ಪಂಪನ ಕಾವ್ಯದಲ್ಲಿ ಭಗವದ್ಗೀತೆ ಭಾಗ -೧
ಸಾರ್ವಕಾಲಿಕವಾದ ಭಗವದ್ಗೀತೆಯು ನಮ್ಮ ಇಂದಿನ ಜೀವನಕ್ಕೆ ಯಾವ ರೀತಿಯಲ್ಲಿ ಅನ್ವಯವಾಗುತ್ತದೆ ಎನ್ನುವುದನ್ನೂ ಅರಿತೆವು.
ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ವಿವಿಧ ಧರ್ಮಗಳು ಸಾಹಿತ್ಯಿಕವಾಗಿಯೂ ವಿವಿಧ ಶತಮಾನಗಳನ್ನು ಆವರಿಸಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹತ್ತನೆಯ ಶತಮಾನವು ಜೈನ ಕವಿಗಳ ಕಾಲದ ಪ್ರಾರಂಭ. ಪಂಪನನ್ನು ಆದಿಕವಿ ಎಂದು ಹೇಳುತ್ತಾರೆ.
‘ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಹೇಳಿದ ಪಂಪನು ಕನ್ನಡದ ಆದಿ ಕವಿ. ಸರ್ವ ಕಾಲಕ್ಕೂ ಶ್ರೇಷ್ಠನೆನಿಸಿದ ಮಹಾಕವಿ ಪಂಪನನ್ನು ಅರಿಯದ ಕನ್ನಡಿಗನೇ ಇಲ್ಲವೆಂದು ಹೇಳಬಹುದು. ವೈದಿಕ ಧರ್ಮವನ್ನು ಬಿಟ್ಟು ಜೈನಧರ್ಮವನ್ನು ಸ್ವೀಕರಿಸಿದ ತನ್ನ ತಂದೆ ಭೀಮಪ್ಪಯ್ಯನಿಂದ ಜೈನ ಸಂಸ್ಕಾರವನ್ನು ಪಡೆದ ಪಂಪನು ಕಟ್ಟಾ ಜೈನ ಧರ್ಮಾಭಿಮಾನಿ. ‘ಆದಿಪುರಾಣ’ವೆಂಬ ಆಗಮಿಕ ಕಾವ್ಯವನ್ನೂ, ಜೈನಧರ್ಮಕ್ಕೆ ಹೊರತಾದ ರಾಜರುಗಳ ಚರಿತೆಯ ಎಂದರೆ ಮಹಾಭಾರತದ ಕತೆಯ ಲೌಕಿಕದ ಕಾವ್ಯವನ್ನೂ ರಚಿಸಿದೆನೆಂದು ಹೇಳಿಕೊಳ್ಳುವ ಇವನು ಜಿನಾಗಮವಲ್ಲದ ‘ವಿಕ್ರಮಾರ್ಜುನ ವಿಜಯ’ವು ಒಬ್ಬ ಲೌಕಿಕ ರಾಜನ ಆಶ್ರಯದಲ್ಲಿ ಬರೆದಿದ್ದು, ತನ್ನ ಆಶ್ರಯದಾತ ಅರಿಕೇಸರಿಯನ್ನು ಭಾರತದ ಕತೆಯ ಅರ್ಜುನನೊಡನೆ ಸಮೀಕರಿಸಿ ಬರೆದೆನೆಂದು ಹೇಳುತ್ತಾನೆ. ಅವನ ಪ್ರೀತ್ಯರ್ಥವಾಗಿ, ನೆನಪಿಗಾಗಿ ಒಂದು ಕಾವ್ಯವನ್ನು ಬರೆಯುವುದು ಕೂಡಾ ಲೌಕಿಕದ ಒಂದು ಮಾದರಿ.
ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ
ಬಲದೊಳ್ ಮದ್ರೇಶನತ್ಯುನ್ನತಿಯೊಳಮರ ಸಿಂಧೂದ್ಭವಂ ಚಾಪ ವಿದ್ಯಾ
ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿ
ರ್ಮಲಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ
ಎಂದು ಹೇಳಿದ ಪಂಪನು ಇಲ್ಲಿ ಎಲ್ಲಿಯೂ ಶ್ರೀಕೃಷ್ಣನನ್ನು ನೆನೆದಿಲ್ಲ.. ಪ್ರಜ್ಞಾಪೂರ್ವಕವಾಗಿಯೆ ಅರ್ಜುನನ ಪಾತ್ರದ ಹಿರಿಮೆಯನ್ನು ಅಥವಾ ಅದರಲ್ಲಿ ಸಮಾವೇಶಗೊಂಡ ಅರಿಕೇಸರಿಯ ಘನತೆಯನ್ನು ಮೆರೆಯಲು ಎತ್ತಿಕೊಂಡ ಪಂಪಮಹಾಕವಿಯ ‘ವಿಕ್ರಮಾರ್ಜುನ ವಿಜಯ’ದಲ್ಲಿ, ಭಗವಾನ್ ಶ್ರೀಕೃಷ್ಣನ ಅತಿಮಾನುಷವೂ ಅಲೌಕಿಕವೂ ಆದ ಮಹಿಮೆಯನ್ನು ಪ್ರಧಾನವಾಗಿ ಪ್ರಕಟಿಸುವ ಈ ಭಗವದ್ಗೀತೆಯ ಸನ್ನಿವೇಶ ಹೇಗೆ ಬಂದಿದೆ ಎನ್ನುವುದು ಕುತೂಹಲಕರವಾದ ಸಂಗತಿ. ಪಂಪನ ವಿಕ್ರಮಾರ್ಜುನವಿಜಯದಲ್ಲಿ ಸಮಸ್ತ ಪ್ರಾಧಾನ್ಯವೂ ಅರ್ಜುನನಿಗೇ. ಆದರೆ ಶ್ರೀಕೃಷ್ಣನೇ ಪ್ರಧಾನಪಾತ್ರವಾಗುವ ಈ ಭಗವದ್ಗೀತೆಯ ಪ್ರಸಂಗವನ್ನು ಕವಿ ಹೇಗೆ ಚಿತ್ರಿಸಿದ್ದಾನೆ ಎಂಬುದು ಆಶ್ಚರ್ಯವನ್ನು ಹುಟ್ಟಿಸುವ ವಿಷಯವೇ. ಇನ್ನು ಪಂಪಕವಿ ಜೈನ. ಜೈನರ ದೃಷ್ಟಿಯಲ್ಲಿ ಕೃಷ್ಣನ ಪಾತ್ರದ ಬಗ್ಗೆ ಅಂತಹ ಗೌರವವಿಲ್ಲ. ಆದ್ದರಿಂದ ಕೃಷ್ಣನ ಮಹಿಮಾತಿಶಯವನ್ನು ಪ್ರಕಟಿಸುವ ಗೀತಾ ಪ್ರಸಂಗವನ್ನು ಕವಿ ಹೇಗೆ ತಂದಿದ್ದಾನೆ ಎನ್ನುವುದು ಕೂಡ ಆಶ್ಚರ್ಯವೇ!
ಅರ್ಜುನನನ್ನೇ ನಾಯಕನನ್ನಾಗಿ ಮಾಡಿಕೊಂಡಿರುವ ಈ ಕೃತಿಯಲ್ಲಿ ಪಂಪ ಇಷ್ಟಪಟ್ಟಿದ್ದರೆ ಭಗವದ್ಗೀತೆಯ ಸಂದರ್ಭವನ್ನು ಕೈಬಿಡಬಹುದಾಗಿತ್ತು. ಹಾಗೆ ಬಿಟ್ಟಿದ್ದ ಪಕ್ಷದಲ್ಲಿ ಪಂಪ ಭಾರತದ ಕಥಾಕ್ರಮದಲ್ಲಿ ಯಾವ ಊನವೂ ಆಗುತ್ತಿರಲಿಲ್ಲ. ಕೃಷ್ಣನ ಪಾತ್ರಕ್ಕೆ ಸಹಜವಾಗಿ ಪ್ರಾಧಾನ್ಯ ಒದಗುವ ಈ ಭಾಗವನ್ನು ಕೈಬಿಟ್ಟು, ಅರ್ಜುನನೇ ಯಾವ ತಾಕಲಾಟವೂ ಇಲ್ಲದೆ, ಅಳುಕೂ ಇಲ್ಲದೆ ನೇರವಾಗಿ ಯುದ್ಧಸನ್ನದ್ಧನಾದನೆಂದು ಹೇಳಿ ವಿಕ್ರಮಾರ್ಜುನನ ವಿಜಯವನ್ನೇ ಎತ್ತಿ ಹಿಡಿಯಬಹುದಾಗಿತ್ತು. ಆದರೂ ಪಂಪ ಇಡೀ ಭಗವದ್ಗೀತಾ ಸನ್ನಿವೇಶವನ್ನು, ಅದರ ಯಾವ ಉದ್ದೇಶಕ್ಕೂ ಭಂಗವನ್ನು ತಾರದ ರೀತಿಯಲ್ಲಿ ಒಂದೇ ಒಂದು ವೃತ್ತದಲ್ಲಿ ಅದರ ಹಿಂದೆ ಮುಂದೆ ಒಂದೆರಡು ವಚನ ಗದ್ಯಪಂಕ್ತಿಗಳಲ್ಲಿ ಸಂಗ್ರಹಿಸಿ ಮುಂದೆ ನಡೆದಿದ್ದಾನೆ. ಇದಕ್ಕೆ ಕಾರಣ, ಬಹುಶಃ ಪಂಪನು ಭಗವದ್ಗೀತೆಯನ್ನು ಕುರಿತು ಜನಮನದಲ್ಲಿ ಪರಂಪರಾಗತವಾಗಿ ಬಂದಿರುವ ಪೂಜ್ಯ ಭಾವವನ್ನು ಮತ್ತು ಗೀತೆಯ ಬಗ್ಗೆ ತನಗೆ ಇರುವ ಅಭಿಮಾನವನ್ನು ಗುರುತಿಸಿ ಪ್ರಕಟಿಸಿದ್ದಾನೆ ಎಂದು ಭಾವಿಸಬಹುದು. ಮಹಾಭಾರತವನ್ನು ವಸ್ತುವನ್ನಾಗಿ ತೆಗೆದುಕೊಂಡ ಯಾವ ಕವಿಯೂ ಗೀತೆಯಂಥ ಉಜ್ವಲವಾದ ಭಾಗವನ್ನು ಕೈಬಿಡುವ ಎಗ್ಗತನಕ್ಕೆ ಪಾತ್ರನಾಗಲಾರ. ಆದರೂ ಭಗವದ್ಗೀತೆಯನ್ನು ಮಥನ ಮಾಡಿ ಅದರ ಸಾರವನ್ನು ಮೂರೇ ಮಾತುಗಳಲ್ಲಿ ಕಡೆದಿರಿಸಿದ್ದಾನೆ.
ಪಂಪನಲ್ಲಿ ಭಗವದ್ಗೀತೆಯ ಸನ್ನಿವೇಶ ಹೀಗಿದೆ :
ವ|| ಅಂತಾ ಯುಯುತ್ಸವನೊಡಗೊಂಡು ಬಂದು ಧರ್ಮಪುತ್ರನುತ್ಸಾಹದೊಳಿರ್ಪ ಪದದೊಳ್ ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದಂ ದಿವ್ಯ ಸ್ವರೂಪಮಂ ತೋಱಿ-
ಅದಿರದಿದಿರ್ಚಿ ತಳ್ತಿಱಿಯಲೀ ಮಲೆದೊಡ್ಡಿದ ಚಾತುರಂಗಮೆಂ
ಬುದು ನಿನಗೊಡ್ಡಿ ನಿಂದುದಿದನೋವದೆ ಕೊಲ್ವೊಡೆ ನೀನುಮೆನ್ನ ಕ
ಜ್ಜದೊಳೆಸಗೆಂದು ಸೈತಜಿತನಾದಿಯ ವೇದ ರಹಸ್ಯದೊಳ್ ನಿರಂ
ತದ (ಪರಿಚರ್ಯೆಯಿಂ) ನೆಱೆಯೆ ಯೋಜಿಸಿದಂ ಕದನ ತ್ರಿಣೇತ್ರನಂ|| (೧೦-೬೪)
ವ|| ಆಗಳ್ ಪರಸೈನ್ಯ ಭೈರವಂ ಪುರಾಣ ಪುರುಷನಪ್ಪ ಪುರುಷೋತ್ತಮಂಗೆಱಗಿ ಪೊಡಮಟ್ಟು ರಿಪುಪಕ್ಷ ಕ್ಷಯಕರಮಪ್ಪ ವಿಶ್ವಕರ್ಮ ನಿರ್ಮಿತಮಾದ ತನ್ನ ದಿವ್ಯರಥಮಂ ಮನೋರಥಂ ಬೆರಸು ರಥಾಂಗಧರನಂ ಮುನ್ನಮೇಱಲ್ವೇೞ್ದು ಮೂಱುಸೂೞ ಬಲವಂದು ಪೊಡಮಟ್ಟು ಬೞಿಯಂ ತಾನೇಱಿ ವಜ್ರ ಕವಚಮಂ ತೊಟ್ಟು ತವದೊಣೆಗಳನೆರಡುಂ ದೆಸೆಯೊಳಂ ಬಿಗಿದು ದ್ರೋಣಾಚಾರ್ಯಂಗೆ ಮನದೊಳ್ ನಮಸ್ಕಾರಂಗೆಯ್ದು ದ್ರೋಣಂ ಬಾೞ್ಗೆಂದು ಮಹಾಪ್ರಚಂಡ ಗಾಂಡೀವಮಂ ಕೊಂಡೇಱಿಸಿ ನೀವಿ ಜೇವೊಡೆದು ದೇವದತ್ತ ಶಂಖಮಂ ಪೂರಿಸಿ ಸಂಸಪ್ತಕರೊಡ್ಡಣದತ್ತ ರಥಾಂಗಧರನಂ ರಥಮಂ ಚೋದಿಸಲ್ವೇೞುಗಳ್-
ಮುಂದುವರೆಯುತ್ತದೆ