ಸ್ಥಿತಪ್ರಜ್ಞತೆ

ಸ್ಥಿತಪ್ರಜ್ಞತೆ
ಸ್ಥಿತಪ್ರಜ್ಞ ಎಂದರೆ ಸ್ಥಿರವಾದ ಬುದ್ದಿಯುಳ್ಳವ, ಶಾಂತಚಿತ್ತತೆಯನ್ನು ಹೊಂದಿರುವವ, ರಾಗದ್ವೇಷರಹಿತ, ಸುಖ ಹಾಗೂ ದುಃಖಗಳಲ್ಲಿ ವಿಚಲಿತನಾಗದ, ಯಾವಾಗಲೂ ಸಂತೃಪ್ತಿಯನ್ನು ಹೊಂದಿರುವವ ಹಾಗೂ ಆನಂದವನ್ನು ಹೊಂದಿರುವವ ಎಂಬುದು ಸಾಮಾನ್ಯ ಅರ್ಥ.
ಸುಖ ಬಂದಾಗ ಹೆಚ್ಚು ಹಿಗ್ಗದೇ, ಮತ್ತು ದುಃಖ ಬಂದಾಗ ಕುಗ್ಗಿ ಕುಸಿಯದೇ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಸ್ಥಿತಪ್ರಜ್ಞನ ಲಕ್ಷಣ. ಈ ಸ್ಥಿತಪ್ರಜ್ಞತೆಯೇ ಯಶಸ್ವೀ ಬದುಕಿಗೆ ಮುನ್ನುಡಿ. ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ಕಾಲದಲ್ಲಿ ಕೂಡ ಅತ್ಯಂತ ಪ್ರಸ್ತುತವಾಗಿವೆ. ಸ್ಥಿತಪ್ರಜ್ಞ ಯಾರು? ಅವನ ಸ್ವಭಾವ ಏನು? ಸ್ಥಿತಪ್ರಜ್ಞನು ಹೇಗಿರುತ್ತಾನೆ? ಈತ ಸ್ಥಿತಪ್ರಜ್ಞ ಎಂದು ಗುರುತಿಸುವುದು ಹೇಗೆ? ಇವೆಲ್ಲಕ್ಕೂ ಕೃಷ್ಣ ಸಮಾಧಾನವನ್ನು ಈ ಕೆಲವು ಶ್ಲೋಕಗಳಲ್ಲಿ ಹೇಳಿದ್ದಾನೆ-
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ |
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ || ೨:೫೪ ||
ಈ ಶ್ಲೋಕದ ಅರ್ಥವು, “ಕೇಶವ, ಸ್ಥಿತಪ್ರಜ್ಞನ ಲಕ್ಷಣಗಳೇನು? ಅವನು ಹೇಗೆ ಮಾತನಾಡುತ್ತಾನೆ? ಹೇಗೆ ಕುಳಿತುಕೊಳ್ಳುತ್ತಾನೆ? ಹೇಗೆ ನಡೆಯುತ್ತಾನೆ?” ಎಂದು ಅರ್ಜುನನು ಶ್ರೀಕೃಷ್ಣನನ್ನು ಕೇಳುತ್ತಾನೆ. ಇದಕ್ಕೆ ಉತ್ತರವಾಗಿ ಗೀತಾಚಾರ್ಯನು ಹೀಗೆ ಉತ್ತರಿಸಿದ್ದಾನೆ:
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್
ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸದೋಚ್ಯತೇ
ಭಗವಂತನು, “ಎಲೈ ಪಾರ್ಥನೇ, ಮನಸ್ಸಿನಲ್ಲಿರುವಂಥ ಎಲ್ಲ ಕಾಮನೆಗಳನ್ನೂ ಸಂಪೂರ್ಣವಾಗಿ ತ್ಯಜಿಸಿ ಆತ್ಮನಿಂದ ಆತ್ಮನಲ್ಲಿಯೇ ಸಂತುಷ್ಟನಾಗಿರುವವನೇ ಸ್ಥಿತಪ್ರಜ್ಞ.” ಎಂದು ಹೇಳುತ್ತಾನೆ. ಆತ್ಮನಲ್ಲಿಯೇ ಎಂದರೆ ತನ್ನಲ್ಲಿಯೇ ಎಂದು ಅರ್ಥ.
ದುಃಖೇಷ್ಟನುದ್ವಿಗ್ನಮನಾಂ ಸುಖೇಷು ವಿಗತಸ್ಪೃಹಃ
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ
ದುಃಖದಾಯಕ ಪ್ರಸಂಗದಲ್ಲಿ ಯಾರ ಮನಸ್ಸು ಉದ್ವಿಗ್ನವಾಗದೋ, ಸುಖಗಳ ಪ್ರಾಪ್ತಿಯಲ್ಲಿ ಯಾರಿಗೆ ಸರ್ವಥಾ ಇಚ್ಛೆಯಿಲ್ಲವೋ, ಆಸಕ್ತಿ, ಭಯ, ಕ್ರೋಧಗಳು ಇರುವುದಿಲ್ಲವೋ ಇಂಥ ಸಂತನನ್ನು ಸ್ಥಿರಬುದ್ಧಿಯವನೆಂದು ಹೇಳಲಾಗುತ್ತದೆ.
ಯಃ ಸರ್ವತ್ರಾನಭಿಸ್ನೇಹಸ್ತತ್ತತ್ ಪ್ರಾಪ್ಯಶುಭಾಶುಭಮ್
ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಟಿತಾ
ಯಾವನು ಸರ್ವವಸ್ತುಗಳಲ್ಲಿಯೂ ಆಸಕ್ತಿರಹಿತನಾಗಿ ಆಯಾ ಪ್ರಿಯಾಪ್ರಿಯ ವಿಷಯಗಳನ್ನು ಪಡೆದಾಗ ಸಂತೋಷಿಸುವುದಿಲ್ಲವೋ, ದ್ವೇಷಿಸುವುದಿಲ್ಲವೋ, ಆತನ ಪ್ರಜ್ಞೆಯು ಸ್ಥಿರವಾಗಿರುವುದು.
ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ
ಇಂದ್ರಿಯಾಣೇಂದ್ರಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಟಿತಾ
ಆಮೆಯು ತನ್ನ ಅಂಗಗಳನ್ನು ಒಳಕ್ಕೆ ಎಳೆದುಕೊಳ್ಳುವಂತೆ ಈ ಜ್ಞಾನನಿಷ್ಠನಾದ ಯೋಗಿಯು ಯಾವಾಗ ಎಲ್ಲಾ ಕಡೆಗಳಿಂದಲೂ ಇಂದ್ರಿಯಗಳನ್ನು ಅವುಗಳ ವಿಷಯಗಳಿಂದ ಹಿಂತೆಗೆದುಕೊಳ್ಳುವನೋ ಅವುಗಳ ವಿಷಯಗಳಿಂದ ಹಿಂತೆಗೆದುಕೊಳ್ಳುವನೋ ಆಗ ಆತನ ಪ್ರಜ್ಞೆಯು ಸ್ಥಿರವಾಗಿರುವುದು.
ಒಟ್ಟಿನಲ್ಲಿ ಸ್ಥಿತಪ್ರಜ್ಞನ ಮುಖ್ಯವಾದ ೭ ಲಕ್ಷಣಗಳನ್ನು ಗೀತಾಚಾರ್ಯನ ದೃಷ್ಟಿಯಲ್ಲಿ ಹೀಗೆ ಹೇಳಬಹುದು:
s ೧. ವ್ಯಕ್ತಿಯು ತನ್ನ ಮನಸ್ಸಿನಲ್ಲಿರುವ ಎಲ್ಲಾ ಆಶೆ ಆಕಾಂಕ್ಷೆಗಳನ್ನು ತ್ಯಜಿಸಿದಾಗ ಅವನು ಸಂತುಷ್ಟಿಯನ್ನು ಹೊಂದಿ ಬುದ್ಧಿಯಲ್ಲಿ ಸ್ಥಿರತೆಯನ್ನು ಪಡೆಯುತ್ತಾನೆ. ಒಂದೇ ಶಬ್ದದಲ್ಲಿ ಹೇಳುವುದಾದರೆ ಸಂತುಷ್ಟಿಯು ಯಶಸ್ಸಿನ ಮೊದಲ ಮೆಟ್ಟಿಲು.
೨. ಸುಖ ಹಾಗೂ ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವವನು ಸ್ಥಿತಪ್ರಜ್ಞನು. ದುಃಖವುಂಟಾದಾಗ ನಿರುದ್ವಿಗ್ನನೂ, ಸುಖದಲ್ಲಿ ಆಶೆಯನ್ನು ಹೊಂದಿರದವನೂ, ಆಸಕ್ತಿ, ಭಯ, ಕೋಪ ಯಾವುದನ್ನೂ ಹೊಂದಿಲ್ಲದಿರುವವನು. ಹಿಗ್ಗದೆ, ಕುಗ್ಗದೆ ಸಮಚಿತ್ತರಾಗಿರುವುದು ಎಂದರೆ ಎಲ್ಲ ಸಂದರ್ಭಗಳಲ್ಲಿಯೂ ಸಮಚಿತ್ತತೆಯನ್ನು ಹೊಂದಿರುವುದೇ ಸಾಧನೆಯ ಎರಡನೆಯ ಮೆಟ್ಟಿಲು.
೩. ಶುಭವುಂಟಾದಾಗ ಸಂತೋಷ ಪಡದೆ, ಅಶುಭ ಉಂಟಾದಾಗ ಯಾರನ್ನೂ ದ್ವೇಷಿಸದೆ, ಸ್ಥಿರ ಬುದ್ಧಿಯನ್ನು ಹೊಂದಿರುವವನು ಶುಭಾಶುಭಗಳನ್ನು ಸಮಾನವಾಗಿ ಸ್ವೀಕರಿಸಿ ಯಶಸ್ವಿಯಾಗಿ ಜೀವನ ನಡೆಸುವುದು ಮೂರನೆಯ ಮೆಟ್ಟಿಲು.
೪. ಪಂಚೇಂದ್ರಿಯಗಳನ್ನು ವಿಷಯಾಸಕ್ತಿಯಿಂದ ದೂರವಿರಿಸುವವರ ಬುದ್ದಿಯು ಸ್ಥಿರವಾಗಿರುವುದು. ಈ ರೀತಿ ಇಂದ್ರಿಯ ನಿಯಂತ್ರಣ ಎಂದರೆ ಇಂದ್ರಿಯಗಳನ್ನು ನಿಗ್ರಹಿಸುವುದೇ ನಾಲ್ಕನೇ ಮೆಟ್ಟಿಲು.
೫. ಸತತವಾಗಿ ನಿಯಂತ್ರಣ ಸಾಧಿಸುವಂಥ ಬುದ್ದಿವಂತರ ಮನಸ್ಸನ್ನೂ ಕೂಡ ಇಂದ್ರಿಯಗಳು ಸೆಳೆಯುತ್ತಲೇ ಇರುತ್ತವೆ. ಆದರೂ ಇಂದ್ರಿಯಗಳನ್ನು ವಶದಲ್ಲಿರಿಸಿಕೊಳ್ಳುವವರು ಬುದ್ಧಿಯಲ್ಲಿ ಸ್ಥಿರತೆಯನ್ನು ಸಾಧಿಸುವುದು ಮುಖ್ಯ. ಅಂಥವನನ್ನು ಯಶಸ್ವಿ ಜೀವನ ಸಾಗಿಸಲು ಎಡೆ ಮಾಡಿಕೊಡುವುದು ಐದನೆಯ ಮೆಟ್ಟಿಲು.
೬. ಆಸಕ್ತಿಯು ಆಸೆಗೆ ಮೂಲ. ಆಸೆಗೆ ಅಡ್ಡಿ ಉಂಟಾದಾಗ ಕೋಪ, ಕೋಪದಿಂದ ಅವಿವೇಕ, ಅವಿವೇಕದಿಂದ ಸ್ಮರಣ ಶಕ್ತಿ ನಾಶವಾಗುತ್ತದೆ. ಇದರಿಂದಾಗಿ ಬುದ್ದಿ ಶಕ್ತಿಯ ನಾಶ. ಹೀಗಾಗಿ ಕೋಪವನ್ನು ತ್ಯಜಿಸುವುದೆ ಯಶಸ್ವೀ ಜೀವನದ ಆರನೆಯ ಮೆಟ್ಟಿಲು.
೭. ಮನಸ್ಸು ಹಾಗೂ ಇಂದ್ರಿಯಗಳನ್ನು ತನ್ನ ವಶದಲ್ಲಿರಿಸಿಕೊಳ್ಳುವವರಲ್ಲಿ ಬುದ್ಧಿಯು ಸ್ಥಿರವಾಗಿರುತ್ತದೆ. ಹಾಗೆ ಸ್ಥಿರಬುದ್ಧಿ ಇಲ್ಲದವರಲ್ಲಿ ಮನಶ್ಶಾಂತಿ ಇರದು. ಶಾಂತಿಯಿಂದಲೇ ಮನೋನಿಯಂತ್ರಣವು ಸಾಧ್ಯ. ನಿಶ್ಚಿತ ಬುದ್ಧಿ ಮತ್ತು ಶಾಂತ ಮನಸ್ಕತೆಯೇ ಯಶಸ್ಸಿನ ಏಳನೆಯ ಮೆಟ್ಟಿಲು.
ಸ್ಥಿತಪ್ರಜ್ಞರನ್ನು ಬ್ರಹ್ಮಜ್ಞಾನಿ, ಜೀವನ್ಮುಕ್ತ ಎಂದೂ ಹೇಳುತ್ತಾರೆ. ಸ್ಥಿತಪ್ರಜ್ಞತೆ ಬರಬೇಕಾದರೆ ಈ ಕೆಳಗಿನ ನಾಲ್ಕು ಮೆಟ್ಟಲುಗಳನ್ನು ಏರಬೇಕಾಗುತ್ತದೆ.
೧. ಅವಿರೋಧ:
ಆತ್ಮ ನಿತ್ಯ, ಜಗತ್ತು ಮಿಥ್ಯ ಎಂಬುದನ್ನು ಅರ್ಥಮಾಡಿಕೊಂಡು, ಆತ್ಮದ ಹಿರಿಮೆಯನ್ನು ತಿಳಿಯುತ್ತಾ ತನ್ನ ಜೀವನದ ಗುರಿ ಏನು ಎಂಬುದನ್ನು ನಿರ್ಧರಿಸಬೇಕು.
೨. ಸಮನ್ವಯ:
ಯಾರೇ ಆಗಲಿ, ತನ್ನ ಸ್ವಧರ್ಮ ಏನು ಎಂಬುದನ್ನು ತಿಳಿದು, ಫಲಕಾಮನೆಯನ್ನು ವರ್ಜ್ಯಮಾಡಿ, ಕರ್ಮವನ್ನು ಶಿವಾರ್ಪಣ ಬುದ್ಧಿಯಿಂದ ಆಚರಿಸಿ, ಚಿತ್ತಶುದ್ಧಿಯನ್ನು ಮಾಡಿಕೊಳ್ಳಬೇಕು. ಕರ್ಮವೂ, ಕರ್ಮದ ಹಿಂದಿನ ಮನಸ್ಸೂ ಒಂದಕೊಂದು ಪೂರಕವಾಗಿರಬೇಕು. ಸಮನ್ವಯವಾಗಬೇಕು.
೩. ಸಾಧನೆ-ನಿರ್ಲೇಪ(ಅಂಟಿಲ್ಲದ), ನಿಷ್ಕಾಮ (ಯಾವ ಫಲಾಪೇಕ್ಷೆಯೂ ಇಲ್ಲದ), ನಿಸ್ವಾರ್ಥ(ತನಗೋಸ್ಕರವಲ್ಲದ) ಹಾಗೂ ಶುದ್ಧ ಮನಸ್ಸಿನಿಂದ ಮಾಡುವ ಕರ್ಮವೇ ಸ್ಥಿತಪ್ರಜ್ಞನಾಗಲು ಹೊರಟಿರುವವನಿಗೆ ಸಾಧನೆಯಾಗುತ್ತದೆ.
ಎಂದು ಕೆಲವು ಶ್ಲೋಕಗಳಲ್ಲಿ ಮನುಷ್ಯನ ಪತನ ಹೇಗಾಗುತ್ತದೆ ಎನ್ನುವುದನ್ನು ಕೃಷ್ಣ ಹೇಳಿದ್ದಾನೆ. ದೋಷದ ಪ್ರಮಾದದ ದಾರಿಯನ್ನೂ, ಗುಣದ ಪ್ರಮೋದದ ದಾರಿಯನ್ನೂ ಹೇಳಿದ್ದಾನೆ. ರಾಗದ್ವೇಷಾದಿಗಳಿಂದ ದೂರಾಗಿರುವವರು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿದ್ದು ಏನನ್ನು ಅನುಭವಿಸಿದರೂ ತಪ್ಪಿಲ್ಲ. ಮನೆಗೆ ಹೋಗುತ್ತಿರುವವನು ದಾರಿಯಲ್ಲಿ ಮಲ್ಲಿಗೆ ತೋಟದಿಂದ ಅರಳುತ್ತಿರುವ ಮಲ್ಲಿಗೆಯ ಸುವಾಸನೆ ಬರುತ್ತಿರಬೇಕಾದರೆ ಮೂಗು ಮುಚ್ಚಿಕೊಳ್ಳುವುದಲ್ಲ. ಮನೆಗೆ ಹೋಗಬೇಕಾಗಿರುವುದನ್ನು ನೆನಪಿನಲ್ಲಿಟ್ಟುಕೊಂಡಿದ್ದು, ಮಲ್ಲಿಗೆಯ ಕಂಪನ್ನು ಆಘ್ರಾಣಿಸಿ ಆನಂದಪಟ್ಟರೆ ತಪ್ಪಿಲ್ಲ. ಆದರೆ ಪರಿಮಳ ಚೆನ್ನಾಗಿದೆ ಎಂದು ತೋಟಗಾರನ ಅನುಮತಿಯಿಲ್ಲದೆ, ಮಲ್ಲಿಗೆ ಹೂವನ್ನು ಕೀಳುವ ಪ್ರಯತ್ನವನ್ನು ಮಾಡಬಾರದು. ಅಂದರೆ ಪರಿಮಳವನ್ನು ಆಘ್ರಾಣಿಸಿ ಸುಖಪಡುವುದು(ಭೋಗ) ತಪ್ಪಲ್ಲ. ಅದು ಧರ್ಮಕ್ಕೆ ಅವಿರೋಧವಾಗಿ ಇರಬೇಕು ಅಷ್ಚೆ.
೪. ಫಲ-ಈ ಮೇಲಿನ ಮೂರು ಸಾಧನೆಗಳನ್ನು ಸಾಧಿಸಿದರೆ, ಚಿತ್ತವು ಮಾನಸ ಸರೋವರದ ಸ್ಫಟಿಕ ಜಲದಂತೆ ನಿರ್ಮಲವಾಗುತ್ತದೆ. ಅದರಿಂದ ಸುಖ-ದು:ಖ, ಶೀತೋಷ್ಣ, ಜಯಾಪಜಯ, ತೆಗಳಿಕೆ-ಹೊಗಳಿಕೆ, ನೋವು-ನಲಿವು ಈ ಎಲ್ಲಾ ದ್ವಂದ್ವಗಳಲ್ಲೂ ಸಮತ್ವವನ್ನು ಹೊಂದುವ ಸ್ಥಿತಿ ಬರುತ್ತದೆ. ಇಂದ್ರಿಯಗಳು ತಮ್ಮ ಒಡೆತನವನ್ನು ಬಿಟ್ಟುಕೊಟ್ಟು, ಅಧೀನವಾಗುತ್ತವೆ. ಬಾಂಧವ್ಯದ ಸೆಳೆತ, ಕೋಪ, ಭಯ ಮುಂತಾದುವುಗಳಿಂದ ಬಿಡುಗಡೆ ಹೊಂದಿ, ಪರಿಪೂರ್ಣತೆ ಬಂದು ಸ್ಥಿತಪ್ರಜ್ಞ ಎಂದೆನಿಸುತ್ತಾನೆ. ಬಯಕೆಗಳನ್ನೆಲ್ಲಾ ಬಿಟ್ಟು ತನ್ನಲ್ಲಿ ತಾನೇ ತೃಪ್ತನಾಗಿರುವಂಥವನಾಗುತ್ತಾನೆ, ಸ್ಥಿತಪ್ರಜ್ಞ. ಪ್ರಾಪಂಚಿಕ ಬಯಕೆಗಳು ಬರುವುದು ಅಜ್ಞಾನದಿಂದ. ಆದರೆ ಜ್ಞಾನವೇ ನನ್ನ ಸ್ವರೂಪ ಎಂದು ತಿಳಿಯುವವನು ಸ್ವಸ್ಥತೆಯನ್ನು ಪಡೆದು, ಯಾವ ವಿಕಾರಕ್ಕೂ ತುತ್ತಾಗದೇ, ಅನುದ್ವಿಗ್ನ ಮನಸ್ಕನಾಗಿ ಇರುತ್ತಾನೆ.
ಕೇವಲ ಒಂದು ದಿನದಲ್ಲಿ, ಒಂದು ತಿಂಗಳಲ್ಲಿ, ಒಂದು ವರ್ಷದಲ್ಲಿ ಈ ಸ್ಥಿತಪ್ರಜ್ಞತ್ವ ಲಭಿಸುವುದಿಲ್ಲ. ನಿಷ್ಕಾಮ ಕರ್ಮವನ್ನು ಮಾಡಲು ಇಂದು ನಿರ್ಧರಿಸಿದರೆ ಅದನ್ನು ಸಾಧಿಸಲು ಎಷ್ಟು ಸಮಯ ತೆಗೆದುಕೊಳ್ಳಬಹುದು! ಪದೇ ಪದೇ ಹಿಂತೆಗೆಯುವ ಈ ಮನಸ್ಸನ್ನು ಬಗ್ಗಿಸಲು ಎಷ್ಟು ಸಲ ಮತ್ತೆ ಮತ್ತೆ ಯತ್ನವನ್ನು ಮಾಡಬೇಕಾಗಬಹುದು? ಅಹಿಂಸೆಯನ್ನು ಪಾಲಿಸಲು, ಸತ್ಯವನ್ನು ಹೇಳಲು ಮಾಡುವ ಭಗೀರಥ ಪ್ರಯತ್ನಗಳು, ‘ನಾನು’ ಎಂಬುದನ್ನು ಇಲ್ಲವಾಗಿಸಲು ಮರಳಿ, ಮರಳಿ ಯತ್ನ ಮಾಡುವುದು- ಹೀಗೆಯೇ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ಮನಸ್ಸನ್ನು ಸ್ಥಿರವಾಗಿ ನಿಲ್ಲಿಸದಿದ್ದರೆ ನಮ್ಮ ಪ್ರಯತ್ನವೆಲ್ಲವೂ ವ್ಯರ್ಥವಾಗುತ್ತದೆ. ಮನಸ್ಸನ್ನು ಪ್ರಸನ್ನವಾಗಿಟ್ಟುಕೊಂಡು, ಹಾಗೆಯೇ ಗಟ್ಟಿಯಾಗಿಟ್ಟುಕೊಂಡರೆ ಶಾಂತಿ ಸಿಗುತ್ತದೆ. ಸುಖದ ಅನುಭವವೂ ಆಗುತ್ತದೆ. ಶಾಂತಿಯು ಒಳಗಿನಿಂದ ಹೊರಕ್ಕೆ ಪ್ರಸಾರವಾಗುವಂಥದು. ಸುಖವು ಹೊರಗಿನಿಂದ ಒಳಕ್ಕೆ ಪ್ರವೇಶವಾಗುವಂಥದು. ಶಾಂತಿಯಿದ್ದಲ್ಲಿ ಮಾತ್ರ ಸುಖವಿರುತ್ತದೆ.
ಸ್ಥಿತಪ್ರಜ್ಞನಿಗೆ ಈ ಸ್ಥಿತಿ ಎಚ್ಚರದ ನಿದ್ರೆ (ಸಮಾಧಿ ಸ್ಥಿತಿ) ಅಂದರೆ ಹೊಯ್ದಾಟವಿಲ್ಲದ ಮನ:ಸ್ಥಿತಿ ಇರುತ್ತದೆ. ಅವನ ಮನಸ್ಸು ಯಾವಾಗಲೂ ಸತ್ಯಂ ಶಿವಂ ಸುಂದರಂ ಎಂದರೆ ಸತ್ಯವನ್ನು, ಸೊಗಸನ್ನು, ಶಿವನನ್ನು ಕಾಣುತ್ತಲೇ ಇರುತ್ತದೆ. ಅವನು ಮುಕ್ತಿಯನ್ನು ಪಡೆಯಬಲ್ಲನು.
ಕನ್ನಡದ ಶ್ರೇಷ್ಠ ಕವಿ, ಡಿ.ವಿ. ಗುಂಡಪ್ಪನವರು, ‘ಆಧುನಿಕ ಭಗವದ್ಗೀತೆ’ ಎಂದೇ ಪ್ರಸಿದ್ಧವಾದಂಥ ‘ಮಂಕುತಿಮ್ಮನ ಕಗ್ಗ’ದಲ್ಲಿ ಬದುಕಿನ ಬಗ್ಗೆ ಈ ರೀತಿಯಾಗಿ ಹೇಳಿರುವುದು ಎಲ್ಲರಿಗೂ ಗೊತ್ತಿರುವಂಥದೇ.
ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ
ಮದುವೆಗೋ, ಮಸಣಕೋ, ಹೋಗೆಂದೆಡೆ ಹೋಗು ಮಂಕುತಿಮ್ಮ
ಬದುಕಿನ ಮೇಲೆ ನಮ್ಮ ಹಿಡಿತ ಏನೂ ಇಲ್ಲ, ಎಲ್ಲವೂ ವಿಧಿಯಾಟ. ಇಲ್ಲಿ ಬದುಕಿನ ಪಥವನ್ನು, ಬದುಕಿನ ತಿರುವುಗಳನ್ನು ನಿರ್ಧರಿಸುವುದು ವಿಧಿ ಮಾತ್ರ. ನಾವೇನಿದ್ದರೂ ಅದರ ಅಡಿಯಾಳುಗಳು ಎಂಬುದನ್ನು ಕವಿ ಮಾರ್ಮಿಕವಾಗಿ ತಿಳಿಸಿದ್ದಾರೆ. ಜೀವನದಲ್ಲಿ ಬರುವ ಸುಖದುಃಖಗಳು ವಿಧಿಯನ್ನು ಅವಲಂಬಿಸಿವೆ. ಜಟಕಾಬಂಡಿ ಅದರ ಸಾಹೇಬನ ಹಿಡಿತದಲ್ಲಿ ಮುಂದೆ ಸಾಗುವಂತೆ, ನಮ್ಮ ಬದುಕು ವಿಧಿಯ ಹಿಡಿತದಲ್ಲಿದೆ. ಅದರಂತೆ, ಬದುಕಿನಲ್ಲಿ ಬಂದದ್ದನ್ನು, ಸ್ವೀಕಾರ ಮಾಡುವ ಮನೋಭಾವ ಇರಬೇಕು, ಸುಖದುಃಖ ಎರಡನ್ನೂ ಒಂದೇ ರೀತಿಯಾಗಿ ಸ್ವೀಕರಿಸಬೇಕು ಎಂಬ ಸಂದೇಶವೂ ಇದರಲ್ಲಿದೆ. ಬದುಕಿನಲ್ಲಿ ಬರೀ ಸಂತಸದ ಕ್ಷಣಗಳೇ ತುಂಬಿರುವುದಿಲ್ಲ. ಬದುಕಿನಲ್ಲಿ ಸಂತಸದ ಕ್ಷಣಗಳಾಗಲಿ, ದುಃಖದ ಕ್ಷಣಗಳಾಗಲಿ ಶಾಶ್ವತವಲ್ಲ. ದುಃಖ ಬಂದಾಗ, ಕುಗ್ಗದೆ ಅದನ್ನು ಎದುರಿಸಿ ಹೆಚ್ಚಿನ ಉತ್ಸಾಹದಿಂದ ಮುಂದೆ ನಡೆಯುವುದೇ ಬದುಕು. ನೋವು, ಸಂಕಟ, ದುಃಖ ಇವು ನಮ್ಮ ಬದುಕಿನಲ್ಲಿ ನಾವು ಆ ಕ್ಷಣಗಳಲ್ಲಿ ಕಲಿಯಬೇಕಾದ ಅನುಭವಗಳನ್ನು ನೀಡಿ ಹೊರಟು ಹೋಗುತ್ತವೆ. ಅವು ಸ್ಥಾಯಿಯಲ್ಲ.
ಸ್ಥಿರವೂ, ಗಂಭೀರವೂ, ಪರಿಪೂರ್ಣವೂ ಆದ ಸಾಗರಕ್ಕೆ ಎಲ್ಲಾ ನದಿಗಳೂ ಸೇರುವುವು. ಆದರೂ ಇದರಿಂದಾಗಿ ಸಾಗರದ ನೀರಿನ ಮಟ್ಟದಲ್ಲಿ ಯಾವ ವ್ಯತ್ಯಾಸವೂ ಕಾಣಬರುವುದಿಲ್ಲ. ಸೂರ್ಯನ ಪ್ರಖರ ಕಿರಣಗಳು ಆ ನೀರನ್ನು ಆವಿಯಾಗಿಸುತ್ತವೆ. ಆಗಲೂ ನೀರಿನ ಮಟ್ಟದಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಸಮುದ್ರವು ತನ್ನಲ್ಲಿ ಸೇರುವ ನದಿಗಳು ಎಷ್ಟೇ ಉಕ್ಕೇರಿ ಹರಿದರೂ, ತನ್ನ ಹರಿವನ್ನು ಹೆಚ್ಚಿಸಿಕೊಳ್ಳುವುದಿಲ್ಲ. ಬೇಸಿಗೆಯಲ್ಲಿ ಸಮುದ್ರವನ್ನು ಸೇರುವ ಎಲ್ಲ ನದಿಗಳ ನೀರು ಕಡಿಮೆಯಾದರೂ, ಸಮುದ್ರದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುವುದಿಲ್ಲ. ಅದೇ ರೀತಿಯಾಗಿ ಬದುಕಿನಲ್ಲಿ ಬರುವ ಎಲ್ಲ ಸುಖದುಃಖಗಳನ್ನು ಒಂದೇ ರೀತಿಯಾಗಿ ಸ್ವೀಕರಿಸಿದರೆ, ನನಗೆ ಮಾತ್ರ ಏಕೆ ಕಷ್ಟ ಎನ್ನುವ ಪ್ರಶ್ನೆ ಉದ್ಭವಿಸುವದಿಲ್ಲ. ನಮ್ಮಲ್ಲಿ ಚಿಂತೆ, ಪಶ್ಚಾತಾಪ ಬರುವುದಿಲ್ಲ. ಇಷ್ಟರಮಟ್ಟಿಗೆ, ಸಮುದ್ರದಿಂದ ಕಲಿಯಬಹುದಾದ ಮುಖ್ಯ ಪಾಠ ಇದು. ಹಾಗೆಯೇ ಜಿತಕಾಮನಾದವನ ಮನಸ್ಸನ್ನು ಯಾವುದೇ ಕಾಮನೆಗಳೂ ಚಲಿಸಲು ಸಮರ್ಥವಾಗಲಾರವು. ಬದುಕಿನಲ್ಲಿ ಎಂತಹ ತೊಂದರೆ ಬಂದರೂ ಎದುರಿಸುವ ಧೈರ್ಯ ಇರಬೇಕು ಇದೇ ನಮ್ಮ ಗ್ರಂಥಗಳು ಸಾರಿದ ‘ಸ್ಥಿತಪ್ರಜ್ಞತೆ’.
ಈ ರೀತಿಯಾಗಿ ಭಗವದ್ಗೀತೆಯು ಜಗತ್ತಿನಲ್ಲಿಯ ಎಲ್ಲಾ ಧರ್ಮಗಳ, ಎಲ್ಲ ಬೋಧನೆಗಳ, ಎಲ್ಲ ಜ್ಞಾನಿಗಳ ಚಿಂತನಕ್ಕೆ ಮಂಥನಕ್ಕೆ ವಿಷಯವನ್ನು ಒದಗಿಸುವ, ಸರ್ವ ಕಾಲಕ್ಕೂ ಸಲ್ಲುವ, ಸನಾತನ ಜೀವನಧರ್ಮದ, ಕರ್ಮದ, ಭಕ್ತಿಯ, ಮುಕ್ತಿಯ ಪಾಠವನ್ನು ಬೋಧಿಸುತ್ತದೆ. ಆತ್ಮೋದ್ಧಾರದ ಹಾದಿಯನ್ನು ತೋರುತ್ತದೆ. ಮನಸ್ಸನ್ನು ನಿಗ್ರಹಿಸುವ, ಸ್ಥಿರಬುದ್ಧಿಯನ್ನು ಹೊಂದುವ ಬಗೆಯನ್ನು ಎಂದರೆ ಸ್ಥಿತಪ್ರಜ್ಞತೆಯ ಗುಣಗಳನ್ನು ತಿಳಿಸಿಕೊಡುತ್ತದೆ. ಮನದ ಆಸೆ, ಇಂದ್ರಿಯದ ವಿಷಯಗಳ ಸಂಗವನ್ನು ಜಯಿಸದಿದ್ದರೆ ಆಗುವ ಸಂಕಟಗಳನ್ನು ತಿಳಿಸುತ್ತದೆ. ಕರ್ಮ, ಅಕರ್ಮ, ಕರ್ಮತ್ಯಾಗ, ಧ್ಯಾನ, ಜ್ಞಾನವಿಶೇಷತೆಗಳನ್ನು ತಿಳಿಸಿಕೊಡುತ್ತದೆ.

 

Leave a Reply