ಹೀಗೊಂದು ಹಗಲು

ಹೀಗೊಂದು ಹಗಲು ( day light)…
” ಈ ಕೋವಿಡ್ ಸಮಯದಲ್ಲಿ ಅನೇಕ ಬಂಧು-ಬಳಗದವರನ್ನೋ, ಆತ್ಮೀಯರನ್ನೋ, ದೂರದ ಸಂಬಂಧಿಗಳನ್ನೋ, ಸ್ನೇಹಿತರನ್ನೋ ಕಳೆದು ಕೊಂಡಿರುತ್ತೀರಿ. ಆಗ ನಿಮ್ಮ ಬದುಕು ಹೇಗಿರುತ್ತದೆ? ನೀವು ನಿಮ್ಮನ್ನು ಹೇಗೆ ಸಂಭಾಳಿಸುತ್ತೀರಿ? ” ಅಂತೆಲ್ಲಾ ಪರಿಚಯಸ್ಥರು ಕೇಳುತ್ತಲೇ ಇರುತ್ತಾರೆ.
ತಕ್ಷಣಕ್ಕೆ ಏನು ಉತ್ತರಿಸಬೇಕೆಂದು ನನಗೆ ತೋಚುವುದಿಲ್ಲ. ನಮ್ಮ ದುಃಖ ಆ ದಿನಕ್ಕೆ, ಆ ಕ್ಷಣಕ್ಕೆ ಹೇಗಿರಬೇಕೋ ಹಾಗಿರುತ್ತದೆ ಅಷ್ಟೇ. ನಿನ್ನೆ ತುಂಬಾ ಖಿನ್ನಳಾಗಿದ್ದೆ, ಈ ದಿನ ಕೊಂಚ ಪರವಾಗಿಲ್ಲ, ನಾಳೆ ಹೇಗಿರುತ್ತದೋ ನನಗೇ ಗೊತ್ತಿಲ್ಲ … ಹೀಗೆ ನಮ್ಮ ಉತ್ತರ ಗಳಿರುತ್ತವೆ/ ಇರಬಹುದು. ದುಃಖ ಅಂದರೇನು ಎಂಬುದು ನಿಜವಾಗಿ ನನಗೆ ಈಗೀಗ ಸ್ವಲ್ಪ ಅರ್ಥವಾಗುತ್ತಿದೆ.
‌‌ ‌ ದುಃಖವೆಂಬುದೂ
ಒಂದು ಅನಿಯಂತ್ರಿತ ಶಕ್ತಿಯ ರೂಪ. ಅದನ್ನು ನಿಯಂತ್ರಿಸುವದಾಗಲೀ, ಶಬ್ದಗಳಲ್ಲಿ ಅದನ್ನು ವಿವರಿಸುವದಾಗಲೀ ಶಕ್ಯವಿಲ್ಲದ ಮಾತು.ಅದು ಅನುಭವಕ್ಕೆ ಮಾತ್ರ ಸಿಗುವಂಥದು. ತನಗೆ ಬೇಕಾದಂತೆ, ಬೇಕಾದಾಗ ಕಾಣಿಸಿಕೊಳ್ಳುತ್ತದೆ, ಯಾವಾಗೆಂದರೆ ಆಗ ತಂತಾನೇ ಶಮನವಾಗುತ್ತದೆ. ಅದೆಂದಿಗೂ ನಿಮ್ಮ ಮರ್ಜಿಗನುಗುಣವಾಗಿ ನಡೆಯುವುದಿಲ್ಲ. ಅದು ನಡೆಯುವುದು ತನ್ನಿಚ್ಛೆಯಂತೆ ಮಾತ್ರ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಥೇಟ್ ಪ್ರೀತಿಯ ಹಾಗೆಯೇ. ಪ್ರೀತಿಯ ವಿಷಯದಲ್ಲಿ ನಾವು ಹೇಗೆ ಏನನ್ನೂ ಮಾಡಲು ಸಾಧ್ಯವಿಲ್ಲವೋ ಥೇಟ್ ಹಾಗೆಯೇ ದುಃಖದ ವಿಷಯ ಕೂಡ. ಸಂಪೂರ್ಣ ವಿಧೇಯರಾಗಿ ಅದರೆದುರು ಮಂಡಿಯೂರಿ ಶರಣಾಗುವುದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ ಎಂದು ಅರಿತಾಗ
ಮಾತ್ರ ಅದು ನಮ್ಮ ಸೂಕ್ತ ಪ್ರತಿಕ್ರಿಯೆಯಾಗಿ ಅಥವಾ ಪ್ರಾರ್ಥನೆಯಾಗಿ ಪರಿವರ್ತನೆಗೊಳ್ಳಲು ಸಾಧ್ಯ…
ಅದು ಒಮ್ಮೆ ಸಾಧ್ಯವಾದರೆ ದುಃಖ ನಮ್ಮೊಂದಿಗೆ ಸಂಭಾಷಿಸಲು ಶುರು ಮಾಡುತ್ತದೆ. ನಮ್ಮ ಪ್ರೀತಿಯನ್ನು ವಿಶ್ಲೇಷಿಸುತ್ತದೆ, ಎಷ್ಟು ನಿಜ ಎಂಬುದರ ಅರಿವು ಮಾಡಿಸುತ್ತದೆ, ಬಿಟ್ಟು ಹೋದ ಆತ್ಮೀಯರು ಮುಂದೆಂದೂ ಬರುವುದಿಲ್ಲ, ಅವರ ನಗೆ ,ಮಾತು, ಸ್ಪರ್ಶ ನಮಗಿನ್ನು ಸಿಗುವುದಿಲ್ಲ ಎಂಬುದನ್ನು ಮನಗಾಣಿಸುತ್ತದೆ.
ನಮ್ಮನ್ನು ಮೀರಿದ ಶಕ್ತಿಯದುರು ನಾವು ಅಸಹಾಯಕರು, ಅದರೆದುರು ಮಂಡಿಯೂರಿ ಶರಣಾಗುವದೊಂದೇ ನಮಗೆ ಉಳಿಯುವ ಮಾರ್ಗವೆಂದು ಬುದ್ಧಿ ಹೇಳುತ್ತದೆ
ನಮ್ಮನ್ನು ಬಿಟ್ಟು ಹೋದವರು ನಂತರ ಎಲ್ಲಿ ಹೋಗುತ್ತಾರೆ? ಹೇಗೆ ಇರುತ್ತಾರೆ ಎಂಬುದರ ಅರಿವು ನಮಗಾಗುವದಿಲ್ಲ, ಆಗಿ ಪ್ರಯೋಜನವೂ ಇಲ್ಲ…
ನಮಗೆ ಗೊತ್ತಿರಬೇಕಾದದ್ದು ಒಂದೇ :
ನಾವು ನಮ್ಮನ್ನು
ಬಿಟ್ಟು ಹೋದವರನ್ನು ತುಂಬ ಪ್ರೀತಿಸುತ್ತಿದ್ದೆವು,ಈಗಲೂ ಪ್ರೀತಿಸುತ್ತೇವೆ, ಮುಂದೆಯೂ ಈ ಪ್ರೀತಿ ಮಾಸುವುದಿಲ್ಲ, ಅದು ಸದಾ ಸದಾ ಹಸಿರೇ…ಅವರನ್ನು ಪ್ರೀತಿಸುವ ಅವಕಾಶ ಬದುಕಿನಲ್ಲಿ ಒಮ್ಮೆ ಸಿಕ್ಕಿತ್ತು ಎಂಬ ಮಾತು ಸಹ ಸಣ್ಣದೇನಲ್ಲ…
ಅಲ್ಲವೇ?
: ಕೃಷ್ಣಾ ಕೌಲಗಿ.
( ಪ್ರಸಿದ್ಧ ಪತ್ರಕರ್ತೆ/ ಲೇಖಕಿ ಎಲಿಝಾಬೆತ್ ಗಿಲ್ಬರ್ಟ್ – ಇವರ ಲೇಖನದ ಆಧಾರಿತ.)
Leave a Reply