ವಿಶ್ವೇಶ್ವರಯ್ಯನವರ ಪದವಿಯನ್ನು ಕುತ್ಸಿತ ರಾಜಕೀಯ ಮಾಡಿ ಕಬಳಿಸಿದ ನೆಹರೂ!
– ಡಾ.ವಿ.ಬಿ.ಆರತೀ
ನಂದೀಬೆಟ್ಟದ ಬದಿಯ ಮುದ್ದೇನಹಳ್ಳಿಯೆಂಬ ಕುಗ್ರಾಮ. ಕೆರೆಗಳು ಬತ್ತಿದ್ದವು. ಐದಾರು ಮೈಲಿ ನಡೆದು ನಾಲ್ಕಾರು ಬಿಂದಿಗೆ ನೀರು ಹೊತ್ತು ತಂದಿಟ್ಟುಕೊಳ್ಳಬೇಕಾದ ಪರಿಸ್ಥಿತಿ. ಯಾರಿಗಾದರೂ ಚೊಂಬು ನೀರು ಕೊಡಬೇಕಾದರೂ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ. ಭಾರತದ ಸಂಪನ್ಮೂಲಗಳ ಲೂಟಿ ಮಾಡುತ್ತ, ಏನೇನೂ ವ್ಯವಸ್ಥೆಗಳನ್ನು ನೀಡದೆ, ಜನಜೀವನವನ್ನು ಹೀಗೆ ದಾರುಣ ದೈನ್ಯಕ್ಕಿಳಿಸಿದ ಬ್ರಿಟಿಷರ ಕಾಲದ ಭಾರತದ ಚಿತ್ರವಿದು. ಆ ಹಳ್ಳಿಯ ಬಡ ಮನೆಯೊಂದರಲ್ಲಿ ಪುಟ್ಟ ಬಾಲಕ ಜ್ವರದಿಂದ ಹಾಸಿಗೆ ಹಿಡಿದಿದ್ದ. ಅವನಿಗೆ ಬೊಗಸೆ ನೀರು ತರಲು ತಾಯಿ ಹೆಣಗಾಡಬೇಕಾಯಿತು.
ಸ್ವಲ್ಪ ದಿನಗಳಲ್ಲಿ ಹುಡುಗ ಚೇತರಿಸಿಕೊಂಡಾಗ ಆ ತಾಯಿ ಮಗನ ಪುಟ್ಟ ಕೈಯನ್ನು ತನ್ನ ಕೈಯಲ್ಲಿರಿಸಿ ಹೇಳಿದಳು, ”ಪುಟ್ಟ, ನೀನು ದೊಡ್ಡವನಾದ ಮೇಲೆ ನಮ್ಮ ಹಳ್ಳಿಗೆಲ್ಲ ನೀರು ತರಿಸುವ ಕೆಲಸ ಮಾಡುತ್ತೇನೆಂದು ಮಾತು ಕೊಡು.” ತಾಯಿ ಮಾತುಗಳಲ್ಲಿ ತನ್ನ ಜೀವನದ ಧ್ಯೇಯವನ್ನೇ ಕಂಡ ಬಾಲಕ ಉತ್ತರಿಸಿದ- ”ಆಗಲಿ ಅಮ್ಮ!” ಆ ಬಾಲಕನು ಮುಂದೆ ತನ್ನ ಹಳ್ಳಿಗಷ್ಟೇ ಅಲ್ಲ, ರಾಜ್ಯಕ್ಕೂ ರಾಷ್ಟ್ರಕ್ಕೂ ವಿಶ್ವಕ್ಕೂ ಹಲವಾರು ಗುಣಮಟ್ಟದ ನೀರಾವರಿ ಯೋಜನೆಗಳನ್ನು ಯೋಗದಾನ ನೀಡಿದ ಮಹಾತ್ಮನಾದ. ಭಾರತ ರತ್ನನೆನಿಸಿದ. ಸರ್ ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಈ ಕಥೆ ಜನಜನಿತವಾಗಿದೆ. ತಂದೆಯಿತ್ತ ಕುಶಾಗ್ರಮತಿಯೂ ತಾಯಿಯಿತ್ತ ಸೇವಾದೀಕ್ಷೆಯೂ ವಿಶ್ವೇಶ್ವರಯ್ಯನವರ ಜೀವನವನ್ನು ಒಂದು ಕರ್ಮಯೋಗದ ಭವ್ಯಗಾಥೆಯನ್ನಾಗಿಸಿತು.
ತಂದೆ ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿಗಳು ಹೆಸರಾಂತ ಸಂಸ್ಕೃತ ವಿದ್ವಾಂಸರು. ಒಂದು ವಿಷಯವನ್ನು ಹಲವಾರು ಕೋನಗಳಿಂದ ನೋಡಿ ವಿಶ್ಲೇಷಿಸುವ ಪ್ರವೃತ್ತಿಯನ್ನು ತರ್ಕಶಾಸ್ತ್ರವು ಬೆಳೆಸುತ್ತದೆ. ತಂದೆಯಿಂದ ಇಂತಹ ತಾರ್ಕಿಕ ಮತಿಯನ್ನು ಪಡೆದರು ವಿಶ್ವೇಶ್ವರಯ್ಯನವರು. ಬ್ರಿಟಿಷರು ಭಾರತೀಯ ವಿದ್ಯೆಗಳನ್ನೂ ವಿದ್ವಾಂಸರನ್ನೂ ಬೇಕೆಂದೇ ಅಮಾನ್ಯಗೊಳಿಸಿ, ಮೂಲೆಗುಂಪಾಗಿಸುತ್ತ ಬಡತನಕ್ಕಿಳಿಸಲಾರಂಭಿಸಿದ ಕಾಲವದು. ಹಾಗಾಗಿ ಪಾಂಡಿತ್ಯವಿದ್ದರೂ ಶಾಸ್ತ್ರಿಗಳಿಗೆ ಬಡತನ. ಶಾಸ್ತ್ರಿಗಳ ಪತ್ನಿ ವೆಂಕಟಲಕ್ಷ್ಮಮ್ಮ ಉದಾರಮತಿ. ಇಂತಹ ಸಜ್ಜನರ ಕುಟುಂಬದಲ್ಲಿ ಹುಟ್ಟಿದ ವಿಶ್ವೇಶ್ವರಯ್ಯ ಸಾತ್ವಿಕ ಆಚಾರಗಳನ್ನೂ ಪ್ರಾಮಾಣಿಕತೆಯನ್ನೂ ಕಷ್ಟ ಸಹಿಷ್ಣುತೆಯನ್ನೂ ಮೈಗೂಡಿಸಿಗೊಂಡನು. ಆರೂವರೆ ಕಿ.ಮೀ. ದೂರದ ಚಿಕ್ಕಬಳ್ಳಾಪುರದ ಶಾಲೆಗೆ ದಿನವೂ ನಡೆದುಹೋಗಿ ವಿದ್ಯೆ ಕಲಿತ. ಕತ್ತಲಲ್ಲಿ ಪಾಠಗಳನ್ನು ಓದುವುದು ಕಷ್ಟವಾದರೆ, ಶಾಲು ಹೊದ್ದು ಮೂರ್ನಾಲ್ಕು ಕಿ.ಮೀ. ನಡೆದು ಮುಖ್ಯರಸ್ತೆಯ ಬೀದಿಯ ದೀಪದ ಕಂಬದಡಿ ಕುಳಿತು ಓದುತ್ತಿದ್ದ.
ಹನ್ನೆರಡು ವರ್ಷ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ. ಪರಿವಾರದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟರೂ, ಪ್ರೌಢಶಾಲೆಯ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದ. ನೆಂಟರಿಷ್ಟರ ಮನೆಗಳಲ್ಲಿ’ವಾರಾನ್ನ’ ಮಾಡುತ್ತ ವ್ಯಾಸಂಗವನ್ನು ಮಾಡಿದ. ಮಕ್ಕಳಿಗೆ ಟ್ಯೂಶನ್ ಹೇಳಿ ನಾಲ್ಕಾರು ಕಾಸು ಸಂಪಾದಿಸಿದ. ಮುಂದೆ ಪುಣೆಯಲ್ಲಿನ ಕಾಲೇಜ್ ಆಫ್ ಎಂಜಿನಿಯರಿಂಗ್ಗೆ ಸೇರಿ ಸಿವಿಲ್ ಎಂಜಿನಿಯರಿಂಗ್ ಪದವೀಧರನಾಗಿ ವಿಶ್ವವಿದ್ಯಾಲಯಕ್ಕೇ ಮೊದಲಿಗನೆನಿಸಿದ. ಬ್ರಿಟಿಷ್ ಸರಕಾರವು ತಕ್ಷಣ ವಿಶ್ವೇಶ್ವರಯ್ಯನಿಗೆ ಮಹಾರಾಷ್ಟ್ರದ ನಾಸಿಕ್ ನಗರದ ಪಿಡಬ್ಲ್ಯುಡಿಯಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಉದ್ಯೋಗವನ್ನು ನೀಡಿತು. ದಕ್ಷತೆ, ನೈಪುಣ್ಯ, ಪ್ರಾಮಾಣಿಕತೆ, ಪರಿಶ್ರಮಶೀಲತೆಗಳಿಂದಾಗಿ ಅನತಿ ಕಾಲದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರನಾದ. ಸುಕ್ಕೂರು ಎಂಬ ಕ್ಷೇತ್ರಕ್ಕೆ ಸಿಂಧೂ ನದಿಯ ನೀರನ್ನು ತರುವಲ್ಲಿ ಹಲವಾರು ಭೌಗೋಳಿಕ ಸಮಸ್ಯೆಗಳನ್ನು ಎದುರಿಸಿ ಕೈಚೆಲ್ಲಿದ್ದರು.
ವಿಶ್ವೇಶ್ವರಯ್ಯನವರು ಆ ಯೋಜನೆಯನ್ನು ಕೈಗೆತ್ತಿಕೊಂಡು, ಸಮಸ್ಯೆಯನ್ನು ಪರಿಶೀಲಿಸಿ, ಯೋಜನೆಗೆ ಮರುರೂಪವನ್ನಿತ್ತು ಸಫಲವಾಗಿ ಜಾರಿಗೆ ತಂದರು! ಆ ಬಳಿಕ ಅವರ ನೇತೃತ್ವ ಸಲಹೆ ಮಾರ್ಗದರ್ಶನಗಳನ್ನು ಪಡೆದು ಯಶಸ್ವಿಯಾದ ಯೋಜನೆಗಳು ಕಾರ್ಯಗಳು ಅದೆಷ್ಟೋ! ತನಗೆ ಬಂದ ಬಡ್ತಿಯನ್ನೂ ಅಧಿಕಾರವನ್ನೂ ಜನಹಿತ ಯೋಜನೆಗಳಿಗೇ ಬಳಸುವುದರಲ್ಲಿ ಭರದಿಂದ ಕಾರ್ಯವೆಸಗಿದರು ವಿಶ್ವೇಶ್ವರಯ್ಯ. ಈ ಮಧ್ಯೆ ಜನಾಂಗೀಯ ಅಹಮಿಕೆಯಿಂದ ಬ್ರಿಟಿಷರು ವಿಶ್ವೇಶ್ವರಯ್ಯನವರಿಗೆ ಚೀಫ್ ಎಂಜಿನಿಯರ್ ಪದವಿಯನ್ನು ನೀಡಲಿಲ್ಲ. ‘ಅದೆಷ್ಟೇ ದಕ್ಷನೂ, ಅರ್ಹನೂ ಆದರೂ ಭಾರತೀಯನು ಈ ಪದವಿಯನ್ನು ಅಲಂಕರಿಸುವಂತಿಲ್ಲ’ ಎನ್ನುವುದು ಅವರ ಕೆಟ್ಟ ಹಠ! ತನ್ನ ದೇಶೀಯರ ಬಗೆಗಿನ ಬ್ರಿಟಿಷರ ಈ ಧೋರಣೆಯನ್ನು ಖಂಡಿಸಿ ವಿಶ್ವೇಶ್ವರಯ್ಯನವರು ತಕ್ಷಣ ರಾಜೀನಾಮೆ ನೀಡಿದರು.
ತಕ್ಷಣ ಹೈದರಾಬಾದ್ ಸರಕಾರವು ವಿಶ್ವೇಶ್ವರಯ್ಯನವರನ್ನು ಬರಮಾಡಿಕೊಂಡಿತು. ಆಂಧ್ರದಲ್ಲಿದ್ದ ಕಾಲದಲ್ಲಿ ವಿಶ್ವೇಶ್ವರಯ್ಯನವರು ಮಾಡಿದ ಕಾರ್ಯಗಳು ಅಮೋಘ. ಮೂಸಾ ನದಿಯ ಅನಿಶ್ಚಿತ ಪ್ರವಾಹಗಳಿಂದಾಗಿ ಬಳಲಿದ್ದ ಹೈದರಾಬಾದ್ ನಗರಕ್ಕೆ ಪ್ರವಾಹ ತಡೆಗಟ್ಟುವ ಯೋಜನೆಗಳನ್ನು ರೂಪಿಸಿ, ಶಾಶ್ವತ ರಕ್ಷಣೆಯಿತ್ತರು. ಒಡಿಶಾ ರಾಜ್ಯಕ್ಕೂ ವಿಶಾಖಪಟ್ಟಣದ ಹಡಗು ತಾಣಕ್ಕೂ ಸಮುದ್ರದ ಹವೆ ನೀರುಗಳ ಕೊರೆತದಿಂದ ರಕ್ಷಣೆಯನ್ನುಯೋಜಿಸಿದರು. ಇದಲ್ಲದೆ ದೇಶದ ಹಲವೆಡೆಗಳಲ್ಲೂ ವಿದೇಶಗಳಲ್ಲೂ, ಹತ್ತು ಹಲವು ಅಣೆಕಟ್ಟುಗಳನ್ನೂ, ನೀರಾವರಿ ಯೋಜನೆಗಳನ್ನೂ, ರಸ್ತೆ ಸಾರಿಗೆ ವಿನ್ಯಾಸಗಳನ್ನೂ, ಉದ್ಯೋಗ ಜನಕ ಯೋಜನೆಗಳನ್ನೂ ರೂಪಿಸಿದರು. ಅಣೆಕಟ್ಟುಗಳನ್ನು ನೀರಿನ ಒತ್ತಡದಿಂದ ಕಾಪಾಡಲು ಅಟೋಮ್ಯಾಟಿಕ್ ವಾಟರ್ ಬ್ಯಾರಿಯರ್ ಗೇಟ್ಗಳನ್ನು ಆವಿಷ್ಕರಿಸಿದ ಪೇಟೆಂಟ್ ಇವರ ಹೆಸರಲ್ಲಿದೆ! ಹಲವಾರು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಇವರ ದೂರದೃಷ್ಟಿ, ನೈಪುಣ್ಯ, ಸಲಹೆಗಳನ್ನು ಪಡೆದು ಯಶಸ್ಸನ್ನು ಕಂಡವು.
ಮೈಸೂರಿನ ಮಹಾರಾಜರು ವಿಶ್ವೇಶ್ವರಯ್ಯನವರನ್ನು ಮೈಸೂರು ರಾಜ್ಯದ ದಿವಾನರನ್ನಾಗಿ ನೇಮಿಸಿದರು. ಈ ಕಾಲದಲ್ಲಿ ಕೇವಲ ಆರು ವರ್ಷಗಳಲ್ಲಿ 6500ಕ್ಕೂ ಹೆಚ್ಚು ಶಾಲೆಗಳನ್ನು ನಿರ್ಮಿಸಿದರಲ್ಲದೆ, ವಿಜ್ಞಾನ ತಂತ್ರಜ್ಞಾನ ಕಲೆ ಸಾಹಿತ್ಯ ಉದ್ಯೋಗ ಜನನ, ಬ್ಯಾಂಕಿಂಗ್ ಹಣಕಾಸು ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕಾನೇಕ ಯಶಸ್ವೀ ಯೋಜನೆಗಳನ್ನು ಜಾರಿಗೆ ತಂದರು. ಬೆಂಗಳೂರಿನಲ್ಲಿ ಎಚ್ಎಎಲ್, ಮುಂಬೈನಲ್ಲಿ ಪ್ರೀಮಿಯರ್ ಏರ್ಕ್ರಾಫ್ಟ್ ಫ್ಯಾಕ್ಟರಿ, ಕೆಎಸ್ಡಿಎಲ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಯಾಂಡಲ್ ಆಯಿಲ್ ಫ್ಯಾಕ್ಟರಿ, ಸೆಂಚುರಿ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್, ಕ್ರೋಮ್ ಟ್ಯಾನಿಂಗ್ ಫ್ಯಾಕ್ಟರಿ, ಮೈಸೂರು ಚೇಂಬರ್ ಆಫ್ ಕಾಮರ್ಸ್, ಕೃಷಿ ವಿಶ್ವವಿದ್ಯಾಲಯ, ಮಹಾರಾಣಿ ಮಹಿಳಾ ಕಾಲೇಜು, ಸಾರ್ವಜನಿಕ ಗ್ರಂಥಾಲಯ, ಕೆಆರ್ಎಸ್ ಅಣೆಕಟ್ಟು, ತಿಪ್ರಾ ಅಣೆಕಟ್ಟು- ಹೀಗೆ ಸುದೀರ್ಘ ಪಟ್ಟಿಯನ್ನೇ ಮುಂದಿಡಬಹುದು! ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದಲ್ಲಿ ಜಾರಿಗೆ ತಂದ ಕಡ್ಡಾಯ ಶಿಕ್ಷಣ ನಿಯಮವನ್ನೇ ಸ್ವತಂತ್ರ ಭಾರತದ ಸಂವಿಧಾನದಲ್ಲಿ’ಶಿಕ್ಷಣದ ಮೂಲಭೂತ ಹಕ್ಕು’ ಎಂದು ಮಂಡಿಸಲಾಯಿತು.
ಬರಪೀಡಿತವಾಗಿದ್ದ ಮಂಡ್ಯ ಜಿಲ್ಲೆಗೆ ಕಾವೇರಿ ನೀರನ್ನು ಹಾಯಿಸಿ, ರೈತರ ಆತ್ಮಬಂಧುವೆನಿಸಿದವರು ವಿಶ್ವೇಶ್ವರಯ್ಯ. ಏಶಿಯ ಖಂಡದಲ್ಲೇ ಅತ್ಯುತ್ಕೃಷ್ಟ ವಿನ್ಯಾಸದ ಬಡಾವಣೆಯೆನಿಸಿದ ಬೆಂಗಳೂರಿನ ಜಯನಗರ ಬಡಾವಣೆಯನ್ನು ರೂಪಿಸಿದವರೂ ವಿಶ್ವೇಶ್ವರಯ್ಯನವರೇ! ಬ್ರಿಟಿಷ್ ಸರಕಾರದ ನಿರ್ಲಕ್ಷ್ಯವನ್ನೂ, ವಿರೋಧಗಳನ್ನೂ ಎದುರಿಸಿ, ರಾಜಕೀಯ ಹಸ್ತಕ್ಷೇಪಗಳನ್ನೂ ಸಹಿಸಿ, ಹಣದ ಇತಿಮಿತಿಗಳ ನಡುವೆಯೂ ಛಲ ಬಿಡದೆ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಫ್ಯಾಕ್ಟರಿಯನ್ನು ಪ್ರಾರಂಭಿಸಿದರು. ಅಪಾರ ಆಂತರಿಕ ಹಾಗೂ ಬಾಹ್ಯ ವಿಘ್ನಗಳಿಂದ ತತ್ತರಿಸಿ, ದುಡ್ಡಿಲ್ಲದೆ ಮುಚ್ಚೇ ಹೋಗುವ ಸ್ಥಿತಿಗಿಳಿದ ಕಾರ್ಖಾನೆಯನ್ನು ಉಳಿಸಬೇಕೆಂದು, ಎರಡು ವರ್ಷ ಸಂಬಳವನ್ನೂ ತೆಗೆದುಕೊಳ್ಳದೆ ಎಲ್ಲರಿಗೂ ಹಂಚಿಬಿಟ್ಟರು! ಕೊನೆಗೂ ಇವರ ಆಗ್ರಹಕ್ಕೆ ಮಣಿದು ಬ್ರಿಟಿಷ ಸರಕಾರ ಕಾರ್ಖಾನೆಗೆ ಹಣವನ್ನು ನೀಡಲಾರಂಭಿಸಿತು.
ವಿಶ್ವೇಶ್ವರಯ್ಯನವರಿಗೆ ಸಲ್ಲಬೇಕಾದ ಎರಡು ವರ್ಷಗಳ ಸಂಬಳದ ಬಾಕಿ ಹಣವನ್ನು ಚೆಕ್ ಮುಖಾಂತರ ನೀಡಿದಾಗ, ಆ ಹಣವನ್ನು ತಾನಿಟ್ಟುಕೊಳ್ಳದೆ, ತಕ್ಷಣ ಬೆಂಗಳೂರಿನ ಕೆಆರ್ ಸರ್ಕಲ್ ಬಳಿ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜನ್ನು ಸ್ಥಾಪಿಸಿದರು. ಆ ಕಾಲೇಜಿಗೆ ತಮ್ಮ ಹೆಸರನ್ನಿಡಬೇಕೆಂದು ಎಲ್ಲರೂ ಆಗ್ರಹಿಸಿದರೂ ಕೇಳದೆ, ಮಹಾರಾಜರ ಹೆಸರನ್ನಿಟ್ಟ ನಿಗರ್ವಿ ಅವರು! ಮುಂದೆ ಅವರು ಕಾಲವಾದ ಮೇಲೆ ಶಿಕ್ಷಕರೂ ವಿದ್ಯಾರ್ಥಿಗಳೂ ಸಾರ್ವಜನಿಕರೂ ಆ ಆವರಣದಲ್ಲಿ ವಿಶ್ವೇಶ್ವರಯ್ಯನವರ ಮೂರ್ತಿಯನ್ನು ಸ್ಥಾಪಿಸಿದರು. ಇಲ್ಲಿ ಸಂಚರಿಸುವಾಗ ಕಾಣಬರುವ ಈ ಮೂರ್ತಿಯನ್ನು ನಾವು ಶಿರಬಾಗಿ ನಮಿಸಲು ಮರೆಯಬಾರದು.
ವಿಶ್ವೇಶ್ವರಯ್ಯನವರು ಸ್ವಾಭಿಮಾನ ದೇಶಾಭಿಮಾನಗಳ ಮೂರ್ತರೂಪ. ಮೈಸೂರು ದಸರಾ ಸಂದರ್ಭದಲ್ಲಿ ಮಹಾರಾಜರು ಬ್ರಿಟಿಷರಿಗಾಗಿ ಒಂದು ದಿನ ದರ್ಬಾರ್ ನಡೆಸುತ್ತಿದ್ದರಂತೆ. ಈ ದರ್ಬಾರಿನಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ಕುರ್ಚಿಗಳ ಮೇಲೂ ಭಾರತೀಯ ಅಧಿಕಾರಿಗಳನ್ನು ನೆಲದ ಮೇಲೂ ಕೂರಿಸಲಾಗುತ್ತಿತ್ತು. ಈ ತಾರತಮ್ಯ ತಪ್ಪಿಸಿ ಎಲ್ಲರಿಗೂ ಸಮಾನ ಆಸನ ವ್ಯವಸ್ಥೆ ಜಾರಿಗೆ ತಂದರು ವಿಶ್ವೇಶ್ವರಯ್ಯನವರು.
ವಿಶ್ವೇಶ್ವರಯ್ಯನವರ ಪ್ರಾಮಾಣಿಕತೆಯಂತೂ ಜಗದ್ವಿಖ್ಯಾತ. ಸರಕಾರಿ ಕಚೇರಿಯ ವಸ್ತುಗಳನ್ನು ಸರಕಾರಿ ಕೆಲಸಕ್ಕೆ ಮಾತ್ರವೇ ಬಳಸುತ್ತಿದ್ದರು. ವೈಯಕ್ತಿಕ ಕೆಲಸಕ್ಕೆ ಸ್ವಂತ ಪುಸ್ತಕ, ಲೇಖನಿ, ಶಾಯಿ, ಮೇಣದ ಬತ್ತಿಗಳನ್ನೇ ಬಳಸುತ್ತಿದ್ದರು. ತಮ್ಮ ಹೆಸರಲ್ಲಿ ಸರಕಾರಿ ಅಧಿಕಾರವನ್ನೂ ಸವಲತ್ತುಗಳನ್ನೂ ಬಳಸದಂತೆ ನೆಂಟರಿಷ್ಟರಿಗೂ ಸ್ನೇಹಿತರಿಗೂ ಆದೇಶ ನೀಡಿದ್ದರು. ಆದರೆ ತಮ್ಮ ಸ್ವಂತ ಹಣದಿಂದ ನೆಂಟರಿಷ್ಟರಿಗೂ ಹಳ್ಳಿಯವರಿಗೂ ಬಡವರಿಗೂ ಉದಾರವಾಗಿ ದಾನ ಮಾಡುತ್ತಿದ್ದರು. ವಿಶ್ವೇಶ್ವರಯ್ಯನವರ ಮಾತು ಇಂದಿಗೂ ಅರ್ಥಪೂರ್ಣ- ”ನಮ್ಮ ದೇಶದ ದೊಡ್ಡ ರೋಗವೆಂದರೆ ‘ಸೋಮಾರಿತನ’. ಎಲ್ಲರೂ ಕೆಲಸ ಮಾಡುತ್ತಿದ್ದಾರೆ ಎಂಬಂತೆ ಕಂಡರೂ ನಿಜಕ್ಕೂ ಒಬ್ಬರು ಕೆಲಸ ಮಾಡುತ್ತಾರೆ. ಮಿಕ್ಕವರು ನೋಡುತ್ತಿರುತ್ತಾರೆ!”
ಜೋಗದ ಜಲಪಾತವನ್ನು ಮೊಟ್ಟಮೊದಲು ನೋಡಿದಾಕ್ಷಣ ”ಓಹ್! ವಾಟ್ ಎ ವೇಸ್ಟ್!” ಎಂದು ಉದ್ಗರಿಸಿದರಂತೆ ವಿಶ್ವೇಶ್ವರಯ್ಯನವರು! ಅಷ್ಟೊಂದು ನೀರು ಅಷ್ಟು ಎತ್ತರದಿಂದ ಅಷ್ಟು ರಭಸವಾಗಿ ಬೀಳುವಾಗ ಎಷ್ಟು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಬಹುದು ಎನ್ನುವುದು ಅವರ ಮತಿಗೆ ಹೊಳೆಯಿತು! ತಿಂಗಳೊಳಗೆ ವಿದ್ಯುಚ್ಛಕ್ತಿ ಉತ್ಪಾದನೆಯ ಯೋಜನೆಗೆ ತಯಾರಿ ನಡೆಸಿ, ಕೆಲವೇ ವರ್ಷಗಳಲ್ಲಿವಿದ್ಯುಚ್ಛಕ್ತಿ ಘಟಕ ಸ್ಥಾಪನೆಯನ್ನೂ ಪೂರೈಸಿ, ರಾಜ್ಯಕ್ಕೆ ಬೆಳಕನ್ನಿತ್ತ ಮಹಾಚೇತನ ಅವರು!
ಭಾರತ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಕಲ್ಪಿಸಿದ ವಿಶ್ವೇಶ್ವರಯ್ಯನವರು ತಮ್ಮ ಅಭಿಪ್ರಾಯಗಳನ್ನೆಲ್ಲ’ಎ ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ’ ಎಂಬ ಪುಸ್ತಕದಲ್ಲಿ ಪ್ರಕಟಿಸಿದರು. ಈ ಯೋಜನೆಗಳ ಬಗ್ಗೆ ಮುಕ್ತವಾಗಿ ಚರ್ಚಿಸುತ್ತ ಎಲ್ಲರನ್ನೂ ಪ್ರೇರೇಪಿಸುತ್ತಿದ್ದರು ಕೂಡ. ನೇತಾಜಿ ಸುಭಾಷ್ಚಂದ್ರ ಬೋಸ್ ‘ಪ್ಲಾನಿಂಗ್ ಕಮಿಷನ್ ಆಫ್ ಇಂಡಿಯಾ’ ಪರಿಕಲ್ಪನೆಯನ್ನು ಮುಂದಿಟ್ಟು ವಿಶ್ವೇಶ್ವರಯ್ಯನವರನ್ನೇ ಅಧ್ಯಕ್ಷರನ್ನಾಗಿಸಿ, ದೊಡ್ಡ ಕಾರ್ಯವನ್ನೇ ಯೋಜಿಸಿದ್ದರು. ಆದರೆ ಕುತ್ಸಿತ ರಾಜಕೀಯ ಮಾಡಿ ವಿಶ್ವೇಶ್ವರಯ್ಯನವರ ಆ ಪದವಿಯನ್ನು ನೆಹರೂ ತಾನೇ ಕಬಳಿಸಿದರು.
ಅಭೂತಪೂರ್ವ ಯೋಗದಾನಕ್ಕಾಗಿ ವಿಶ್ವೇಶ್ವರಯ್ಯನವರಿಗೇ ಭಾರತದ ಮೊಟ್ಟಮೊದಲ ‘ಭಾರತ ರತ್ನ’ ಪ್ರಶಸ್ತಿಯನ್ನು ಕೊಡಬೇಕೆಂದು ಎಲ್ಲರೂ ತೀರ್ಮಾನಿಸಿದರೂ, ಆಸೆಬುರುಕ ನೆಹರೂ ಆ ಪ್ರಶಸ್ತಿಯನ್ನು ಅವಸರವಸರವಾಗಿ ತನಗೆ ತಾನೆ ಸಲ್ಲಿಸಿಕೊಂಡು, ಜೊತೆಗೆ ವಿಶ್ವೇಶ್ವರಯ್ಯನವರಿಗೂ ಕೊಡಲು ಬಿಟ್ಟರು! ತಾನಾಗಿ ಅರಸಿ ಬಂದ ಪ್ರಶಸ್ತಿ-ಬಿರುದುಗಳ ಬಗ್ಗೆಯೇ ನಿರ್ಲಿಪ್ತರಾಗಿದ್ದ ವಿಶ್ವೇಶ್ವರಯ್ಯನವರು ಈ ಕೀಳು ರಾಜಕೀಯದ ಬಗ್ಗೆ ಪ್ರತಿಕ್ರಿಯಿಸದೆ ತಮ್ಮ ಪಾಡಿಗಿದ್ದುಬಿಟ್ಟರು. ಗಾಂಧಿ-ನೆಹರೂವೇ ಆಗಲಿ, ಅವರ ರಾಜಕೀಯ ಬಲ ಜನಬಲಗಳ ಬಗ್ಗೆ ಭೀತಿಯಿಲ್ಲದೆ, ಅವರ ತಪ್ಪುಗಳನ್ನು ದಿಟ್ಟವಾಗಿ ಎತ್ತಿ ತೋರಿಸುತ್ತಿದ್ದ ಕೆಚ್ಚೆದೆ ವಿಶ್ವೇಶ್ವರಯ್ಯನವರಿಗಿತ್ತು. ಮಹಾರಾಜರೇ ಆಗಲಿ ನಿಗದಿತ ಸಮಯಕ್ಕೆ ಬರದಿದ್ದರೆ, ಎದ್ದು ಹೋಗುತ್ತಿದ್ದರೇ ಹೊರತು ಕಾಯುತ್ತಿರಲಿಲ್ಲವಂತೆ!
ವಿಶ್ವೇಶ್ವರಯ್ಯನವರ ಪ್ರೇರಣೆಯಿಂದ ನಮ್ಮ ಇಂದಿನ ಎಂಜಿನಿಯರ್ಗಳು ಕೇವಲ ಡಿಗ್ರಿವಂತರಾಗಿ, ದೇಶ ಬಿಟ್ಟು ಹೋಗುವುದನ್ನು ನಿಲ್ಲಿಸಿ, ದೇಶವನ್ನು ಕಟ್ಟುವ ಶಕ್ತಿಗಳಾಗಲಿ ಎಂದು ಹಾರೈಸೋಣ.
ಕೃಪೆ:ವಿಜಯಕರ್ನಾಟಕ