ಏನಾದರೂ ಆಗು ಮೊದಲು ಗೃಹಸ್ಥಾಶ್ರಮಿಯಾಗು

ಏನಾದರೂ ಆಗು ಮೊದಲು ಗೃಹಸ್ಥಾಶ್ರಮಿಯಾಗು

ನಮ್ಮಂತಹ ಗಂಡಸರಿಗಂತೂ ಬಿಡಿ ಬೇರೇ ಕೆಲಸವೇ ಇರುವುದಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಹೆಣ್ಣನ್ನು ಅನನ್ಯವಾಗಿ ವರ್ಣಿಸುವುದು. ಅವಕಾಶ ಸಿಗದೇ ಹೋದರೆ ಹೇಗೋ ಅವಕಾಶ ಕಲ್ಪಿಸಿಕೊಳ್ಳುವುದು. (ಇಂದಿನ ಯುಗಧರ್ಮಕ್ಕೆ ಅನುಸಾರವಾಗಿ). ಹೆಣ್ಣನ್ನು ಪರಿಪರಿಯಾಗಿ ಹೊಗಳಿ ನಮ್ಮ ಮನಸ್ಸಿಗೆ ಮುದ ನೀಡುವಂತೆ ಮಾಡುವುದು. ನಯನಮನೋಹರ ಚಿತ್ತ-ಚಕೋರಿಯರನ್ನು ಕವಿತೆಗಳಲ್ಲಿ, ಚಿತ್ರಕಲೆ, ಸಾಹಿತ್ಯ ಇಲ್ಲವೇ ಸಂಗೀತ ಪ್ರಕಾರಗಳಲ್ಲಿ ವೈಭವೀಕರಿಸಿ ನಮ್ಮ ಕಲ್ಪನಾವಿಲಾಸವನ್ನು ಹರಿಬಿಡುವುದು. ಹೆಣ್ಣನ್ನು ವರ್ಣಿಸಿ ಅವಳನ್ನು ಶೋಷಣೆಗೆ ಒಳಪಡಿಸುತ್ತಿದ್ದೇವೆ ಎಂಬ ಸಮಾಜವಾದಿ ಚಿಂತನೆಯು ಒಳಗೆ ಹರಿಯುತ್ತಿದ್ದರೂ ಅದನ್ನು ಮೀರಿ ನನ್ನ ಮನಸ್ಸು ವಾಸ್ತವತೆಯಿಂದ ದೂರ ಸರಿದು, ಕಲ್ಪನಾಲೋಕದಲ್ಲಿ ವಿಹರಿಸತೊಡಗುತ್ತದೆ. ನಮಗೆ ಗೊತ್ತಿಲ್ಲದೆಯೇ ಬಗೆಬಗೆಯ ವರ್ಣರಂಜಿತ, ಮೋಹಕ ಶಬ್ದಗಳು ಮನದಾಳದಲ್ಲಿ ತೇಲತೊಡಗುತ್ತವೆ. ಇಂತಹ ಕೆಲವೊಂದು ಭಾವನೆಗಳಿಗೆ ಯಾಕೆ ಮನಸ್ಸು ಚೇತೋಹಾರಿಯಾಗಿಬಿಡುತ್ತದೆ ಎಂಬುದನ್ನು ಹೇಳುವುದು ಬಿಡಿಸಲಾರದ ಒಗಟೇ ಸರಿ!

ಸ್ವಲ್ಪ ನೇಪಧ್ಯಕ್ಕೆ ಸರಿದರೆ, ಮುದುಕರು ಎಂದು ಪರಿಗಣಿಸಲ್ಪಟ್ಟಿರುವ ಈ ಕಾಲಘಟ್ಟದಲ್ಲಿ ನಾನು ಸ್ವಲ್ಪ ಧೈರ್ಯ ಮಾಡಿ ಕೆಲವೊಂದು ವಿಷಯಗಳನ್ನು ಹೇಳಲೇಬೇಕೆಂದು ನಿರ್ಧಾರ ಮಾಡಿಕೊಂಡಿದ್ದೇನೆ. ನಮ್ಮ ಹಳೆಯ ಸಿನಿಮಾಗಳಲ್ಲಿ ನಾಯಕಿಯರು ಮತ್ತಿತರ ಸ್ತ್ರೀ ಪಾತ್ರಗಳು, ತುಂಬು ಸೀರೆ ಉಟ್ಟು ಇಲ್ಲವೇ ಸಲವಾರ ಕಮೀಜ ಧರಿಸಿ ಕಾಣಿಸಿಕೊಳ್ಳುತ್ತಿದ್ದರು. ಅವರನ್ನು ನಮ್ಮ ನಾಯಕರು ಯಾವ ಪರಿ ಹೊಗಳುತ್ತಿದ್ದರೆಂದರೆ, ನಮಗೆ ಸಖೇದ ಆಶ್ಚರ್ಯವಾಗಿಬಿಡುತ್ತದೆ. ಆಗಿನ ಕಾಲದ ಸಿನಿಮಾಗಳಲ್ಲಿ ಮರ ಸುತ್ತುತ್ತಾ ಹಾಡುವುದು ಪ್ರಣಯದ ಭರದಲ್ಲಿ ಎಂದೂ ಸಾಧ್ಯವಾಗದೇ ಇರುವ ಮಾತುಗಳನ್ನು ಆಡುವುದು ವಾಡಿಕೆಯಾಗಿರುತ್ತಿತ್ತು. ಇಂತಹ ಸಿನಿಮಾಗಳನ್ನು ನೋಡುತ್ತಿದ್ದ ನಮಗೆ ಪ್ರೇಮ-ಪ್ರೀತಿ ಮಾಡುವುದೆಂದರೆ ಹೇಗೆಯೇ ಮಾಡಬೇಕು ಎಂದು ಅನಿಸುವ ಸಮಯವೊಂದಿತ್ತು. ನಮ್ಮ ಜೊತೆ ಕಲಿಯುತ್ತಿದ್ದ ಕಾಲೇಜು ಕನ್ಯೆಯರು ನಮ್ಮ ಹಿರೋಯಿನ್‌ಗಳಾಗಿ ಬಿಡುತ್ತಿದ್ದರು. ಅವರನ್ನು ಕಂಡಾಗ ನಮ್ಮ ಗೆಳೆಯರನ್ನು ಉದ್ದೇಶಿಸಿ ಹುಡುಗಿಯರಿಗೆ ಕೇಳುವಂತೆ ‘ನಿನಗೆ ಆಗಸದಿಂದ ನಕ್ಷತ್ರಗಳನ್ನು ತಂದು ನಿನ್ನ ಮುಡಿಗೆ ಮುಡಿಸಲೇ?’ ‘ನೀನು ನಡೆಯುತ್ತಿದ್ದರೆ ನನ್ನ ಹೃದಯ ಬಡಿತ ಹೆಚ್ಚಾಗುತ್ತದೆ.’ ‘ನೀನು ನಿಂತರೆ ನನ್ನ ಹೃದಯ ಬಡಿತ ನಿಲ್ಲುತ್ತದೆ, ಜಗತ್ತೆ ನಿಂತಂತೆ ಭಾಸವಾಗುತ್ತದೆ.’ ‘ನಿನ್ನ ಮೇಲೆ ಇರುವ ಪ್ರೀತಿಯನ್ನು ಹೇಗೆ ಸಾಬೀತು ಪಡಿಸಲಿ? ನನ್ನ ಹೃದಯ ನಿನ್ನ ಮುಂದಿಡಲೆ?’ ‘ನನ್ನ ಬಿಸಿ ರಕ್ತದಿಂದ ನನ್ನ ವಿರಹವನ್ನು ತಿಳಿಸಲು ಕವಿತೆ ನಿನ್ನ ಮುಂದೆ ಇಡಲೇ? ಇಂತಹ ಮುಂತಾದ ಹುಚ್ಚು ಮಾತುಗಳನ್ನು ಆಡಿ ಧನ್ಯತಾಭಾವದಿಂದ ನಮಗೆ ನಾವೇ ಸಂತೈಸಿಕೊಳ್ಳುತ್ತಿದ್ದೆವು.

ನಮ್ಮ ಮಂಗತನದ ಇಂತಹ ಕುಚೇಷ್ಟೆಗಳಿಗೆ ನಮ್ಮ ಕಾಲೇಜು ಕನ್ಯೆಯರು ಮುಗುಳ್ನಗೆ ನಕ್ಕು ಏನೂ ಆಗದಿರುವಂತೆ ಮುಂದೆ ಹೋಗುತ್ತಿದ್ದರು. ನಮ್ಮ ಕಾಲೇಜಿನ ಹುಡುಗಿಯರಲ್ಲಿ ಯಾರೊಬ್ಬರಾದರೂ ನಮ್ಮ ಮಾತುಗಳನ್ನು ನಿಜವೆಂದು ತಿಳಿದು ಕನಸೂಸಹ ಕಂಡಿರಬಹುದೋ ಏನೊ? ನನಗೆ ಗೊತ್ತಿಲ್ಲ. ಒಮ್ಮೊಮ್ಮೆ ಇಂತಹ ಆಡಿದ ಮಾತುಗಳು ಪೇಚಾಟಕ್ಕೆ ತಂದು ನಿಲ್ಲಿಸುತ್ತಿದ್ದವು. ನಮ್ಮ ಸುತ್ತಮುತ್ತಲಿನ ಮನೆಗಳಲ್ಲಿ ವಾಸವಿದ್ದ ನನ್ನ ಓರಿಗೆಯ ಹುಡುಗಿಯರು ನಮ್ಮೊಡನೆ ಬೇರೆ ಬೇರೆ ವಿಭಾಗಗಳಲ್ಲಿ ಕಲಿಯುತ್ತಿದ್ದರು. ಜೀವಶಾಸ್ತ್ರ, ರಸಾಯನಶಾಸ್ತ್ರ, ಕಲೆಯ ವಿಷಯಗಳಾದ ಆಂಗ್ಲಸಾಹಿತ್ಯ, ಕನ್ನಡ, ಫ್ರೆಂಚ್ ಮತ್ತು ಅರ್ಥಶಾಸ್ತ್ರ ವಿಭಾಗಗಳಲ್ಲಿ ಹುಡುಗಿಯರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಕೆಲವು ಜಾಣ ದಿಟ್ಟ ಹುಡುಗಿಯರು ನಾವು ಹುಡುಗರಿಗಿಂತ ಜಾಣತನದಲ್ಲಿ ಏನೂ ಕಡಿಮೆಯಿಲ್ಲ ಎಂಬುದನ್ನು ಸಾಬೀತು ಪಡಿಸಲೋ ಏನೊ ಭೌತಶಾಸ್ತ್ರದಂತಹ ವಿಷಯಗಳನ್ನು ಆಯ್ದುಕೊಳ್ಳುತ್ತಿದ್ದರು. ನಾನು ಆಡಿದ ಇಂತಹ ಮಾತುಗಳನ್ನು ನನ್ನ ತಾಯಿ ಎದುರಿಗೆ ಹೇಳಿ ಮುಸಿಮುಸಿ ನಕ್ಕು ನನ್ನ ಮರ್ಯಾದೆ ಕಳೆಯುತ್ತಿದ್ದರು. ನನ್ನ ತಾಯಿ ನನ್ನನ್ನು ಪ್ರೀತಿಯಿಂದ ಗದರಿಸಿ ‘ಏನು, ಅಭ್ಯಾಸ ಮಾಡೋದು ಬಿಟ್ಟು ಹುಡುಗಿಯರ ಹುಚ್ಚು ಹಚ್ಚಿಕೊಂಡಿಯೇನೋ? ಮೊದಲು ಪರೀಕ್ಷೆಯಲ್ಲಿ ಫರ್ಸ್ಟಕ್ಲಾಸ್‌ನಲ್ಲಿ ಪಾಸಾಗು ಆಮೇಲೆ ಮದುವೆ ಇದ್ದೇ ಇದೆ’ ಎಂದು ರಹಸ್ಯದ ಮಾತು ಹೇಳುವಂತೆ ಹೇಳಿ ನನ್ನನ್ನು ಗೊಂದಲಕ್ಕೀಡುಮಾಡಿಬಿಡುತ್ತಿದ್ದರು.

ನಮ್ಮ ತರಗತಿಯಲ್ಲಿ ಹುಡುಗಿಯರು ಸಂಖ್ಯೆ ಕಡಿಮೆ ಎಂಬುದು ನಮಗೆ ಕೊಂಚ ನಿರಾಶೆ ಹುಟ್ಟಿಸುತ್ತಿತ್ತು. ಆದ್ದರಿಂದ ಬಿಡುವಿದ್ದಾಗಲೆಲ್ಲ ನಾವು ಕಾಲೇಜಿನ ಮುಂದೆ ಹಾಕಿದ ಸರಳುಗಳ ಮೇಲೆ ಕುಳಿತು ಬರುವ-ಹೋಗುವ ಹುಡುಗಿಯರನ್ನು ನೋಡಿ ಮನಸ್ಸಿಗೆ ಹಿತ ಒದಗಿಸಿಕೊಳ್ಳುತ್ತಿದ್ದೆವು. ಕಾಲೇಜಿನ ಮುಂದೆ ಬೃಹದಕಾರವಾಗಿ ಬೆಳೆದಿರುವ ಎತ್ತರದ ಮರಗಳು ನಮಗೆ ತಂಪು ನೆರಳು ಒದಗಿಸುತ್ತಿದ್ದವು. ದೇಹಕ್ಕೆ ತಂಪನ್ನೀಯುವ ಮರಗಳ ಕೆಳಗೆ ಕುಳಿತು ಅಲ್ಲಿರುವ ಸರಳುಗಳಿಗೆ ಆತುಕೊಂಡು ನಾವೆಲ್ಲ ಹುಡುಗರು ಸುಂದರ ಭವಿಷ್ಯದ ಕನಸು ಕಟ್ಟಿಕೊಳ್ಳುತ್ತಿದ್ದೆವು. ಆ ಸುಂದರ ಭವಿಷ್ಯದಲ್ಲಿ ಅಲ್ಲಿಯೇ ನಮ್ಮೆದುರು ಹಾದು ಹೋಗುವ ಹುಡುಗಿಯೊಬ್ಬಳು ನಮ್ಮ ಬಾಳಸಂಗಾತಿಯಾದಂತೆ ಕಾಣುವ ಕನಸು ಅವ್ಯಕ್ತವಾಗಿ ಹುದುಗಿ ಒಳಒಳಗೆ ಮುದ ಕೊಡುತ್ತಿರುತ್ತಿತ್ತು.

ಮಧ್ಯಾಹ್ನ ಕಾಲೇಜಿಗೆ ಅರ್ಧಗಂಟೆ ಬಿಡುವು ಸಿಕ್ಕಾಗ ನಾವೆಲ್ಲ ಹುಡುಗರು ಕಾಲೇಜಿನ ಬಳಿಯಿದ್ದ ಚಹಾದ ಅಂಗಡಿಗೆ ಹೋಗಿ ಅಲ್ಲಿ ‘ಮಿಸಳ’ ಎಂಬ ಅದ್ಭುತ ತಿಂಡಿ ತಿಂದು ಚಹಾ ಕುಡಿದು ಹರ್ಷ ಪಡುತ್ತಿದ್ದೆವು. ನಮಗೆ ಆ ದಿನಗಳಲ್ಲಿ ಹುಡುಗಿಯರನ್ನು ಕಂಡು ಸಿನಿಮಾದ ಸಂಭಾಷಣೆಗಳನ್ನು ಆಡುವಾಗ ಆಗುತ್ತಿದ್ದ ಸಂಭ್ರಮದಷ್ಟೇ ‘ಮಿಸಳ’ ತಿನ್ನುವುದು ಅಷ್ಟೇ ಹಿತಕರ ಎನಿಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಹೊಟೇಲುಗಳಲ್ಲಿ ಮಿಸಳ ಎಂಬುವ ಒಂದು ಅದ್ಭುತ ತಿನಿಸು ಮಾಯವಾಗಿಬಿಟ್ಟಿದೆ. ಕೆಲವೊಂದು ಹೋಟೆಲಗಳಲ್ಲಿ ಕೊಟ್ಟರೂ ಅದು ತನ್ನ ಸ್ವರೂಪ, ರುಚಿಯನ್ನು ಬದಲಿಸಿಕೊಂಡಿದೆ. ಆಗ ನಾವು ತಿನ್ನುತ್ತಿದ್ದ ‘ಮಿಸಳ’ನಲ್ಲಿ ಹೋಟೆಲಿನಲ್ಲಿ ಅಂದು ಮಾಡಿದ ತಿಂಡಿಗಳ ಎಲ್ಲಾ ಅವಶೇಷಗಳು ಒಂದೆಡೆ ಇರುತ್ತಿದ್ದವು. ಅದರ ಮೇಲೆ ಆಲೂಗಡ್ಡೆ ಮತ್ತು ಈರುಳ್ಳಿಯ ಬಿಸಿಯಾದ ರಸಭಾಜಿ ಸುರಿದು ಕೊಡುತ್ತಿದ್ದರು. ಆ ಮಿಸಳನ್ನು ನೋಡಿದಾಗಲೇ ನಮ್ಮ ಹೊಟ್ಟೆ ಮಾನಸಿಕವಾಗಿ ತುಂಬಿದಂತೆ ಅನಿಸುತ್ತಿತ್ತು. ಅಲ್ಲಿ ಬೆಳಗಿನ ಉಪ್ಪಿಟ್ಟು ಇರುತ್ತಿತ್ತು. ಅರ್ಧ ಬಜಿ, ಅರ್ಧ ಪೂರಿ ಇರುತ್ತಿದ್ದವು. ಅದರೊಂದಿಗೆ ಎಂದೋ ಮಾಡಿದ ಶಂಕರಪೊಳಿ, ಸೇವುಚೂಡಾ, ಕರಿದ ಶೇಂಗಾ, ೨-೩ ಬ್ರೆಡ್‌ಪೀಸ ಅಲ್ಲಿ ಹಿತವಾಗಿ ಮಿಳಿತವಾಗಿರುತ್ತಿದ್ದವು. ಆಗ ನಮಗೆಲ್ಲ ತುಂಬು ಯೌವ್ವನ, ತಿಂದದ್ದೆಲ್ಲವನ್ನು ಕರಗಿಸಿಕೊಳ್ಳುವ ಶಕ್ತಿ ನಮ್ಮಲ್ಲಿತ್ತು. ಆಗಿನ ಸಮಯದಲ್ಲಿ ಮನೆಯಲ್ಲಿ ಹಬ್ಬ-ಹುಣ್ಣಿಮೆಗಳನ್ನು ಬಿಟ್ಟರೆ ಸಿಹಿಪದಾರ್ಥಗಳು, ಕರಿದ ಭಜಿ, ಹಪ್ಪಳ ಕಾಣುತ್ತಲೇ ಇರಲಿಲ್ಲ. ದಿನಕ್ಕೆ ಎರಡು ಅಥವಾ ಮೂರು ಬಾರಿ ಊಟ ಮಾತ್ರ. ಇದರಿಂದಾಗಿಯೇ ನಮ್ಮ ಆರೋಗ್ಯ ಒಂದು ಹಂತದವರೆಗೆ ಚೆನ್ನಾಗಿ ಉಳಿದುಕೊಳ್ಳಲು ಸಾಧ್ಯವಾಯಿತು. ನಮ್ಮ ಮನೆಯಲ್ಲಿ ನಮ್ಮ ಅಜ್ಜಿ ಹಾಗೂ ತಾಯಿ ನಮಗೆ ಗೊತ್ತಿಲ್ಲದಂತೆಯೇ ಆರೋಗ್ಯಕರ ಆಹಾರದ ಸಂದೇಶವನ್ನು ಪರೋಕ್ಷವಾಗಿ ನೀಡಿಬಿಟ್ಟಿದ್ದರು.  ಹೀಗಾಗಿ ನಮಗೆ ‘ಮಿಸಳ’ ತಿನ್ನುವುದೆಂದರೆ ನಮಗೆ ಎಲ್ಲಿಲ್ಲದ ಸಂತೋಷ, ಹೊಟ್ಟೆಯೂ ತುಂಬುತ್ತಿತ್ತು. ಮುಂದೆ ಮೂರು ಗಂಟೆಗಳ ಕಾಲ ನಾವು ಮಾಡುವ ಭೌತಶಾಸ್ತçದ ವಿಜ್ಞಾನದ ಪ್ರಯೋಗಗಳಿಗೆ ಉತ್ಸಾಹ ಕೊಡುತ್ತಿತ್ತು. ಅದರ ಮಧ್ಯೆ ಹುಡುಗಿಯರ ಕಣ್ಣೋಟ ಒಂದು ಸೇರಿಕೊಂಡು ಕಾಲೇಜಿನಲ್ಲಿಯೇ ಇರಬೇಕು ಎಂಬ ಬಯಕೆ ಬಲವಾಗಿಬಿಡುತ್ತಿತ್ತು. ಹೀಗಾಗಿ ನಮ್ಮ ಬಹುತೇಕ ಸಮಯವನ್ನು ನಾವು ಗ್ರಂಥಾಲಯಗಳಲ್ಲಿ ಕಳೆದು ಜ್ಞಾನವನ್ನು ಸಂಗ್ರಹಿಸುತ್ತಿದ್ದೆವು. ಆಗ ನಮಗೆ ದೊರೆತ ಜೀವನೋತ್ಸಾಹದಿಂದಾಗಿಯೇ ನಮ್ಮ ಭವಿಷ್ಯ ಉಜ್ವಲವಾಯಿತೋ ಏನೋ ಎಂದರೆ ಅದು ಉತ್ಪ್ರೇಕ್ಷೆಯ ಮಾತಾದೀತೋ ಏನೋ! ಪ್ರತಿಕ್ಷಣ ವರ್ತಮಾನದಲ್ಲಿಯೇ ಬದುಕುವ ಕಲೆ ನಮಗೆ ಕರಗತವಾದುದರಿಂದಲೇ ಭದ್ರಭವಿಷ್ಯಕ್ಕೆ ನಾಂದಿ ಹಾಡಿತು.

ಮದುವೆಯಾದ ಮೇಲೆ ಒಂದೆರಡು ವರ್ಷಗಳು ಕಳೆದ ನಂತರ ನಮ್ಮ ಅದ್ಭುತ ರಮ್ಯಲೋಕ ಯಾವುದೋ ಸಹಸ್ರ ಕೋಟಿ ಮೈಲುಗಳಾಚೆ ಇರುವ ನಿಹಾರಿಕೆಯೊಂದರ ಸೆಳೆತಕ್ಕೆ ಒಳಗಾಗಿ ಮಾಯವಾಗಿ ಬಿಟ್ಟಿತ್ತು. ಯಾವುದನ್ನು ಬೇಡಿ ಬಯಸಿ ಹಗಲಿರುಳು ಹಾರೈಸಿದ್ದೆವೋ ಅದನ್ನು ನೆನೆದು ಈಗ ಆಶ್ಚರ್ಯಚಕಿತರಾಗುತ್ತೇವೆ. ಏನಿದ್ದರೂ ಆದರ್ಶ ದಾಂಪತ್ಯ, ಪತ್ನಿಯ ಅಸೀಮ ತ್ಯಾಗ, ವಿಷಮ ವಿವಾಹಗಳ ಸುತ್ತೇ ತಿರುಗುತ್ತಿದ್ದ ಅಂದಿನ ಸಿನಿಮಾಗಳು ನಮಗೆ ಗೊತ್ತಿಲ್ಲದಂತೆಯೇ ನಮ್ಮ ಅಂತರಂಗವನ್ನು ಪ್ರವೇಶಿಸಿ ಬಿಟ್ಟದ್ದವು. ಕೆಲವೊಮ್ಮೆ ಇಂತಹ ಸಿನಿಮಾಗಳನ್ನು ನೋಡಲು ನಾವು ತೆರಳಿದಾಗ ನಮ್ಮ ಭಾವನೆಗೆ ತಕ್ಕಂತೆ ನಾವು ಪತ್ನಿಯನ್ನು ಕಲ್ಪಿಸಿಕೊಳ್ಳುತ್ತಿದ್ದರೆ, ನನ್ನ ಪತ್ನಿ ತನ್ನದೇ ಆಂತಹದ್ದೇ ಒಂದು ರಮ್ಯಲೋಕ ಕಟ್ಟಿಕೊಳ್ಳುತ್ತಿದ್ದಳು.  ಅಲ್ಲಿಯೇ ಪಕ್ಕದಲ್ಲಿ ಕುಳಿತ ಗಂಡ ತನ್ನ ಕಲ್ಪನೆಗೆ ತಕ್ಕಂತೆ ಹೆಂಡತಿಯನ್ನು ಸಿನಿಮಾದಲ್ಲಿ ಕಾಣುತ್ತಿದ್ದ. ಮುಂಜಾನೆ ತಾನು ಏಳುವುದಕ್ಕೂ ಮೊದಲೇ ಹೆಂಡತಿ ಸ್ನಾನ ಮಾಡಿ, ತಲೆ ಹದವಾಗಿ ಹರಡಿಕೊಂಡು ಕೈಯಲ್ಲಿ ಬಿಸಿ ಕಾಫಿ ಹಿಡಿದುಕೊಂಡು ಬರುವ ದೃಶ್ಯ ನನ್ನ ತಲೆಯಲ್ಲಿ ಸುಳಯತೊಡಗುತ್ತಿತ್ತು. ತಾನು ಏನೆಂದರೂ ಅದಕ್ಕೆ ಮುಗುಳು ನಗೆ ನಕ್ಕು, ಸಹಮತಿ ವ್ಯಕ್ತ ಪಡಿಸುವ ಹೆಂಡತಿಯ ಮುಖ ಇವನ ರೇಸಾಮ್ರಾಜ್ಯದಲ್ಲಿ ತೇಲಾಡುತ್ತಿತ್ತು. ಅದಕ್ಕೆ ಪ್ರತಿಯಾಗಿ ಹೆಂಡತಿಯಾದವಳು ತನ್ನದೇ ಒಂದು ಲೋಕ ಕಟ್ಟಿಕೊಳ್ಳುತ್ತಿದ್ದಳು. ಸಿನಿಮಾದ ನಾಯಕ ತನ್ನ ಸಿನಿಮಾದ ಹೆಂಡತಿಗೆ ದಿನವೂ ಸಾಯಂಕಾಲ ಒಂದಿಲ್ಲ ಒಂದು ಆಭರಣ ಇಲ್ಲವೇ ಸುಂದರವಾದ ಸೀರೆಯನ್ನು, ತಲೆಗೆ ಮುಡಿಯಲು ಹೂವುಗಳನ್ನು ಕೊಟ್ಟಂತೆ ತನ್ನ ಪತಿಯನ್ನು ಅವಳು ಕಲ್ಪಿಸಿಕೊಳ್ಳುತ್ತಿದ್ದಳು. ಅದರಲ್ಲಿಯೇ ವಿಹರಿಸುವ ಹೆಂಡತಿಗೆ ಏನೋ ಒಳಗೊಳಗೆ ಒಂದು ತರಹದ ಸಂತೋಷ. ಆದರೆ ಇವೆರಡೂ ಒಂದೆಡೆಗೆ ಕೂಡುವ ಸಾಧ್ಯತೆ ಇಲ್ಲವೇ ಇಲ್ಲ. ದಿನಗಳೆದಂತೆ ಗಂಡ-ಹೆಂಡತಿಯ ವಿಚಾರಗಳು ಪರಸ್ಪರ ಡಿಕ್ಕಿ ಹೊಡೆಯತೊಡಗಿದಾಗ ಭ್ರಮೆಯ ಕನಸುಗಳು ಕಳಚಿ ಬೀಳತೊಡಗಿದವು. ಸಿನಿಮಾದಲ್ಲಿಯ ಆದರ್ಶ ಪತ್ನಿ ಗಂಡನ ಎಲ್ಲ ಅಶೋತ್ತರಗಳನ್ನು ಅತ್ಯಂತ ಒಮ್ಮನಸ್ಸಿನಿಂದ ಈಡೇರಿಸುತ್ತಾಳೆ. ಗಂಡ ಆಫೀಸಿಗೆಂದು ಹೊರಡುವಾಗ ಸಿನಿಮಾದ ಪತ್ನಿ ಗಂಡನಿಗೆ ಕೋಟು ತೊಡಿಸುತ್ತಾಳೆ, ನೆಕ್‌ಟಾಯ್ ಸರಿಪಡಿಸುತ್ತಾಳೆ, ಕರವಸ್ತ್ರ ತಂದು ನೀಡುತ್ತಾಳೆ, ಹೀಗೆ ಮಾಡುವಾಗ ಕೊಂಚ ನಾಚಿದಂತೆ ಕಾಣುವ ಅವಳ ಮುಖವನ್ನು ನೋಡಿ ಸಿನಿಮಾದ ಗಂಡ ಒಲವಿನಿಂದ ಅವಳನ್ನು ತನ್ನತ್ತ ಬರಸೆಳೆಯುತ್ತಾನೆ. ಅವಳು ನಾಚಿ ನೀರಾಗಿ ಹಿಂದೆ ಸರಿಯುತ್ತಾಳೆ. ಆದರೂ ಈ ಸುಖ ಬೇಕೆಂಬ ಭಾವನೆ ಅವಳ ಮುಖದಲ್ಲಿ, ಮುಗುಳ್ನಗೆಯಲ್ಲಿ ವ್ಯಕ್ತವಾಗುತ್ತದೆ. ಓಹ್! ಎಂತಹ ಅದ್ಭುತ ದೃಶ್ಯ! ಈ ತರಹದ ಸಂಗತಿಗಳು ಸಿನಿಮಾದಲ್ಲಿ ಮಾತ್ರ ಸಾಧ್ಯ.

ನಮ್ಮ ವಾಸ್ತವ ಬದುಕಿನಲ್ಲಿ ನಾವು ಆಫೀಸಿಗೆ ತೆರಳುವಾಗ ನಮ್ಮ ಹೆಂಡತಿಯಾದವಳು ತನ್ನ ಕೆಲಸದ ಗಡಿಬಿಡಿಯಲ್ಲಿ ನಮ್ಮ ಕುಲಗೋತ್ರಗಳನ್ನು ಉದ್ಧರಿಸುತ್ತ, ಗತಿಸಿ ಹೋದ ಅತ್ತೆ-ಮಾವಂದಿರ ಅವಗುಣಗಳನ್ನು ಎಣಿಸುತ್ತ ತಟ್ಟೆಗೆ ರೊಟ್ಟಿ ಹಾಕುತ್ತಾಳೆ. ನಾವೂ ಗಡಿಬಿಡಿಯಲ್ಲಿ ಇಷ್ಟಾದರೂ ಊಟ ಲಭ್ಯವಾಯಿತಲ್ಲ ಎಂದು ಸಂತಸಪಡುತ್ತಾ ಊಟ ಮಾಡಿ ಮುಗಿಸುತ್ತೇವೆ. ಇನ್ನೇನು ಪಾದರಕ್ಷೆ ಧರಿಸುವ ವೇಳೆಗೆ ಪತ್ನಿ ಧುತ್ತೆಂದು ಗಂಡನ ಮುಂದೆ ಪ್ರತ್ಯಕ್ಷವಾಗುತ್ತಾಳೆ. ‘ನನಗೆ ಈ ತಿಂಗಳು ಹತ್ತು ಸಾವಿರ ರೂಪಾಯಿ ಬೇಕಾಗಿದೆ, ಕೊಡುತ್ತೇನೆಂದು ಕಳೆದ ತಿಂಗಳು ಹೇಳಿ ತಪ್ಪಿಸಿಕೊಂಡಿದ್ದಿರಿ, ಈಗ ನನಗೆ ಹತ್ತು ಸಾವಿರ ರೂಪಾಯಿಗಳು ಬೇಕೇ ಬೇಕು, “ಇಲ್ಲದಿದ್ದರೆ” …….. ಎಂದು ಮಾತು ಮುಗಿಸುತ್ತಾಳೆ. (ಆ ‘ಇಲ್ಲದಿದ್ದರೆ…’ ಎಂಬ ಒಂದು ಶಬ್ದದಲ್ಲಿ ಅನೇಕ ರಹಸ್ಯಗಳು ಅಡಗಿವೆ).  ವಿಧವಿಧವಾದ ಯೋಚನೆಗಳು ಹುಟ್ಟಿಕೊಂಡು, ಬೆದರಿ ನಮ್ಮ ಬಳಿ ಸುಖಿಸಲು ಇಟ್ಟುಕೊಂಡಿದ್ದ ದುಡ್ಡನ್ನು ಕೊಟ್ಟು ವ್ಯಗ್ರ ಮನಸ್ಸಿನಿಂದ ಕಚೇರಿಗೆ ಧಾವಿಸುತ್ತೇನೆ. ಅಲ್ಲಿ ನಮಗೆ ಗೌರವ ಸ್ಥಾನ ಇದೆ, ನಮ್ಮ ಕೆಳಗೆ ಕೆಲಸ ಮಾಡುವ ನೌಕರರ ವರ್ಗವಿದೆ. ಅವರು ಕ್ಯಾಬಿನಿನ ಒಳಗೆ ಬರುವಾಗ ‘ಸಾಹೇಬರ ಮೂಡು ಹೇಗಿದೆ’ ಎಂದು ತಿಳಿದುಕೊಂಡೇ ಒಳಗೆ ಬರುತ್ತಾರೆ. ನಮ್ಮ ಚೆಹರೆಯನ್ನು ನೋಡಿ ಸಾಹೇಬರ ಮೂಡು ಸರಿಯಿಲ್ಲವೆಂದು ತಿಳಿದು ಫೈಲುಗಳಿಗೆ ಸಹಿ ತೆಗೆದುಕೊಳ್ಳಲು ಬಂದ ವ್ಯಕ್ತಿ ಹಾಗೆಯೇ ಹಿಂದಿರುಗುತ್ತಾನೆ. ಮತ್ತೆ ತನ್ನ ಸಹೋದ್ಯೋಗಿಗಳಿಗೆ ಗುಟ್ಟಾಗಿ ಸಾಹೇಬರ ಮೂಡು ಚೆನ್ನಾಗಿಲ್ಲ, ಈಗ ಒಳಗೆ ಹೋದರೆ ನಿಮ್ಮ ಮೇಲೆ ಕಾರಣವಿಲ್ಲದೆ ಬುಸುಗುಡುತ್ತಾರೆ, ಈಗ ಒಳಗೆ ಹೋಗದಿರುವುದೇ ಒಳಿತು ಎಂದು ಸಲಹೆ ನೀಡುತ್ತಾನೆ. ಆದರೆ ಗಂಟೆಗಳು ಕಳೆದಂತೆ ವ್ಯಗ್ರ ಮನಸ್ಸು ಶಾಂತವಾಗತೊಡಗುತ್ತದೆ. ಆ ಸಮಯದಲ್ಲಿ ನನ್ನ ಹಳೆಯ ಮಿತ್ರ ಅಕಸ್ಮಾತಾಗಿ ನನ್ನ ಭೇಟಿಗೆ ಬರುತ್ತಾನೆ. ಬಾಲ್ಯದ ದಿನಗಳನ್ನು ನೆನೆಯುತ್ತಾ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಮುಂದೆ ಫೈಲುಗಳನ್ನು ಸಹಿ ಮಾಡಿಸಲು ಬಂದ ಅಧಿಕಾರಿಗಳೊಂದಿಗೆ ಅವರ ಮನೆಯ ಸುಖ-ದುಃಖ ವಿಚಾರಿಸುವಷ್ಟು ಹೃದಯ ಪ್ರಫುಲ್ಲವಾಗುತೊಡುತ್ತದೆ. ಈ ರೀತಿ ದಿನಗಳು ‘ಪುನರಾವರ್ತನೆಗೊಳ್ಳುವುದೇ ಜೀವನ’ ಎಂಬುದು ಗೊತ್ತಿದ್ದರೂ ಒಂದು ಆ ಕ್ಷಣದಲ್ಲಿ ಮೋಡದಲ್ಲಿ ಮರೆಯಾದ ಸೂರ್ಯನಂತಾಗಿ ಮಸುಕಾಗಿಬಿಡುತ್ತದೆ.

ಮೊನ್ನೆ ನಮ್ಮ ಆಫೀಸಿಗೆ ರಜೆಯ ದಿನವಾಗಿತ್ತು. ಬಹಳ ದಿನಗಳಿಂದ ಪೇಟೆಗೆ ಹೋಗಿರಲಿಲ್ಲ. ಏನೋ ಕೆಲಸ ಮುಂದೆ ಮಾಡಿಕೊಂಡು ಅಲ್ಲಿಗೆ ಹೋಗಿದ್ದೆ. ಒಂದು ಘಟನೆ ನನಗೆ ಗೊತ್ತಿಲ್ಲದಂತೆಯೇ ನಡೆದು ಹೋಯಿತು. ನನ್ನ ಮುಂದೆ ಒಬ್ಬ ಮಹಿಳೆ ಅವಳ ಎದೆಯುದ್ದ ಬೆಳೆದ ಎರಡು ಮಕ್ಕಳೊಂದಿಗೆ ನನ್ನ ಮುಂದೆಯೇ ಸಾಗಿ ಹೋದಳು. ನಾನು ನನ್ನ ವಿಚಾರದಲ್ಲಿ ಮಗ್ನನಾಗಿ ಮುಂದೆ ಸಾಗುತ್ತಿದ್ದೆ, ಮುಂದೆ ಹೋದ ಆ ಮಹಿಳೆ ನನ್ನ ಹೆಸರ ಹಿಡಿದು ಏಕವಚನದಲ್ಲಿ ಕರೆಯತೊಡಗಿದಳು. ಯಾರಿವಳು? ನನ್ನಂತಹ ಅಪರಿಚಿತ ವ್ಯಕ್ತಿಯನ್ನು ಏನೂ ಆಗದಿರುವಂತೆ ಹೆಸರು ಹೇಳಿ ಕರೆಯುತ್ತಿದ್ದಾಳೆ ಎಂದು ತಿರುಗಿ ನೋಡಿದರೆ ಕೆದರಿದ ಬಿಳಿಯ ಕೂದಲಿನ ಆ ಮಹಿಳೆ ನನ್ನತ್ತ ಧಾವಿಸಿ ಬಂದು ‘ನನ್ನ ಗುರ್ತು ಸಿಗಲಿಲ್ಲವೇನೋ’ ಎಂದಳು. ಅವಳ ಮುಖಚರ್ಯೆ ನೋಡಿ ನನಗೆ ನೆನಪಾಯಿತು, ಇವಳು ನನ್ನ ತರಗತಿಯಲ್ಲಿ ಓದುತ್ತಿದ್ದಳು. ನಾನು ಸಾವರಿಸಿಕೊಂಡು ತೊದಲು ನುಡಿಯವ ಮೊದಲು ಅವಳೇ ಮುಂದುವರೆದು ‘ನನ್ನ ಮರೆತಂತೆ ಕಾಣುತ್ತದೆ, ಹೇಗಿದ್ದೀಯೋ? ಇಲ್ಲಿ ಕೆಲಸ ಮಾಡುತ್ತಿರುವೆ ಏನು ಎಂದು ಬಿಟ್ಟುಬಿಡದೇ ಮಾತನಾಡತೊಡಗಿದಳು. ‘ನಿನ್ನ ಮದುವೆಯಾದ ಸುದ್ದಿ ಅವನಿಂದಲೇ ತಿಳಿಯಿತು, ಎಷ್ಟು ಮಕ್ಕಳು? ಹೇಗೆ ನಡೆದಿದೆ ಸಂಸಾರ?’ ಎಂದು ಪ್ರಶ್ನಿಸಿ ನನ್ನ ಪೂರ್ವಾಪರಗಳನ್ನು ಜಾಲಾಡ ತೊಡಗಿದಳು. ನಾನು ತಬ್ಬಿಬ್ಬಾಗಿ ಏನು ಮಾತನಾಡಬೇಕು ಅಂದುಕೊಳ್ಳುವುದರಲ್ಲಿ ತನ್ನ ಮಕ್ಕಳನ್ನು ನನಗೆ ಪರಿಚಯಿಸಿದಳು. ‘ಇವನು ನಿಮ್ಮ ಮಾಮಾ’ ಎಂದಳು. ನನಗೆ ಕೊಂಚ ಬೆವರು ಬರತೊಡಗಿತು. ಇವಳನ್ನೇ ಅಲ್ಲವೇ ನಾನು ಮನದಲ್ಲಿ ಕಲ್ಪಿಸಿಕೊಂಡು ‘ಯೆ ದುನಿಯಾವಾಲೆ ಪೂಛೇಂಗೆ, ಮುಲಾಕಾತ್ ಹುಯಿ, ಕ್ಯಾ ಬಾತ ಹುಯಿ, ಯೆ ಬಾತ ಕಿಸಿಸೆ ನಾ ಕೆಹನಾ’ ಎಂಬ ಪ್ರಣಯಭರಿತ ಹಾಡುನ್ನು ಗುನಗುನಿಸಿ ಸಂತೋಷ ಪಟ್ಟಿದ್ದು. ಈಗ ಅವಳು ತನ್ನ ಮಕ್ಕಳಿಗೆ ‘ನೋಡು ನಿಮ್ಮ ಮಾಮಾನನ್ನು’ ಎಂದು ಧೈರ್ಯದಿಂದ ಹೇಳುತ್ತಿದ್ದಾಳೆ.

ಅವಳ ಬಿಳಿದಾದ ಕೂದಲು, ದಪ್ಪನೆ ಶರೀರ, ಈಗಲೇ ಬಹಳಷ್ಟು ವಯಸ್ಸು ಆದಂತೆ ಕಾಣುವ ಮುಖ  ನೋಡಿ ಪೆಚ್ಚು ನಗೆ ನಕ್ಕು ‘ನಿನ್ನನ್ನು ಮರೆಯುವುದೆಂತು’ ಎಂದೆ. ‘ಇವಳೇನಾದರೂ ಒಂದು ವೇಳೆ….’ ಎಂದು ಮನಸ್ಸು ಕ್ಷಣಕಾಲ ನನ್ನನ್ನು ಆವರಿಸಿ ತಲೆಸುತ್ತಿ ಬಂದಂತಾಯಿತು. ಅಷ್ಟರಲ್ಲಿ ಅವಳ ಪತಿದೇವರು ಅಲ್ಲಿಗೆ ಬಂದರು, ‘ನನ್ನ ಗೆಳತಿ’ ಬಹಳ ಹುರುಪಿನಿಂದ ಹೇಳತೊಡಗಿದಳು, ‘ಇವನೇ ನನ್ನ ಕ್ಲಾಸ್‌ಮೇಟ, ಬಹಳ ಉಡಾಳನಾಗಿದ್ದ, ಆದರೂ ಜಾಣ. ನಮ್ಮ ಮಾಸ್ತರ ಮಗ ಬೇರೆ, ನಾಟಕ ಮಾಡುವುದರಲ್ಲಿ ನಿಸ್ಸೀಮ. ನಾನು ಒಂದು ನಾಟಕದಲ್ಲಿ ಇವನೊಡನೆ ಅಭಿನಯಿಸಿದ್ದೆ.’ ಎಂದು ಬಿಟ್ಟುಬಿಡದೇ ಗಂಡನೆದುರು ನನ್ನ ಪ್ರವರ ಪರಿಚಯಿಸ ತೊಡಗಿದಳು. ಪಾಪ ಗಂಡ, ಅವಳು ಹೇಳುವುದನ್ನು ತಾಳ್ಮೆಯಿಂದ ಕೇಳಿ ನನ್ನನ್ನು ನೋಡಿ ನಸುನಕ್ಕು ‘ನೀವು ಮುಂಬೈಗೆ ಬಂದರೆ ನಮ್ಮ ಮನೆಗೆ ಖಂಡಿತ ಬರಬೇಕು, ನೀವು ಸಾಹಿತಿಗಳು ಎಂದು ನನ್ನವಳು ಆಗಾಗ ಹೇಳುತ್ತಿರುತ್ತಾಳೆ. ಅಲ್ಲಿ ಬಂದಾಗ ನಮ್ಮ ಕರ್ನಾಟಕ ಸಂಘದಲ್ಲಿ ಭಾಷಣ ಏರ್ಪಡಿಸುತ್ತೇನೆ’ ಎಂದು ಹೇಳಿ ತನ್ನ ಹೆಂಡತಿಯ ಕಡೆಗೆ ತಿರುಗಿ ‘ನಿನ್ನ ಖರೀದಿ ಎಲ್ಲವೂ ಮುಗಿಯಿತೇ, ಮುಂಬೈಯಲ್ಲಿ ಎಲ್ಲವೂ ಸಿಗುತ್ತದೆ, ಆದರೆ ಇವಳಿಗೆ ಧಾರವಾಡದಲ್ಲಿ ಖರೀದಿಸಿದಾಗ ಮಾತ್ರ ಸಮಾಧಾನವಾಗುತ್ತದೆ’ ಎಂದ. ನನ್ನ ಹಣೆಬರಹವೂ ಒಂದು ರೀತಯಿಂದ ಅದೇ, ಹೆಂಡತಿಯೊಡನೆ ಬಿರುಬಿಸಿಲಿನಲ್ಲಿ ಸಾಗುವಾಗ ನನ್ನ ಮಕ್ಕಳನ್ನು ಕರೆದುಕೊಂಡು ಹೋಗುವುದೊಂದೇ ನನ್ನ ಕೆಲಸ. ನನ್ನ ಹೆಂಡತಿ “ಈ ಅಂಗಡಿಯಲ್ಲಿಯೇ ನನಗೊಂದು ಸೀರೆ ತೆಗೆದುಕೊಳ್ಳಬೇಕಾಗಿದೆ ಒಳಗೆ ಬರುತ್ತಿರೇನು” ಎನ್ನುತ್ತಾಳೆ. ನಾನಾದರೋ ನನ್ನ ಹೆಂಡತಿ ಖರೀದಿಸುವ ಅನೇಕ ಬಗೆಗಳನ್ನು ಬಲ್ಲವನಾಗಿದ್ದೇನೆ. ಅವಳು ಒಮ್ಮೆ ಸೀರೆ ತೆಗೆದುಕೊಳ್ಳುವುದರಲ್ಲಿ ಅಲ್ಲಿ ಕುಳಿತರೆ ಅವಳು ಅಂಜನ ಹಚ್ಚಿಕೊಂಡು ನಿಧಿಯನ್ನು ಹುಡುಕುವ ತೆರದಿ ಸೂಕ್ಷö್ಮವಾಗಿ ಸೀರೆ ಹುಡುಕತೊಡಗುತ್ತಾಳೆ. ಅವಳ ಮುಂದೆ ರಾಶಿ, ರಾಶಿ ಸೀರೆ ಬಿದ್ದಿದ್ದರೂ ಅವಳಿಗೆ ಒಂದು ಸೀರೆ ಮನಸ್ಸಿಗೆ ಬರುವುದಿಲ್ಲ.

ಆಮೇಲೆ ಏನೂ ಆಗದಿರುವಂತೆ ಅವಳಲ್ಲಿಂದ ಎದ್ದು ಹೊರಡುತ್ತಾಳೆ. ಸೀರೆ ತೋರಿಸುವ ಸೇಲ್ಸಮನ ‘ಇನ್ನೂ ಬೇಕಾದಷ್ಟು ಸೀರೆಗಳಿವೆ ತೋರಿಸಲೇ ಬಾಯರ್ಽ, ಇನ್ನೆರಡು ದಿನದಲ್ಲಿ ಹೊಸ ಸ್ಟಾಕ್ ಬರುವುದಿದೆ, ಆಗ ಬಂದರೂ ಒಳ್ಳೆಯದೇ’ ಎಂದು ರಾಗ ಎಳೆಯುತ್ತಾನೆ. ನನ್ನ ಮನೆಯಾಕೆಗೆ ಯಾಕೋ ಸೀರೆ ಪಸಂದ ಆಗಲಿಲ್ಲ. ಅವಳು ನನಗೆ ಸನ್ನೆ ಮಾಡಿ ಅಲ್ಲಿಂದ ಹೊರಟೇಬಿಡುತ್ತಾಳೆ. ಇಷ್ಟೊತ್ತಿನವರೆಗೆ ಸೋಫಾದ ಮೇಲೆ ಕುಳಿತು ಮಕ್ಕಳನ್ನು ಹೇಗೋ ಆಡಿಸುತ್ತಿದ್ದ ನನಗೆ ಅಲ್ಲಿಂದ ಎದ್ದು ಹೊರಬರಲು ಒಂದು ತರಹದ ಮುಜುಗರ. ‘ಪಾಪ, ಎಷ್ಟೊಂದು ಸೀರೆ ತೋರಿಸಿದ ಅದರಲ್ಲಿ ಒಂದು ನಿನ್ನ ಮನಸ್ಸಿಗೆ ಬರಲಿಲ್ಲವೇ ಮಹಾರಾಯ್ತಿ, ಒಂದಾದರೂ ಸೀರೆ ಕೊಂಡುಕೊಳ್ಳು’ ಎಂದು ಒತ್ತಾಯಿಸುತ್ತೇನೆ. ಅವಳಿಗೆ ನನ್ನ ಮಾತು ಕಿವಿಯ ಮೇಲೆ ಬೀಳುವುದಿಲ್ಲ. ನಾನು ಮಕ್ಕಳನ್ನು ಎಳೆದುಕೊಂಡು ಉರಿಬಿಸಿಲಿನಲ್ಲಿ ನನ್ನ ಮನೆಯಾಕೆಯ ಹಿಂದೆ ಸಾಗುತ್ತೇನೆ. ನನ್ನವಳು ಮತ್ತೊಂದು ಸೀರೆ ಅಂಗಡಿ ಪ್ರವೇಶಿಸುತ್ತಾಳೆ, ನನಗೆ ಅಂಗಡಿಯೊಳಗೆ ಹೋಗಲು ಮನಸ್ಸಾಗುವುದಿಲ್ಲ. ಬಿರು ಬಿಸಿಲಿನಲ್ಲಿಯೇ ಎರಡು ಮಕ್ಕಳೊಂದಿಗೆ ಹೊರಗೆಯೇ ನಿಲ್ಲುತ್ತೇನೆ. ಮಕ್ಕಳು ಫುಟಪಾತಿನ ಮೇಲೆ ಓಡೋಡಿ ಹೋಗುತ್ತಾರೆ. ಅವರಿಗೆ ಏನಾದರೂ ಆದೀತೆಂದು ಅವರ ಹಿಂದೆ ಓಡಿ ಅವರನ್ನು ಹಿಡಿದುಕೊಂಡು ಬಂದು ನಿಲ್ಲಿಸುವುದರಲ್ಲಿಯೇ ಸುಸ್ತಾಗಿ ಹೋಗುತ್ತೇನೆ. ಇದು ನನ್ನೊಬ್ಬನ ಅನುಭವವಲ್ಲ. ಈ ಸುಖವನ್ನು ಸಹಸ್ರ, ಸಹಸ್ರ ನನ್ನಂತಹ ಗಂಡಂದಿರು ಈ ಸುಖ ಈಗಾಗಲೇ ಕಂಡಿದ್ದಾರೆ ಎಂದು ನನಗೆ ಗೊತ್ತು, ಆದರೂ ಯಾರೂ ಹೇಳುವ ಯತ್ನ ಮಾಡಿಲ್ಲ. ಸಂಸಾರ ಅಂದಮೇಲೆ ಇವೆಲ್ಲ ಸಹಜವಾಗಿಯೇ ಇಂತಹ ಘಟನೆಗಳು ನಡೆಯುತ್ತವೆ ಎಂಬ ವೇದಾಂತದಲ್ಲಿ ಇದು ಪ್ರಮುಖ ಅಂಶ.  ಆ ಜೀವನ ವೇದಾಂತಕ್ಕೆ ಮತ್ತೆ ಮತ್ತೆ ಮಣಿಯುತ್ತೇನೆ. ಕೊನೆಗೊಮ್ಮೆ ಮಡದಿ ವಿಜಯದ ನಗೆ ನಗುತ್ತಾ ಕೈಯಲ್ಲಿ ಒಂದು ಚೀಲ ಹಿಡಿದುಕೊಂಡು ಬರುತ್ತಾಳೆ. ಅವಳು ಅಳೆದು ತೂಗಿ ಬೆಲೆ ಕಟ್ಟಿದ ಬಗ್ಗೆ ಹೇಳುತ್ತಾಳೆ. ಅವಳಿಗೇನೋ ಒಂದು ತರಹದ ಯುದ್ಧ ಗೆದ್ದ ವಿಜಯೀ ಭಾವ. ಅವಳ ಮುಖದ ಮೇಲೆ ಲಾಸ್ಯಮಾಡುವುದನ್ನು ನೋಡಿ ಅಂಗಡಿಯವನ ತಾಳ್ಮೆ ಮೆಚ್ಚಿಕೊಳ್ಳುತ್ತೇನೆ.

‘ಈಗಾಗಲೇ ಎರಡು ಗಂಟೆಯ ಹೊತ್ತು, ಮನೆಗೆ ಹೋಗಿ ಅಡುಗೆ ಮಾಡುವಷ್ಷು ತಾಳ್ಮೆ ನನಗೆ ಇಲ್ಲ ಎನ್ನುತ್ತಾಳೆ ನನ್ನ ಪತ್ನಿ. ನನ್ನ ಮಕ್ಕಳು ‘ಪಪ್ಪಾ, ಈ ಹೋಟೆಲಿನಲ್ಲಿ ನಾರ್ಥ ಇಂಡಿಯನ್ನ ಡಿಶ ಚೆನ್ನಾಗಿರುತ್ತದೆ, ಅನ್ನತೊಡಗುತ್ತಾರೆ.’ ನನಗು ಹಸಿವೆಯಾಗಿ ತಾಳ್ಮೆ ಮೀರತೊಡಗಿದೆ. ಹೋಟೆಲನ್ನು ಪ್ರವೇಶಿಸಿ ಒಂದು ಗ್ಲಾಸ್ ನೀರು ಕುಡಿದ ಮೇಲೆ ಜೀವ ಚೇತರಿಸಿಕೊಳ್ಳತೊಡಗುತ್ತದೆ. ಮಕ್ಕಳು ಹೇಳುವ ‘ಸ್ಟಾರ್ಟರ್ಸ’ ಆರ್ಡರ್ ಕೊಡುತ್ತೇನೆ. ಆಮೇಲೆ ಊಟ ಮುಗಿಸಿ ಮನೆಗೆ ಬಂದು ಒಂದು ಗಂಟೆ ವಿರಮಿಸುತ್ತೇನೆ. ಬಿಸಿಲಿನಲ್ಲಿ ಅಡ್ಡಾಡಿ ದಣಿದ ದೇಹ ಚೇತರಿಸಿಕೊಳ್ಳ ತೊಡಗುತ್ತದೆ. ನಮ್ಮ ಮಡದಿಗೆ ಸೀರೆ ತಂದ ಸಂಭ್ರಮದಲ್ಲಿ ನಾನು ಎದ್ದೊಡನೆಯೇ ಬಿಸಿಬಿಸಿ ಚಹಾ ನೀಡುತ್ತಾಳೆ, ದಿನ ಕಳೆಯುತ್ತದೆ. ನಮ್ಮ ಹಿರಿಯುರು ಹೇಳುವ ದಾರ್ಶನಿಕ ಮಾತೊಂದಿದೆ, ಅದುವೇ ‘ಧನ್ಯೋಽ ಗೃಹಸ್ಥಾಶ್ರಮಃ’. ಹೌದು, ಮದುವೆಯಾದ ಮೇಲೆ ನಮಗೆ ‘ತಾಳ್ಮೆ’ ಎಂದರೇನು ಎಂಬುವುದು ಗೊತ್ತಾಗುವುದು. ‘ಮಾನವನಾಗಿ ಹುಟ್ಟಿದ ಮೇಲೆ ಏನೇನು ಮಾಡಿದೆ’ ಎಂದು ದೇವರೇನಾದರೂ ಕೇಳಿದರೆ ನನ್ನ ಉತ್ತರ ‘ನಾನು ಮದುವೆಯಾದೆ’ ಎಂದು ಹೇಳಿದೊಡನೆ ತನ್ನ ಹಣೆಬರಹವೂ ಇದೆ ಎಂಬುದನ್ನು ತಿಳಿದು ನಸುನಗುತ್ತಾ ಮರೆಯಾಗುತ್ತಾನೆ. ಇದುವೇ ಅಲ್ಲವೇ ಮದುವೆ ಆಗುವುದರ ಒಳಗುಟ್ಟು. ನನ್ನ ತಾಯಿ ಅಂದು ಹೇಳಿದ ರಹಸ್ಯದ ಒಳಗುಟ್ಟು. ಏನೇ ಇರಲಿ, ಹೀಗೆ ಹೇಳಿದೊಡನೆ ಮದುವೆ ಆಗುವುದನ್ನು ಬಿಟ್ಟಿದ್ದಾರೆಯೇ. ಮದುವೆಯ ಕಲ್ಯಾಣ ಮಂಟಪಗಳು ದಿನಕ್ಕೊಂದು ಹೊಸ ಹೆಸರುಗಳನ್ನು ಬರೆಯಿಸಿಕೊಂಡು ಹೂವುಗಳನ್ನು ರಾಶಿಯಲ್ಲಿ ಕಾಣುತ್ತಲೇ ಇವೆ, ಕಾಣುತ್ತಲೇ ಇರುತ್ತವೆ. ಕುದುರೆಯ ಮೇಲೆ ಸರದಾರನಂತೆ ಕುಳಿತುಕೊಂಡು ಬರವ ಮದುಮಗ ಪಾಣಿಗ್ರಹಣ ಮಾಡುತ್ತಾನೆ. ಅಂದರೆ ಹೆಂಡತಿಯ ಕೈಯಲ್ಲಿ ತನ್ನ ಕೈಯಿಟ್ಟು ನನ್ನಷ್ಟು ಪರಮಸುಖಿ ಯಾರೂ ಇಲ್ಲ ಎಂದುಕೊಳ್ಳುತ್ತಾನೆ. ಮದುವೇಯಾದ ನಾವು ಇನ್ನೊಂದು ‘ವಿಕೆಟ್’ ಉರುಳಿತು ಎಂದು ಸಂತಸಪಡುತ್ತೇವೆ. ಆದರೂ ಇದು ಪರಿಪೂರ್ಣ ಜೀವನವೆಂಬ ಹಿರಿಯರ ಹಿತವಚನಕ್ಕೆ ತಲೆಬಾಗಿ ನಿಂತುಬಿಟ್ಟಿದ್ದೇನೆ.

 

– ಶ್ರೀನಿವಾಸ ವಾಡಪ್ಪಿ

 

ಏನಾದರೂ ಆಗು ಮೊದಲು ಗೃಹಸ್ಥಾಶ್ರಮಿಯಾಗು ಎಂಬುವ ಈ ಲೇಖನ ಕನ್ನಡದ ಪ್ರಸಿದ್ಧ ಕಸ್ತೂರಿ ಮ್ಯಾಗಜೀನ್‌ ಅಲ್ಲಿ ಪ್ರಕಟವಾಗಿದೆ.

Leave a Reply