ಕುಲವೃತ್ತಿಗಳ ವ್ಯವಸ್ಥಿತ ನಾಶನ
ತನ್ನ ಆಂತರಿಕ ವಿಕಾರಗಳನ್ನು ತನ್ನದೇ ಸ್ವೋಪಜ್ಞ ಯುಕ್ತಿಗಳಿಂದ ತಿದ್ದಿಕೊಳ್ಳುತ್ತ, ಬಾಹ್ಯಾಂಶಗಳನ್ನು ಬೇಕೆಂಬಷ್ಟು ಮಾತ್ರ ಮೈಗೂಡಿಸಿಕೊಳ್ಳುತ್ತ, ಭಾರತವು ಸಹಸ್ರಮಾನಗಳ ತನಕವೂ ಸ್ವತಂತ್ರವಾಗಿ ಮುಂದುವರಿದಿತ್ತು. ಆದರೆ ಎರಡು ಸಾವಿರ ವರ್ಷಗಳಿಂದೀಚೆಗೆ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ವಿುಕರಂಗಗಳಲ್ಲಿನ ನಿರಂತರ ಪರಕೀಯ ಹಸ್ತಕ್ಷೇಪಗಳು ಹೆಚ್ಚಿದ್ದು, ಹೇಗೆ ವರ್ಣ, ಭಾಷೆ, ರೀತಿನೀತಿಗಳೆಲ್ಲದರ ವಿಷಯದಲ್ಲೂ ವೈಚಾರಿಕ ಬಗ್ಗಡವೆಬ್ಬಿಸಲಾಗಿದೆ ಎನ್ನುವುದನ್ನು ನೋಡುತ್ತ ಬಂದಿದ್ದೇವೆ.
ಕುಲವೃತ್ತಿಯನ್ನು ಬಿಡದೆ, ಆಸಕ್ತಿಯ ವ್ಯಾಪಾರೋದ್ಯಮಗಳನ್ನೋ,ಸಾಹಿತ್ಯ, ಕಲೆ, ಉಪಾಸನಾವಿಧಾನಗಳನ್ನೋ ಹಿಡಿಯುವ ಸ್ವಾತಂತ್ರ್ಯೂ ಇದ್ದೇ ಇತ್ತು. ಹೀಗಾಗಿ ತಮ್ಮ ವೃತ್ತಿಯ ಬಗ್ಗೆ ಜನರು ಬಹಳ ಪ್ರೀತ್ಯಾದರ ತಾಳಿದ್ದರಲ್ಲಿ ಆಶ್ಚರ್ಯವಿಲ್ಲ. ಕುಲಾಭಿಮಾನವು ಹೆಚ್ಚಾಗಿ ಹಲವೊಮ್ಮೆ ವಾಕ್ಕಲಹಕ್ಕೂ ಆಸ್ಪದವಿತ್ತದ್ದರಲ್ಲೂ ಆಶ್ಚರ್ಯವಿಲ್ಲ!
ಮಧ್ಯಪ್ರಾಚ್ಯದ ಆಕ್ರಮಣಕಾರರು, ವೇದ, ಧರ್ಮ, ರಾಜನೀತಿ, ಸಾಹಿತ್ಯಾದಿ ವೃತ್ತಿಗಳವರನ್ನು ಹಿಂಡುಹಿಂಡಾಗಿ ನಾಶಗೈದರಾದರೆ, ಕೃಷಿ, ವಾಣಿಜ್ಯ, ವ್ಯಾಪಾರ, ಕಲೆ ಮುಂತಾದ ವೃತ್ತಿಗಳ ಜನರನ್ನು ‘ಕುಲವೃತ್ತಿಗಳನ್ನು ಮುಂದುವರಿಸಬೇಕಾದರೆ ಮತಾಂತರವಾಗಲೇಬೇಕೆಂಬ’ ಕ್ರೂರ ನಿರ್ಬಂಧಗಳಿಂದ ಬಳಲಿಸಿದರು. ಹೊಟ್ಟೆಪಾಡಿಗಾಗಿ ಮತಾಂತರವಾಗಿ ತಮ್ಮ ಪಾರಿವಾರಿಕ ವೃತ್ತಿಕೌಶಲಗಳನ್ನು ಮುಂದುವರಿಸಿದವರು ಅನೇಕರು, ಮತಾಂತರವಾಗದೆ ವೃತ್ತಿಯನ್ನು ಕಳೆದುಕೊಂಡು ಅತಂತ್ರರಾದವರೂ ಹಲವರು. ಆದರೆ ಬ್ರಿಟಿಷರ ಕುತಂತ್ರವೇ ಬೇರೆಯಾಗಿತ್ತು! ವರ್ಣ-ವೃತ್ತಿಗಳಿಗೆ ಸಿಗುತ್ತಿದ್ದ ರಾಜಪೋಷಣೆ, ಅನುದಾನ, ವ್ಯಾಪಾರವೇದಿಕೆ, ಕಾನೂನಿನ ಸವಲತ್ತುಗಳನ್ನೆಲ್ಲ ಒಂದೊಂದಾಗಿ ಹಿಂದೆಗೆದರು. ವಿಪರೀತ ಕಂದಾಯ ಹೇರಿ, ನಿರ್ಬಂಧಗಳನ್ನು ಹಾಕಿದರು. ಸಮೃದ್ಧ ನೆಲಜಲಗಳಿದ್ದರೂ, ರೈತರು ಪರಿಶ್ರಮದಿಂದ ದುಡಿದರೂ, ಬೆಳೆ ತೆಗೆದರೂ, ಆ ಬೆಳೆಯನ್ನೆಲ್ಲ ಬ್ರಿಟಿಷರು ಪುಡಿಗಾಸಿಗೆ ಕೊಂಡು, ಇಂಗ್ಲೆಂಡ್ನ ಆfಛ್ಟಿ ಛ್ಚಿಟ್ಞಟಞಢಯನ್ನು ತುಂಬಿಸಿಕೊಳ್ಳುತ್ತ, ಭಾರತೀಯರನ್ನು ಕೃತಕ ಕ್ಷಾಮಕ್ಕೆ ತಳ್ಳುತ್ತಿದ್ದರು! ರೈತರಿಗೆ, ‘ನಿಮ್ಮ ದುಃಸ್ಥಿತಿಗೆ ನಿಮ್ಮ ‘‘ಕೀಳು-ಕುಲ’’ ಕಾರಣ’ ಎಂದು ನಂಬಿಸಿದರು! ‘ನಮ್ಮ ಮತಕ್ಕೆ ಬನ್ನಿ, ಉದ್ಯೋಗ ಪಡೆದು ಉದ್ಧಾರವಾಗಿ’ ಎಂದೂ ಜಾಲ ಬೀಸಿದರು!
ವಸ್ತ್ರಕಾರರು ನೇಯ್ದ ನೂಲನ್ನೂ ಪುಡಿಗಾಸಿಗೆ ಕೊಂಡು, ತಮ್ಮ ದೇಶದಲ್ಲಿ ಬಟ್ಟೆ ಹೊಲಿಸಿ, ನಮಗೇ ದುಬಾರಿ ಬೆಲೆಗೆ ಮಾರುತ್ತಿದ್ದರು! ಚಕಾರವೆತ್ತಿದರೆ ಉದ್ಯಮದ ಅನುಮತಿಯನ್ನೇ ಕಳೆದುಕೊಳ್ಳುವ ಭಯ ಜನರಲ್ಲಿ! ನೂರಾರು ಮಧುಬನಿ ನೇಯ್ಗೆಯವರ ಬೆರಳುಗಳನ್ನು ರಾತ್ರೋರಾತ್ರಿ ಕಡಿಸಿದ ಕಥೆ ನಮಗೆಲ್ಲ ತಿಳಿದೇ ಇದೆ! ಎಲ್ಲ ವರ್ಣದವರೂ ಅವರವರ ಸಂಪಾದನೆಯೆಷ್ಟೋ ಅದರ 1/6ನೇ ಭಾಗವನ್ನು ಕರವಾಗಿ ನೀಡುವುದು ಭಾರತದಲ್ಲಿ ಸಹಸ್ರಮಾನಗಳ ಪದ್ಧತಿಯಾಗಿತ್ತು. ಆದರೆ ಬೆಳೆ ಬರಲಿ ಬಿಡಲಿ, ಭೂಮಿಯ ಪ್ರಮಾಣವೆಷ್ಟೋ ಅಷ್ಟು ಕಂದಾಯವನ್ನು ಕಟ್ಟಬೇಕೆಂಬ ನಿಯಮವನ್ನು ತಂದರು! ಪರಿಣಾಮ? ಬಂಜರುಭೂಮಿಯಲ್ಲಿ ಏನೂ ಗಳಿಸಲಾಗದವರೂ ಭಾರೀ ಕರವನ್ನು ಕಟ್ಟಬೇಕಾಯಿತು! ಕರ ಕಟ್ಟಲಾಗದವರು ಸಾಲಕ್ಕೆ ಬಿದ್ದರು, ಗತಿಗಾಣದೆ ಬ್ರಿಟಿಷರು ನೀಡುವ ಪುಡಿಗಾಸಿಗೆ ಭೂಮಿಗಳನ್ನು ಮಾರಿಕೊಂಡು ಪರಾಧೀನರಾದರು! ಇಂಥ ಅದೆಷ್ಟೋ ಉದಾಹರಣೆಗಳಿವೆ! ಕೃಷಿ, ವಸ್ತ್ರೋದ್ಯಮ, ಹಾಲು, ಹೈನುಗಾರಿಕೆ ಮುಂತಾದ ರಂಗಗಳಲ್ಲಿ ಜಗತ್ತಿನಲ್ಲೇ ಬಹುಪಾಲನ್ನು ಹೊಂದಿದ್ದ ಭಾರತವನ್ನು ಬ್ರಿಟಿಷರು ಲೂಟಿಗೈದ ಸಂಪತ್ತಿನ ಅಂದಾಜು ಅದೆಷ್ಟೋ ಲಕ್ಷಕೋಟಿಗಳ ಸಂಖ್ಯೆಯದ್ದು!
ಇದನ್ನೆಲ್ಲ ಕೇಳಿದರೆ ಹೊಟ್ಟೆ ಉರಿಯುತ್ತದಲ್ಲವೆ? ಅದು ಬ್ರಿಟಿಷರಿಗೂ ಗೊತ್ತಿತ್ತು! ಅದಕ್ಕೇ ಅವರು ಆ ‘ಉರಿ’ಯನ್ನೆಲ್ಲ ವೇದ, ವರ್ಣವ್ಯವಸ್ಥೆ ಹಾಗೂ ಬ್ರಾಹ್ಮಣರ ಕಡೆಗೆ ತಿರುಗುವಂತೆ ಮಾಡಿ ತಪ್ಪಿಸಿಕೊಂಡರು! ಅವರ ಕುತಂತ್ರವು ಸಾಕಷ್ಟು ಸಫಲವಾಯಿತು ಕೂಡ! ವೇದದ್ವೇಷವು ಸನಾತನಧರ್ಮದ ಆಚಾರಸಂಹಿತೆಯಲ್ಲಿನ ಶ್ರದ್ಧೆಯನ್ನು ಸಡಿಲಗೊಳಿಸಿತು; ಬ್ರಾಹ್ಮಣದ್ವೇಷವು ಗುರುಕುಲ ಹಾಗೂ ವಿದ್ಯಾಪರಂಪರೆಗಳ ಅವಗಣನೆಗೂ ನಾಶಕ್ಕೂ ಕಾರಣವಾಯಿತು! ವರ್ಣವ್ಯವಸ್ಥೆಯ ಕುರಿತ ಆಕ್ರೋಶವು ಸ್ವಕೀಯ ಕುಲವೃತ್ತಿಗಳನ್ನು ಮುಂದುವರಿಸುವ ಉತ್ಸಾಹವನ್ನೇ ತಣ್ಣಗಾಗಿಸುತ್ತ ಬಂತು! ಬರಬರುತ್ತ ಜನರು ಆಂಗ್ಲರ ಶಾಲೆಗಳಲ್ಲಿ ಹೇಳಿಕೊಟ್ಟಂತೆ ಓದಲು, ಬರೆಯಲು, ಲೆಕ್ಕಹಾಕಲು, ಅನುವಾದಿಸಲು, ಸ್ವಲ್ಪಮಟ್ಟಿಗೆ ವ್ಯಾಖ್ಯಾನಿಸಲೂ ಕಲಿತ ‘ಡಿಗ್ರಿ’ವಂತರಾದರಾದರೂ ಸ್ವತಂತ್ರವಾಗಿ ಆಲೋಚಿಸುವುದನ್ನು ಕಲಿಯಲಾಗಲಿಲ್ಲ! (ಅದರಲ್ಲೂ ಪಾಶ್ಚಾತ್ಯರನ್ನು ವಿಮಶಿಸುವ ಧೈರ್ಯವನ್ನು ಬೆಳೆಸಿಕೊಳ್ಳಲೇ ಇಲ್ಲ!) ಒಟ್ಟಿನಲ್ಲಿ, ‘ಕುಲಕಸುಬು ಎಂದು ಕೂತರೆ ಹೊಟ್ಟೆ ತುಂಬದು, ಸರ್ಕಾರಿ ನೌಕರಿ ಸೇರಿಕೋ’ ಎಂದು ಹಿರಿಯರೇ ಹೇಳಿ ಮಕ್ಕಳನ್ನು ಬ್ರಿಟಿಷ್ ಶಾಲೆಗಳಿಗೂ ವೃತ್ತಿಗಳಿಗೂ ವಿದೇಶಕ್ಕೂ ದಬ್ಬುವ ಕಾಲ ಬಂತು!
ಸ್ವಾತಂತ್ರ್ಯಾನಂತರವಾದರೂ ನಮ್ಮ ಶಿಕ್ಷಣ-ಕುಲವೃತ್ತಿಗಳ ಪುನರುಜ್ಜೀವನವಾಯಿತೆ? ಊಹೂಂ! ಬ್ರಿಟಿಷರ ಅನುಕರಣೆಯನ್ನೇ ಪ್ರಗತಿಯೆಂದು ಭ್ರಮಿಸಿದ ಸಣ್ಣ ಬುದ್ಧಿಯ ನಾಯಕರು ಸ್ವತಂತ್ರಭಾರತದ ಚುಕ್ಕಾಣಿ ಹಿಡಿದರು. ನಮ್ಮ ದೇಶ, ವರ್ಣವ್ಯವಸ್ಥೆ, ಶಿಷ್ಟಾಚಾರಗಳನ್ನೆಲ್ಲ ಕೀಳಾಗಿ ಚಿತ್ರಿಸುವ, ನಮ್ಮ ವೀರ ನರ-ನಾರಿಯರ ವೃತ್ತಾಂತಗಳನ್ನೇ ಅರುಹದ, ಕ್ರೂರ ಆಕ್ರಮಣಕಾರರನ್ನು ದೇಶದ ಮಿತ್ರರೆಂಬಂತೆ ಚಿತ್ರಿಸುವ ಸುಳ್ಳಿನ ಇತಿಹಾಸವನ್ನೂ, ಅನುಕರಣಮಾತ್ರವಾದ ಶಿಕ್ಷಣಪಠ್ಯವನ್ನೂ, ಪಕ್ಷಪಾತವೆಸಗುವ ಮಾಧ್ಯಮವನ್ನೂ ಪೋಷಿಸಿದರು. ಪರಿಣಾಮ? ಜನಮಾನಸದಲ್ಲಿ ಸ್ವದೇಶ-ಸ್ವಸಂಸ್ಕೃತಿಯ ಬಗ್ಗೆ ಅದೇನೋ ಗೊಂದಲ! ಇಂಥ ಪರಿಸರದಲ್ಲಿ ಬೆಳೆದ ಅಧುನಿಕ ಮತಿ-ಮನಗಳಿಗೆ ‘ವರ್ಣವ್ಯವಸ್ಥೆ’ ಅರ್ಥವಾಗುವ ಮಾತು ಹಾಗಿರಲಿ, ‘ವರ್ಣ’ವೆಂದುಚ್ಚರಿಸಿದರೆ ಸಾಕು, ‘ಜಾತಿ’ಯ ಬೇಗೆ ಮನದಲ್ಲೆದ್ದು, ಕುದಿಯುವಂತೆ ಆಗಿಬಿಟ್ಟಿರುವುದರಲ್ಲಿ ಆಶ್ಚರ್ಯವಿಲ್ಲ!
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ