ದಿನಕರ, ಅಂದು ಮೆಲ್ಲನೆ ಮೇಲೇರಿ ಬರುವ ಅವನಿಂದ ಜಗವೆಲ್ಲ ನವನವೀನ. ನಿತ್ಯದ ಅದೇ ಬದುಕು ಆದರೂ ಹೊಸತನದ ಹುರುಪು. ಬಿರುಬಿಸಿಲ ಸಂಜೆಗೆ ತಂಗಾಳಿ ಸೋಕಿ ಹಾಯೆನಿಸದೆ? ನಿಶೆ ಪ್ರವೇಶದಿಂದ ಇಳೆದುಂಬುವ ತಂಪು. ಚಂದಿರನ ದರ್ಶನಕ್ಕೆ ಕಾತರ, ಹಬ್ಬದ ನಂತರದ ನೀರವತೆಯಲ್ಲೂ ಮುಂಬರುವ ಒಳ್ಳೆಯ ದಿನಗಳಿಗೆ ಕಾತರದಿಂದ ಎದುರುನೋಡುವ ಮನಸ್ಥಿತಿ ಒದಗಿಸದೆ?
ಹೊಸತೆ? ಹಳತೆ?
ಹೊಸ ವಸ್ತ್ರ ಧರಿಸಿ ಹೊಸ ವರ್ಷ ಸ್ವಾಗತಿಸುವುದು ಬೆಂಗಳೂರು ಮೈಸೂರು ಭಾಗಗಳಲ್ಲಿ ನಡೆದುಬಂದ ವಾಡಿಕೆ. ಹೊಸ ಬಟ್ಟೆ ಧರಿಸಿ ಚಂದ್ರನನ್ನು ನೋಡುವುದು ಯುಗಾದಿ ಆಚರಣೆಯ ಅತ್ಯಂತ ಮುಖ್ಯ ಭಾಗ. ಅದೇ ಮಕ್ಕಳಿಗೆ, ಹೆಣ್ಮಕ್ಕಳಿಗೆ ಮುಖ್ಯ ಆಕರ್ಷಣೆ. ಹೊಸದೆಂದರೆ ಯಾರ ಮುಖ ಅರಳುವುದಿಲ್ಲ? ಹೊಸ ಬಟ್ಟೆಯ ಘಮದ ಗಮ್ಮತ್ತು ಧರಿಸಿದಾಗ ಗತ್ತು ತಾನಾಗೇ ಮೈಯೇರುತ್ತದೆ. ಚೈತ್ರಮಾಸದಲ್ಲಿ ಪ್ರಕೃತಿಯೂ ಹಾಗೇ ಸಂಭ್ರಮಿಸುತ್ತದೆಯೇನೊ. ಸಮಷ್ಟಿಯ ತುಂಬೆಲ್ಲ ಪುರುಷ ಸಹಜ, ಸ್ತ್ರೀ ಸಹಜ ಸೃಷ್ಟಿಗಳಿವೆ. ನಿಸರ್ಗದಲ್ಲಿ ಗಡುಸಾದ ಬಂಡೆ ಅದು. ಪುರುಷ ಸಹಜ ಗಾಂಭೀರ್ಯವೇ ಮೈವೆತ್ತಂತೆ ಕಾಣದೆ? ಆ ನಿಶ್ಚಲ ಭಾವವೂ ಪಟ್ಟು ಬಿಡದ ಹಟವಾದಿಯಂತೆ, ಸವಾಲು ಎದುರಿಸುವ ಛಲವುಳ್ಳ ಆತ್ಮಶಕ್ತಿಯನ್ನು ಆವಾಹಿಸಿಕೊಂಡಂತೆ, ಪ್ರಾಬಲ್ಯ ಮೆರೆಯುವ ಅವನಂತೆ…ಕಾಳಜಿ ಪ್ರೇಮದಂತಹ ಮೃದು ಮಧುರ ಲಾಸ್ಯ ಸೂಸುವ ಗಿಡಮರಗಳೆಲ್ಲ ಹೆಣ್ತನದ ಕುರುಹುಗಳಂತೆ. ಮರಗಿಡಗಳಂತೂ ಹೂ ಬಿಟ್ಟು ವಾತಾವರಣವನ್ನೆಲ್ಲ ವರ್ಣಮಯವಾಗಿಸಿಬಿಡುತ್ತವೆ.
ಅದೇ ಬಾನು…ಅದೇ ಭೂಮಿ.
ನಯನ ನೂತನವಾಯಿತೆ? ಹಾದಿ ಇದು ಏಕೆ ಹೊಸದರಂತೆನಿಸುತ್ತದೆ? ಮಳೆಯಲಿ ಚಳಿಯಲಿ ಜತೆಯಲಿ ಇರುವ ಈ ಪ್ರೀತಿಯಿಂದಲೇ ಬಾಳ ಪಯಣ ಸೊಗಸು. ಬಂದದ್ದೆಲ್ಲ ಬರಲಿ ಎದುರಿಸುವ ಶಕ್ತಿಯೊಂದಿರಲಿ ಎಂದು ಧೀಶಕ್ತಿಯಲ್ಲಿ ಕೇಳಿಕೊಳ್ಳುವ ಸ್ಥಿತಿ ನಮ್ಮದು. ಸ್ಥಿತ್ಯಂತರದ ಗಳಿಗೆ ಇದು. ಜೀವನವೇನು ನಿಂತ ನೀರಲ್ಲ. ಸಾಗುತ್ತಲೇ ಇರಬೇಕು ನಾವು. ಆದರೂ ಸ್ಥಾವರದ ಹಂಬಲ. ನೆಲೆಗೊಳ್ಳುವ ಪರಿಕಲ್ಪನೆಯೇ ತೀರದ ಹಳವಂಡ. ಹೊಸದೆಲ್ಲ ಆಕರ್ಷಕವೇ. ಆದರೆ ಹಳೆಯದನ್ನು ಬಿಡಲೊಲ್ಲದ ಸಣ್ಣ ಹಟ ಮಾಡುವ ನಮ್ಮ ಮನ. ಹೊಸದೇನಕ್ಕೂ ಸುಮ್ಮನೇ ತೆರೆದುಕೊಳ್ಳದ ಅದು ಸುಮ್ಮನಿರದೇ ಚಡಪಡಿಸುವ ಚಟಪಟಪ ಸದ್ದು…ಎದೆಬಡಿತದೊಂದಿಗೆ. ಹೊಸದರ ಆಕರ್ಷಣೆಗಿಂತ ಹಳೆಯದರ ಆಪ್ತತೆ ಅಪ್ಯಾಯಮಾನ. ಅದಕ್ಕೇ ಏನೋ ಅವ್ವ, ಅಪ್ಪ, ಅಣ್ಣಂದಿರಂತಹ ಪ್ರಾಥಮಿಕ ಸಂಬಂಧಗಳಂತೆ ನಂತರ ಜತೆಯಾಗುವ ಆತ್ಮಬಂಧವೂ ಹಳೆಯದಾಗುತ್ತಲೇ ಹೋಗಲಿ ಎನ್ನುವ ತೀರದ ಬಯಕೆ. ಸಾಗಲಿ ಜನುಮ ಜನುಮಗಳವರೆಗೆ ಎಂದು ಪಿಸುನುಡಿಯಲ್ಲೇ ಪ್ರಾರ್ಥಿಸುವ ಪುಟ್ಟ ಹೃದಯ. ಅಲ್ಲಿ ಚಡಪಡಿಕೆ ಇಲ್ಲ. ಗೊಂದಲವಿಲ್ಲ. ಹಳತರಲ್ಲೇ ಹೊಸತನದ ಸಡಗರ, ಜೀವನೋತ್ಸಾಹದ ಒರತೆ. ಸಂಭ್ರಮಿಸಲು ಹಲವು ಹಾದಿ.
ಹಾಸಿಗೆ ಬಿಟ್ಟೇಳುತ್ತಲೇ ಮೂಗಿಗಡರುವ ಕೊಬ್ಬರಿ ಎಣ್ಣೆಯ ಸುವಾಸನೆ. ನೆತ್ತಿ ತಣಿಸಿ, ಹದ ಬಿಸಿಯ ಚಹ ಗಂಟಲೊಳಗಿಳಿಸಿ ಬಿಸಿನೀರಿಗೆ ಮೈಯೊಡ್ಡುವ ಉಲ್ಲಾಸ. ಹೊಟ್ಟೆ ತಣಿಯಲೆಂದು ಹೊಸ ಶಾವಿಗೆಯ ಪಾಯಸದೂಟ ತಯಾರಿ. ಕೊತ ಕೊತ ಕುದಿಯುವ ಬೇಳೆಗೆ ಬಿದ್ದ ಬೆಲ್ಲದ ತುಂಡು ಬಾಯಲ್ಲಿ ಚಳ್ಳನೆ ಒಸರುವ ಆಸೆಯ ನೀರು. ಹೂರಣದ ಹೋಳಿಗೆಗೆ ಜತೆ ಸಂಡಿಗೆ ಹಪ್ಪಳದ ಕುರು ಕುರು. ಕಟ್ಟಿನ ಸಾರಿನ ಪರಿಮಳಕ್ಕೆ ತುತ್ತು ಹೆಚ್ಚೇ ಹೊಟ್ಟೇ ಸೇರುವ ಉಗಿಯಾಡುವ ಅನ್ನ. ಆಹಾ ಹಬ್ಬವೆಂದರೆ ಹಬ್ಬದೂಟದ ಔತಣ. ನೆತ್ತಿ ,ಹೊಟ್ಟೆಯ ಜತೆ ಮನ ತಣಿಯುವಷ್ಟು ನೆನೆದೇವು ಅವನ ಪ್ರೀತಿಯನ್ನು..ಅದರಿಂದ ಹುಟ್ಟಿದ ಜೀವನಪ್ರೀತಿಯನ್ನು.
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.
ಯುಗಾದಿ…ಅದೇ ಗಿಡಮರ, ಆ ಬಾನು ಈ ಭೂಮಿಯ ಮಿಲನವ ಬಯಸುತ ಸಾಗಿದಂತೆಯೇ ಎಂದೂ ಮುಗಿಯದ ಹಾಡಿದು ಎನಿಸುತ್ತದೆ… ಹಳತರಲ್ಲೇ ಹೊಸತನ ಕಂಡುಕೊಳ್ಳುವ ದಿವ್ಯ ಸಂದೇಶ ಸಾರುತ್ತದೆ. ಮನವಿದು ಬೇವಿರಲಿ ಬೆಲ್ಲವಿರಲಿ ಬಾಳು ಅವನೊಂದಿಗಿರಲಿ ಎನ್ನುತ್ತದೆ..ಮತ್ತೆ ಮತ್ತೆ ಹುಟ್ಟಿ ಬರಬೇಕು ಅವನಿಗಾಗಿ…ಭಾವೋತ್ಕಟ ಉಕ್ಕುವ ಅವನ ಈ ಪ್ರೀತಿಗಾಗಿ ಎನಿಸುವಂತೆ ಮಾಡುತ್ತದೆ…ಯುಗಾದಿ
-ಚಿತ್ರ: ಪ್ರಮೋದ್