ತೃಣಕೆ ಹಸಿರೆಲ್ಲಿಯದು…?
ಬೇರಿನದೇ? ಮಣ್ಣಿನದೇ?
ಆಗ ಎಲ್ಲೆಡೆಯೂ ‘ಕೂಡು ಕುಟುಂಬ’ ಗಳಿದ್ದ ಕಾಲ. ಒಂದು ಮನೆಯಲ್ಲಿ ಕನಿಷ್ಠ ಆರೆಂಟು ಮಕ್ಕಳು.
ಅಡಿಗೆಮನೆ /ದೇವರ ಕೋಣೆ ಅಜ್ಜಿಯ ಸುಪರ್ದಿಯಲ್ಲಿ. ಬಟ್ಟೆ ಒಗೆಯುವ, ಪಾತ್ರೆ ತಿಕ್ಕುವ, ಬಾವಿಯಿಂದ ನೀರು ಸೇದುವ, ಊಟಕ್ಕೆ ಬಡಿಸುವ ಕೆಲಸ ಅವ್ವಂದಿರಿಗೆ. ಕಸಗುಡಿಸುವ, ಊಟದ ತಟ್ಟೆ (ಎಲೆ)ಗಳನ್ನೆತ್ತಿ ಗೋಮಯ
ಹಚ್ಚುವ, ಸಂಜೆ ಕಂದೀಲುಗಳಿಗೆ, ಚಿಮಣಿ ಬುಡ್ಡಿಗೆ ಎಣ್ಣೆ ತುಂಬಿ, ಅವುಗಳ ಗಾಜುಗಳನ್ನು ಒರೆಸಿಡುವ ಕೆಲಸ ಅಕ್ಕಂದಿರ ಪಾಲಿಗೆ. ಹತ್ತು/ ಹನ್ನೆರಡರ ಚಿಕ್ಕ ಬಾಲಕ/ಬಾಲಕಿಯರಿಗೆ ಅಂಗಡಿಗೆ ಓಡಿಹೋಗಿ ತುರ್ತಾಗಿ ಬೇಕಾಗುವ ಅಡಿಗೆ/ಇನ್ನಿತರ ಸಾಮಗ್ರಿಗಳನ್ನು
ತರುವ ಜವಾಬ್ದಾರಿಗಳು. ಸಿಗುವ ಪುಡಿಗಾಸು/ಪೆಪ್ಪರ್ ಮಿಂಟ್ಗಳಿಗಾಗಿ ಎಷ್ಟು ಬಾರಿಯೂ ಅಂಗಡಿಯ ದಂಡಯಾತ್ರೆಗೆ ಮಕ್ಕಳ ಪಡೆ ಸಿದ್ಧ.
ಆಗ ಮಡಿ/ ಮೈಲಿಗೆಯ ಭರಾಟೆ ಜಾಸ್ತಿ. ಥೇಟ್ ‘ ಈಗಿನ ಕೋವಿಡ್ ಕಾಲದ’ ನಿಬಂಧನೆಗಳು. ಕಂಡಲ್ಲೆಲ್ಲ ಅಲೆದು ಬರುವ ಮಕ್ಕಳಿಗೆ ಒಂದು ಮಿತಿಯಲ್ಲೇ ಮನೆಯಲ್ಲಿ ಪ್ರವೇಶ. ಸ್ನಾನ, ಕೈಕಾಲು ಮುಖ ತೊಳೆಯುವುದು,
ಹಿರಿಯರನ್ನು ಕೇಳದೇ ಯಾವುದನ್ನೂ ಮುಟ್ಟುವ ಹಾಗಿಲ್ಲ. ಹಿರಿಯರ ಅಡುಗೆ/ಪೂಜೆ/ಪುನಸ್ಕಾರಗಳಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಇರುತ್ತಿತ್ತು. ಸ್ನಾನ/ ಮಡಿಯುಟ್ಟು ಬಂದರೆ ಮಾತ್ರ ಒಂದು ಹಂತದ ವರೆಗೆ
ಪ್ರಮೋಶನ್ ಸಿಗುತ್ತಿತ್ತು.
ವೇಳೆ ಸಿಗುತ್ತದೆ ಎಂದು ಮಕ್ಕಳು ತಮಗೆ ಬೇಕಾದ್ದು ಮಾಡಿಕೊಳ್ಳುವ ಸ್ವಾತಂತ್ರ್ಯ ಊಹುಂ…
ಸದಾ ಒಂದು ರೀತಿಯ ಕಣ್ಣಿಗೆ ಕಾಣದ ಮೂಲೆಯಿಂದ ನಿಗರಾನಿ. ಥೇಟ್ CC tv ಅಳವಡಿಸಿದ ಹಾಗೆ… ಹುಡುಗಿಯರು ಹಿರಿಯರ ಕಣ್ಣು ತಪ್ಪಿಸಿ ಅಷ್ಟಿಷ್ಟು ಅಲಂಕಾರ ಮಾಡಿಕೊಂಡರೆ, ಮನೆಗೆ ಬರುವ ಮೊದಲು ಎಲ್ಲಾ ತೊಳೆದು ಒರೆಸಿಕೊಂಡು ಸುಭಗರಾಗಿ
ಮನೆಗೆ ಹಿಂದಿರುಗಬೇಕು. ಹಾಗಿತ್ತು ಪರಿಸ್ಥಿತಿ.
ಹಾಗೆಂದು ಮನೆಯ ಗ್ರಹಿಣಿಯರಿಗಾದರೂ ಸಂಪೂರ್ಣ ಸ್ವಾತಂತ್ರ್ಯವಿತ್ತು ಎಂದರ್ಥವಲ್ಲ . ತಮ್ಮ ತಮ್ಮ ನಿಗದಿತ ಕೆಲಸಗಳನ್ನು ಅನಿವಾರ್ಯವೋ/ ಅವಶ್ಯಕವೋ ಮಾಡಬೇಕು. ಆದರೆ ಈ ರೀತಿಯ ಶಿಸ್ತನ್ನು ಪಾಲಿಸಿದಾಗ ಸಹಜವಾಗಿಯೇ ಎಲ್ಲರಿಗೂ ಕೆಲಸ/ ವಿರಾಮ ಎರಡೂ ಸಿಗುತ್ತಿದ್ದವು. ಒಬ್ಬರಿಗೊಬ್ಬರು ಕೆಲಸದಲ್ಲಿ ಸಹಾಯ ಮಾಡುವುದು ಸಾಮಾನ್ಯ ಸಂಗತಿಯಾಗಿತ್ತು. ಸಣ್ಣಪುಟ್ಟ ತಕರಾರುಗಳು ಇರಲಿಲ್ಲವೆಂದಲ್ಲ. ಆದರೆ ಅವು ಹಿರಿಯರ ಹೆದರಿಕೆ/ ಕಣ್ಣಳತೆಯಿಂದಾಗಿ ದೊಡ್ಡವಾಗದೇ ಚೂರುಪಾರು ಸದ್ದು ಮಾಡಿ ಕಾಣದೇ ಮರೆಯಾಗುತ್ತಿದ್ದವು. ಮನೆತನದಲ್ಲಿ ಇರುವ ಅಭಾಗಿನಿಯರಿಗೆ/ ನಿರುದ್ಯೋಗಿಗಳಿಗೆ ಏನೋ ಒಂದು ಆಸರೆಯ ಅಭಯ ಹಸ್ತವಿರುತ್ತಿತ್ತು.
ದೇಶಪಾಂಡೆ, ದೇಸಾಯಿ, ಇನಾಮದಾರ ಇಂಥ ಕೆಲವು ದೊಡ್ಮನೆ ಯವರನ್ನು ಬಿಟ್ಟರೆ ಮನೆಗಳು ಚಿಕ್ಕವು. ಮಕ್ಕಳ ಸಂಖ್ಯೆ ಜಾಸ್ತಿ. ಎಲ್ಲರಿಗೂ ಪಡಸಾಲೆಯಲ್ಲಿ ಒಂದು ದೊಡ್ಡ ಜಮಖಾನೆಯ ಹರಿ ಹಾಸಿಗೆ.( ಏಕ ಹಾಸು). ಸಮಪಾಲು/ಸಮಬಾಳು.
ಮನೆಮಕ್ಕಳ ಜೊತೆ ಜೊತೆಗೆ ಊರಿಂದ ಬಂದವರು, ಗೆಳೆಯ/ ಗೆಳತಿಯರು ಎಂಬ ಭೇದಭಾವ ಕಾಣದ ಬದುಕು. ಆಗಾಗ ಮಕ್ಕಳನ್ನೆಲ್ಲ ಒಗ್ಗೂಡಿಸಿ ‘ಕೈ ತುತ್ತಿನ’ ಸಡಗರ. ಉಳಿದ/ಮಾಡಿದ ಅನ್ನ, ಸಾಂಬಾರ್, ಕಲಿಸಿ ಉಂಡೆ ಮಾಡಿ ಒಬ್ಬೊಬ್ಬರ ಅಂಗೈಗೆ ಹಾಕುವುದು. ನಂತರ ಬುತ್ತಿ. ‘ಸಹನಾ ವವತು, ಸಹನೌ ಭುನಕ್ತು ‘ದ ಪಾಠ ಆಗಾಗ.
ಮಾಧ್ಯಮಿಕ ಶಾಲೆ ಊರಿನ ಹೊರವಲಯದಲ್ಲಿ ಇತ್ತು. ಅದು ನಮ್ಮ ಮನೆಯಿದ್ದ ಕೋಟೆಯ ಭಾಗದಿಂದ ಕನಿಷ್ಠ ಮೂರು ಕಿಲೋಮೀಟರ್ಳಗಷ್ಟು ದೂರ. ಊರಿಗೇ ಜಾಸ್ತಿ ಬಸ್ ಗಳು ಇರದ ಕಾಲ. ಸ್ಕೂಲಿಗೆಲ್ಲಿಂದ ಬರಬೇಕು?
ನಾವು ಚಪ್ಪಲಿ ಮೆಟ್ಟಿದ್ದು ನಾವು ಧಾರವಾಡಕ್ಕೆ PUC ಗೆ
ಬಂದ ನಂತರವೇ. ಬರಿಗಾಲಿನಲ್ಲಿ ನಡೆದು ಶಾಲೆ ತಲುಪಬೇಕು. ‘ಮಳೆಯಾದರೇನು…ಬಿಸಿಲಾದರೇನು’- ಎಂದು ರಾಜಕುಮಾರ್ ಹಾಡಿರುವ ಮೊದಲೇ ನಾವೇ ಮಾಡಿಕೊಂಡಿದ್ದರಿಂದ ಬಹುದು ಬಹುಶಃ…ಹಿರಿಯರ ಮುಸುರೆ- ಎಂಜಲಿನ ಪರಿಕಲ್ಪನೆಯಿಂದಾಗಿ ಊಟದ ಡಬ್ಬಿ ನಮ್ಮ ಪಾಲಿಗೆ ‘ ತಿರುಕನ ಕನಸು’ . ಹಸಿವೆ ಹೆಚ್ಚಾದರೆ ಮತ್ತೆ ಮಧ್ಯಂತರದಲ್ಲಿ ಮನೆಗೆ ಬಂದು ಕೊಟ್ಟದ್ದು ತಿಂದು ಶಾಲೆಗೆ ವಾಪಸ್…
ಆದರೆ ಒಂದು ಮಾತು.
ಇಷ್ಟೆಲ್ಲಾ ಹೇಳಿದ ಮೇಲೆ ಒಂದು ಮಾತು ಹೇಳಲೇಬೇಕು. ಆ ದಿನಗಳೇ ನಮ್ಮ ಬದುಕಿನ ಅತಿ ಸುಂದರ ದಿನಗಳು.
ಪುಟ್ಟ ಪುಟ್ಟ ಆಸೆಗಳು,
ಪುಟ್ಟ ಪುಟ್ಟ ಕನಸುಗಳು… ದ್ವೇಷವಿಲ್ಲ, ಈರ್ಷೆಯಿಲ್ಲ, ಹೆಚ್ಚು ನಿರೀಕ್ಷೆಗಳಿಲ್ಲ, ನಿರಾಶೆಗಳಿಲ್ಲ,
ಕುತಂತ್ರಗಳಿಲ್ಲ.
ಶುದ್ಧ ಅಂತಹಕರಣವಿದ್ದ, ಬದ್ಧತೆಯಿಲ್ಲದ
ಆರಾಮದ ಜೀವನ.
ನಂತರದ ದಿನಗಳಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚೇ ಸಿಕ್ಕಿದೆ. ಆದರೆ ಅದಕ್ಕೆ ಬೇಡದ ಬಹಳಷ್ಟು ‘ಸುಂಕ’ವನ್ನೂ ತೆತ್ತಾಗಿದೆ. ಬದುಕೇ ಹಾಗಲ್ಲವೇ?
ಹುಲ್ಲಿನ ಹಸಿರಿಗೆ ಕಾರಣಗಳೇನು? ಭೂಮಿಯೇ?
ಬೀಜವೇ?
ನೀರೇ?
ಹವೆಯೇ?
ಸೂರ್ಯನೇ?
ನಿಮ್ಮ ಕಣ್ಣು ನೋಟವೇ?ಭಗವಂತನ ಆಟವೇ? ‘ಎಲ್ಲವೂ’ ಎಂಬುದೇ ಉತ್ತರ ತಾನೇ?
ಹಾಗೆಯೇ ನಮ್ಮ ಬಾಲ್ಯದ ಬದುಕು…
ಅನೇಕ ರಸಗಳ ಗಟ್ಟಿ ಪಾಕ.
ಅದರಲ್ಲೂ ಎಲ್ಲವೂ ಇದೆ, ಇರಲೇಬೇಕು.
ಅಂದಾಗಲೇ ಅದು,
ಬದುಕು…
( ಶೀರ್ಷಿಕೆ ಕೃಪೆ: ಕಗ್ಗ)