ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೋದರಿ ನಿವೇದಿತಾರ ಕೊಡುಗೆ
ಡಾ. ತೇಜಸ್ವಿನಿ ಯಕ್ಕುಂಡಿಮಠ
‘ಯಾವ ಭಾರತೀಯನೂ ಸಹ ನಿವೇದಿತಾ ಭಾರತವನ್ನು ಪ್ರೀತಿಸಿದ್ದಷ್ಟು ಪ್ರೀತಿಸಬಲ್ಲನೆ ಎಂಬುದು ನನ್ನ ಅನುಮಾನ’ ಎಂದು ಮಹಾನ್ ರಾಷ್ಟ್ರನಾಯಕ ಬಿಪಿನ್ ಚಂದ್ರಪಾಲ ಹೇಳಿದ್ದಾರೆ. ಭಾರತವನ್ನು ಬ್ರಿಟಿಷರಿಂದ ಬಂಧಮುಕ್ತಗೊಳಿಸಲು ಹೊರದೇಶಗಳಲ್ಲಿ ಜಾಗೃತಿಯನ್ನು ಮೂಡಿಸಿ, ಆಜಾದ್ ಹಿಂದ್ ಸೇನೆಯನ್ನು ಕಟ್ಟಿದ ವೀರ ಸೇನಾನಿ ನೇತಾಜಿ ಸುಭಾಷಚಂದ್ರ ಬೋಸರು ಬಂಗಾಳದ ಮಹಾನ್ ಕ್ರಾಂತಿಕಾರಿಯಾದ ಹೇಮಚಂದ್ರ ಘೋಷರವರಿಗೆ ‘ನಾನು ವಿವೇಕಾನಂದರನ್ನು ಅರ್ಥಮಾಡಿಕೊಂಡೆ’ ಎಂದಿದ್ದರಂತೆ. ಅಷ್ಟೇ ಅಲ್ಲ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ದಿಗ್ಗಜರುಗಳಾದ ಬಾಲ ಗಂಗಾಧರ ತಿಲಕ್, ಸುರೇಂದ್ರನಾಥ ಬ್ಯಾನರ್ಜಿ, ಚಿತ್ತರಂಜನ್ ದಾಸ್ ಮುಂತಾದವರು. ಅಂತಾರಾಷ್ಟ್ರೀಯ ಖ್ಯಾತಿಯ ಸಾಹಿತಿ ರವೀಂದ್ರನಾಥ ಟ್ಯಾಗೋರ್, ವಿಜ್ಞಾನಿ ಜಗದೀಶ ಚಂದ್ರ ಬೋಸ್ ಇವರೇ ಮೊದಲಾದವರು ಸೋದರಿ ನಿವೇದಿತಾರವರು ಭಾರತಕ್ಕೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಕೊಡುಗೆಯನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಸ್ಫೂರ್ತಿ ವಾಣಿ, ಸಿಂಹ ಘರ್ಜನೆ, ವಿಚಾರಧಾರೆಗಳಿಂದ ಅನೇಕ ಕ್ರಾಂತಿಕಾರಿಗಳು ಪ್ರಭಾವಿತರಾಗಿದ್ದರು. ಸ್ವಾಮಿ ವಿವೇಕಾನಂದರ ಉದ್ಭೋದಕ ನುಡಿಗಳನ್ನು ಎಲ್ಲರಿಗೂ ತಲುಪಿಸಲು ಸೋದರಿ ನಿವೇದಿತೆ ದೇಶಾದ್ಯಂತ ಸಂಚರಿಸಿ ಉಪನ್ಯಾಸ ನೀಡಿದರು.
ದೇಶದಾದ್ಯಂತ ಬೇರೆ ಬೇರೆ ಭಾಗಗಳಲ್ಲಿ ವಿಭಜಿತರಾಗಿದ್ದ ಕ್ರಾಂತಿಕಾರಿಗಳನ್ನು ಒಗ್ಗೂಡಿಸಲು ಅರಬಿಂದೋ ಘೋಷರು ಸ್ಥಾಪಿಸಿದ್ದ ಸಮಿತಿಯಲ್ಲಿ ಚಿತ್ತರಂಜನ್ ದಾಸ, ಸುರೇನ್ ಟ್ಯಾಗೋರರವರೊಂದಿಗೆ ಸೋದರಿ ನಿವೇದಿತಾರವರೂ ಪಾಲ್ಗೊಂಡಿದ್ದರು. ‘ಬಾಂಬುಗಳನ್ನು ಪ್ರಯೋಗಿಸದೇ ಇಂಗ್ಲೆಂಡ ಏನನ್ನೂ ನೀಡಲಾರದು. ಪ್ರತಿ ಸುಧಾರಣೆಯನ್ನು ಸರ್ಕಾರದಿಂದ ಕಿತ್ತುಕೊಳ್ಳಬೇಕು ಎಂಬ ಉಕ್ತಿ ಐರ್ಲೆಂಡಿನಲ್ಲಿ ಪ್ರಚುರವಾಗಿದೆ’ ಎಂದು ಸೋದರಿ ನಿವೇದಿತಾ ಒಂದೆಡೆ ಹೇಳಿದ್ದರು. 1905ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ್ದನ್ನು ಕಟುವಾಗಿ ಖಂಡಿಸಿದ ಸೋದರಿ ನಿವೇದಿತಾ ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು.
1905ರಲ್ಲಿ ಬಾಲ ಗಂಗಾಧರ ತಿಲಕರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಪಕ್ಷದ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡರು. ಸೌಮ್ಯವಾದಿಗಳು ಹಾಗೂ ಕ್ರಾಂತಿಕಾರಿಗಳ ನಡುವೆ ಸೌಹಾರ್ದತೆಯನ್ನು ಏರ್ಪಡಿಸುವ ಪ್ರಯತ್ನವನ್ನು ನಿವೇದಿತಾ ಮಾಡಿದರು. 1909ರಲ್ಲಿ ನಡೆದ ‘ಅಲಿಪುರ ಬಾಂಬ್ ಕೇಸ್’ನಲ್ಲಿ ಪಾಲ್ಗೊಂಡಿದ್ದ ಸ್ವಾಮಿ ವಿವೇಕಾನಂದರ ಸಹೋದರರಾಗಿದ್ದ ಭೋಪೇಂದ್ರನಾಥ ದತ್ತರು ಪೋಲೀಸರಿಂದ ತಪ್ಪಿಸಿಕೊಳ್ಳಲು ಸೋದರಿ ನಿವೇದಿತಾರವರು ನೆರವಾಗಿದ್ದರಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು.
ಸ್ವಾಮಿ ವಿವೇಕಾನಂದರ ವಿಚಾರಧಾರೆಯಂತೆ ‘ಪ್ರತಿಯೊಬ್ಬ ಭಾರತೀಯರಲ್ಲೂ ರಾಷ್ಟ್ರೀಯತೆ, ರಾಷ್ಟ್ರದ ಬಗೆಗೆ ಅಭಿಮಾನ ಜಾಗೃತವಾಗದಿದ್ದರೆ ಭಾರತ ಸ್ವತಂತ್ರವಾಗಲಾರದು’ ಎಂದು ದೃಢವಾಗಿ ನಿವೇದಿತಾರವರು ನಂಬಿದ್ದರು. ಆದ್ದರಿಂದ, ಭಾರತೀಯರಲ್ಲಿ ಅದರಲ್ಲಿ ವಿಶೇಷವಾಗಿ ಮಕ್ಕಳು ಹಾಗೂ ಯುವಕರಲ್ಲಿ ರಾಷ್ಟ್ರೀಯತೆಯನ್ನು ಜಾಗೃತಗೊಳಿಸಲು ವಿವಿಧ ಪ್ರಯತ್ನ ಮಾಡಿದರು. ಒಮ್ಮೆ ಅವರು 6″ x 4″ ಅಡಿಯ ಅವಿಭಜಿತ ಭಾರತದ ನಕ್ಷೆಯನ್ನು ಹರಡಿ ‘ನೋಡಿ, ನಿಮ್ಮ ತಾಯಿ ಸಂಕೋಲೆಗಳಲ್ಲಿ ಬಂಧಿತಳಾಗಿದ್ದಾಳೆ. ಈಗ ನೀವೇ ನಿರ್ಧರಿಸಿ ನೀವೇನು ಮಾಡಬೇಕೆಂದು.’
ಐರ್ಲೆಂಡಿನಲ್ಲಿದ್ದ ಸೋದರಿ ನಿವೇದಿತಾ ಐರಿಷ್ ಕ್ರಾಂತಿಕಾರಿ ಪತ್ರಿಕೆಗಳನ್ನು ತರಿಸಿಕೊಂಡು, ಅವುಗಳನ್ನು ಭಾರತೀಯ ಕ್ರಾಂತಿಕಾರಿಗಳಿಗೆ ಹಂಚುತ್ತಿದ್ದರಂತೆ.
ಪಂಜಾಬಿನ ಕೇಸರಿ ಲಾಲಾ ಲಜಪತರಾಯ ಹಾಗೂ ಸರದಾರ್ ಅಜೀತ ಸಿಂಗರನ್ನು ಬ್ರಿಟಿಷ್ ಸರ್ಕಾರ ಬಂಧಿಸಿದಾಗ ಜರುಗಿದ ಬಹುತೇಕ ಪ್ರತಿಭಟನಾಕಾರಿ ಸಭೆಗಳಲ್ಲಿ ನಿವೇದಿತಾ ಮುಖ್ಯ ಉಪನ್ಯಾಸ ನೀಡಿದ್ದರು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನನ್ನು ಅರ್ಜುನನಿಗೆ ಹೋರಾಡಲು ಪ್ರೇರಿಸಿದ ಶ್ಲೋಕಗಳನ್ನು ಉದ್ಧರಿಸುತ್ತಾ ಭಾರತೀಯರು ಬ್ರಿಟಿಷರ ವಿರುದ್ಧ ಹೋರಾಡಲು ಕರೆ ಕೊಟ್ಟರು.
‘ಅಲೀಪುರ ಬಾಂಬ್ ಸ್ಫೋಟ’ಕ್ಕೆ ಭಾರತದ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ. ಕ್ರಾಂತಿಕಾರಿಗಳ ಒಂದು ತಂಡ ಉಲ್ಲಾಸಕರ ದತ್ತರವರ ನೇತೃತ್ವದಲ್ಲಿ ಬಾಂಬುಗಳನ್ನು ಸಿದ್ಧಪಡಿಸುತ್ತಿತ್ತಂತೆ’ ಅದರ ಮುಕ್ತಾಯ ಹಂತದಲ್ಲಿ ಉನ್ನತ ದರ್ಜೆಯ ಪ್ರಯೋಗಾಲಯದ ಅವಶ್ಯಕತೆಯಿತ್ತು. ಅದನ್ನು ಒದಗಿಸುವ ವ್ಯವಸ್ಥೆಯನ್ನು ಮಾಡುವಂತೆ ಅವರು ನಿವೇದಿತಾರವರಿಗೆ ವಿನಂತಿಸಿಕೊಂಡರಂತೆ. ಆಗ ನಿವೇದಿತಾರವರು ಆಪ್ತರಾಗಿದ್ದ ಜಗದೀಶಚಂದ್ರ ಬೋಸ್ರವರ ನೆರವಿನಿಂದ ಕೊಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನ ರಸಾಯನಶಾಸ್ತ್ರದ ಪ್ರಯೋಗಾಲಯದಲ್ಲಿ ಯಶಸ್ವೀ ಪರೀಕ್ಷೆ ನಡೆಸಲು ಸಾಧ್ಯವಾಯಿತಂತೆ.
ಹಿಂದೂ-ಮುಸ್ಲಿಂ ಭಾವೈಕ್ಯತೆಯ ಅಗತ್ಯತೆಯನ್ನು ಮನಗಂಡಿದ್ದ ಸೋದರಿ ನಿವೇದಿತಾ, ಅದರ ಸಾಧನೆಗೆ ಪ್ರಯತ್ನಿಸಿದರು. ತಮಿಳಿನ ವಿಖ್ಯಾತ ಕ್ರಾಂತಿಕಾರಿ ಕವಿ ಸುಬ್ರಮಣ್ಯ ಭಾರತಿಯವರು ತಮ್ಮ ಪ್ರಥಮ ಪುಸ್ತಕವನ್ನು ತಮಗೆ ಸ್ಫೂರ್ತಿ ನೀಡಿದ್ದ ನಿವೇದಿತಾರಿಗೆ ಸಮರ್ಪಿಸಿ ಕೃತಜ್ಞತೆ ಮೆರೆದಿದ್ದಾರೆ. ಕ್ರಾಂತಿಕಾರಿಯಾಗಿದ್ದ ಹೇಮಚಂದ್ರ ಘೋಷ್ರವರು ಅನೇಕ ಬಾರಿ ಸೋದರಿ ನಿವೇದಿತೆಯನ್ನು ಭೇಟಿ ಮಾಡಿ ಚರ್ಚಿಸುವ ಮೂಲಕ, ಅವರ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸ್ಫೂರ್ತಿ ಪಡೆದಿದ್ದರಂತೆ. ಮತ್ತೊಬ್ಬ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್ರವರು ನಿವೇದಿತಾರವರನ್ನು ಕುರಿತು ಬರೆಯುತ್ತಾ “ಭಾರತದ ಒಣಗಿದ ಮೂಳೆಗಳಲ್ಲೇನಾದರೂ ಚೈತನ್ಯ ಮೂಡಿದ್ದರೆ ಅದಕ್ಕೆ ಕಾರಣ ಅವುಗಳಲ್ಲಿ ನಿವೇದಿತಾ ಉಸಿರು ತುಂಬಿದ್ದರಿಂದ. ನಮ್ಮಲ್ಲೇನಾದರೂ ರಾಷ್ಟ್ರ ನಿರ್ಮಾಣದ ಪ್ರಜ್ಞೆ ಮೂಡಿದ್ದರೆ ಅದಕ್ಕೆ ಕಾರಣ ನಿವೇದಿತಾರವರು. ನಮ್ಮ ಯುವ ಪೀಳಿಗೆ ಪರಿಶುದ್ಧ ಹಾಗೂ ಉನ್ನತ ಜೀವನ ನಡೆಸಲು ಸ್ಫೂರ್ತಿ ಪಡೆದಿದ್ದರೆ ಅದು ನಿವೇದಿತಾರವರಿಂದ”, ಎಂದಿದ್ದಾರೆ.
ಒಟ್ಟಿನಲ್ಲಿ ಕಿತ್ತೂರು ರಾಣಿ ಚನ್ನಮ್ಮನಾದಿಯಾಗಿ ಝಾನ್ಸಿರಾಣಿ ಲಕ್ಷ್ಮೀಬಾಯಿ, ಆನಿಬೆಸೆಂಟ್, ಸರೋಜಿನಿ ನಾಯ್ಡು, ಕಸ್ತೂರಬಾ, ಅರಣಾ ಅಸಫ್ ಅಲಿ, ಸುಚೇತಾ ಕೃಪಲಾನಿ; ಕ್ರಾಂತಿಕಾರಿಗಳಾದ ಶಾಂತಿ-ಸುನೀತಿ, ಬೀನಾ ದಾಸ್, ಮಾತಂಗಿನಿ ಹಜ್ರಾ, ಕಲ್ಪನಾ ದತ್ತಾ, ಪ್ರೀತಿಲತಾ, ಲಕ್ಷ್ಮೀ ಸೆಹಗಲ್ ಇವರೇ ಮೊದಲಾದ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಸೋದರಿ ನಿವೇದಿತಾರಿಗೆ ವಿಶಿಷ್ಟ ಸ್ಥಾನವಿದೆ. ಭಾರತವು ಸ್ವತಂತ್ರವಾಗಲು ಸೋದರಿ ನಿವೇದಿತಾರವರು ಮಹತ್ವದ ಕಾಣಿಕೆಯಿತ್ತಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿಕೊಂಡು ಕೃತಾರ್ಥರಾಗಬೇಕಿದೆ.