ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ

ಆಹಾರ ಭದ್ರತೆಯ ಮಸೂದೆಯು ಬೇರೆ ವಿಷಯದ ವಿವಾದದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಚುನಾವಣಾ ಹಗ್ಗ ಜಗ್ಗಾಟದಲ್ಲಿ ಅತಂತ್ರವಾಗಿ ಆಹಾರಕ್ಕಾಗಿ ಬಾಯ್ತೆರೆದು ಕೂತ ಬಡವರೊಟ್ಟಿಗೆ ಬಾಯಿ ಬಾಯಿ ಬಿಡುತ್ತಿರುವುದಾಗಿ ಎಲ್ಲ ಪೇಪರು ಟಿವಿ ನ್ಯೂಜ್ ಚಾನಲ್ಗಳಲ್ಲಿ ರೋಚಕವಾಗಿ ಚರ್ಚೆಯಾಗುತ್ತಿದ್ದ ಸುದ್ದಿಯನ್ನು ಬೆಳಗಿನ ಪೇಪರಿನಲ್ಲಿ ಓದುತ್ತಾ ಬಡವರ ಅಭದ್ರತೆಯನ್ನು ನೆನೆಯುತ್ತಾ ಕೂತಿದ್ದಾಗ ನನ್ನವಳು ಕಾಫೀ ಲೋಟವನ್ನು ಸಿಟ್ಟಿನಿಂದ ತಂದು ನನ್ನೆದುರು ಕುಕ್ಕಿದಳು. ಹಾಲು ಸಕ್ಕರೆ ಕಾಫೀ ಇದ್ದೂ ಇಲ್ಲದಂತಿರುವ ಕಲಗಚ್ಚಿನಂತಹ ಕಾಫಿಯನ್ನು ಒಮ್ಮೆ ಅವಳನ್ನೊಮ್ಮೆ ನೋಡಿದೆ. ‘ಹಂಗ್ಯಾಕ್ ಇಲೆಕ್ಷೆನ್ನ್ಯಾಗ ಸೋತು ಡಿಪಾಜಿಟ್ ಕಳಕೊಂಡೌರಂಘ ಮಾರೀ ಮಾಡೀರೀ! ಎಲ್ಲಾ ರೇಟೂ ಚಂದಪ್ಪನ್ನ ಹತ್ರ ಹಿಮೂನ್ ಮಾಡ್ಲಿಕ್ಕೆ ಹೋಗಿ ಕೂತಾವ. ನಾನೇನ್ಮಾಡ್ಲಿ. ಹಿಂತಾದ್ರಾಗ ಇದಕಿಂತಾ ಛೊಲೊ ಕಾಫೀ ನಾಳೀನೂ ಸಿಗ್ತದಂತ ಆಸ್ಯಾ ಇಟ್ಗೋಬ್ಯಾಡ್ರ್ಯಾ ಮತ್ತ!’ ಗರ್ಜಿಸಿ ಹೋದಳು. ನಿರ್ವಾಹವಿಲ್ಲದೇ ನಾನು ಅದೇ ಅಮೃತವನ್ನು ಕುಡಿಯುತ್ತಾ ವರಾಂಡಾದಲ್ಲಿ ಕೂತಿದ್ದೆ.
ಇದ್ದಕ್ಕಿದ್ದಂತೆ ನಮ್ಮ ಅಡ್ಡಮನೆ ಹುಚ್ಚೂರಾಯ ತನ್ನ ಕೆಂಪು ಕಪ್ಪು ಹಲ್ಲುಗಳನ್ನು ಪ್ರದರ್ಶಿಸುತ್ತಾ ಗಣಪತಿ ಚಂದಾ ಕೇಳುವವರಂತೆ ಧುತ್ತೆಂದು ನಮ್ಮ ಮನೆ ಮುಂದೆ ಎಂಟ್ರೀ ಹೊಡೆದ! ನಂಗೊತ್ತು ಈ ಹುಚ್ರಾಯ ಏನೂ ಕೆಲಸವಿಲ್ಲದೇ ಹೀಗೆ ನನ್ನ ಹತ್ರ ಬರೋನಲ್ಲಾ! ‘ಚುನಾವಣೆಗಳು ಇನ್ನೂ ದೂರ ಇವೆ, ಇಂವಾ ಈಗ್ ಯಾಕ್ ಬಂದಾ?’ ಅಂತ ಯೋಚನೆಯಲ್ಲಿ ಬಿದ್ದೆ. ಹುಚ್ಚುರಾಯ ನನ್ನ ಮುಂದೆ ಆಂಜನೇಯನಂತೆ ನಿಂತು ಕೈ ಮುಗಿಯುತ್ತಾ, ‘ಯಾಕ್ ಸೇಸಣ್ಣ ಸಾ? ಅಂಗೆ ಟ್ಯಾಚೂ ತರಾ ಕುಂತ್ರಿ? ನಾ ಸಾ ಅಡ್ಡಮನಿ ಉಚ್ರಾಯಾ, ನಿಮ್ ಸಿಸ್ಯಾ!’ ಅಂತ ತನ್ನ ರೂಬೀ, ಬ್ಲ್ಯಾಕ್, ಸಫೈರ್, ಎಲ್ಲೋ ಸಫೈರ್ ದಂತ ವೈಭವವನ್ನು ಪ್ರದರ್ಶಿಸುತ್ತಾ ನಿಂತ. ಅವನ ಹೆಗಲ ಮೇಲಿನ ಹಸಿರು ಟಾವೆಲ್ಲಿಗೆ ಎಲೆಯಡಿಕೆಯ ಕೆಂಬಣ್ಣ ಹಾಗೂ ಸುಣ್ಣ ಸೇರಿ ತ್ರಿವರ್ಣವಾಗಿತ್ತು!
ನಾನು ನೆನಪು ಮಾಡಿಕೊಂಡವನಂತೆ ನಟಿಸುತ್ತಾ, ‘ಓಹ್ ಹುಚ್ರಾಯಾ! ಗೊತ್ ಹತ್ಲಿಲ್ಲ ನೋಡು! ಭಾಳ್ ಚೇಂಜ್ ಆಗೀ!’ ಅಂತ ಪೂಸಿ ಹೊಡೆದೆ.
ಅವನೂ ಕಿವಿಯಿಂದ ಕಿವಿಗೆ ಬಾಯ್ದೆರೆದು, ‘ಅಂಗಾ ಸಾ! ಎಲ್ಲರ್ನೂವೇ ಅಂಗೆ ಅಂತಾರೆ!’ ಗಿಂಜಿದ.
‘ಯಾಕ್ ಹುಚ್ರಾಯಾ? ಭಾಳ್ ದಿವ್ಸದ ಮ್ಯಾಲ ಇತ್ಲಾಕಡೆ ಬಂದಿ? ಗಣಪತಿ ಚಂದಾ ಕೇಳ್ಳಿಕ್ಕ ಬಂದ್ಯೋ ಹ್ಯಾಂಗ?’ ಅಂತ ಅವನುಬಂದ ಉದ್ದೇಶವನ್ನು ಬಾಯಿ ಬಿಡಿಸಲು ನಾನು ಮಾಮೂಲು ಪ್ರಶ್ನೆ ಎಸೆದೆ.
‘ಸಾ ನೀವೇ ಏಳಿ ನಮ್ಮಂತಾ ಬಡವ್ರೆಂಗೆ ಲೈಪ್ ಲೀಡ್ ಮಾಡ್ಬೇಕ್ ಸಾ? ಎಲ್ಲಾ ಸಾಮಾನುಗಳ ರೇಟ್ ಅಂಗೇ ಲಾಕೆಟ್ ಪೀಡ್ನಾಗೆ ಆಕಾಸಕ್ಕೆ ಮಕಾ ತಿರ್ಗಸೈವೆ’ ಹುಚ್ರಾಯಾ ಯಾವಾಗಲೂ ಹಿಂಗೇ. ಅಸಂಬದ್ಧವಾಗಿ ಮಾತನಾಡುತ್ತಾನೆ ಅಂತ ಅನ್ನಿಸಿದರೂ ಅದರ ಹಿಂದೆ ಏನೋ ಗಹನವಾದ ವಿಷಯವಿರುತ್ತದೆಂಬುದು ನಾನು ವರ್ಷಗಳಿಂದ ಕಂಡುಕೊಂಡ ಸತ್ಯ.
‘ಅದಿರ್ಲಿ ನೀ ಈಗ ಯಾಕ್ ಈ ಪ್ರಶ್ನಿ ಎತ್ತೀದಿ?’ ಗಣಪತಿ ಚಂದಾ ಅಲ್ಲ ಅಂತ ತಿಳಿದು ಸಮಾಧಾನವಾಗಿ, ‘ಮತ್ತss?’ ಎಂದೆ.
‘ಮತ್ತಿನ್ನೇನ್ ಸಾ! ಅಕ್ಕಿ ಕಿಲೋಗೆ ಐವತ್ತು, ಬೇಳೆ ನೂರು, ಈರುಳ್ಳಿ ಎಪ್ಪತ್ತೈದು, ಎಣ್ಣೆ ನೂರು, ಗ್ಯಾಸ್ ಸಾವ್ರಾ, ಸೀಮೆ ಎಣ್ಣೆ ಮೂವತ್ತೈದು, ತರಕಾರಿ ನನ್ಮಗಂದು ಐವತ್ತಕ್ಕೆ ಕಮ್ಮಿ ಇಲ್ಲಾ! ಕರೆಂಟ್ ಬಿಲ್ಲು ಸಾಕ್ ಒಡೀತೈತಿ! ಇಂಗಾದ್ರೆ ನಮ್ಮ ನಿಮ್ಮಂತಾ ಬಡವ್ರು ಎಂಗ್ ಸಾ ಅಡ್ಗೆ ಮಾಡ್ಕೊಂಡ್ ಉಣ್ಣೋದು?’ ವೀರಾವೇಶದಿಂದ ಮಾತಾಡಿ ಧೊಪ್ಪೆಂದು ಚೇರ್ ಮೇಲೆ ಕೂತು ಬೆವರೊರೆಸಿಕೊಂಡ. ನನಗೂ ಅವನ ಮಾತಿನಲ್ಲಿ ಸತ್ಯ ಕಾಣಿಸಿದ್ದು ಈಗಷ್ಟೇ ಪತ್ನಿ ಕಾಫೀ ಕುಕ್ಕಿ ಬೆಲೆಗಳು ಚಂದಪ್ಪನ ಹತ್ರ ಕೂತಾವ ಅಂತ ತಿವಿದು ಹೋಗಿದ್ದು ನೆನಪಿದ್ದ ಕಾರಣದಿಂದಾಗಿ!
‘ಖರೇ ಅದಪಾ ಹುಚ್ರಾಯಾ! ಆದ್ರ ನಾವರss ಏನ್ ಮಾಡೂ ಹಂಗ್ ಇದ್ದೀವಿ ಹೇಳಪಾ?’ ಅಂತ ಸಂತಾಪವನ್ನು ಹಂಚಿಕೊಂಡೆ.
‘ಬುಡಿ ಸಾ! ನಿಮ್ಮಂತ ಎಜುಕೇಟ್ ಲೇಜಿಗಳು ಇಂಗ್ ಅಂದ್ ಅಂದೇ ನಮ್ ದೇಸಾ ಈಗ ಇಂಗಾಗಿರೌದು’ ಅವನು ಎಂದಿನಂತೆ ನನ್ನನ್ನು ಬೈದು ನಾನು ಯಾವುದಕ್ಕೂ ಲಾಯಕ್ಕಿಲ್ಲದವನು ಎಂಬ ಸರ್ಟೀಫಿಕೇಟನ್ನು ನವೀಕರಿಸಿದ. ನಾನು ಮುಖ ಹುಳ್ಳಗೇ ಮಾಡಿಕೊಂಡು ಅವನನ್ನು ಕಳ್ಳಗಣ್ಣಿನಿಂದ ನೋಡಿ,
‘ಅಲ್ಲೋ ಹುಚ್ಚಾ! ನಮ್ಮ ಸರಕಾರಗಳೂ ಬಡವರ ಉದ್ಧಾರಕ್ಕೆ ಎಷ್ಟೊಕ್ಕೊಂದ್ ಕಲ್ಯಾಣ ಯೋಜನೆಗಳನ್ನು ಹಾಕಿದ್ದಾವಲ್ಲ! ಹೋತ್ತಿಂಗ್ಳು ಅನ್ನಭಾಗ್ಯ ತಂದಾರ, ಇನ್ ಸ್ವಲ್ಪ ದಿನದಾಗ ಔಷಧ ಭಾಗ್ಯಾನೂ ಬರ್ತssದಂತ. ಈಗಾಗಲೇ ಭಾಗ್ಯಜ್ಯೋತಿಯಿದೆ. ಮನೆಯಿಲ್ಲದವರಿಗೆ ಆಶ್ರಯ ಭಾಗ್ಯ ಅದ. ಸಾಲಿ ಮಕ್ಕಳಿಗೆ ಸೈಕಲ್ ಕೊಡ್ತಾರ. ಅವರಿಗೆ ಮಧ್ಯಾಹ್ನದ ಬಿಸಿಯೂಟ ಕೊಡ್ತಾರ. ಈಗ ಕ್ಷೀರಭಾಗ್ಯ ಸುರು ಆಗ್ಯದ. ಕೇಂದ್ರಾನೂ ಆಹಾರ ಭದ್ರತೆ ಮಸೂದೀ ತಂದssದ.’ ಅಂತ ನಾನು ಸರಕಾರದ ಕಾರ್ಯಕ್ರಮಗಳನ್ನು ಬೆಂಬಲಿಸಿ ಒಂದು ಚಿಕ್ಕ ಭಾಷಣವನ್ನೇ ಮಾಡಿದೆ.
‘ಅದೆಲ್ಲಾ ದಿಟಾ ಸಾ! ಸಾಕಸ್ಟ ಎಲ್ಪ್ ಮಾಡೀದಾರೆ. ಮಕ್ಳ ಸೈಕಲ್ ನಮ್ ರೈತರ್ಗೆ ಎಟ್ಟ ಅನುಕೂಲ ಆಗೈತೆ ಸಾ, ಮೇವು ಸಾಗ್ಸಾಕೆ, ತರಕಾರೀ ಸಾಗ್ಸಾಕೆ, ಮನೀಗೆ ಆಲ್ ಆಕಾಕೆ! ಈ ಬಾಗ್ಯಜೋತಿಯಿಂದ ಬಡವರ ಮನೆ ಎಂಗಸ್ರು ಬಟ್ಟೆಗೆ ಐರನ್ ಆಕ್ತಾರೆ. ಬಾಗ್ಯಲಕ್ಸ್ಮೀ ಪೋರ್ಗಾಮ್ನಿಂದಾಗಿ ಗಂಡ್ ಮಗಾ ಗಂಡ್ ಮಗಾ ಅಂತ ಬಾಯ್ ಬಿಡ್ತಿದ್ದ ನಮ್ ಅಳ್ಳೀ ಜನಾ ಈಗ ಪೀಮೇಲ್ ಮಕ್ಳೇ ಬೇಕಂತಾವೆ! ಮದ್ಲೆಲ್ಲಾ ಚಿಕ್ಕ ಮನ್ಯಾಗೆ ಎಲ್ಲಾ ಅಣ್ತಮ್ಮಂದ್ರು ಕಚಾಡ್ತಿದ್ರು. ಈ ಆಸ್ರೆಯ ಯೋಜನೆಯಿಂದ ಎಲ್ಲಾ ಪೀಸ್ಪುಲ್ಲಾಗಿ ಪಾಲಾಗಿ ಎಲ್ರೂ ಒಂದೊಂದು ಆಸ್ರೆಯಾ ಮನೆ ಮಾಡ್ಕೊಂಡೌರೆ. ಇನ್ನು ಮದ್ಯಾನ್ನದ ಬಿಸಿ ಊಟಮಾಡಿ ಮಕ್ಳೆಲ್ಲಾ ಗಟ್ಮುಟ್ಟಾಗಿ ವೊಲಾ ಗದ್ದೆ ಕೆಲಸದಲ್ಲಿ ಪೇರೆಂಟ್ಸುಗಳ್ಗೆ ಎಲ್ಪ ಮಾಡ್ತಿದ್ದಾರೆ ಸಾ! ಈಗಂತೂ ಮಿಲ್ಕ್ಬಾಗ್ಯ ತಂದೌರೆ! ಸಿವಾ ಅವ್ರನ್ನೆಲ್ಲಾ ಬೇಸ್ಯಾಗ್ ಇಟ್ಟಿರ್ಲಿ ಸಾ’ ಅಂತ ತನ್ನೆದುರು ಇಲ್ಲದ ಎಲ್ಲ ಸಿಎಮ್ಮು ಪಿಎಮ್ಮು ಸಾಹೇಬರುಗಳಿಗೆ ಕೂತಲ್ಲಿಂದಲೇ ಅಡ್ಡ ಬಿದ್ದೆದ್ದು, ‘ಆದರೆ ಈ ಅನ್ನಬಾಗ್ಯಾದಿಂದಲೇ ಒಂಚೂರು ಪ್ರಾಬ್ಲೆಮ್ ಮಾಡೌರೆ ಅಂತ ಅನ್ನಸ್ತೈತೆ ಸಾ!’ ಕುಂಯ್ ಕುಂಯ್ ಮಾಡಿದ. ನನಗೆ ಆಶ್ಚರ್ಯ. ಜೊತೆಗೆ ಕುತೂಹಲ. ಈ ಹುಚ್ರಾಯ ಎಡವಟ್ಟು ಅಂತ ಅನ್ನಿಸಿದರೂ ಅವನ ವಿಚಾರಗಳು ಮಹಾ ಕ್ರಾಂತಿಕಾರಕವಾಗಿರುತ್ತವೆ. ಅನುಭವ ಸಿದ್ಧವಾದದ್ದು!
‘ಅದೇನೋ ಪ್ರಾಬ್ಲೆಮ್ಮು? ಹೆಂತಾ ಛೊಲೋ ಪ್ರೋಗ್ರ್ಯಾಮ್ ಅದ! ಹಳ್ಯಾಗಿನ ಬಡವರೆಲ್ಲರ್ಗೂ ಹೊಟ್ಟಿತುಂಬ ಊಟಾ ಸಿಕ್ಕಾಂಗ ಆಗ್ತದಲ್ಲೇನೋ?’ ನಾನು ಚುರುಕಾಗುತ್ತಾ ಕೇಳಿದೆ.
‘ಔದು ಅದೆಲ್ಲಾ ದಿಟಾ! ಆದ್ರೆ ಇಂಗ್ ಏಚ್ನೇ ಮಾಡಿ ಸಾ, ಔರು ಎಂತೆಂತಾ ಅಕ್ಕೀ ಕೊಡ್ತಾರೋ ಏನೋ ಯಾವ್ ನನ್ ಮಗಂಗೆ ಗೊತ್ತಾಗತೈತೆ ಸಾ! ಅದ್ನೆಲ್ಲಾ ಅಡ್ಗೆ ಮಾಡ್ಕೊಂಡ್ ಉಂಡು ಜನಕ್ಕೆ ಒಟ್ಟೆ ಕೆಟ್ಟು ಆಟ್ಪಿಸಲ್ ಸೇರಿ, ಸಿವ ಸಿವಾ!’
‘ಅದಕ್ಕೀಗ ಏನ್ಮಾಡ್ಬೇಕಂತ ಇದ್ದೀ?’ ನನ್ನ ಪ್ರಶ್ನೆ ಅವನ ಉತ್ಸಾಹವನ್ನು ಇಮ್ಮಡಿಗೊಳಿಸಿತು.
‘ಅದ್ಕೇ ಸಾ ನಾ ಈ ಸರ್ತಿ ಪಾರ್ನಿಮೆಂಟ್ ಇನೆಕ್ಸನ್ನಾಗೆ ವೊಸಾ ಮನೀಪೆಸ್ಟ್ ಮಾಡಾಕೆ ಕೆಚ್ ಆಕ್ಕೊಂಬಂದೀನಿ. ತಾವೊಂದ್ ಸರ್ತಿ ಇಂಗೆ ಅದರ್ಮ್ಯಾಕ್ ಕಣ್ಣ್ ಆಕಿ. ನಿಂ ಸಜೇಸನ್ ಕೊಡಿ. ಆಮ್ಯಾಗೆ ನಾ ಇದ್ನ ಎಲ್ಲಾ ಪಾಲ್ಟಿಯ ಪೆಂಡ್ರುಗೊಳ್ಗೂ ಅಂಚ್ತೀನಿ!’ ಅಂತ ತನ್ನ ಕೊಳಕಾದ ಕೈಗಳನ್ನು ಅದಕ್ಕಿಂತ ಕೊಳಕಾಗಿರುವ ಅವನ ಚೀಲದಲ್ಲಿ ಹಾಕಿ ಅದಕ್ಕೂ ಕೊಳಕಾಗಿರುವ ಪೇಪರುಗಳನ್ನು ತೆಗೆದು ನನ್ನ ಮುಂದೆ ಹಿಡಿದ. ಈ ಹುಚ್ರಾಯಾ ಇಲೆಕ್ಷೆನ್ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯವಾಗಿ ಜಾಗ್ರತನಾಗುತ್ತಾನೆ. ಅವನ ಭೂತದಂತಹ ಬ್ರೇನಿನಲ್ಲಿ ಹೊಸಹೊಸ ಐಡಿಯಾಗಳ ಭೂತ ನರ್ತನ ಶುರು ಆಗುತ್ತದೆ.
ನಾನು ನಿರಾಸಕ್ತಿಯಿಂದ ಅದನ್ನು ನೋಡಿ, ‘ಅದನ್ನ ಆಮ್ಯಾಲ ನೋಡ್ತೀನಿ. ಮದ್ಲ ಅದರ ಜಿಸ್ಟ್ ಹೇಳು ಸಾಕು’ ಅಂದೆ. ನನ್ನ ಮಾತಿನಿಂದ ಅವನ ಹುರುಪು ಇಮ್ಮಡಿಯಾಗಿ, ಸೋಫಾ ಚೇರ್ ಮೇಲೆ ಕೊಳಕಾಗಿರುವ ತನ್ನ ಎರಡೂ ಕಾಲುಗಳನ್ನು ಎತ್ತಿ ಛಂಗಂತ ಜಿಗಿದು ಚಕ್ಕಳಮಕ್ಕಳ ಹಾಕಿ ಕೂತು, ಬಾಯಲ್ಲಿಯ ಬಣ್ಣವನ್ನು ನಮ್ಮ ಗಾರ್ಡನ್ನಿನ ಲಾನ್ ಮೇಲೆ ಸಿಂಪಡಿಸಿ,
‘ಅಂಗ್ ಕೇಳಿ ಸಾ! ಈಗ್ ನೋಡಿ ಸಾ, ಸರಕಾರದೌರು ಅಕ್ಕಿ, ಜೋಳಾ ರಾಗಿ ಬೇಳೆ ಎಲ್ಲಾ ಅಂಗೇ ಪ್ರೀ ಅನ್ನೋತರ ರೇಟ್ನಲ್ಲಿ ಅಂಚ್ತಾ ಔರೆ, ಊಂ ಅಂತೀರಿಲ್ಲೋ? ಅಂಗೇ ಕಡ್ಮೆ ರೇಟ್ನಲ್ಲಿ ಸೀಮೆ ಎಣ್ಣೆ, ಸಬ್ಸಿಡಿನಾಗೆ ಗ್ಯಾಸ್ ಕೊಡ್ತೌರೆ…!’
‘ಹೂಂ ಹೂಂ! ಆಗಲೇ ಹೇಳೀಯಲ್ಲಾ! ಈಗ ಪ್ರಾಬ್ಲೆಮ್ ಹೇಳು’ ನಾನು ಅವನ ಮಾತಿನ ಪ್ರವಾಹಕ್ಕೆ ತಡೆ ಹಾಕುತ್ತಾ ಕೇಳಿದೆ.
‘ಅಲ್ಲಾ ಸಾ! ಕ್ಯೂನಾಗೆ ನಿಂತು ಈ ಸಾಮಾನೆಲ್ಲಾ ತಂದು, ವಲೆ ವೊತ್ಸಿ ಅಡ್ಗೆ ಮಾಡ್ಕೊಂಡ್ ಉಂಡ್ ಕೆಲ್ಸಾ ಮಾಡಾಕೆ ಓಗೋಕೆ ಬೇಜಾನ್ ಟೈಂ ಆಗ್ತೈತೆ ಸಾ!’
‘ಅದಕ್ಕ?’ ನನಗೆ ಅವನ ಮಾತಿನಿಂದ ಇವನು ಎನ್ನೆಂತಹ ಐಡಿಯಾಗಳ ಬಾಂಬ್ ಹಾಕ್ತಾನೋಎಂದು ಒಂದು ತರಹ ಭೀತಿ ಶುರುವಾಯಿತು.
‘ಅದ್ಕೆ ನನ್ನ ಒಸಾ ಮೆನಿಪೆಸ್ಟ್ನಾಗೆ ಒಂದ್ ಪೆಂಟ್ಯಾಟ್ಟಿಕ್ ಇಸ್ಯಾ ಆಕೀನಿ ಸಾ!’
‘ಏನದು?’
‘ಎಂಗೂ ಮಕ್ಕಳಿಗೆ ಮದ್ಯಾನ್ನದ ಬಿಸಿಯೂಟ ಕೊಡೋ ಪೋರ್ಗಾಂ ಐತೆ, ಅಂಗೆ ಎಲ್ಲಾ ಕಾಲ್ಡ್ ಓಲ್ಡರ್ಗಳಿಗೆ ಪ್ರೀ ಆಗಿ, ಎಲ್ಡ್ ಒತ್ ಊಟಾನೇ ಸಪ್ಲೈ ಮಾಡೋ ಅಂಗೆ ಯಾಕ್ ಸಾ ಮಾಡ್ಬಾರ್ದು?!!!’
ಅವನ ಮಾತು ಕೇಳಿ ತನ್ನ ತಲೆ ಒಂದೈದು ಕ್ಷಣ ಧೀಂ ಅಂತ ತಿರುಗಿ ಉಸಿರು ನೆತ್ತಿಗೆ ಹ��್ತಿ ಕಣ್ಣು ಗುಡ್ಡ ಮೇಲೇರಿ ಕೆಳಗಿಳಿದು ಹೃದಯ ಬಡಿತ ಏರಿ ಮತ್ತೆ ನಿಂತಿತು.
‘ನನ್ನ ಮೆನಿಪೆಸ್ಟ್ನಾಗೆ, ಈ ಅನ್ನಬಾಗ್ಯ ಆಹಾರ ಬದ್ರತೆ ಪೋರ್ಗಾಮ್ ಎಲ್ಲಾ ನಿಲ್ಸಿ ಪ್ರೀ ಆಗಿ ಮನೆ ಮಂದೀಗೆಲ್ಲಾ ಮೀಲ್ ಬಾಕ್ಸ್ ಸಪ್ಲೈ ಮಾಡೋಅಂಗೆ ಐಟಂ ಸೇರ್ಸೀನಿ ಸಾ! ಇದ್ರಿಂದ ಮನೆ ಎಂಗರ್ಸೂ ಅರಾಮಾಗಿರ್ತಾರೆ, ಔರ್ಗೂ ದಿನಾ ಒಲೆ ಒತ್ಸೋದು, ಅಡ್ಗೆ ಮಾಡೋದು, ಪಾತ್ರೆ ತೊಳ್ಯೋದು ತೆಪ್ಪತೈತಿ. ಔರೂ ಎಚ್ಚ ಕೆಲ್ಸಾ ಮಾಡಿ ಪ್ಯಾಮಿಲಿಗೆ ಸಪೋಲ್ಟ ಮಾಡಬೌದು. ಈ ಆಳಾದ ಗಂಡ್ ನನ್ಮಕ್ಳುಒತಾರನೇ ಎಣ್ಣೆ ಒಡ್ಕೊಂಡ್ ಮಾಕಾಡೆ ಮಲಗಿರ್ತಾವೆ. ಅಲ್ದೆ ಇದ್ರಿಂದ ಒಲ್ದಾಗೆ ದುಡ್ಯೋ ಲೇಬರ್ಸ್ಗೆ, ಕೃಷಿ ಕಾರ್ಮಿಕರಿಗೆ ಅಡ್ಗೆ ಮಾಡ್ಕೊಂಡ್ ಉಣ್ಣೋದು ತಪ್ಪಿ ಎಚ್ ಕೆಲ್ಸಾ ಮಾಡ್ಬೌದು, ದೇಸಾ ಉದ್ದಾರಾ ಮಾಡ್ಬೌದು’ ಅವನ ಈ ಐಡಿಯಾ ಕೇಳಿ ತಲೆ ಗಿರ್ರ ಅಂತು. ಈ ಹುಚ್ರಾಯಂಗೆ ಮಾತ್ರ ಇಂತಹ ಮಹಾಕ್ರಾಂತಿಕಾರಿ ವಿಚಾರಗಳು ಹೊಳೆಯೋದು.
‘ಅಂದ್ರ ಊಟಾನ ಶಾಲೇಗೆ ತಂದು ಕೊಡ್ಬೇಕೋ ಅಥ್ವಾ ಸಮುದಾಯ ಭವನ, ಪಂಚಾಯ್ತಿ ಕಚೇರಿ ಇಲ್ಲಿಗೆ ತಂದು ಕೊಡಬೇಕು ಹೌದಲ್ಲೋ?’ ಅವನ ಐಡಿಯಾ ಕೇಳಿ ನಿತ್ರಾಣನಾಗಿದ್ದ ನಾನು ಬಲವಂತದಿಂದ ಚೇತರಿಸಿಕೊಂಡು ಕೇಳಿದೆ. ಅವನಿಂದ ಇನ್ನೂ ಹೆಚ್ಚಿನ ವಿಷಯ ಹೊರಗೆಳೆಯುವ ನನ್ನ ಹಳೆಯ ಉಪಾಯ.
‘ಏಯ್ ನೀವೊಂದ್ ಸಾ! ಅಲ್ಲಿಗಂಟಾ ಯಾಕ್ ಸಾ ಓಗೋದು? ಜನಾ ಅಲ್ಲಿ ಓಗಿ, ಅಲ್ಲಿ ಬಿಸ್ಲಾಗೆ ಮಳ್ಯಾಗೆ ಕ್ಯೂ ನಿಂತು, ಗಲಾಟೆ ಆಗಿ, ಬ್ಯಾಡಾ ಸಾ ಬ್ಯಾಡಾ! ಎಂಗೂ ಎಲ್ಲರ್ತಾವ ಆದಾರ್ ಕಾಲ್ಡ ಐತೆ, ಬಿಪಿಎಲ್ ಕಾಲ್ಡ ಐತೆ, ಅದ್ರಾಗೆ ಮನೀ ಇಳಾಸಾ ಇರ್ತೈತಿ. ಪ್ರೈವೇಟ್ನೌರ್ಗೆ ಏಳಿದ್ರೆ ಅಂಗೇ ವ್ಯಾನ್ ಮಾಡ್ಕೊಂಡ್ ಎಲ್ಡ್ ಒತ್ತು ಮನಿಮನೀಗೆ ಡಬ್ಬೀ ತಂದ್ ಮಡಗ್ತಾರೆ. ಔರ್ಗೂ ಎಂಪ್ನಾಯ್ಮೆಂಟ್ ಸಿಕ್ಕಾಂಗ್ ಆಗ್ತೈತೆ. ಎಲ್ಲಾ ಆಕ್ಕೊಂಡ್ ಒಟ್ಟೆ ತುಂಬಾ ಉಂಡ್, ಕಣ್ತುಂಬಾ ನಿದ್ದೆ ಮಾಡ್ತಾರೆ ಅಲ್ಲವ್ರಾ?’
‘ಮುಂದ?’ ನಾನು ಅವನ ಐಡಿಯಾ ಕೇಳಿ ನಿತ್ರಾಣನಾಗಿದ್ದೆ. ಧ್ವನಿ ಕ್ಷೀಣವಾಗಿತ್ತು.
‘ಅಂಗೆ ಮುಂಜಾಲಿ ಡಬ್ಬಿ ಸಂಜೀಕೆ ಸಂಜೀ ಡಬ್ಬಿ ಮುಂಜಾಲೆ ಔರೆ ಬಂದು ಕನೆಕ್ಟ್ ಮಾಡ್ಕೊಂಡ್ರಾತು ಸಾ!’
‘ಅಂದ್ರ ಹಿಂದ್ ಹಾಲಿನ ಬಾಟಲ್ ತಂದಿಟ್ಟು ತೊಗೊಂಡ್ ಹೋಗ್ತಿದ್ರಲ್ಲಾ ಹಂಗನ್ನು!’
‘ಆಂ ಕರೆಕ್ಟಾಗಿ ಏಳಿದ್ರಿ ಸಾ! ತೊಳ್ಯೋದು ಎಲ್ಲಾ ಔರೆ ಮಾಡ್ಕೊಂಡ್ರೆ ಎಸ್ಟ್ ಜನ್ರೀಗೆ ಎಂಪ್ನಾಯ್ಮೆಂಟ್ ಸಿಗ್ತೌತೆ ಏನ್ಕತೆ. ಎಲ್ಲರ್ಗೂವೆ ಎಲ್ಪ್ ಅಲ್ಲವ್ರಾ?’
‘ಹಂಗss ಹಾಸ್ಗೀ, ಚಾದರಾ, ತಲಿದಿಂಬು ಬ್ಯಾಡೇನೋ?’ ನಾನು ಕೆಣಕುವಂತೆ ಕಿಚಾಯಿಸಿದೆ. ಅದನ್ನು ಕೇಳಿ ಅವನ ಕಣ್ಣು ಮಿನುಗಿದವು.
‘ಎಂತಾ ಪೆಂಟಾಸ್ಕಿಟ್ ಐಡಿಯಾ ಕೊಟ್ರೀ ಸಾ!’ ಅಂತ ಎಗರಿ ಕೂತ.
‘ಔದ್ ಸಾ! ನಂಗೆ ಈ ಐಡಿಯಾ ಒಳ್ದೇ ಇರ್ನಿಲ್ಲ ನೋಡಿ ಸಾ! ಮೆನಿಪೆಸ್ಟ್ನಾಗೆ ಇದ್ನೂ ಆಕ್ತೀನಿ!’
‘ಆಮ್ಯಾಲ?’
‘ಆಮ್ಯಾಗೆ ಪುಡ್ ಐಟಂಗಳನ್ನೆಲ್ಲಾ ಅಂಗೇ ಡೈರೆಕ್ಟಾಗಿ ಪಾರ್ಮರ್ಸರಿಂದ್ಲೇ ಬೈ ಮಾಡೋಡೋದು ಸಾ! ಒಲೆ, ಗ್ಯಾಸು ಸೌದೆ, ಪಾತ್ರೆ ಪಗಡೆ ಎಲ್ಲಾನೂ ಸರ್ಕಾರದೌರೇ ಓಲ್ಸೇಲ್ನಾಗೆ ಬೈ ಮಾಡೋದು ಸಾ! ಇದ್ರಿಂದ ಇಂಡಸ್ಟೀಗೆ ಎಲ್ಪ್ ಅಲ್ಲವ್ರಾ? ಮೊದ್ಲೇ ನಮ್ ದೇಸದ ದುಡ್ಡು ತಳಾ ಕಂಡೈತಂತೆ. ಇಂಗ್ ಮಾಡೋದ್ರಿಂದ್ ಇಂಡಸ್ಟಿಗೂ ಲಾಬಾ! ಅಲ್ಲವ್ರಾ?’
ನಾನು ನಿರುತ್ತರ. ಅಷ್ಟರಲ್ಲಿ ಅವನ ಮೊಬೈಲ್ ರಿಂಗಾಯಿತು. ಹುಚ್ರಾಯಾ ಗಡಬಡಿಸಿಕೊಂಡು ಎದ್ದು, ‘ಪಾಲ್ಟೀ ಪ್ರೆಸಿಡಂಟು ಸಾ!’ ಅಂತ ಇಷ್ಟಗಲಾ ಮುಖ ಅದಕ್ಕಿಂತ ದೊಡ್ಡ ಬಾಯಿ ಮಾಡಿಕೊಂಡು ಆಚೆ ಹೋಗಿ ಮಹಾ ಸಿಕ್ರೇಟ್ ಮಾತಾಡಿ ಅಲ್ಲಿಂದಲೇ,
‘ಸಾ ನಾ ಏಳಿದ್ದ್ ಇಸ್ಯಾ ಇಚಾರಾ ಮಾಡೀ ಸಾ! ಮೆನಿಪೆಸ್ಟ್ ನಾಳೇನೆ ಕೊಡ್ಬೇಕು!’ ಹೇಳುತ್ತಲೇ ಓಡಿದ ಅವನು ಮತ್ತೆ ಏನು ತಿಳೀತೋ ಏನೊ, ತಿರುಗಿ ಓಡೋಡಿ ಬಂದು ಲಾನ್ ಮೇಲೆ ಪಿಚಕಾರಿ ಹರಡಿ,
‘ಅಂಗೇ ಸಾ, ಮೆನಿಪೆಸ್ಟ್ನಲ್ಲಿ ಈ ಬೀಡಿ ಸಿಗರೇಟು ಬ್ಯಾನ್ ಮಾಡೋಅಂಗೇನೂ ಸೇರಸ್ತೀನಿ, ಅಡ್ಕೆ ರೇಟು ಪಾತಾಳಾ ಕಂಡೈತೆ, ಸರಕಾರದೌರೇ ಅಡ್ಕೆ ಟೊಬ್ಯಾಕು ಕರೀದಿಸಿ ನಂಮ್ಮಂತೌರ್ಗೆ ಪ್ರೀ ಕೊಡ್ಸೀದ್ರೆ, ರೈತರ್ಗೂ ಲಾಬಾ ಅಲ್ಲವ್ರಾ? ತಿಂಕ್ ಮಾಡಿ ಸಾ!’ ಹೇಳಿ ಹೋದ.
ಅವನಈ ಹೊಸ ಪ್ರಣಾಳಿಕೆಯ ಪಿಚಕಾರಿ ನೇರ ನನ್ನ ಮುಖಕ್ಕೇ ಎರಚಿದಂತಾಗಿ ನನ್ನ ಉಸಿರು ನೆತ್ತಿಗೆ ಹತ್ತಿ ಕೆಮ್ಮು ಅನಿಯಂತ್ರಿತವಾಗಿ, ಮನೆಯವಳು ಓಡೋಡಿ ಬಂದು ಹಚ್ರಾಯಪ್ಪನಿಗೆ ಹಿಡಿ ಶಾಪ ಹಾಕಿ, ನನ್ನ ನೆತ್ತಿಗೆ ನೀರು ಎರಚಿ ತಟ್ಟುತ್ತಾ ನಿಂತಳು. ಅವಳ ತಟ್ಟುವಿಕೆಯಿಂದಾಗಿ ನನ್ನ ಜೀವ ಹೋಗಿಲ್ಲ ಅನ್ನುವುದು ಖಾತ್ರಿಯಾಯಿತಾದರೂ ಸಮಾಧಾನವಾಗಲಿಲ್ಲ!

– ಎಚ್. ಜಿ. ಮಳಗಿ

Leave a Reply