ಸವತೀ ಸಂಬಂಧ!
ಈಗ ಇಪ್ಪತ್ತು ವರ್ಷದ ಹಿಂದೆ ಕಾರು ಎಂದರೆ ಲಗ್ಜುರಿಯಸ್ ಎಂದೆನಿಸಿತ್ತು. ಎಲ್ಲಿಯಾದರೂ ಸ್ಥಿತಿವಂತರಾದ ಒಬ್ಬೊಬ್ಬರು ಖರೀದಿಸುತ್ತಿದ್ದರು. ಈಗಿನ ಮಾತು ಬಿಡಿ, ಪಲ್ಯ ಮಾರುವವನ ಹತ್ತಿರವೂ ಕಾರು ಇರಲೇಬೇಕು! ಬೇರೆ ಊರಿನಿಂದ ತರಲು ಹಾಗೂ ಬೇರೆ ಮಾರುಕಟ್ಟೆಗೆ ಕಳಿಸಲು.
ಸರಿ, ನಮ್ಮನೆಯವ್ರು ಕಾರು ತೊಗೋತೀನಿ ಅಂದಾಗ ನನಗ ಮುಗಿಲು ಮೂರೇ ಗೇಣು ಎಂತಾತು. ಯಾವ ಕಾರು ಯಾವ ಬಣ್ಣ, ಎಷ್ಟ ರೇಟು ಒಂದೂ ಕೇಳಲಿಲ್ಲ ನಾನು. ಕಾರು ಬಂದರೆ ಸಾಕು ಅದರಲ್ಲಿ ಕುತ್ತರೆ ಸಾಕು ಎಂಬಂತಾಗಿತ್ತು ನನ್ನ ಮನಸ್ಥಿತಿ. ‘ಸರಿ ಗೋವಾಕ್ಕ ಹೋಗಿ ಕಾರ ತೊಗೊಂಡು ಬರ್ತೀನಿ’ ಎಂದಾಗ ಖುಷಿಯಾಗಿ ಕಳಿಸಿಕೊಟ್ಟೆ. ಅವರು ಹೊರಗೆ ಹೋಗೋದೇ ತಡ ಎಲ್ಲ ನನ್ನ ಅಕ್ಕ ಅಣ್ಣರಿಗೆ ಫೋನು ಹಚ್ಚಿ, ನಾವೂ ಕಾರ ತೊಗೋತೀವಿ, ಇವತ್ತ ಗೋವಾಕ್ಕೆ ತರಲಿಕ್ಕಂತನ ಹೋಗ್ಯಾರ ಅಂತ ಹೇಳಿದರ, ಅವರು, ‘ಎಷ್ಟ ಲಕ್ಕೀ ಇದ್ದಿಯ ನಮ್ಮ ಮನ್ಯಾವ್ರೂ ಇದ್ದಾರ ಒಂದ ಕಾರ ಇಲ್ಲ ಒಂದ ಬೈಕ ಇಲ್ಲ, ತೊಗೋಳೂದಂದ್ರ, ಎದಕ್ಕ ಬೇಕು? ಎಲೆವನ್ ನಂಬರ್ ಎರಡ ಕಾಲಿಲ್ಲೇನ’ ಅಂತಾರ. ‘ದೂರ ಎಲ್ಲೆರೆ ಹೋಗಬೇಕಂದ್ರ’ ‘ಯಾಕ ಸಿಟಿ ಬಸ್ಸಿಲ್ಲೇನ? ಗೌವರ್ನಮೆಂಟನವ್ರು ಬಸ್ಸ ಯಾಕ ಮಾಡ್ಯಾರ ಹಂಗ, ಓಡ್ಯಾಡ್ಸಿಲಿಕ್ಕೇನ, ಗಾಡಿ ತೊಗೊಂಡ ಏನ ಮಾಡೂದು’ ಅಂತ ಇತ್ತಂಡ ವಾದಾ ಮಾಡ್ತಾರ ಎಂದು ಶಾರಕ್ಕ ತನ್ನ ಗಂಡನ ಉಪದ್ದ್ಯಾಪ ಅರುಹಿದರ ಒಳಗಿಂದೊಳಗ ನಾ ಮತ್ತಷ್ಟು ಉಬ್ಬಿ, ‘ಏ ನಮ್ಮ ನೀವ್ರೇನ ಹಂಗಿಲ್ಲವಾ ಕಾರ ತೊಗೋಬೇಕ್ರೀ, ನನಗ ಅದರಾಗ ಕೂಡಬೇಕ ಅನಿಸೇದ್ರೀ ಅನ್ನೂದಕ್ಕನ ಕಾರ ತರಲಿಕ್ಕೇಂತ ಹೋದ್ರು’ ಅಂತ ಹೇಳಿ ಅಕಿ ಹೊಟ್ಟ್ಯಾಗ ಮತ್ತಷ್ಟು ಉಪ್ಪು ಖಾರ ಹಾಕಿ ಉರಿಯು ಹಂಗ ಮಾಡೀ ನಾ ಒಳ್ಳೆ ಹೆಮ್ಮೆ ಪಟಗೊಂಡೆ, ಮುಂದ ನನ್ನ ಹೊಟ್ಟಿ ಒಳಗ ಖಾರ ಬಿದ್ದಾಂಗ ನನ್ನ ಹೊಟ್ಟಿನ ಉರೀತದ ಅಂತ ಅವಾಗ ನನಗೇನು ಗೊತ್ತಿತ್ತು!
ಮುಂದ ಸಂಜೀ ಆತು, ಬೆಲ್ ಆವಾಜ್ ಆತು, ಬಾಗಿಲು ತೆಗೆದು ನೋಡಿದ್ರ ನಮ್ಮೆಜಮಾನರು ಮುಂದ ನಿಂತಾರ, ಒಳಗ ಬರುತ್ತ ‘ಕಾರ ಬಂದದ ನೋಡು ಬಾ’ ಎಂದರು. ಹೊರಗ ಬಂದ ನೋಡಿದ್ರ ಗೇಟ ಮುಂದ ಒಂದು ಲಠ್ಠ ಟ್ರಕ್! ‘ಇದೇನ್ರೀ ಕಾರ ತರಲಿಕ್ಕೇಂತ ಹೋಗಿ ಟ್ರಕ್ ತಂದೀರಲ್ಲಾ?’ ಅರ್ಧ ಕೋಪ ಅರ್ಧ ಚಾಷ್ಟಿ ಮಾಡಕೋತ ಕೇಳಿದ್ರ, ಇವರು ನಗಲಿಕತ್ತ್ಯಾರ. ‘ಇದೇನ್ರೀ ನನ್ನ ಮಾತಿಗೆ ಕಿಮ್ಮತ್ತ ಇಲ್ಲೇನ ನಗಲಿಕತ್ತೀರಲ’ ಎಂದರೆ ಅವರು ‘ಟ್ರಕ್ ತಂದಿಲ್ಲ ಮಾರಾಳ, ಕಾರ ತಂದೀನಿ’ ಎಂದರು. ‘ಮತ್ತ ಕಾರು ಟ್ರಕ್ಕಿನ್ಯಾಗ ಅದ” ಎಂದರೆ ಹೌಹಾರುವ ಪರಿಸ್ಥಿತಿ ನನ್ನದಾಯಿತು. ‘ಅಂದರ ಅದು ಓಡು ಕಾರಲ್ಲೇನು?’ ಎಂದರೆ ಇವರು ‘ಹೌದು, ಈಗ ನಿಂದರೂ ಕಾರಿದ್ರೂ ಅದನ್ನ ರಿಪೇರಿ ಮಾಡಿ ಓಡ್ಯಾಡ್ಸಬೇಕು! ಎಂದರು. ನನ್ನ ಸಿಟ್ಟು ನೆತ್ತಿಗೇರಿ, ನೆತ್ತ್ಯಾಗಿನ ಪಿತ್ತ ಗರಾಗರಾ ತಿರಿವಿದ್ಹಾಂಗಾತು. ಇಂಥವ್ರ ಜೋಡಿ ಏನು ಮಾತು ಅಂದು ಕಾರರೇ ನೋಡೋಣು ಅಂತ ಅದರ ಹಂತೇಕ ಹೋದರ ನನ್ನ ಮನಸ್ಸನ್ಯಾಗ ಮೂಡಿದ್ದ ಒಂದೂ ಕಾರ ಅಲ್ಲಿ ಇರಲಿಲ್ಲ. ಮಾರುತಿ ೮೦೦ ಅಥವಾ ಫಿಯೆಟ್ ಅಂತ ನಾ ತಿಳಿದರ ಅಲ್ಲಿ ಇರುವುದು ನನ್ನ ಹೊಟ್ಟ್ಯಾಗ ಬೆಂಕಿ ಹಚ್ಚಿದ್ದು ಮಾರಿಸ್ ಮೈನರ್ ೧೯೫೦ ಮಾಡೆಲದ್ದು!
ಮುಂದ ಅದನ್ನು ಟ್ರಕನ್ಯಾಗಿನಿಂದ ಇಳಿಸಿ ನಮ್ಮ ಗ್ಯಾರೇಜನ್ಯಾಗ ಇಡಲಾಯಿತು. ಅವತ್ತಿನಿಂದ ಶುರು ಆತು ನೋಡ್ರಿ ನನ್ನ ಅವರ ಸವತಿ ಸಂಬಂಧ! ಮುಂಜಾನೆ ಒಮ್ಮೆ ರಾತ್ರಿ ಒಮ್ಮೆ ಅದರ ಮ್ಯಾಲ ಕೈ ಆಡಿಸೋದೇನು, ಯಾರರೇ ಬಂದರ ಅದಕ ಹತ್ತಿಗೊಂಡ ನಿಲ್ಲುದೇನು? ಅದರ ಬಗ್ಗೆ ಮೆಚ್ಚುಗೆ ಮಾತೇನು? ಒಂದ ಎರಡ ಕೇಳಿ ಕೇಳಿ ನನ್ನೂ ಕಿವಿ ಕಿವುಡಾಗುವಾಂಗ ಅದು. ತೊಗೋಳ್ಳುದು ತೊಗೊಂಡ್ರಿ ಕಾರು ಸ್ವಲ್ಪ ಕುತ್ತ ಅಡ್ಡ್ಯಾಡಲಿಕ್ಕೆ ಬರುವಂಥಾದ್ದರೇ ತೊಗೋಬಾರದ ಎಂದು ಒಮ್ಮೆ ಸಿಟ್ಟಿನಿಂದ ಕೂಗಾಡಿದ್ರ ಇವರು ಅಷ್ಟೇ ಶಾಂತ ಆಗಿ, ‘ತಡೀ, ರಿಪೇರಿ ಆಗಿ ಬರಲಿ, ನೀನು ಜಮ್ಮಂತ ಅಂತ ಅದರಾಗ ಕುತ್ತ ಹೊಂಟರ ಮಂದೀ ನಿನ್ನ ಈ ಕಾರನ್ನ ತಿರುಗೀ ತಿರುಗೀ ನೋಡ್ತಾರ’ ಎನಬೇಕೆ.
ಅದು ಗ್ಯಾರೇಜಿನ್ಯಾಗ ಪ್ರತಿಷ್ಠಾಪಿಸಿದಂದಿನಿಂದ ಇವರು ತಮ್ಮ ಉದ್ಯೋಗ ಮಾಡಿಕೊಂಡು ಬಂದು ಅದರ ಹಂತೇಕನ ವಾಸ್ತವ್ಯ ಮಾಡಕೊಂಡಬಿಟ್ಟರು. ಒಂದ್ಸಲ ಇವರ ಖಾಸಾ ಗೆಳ್ಯಾ ಹಾಗೂ ಅವನ ಹೆಂಡತಿ ಮನೀಗೆ ಬಂದ್ರು. ‘ಇಲ್ಲೇನ್ರಿ ವೈನಿ ನಿಮ್ಮ ಪತಿದೇವ್ರು’ ಎಂದು ಕೇಳಿದರು. ನನಗೂ ಏನು ಹೇಳಬೇಕು ಅಂತನ್ನುದ ತಿಳೀದೆ, ‘ತಡೀರಿ ಇಲ್ಲೇ ಅಂಗಡಿಗೆ ಹೋಗ್ಯಾರ ಈಗ ಬರ್ತಾರ ಬರ್ರೀ ಕೂಡ್ರಿ’ ಎಂದು ಅವರನ್ನು ಕುಡಿಸಿ, ಹಿತ್ತಲಬಾಗಿಲಾ ತೆಗೆದು ಗ್ಯಾರೇಜೀಗೆ ನುಸುಳಿದರ ಅಲ್ಲಿ ಇವರೆಲ್ಲೂ ಕಾಣಿಸದಾದರು. ಎಲ್ಲಿ ಹೋದರೂ ಅನ್ನೂ ದಿಗಿಲು. ಆದರೂ ಸಂಶೆ ಬಂದು ಕಾರಿನ ಒಂದು ಸುತ್ತು ಹಾಕಿ ಕೆಳಗೆ ಬಗ್ಗಿ ನೋಡಿದರ…. ಅಲ್ಲಿ ಅತ್ಯಂತ ಆರಾಮವಾಗಿ ಅಂಗಾತ ಮಲಕ್ಕೊಂಡು ಕಾರಿನ ಪಂಚನಾಮೆ ಶುರು ಮಾಡಿದ್ದರು! ಕೈಯಾಗ ಸ್ವ್ಯಾನರ್ ಆದರಾ ಬಾಯಾಗ ಬ್ಯಾಟರಿ! ಮೈ ಕೈ ಎಲ್ಲಾ ಕಪ್ಪೋ ಕಪ್ಪೂ. ಏನ್ರೀ ನಿಮ್ಮ ಗೆಲ್ಯಾ ಬಂದಾರ ಲಗೂ ಬರ್ರೀ ಎಂದು ಹೇಳೂದಕ್ಕನ ತೆವಳೋಕೋತ ಹೊರಗ ಬಂದರ ಥೇಟ ಕಪ್ಪ ಮಾರೀ….
ಹಿತ್ತಲ ಬಾಗಿಲಿನಿಂದ ಬಂದು ಬಾತರೂಮಿನ್ಯಾಗ ಮಾರಿ ತೊಳ್ಕೊಂಡು ಲುಂಗಿ ಉಟಗೊಂಡ ಬರುತನಕಾ ನನ್ನ ಉಸಿರ ಮ್ಯಾಲ ಕೆಳಗ!
ಇವರು ಮೆಕ್ಯಾನಿಕಲ್ ಇಂಜನೀಯರಿಂಗ ಕಲಿತದ್ದು ಅವರ ಅರ್ಥದಲ್ಲಿ ಸಾರ್ಥಕ ಆಗಿತ್ತು. ಆ ಕಾರಿನ ವಾಯರಿಂಗ, ಟಿಂಕರಿಂಗು, ಪೇಟಿಂಗು, ವ್ಯಾಕ್ಸ್ ಪಾಲೀಷಿಂಗು, ಮಶೀನಿಂಗು ಅನ್ನುತ್ತಾ ಎಂಟು ತಿಂಗಳ ಕಳಿದದ್ದ ಗೊತ್ತಾಗಲಿಲ್ಲ. ಅದರಲ್ಲಿ ಕುಶನ್ ಕವರ್ಸ್ ಬದಲೀ ಆದವು. ಇಂಟೀರಿಯರ್ಸ್, ಎಲ್ಲ ಬದಲೀ ಆದರೂ ಅದರ ಇಂಜಿನ್ ಮಾತ್ರ ಅದೇ ಇತ್ತು! ಅದು ಒರಿಜನಲ್ ಇಂಗ್ಲೆಂಡ್ ದ್ದಾಗಿತ್ತು! ‘ಮೇಡ ಇನ್ನ ಇಂಗ್ಲೆಂಡ್’ ಅಂತ ಅದರ ಮ್ಯಾಲ ನಮೂದಿಸಿತ್ತು!
ಒಂದಿನ ನಮ್ಮ ಆತ್ಮೀಯರೊಬ್ಬರು ಮನೆಗೆ ಬಂದರು. ಭಾಳ ದಿನಕ್ಕೆ ಬಂದಿದ್ದರು ಇವರು ಯಥಾಸ್ಥಿತಿ. ತಮ್ಮ ಕಾರಿನ ಮಗ್ಗಲದಾಗ! ಎಲ್ಲಿ ಇದ್ದಾನವ ನಿನ್ನ ಗಂಡ’ ಅಂದರು. ‘ತಡೀರಿ ಕರೀತಿನಿ ಎಂದೆ ನಗುತ್ತಾ, ಅಷ್ಟರಲ್ಲಿ ಇವರ ಕಾರಿನ ಸಾಹಸದ ಮಹಿಮೆ ಎಲ್ಲಾ ಕಡೆ ಪ್ರಸಾರ ಆಗಿತ್ತು. ಎಲ್ಲರ ಮಧ್ಯದಲ್ಲಿ ಕಾರಿನ ಜೊತೆಗೆ ಇನ್ನೊಂದು ಮದುವೆ ಮಾಡಕೊಂಡಿದ್ದಾರೆ ಎನ್ನುವ ಹಾಸ್ಯ ಚಾಲ್ತಿಯಲ್ಲಿ ಬಂದಿತ್ತು. ಅವರಿಗೇನೂ ಅದರಿಂದ ತೊಂದರೆ ಆಗುತ್ತಿರಲಿಲ್ಲ. ಆದರೆ ನನ್ನ ಹೊಟ್ಟೆಯಲ್ಲಿ? ಮತ್ಸರದ ಬೆಂಕಿ ಅವರಿಗೆ ಕಾಣುವುದಾದರೂ ಹ್ಯಾಂಗ? ಆತ್ಮೀಯರು ಎದ್ದು ನಿಂತರು, ತಡೀವಾ, ನಿನ್ನ ಸವತಿ ಹಂತೇಕ ವಾಸ್ತವ್ಯ ಹಾಕ್ಯಾನೇನು? ನಾನೂ ಅಲ್ಲೇ ಹೋಗತೀನಿ!’ ಅನ್ನಬೇಕೆ.
ಅಂತೂ ಇಂತೂ ಕಾರು ಮನೀ ಮುಂದ ಹೊಳೀಲಿಕತ್ತಿತ್ತು, ಖರೇ ಅಂದರೂ ಆ ಕಾರಿನಿಂದ ನಮ್ಮ ಹೆಸರು ಫೇಮಸ್ಸಾತು ಅಂತ ಹೇಳಬಹುದು. ಬೆಳಗಾಂವಿ ಒಳಗ ಹಜಾರಕಿಂತಾ ಹೆಚ್ಚು ಪ್ರೊಫೆಸರ ಇರಬಹುದು. ಆದರೆ ಆ ಹಳೀ ಮಾಡೆಲ್ ನ ಕಾರಿನ ಮಾಲೀಕ ಇದ್ದಾನಲ್ಲ ಆ ಪ್ರೊಫೆಸರ್ ಅನ್ನೂ ಹಂಗ ಆತು. ಅದು ಒಂದಿನ ಶುಭ ಮುಹೂರ್ತದಾಗ ಶುಭಗಳಿಗೆ ಒಳಗ ಒಂದ ಲಠ್ಠ ಟೆಂಗಿನಕಾಯಿ ಒಡೆದು ಹಾದೀ ಮ್ಯಾಲ ಬಂತು, ಎದುರಿನ ಪಾಟೀಲ ಗಿಡ್ಡಚೆಡ್ಡಿ ಹಾಕ್ಕೊಂಡು ಎಲ್ಲೆ ಕೂತಿದ್ದೋ ಎದ್ದು ಬಂದ. ಅವನ ಕೈಯ್ಯಾಗ ಒಂದು ಹಾರ! ಕಾರಿಗೆ ಹಾಕಲಿಕ್ಕೆ ಅಂತ ತಂದಿರಬೇಕು ಅಂತ ನಾವ ತಿಳಿದಿದ್ದವು. ಆದರ ನಮ್ಮ ಊಹಾ ತಪ್ಪಿತ್ತು. ಬಂದವನೇ ನಮ್ಮ ಮನಿಯವರಿಗೆ ಆ ಹಾರಾ ಹಾಕಬೇಕ! ‘ಏ ನನಗ್ಯಾಕ್ರೀ ಈ ಹಾರಾ! ‘ಸಾಹೇಬ, ನಿಮ್ಮ ಸಹನಶೀಲತಾಕ್ಕ ಈ ಹಾರ!’ ಎನ್ನಬೇಕೆ. ಯಾಕಂದರ ಕಾಲೇಜ ಬಿಟ್ಟ ಬಂದ ಕೂಡ್ಲೇ ಇವರು ಠಿಕಾಣಿ ಹೂಡುದು ಅದರ ಪಕ್ಕದಲ್ಲೇ. ಅವರ ಚಹಾ, ತಿನಿಸು ಅಲ್ಲೇ ಆಗುತ್ತಿತ್ತು. ರಾತ್ರಿ ಹೋಗಿ ಅಪರಾತ್ರ್ಯಾಗತಿತ್ತು. ಕಾರು ಹಾದಿಗೆ ಬಂದಾಗ ಚಿಕ್ಕಚಿಕ್ಕ ಮಕ್ಕಳೆಲ್ಲ ನೆರೆದವು. ಅವುಗಳೆಲ್ಲ ‘ಹೋ ಅಡ್ವರ್ಟೈಜಮೆಂಟ್ ಕಾರ’ ಎಂದು ಒಕ್ಕೊರಲಿನಿಂದ ಕೂಗತೊಡಗಿದವು. ಅದು ಸ್ಟಾರ್ಟ್ ಆಗುತ್ತಿದ್ದಂತೆಯೇ ಓಣಿಯ ಜನರೆಲ್ಲ ಸೇರಿ ಚಪ್ಪಾಳೆಯಿಂದ ಸ್ವಾಗತ ಮಾಡಬೇಕೇ! ಇವರ ಓರೆಗಣ್ಣು ನನ್ನ ಕಡೆಗೆ, ಮಾರುತಿ ಕಾರ ತೊಗೊಂಡಿದ್ರ ಇಂಥಾ ಪಬ್ಲಿಸಿಟಿ, ಇಂಥಾ ಕೌತುಕ ಸಿಗತಿತ್ತೇನು, ಈಗ ನೋಡು ಹ್ಯಾಂಗ ಮಂದೀ ಕೌತುಕದ್ಲೇ ನೋಡತಾರ, ಅಷ್ಟೇ ಅಲ್ಲ ಹೊಳ್ಳಿಹೊಳ್ಳಿ ನೋಡ್ತಾರ ಎಂದು ಕಾರು ಸ್ಟಾರ್ ಮಾಡಿದ್ರು, ನಿಮಗ ಹೇಳ್ತೀನಿ ರೋಡಮ್ಯಾಲ ಹೋಗಾವ್ರ ಬರಾವ್ರ ಗಾಡೀ ಮ್ಯಾಲ ಕುತ್ತಾವ್ರ ಇಳದಾವ್ರ ಎಲ್ಲಾರ ಗೋಣುಗಳು ನಮ್ಮ ಕಾರ ಕಡೆ ಹೊಳ್ಳಲ್ದ ಹೋಗಾಂಗೇ ಇಲ್ಲ. ಮಂದೀ ನಿಂತ ನಿಂತ ನೋಡತ್ತಿದ್ದರು. ಯಾವಾಗೂ ಬಂದ ಬಿದ್ದಿಲ್ಲ ದುಗಸೂದ ಹತ್ತಿಲ್ಲ ಅಷ್ಟ ಅಲ್ಲ ಮಂದೀ ಈಗ ನಮ್ಮನಿಗ ಎಡತಾಕಲಿಕತ್ತ್ಯಾರ. ‘ಕಾರ ಮಾರುದದ ಏನ್ರೀ ನಾವು ತೋಗೋತೀವ್ರಿ’ ಎನ್ನುವ ದುಂಬಾಲು ಬೇರೆ. ನಂದ ಯಥಾಸ್ಥಿತಿ ‘ಏ ಕೊಟ್ಟ ಬಿಡ್ರಿ ಇದನ್ನ… ಮಾರ್ಕೆಟ್ಟನ್ಯಾಗ ಎಂಥೆಂಥ ನಮೂನೆ ಕಾರ ಬಂದಾವ…… ಛೋಲೋದ ಒಂದ ತೊಗೋಳ್ಳಣು’. ಹೀಂಗ ಅನಲಿಕ್ಕೆ ಕಾರಣನೂ ಅದ. ನನ್ನಕ್ಕಿಂತ ಹೆಚ್ಚ ಪ್ರೀತಿ ವಸ್ತು ಯಾವುದು ಅಂತ ಇವರಿಗೇನರೇ ಕೇಳಿದ್ರ ಇವ್ರು ಥಟ್ಟಂತೆ ಹೇಳ್ತಾರ ‘ಮಾರಿಸ್ ಮೈನರ್ ೧೯೫೧ ಮಾಡೆಲ್ ದ್ದು’ ಅಂತ, ಅಂಥಾ ಸವತೀ ಜೋಡಿ ನಾ ಜೀವನ ಎಲ್ಲಾ ಏಗಬೇಕಲ್ಲಾ ಅನ್ನುದ ನನ್ನ ಒಳಗಿನ ಇಂಗಿತ. ಮತ್ಸರ ಅನ್ರಿ ಬೇಕಾದ್ರ, ಆದರ ಇವರು ಬಡಪೆಟ್ಟಿಗೆ ಒಪ್ಪಾವ್ರ ಎಲ್ಲೇರೆ, ‘ನಿನ್ನಾದರೂ ಬಿಟ್ಟೇನು ಆದರೆ ಈ ಕಾರನ್ನು ಬಿಡಲಾರೆ’ ಎನ್ನುವ ಪ್ರಲಾಪ!
ಇನ್ನೊಂದ್ಸಲ ಏನಾಯಿತೆಂದರೆ ಇವರ ಖಾಸಾ ದೋಸ್ತ ಊರಿನಿಂದ ಬಂದಿದ್ದ. ಗಾಡಿಯನ್ನು ಟ್ರೈಯಲ್ ಗೆ ತೆಗೆದುಕೊಂಡು ಹೋಗೋಣ ಎಂದು ಇವರು ಹೇಳಿದರು. ಆಗ ಆತ ‘ಮಾರಾಯ, ನನಗ ಮೊದಲ ಡಯಾಬೀಟೀಸ್ ಬ್ಲಡ್ ಪ್ರೆಶರ್ ಶುರು ಆಗೇದ. ಎಲ್ಲೆರೆ ಗಾಡಿ ಬಂದ ಬಿತ್ತೂ ಅಂದರ ನೀ ದುಗಸ ಅನ್ನಾಂವ, ನನಗೇನರೇ ಹಾರ್ಟ್ ಅಟ್ಯಾಕ್ ಬಂದರ ಏನ ಮಾಡೋದು’ ಎಂದು ತನ್ನ ಪ್ರಶ್ನೆ ಮುಂದಿಟ್ಟ. ‘ಇಲ್ಲ ಬಾರೋ, ಹಂಗೇನ ಆಗೂದಿಲ್ಲ’ ಎಂದ ಇವರು ಒಂದು ಕ್ಯಾನಿನಲ್ಲಿ ಪೆಟ್ರೋಲ್ ತೆಗೆದುಕೊಂಡು ಗಾಡಿ ಒಳಗೆ ಹೊಕ್ಕರು. ಪಕ್ಕದ ಸೀಟಿನಲ್ಲಿ ಇವರ ಮಿತ್ರ! ‘ಈಗ ಒಂದು ಕೆಲ್ಸಾ ಮಾಡು’ ಅಂತ ಇವರು ತಮ್ಮ ಮಿತ್ರನಿಗೆ ಹೇಳಿದರು. ‘ಏನಪಾ… ಮತ್ತೇನ ನಿಂದು?’ ಕೇಳಿದ ಮಿತ್ರ. ‘ಏನು ಇಲ್ಲ, ನಿನ್ನ ಕಾಲ ಹಂತೇಕ ಈ ಪೆಟ್ರೋಲ್ ಕ್ಯಾನ ಇಟ್ಟಿರ್ತಿನಿ. ಇದರೊಳಗೆ ಒಂದು ಪೈಪ ಬಿಟ್ಟಿರತೀನಿ. ಅದನ್ನ ಹಿಡಕೊಂಡ ಕೂಡು ಕೆಲಸ ಅಷ್ಟೇ.’
‘ಅಲ್ಲೋ ಮಾರಾಯಾ ಈ ಪೆಟ್ರೊಲ್ ಕ್ಯಾನ ಎಲ್ಲೆರೆ ಧಡಕಿಗೆ ಉಳ್ಳಿದರೆ…’
‘ಅದಕ್ಕ ಹಿಡಕೊಂಡ ಕೂಡು ಅನ್ನೂದು’ ನಗುತ್ತಾ ಹೇಳಿದರು.
‘ಅಲ್ಲಪಾ ಈ ಪೆಟ್ರೊಲ್ ವಾಸ ತೊಗೋತ ಕೂಡುದ. ಯಾರರೇ ಹೀಂಗ ಇಡ್ತಾರೇನೋ? ಪೆಟ್ರೋಲ್ ಟ್ಯಾಂಕ್ ಇಲ್ಲೇನ ಗಾಡಿ ಒಳಗ. ಇದೊಳ್ಳೆ ಎಂಟಿಕ್ ಪಿಸ್ ಹಿಡ್ಕೊಂಡ ಬಂದೀಪಾ.’
‘ಇಲ್ಲೋ, ಪೆಟ್ರೋಲ್ ಟ್ಯಾಂಕಿ ಅದ, ಆದರ….. ಅದು ಸ್ವಲ್ಪ ರಿಪೇರಿ ಮಾಡಿಸ್ಬೇಕು ಅಲ್ಲೀ ತನಕ ಹೀಂಗ….. ಇದರಿಂದ ಎಷ್ಟ ಪೆಟ್ರೋಲ್ ಕಂಜುಮ್ಶನ್ ಆಗ್ತದ ಅನ್ನೂದು ತಿಳೀತದ.’ ಇವರು ಗಾಡಿ ಹೊಡ್ಯುದ್ರಾಗ ಮಗ್ನ ಆದರ ಆತ ಬಗ್ಗಿ ಪೈಪ್ ಹಿಡ್ಕೊಂಡ ಕೂಡೂದ್ರಾಗ! ಆತನ ಕೈ ಜೋಮು ಹಿಡಿದು ಇನ್ನೊಂದು ಕೈ ಸುತ್ತ ಸ್ವಲ್ಪ ವ್ಯಾಳ್ಯಾಕ ಮತ್ತೊಂದು ಕೈ ಹೀಂಗ ಬದಲಾಯಿಸಿಕೋತ ಕುತ್ತಿದ್ದ!
ಗಾಡಿ ಒಳಗ ಕೂತು ಮಜ ಮಾಡ್ಬೇಕು ಅನ್ನವರಿಗೆ ಈ ನಮ್ಮ ಎಂಟಿಕ್ ಪೀಸ್ ಗಾಡಿಯೊಳಗೆ ಸಾಧ್ಯವಾದ ಮಾತ ಅಲ್ಲ ಬಿಡ್ರಿ. ಯಾವಾಗ ಬಂದ ಬಿದ್ದ್ರ ಹಿಂದಿಂದ ಭಾರ ಹಾಕಿ ದುಗಸ್ಬೇಕು, ಪೇಟ್ರೋಲ್ ಪೈಪ ಹಿಡ್ಕೊಂಡು ಕೂಡುವ ತಾಪತ್ರಯ ಹೊರಗಿನ ಆಗುಹೋಗುಗಳನ್ನು ನೋಡುವುದು ಅಸಾಧ್ಯದ ಮಾತೇ ಬಿಡಿ. ಅತ್ತಿಂದಿತ್ತ ಇತ್ತಿಂದಿತ್ತ ಅಡ್ಡಾಡುವ ಗಾಡಿಗಳು ಎತ್ತು ಎಮ್ಮಿಗಳು ಹುಡುಗ್ರು ಹಾಯ್ದಾಡಿದ್ದ್ರ ಒಳಗ ಕುತ್ತವ್ರಿಗೆಲ್ಲ (ಹೊಡ್ಯಾವ್ರಿಗಷ್ಟ ಅಲ್ಲರೀ ಮತ್ತ) ಆಗೂ ಟೆನ್ಶನ್ ಹೇಳಲು ಸಾಧ್ಯ ಬಿಡ್ರಿ.
ಒಂದ್ಸಲ ಬಿಗ್ ಬಝಾರಕ್ಕೆ ಹೋಗೋಣ ಅಂತ ಹೇಳಿದ ಇವರು ಸಾಮಾನು ಇಟ್ಟಕೊಂಡ ಬರ್ಲಿಕ್ಕೆ ಛೋಲೋ ಆಗ್ತದಂತ ಕಾರನ್ನೂ ನನ್ನನ್ನೂ ತೊಗೊಂಡು ಹೋದ್ರು. ಹೊರಗ ಬಂದ ಮ್ಯಾಲ ಕಾಲೇಜ ಹುಡುಗ್ರು ಕಾರಿನ ಸುತ್ತಲೇ ಮುಕುರಿಬಿಟ್ಟಿದ್ದರು. ಎಲ್ಲಾರ ಕೈಯ್ಯಾಗೂ ಮೊಬೈಲ. ಆ ಕಾರಿನ ಹಿಂದಿಂದೂ ಮುಂದಿಂದೂ ಬಾಜೂಕಿಂದೂ ಅಂತ ಫೋಟೋಲ್ಲೆ ಕ್ಲಿಕ್ಕಿಸ್ಲಿಕತ್ತಿದ್ದರು. ತಾವೂ ಅದರ ಪಕ್ಕದಲ್ಲಿ ನಿಂತು ಕುಳಿತೂ ಫೋಟೋ ತಗಿಸಿಕೊಳ್ತಿದ್ದರು. ನಾವೆಲ್ಲ ಹೊರಲಾರದ ಸಾಮಾನು ಹೊತಗೊಂಡ ಬಂದ್ರ ಅಂಕಲ್ ಕೊಡ್ರಿ ಒಳಗೆ ಇಡ್ತೀವೀ ಅಂತ ಸಹಾಯಕ್ಕೂ ಬಂದ್ರು, ಒಂದು ಹುಡುಗನಂತೂ ‘ಅಂಕಲ್ ಪ್ಲೀಜ್ ಬಾನೆಟ್ ತೇಗೀರಿ ಇಂಜಿನ್ ಫೋಟೋ ತೆಗೀತೀವಿ’ ಎಂದಾಗ ಇವ್ರಿಗಂತೂ ಮುಗಿಲು ಮೂರೇ ಗೇಣು. ಬಾನೆಟ್ಟೂ ತೆಗೆದು ಇಂಜಿನ್ನು ತೋರಿಸಿ, ‘ಇದು ಓರಿಜನಲ್ ಇಂಗ್ಲೆಂಡದ್ದು……’ಅಂತ ಪುಟ್ಟ ಲೆಕ್ಚರನ್ನೇ ಸ್ಟಾರ್ಟ ಮಾಡಿದರು. ಹಾಗೇ ಓರೆಗಣ್ಣಿನಿಂದ ನನ್ನಡೆಗೆ ನೋಡುವುದನ್ನು ಮಾತ್ರ ಮರೆಯಲಿಲ್ಲ.
ನಮ್ಮ ಭಾವನ ಮಕ್ಕಳೂ ಕಾರಿನ ಫೋಟೋ ತೆಗೆದು ಇಂಟರ್ನೆಟ್ಟಿನಲ್ಲಿ ಹಾಕಿದ್ದೇ ಬಂತೂ ಮನೆಗೆ ಫೋನಿನ ಸುರಿಮಳೆಯೇ ಶುರುವಾದವು. ಪಂಜಾಬಿನಿಂದ, ದಿಲ್ಲಿಯಿಂದ ಅಸ್ಸಾಮಿನಿಂದ……ಹೀಗೆ ದಿನವೂ ಯಾರದಾದರೂ ಬೇಡಿಕೆ ಇದ್ದೇ ಇರುತ್ತಿತ್ತು. ‘ಏ ಕೊಟ್ಟ ಬಿಡ್ರೀ’ ಅಂತ ನಾನೂ ದುಂಬಾಲು ಬಿದ್ದೆ. ಆದರೆ ಇವರು ಕೇಳಬೇಕಲ್ಲ. ‘ಛೇ ಛೇ ನಾನೇ ತಯಾರ ಮಾಡಿ ಇಷ್ಟುಚಂದ ಕಾಣಸೂ ಹಂಗ ಮಾಡೀನಿ ಇದನ್ನ ಕೊಡ್ಲೇನು’ ಅಂತ ಹಿಂದೇಟು ಹಾಕಾವ್ರು.
ಒಂದಿನ ಮಕ್ಕಳನ್ನು ಕರ್ಕೊಂಡು ಪಿಕ್ಚರಿಗೆ ಹೋಗಿದ್ದೆವು. ಯಥಾಪ್ರಕಾರ ದಾರಿಯಲ್ಲೆಲ್ಲ ಹೊಳ್ಳಿ ಹೊಳ್ಳಿ ಜನ ನಮ್ಮ ಕಾರನ್ನೇ ದಿಟ್ಟಿಸುವವರು. ಮಕ್ಕಳು ಕೇಕೆ ಹಾಕಿ ನಗುವವು. ನನ್ನ ಮಗಳಿಗೆ ಇದೊಂಥರಾ ಅಸಹ್ಯವೆನಿಸತೊಡಗಿತು. ‘ಪಪ್ಪಾ, ಬೇಕಾದ್ರ ರಿಕ್ಷಾಕ್ಕ ಹೋಗೋಣು ಇದರಾಗ ಬ್ಯಾಡಾ’ ಅಂತ ಹೇಳಲಿಕ್ಕೆ ಶುರು ಮಾಡಿದಳು.
ಇವರಿಗೆ ವಿಪರೀತ ಸಿಟ್ಟು ಬಂತು. ‘ಯಾಕ’ ಅಂತ ಜೋರಾಗಿಯೇ ಕೇಳಿದ್ರು. ಆಗ ಆಕೆ, ‘ಪಪ್ಪಾ ಎಲ್ಲಾರೂ ಸಮಾಜದಾಗ ಇರೂಹಾಂಗ ಇದ್ದ್ರ ಯಾರೂ ಹೀಂಗ ಹೊಳ್ಳಿ ಹೊಳ್ಳಿ ನೋಡೂದಿಲ್ಲ. ಕಾಮನ್ ಆಗಿ ಇರುದು ತೊಗೋಳ್ಳದು ಛೋಲೋ, ಇದೇನು ಮಂದಿ ವಿಚಿತ್ರ ಕಂಡವರಂಗ ನೋಡಿ ಹೋಗ್ತಾರ…… ಫೋಟೋ ತಕ್ಕೋತಾರ…..ಅಂತೆಲ್ಲ ಹೇಳಿದಾಗ ಇವರ ಹೃದಯ ಚೂರು ಚೂರಾಯಿತು. ಅವತ್ತೇ ನಿರ್ಧರಿಸಿದರು. ಕಾರು ಕೊಡ್ಬೇಕೂಂತ. ಅವತ್ತೇ ಶಿವಮೊಗ್ಗಾದಿಂದ ಫೋನು ಬಂತು.’ ‘ನಿಮ್ಮ ಕಾರು ನೀವೆಷ್ಟು ಹೇಳ್ತಿರಿ ಅಷ್ಟಕ್ಕ ತೊಗೋತೀವಿ ಯಾರಿಗೂ ಕೊಡಬ್ಯಾಡ್ರಿ. ನಮಗ ಬೇಕು. ನಾಳೆ ನಾವು ಬೆಳಗಾಂವಿಗೆ ಬರ್ತೀವಿ ರೊಕ್ಕಾ ತೊಗೊಂಡ’ ಅಂತ ಹೇಳಿದಾಗ ಇವರಿಗೆ ಒಂಥರಾ ಕಸಿವಿಸಿ.
ರಾತ್ರಿಯೆಲ್ಲ ಪ್ರವಾಸ ಮಾಡಿ ಬೆಳಿಗ್ಗೆ ಅಂದ್ರೆ ಶಿವಮೊಗ್ಗದ ಆಸಾಮಿ ಬಂದೇ ಬಿಟ್ಟ. ಕಾರನ್ನು ನೋಡಿಯೇ ಖುಷ್ ಆದ. ದುಡ್ಡನ್ನೆಣಿಸಿ ಕೊಟ್ಟು. ಐದು ಸಾವಿರಕ್ಕಂತ ತೊಗೋಂಡ ಕಾರು ೧.೫ ಲಕ್ಷ ಬಂತು. ಕಾರನ್ನು ಡ್ರೈವ್ ಮಾಡುತ್ತಲೇ ಶಿವಮೊಗ್ಗಕ್ಕೆ ಹೋದ. ಕೇವಲ ಏಳು ತಾಸಿನಲ್ಲಿ ಶಿವಮೊಗ್ಗದಿಂದ ಅವನ ಫೋನು ರಿಂಗಣಿಸಿತು. ‘ಸರ್ ನಾವು ಈ ಕಾರು ತೊಗೊಂಡು ಬಾಳ ಖುಷಿ ಆಗೀವಿ. ಭಾಳ ಬೆಸ್ಟ್ ಎಂಟಿಕ್ ಪೀಸ್ ಕಾರ ಸಿಗ್ತರಿ, ನೀವ ಹ್ಯಾಂಗ್ ಮೆಂಟೇನ ಮಾಡಿದ್ರಿ ಹಂಗ ನಾನೂ ನೋಡ್ಕೋತೀನಿ’ ಅಂತ ಹೇಳಿದಾಗ ಇವರು ನನ್ನ ಕಡೆಗೂ ಮಕ್ಕಳ ಕಡೆಗೂ ನೋಡಿದರು. ಇವರ ಕಣ್ಣಿನಿಂದ ಎರಡು ಹನಿ ಕಣ್ಣೀರು ಜಾರಿ ಕಪೋಲವನ್ನು ತೊಯ್ಸಿದವು.