ಮದುವೆಯಾದ ಹೊಸತರಲ್ಲಿ
ಮದುವೆಯಾದ ಹೊಸತರಲ್ಲಿ ಒಗಟಿನಲ್ಲಿ ಪತಿಯ ಹೆಸರು ಹೇಳಲು ಎಲ್ಲರೂ ದುಂಬಾಲು ಬೀಳುತ್ತಿದ್ದರು. ನಗಾದರೋ ಒಂದೂ ಒಗಟು ಬರುತ್ತಿರಲಿಲ್ಲ. ಸಿಂಪಲ್ಲಾಗಿ ಗಂಡನ ಹೆಸರನ್ನು ಹೇಳುತ್ತಿದ್ದೆ. ಒಂದಿನ ಸಂಬಂಧಿಕರ ಮನೆಗೆ ಅರಿಷಿಣ ಕುಂಕುಮಕ್ಕೆಂದು ಕರೆದಾಗ ಅಲ್ಲಿಯ ಹಿರಿಯರೊಬ್ಬರು, ‘ಏನವಾ ಇಷ್ಟ ಉದ್ದಕ ಕಲ್ತರನೂ ಒಂದ ಒಗಟಾ ಹೇಳ್ಳಿಕ್ಕೆ ಬರೋದಿಲ್ಲೇನು?” ಎಂದು ಕೇಳಿದಾಗ ನಾಚಿಕೆಯಿಂದ ತಲೆಕೆಳಗಾಗುವ ಹಾಗಾಯಿತು. ಮುಂದೆ ತವರು ಮನೆಗೆ ಬಂದಾಗ ನಮ್ಮ ತಾಯಿಯಿಂದ ಒಂದು ಒಗಟನ್ನು ಕಲಿತುಕೊಂಡೆ. ಆಕೆಯೋ ಪುಂಖಾನುಪುಂಖಲೇ ಒಗಟುಗಳನ್ನು ಹೇಳುತ್ತಿದ್ದಳು. ದಶಾವತಾರದ ಒಗಟುಗಳನ್ನು ಎಂದೋ ಬಾಯಿಪಾಠ ಮಾಡಿದ್ದನ್ನು ಇಂದಿಗೂ ಹೇಳುತ್ತಿದ್ದಳು. ಹಾಗೇ ಒಂದು ಒಗಟನ್ನು ಕಲಿತುಕೊಂಡು ಅತ್ತೆ ಮನೆಗೆ ಹೊರಳಿ ಬಂದೆ. ಮಂಗಳ ಗೌರಿಯ ಕಾರ್ಯಕ್ರಮಕ್ಕೆ ಜನರೆಲ್ಲ ಸೇರಿದ್ದರು. ಒಗಟು ಹೇಳಲು ಮತ್ತೆ ದುಂಬಾಲು ಬಿದ್ದರು. ಆಯಿತು ಎಂದು ‘ಶ್ರೀಮನ್ನಾರಾಯಣನೆ ಮೊದಲನೇ ಅವತಾರವೇ ಮಚ್ಚ…. ಇವರ ಹೆಸರು ಹೇಳುವೆನು ಕನ್ನಡದಲ್ಲಿ, ಸ್ವಚ್ಛ’ ಎಂದೆ. ಎಲ್ಲರೂ ಹೋ ಎಂದು ನಕ್ಕಿದ್ದೇ ನಕ್ಕಿದ್ದು. ಮುಂದೆ ಮನೆಯಲ್ಲಿಯ ಚಿಕ್ಕಮಕ್ಕಳೆಲ್ಲ ಆಟವಾಡುವಾಗಲೂ ಇದನ್ನೇ ಅನ್ನುತ್ತಾ ಆಟವಾಡಹತ್ತಿದವು. ಕಲಿತದ್ದು ಇದೇ ಒಂದ ಒಗಟು. ಅದೇ ಹಳತಲಾಗಿ ಬಿಟ್ಟಿತು. ಮತ್ತೊಮ್ಮೆ ಯಾರಾದರೂ ಕೇಳಿದರೆ ಎನ್ನುವಾಗಲೇ ಆ ಕೇಳುವ ಪ್ರಸಂಗ ಬಂದೇ ಬಿಟ್ಟಿತು. ಚಹಕ್ಕೆಂದು ಕರೆದ ಸಂಬಂಧಿಕರು ತಿಂಡಿ ತೀರ್ಥವೆಲ್ಲ ಆದ ಮೇಲೆ ‘ಒಗಟಿನಲ್ಲಿ ಗಂಡನ ಹೆಸರು ಹೇಳು’ ಎಂದು ದುಂಬಾಲು ಬಿದ್ದರು. ಏನು ಮಾಡಬೇಕು ಎನ್ನುತ್ತಿದ್ದಂತೇ ನಾರಾಯಣನ ಎರಡನೇ ಅವತಾರ ಕೂರ್ಮ ಎನ್ನುವುದು ನೆನಪಾಯಿತು. ಹಾಗೆ ನಾನೇ ಹೊಂದಿಸಿ ಹೇಳಿದ್ದಾಯಿತು ಎಂದುಕೊಂಡು ‘ಶ್ರೀಮನ್ನಾರಾಯಣನ ಎರಡನೇ ಅವತಾರ ಕೂರ್ಮ, ಒಗಟಿನಲ್ಲಿ…. ರಾಯರ ಹೆಸರು ಹೇಳ ಬೇಕಾಗಿರುವುದು ನನ್ನ ಕರ್ಮ’ ಎಂದು ಬಿಟ್ಟೆ. ನೋಡಿ ಮುಂದೆ ಯಾರೂ ಎಂದೂ ಒಗಟಿನಲ್ಲಿ ಹೆಸರು ಹೇಳು ಎಂದು ಕೇಳಿದರೆ ಹೇಳಿ!
ಮತ್ತೊಮ್ಮೆ ದೀಪಾವಳಿ ಸಮೀಪಿಸಿತ್ತು. ನನ್ನ ಮದುವೆಯಾದ ಮೇಲಿನ ಮೊದಲ ದೀಪಾವಳಿ. ನಮ್ಮ ಮನೆಯವರು ಎಮ್.ಇ.ಯ ಪ್ರೋಜೆಕ್ಟ್ ವರ್ಕಗೆ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದರು. ನಾನಾದರೋ ನಮ್ಮ ಅತ್ತೆ ಮಾವನ ಜೊತೆಗೆ ಭವ್ಯವಾದ ಹಳೆಯ ಹಳ್ಳಿಯ ಮನೆಯಲ್ಲಿರುತ್ತಿದ್ದೆ. ದೀಪಾವಳಿ ಸಮೀಪಿಸುತ್ತಿದ್ದಂತೆಯೇ ನಮ್ಮ ಸಣ್ಣ ಕಾಕಾ ನನ್ನನ್ನು ಜಮಖಂಡಿಗೆ ಕರೆಯಲಿಕ್ಕೆಂದು ಮುರಗೋಡಿಗೆ ಬಂದರು. ನನಗೋ ಅತೀ ಸಂಭ್ರಮ ತೌರು ಮನೆಗೆ ಹೋಗಲಿಕ್ಕೆ, ಆದರೆ ಈಗ ಈಗಿನಷ್ಟು ಫೋನಿನ ವೈಭವವಿರಲಿಲ್ಲ. ಪತ್ರ ಬರೆದರೆ ಎರಡುಮೂರು ದಿನ ಕಾಯಬೇಕು. ಅದಕ್ಕಾಗಿ ಇವರಿಗೊಂದು ಮಾತನ್ನು ತಿಳಿಸದೇ ಅತ್ತೆ ಮಾವನ ಅನುಮತಿ ಪಡೆದು ನಾನು ಜಮಖಂಡಿಗೆ ತೆರಳಿದೆ. ತೌರುಮನೆಯಲ್ಲಿ ಸಂಭ್ರಮದಿಂದ ಹಬ್ಬದ ತಯಾರಿಕೆಯಲ್ಲಿ ತೊಡಗಿದೆವು. ಹಬ್ಬ ನಾಲ್ಕು ದಿನವಿದೆ ಎಂದಾಗ ಇವರ ಆಗಮನವಾಯಿತು. ಅವರೂ ಹಬ್ಬಕ್ಕೆ ಬಂದರೆಂದು ಮನೆಯವರೆಲ್ಲ ಖುಷಿಗೊಂಡರು. ಆದರೆ ಅವರಾದರೋ ಹೆಚ್ಚಿಗೆ ಮಾತಿಲ್ಲ ಏನಿಲ್ಲ. ಸೀರಿಯಸ್ಸಾಗಿಯೇ, ‘ಹಬ್ಬಾ ನಮ್ಮ ಮುರಗೋಡದಾಗ ಮಾಡೋಣು’ ಎಂದರು. ಉಬ್ಬಿದ ಬಲೂನಿಗೆ ಸೂಜಿ ಚುಚ್ಚಿದಂತೆ ನನ್ನ ಸಂಭ್ರಮವೆಲ್ಲ ಠುಸ್ಸು ಆಯಿತು. ‘ಯಾಕ, ನಮ್ಮದಿದು ಮೊದಲ ದೀಪಾವಳಿ ಅಲ್ಲೇನು, ಇಲ್ಲೆ ಮಾಡಬೇಕು’ ಎಂದೆ. ಆಗ ಇವರು. ‘ಮೊದಲ ಮದುವೀ ಮಾಡಿ ಹೈರಾಣ ಆಗ್ಯಾರ ಅವರು, ದೀಪಾವಳಿ ಅಳ್ಯಾತನ, ಆಹೇರಿ ಅಂತೆಲ್ಲಾ ಮತ್ತಷ್ಟು ಟ್ಯಾಕ್ಸ ಹಾಕಬೇಕಂತ ಮಾಡೀ ಏನು? ನಿನಗೇನ ಬೇಕು ಅದನ್ನ ಕೊಡಸೂ ತಾಕತ್ತ ಅದ ನನಗ…. ನಮ್ಮ ಊರಿನ್ಯಾಗನ ದೀಪಾವಳಿ ಮಾಡೋಣು ನಡಿ’ ಅಂತಂದಾಗ ನಮ್ಮ ಮನೆಮಂದಿಯೆಲ್ಲಾ ಹೌಹಾರಿದರು. ಎಷ್ಟು ಕೊಟ್ಟರೂ ಮೂಗು ಮುಚ್ಚದ ಅಳಿಯಂದಿರು ಇದ್ದಾಗ ಇಂವ ಅಪರೂಪದ ಅಳಿಯ ಸಿಕ್ಕಿದ್ದಕ್ಕೆ ನಮ್ಮ ತೌರಿನವರೆಲ್ಲ ಖುಷಿ ಪಟ್ಟರು.
ಇನ್ನೊಮ್ಮೆ ಮದುವೆಯಾದ ಹೊಸತರಲ್ಲಿ ಅಡುಗೆಯಲ್ಲಿ ನನಗೆ ಪರಿಣತಿ ಇರದಿದ್ದರೂ ಏನಾದರೂ ರುಚಿಯಾಗಿ ಮಾಡಿ ಉಣಿಸುವ ಚಪಲ ಜಾಸ್ತಿ ಇತ್ತು. ಒಂದು ಸಲ ಪತಿಯ ಸಂಬಂಧಿಕರೊಬ್ಬರು ಮನೆಗೆ ಬಂದರು. ಅವರಿಗೆ ಸಿಹಿ ಬಲು ಇಷ್ಟ. ಅದರಲ್ಲಿಯೂ ಹೋಳಿಗೆ ಎಂದರೆ ವಿಪರೀತ ಇಷ್ಟವೆಂದು ಯಜಮಾನರು ಹೇಳಿದ್ದರು. ಆದರೆ ಅಷ್ಟಾಗಿ ಹೋಳಿಗೆಯಲ್ಲಿ ಪರಿಣತಿ ಇರಲಿಲ್ಲವಾದರೂ ಹೇಗಾದರೂ ಮಾಡಲೇಬೇಕೆಂದು ಮನಸ್ಸು. ಅದರಂತೆ ಕುಕ್ಕರಿನಲ್ಲಿ ಬೆಳೆ ಬೇಯಿಸಿಕೊಂಡು, ಬೇಯ್ದ ಬೇಳೆಯಲ್ಲಿಯೇ ಬೆಲ್ಲವನ್ನು ಹಾಕಿ ಮೇಲೆ ಸ್ವಲ್ಪ ನೀರನ್ನು ಹಾಕಿ ಮಿಕ್ಸರಿನಲ್ಲಿ ತಿರುಗಿಸದೆ. ಮಿಕ್ಸರಿನ ಮುಚ್ಚಳ ತೆಗೆದು ನೋಡಿದರೆ ಅಳ್ಳಕ ಹೂರಣ! ಅಯ್ಯೋ ನಮ್ಮ ತಾಯಿ ಮಾಡುವಾಗ ಹೂರಣ ಗಟ್ಟಿಯಾಗಿರುತ್ತಿತ್ತು. ಇದು ಹೀಗೇಕೆ ಎಂದು ತಿಳಿಯದಾಯಿತು. ಹೊರಗೆ ನಮ್ಮ ಪತಿ ಹಾಗೂ ಅವರ ಸಂಬಂಧಿಕರು ಹೊಟ್ಟೆ ಹಸಿದುಕೊಂಡು ಊಟದ ಹಾದಿ ಕಾಯುತ್ತಾ ಕುಳಿತಿದ್ದಾರೆ. ಏನೂ ತೋಚದಂತಾದಾಗ ಥಟ್ಟಂತ ಒಂದು ಐಡಿಯ ಹೊಳೆಯಿತು. ತಕ್ಷಣವೇ ಗೋಧಿ ಹಿಟ್ಟಿನಲ್ಲಿ ಆ ಲಿಕ್ವಿಡ್ ಹೂರಣವನ್ನು ಹಾಕಿ ಕಲಿಸಿದೆ. ಪುಟ್ಟ ಪುಟ್ಟ ಪೂರಿಗಳನ್ನು ತಯಾರಿಸಿದೆ. ಹೊಂಬಣ್ಣದ ಆ ಪೂರಿಗಳು ನೋಡಲಷ್ಟೇ ಅಲ್ಲ, ಸುವಾಸನೆ ಭರಿತ ರುಚಿಕಟ್ಟಾದ ಪುರಿಗಳಾಗಿದ್ದವು. ಹೊಸರುಚಿ ಒಂದು ಹೀಗೆ ತಯಾರಾಗಿತ್ತು. ಊಟಕ್ಕೆ ಕುಳಿತಾಗ ನಮ್ಮೆಜಮಾನರು ಅವರಿಗೆ ‘ನಮ್ಮ ಹೆಂಡತಿ ಹೊಸಾ ಹೊಸಾ ಹಸಿದುಕೊಂಡು ಅವರಿಬ್ಬರೂ ಹೊರಗೆ ಕುಳಿತಾಗ ನಡುನಡುವೆ ಅಡುಗೆಯಾಯ್ತೆ ಎಂದು ವಿಚಾರಿಸಲು ಎರಡೆರಡು ಸಲ ಒಳಗೆ ಬಂದು ಹೋಗ ಮಾಡಿದ್ದರು. ಅಳ್ಳಕ ಹೂರಣವನ್ನು ನೋಡಿ ನಾನು ತಲೆಯ ಮೇಲೆ ಕೈ ಹೊತ್ತಿದ್ದನ್ನೂ ಕಂಡಿದ್ದರು. ಆದರೂ ನಾನು ಏನೋ ಹೊಸದೊಂದನ್ನು ತಯಾರಿಸಿ ಬಡಿಸಿದಾಗ ಅವರ ಮುಂದೆ ನನ್ನ ಹೆಗ್ಗಳಿಕೆಯನ್ನು ಹೇಳಿದರು. ಆಗ ಅವರ ಸಂಬಂಧಿಕರೂ ಕೂಡ, ಅಲ್ರೀ ನಾನೂ ಇಷ್ಟ ಕಡೆ ಊಟಾ ಮಾಡೀನಿ ಆದರ ಇಂಥಾ ಪೂರಿ ನಾನ ಎಲ್ಲ್ಯೂ ತಿಂದಿಲ್ಲ ಬಿಡ್ರೀ, ವೈನಿ ಪೂರಿ ಭಾಳ ಛೋಲೋ ಆಗ್ಯಾವ ಇನ್ನಷ್ಟು ಹಾಕ್ರೀ ಎಂದಾಗ ನನ್ನ ಸ್ವಂತ ತಪ್ಪಿನಿಂದ ಹೊಸದೊಂದು ಆವಿಷ್ಕಾರವಾಗಿ ಹೊಸ ರುಚಿ ಹೊರಬಂದಿತ್ತು. ನನ್ನ ಅನ್ವೇಷಣಾ ಪ್ರಜ್ಞೆಗೆ ನಾನೇ ಬೆನ್ನು ತಟ್ಟಿಕೊಂಡೆ.