ಗಮ್ಯ ಒಂದೇ ಪಥಗಳು ಹಲವು
‘ಯಾರು ನನ್ನನ್ನು ಹೇಗೆ ಸಮೀಪಿಸುತ್ತಾರೋ ಅವರವರಿಗೆ ಹಾಗೆಯೇ ಒಲಿಯುತ್ತೇನೆ; ಎಲ್ಲರೂ ನನ್ನತ್ತಲೇ ಸಾಗುತ್ತಿದ್ದಾರೆ’ ಎನ್ನುವ ಕೃಷ್ಣನ ಮಾತನ್ನು ರ್ಚಚಿಸುತ್ತಿದ್ದೆವು.
ಪ್ರತಿಯೊಬ್ಬ ಜೀವಿಯೂ ಸ್ವೋಪಜ್ಞವಾಗಿ ಸಹಜವಾಗಿ ಅರಳಬೇಕು, ಪಾರಮ್ಯದ ಗಮ್ಯವನ್ನು ತಾನಾಗಿ ತನ್ನ ರೀತಿಯಲ್ಲಿ ಸಿದ್ಧಿಸಿಕೊಳ್ಳಬೇಕು. ಇದೇ ಸೃಷ್ಟಿಯ ನಿಯಮ. ಲೋಕಸಂಬಂಧಿಯಾದ ಸಾಧನಾ-ಸಿದ್ಧಿಗಳೇ ಆಗಲಿ, ಪರಮಾರ್ಥದ ಅನುಸಂಧಾನವೇ ಆಗಲಿ – ಎರಡಕ್ಕೂ ಸ್ವೋಪಜ್ಞ ಪ್ರಯತ್ನವೂ ಸ್ವಾನುಭವವೂ ಆತ್ಯಂತಿಕ. ನಾವು ಆಯ್ದುಕೊಳ್ಳುವ ಉಪಾಸನಾಮಾರ್ಗದಲ್ಲಿ ತಜ್ಞರ ಅನುಭಾವಿಗಳ ಮಹಾತ್ಮರ ಸಲಹೆ-ಮಾರ್ಗದರ್ಶನ ಬೇಡವೆಂದಲ್ಲ. ಅಪರಿಚಿತ ಪ್ರದೇಶದಲ್ಲಿ ಸಾಗುವ ಪಯಣಿಗನಿಗೆ ದಾರಿಯಲ್ಲಿ ಅದಾಗಲೇ ನಡೆದುಹೋದವರನ್ನು ಕೇಳುವುದು ಅಗತ್ಯವೇ. ಆದರೆ ‘ನಡೆದು’ ಹೋಗಬೇಕಾದವರು ನಾವೇ! ಪರಮಾರ್ಥದ ವಿಷಯದಲ್ಲಂತೂ ‘ಅನುಭವ’ವೂ ಸಾಕ್ಷಾತ್ಕಾರವೂ ಆಂತರ್ಯದಲ್ಲಿ ಆಗುವಂಥದ್ದು. ಹೊರಗಡೆಯ ಶಾಸ್ತ್ರ ಪಾಂಡಿತ್ಯ ಚರ್ಚೆ ಗುರು ಸತ್ಸಂಗ ಆಚಾರಸಂಹಿತೆ¬ ಇವೆಲ್ಲವೂ ಮತಿ-ಮನಗಳ ಪಾಕಕ್ಕಾಗಿ. ಆದರೆ ಎಲ್ಲವನ್ನೂ ಕೇಳಿ ಓದಿ ರ್ಚಚಿಸಿ ಗ್ರಹಿಸಿದ ಮೇಲೆ, ಸ್ವಾನುಭವಕ್ಕಾಗಿ ಅಂತಮುಖವಾಗಬೇಕು. ಆಚಾರ್ಯ ಶಂಕರರ ‘ಸತ್ಸಂಗತ್ವೇ ನಿಸ್ಸಂಗತ್ವಂ¬’ ಎಂಬ ಮಾತು ಇದನ್ನೇ ಧ್ವನಿಸುತ್ತದೆ! ಹೊರಗಡೆ ಯೋಗ್ಯ ಮಾರ್ಗದರ್ಶನ ಸಿಕ್ಕಾದಮೇಲೆ ಆತ್ಮಶೋಧನೆ-ಆತ್ಮನಿರೀಕ್ಷಣೆಗಳ ಮೂಲಕ ನಮ್ಮೊಳಗೆ ನಾವೇ ಸತ್ಯವನ್ನೂ ತತ್ವವನ್ನೂ ಸಾಕ್ಷಾತ್ಕರಿಸಿಕೊಳ್ಳಬೇಕಾಗುತ್ತದೆ.
ಎಲ್ಲರಿಗೂ ಗಮ್ಯವೊಂದೇ – ‘ಭಗವತ್ಸಾಕ್ಷಾತ್ಕಾರ!’. ಅದನ್ನೇ ಕೃಷ್ಣನು ‘ಮನುಷ್ಯರೆಲ್ಲರೂ ನನ್ನತ್ತಲೇ ಸಾಗುತ್ತಿದ್ದಾರೆ¬’ ಎಂದಿದ್ದು. ಆದರೆ ಮನುಷ್ಯನ ಮತಿ-ಮನಗಳ ನೆಲೆ-ಅಭಿರುಚಿ-ಅನುಕೂಲಗಳನ್ನೂ ಪರಿಗಣಿಸಿ, ಅಸಂಖ್ಯ ಪ್ರಕಾರಗಳ ಮತ ಪಂಥ ಸಾಧನಾವಿಧಾನಗಳು ಮೂಡಿವೆ, ಮೂಡುತ್ತಲೇ ಇವೆ. ಪರಮಾತ್ಮನೊಬ್ಬನೇ, ಉಪಾಸನಾಮಾರ್ಗಗಳು ಅಸಂಖ್ಯ! ರಾಮಕೃಷ್ಣರು ಹೇಳುವಂತೆ – ನೀರನ್ನು ಜಲ, ಆಕ್ವ, ವಾಟರ್, ಪಾನಿ, ನೀರು ಮುಂತಾದ ಹಲವು ಶಬ್ದಗಳಿಂದ ಕರೆದರೂ ‘ನೀರು’ ಎಂಬ ವಸ್ತು ಒಂದೇ ಅಲ್ಲವೆ? ‘ನನ್ನಂತೆಯೇ ಮತ್ತೊಬ್ಬನು ಮಾಡುತ್ತಿಲ್ಲವಾದ್ದರಿಂದ ಅವನ ಮಾರ್ಗ ತಪ್ಪು’ ಎಂದು ಹಳಿಯುವುದು ಮತಾಂಧತೆ.
ಅಮೂರ್ತನೂ ಅನುಭವೈಕವೇದ್ಯನೂ ಆದ ಪರಮಾತ್ಮನನ್ನು ಭಿನ್ನ ನಾಮ-ರೂಪಗಳಿಂದಲೂ ಉಪಾಸನಾ ವಿಧಿವಿಧಾನಗಳಿಂದಲೂ ಬಳಿಸಾರುವುದು ಮಾನವಾಂತರಂಗದ ಸಹಜ ಸುಂದರ ಪ್ರಕ್ರಿಯೆ. ಇದನ್ನು ಯಾರೂ ತಪ್ಪಿಸಲಾಗದು. ದೇವರ ಅನುಸಂಧಾನದಲ್ಲಿ ಸ್ವಪ್ರೇರಣೆಯಿಂದ ತೊಡಗುವುದರಲ್ಲಿ ಮನುಷ್ಯನಿಗೆ ಅದೇನೋ ಸಂತೃಪ್ತಿ ಸಿಗುತ್ತದೆ, ಸಂಸ್ಕಾರವೂ ಒದಗುತ್ತದೆ. ಹಾಗಾಗಿ ಪರತತ್ವದ ಸಾಂಕೇತಿಕವೂ ಮನೋಜ್ಞವೂ ಪ್ರಶಸ್ತವೂ ಆದ ದಿವ್ಯನಾಮರೂಪಗಳನ್ನು ಮನುಷ್ಯರು ಉಪಾಸಿಸುತ್ತಾರೆ – ಶಿವ, ವಿಷ್ಣು, ದೇವಿ ಮುಂತಾದ ದೇವತಾಸ್ವರೂಪಗಳನ್ನೋ, ಸೂರ್ಯನನ್ನೋ, ಪ್ರಕೃತಿಯನ್ನೋ, ಭೂಮಾತೆಯನ್ನೋ, ನದನದಿಗಳನ್ನೋ, ಬೆಟ್ಟಗಳನ್ನೋ, ಗೋಮಾತೆಯನ್ನೋ, ಜನ್ಮದಾತರನ್ನೋ, ಗುರುವನ್ನೋ ‘ಭಗವಂತನ ಪ್ರತ್ಯಕ್ಷಚಿಹ್ನೆ’ಗಳನ್ನಾಗಿ ಆದರಿಸಿ ಪೂಜಿಸುವುದು ಭಾರತೀಯ ಮನಸ್ಸಿಗೆ ಸ್ವಭಾವಸಿದ್ಧ! ಇದು ಭ್ರಾಂತಿಯಲ್ಲ, ಮನೋವಿಜ್ಞಾನ, ಆತ್ಮಾಭಿವ್ಯಕ್ತಿಯ ರೀತಿ! ಪೂಜಿಸುವುದು ಮೇಲ್ನೋಟಕ್ಕೆ ವಿಗ್ರಹವನ್ನೋ ಶಾಲಗ್ರಾಮವನ್ನೋ ಗೋವನ್ನೋ ಆದರೂ, ಧ್ಯಾನಿಸುವುದು ‘ಸರ್ವಾತ್ಮನಾದ ದೇವರನ್ನೇ!’ ಮನುಷ್ಯಾಂತರಂಗದ ಈ ಮುಗ್ಧಭಕ್ತಿಯನ್ನೂ ಉದ್ದೇಶವನ್ನೂ ಅಂತರ್ಯಾಮಿಯಾದ ಭಗವಂತನು ಗ್ರಹಿಸಿ ಅನುಗ್ರಹಿಸುತ್ತಾನೆ.
ಎಲ್ಲ ಮತಗಳೂ ಒಂದಲ್ಲ ಒಂದು ಸ್ಥಳವನ್ನೋ, ಚಿಹ್ನೆಯನ್ನೋ, ಗ್ರಂಥವನ್ನೋ, ಮೂಲಪುರುಷನನ್ನೋ, ವಿಧಾನವನ್ನೋ ಉಪಾಸನೆಗೆ ಆಧಾರವಾಗಿಸಿಕೊಂಡೇ ಸಾಗುತ್ತಿವೆ! ಭಾರತಮೂಲದ ಧರ್ಮಗಳಲ್ಲಿ ಈ ಚಿಹ್ನೆ ಸ್ಥಳ ಗ್ರಂಥ ಪದ್ಧತಿಗಳ ಬಗೆಗಳೂ ಹೆಚ್ಚು, ಸಾಧನೆಯ ಆಯ್ಕೆಗೆ ಸ್ವಾತಂತ್ರ್ಯ ಹೆಚ್ಚು, ಸ್ವಾರಸ್ಯಗಳೂ ಅಸಂಖ್ಯ! ಸಂಕೇತಗಳು ಮನೋಜ್ಞ!
(ಲೇಖಕರು ಸಂಶೋಧಕರು, ಸಂಸ್ಕೃತಿ ಚಿಂತಕರು)
ಡಾ. ಆರತಿ ಬಿ.ವಿ.
ಕೃಪೆ: ವಿಜಯವಾಣಿ