ಹುಡುಕಾಟ
ನಿತ್ಯದ ಬದುಕಿದು ದುಸ್ತರವಾಗಿ
ಅಶಾಂತಿಯಲಿ ಬೆಂದು
ಮನವಿದು ಕದಡಿರಲಾಗಿ
ಹುಡುಕುತ ಹೊರಟೆ ನಾ
ಕೇಳುತ ಹೊರಟೆ ನಾ
ಒಂದೊಂದಾಗಿ, ಒಂದೊಂದಾಗಿ
ನೆರೆಯವರ ಕೇಳಿದೆ ಸಿಗಲಿಲ್ಲ
ಆಪ್ತರಲ್ಲಿ ಕೈಚಾಚಿದೆ ಸಿಗಲಿಲ್ಲ
ಬಂಧುಗಳ ಬೇಡಿದೆ ಸಿಗಲಿಲ್ಲ
ದಾನಿಗಳೆನಿಸಿಕೊಂಡವರು
ತಲೆಕೆಳಗೆ ಹಾಕಿದರಲ್ಲ
ಧನದಾಹಿಗಳಲಿ ಸಿಗಲಿಲ್ಲ
ಶಾಂತಿಯ ಹುಡುಕಾಟದಲ್ಲಿರುವ –
ವರಲ್ಲೂ ಸಿಗಲಿಲ್ಲ
ಸಿರಿತನದ ಸುಪ್ಪತ್ತಿಗೆಯಲ್ಲಿ
ಮೆರೆವರ ಕೇಳಲೂ ಸಿಗಲಿಲ್ಲ
ಆಡಂಬರದ ಅಂಗಡಿಗೆ ಪೊಕ್ಕಿ
ಹುಡುಕಿದೆ ಸಿಗಲಿಲ್ಲ
ಎನ್ನೆಲ್ಲ ಆಭರಣ ಆಸ್ತಿ ಪಾಸ್ತಿ
ಕೊಡುವೆನೆಂದರೂ ಸಿಗಲಿಲ್ಲ
ಗರ್ಭಗುಡಿಯಲಿ ಕುಳಿತ
ಸರ್ವಾಂತರ್ಯಾಮಿಯು ಕೇಳಲು
ನಸುನಗುತ್ತಿದ್ದ
ಸಿಗುವುದ್ಹೇಗೆಂದು ಕುಳಿತಿರಲೊಬ್ಬಂಟಿ
ಅಂತರಾತ್ಮವೆನ್ನ ನುಡಿಯಲು ಅಣತಿ ಇಟ್ಟಿತು
ಎಳೆಎಳೆಯಾಗಿ ಉತ್ತರಗಳ ಪುಟಬಿಚ್ಚಿಟ್ಟಿತು
ಅಂತರಾತ್ಮನ ಪರಿಶುದ್ಧತೆಯಲ್ಲುಂಟು
ನಿಸ್ವಾರ್ಥ ಪ್ರಕೃತಿಯಲ್ಲುಂಟು
ಲೋಭ ತ್ಯಜಿಸಿದವರಲ್ಲುಂಟು
ಮೋಹ ಗೆದ್ದವರಲ್ಲುಂಟು
ಭಕ್ತಿಭಾವದ ಶೂನ್ಯತೆಯಲ್ಲುಂಟು
ಸಾಧನೆಯ ಧ್ಯಾನದಲ್ಲುಂಟು
ಹತಚೇತನಗಳಲಿ ಆತ್ಮವಿಶ್ವಾಸದ
ಸಿಂಚನಗೈವವರಲ್ಲುಂಟು
ನಿರ್ದಯಿಯಲಿ ದಯೆ ತೋರುವದರಲ್ಲುಂಟು
ಶತೃವಿನಲಿ ಮಿತ್ರನ ಕಾಣ್ವವರಲ್ಲುಂಟು
ತಪ್ಪಿತಸ್ಥನಲಿ ಕರುಣೆಯುಳ್ಳವರಲ್ಲುಂಟು
ಕೋಟಿ ಜೀವಿಗಳಲಿ ಮಮತೆ
ತೋರುವವರಲ್ಲುಂಟು
ಸರ್ವದುಃಖದಲೂ ನಗೆ ಚಿಮ್ಮಿಸುವವರಲ್ಲುಂಟು
ಅಂತರಂಗ ನೀಡಿತೆನಗೆ ನೆಮ್ಮದಿಯ ಉತ್ತರವ.