊಣೆ ಮಾತ್ರವಲ್ಲ, ಸಾಮಾಜಿಕ ಜವಾಬ್ದಾರಿಯೂ ಹೌದು. ಯೌವನ ಹುಚ್ಚುಹೊಳೆ ಇದ್ದಂತೆ. ಹಾಗೇ ಹರಿಯಲು ಬಿಟ್ಟರೆ ಎಲ್ಲರನ್ನೂ, ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದೆ. ನಿಯಂತ್ರಿಸಿ, ನೀರುಣಿಸಿದರೆ ಹಲವರ ಬದುಕು ಹಸುರಾಗುತ್ತದೆ.
Courtesy : Vijayavani.net
http://vijayavani.net/saamayika-3/