ಅಹಲ್ಯ

ಅಹಲ್ಯ

ಕಾರ್ಗತ್ತಲಿನ ಮರೆಯಲಿ
ಬೀಸುತಿಹ ಸುಳಿಗಾಳಿಯಲಿ
ಗೌತಮನ ಶಾಪ
ಶಿಲೆಯಾಗಿಸಿಹುದು
ಬಿರುಬಿಸಿಲಿಗೂ ಮಳೆಗಾಳಿಗೂ
ಕಡು ಚಳಿಗೂ ಅಲುಗಾಡದೆ
ನಿಂತಲ್ಲೇ ನಿಂತಿಹಳು
ತಾ ಮಾಡದ ಪಾಪಕೆ
ಇಂದ್ರನ ಕುಟೀಲತೆಗೆ

ಮನ ಮಿಡುಕುತಿಹಳು
ರಾಮನ ಬರುವಿಗೆ
ಇದಿರು ನೋಡುತ್ತಿರೆ
ಯುಗಗಳೇ ಕಳೆದಿವೆ
ಪ್ರತೀಕ್ಷೆ ಹುಸಿಯಾಗದೇ
ಪರೀಕ್ಷೆ ಎದುರಾಗಿದೆ
ಕಾಲನ ಅಣತಿಗೆ
ಕೊನೆಎಂಬುದಿದೆ
ತನ್ನ ಸತಿಯ
ವಿರಹ ಸಹಿಸದೆ
ರಾಮ ಬಂದಿಳಿದ ಕಾಡಿಗೆ
ಶಿಲೆಯಲ್ಲೂ ಪ್ರತಿಮೆ ಇದೆ
ಎಂಬುದ ಮನಗಾಣದೆ
ಸ್ಪರ್ಶಿಸಿದ ಹರ್ಷಿಸಿದ

ಶಿಲೆಯು ಪ್ರತಿಮೆಯಾಯ್ತು
ಪ್ರತಿಮೆ ಜೀವ ತಳೆಯಿತು
ಜೀವದ ಎಳೆಯಲಿ
ಮುಕ್ತಿಯ ಪಥವ ಹಾಡಿತು
ಶಿಲೆಯ ಶಾಪ ಕರಗಿ
ಸುಂದರ ಸ್ತ್ರೀ ತಾನಾಗಿ
ನಿಂತಿಹಳು ಅಹಲ್ಯ
ತನ್ನ ಶಾಪದ ಕಳೆದ
ಶ್ರೀರಾಮನಿಗೆ ವಂದಿಸುತಾ
ನಡೆವಳು ತನ್ನ ಪತಿಯ ಸೇರಲು
ಯುಗಗಳೇ ಕಳೆದರೂ
ಬದಲಾಗಲಿಲ್ಲ ಸ್ತ್ರೀಯ ಬವಣೆ
ಅಂದು ಅಹಲ್ಯ ಸೀತೆಯ ಬವಣೆ
ಇಂದು ನಿರ್ಮಲೆ ಗೀತೆಯರ ಆಲಾಪನೆ
ಇತಿಹಾಸವು ಬದಲಾದರೂ
ಯುಗ ಯುಗಗಳೇ ಬದಲಾದರೂ
ಬದಲಾಗಲಿಲ್ಲ ಹೆಣ್ಣಿನ ಅಳಲು
ಪುರುಷ ಪ್ರಾಬಲ್ಯದೆದುರು
ಮುಗಿಯಲಿಲ್ಲ ಆಕೆಯ ಪಡಿಪಾಟಲು

Leave a Reply