ಹೆಸರಿನಲ್ಲೇನಿದೆ…?
(ಗಂಭೀರವಾಗಿ ತಗೋಬೇಡಿ..ಪ್ಲೀಸ್!)
ಏನ್ ಮರಿ ನಿನ್ಹೆಸ್ರು…?
ನಾನ್ಹೇಳೊಲ್ಲ…!
ಜಾಣಮರಿ.., ಅಪ್ಪ ಅಮ್ಮ ನಿನ್ಗೊಂದು ಚಂದದ ಹೆಸ್ರಿಟ್ಟಿರ್ಬೇಕಲ್ಲ? ಹೇಳ್ಮರಿ…
ಊಹ್ಞು.., ನಾನ್ಹೇಳೊಲ್ಲ.., ಹೇಳೊಲ್ಲ.., ಹೇಳೊಲ್ಲ!
ಓ…ಹಾಗಾದ್ರೆ, ನಿನಗೆ ಹೆಸ್ರಿಲ್ಲಾ ಅನ್ನು
ಮತ್ತೆ..ಮತ್ತೆ..ಮತ್ತೆ.. ನನ್ಹೆಸ್ರು ಚಿನ್ಮಯಿ ಅಂತ!
ನೋಡಿದ್ರಾ…ಸಣ್ಣ ಮಗುವಿಗೂ ತನ್ನ ಹೆಸರಿನ ಮೇಲೆ ಎಷ್ಟೊಂದು ವ್ಯಾಮೋಹ!
ಬಹುಶಃ ಶಿಲಾಯುಗದಲ್ಲಿ, ಆದಿಮಾನವನ ಕಾಲದಲ್ಲಿ ಹೆಸರುಗಳಿದ್ದವೊ, ಇಲ್ಲವೊ ನಮಗೆ ತಿಳಿಯದು. ಆದಿ ಮಾನವರು ತಮ್ಮನ್ನು ಪರಸ್ಪರ ಗುರುತಿಸಿಕೊಳ್ಳುವುದಕ್ಕೆ ತಮ್ಮ ಮೈಮೇಲೆ ತರತರಹದ ಹಚ್ಚೆಗಳನ್ನು ಬರೆಸಿಕೊಳ್ಳುತ್ತಿದ್ದರು. ಮೂಗು, ಕಿವಿ, ಹುಬ್ಬು, ತುಟಿ, ಹೊಕ್ಕಳುಗಳಲ್ಲಿ ವಿವಿಧ ಬಣ್ಣದ ಮಣಿಗಳನ್ನು ಧರಿಸುತ್ತಿದ್ದರೆಂಬುದನ್ನು ನಾವು ಊಹಿಸೋಣ. ಇಂದು ಈ ಸಂಪ್ರದಾಯ ಸೌಂದರ್ಯವರ್ಧನೆಯ ರೂಪದಲ್ಲಿ ಪುನರಾವರ್ತನೆಯಾಗುತ್ತಿದೆ. ಇರಲಿ, ಈಗ ನೇರವಾಗಿ ಈ ಲೇಖನಾದ ಶಿರೋನಾಮೆ ಅಥವಾ ಹಣೆಬರಹಕ್ಕೆ ಬರುತ್ತೇನೆ!
ಹೆಸರಿನಲ್ಲೇನಿದೆ ಅಂತೀರಾ? ಪುರಾಣದ ‘ಅಜಾಮಿಳ’ನನ್ನು ಜ್ಞಾಪಿಸಿಕೊಳ್ಳಿ. ಲೈಫ್ ಲಾಂಗ್ ಮನುಷ್ಯನಾದವನು ಏನೆಲ್ಲವನ್ನು ಮಾಡಬಾರದೋ ಅದೆಲ್ಲವನ್ನೂ ಮಾಡಿ ಕೊನೆಯಲ್ಲಿ ಅವನ ಬಾಯಿಗೆ ನೀರು ಬಿಡುವ ಸಂದರ್ಭದಲ್ಲಿ ‘ನಾರಾಯಣಾ….’ಎಂದು ತನ್ನ ಮಗನ್ನು ಕರೆದಿದ್ದಕ್ಕೆ ಕನ್ಫ್ಯೂಸ್ ಆಗಿ ವೈಕುಂಠದಿಂದ ಮಹಾವಿಷ್ಣು ಓಡೋಡಿ ಬಂದು ತನ್ನ ಪೆದ್ದುತನವನ್ನು ಮರೆಮಾಚುವುದಕ್ಕೆ ನೇರವಾಗಿ ಅಜಾಮಿಳನನ್ನು ವೈಕುಂಠಕ್ಕೆ ವರ್ಗಾಯಿಸಲಿಲ್ಲವೇ? ಅದಕ್ಕೆ ದಾಸರು ಹಾಡಿದ್ದು ‘ನಾಮವೊಂದೇ ಸಾಲದೆ ಮುಕುತಿಗೆ’!
ಇನ್ನು ನಾಮಪಾರಾಯಣ ಎನ್ನುವುದೊಂದಿದೆ. ನಮ್ಮ ಇಷ್ಟಾರ್ಥಗಳ ಸಿದ್ಧಿಗೆ ನಮಗಿಷ್ಟವಾದ ದೇವ ದೇವತೆಗಳ ಅಷ್ಟೋತ್ತರನಾಮಗಳನ್ನೋ, ಸಹಸ್ರನಾಮಗಳನ್ನೋ ಪಠಿಸಿ ನಮ್ಮ ಕಾಮಿತಗಳನ್ನು ಈಡೇರಿಸಿಕೊಳ್ಳುವುದು. ದೇವರು ನಮ್ಮ ಪಾಲಿಗೆ ಕರುಣಾಮಯಿ ಮತ್ತು ಸಹನಾಮಯಿ ಕೂಡ! ತಾರ್ಕಿಕವಾಗಿ ಒಂದು ಉದಾಹರಣೆಯನ್ನು ಕೊಡುತ್ತೇನೆ. ನಮ್ಮ ಗಣಪನನ್ನೇ ತೆಗೆದುಕೊಳ್ಳಿ! ಅವನ ಬ್ಯಾಡ್ ಲಕ್…! ತಾಯಿ ಪಾರ್ವತಿ ಅವನಿಗೆ ನೀಡಿದ ಚಂದದ ಮುಖವನ್ನು ಕಡಿದೊಗೆದು, ಆದ ಡ್ಯಾಮೇಜನ್ನು ಸರಿಪಡಿಸುವುದಕ್ಕೆ, ಈಶ್ವರ ಆನೆಯ ಮುಖವನ್ನು ರಿಪ್ಲೇಸ್ ಮಾಡಿದ. ಇಂದಿನಿಂದ ನೀನು ‘ವಿಘ್ನೇಶ’; ನಿನ್ನನ್ನು ಪ್ರಪ್ರಥಮವಾಗಿ ಸ್ಮರಣೆ ಮಾಡದೆ ಪ್ರಾರಂಭಿಸಿದ ಯಾವ ಕಾರ್ಯವೂ ಸಫಲವಾಗದಿರಲಿ ಎಂಬ ವರವನ್ನು ‘ಬೋನಸ್’ ಆಗಿ ಗಣೇಶನಿಗೆ ನೀಡಿದ ಕಥೆ ನಮಗೆಲ್ಲರಿಗೂ ತಿಳಿದೇ ಇದೆ. ಇಂತಹ ಗಣೇಶನನ್ನು ನೀನು ಆನೆ ಮುಖದವನು, ನೀನು ಮೊರದಗಲ ಕಿವಿಯವನು, ನೀನು ತುಂಡಾದ ಹಲ್ಲುಳ್ಳವನು, ನೀನು ದೊಡ್ಡ ಹೊಟ್ಟೆಯವನು, ನೀನು ಸಣ್ಣ ಕಣ್ಣಿನವನು, ನೀನು ಹೊಟ್ಟೆಗೆ ಹಾವನ್ನು ಸುತ್ತಿಕೊಂಡವನು ಎಂಬುದಾಗಿ ನೂರೆಂಟು ಸಾವಿರ ವಿಧವಾಗಿ ನೆನಪಿಸುತ್ತಿದ್ದರೆ ಐ ಮೀನ್ ಸ್ತುತಿಸುತ್ತಿದ್ದರೆ ಅವನು ನಾವು ಬೇಡಿದುದನ್ನು ನಮಗೆ ಕೊಡಬಲ್ಲನೆ? ನನಗ್ಯಾಕೋ ಡೌಟು! ನಾವು ಮನುಷ್ಯರೇನಾದರೂ ನಮ್ಮನ್ನು ಈ ರೀತಿ ಯಾರಾದರೂ ಸಂಭೋಧಿಸಿದರೆ ಏನು ಮಾಡುತ್ತೇವೆ ಹೇಳಿ? ಅಂದವನ ಕಪಾಳಕ್ಕೆರಡು ಬಿಗಿಯುತ್ತೇವೆ ಅಷ್ಟೆ.!
ಹಿಂದಿನ ಕಾಲದಲ್ಲಿ ಮನೆಯಲ್ಲಿ ಮೊದಲು ಹುಟ್ಟಿದ ಮಗುವಿಗೆ ಆ ಮನೆಯ ಅಜ್ಜ ಅಥವಾ ಅಜ್ಜಿ (ಅವರನ್ನು ದೇವರು ತನ್ನ ಬಳಿಗೆ ಕರೆಸಿಕೊಂಡಿದ್ದರೆ!)ಯ ಹೆಸರನ್ನಿಡುವುದು ವಾಡಿಕೆಯಾಗಿತ್ತು. ಸಹಜವಾಗಿಯೇ ಅಂತಹ ಹೆಸರುಗಳು ದೇವ ದೇವಿಯರ ಹೆಸರುಗಳೇ ಆಗಿರುತ್ತಿದ್ದವು. ಪ್ರದ್ಯುಮ್ನ, ಅನಿರುದ್ಧ, ಗೋವಿಂದ, ಮಧುಸೂದನ, ಪರಮೇಶ್ವರ, ಪಾರ್ವತಿ, ಲಕ್ಷ್ಮೀ, ಸರಸ್ವತಿ, ಗಂಗಾ, ಭಾಗೀರಥಿ, ಕಾವೇರಿ ಇತ್ಯಾದಿತ್ಯಾದಿ. ಭಗವನ್ನಾಮಸ್ಮರಣೆ, ಪುಣ್ಯ ನದಿಗಳ ಸ್ಮರಣೆಯೊಂದಿಗೆ ಮನೆಯ ಹಿರಿಯರ ಹೆಸರು ಸಹಜವಾಗಿ ನೆನಪಾಗುತ್ತಿರಲಿ ಎಂಬುದು ಇದರ ಉದ್ದೇಶ. ಮೊಮ್ಮಗ ಅನಿರುದ್ಧನಾದರೆ ಗತಿಸಿದ ಅವನ ಅಜ್ಜನೂ ಅನಿರುದ್ಧನೇ ಎಂದು ತಿಳಿಯಲು ನಮ್ಮ ಹಿರಿಯರು ಕಂಡುಕೊಂಡ ಸುಲಭೋಪಾಯವದು. ಕಾಲ ಬದಲಾಯಿತು, ನಮ್ಮ ಚಿಂತನೆಗಳು ಬದಲಾದುವು,ಈ ರೀತಿಯ ನಾಮಕರಣಗಳ ಸದಾಶಯವನ್ನು ಅರಿಯದೆ ನಾವು ನಮ್ಮ ಮಕ್ಕಳ ಹೆಸರುಗಳಿಗೆ ಆಧುನಿಕತೆಯ ಲೇಪವನ್ನು ಕೊಟ್ಟೆವು. ನಮ್ಮ ಮಕ್ಕಳು ಸಂದೇಶ್, ಚಿಂತನ್, ಮಂಥನ್, ಉತ್ಕರ್ಷ್, ಉದ್ಭವ್, ಅದ್ಭುತ್, ಛವಿ, ಅಮೂಲ್, ಶಹನಾಯಿ, ನಾದಸ್ವರಗಳಾಗಿ ನಮ್ಮ ಮಕ್ಕಳು ನನ್ನ ಹಸರೇ ನನ್ನಜ್ಜನ ಹೆಸರೂ ಆಗಿತ್ತು ಎಂದು ಸಂಭ್ರಮಿಸಿ ನಮ್ಮ ಕುಲಪರಂಪರೆಯನ್ನು ನೆನಪಿಸುವ ಅವಕಾಶದಿಂದ ವಂಚಿತರನ್ನಾಗಿಸಿದೆವು. ಇರಲಿ ಅದು ನಮ್ಮ ಕರ್ಮ.
ಹಿಂದೆ, ಬಹಳ ಹಿಂದೆ ಹೆಂಡತಿಯಾದವಳು ಪತಿಯ ಹೆಸರನ್ನು ಉಚ್ಚರಿಸಬಾರದು, ಹಾಗೆ ಉಚ್ಚರಿಸಿದಲ್ಲಿ ಪತಿಯ ಆಯಸ್ಸು ಕಡಿಮೆಯಾಗುತ್ತದೆ ಎಂಬ ನಂಬಿಕೆಯಿತ್ತು. ಹೀಗೆ ಒಮ್ಮೆ ದೇವರ ಮೆರವಣಿಗೆ ಸಾಗುತ್ತಿದ್ದಂತೆ ಭಕ್ತಾದಿಗಳಿಂದ ‘ಗೋವಿಂದಾ ನಮ್ಮ ಗೋವಿಂದಾ ನಮ್ಮ ಗೋವಿಂದಾ ನಮ್ಮ ರಕ್ಷಿಸೋ’ ಎಂಬ ಸಂಕೀರ್ತನೆ ನಡೆಯುತ್ತಿತ್ತು. ದೇವರ ನಾಮಸ್ಮರಣೆ ಮಾಡುವಾಗಲೂ ಪತಿಯ ಹೆಸರನ್ನು ಉಚ್ಚರಿಸಿದರೆ ಅವನ ಆಯಸ್ಸು ಕಡಿಮೆಯಾಗಬಹುದೆಂಬ ದೃಢ ನಂಬಿಕೆಯ ಹೆಣ್ಣೊಬ್ಬಳು ‘ನಂದು ಅದೆ, ನಂದು ಅದೆ, ನಂದು ಅದೆ ರಕ್ಷಿಸೊ’ ಎಂದು ಭಜನೆಗೈದಳಂತೆ. ಹೀಗೇಕೆಂದು ವಿಚಾರಿಸಲಾಗಿ ಅವಳ ಪತಿಯ ಹೆಸರು ‘ಗೋವಿಂದ’ನೆಂದಾಗಿತ್ತು!
ನಾಮಗಳಲ್ಲಿ ಅನ್ವರ್ಥನಾಮವೆನ್ನುವುದೊಂದಿದೆ. ವ್ಯಕ್ತಿಯ ಹೆಸರಿನಿಂದಲೇ ಆ ವ್ಯಕ್ತಿಯ ಘನತೆ, ಅಂದ-ಚಂದ, ಸಂಪತ್ತು ಶ್ರೀಮಂತಿಗಳು ಕಣ್ಮುಂದೆ ಬರಬೇಕು. ಈ ವಿಚಾರದಲ್ಲಿಯೂ ಕೆಲವೊಂದು ಸಲ ಎಡವಟ್ಟುಗಳಾಗುವುದುಂಟು. ಮೋಟು ಜಡೆಯವಳು ನಾಗವೇಣಿಯಾಗಿರುವುದು, ‘ಚಂದ್ರಮುಖಿ’ಯ ತುಂಬ ಚಂದ್ರನ ಮೇಲಿರುವ ಕಲೆಗಳು, ‘ಪುರುಷೋತ್ತಮ’ನೆಂಬವನ ವ್ಯವಹಾರಗಳೆಲ್ಲ ಪುರುಷಾಧಮರು ಮಾಡುವಂತಹದು, ‘ಕ್ಷೀರಸಾಗರ ಭಟ್ಟರ’ ಮನೆಯಲ್ಲಿ ಮಜ್ಜಿಗೆಗೂ ಗತಿಯಿಲ್ಲದಿರುವುದು, ‘ಸಂತಾನ ಲಕ್ಷ್ಮೀ’ ಬಂಜೆಯಾಗಿರುವುದು, ‘ಸುಹಾಸಿನಿ’ ಸದಾ ಸಿಡುಕಿಯಾಗಿರುವುದು, ‘ಸಂತೋಷಕುಮಾರ’ ಯಾವಾಗಲೂ ಹ್ಯಾಪು ಮೋರೆ ಹಾಕಿಕೊಂಡಿರುವುದು, ‘ವೇದವ್ಯಾಸ’ನ ನಾಲಿಗೆ ಸೀಳಿದರೂ ಒಂದು ಸಂಸ್ಕೃತ ಶ್ಲೋಕವೂ ಬಾರದಿರುವುದು ‘ಅನ್ವರ್ಥ ನಾಮ’ಗಳೊ, ‘ನಾಮವಿಶೇಷಗಳೊ’ ನಾನರಿಯೆ! ಹಿಂದೆ ರಾಜಮಹಾರಾಜರೂ ಒಡ್ಡೋಲಗಕ್ಕೆ ಬರುವ ಮೊದಲು ‘ರಾಜಾಧಿರಾಜಾ, ರಾಜ ನಕ್ಷತ್ರ ಚಂದ್ರೋದಯ, ಅಪರಿಮಿತ ಮಾರ್ತಾಂಡ ಬ್ರಹ್ಮಾಂಡ ಕೋಟಿ ನಾಯಕಾ ಭೋ ಪರಾಕ್, ಭೋ ಪರಾಕ್ ಎನ್ನುವುದನ್ನು ನಾವು ಕೇಳಿದ್ದೇವೆ. ಇನ್ನು ನಮ್ಮ ಮಠಾಧಿಪರನ್ನು ನೂರೆಂಟು ಶ್ರೀಗಳಿಂದ ಪ್ರಾರಂಭಿಸಿ ಅವರ ಗುರು ಪರಂಪರೆ, ಅವರಿರುವ ಕ್ಷೇತ, ನದಿ ತೀರಗಳನ್ನು ಉಲ್ಲೇಖಿಸಿಯೇ ಕರೆಯಬೇಕು.
ಮನುಷ್ಯರಿಗಿರುವಂತೆ ನಾವು ವಾಸಿಸುವ ಊರುಗಳಿಗೂ ಅಂದ ಚಂದದ ಹೆಸರುಗಳಿರುವಂತೆ ಚಿತ್ರ ವಿಚಿತ್ರ ಹೆಸರುಗಳು ಇರುತ್ತವೆ. ಕೆಲವೊಂದು ಊರುಗಳು ಅಂದ ಚಂದದ ಹೆಸರುಗಳಿಲ್ಲದೆ ಸೊರಗಿರುವುದುಂಟು. ದಕ್ಷಿಣ ಕನ್ನಡ ಕರಾವಳಿ ತೀರದ ಗಂಡು ಕಲೆ ಯಕ್ಷಗಾನಕ್ಕೆ ಹೆಸರುವಾಸಿ. ಬೇಸಿಗೆ ಬಂತೆಂದರೆ ಸಾಕು ವೃತ್ತಿಪರ ಮೇಳಗಳು ಪ್ರತಿ ನಿತ್ಯ ಬೇರೆ ಬೇರೆ ಊರುಗಳಲ್ಲಿ ಪ್ರದರ್ಶನವನ್ನು ನೀಡುತ್ತವೆ. ಪ್ರದರ್ಶನದ ಪ್ರಚಾರಕ್ಕಾಗಿ ಈ ಮೇಳಗಳು ದಿನಪತ್ರಿಕೆಗಳಲ್ಲಿ ಒಂದೆರಡು ಸಾಲುಗಳಲ್ಲಿ ತಾವು ಯಾವ ಊರಿನಲ್ಲಿ ಯಾವ ಕಥಾನಕವನ್ನು ಪ್ರದರ್ಶಿಸುತ್ತೇವೆ ಎಂದು ಚುಟುಕಾಗಿ ಪ್ರಕಟಿಸುವುದುಂಟು. ಅಂತಹ ಪ್ರಕಟಣೆಗಳ ಸ್ಯಾಂಪಲ್ ಹೀಗಿದೆ. ಪ್ರತಿ ವಿವರಣೆಯ ಮೊದಲ್ಲಿ ಊರಿನ ಹೆಸರು ಮತ್ತು ಕೊನೆಯಲ್ಲಿ ಅಂದು ಮೇಳದವರು ಪ್ರದರ್ಶಿಸುವ ಪ್ರಸಂಗದ ಹೆಸರುಗಳನ್ನು ಹೀಗೆ ಪ್ರಕಟವಾಗುತ್ತವೆ. ‘ಸೊಪ್ಪಿನ ಗುಡ್ಡೆ’ಯಲ್ಲಿ ವಿಶ್ವಾಮಿತ್ರ ಮೇನಕೆ, ‘ಹಾಳುಬಾವಿ’ಯಲ್ಲಿ ರಾಜಾ ಹರಿಶ್ಚಂದ್ರ, ‘ಸಾಯಿಬರ ಕಟ್ಟೆ’ ಯಲ್ಲಿ ಮಹಾಬ್ರಾಹ್ಮಣ, ‘ಸೂಳೆಕೇರಿ’ಯಲ್ಲಿ ಸತಿ ಶೀಲವತಿ, ‘ಜೋಡುರಸ್ತೆ’ಯಲ್ಲಿ ರಾಮಾಶ್ವಮೇಧ ಹೀಗೆಲ್ಲ!
ಇನ್ನು ನಮ್ಮ ಕೌಟುಂಬಿಕ ಬದುಕಿನಲ್ಲಿ ನಮ್ಮ ಸಂಬಂಧಗಳನ್ನು ಸೂಚಿಸುವ ಅಚ್ಚ ಕನ್ನಡದ ಅಪ್ಪ-ಅಮ್ಮ, ಅಜ್ಜ-ಅಜ್ಜಿ, ಅತ್ತೆ-ಮಾವ, ದೊಡ್ಡಮ್ಮ ದೊಡ್ಡಪ್ಪ, ಚಿಕ್ಕಮ್ಮ-ಚಿಕ್ಕಪ್ಪ, ಅಣ್ಣ-ತಂಗಿಗಳು ಇಂಗ್ಲೀಷಿನ ಮೊಮ್-ಡ್ಯಾಡ್, ಗ್ರಾಂಡ್ಪಾ -ಗ್ರಾಂಡ್ಮಾ, ಆಂಟಿ-ಅಂಕಲ್, ಕಷಿನ್, ಹಸ್ಬಿ(ಹಸ್ಬೆಂಡ್ ನ ಹೃಸ್ವ ಸ್ವರೂಪ!) ಡಾರ್ಲಿಂಗ್ (ಸಂಬೊಧನೆಗೆ ಲಿಂಗಭೇದವಿಲ್ಲ!) ಇತ್ಯಾದಿಗಳ ನಮ್ಮ ನಾಲಿಗೆಗಳ ಮೇಲೆ ಹರಿದಾಡುತ್ತಿವೆ! ವೈಫನ್ನು ಕಾರಿನ ಗಾಜನ್ನು ಒರೆಸುವ ವೈಪರ್ ಎಂದು ಮುದ್ದಿನಿಂದ ಕರೆಯಬಹುದೇನೋ? ಎಪ್ಪತ್ತರ ಆಸುಪಾಸಿನ ಅಜ್ಜಿಯೊಬ್ಬಳು ತನ್ನ ಮೊಮ್ಮಗುವಿಗೆ ‘ಪುಟ್ಟಿ, ನೀನು ನನ್ನನ್ನು ‘ಆಂಟಿ’ಯೆಂದು ಕರೆಯಬೇಕೆಂದು ತಾಕೀತು ಮಾಡಿದ್ದನ್ನು ನಾನು ನನ್ನ ಕಿವಿಯಾರೆ ಕೇಳಿದ್ದೇನೆ, ಕಣ್ಣಾರೆ ನೋಡಿದ್ದೇನೆ, ಸುಳ್ಳಲ್ಲವಿದು!
ಇನ್ನು ಕೊನೆಯದಾಗಿ ಹೆಸರಿರುವುದು ಶರೀರವನ್ನು (ಬಾಡಿ) ಗುರುತಿಸುವುದಕ್ಕೆ ಮಾತ್ರ. ನಾವು ಎಷ್ಟೇ ಪ್ರತಿಷ್ಟಿತರಾಗಿರಲಿ, ನಮ್ಮ ಹೆಸರು ಎಷ್ಟೇ ಮುದ್ದಾಗಿರಲಿ ಮರಣದ ಮರುಕ್ಷಣದಿಂದ, ನಮ್ಮ ಬಾಡಿ ‘ಬಾಡಿದ’ ಮೇಲೆ ನಮ್ಮನ್ನು ಗುರುತಿಸುವುದು ‘ಬಾಡಿ ಅಲ್ಲಿಟ್ಟಿದ್ದಾರೆ ನೋಡಿ’ ಏನಂತಿರಿ?
ಹಾಗಾದರೆ ಹೆಸರಿನಲ್ಲೇನಿದೆ? ಹೆಸರಿನಲ್ಲಿ ಏನೇನೂ ಇಲ್ಲ! ಹೆಸರಿನಲ್ಲೇನಿಲ್ಲ” ಹೆಸರಿನಲ್ಲಿ ಎಲ್ಲವೂ ಇದೆ! ಇವುಗಳ ಸಮತೋಲನವೇ ನಮ್ಮ ಬದುಕಾಗಬೇಕು.
3 Comments
ಸುಂದರವಾಗಿ “ಹೆಸರನ್ನು” ಬಣ್ಣಿಸಿದ್ದೀರ….
“ಹೆಸರಿನಲ್ಲಿ ಏನೇನೂ ಇಲ್ಲ! ಹೆಸರಿನಲ್ಲೇನಿಲ್ಲ” ಹೆಸರಿನಲ್ಲಿ ಎಲ್ಲವೂ ಇದೆ! ಇವುಗಳ ಸಮತೋಲನವೇ ನಮ್ಮ ಬದುಕಾಗಬೇಕು.”
ಈ ನಿಮ್ಮ ಕೊನೆಯ ವಾಕ್ಯ ಎಲ್ಲರೂ ಮತ್ತೆ ಮತ್ತೆ ಓದಿ, ಅರ್ಥಮಾಡಿಕೊಳ್ಳಬೇಕು..
ಲೇಖನ ಓದಿ ಖುಷಿ ಪಟ್ಟದ್ದಕ್ಕಾಗಿ ವಂದನೆಗಳು. ಓದುತ್ತಿರೋಣ, ಬರೆಯುತ್ತಿರೋಣ…, ಬೆಳೆಯುತ್ತಿರೋಣ.
ಹೆಸರಿನ ಜನ್ಮ ಜಾಲಾಡಿದ, ಹೆಸರಿಡುವ ಮೊದಲೊಮ್ಮೆ ಓದಬೇಕಾದದ್ದು,
ಕರೆಯಲೊಂದು ಹೆಸರೆಂದು ಕೆ. ಎ. ೨೫/ಎ ೫/೪/೨೦೧೬ ಎಂದು ಇಡಲಾದೀತೇ?
ಇನ್ನು ನಮ್ಮ ಭಾಗದ, ಅಂದರೆ ಉತ್ತರ ಕರ್ನಾಟಕದ ಅಡ್ಡಹೆಸರಿನಬಗ್ಗೆ ಹೇಳದಿದ್ದರೆ ಹೆಸರು ಎಂಬ ಪದಕ್ಕೇ ಹೆಸರಿಲ್ಲವಾದೀತು.
ಮುದನೀಡಿದ ಬರಹ