ಹೂಳು ತೆಗೆಯೋಣು ಬಾ.
ಕೆರೆಯೆಂಬ ಚಿತ್ತದೊಳು ಕಸವೆಂಬ ಹೂಳು ತುಂಬಿ
ಸಿಹಿ ನೀರು ಸಿಗದೆ ಬರೆ ಕೆಸರೆ ಬರುತಿಹುದು
ದೊಡ್ಡ ಬಿಂದಿಗೆಯಾದರೂ ಚಿಕ್ಕ ಬಿಂದಿಗೆಯಾದರೂ
ಬರಿದೆ ಹೊಲಸೇ ಬರುತಿರಲು ಯಾರೂ ನೋಡರು!
ಅದಕೆ ಹೂಳು ತೆಗೆಯೋಣ ಬಾ!
ಧ್ಯಾನವೆಂಬೋ ಯಂತ್ರ ತಂದು ತಪವೆಂಬೋ
ಚಾಲಕನ ತಂದು ದೈವವೆಂಬ ಮನಸ್ಸು ಮಾಡಿ
ದುಷ್ಟ ರಾಕ್ಷಸನೆಂಬ ಅವಗುಣಗಳ ಕಿತ್ತು ಬಿಸಾಡಿ
ಹೆಕ್ಕಿ ತೆಗೆಯೋಣ ಕಾಮ ಕ್ರೋಧ ಮದ ಮತ್ಸರವೆಂಬೋ ರಾಡಿ
ಹೂಳು ತೆಗೆಯೋಣು ಬಾ!
ತುಂಬಿರಲು ಕಸ ಕೆಟ್ಟನಾತವು ಬರುವುದು
ಕಂಡ ಕಂಡವರೆಲ್ಲ ಸನಿಹ ಸುಳಿಯದೆ ದೂರದೂರ ಓಡುವರು
ನಿಂತ ನೀರು ಕ್ರಿಮಿ ಕೀಟಗಳ ಬೀಡಾಗಿ ಮಲಿನವಾಗುವುದು
ಸಮಯವು ಮೀರಲು ರೋಗವು ಜಾತ್ರೆಯ ಮಾಡುವುದು
ಅದಕೆ ಹೂಳು ತೆಗೆಯೋಣು ಬಾ!
ನಾಳೆಯೆಂಬೋ ಮಾತು ಬೇಡ ದುಷ್ಟನ ತೆಗೆಯಲು
ಇಂದೇ ಕಳಚ ಬೇಕು ನವ ಚೈತನ್ಯ ಬೆಳಗಲು
ಬೇರುಗಳ ಆಳ ಅರಿತು ಧ್ಯಾನವೆಂಬ ಯಂತ್ರನಿಗೆ
ಬಿಡದೇ ಕೆಲಸವ ಕೊಟ್ಟು ಬೇರುಗಳ ಆಳಕೆ ಹೋಗಿ ಕಿತ್ತು ಬಿಸಾಡಿ
ಹೂಳು ತೆಗೆಯೋಣು ಬಾ!
ಟೀಕೆಮಾಡುವ ತ್ಯಾಜ್ಯ, ಬೆರಳು ತೋರುವ ತ್ಯಾಜ್ಯ
ಅಪಹಾಸ್ಯ ಮಾಡಿ ಮನ ನೋಯಿಸುವ ತ್ಯಾಜ್ಯ
ಹಸಿದವಗೆ ಅನ್ನ ನೀಡದೆ ನಿರ್ದಾಕ್ಷಿಣ್ಯದಿ ಅಟ್ಟಿಬಿಡುವ ತ್ಯಾಜ್ಯ
ಸಕಲ ಜೀವಿಯಲಿ ಪ್ರೀತಿ ಇಲ್ಲದ ತ್ಯಾಜ್ಯ ತೆಗೆದು ನಿರ್ನಾಮ ಮಾಡಲು
ಹೂಳು ತೆಗೆಯೋಣ ಬಾ!
ತೆಗೆದು ನೋಡೊಮ್ಮೆ ನೆಮ್ಮದಿಯು ಕಾಣುವುದು
ಎಲ್ಲರಿಗುಪಕಾರವಾಗುವುದು, ಚಿತ್ತ ತಿಳಿಯಾಗುವುದು
ಸಕಲರಲಿ ಪಾರದರ್ಶಕವಾಗಿ ಅಂತರಂಗ ಶುದ್ಧಿಯಾಗುವುದು
ಹೊರಗೊಂದು ಒಳಗೊಂದು ಉಳಿಯದೆ ನಿರ್ಮಲವಾಗುವುದು
ಅದಕೆ ಹೂಳು ತೆಗೆಯೋಣು ಬಾ!
ಮನುಜ ಶಾಂತಿ ನೆಮ್ಮದಿಗಾಗಿ ಹೂಳು ತೆಗೆಯೋಣು ಬಾ!
–ಉಮಾ ಭಾತಖಂಡೆ.
1 Comment
Nice