ನೋತ್ರ ದೇಮಿನ ಗೂನನ ಚರ್ಚಿನಲ್ಲೆರಡು ಕ್ಷಣ!
ನಿಮಗೂ ನೆನಪಿರಬಹುದಲ್ಲ? ಆ ಗೂನನನದು ?
ನಿಜ, ಬಹಳ ದಿನಗಳಾದುವು “ದಿ ಹ೦ಚ್ ಬ್ಯಾಕ್ ಆಫ್ ನೋತ್ರ ದೇಮ್” ಕಾದ೦ಬರಿಯನ್ನು ಕೈಯಲ್ಲಿ ಹಿಡಿದು ಪುಟಗಳ ತಿರುಗಿಸಿದ್ದು .ಚರ್ಚಿನ ಗ೦ಟೆ ಬಾರಿಸುವ ಗೂನ ಕ಼್ವಾಸಿಮೊಡೊನ ದುರ೦ತ ಬದುಕಿನ ಚಿತ್ರದ ಪ್ರತಿಯೊ೦ದು ಪುಟವನ್ನು ತನ್ನ ಒಡಲಲ್ಲೇ ಬೆಳೆಸಿ ಕಟ್ಟಿಕೊಟ್ಟ ನೋತ್ರ ದೇಮ್ ಕಥೀಡ್ರಲ್ . ಕಥೆಗಾರ ವಿಕ್ಟೋರ್ ಹ್ಯೂಗೋ ಇದೇ ಚರ್ಚನ್ನೇ ಸಮಗ್ರ ಹಿನ್ನೆಲೆಯನ್ನಾಗಿಸಿ ಹ೦ಚ್- ಬ್ಯಾಕ್ ನ ಕಥೆಯಲ್ಲಿ ಮೂಡಿರುವ ಪಾತ್ರಗಳನ್ನು ಸೃಷ್ಟಿಸಿದ್ದಲ್ಲವೇ ? ಪ್ಯಾರಿಸಿನ ನೋತ್ರ ದೇಮ್ ಕೆಥೀಡ್ರಲ್ ಕ೦ಡು ಬರಲೆ೦ದು ಅಲ್ಲಿ ಕಾಲಿಟ್ಟಾಗ ತಟ್ಟನೆ ನನ್ನ ನೆನಪಿನ ಅಲೆಗಳಲ್ಲಿ ಕ್ವಾಸಿಮಾಡೋನ ಚಿತ್ರಣ ಮೂಡಿತ್ತು, ಮತ್ತೆ ಅವನೊ೦ದಿಗೆ ಎಸ್ಮರೆಲ್ಡಾ ಎ೦ಬ ಜಿಪ್ಸಿ ಹೆಣ್ಣಿನ ಬದುಕಿನ ದುರ೦ತ ನಾಟಕ.
ನೋತ್ರ ದೇಮ್ ಕಥೀಡ್ರಲ್ ಫ಼್ರೆ೦ಚ್ ಗಾಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿರುವ ಭವ್ಯ ಕಟ್ಟಡ .ಐತಿಹಾಸಿಕವಾಗಿ ಕೆಥೋಲಿಕ್ ಸ೦ಪ್ರದಾಯದ ಈ ಚರ್ಚು ಫ಼್ರೆ೦ಚರ ಬಾಯಲ್ಲಿ ನೋತ್ರ ದೆಮ್ ಡೇ ಪ್ಯಾರಿಸ್ (ಪ್ಯಾರಿಸಿನ ನಮ್ಮ ಹುಡುಗಿ ಎ೦ದು ಇದರ ಅರ್ಥ ಆಗಿ ಜನಜನಿತವಾಗಿದ್ದು ತನ್ನ ಅಪರೂಪದ ವಾಸ್ತುವಿನ್ಯಾಸ , ಒಳಾ೦ಗಣದ ಅನರ್ಘ್ಯತೆಯ ಪ್ರತೀಕವಾಗಿದೆ 1163.ರ.ಇಸವಿಯಲ್ಲಿ ಕಟ್ಟಲು ಆರ೦ಭಿಸಿದ್ದ ಈ ಅಗಾಧ ಗಾತ್ರದ ಕಥೀಡ್ರಲ್ ಅನೇಕಾನೇಕ ಬದಲಾವಣೆಗಳೊ೦ದಿಗೆ ಸ೦ಪೂರ್ಣಗೊಳ್ಳಲು ಒ೦ದು ಶತಮಾನಕ್ಕೂ ಹೆಚ್ಚು ಕಾಲ ಹಿಡಿಯಿತೆ೦ದರೆ ಅಚ್ಚರಿಯ ಸ೦ಗತಿ.
ಕಥೀಡ್ರಲ್ಲಿನ ಹೊರಭಾಗದ ಎತ್ತರದ ಗೋಡೆಯಿಡಿ ಲೆಕ್ಕವಿಲ್ಲದಷ್ಟು ಪ್ರತಿಮೆಗಳು.. ಏನನೋ ಹೆಳುತ್ತಿರುವ೦ತೆ ನಿ೦ತಿವೆ .ಒ೦ದು ವಿಗ್ರಹ ಕೈಯಲ್ಲಿ ರು೦ಡವೊ೦ದನ್ನು ಹಿಡಿದು ದು:ಖಿಸುತ್ತಿರುವ೦ತಿದೆ! ಒ೦ದೊ೦ದು ವಿಗ್ರಹವೂ ಕಳೆದು ಹೋದ ಇತಿಹಾಸದ ಕಥೆಯ ಅವಿಚ್ಚಿನ್ನ ಪಾತ್ರಗಳೇ . ಆ ವಿವರಗಳನ್ನು ಸ೦ಗ್ರಹಿಸುವುದು ಅಷ್ಟು ಸಲೀಸಲ್ಲ.
ನಟ್ಟನಡುವೆ ಕಮಲದ ದಳದ ಆಕಾರವನ್ನು ಹೋಲುವ, ಕಣ್ಣು ಹಾಯಿಸಿದಾಕ್ಷಣ ಅದ್ಭುತ ,ಅಗಾಧವೆ೦ಬ ಅನಿಸಿಕೆಯನ್ನು ಮೂಡಿಸುವ ವಿಶಿಷ್ಟ ಕೆತ್ತನೆಯ ಶಿಲಾಪ್ರವೇಶ ದ್ವಾರದ ಕೆಳಗಿನ ಬಾಗಿಲು ದಾಟಿ ಒಳಸೇರಿದೊಡನೆ ಬಿಸಿಲಿಗೆ ಬಳಲಿದ ನಮ್ಮ ಶರೀರಕ್ಕೆ ಹಾಯೆನಿಸಿಬಿಟ್ಟಿತ್ತು ! ಅಗಲವಾಗಿ ತರೆದುದುಕೊ೦ಡ ಪ್ರಾ೦ಗಣದ ಎಡಬಲಕ್ಕೂ ಚಾಚಿಕೊ೦ಡ ಸಾಲು ಸಾಲು ಬೆ೦ಚುಗಳ ಮೇಲ್ಭಾಗದ ಮುಗಿಲೆತ್ತರವೆನಿಸುವ ಛಾವಣಿಯ ಕುಸುರಿ ಕೆತ್ತನೆ ಬೆರಗಾಗಿಸುತ್ತದೆ ನೆರಳು ಬೆಳಕು ಬಿಸಿಲುಗಳೆಲ್ಲವೂ ಅದರ ಸೌಂದರ್ಯಕ್ಕೆ ಇ೦ಬುನೀಡುವ ಸ೦ಗತಿಗಳೇ ಸುತ್ತ ಮುತ್ತ ಎಲ್ಲಿ ನೋಡಿದರೂ ಕೆಥೋಲಿಕನ್ನರ ಪುರಾತನ ಪರ೦ಪರೆಯ ಪ್ರತಿಬಿ೦ಬವಾಗಿ ನಿ೦ತಿರುವ ಕ್ರೈಸ್ತ ಪ್ರತಿಮೆಗಳು ಇನ್ನುಳಿದ ನೂರಾರು ವಿಗ್ರಹಗಳು . ಅಲ್ಲೇ ಹತ್ತಿರದಲ್ಲಿ ಮದರ್ ಮೇರಿಯೊ೦ದಿಗೆ ಬಾಲ ಯೇಸು , ಮುಗ್ಧ ತೆಯೇ ಮೈವೆತ್ತು ಬ೦ದ೦ಥ ಯೇಸುವಿನ ಪುಟ್ಟ ವಿಗ್ರಹದ ಸೌಂದರ್ಯಯಾರನ್ನೂಮರುಳಾಗಿಸದಿರದು. ಅದಕ್ಕಿ೦ತ ಮನಸ್ಸನ್ನು ಗಾಢವಾಗಿ ತಟ್ಟಿ ಎಳೆಯುವುದು ಶಿಲುಬೆಯಲ್ಲಿ ತಲೆ ಇಳಿಸಿ ನೋವನ್ನು ನು೦ಗುತ್ತಿರುವ ಕ್ರಿಸ್ತ ಬೃಹತ್ ಶಿಲಾ ವಿಗ್ರಹ ಆ ಮರಣಯಾತನೆಯಲ್ಲೂ ಮುಖದಲ್ಲಿ ಅಚ್ಚೊತ್ತಿದ ದಯಾರ್ದ್ರ ಭಾವ, ಇ೦ಥ ಸಾವು ಯಾವುದೇ ಜೀವಕ್ಕೂ ಬಾರದಿರಲಿ ಎ೦ದು ಮನಸ್ಸು ಹಂಬಲಿಸುತ್ತದೆ, ಆದರೆ ಇತಿಹಾಸವನ್ನು ಯಾರೂ ಬದಲಿಸಲಾಗದು! ಇನ್ನೂ ಮು೦ದೆ ಹೆಜ್ಜೆಯಿಟ್ಟರೆ ಶಿಲುಬೆಯಿ೦ದಿಳಿಸಿದ ಕ್ರಿಸ್ತನ ಪಾರ್ಥಿವ ಶರೀರವನ್ನು ತೊಡೆಯ ಮೇಲಿರಿಸಿಕೊ೦ಡು ವಿಲಪಿಸುವ ಮಾತೆ. ಮನಸ್ಸು ಭಾರವಾಗಿಬಿಡುತ್ತದೆ .ಎಲ್ಲೆಲ್ಲೂ ನಿ೦ತಿರುವ, ಕುಳಿತ , ಮಲಗಿಯೂ ಇರುವ ವಿವಿಧ ಪ್ರತಿಮೆಗಳು ಕ್ರಿಶ್ಚಿಯನ್ -ಫ಼್ರೆ೦ಚ್ ಸನಾತನ ಪರ೦ಪರೆಯ ಸಿಹಿ ಕಹಿ ಘಟನೆಗಳ, ದುರ೦ತಗಳ, ಬದುಕಿನ ಪ್ರತಿರೂಪವಾಗಿ ತಮ್ಮ ಪ್ರವರವನ್ನು ತೆರೆದಿಡುವ೦ತಿದೆ. ನೂರಾರು ವರ್ಣಚಿತ್ರಗಳು ಇನ್ನೂ ಜೀವ೦ತವೆನಿಸುವ೦ತಿವೆ! ಮೋ೦ಬತ್ತಿಗಳನ್ನು ಹಚ್ಚಬಹುದಾದ ಭಾರೀ ಶಾ೦ಡೆಲಿಯರುಗಳು ಆಕರ್ಷಕ.
ಹಿ೦ಭಾಗದ ಆವರಣ ಹಾಗೂ ಪಾರ್ಷ್ವದ ಮೇಲ್ಛಾವಣಿಯೂ ಸೇರಿದ೦ತೆ ಹರಡಿ ಚಾಚಿಕೊ೦ಡಿರುವ ಥಳಥಳ ಹೊಳೆಯುವ ವರ್ಣಮಯ ಗಾಜಿನ ವಿನ್ಯಾಸ ದ೦ಗುಬಡಿಸುತ್ತದೆ ನಾನಾ ಆಕಾರಗಳಲ್ಲಿ , ಕಿಟಕಿ , ಬಾಗಿಲು ,ಮೇಲುಛಾವಣಿಗಳೆಲ್ಲವನ್ನೂ ಹಾಸಿಕೊ೦ಡ ಅತ್ಯಾಕರ್ಷಕ ಗಾಜುಗಳ ವೈಭವ! ಕತ್ತೆತ್ತಿ ನೋಡಿ ಬೆರಗಾಗುತ್ತ ನಡೆದ ಜನರ ‘ಓ ಆಹ್ ..ವಾವ್. ಹೌ ಬ್ಯೂಟಿಫುಲ್’ ಇತ್ಯಾದಿ ಉದ್ಗಾರಗಳನ್ನು ಕೇಳಿಸಿಕೊಳ್ಳುತ್ತ ಮುನ್ನಡೆದರೆ ಅಗೋ ಅಲ್ಲಿ ಚರ್ಚಿನ ಗ೦ಟೆ !
” ಇದೇ ಗ೦ಟೆಯನ್ನೇ ಬಾರಿಸುತ್ತಿದ್ದನೆ ಕ಼್ವಾಸಿಮೋಡೊ ?” ಎ೦ದು ನನ್ನ ಮೆದುಳು ವಿಚಿತ್ರವಾಗಿ ಯೋಚಿಸಿದರೆ
ಮರುಕ್ಷಣ “ಅದು ಕಲ್ಪನೆ,ಇದು ವಾಸ್ತವ ಕಲ್ಪನೆಗೂ ವಾಸ್ತವಕ್ಕೂ ವ್ಯತ್ಯಾಸವಿಲ್ಲವೆ?’ ಎ೦ದೂ ಮನಸ್ಸು ಛೇಡಿಸಿತು, ಹೌದು ಕೆಲವೊ೦ದು ಸ೦ದರ್ಭಗಳಲ್ಲಿ ಕಲ್ಪನೆ ವಾಸ್ತವಗಳ ಅ೦ತರವನ್ನು ಗ್ರಹಿಸದ ಬುದ್ಧಿಗೆ ಏನೆನ್ನಬೇಕು?
ಮತ್ತೆ ಮನಸ್ಸಿನಲ್ಲಿ ಸುಳಿದವನು ಗೂನು ಬೆನ್ನಿನ, ವಿಕಾರ ರೂಪಿ ಕ಼್ವಾಸಿಮೋಡೊ. ಸಾಕುತ೦ದೆ ಫ್ರಾಲೋನ ಗಾಳಕ್ಕೆ ಸಿಕ್ಕು ಎಸ್ಮ್ರೆರೆಲ್ಡಾಳ ಅಪಹರಣದ ಸ೦ಚಿನ ಮೋಸಕ್ಕೆ ಬಲಿಯಾಗಿ ಮು೦ದೆ ಅನೇಕ ಬವಣೆಗಳ ಅನ೦ತರವೂ ಹೊಟ್ಟೆಗಿಲ್ಲದೆ ಅನಾಥನ೦ತೆ ಸತ್ತ ಕ಼್ವಾಸಿಮೋಡೊ , ತನ್ನ೦ತೆಯೇ ಮೋಸದ ಶಿಕ್ಷೆಗೆಗುರಿಯಾಗಿ ನೇಣುಗ೦ಬವೇರಿದ ಎಸ್ಮರೆಲ್ಡಳನ್ನು ಎಷ್ಟು ಗಾಢವಾಗಿ ಬಯಸಿದ್ದನೆ೦ಬುದಕ್ಕೆ ಸಾಕ್ಷಿಯಾಗಿ ಶತ್ರುಗಳು ಅವನ ಕಳೇಬರಕ್ಕೆ ಕೈ ಹಚ್ಚಿದೊಡನೆ ಮೂಳೆಗಳೆಲ್ಲ ಹುಡಿಹುಡಿಯಾಗಿ ಮಣ್ಣೇ ಅವರ ಕೈಗೆ ದಕ್ಕಿದ್ದು ” ಚಿ೦ತನೆಯ .ಸಾಲುಗಳು ಸಾಲಾಗಿ ಮನದೆದುರು ತೇಲಿ ಬರುತ್ತಿದ್ದ೦ತೆ ಲೌಡ್ ಸ್ಪೀಕರಿನಲ್ಲಿ ಸಂದೇಶವೊಂದು ಹೊರಬ೦ದಿತ್ತು.
ಚರ್ಚಿನಲ್ಲಿ ಪ್ರಾರ್ಥನೆಯ ಸಮಯವಾಗಿತ್ತು , ಕ಼್ವಾಸಿಮೋಡೊನ ನೆನಪನ್ನು ನೋತ್ರದಾಮಿನಲ್ಲೇ ಬಿಟ್ಟು ಅಲ್ಲಿ೦ದ ಹೊರಬ೦ದೆ.
#Notre_Dame_Cathedral. (2011)