ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ…!
ಯ್ಯಾಂಟ್ ಲಯನ್ ಎಂಬ ಇರುವೆಗಳ ಸಿಂಹ ಸ್ವಪ್ನ ಬಳಕೆಯ ಮಾತಿನ ‘ಗುಬ್ಬಚ್ಚಿ ಹುಳ’ ನೆಲದೊಡಲನ್ನು ಮುಳ್ಳಿನಂಥ ತನ್ನ ಕೊಂಬಿನಿಂದ ಸಟಸಟನೆ ಬಗೆಯುವುದನ್ನು ನೋಡಿದರೆ, ಮಾನವ ನಿರ್ಮಿತ ಯಾವುದೋ ಯಂತ್ರಕ್ಕೆ ಸಡ್ಡು ಹೊಡೆಯುವಂತೆ ಭಾಸವಾಗುತ್ತದೆ. ಯರ್ರಾಬಿರ್ರಿಯಾಗಿ ಕುಣಿತೋಡದೇ, ಒಂದು ನಿರ್ದಿಷ್ಟ ಜಾಗದಲ್ಲಿ ಹಲವಾರು ಕುಣಿಗಳನ್ನು ಒಂದು ಹದದಲ್ಲಿ ನಿರ್ಮಿಸುವ ಇವುಗಳ ತಾಂತ್ರಿಕತೆ, ತಲ್ಲೀನತೆಗಳು ವಿಸ್ಮಯಗೊಳಿಸುವುದಂತೂ ನಿಜ.
ಈ ಜಗತ್ತು ವಿಸ್ಮಯಗಳ ಗೂಡು. ನಾವು ಯೋಚಿಸಲೂ ಆಗದಂತಹ ಅನೇಕ ಅಚ್ಚರಿಗಳನ್ನು ನಿಸರ್ಗ ಇಲ್ಲಿ ಸೃಷ್ಟಿಸಿದೆ. ಒಂದು ಚಿಕ್ಕ ಕೀಟದ ಜೀವನ ಚಕ್ರವನ್ನೇ ಆಸಕ್ತಿಯಿಂದ ಗಮನಿಸುತ್ತ ಹೋದರೆ ಸಾಕು ಅಚ್ಚರಿಯ ಅಮೋಘ ಲೋಕವೊಂದು ನಮಗರಿವಿಲ್ಲದಂತೆ ಅನಾವರಣಗೊಳ್ಳುತ್ತ ಹೋಗುತ್ತದೆ. ಮನೆಯ ಸುತ್ತ ಒಂದು ಸುತ್ತು ಬಂದರೂ ಸಾಕು ಹಲವಾರು ಕೀಟಗಳು ಕಣ್ಣಿಗೆ ಬೀಳುತ್ತವೆ. ಅದರಲ್ಲೂ ಮನೆಯ ಅಕ್ಕ ಪಕ್ಕ ನೆಲದಲ್ಲಿ ಅಲ್ಲ ಲ್ಲಿ ಹಲವಾರು ಆಲಿಕೆಯಾಕಾರದ ಚಿಕ್ಕ , ಚಿಕ್ಕ ಕುಳಿಗಳು ಇರುವುದು ಸಾಮಾನ್ಯವಾಗಿ ಗಮನಿಸಿದರಬಹುದು. ಇದನ್ನು ‘ಗುಬ್ಬಚ್ಚಿ ಗೂಡು’ ಎನ್ನುತ್ತಿದೆವು. ಈ ಆಲಿಕೆಯಾಕಾರದ ಗೂಡಿನ ತಳಭಾಗದಲ್ಲಿ ಚಿಕ್ಕ ಕೀಟವೊಂದು ಅವಿತು ಹೊಂಚು ಹಾಕುತ್ತಿರುತ್ತದೆ. ಆದರೆ ನಮ್ಮ ಹುಬ್ಬಚ್ಚಿ ಎಂಬ ಪುಟ್ಟ ಪಕ್ಷಿಗೂ ಈ ಪುಟ್ಟ ಕೀಟಕ್ಕೂ ಏನೇನು ಸಂಬಂಧವಿಲ್ಲ.
ಚಿಕ್ಕವರಿದ್ದಾಗ ‘ತೋಡ್, ತೋಡ್. ಗುಬ್ಬಚ್ಚಿ…. ಬಾಗಿಲು ತೆಗೆಯೇ ಗುಬ್ಬಚ್ಚಿ….! ಎನ್ನುತ್ತ ಚಿಕ್ಕ ಕಡ್ಡಿಯಿಂದ ಕೀಟವನ್ನು ಹೆಕ್ಕಿ ತೆಗೆದು ಅಂಗೈಮೇಲೆ ಬಿಟ್ಟು ಆಡಿಸುವುದು ಮಲೆನಾಡಿನಲ್ಲಿ ಹುಟ್ಟಿ ಬೆಳೆದವರಿಗೆಲ್ಲ ಈ ಹೋತ್ತಿಗೂ ನೆನಪಿನಲ್ಲಿರಬಹುದಾದ ಹುಡುಗಾಟಿಕೆ. ಬಾಲ್ಯದ ತುಂಟಾಟವೆಂದರೇ ಅದು ಸದಾ ಸ್ಮರಣೀಯ; ಅದು ಮನುಷ್ಯ ಜೀವನದ ಒಂದು ಸುಂದರ ಅನುಭವ ಆಮಾತು ಬೇರೆ. ವಿಷಯಕ್ಕೆ ಬರುವುದಾದರೆ ಬಳಕೆಯ ಮಾತಿನಲ್ಲಿ ‘ಗುಬ್ಬಚ್ಚಿ ಹುಳ’ ಎಂದು ಕರೆಯುವ ಈ ಕೀಟವನ್ನು ‘ಆಂಟ್ ಲಯನ್’ ಎಂದು ಕರೆಯುತ್ತಾರೆ. ವೈಜ್ಞಾನಿಕ ಹೆಸರು ( Myrmeleontidae) ಈ ಕೀಟ ಗೂಡು ಕಟ್ಟುವ ಬಗೆ ಕುತೂಹಲಕರ. ಒಂದು ಇಂಚಿನಷ್ಟು ವ್ಯಾಸ ಮತ್ತು ಅಷ್ಟೇ ಆಳವನ್ನು ಹೊಂದಿರುವ ಆಲಿಕೆಯ ಆಕೃತಿಯ ಕುಳಿಯನ್ನು ತೋಡುತ್ತದೆ.
ಗೂಡುಗಳು ಗುಂಪು ಗುಂಪಾಗಿ ಇರುವುದು ವಿಶೇಷ. ಆಲಿಕೆ ಆಕಾರದ ಗೂಡಿನ ತಳಭಾಘದಲ್ಲಿ ಅಡಗಿ ಕೂತು ಹೊರಭಾಗಕ್ಕೆ ದವಡೆಗಳನ್ನು ಮಾತ್ರ ಚಾಚಿ ಬೇಟೆಗೆ ಹೊಂಚು ಹಾಕುತ್ತಿರುತ್ತದೆ. ಇರುವೆ ಅಥವಾ ಇತರ ಸಣ್ಣ ಕೀಟಗಳು ಈ ಆಲಿಕೆಯೊಳಗೆ ಆಕಸ್ಮಾತಾಗಿ ಜಾರಿ ಬಿದ್ದಾಗ ಅವನ್ನು ಹಿಡಿದು ತನ್ನ ಬಲವಾದ ದವಡೆಗಳ ಸಹಾಯದಿಂದ ಅವುಗಳ ರಸವನ್ನು ಹೀರುತ್ತವೆ. ಇವು ಎಷ್ಟು ವೇಗವಾಗಿ ದಾಳಿ ಮಾಡುತ್ತವೆ ಅಂದರೆ ಒಮ್ಮೆ ಯಾವುದೇ ಚಿಕ್ಕ ಕೀಟ ಕುಳಿಯೊಳಕ್ಕೆ ಜಾರಿ ಬಿದ್ದರೂ ಮತ್ತೆ ಅದು ತಪ್ಪಿಸಿಕೊಳ್ಳುವುದು ದೂರದ ಮಾತು.
ಗೂಡು ಕಟ್ಟುವುದರಲ್ಲಿ ಆ ಕೀಟಕ್ಕೆ ಅದೆಂಥಾ ಆಸಕ್ತಿ ಅದೆಷ್ಟು ಶ್ರದ್ಧೆ. ನಿಜಕ್ಕೂ ಅಚ್ಚರಿಯಾಗುತ್ತದೆ. ಆಲಿಕೆ ಯಾಕಾರದ ಗೂಡನ್ನು ಕಟ್ಟುತ್ತ ಅತೀ ನುಣುಪಾದ ಜಾರುವ ಮಣ್ಣನ್ನು ಮಟ್ಟಸವಾಗಿ ಗೂಡಿನ ಒಳಮೈಗೆ ಲೇಪಿಸಿ ಸಣ್ಣ ಕದಲೀವಿಕೆಗೂ ಬಲಿ ( Prey) ಒಳ ಜಾರಿ ಬೀಳುವಂತೆ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಅದರ ‘ಟೆಕ್ನಿಕ್ ಗೊಂದು ಸಲಾಮ್ ಹೇಳಲೇಬೇಕು. ಕೆಲವೇ ಗಳಿಗೆಗಳ ಒಳಗೆ ಅದೆಂಥ ಆಕರ್ಷಕವಾದ ನವಿರಾದ, ಗೂಡನ್ನು ಅದು ಕಟ್ಟಿಬಿಡುತ್ತದೆ…! ಮುಳ್ಳಿನಂಥ ತನ್ನ ಕೊಂಬಿನಿಂದ ಸಟಸಟನೆ ನೆಲ ಬಗೆಯುವುದನ್ನು ನೋಡಿದರೆ, ಮಾನವ ನಿರ್ಮಿತ ಯಾವುದೋ ಯಂತ್ರಕ್ಕೆ ಸಡ್ಡು ಹೊಡೆಯುವಂತೆ ಭಾಸವಾಗುತ್ತದೆ. ಯರ್ರಾಬಿರ್ರಿಯಾಗಿ ಕುಣಿ ತೋಡದೇ ಒಂದು ನಿರ್ದಿಷ್ಟ ಜಾಗದಲ್ಲಿ ಹಲವಾರು ಕುಣಿಗಳನ್ನು ಒಂದು ಹದದಲ್ಲಿ ನಿರ್ಮಿಸುವ ಇವುಗಳ ತಾಂತ್ರಿಕತೆ ತಲ್ಲಿನತೆ ವಿಸ್ಮಯಗೊಳಿಸುವುದಂತೂ ನಿಜ.
ಭಯಂಕರ ರಾಸಾಯನಿಕಗಳನ್ನು ಪ್ರಯೋಗಿಸಿ ಸಾರಾ ಸಗಟಾಗಿ ಇಡೀ ಕೀಟ ಸಮೂಹವನ್ನೇ ನಾಶ ಮಾಡಲು ಸನ್ನದ್ಧನಾಗಿ ನಿಂತ ಮನುಷ್ಯ ಹಾನಿಕಾರಕ ಕೀಟಗಳನ್ನು ನಿಯಂತ್ರಿಸುತ್ತಲೇ ಉಪಕಾರಿ ಕೀಡಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಜರೂರಿನತ್ತಲೂ ಯೋಚಿಸಬೇಕಿದೆ. ಜೈವಿಕ ಕೀಟಗಳನ್ನು ಗುರುತಿಸುವುದಲ್ಲದೆ, ಅವುಗಳ ಉಪಯೋಗ ಹಾಗೂ ರಾಸಾಯನಿಕ ಬಳಸದೇ ಜೈವಿಕ ನಿಯಂತ್ರಕಗಳನ್ನು ಬಳಸಿ ಬೆಳೆಗಳಿಗೆ ದಾಳಿ ಮಾಡುವ ಹಾನಿಕಾರಕ ಕೀಟಗಳನ್ನು ನಿಯಂತ್ರಿಸುವ ವಿಧಾನ ಉಪಯುಕ್ತ ಕೀಟಗಳ ಸಂರಕ್ಷಣೆ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡುವ ಕೆಲಸವಾಗಬೇಕಿದೆ. ಕಡಿಮೆ ಖರ್ಚಿನ ಆಸೆಯಿಂದಲೋ ಆಳುಗಳ ಕೊರತೆ ಯಿಂದಲೋ ರಾಸಾಯಣಿಕ ಕೀಟನಾಶಕಗಳ ಬಳಕೆ ಪ್ರಾರಂಭಿಸಿ ಬಿಟ್ಟಿದ್ದೇವೆ. ಈಗ ಹಾನಿಕಾರಕ ಕೀಟಗಳು ಯಾವ ಔಷಧಕ್ಕೂ ಬಗ್ಗುತ್ತಿಲ್ಲ. ನಾವೀಗ ಹಿಂದಿನ ನಿಯಂತ್ರಣ ವಿಧಾನಕ್ಕೆ ಹೋಗುವ ಚಿಂತನೆಯಲ್ಲಿ ತೊಡಗಿದ್ದೇವೆ!
ಹೊಸ್ಮನೆ ಮುತ್ತು