“‘ಸ್ವರಾತ್ಮ’ನ ಏಕಾಂಗಿ ಆಲ್ಬಂ…”

ತತ್ವಪದ ಮತ್ತು ಜನಪದವನ್ನು ಹದವಾಗಿ ಬೆರೆಸಿ ಹಾಡುವ ವಾಸು ದೀಕ್ಷಿತ್ ತಮ್ಮ ಮೊದಲ ಸೋಲೊ ಆಲ್ಬಂ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಸೂಫಿ ಸಂಗೀತದಿಂದ ಹಿಡಿದು ಸಿನಿಮಾ ಸಂಗೀತದವರೆಗೆ ನಿರಂತರವಾಗಿ ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುವ ವಾಸು ಅವರ ಸಂಗೀತ ಸಾಂಗತ್ಯದ ಪಯಣ ಇಲ್ಲಿದೆ…rತತ್ವಪದದ ತಾತ್ವಿಕತೆ, ಜನಪದದ ಸೊಗಡು, ಸೂಫಿಯ ಮಾಧುರ್ಯ ಬೆರೆತ ಅಧ್ಯಾತ್ಮ… ಎಲ್ಲವೂ ಒಂದೇ ಕಡೆ ಸಿಗುತ್ತದೆಂದರೆ ಅದು ವಾಸು ದೀಕ್ಷಿತ್ ಸಂಗೀತ. ಮೇಲ್ನೋಟಕ್ಕೆ ಪಕ್ಕಾ ಶಾಸ್ತ್ರೀಯವೂ ಅಲ್ಲದ, ಇತ್ತ ಜನಪದವೂ ಅಲ್ಲದ ಸಂಗೀತ ವಾಸು ಅವರ ವೈಶಿಷ್ಟ್ಯ.ಪ್ರಾಯೋಗಿಕ ನೆಲೆಯ ಮೂಲಕ ಸಂಗೀತದ ವಿವಿಧ ಮಜಲುಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳುವ ವಾಸು, ಇದೀಗ ‘ವಾಸು ದೀಕ್ಷಿತ್’ ಹೆಸರಿನಲ್ಲಿ ಸೋಲೊ ಆಲ್ಬಂ (ಏಕಾಂಗಿ ಆಲ್ಬಂ) ಮಾಡಿದ್ದಾರೆ. ಹತ್ತು ಹಾಡುಗಳಿರುವ ಈ ಆಲ್ಬಂ ಸಾವನ್, ಗಾನಾ, ವಿಂಕ್, ಐಟ್ಯೂನ್ಸ್‌, ಸ್ಪಾಟಿಫೈ ಹೀಗೆ 5 ಫ್ಲಾಟ್ ಫಾರಂಗಳಲ್ಲಿ ಸದ್ದು ಮಾಡುತ್ತಿದೆ. ಹೊಸ ಆಲ್ಬಂ ನೆಪದಲ್ಲಿ ವಾಸು ತಮ್ಮ ಸಂಗೀತ ಸಾಂಗತ್ಯದ ಪಯಣವನ್ನು ನವಿರಾಗಿಯೇ ಬಿಡಿಸಿಡುತ್ತಾರೆ.‘ಸ್ವರಾತ್ಮ’ ಬ್ಯಾಂಡ್ ಮೂಲಕ ಯುವಜನರ ಮನಸು ಗೆದ್ದಿರುವ ವಾಸು ಅವರ ಬಹುದಿನಗಳ ಕನಸು ಏಕಾಂಗಿ ಆಲ್ಬಂ ಮೂಲಕ ನನಸಾಗಿದೆ. ‘ಕನ್ನಡದಲ್ಲಿಯೇ ನನ್ನ ಮೊದಲ ಸೋಲೊ ಆಲ್ಬಂ ಮಾಡಬೇಕೆಂಬ ಆಸೆ ಇತ್ತು. ಕನ್ನಡ ನನ್ನ ಹೃದಯಕ್ಕೆ ಹತ್ತಿರವಾದ ಭಾಷೆ. ಹಾಗಾಗಿ, ಇಲ್ಲಿರುವ ಹಾಡುಗಳೆಲ್ಲಾ ಕನ್ನಡದ್ದವೇ. ಪುರಂದದಾಸರು (ತಾರಕ್ಕ ಬಿಂದಿಗೆ, ಮುಳ್ಳು, ರಾಗಿ ತಂದೀರಾ), ಕವಯತ್ರಿ ಮಮತಾ ಸಾಗರ್ (ನದಿಯೊಳಗೆ), ಅಪೂರ್ವ ಜ್ಞಾನ್ (ನೀಲಮೇಘ ಶ್ಯಾಮ), ಕಾರ್ತಿಕ್ ಪತ್ತಾರ್ (ಕೇಳಬ್ಯಾಡ) ಪ್ರತಾಪ್ ಭಟ್ (ಅಮ್ಮ, ಪುಕ್ಸಟ್ಟೆ ಲೈಫು) ಮತ್ತುನಾನು ರಚಿಸಿರುವ ಎರಡು ಹಾಡುಗಳು (ಮೈಸೂರು, ಆಗಲ್ಲ ಅನ್ನಬೇಡ) ಇದರಲ್ಲಿವೆ’ ಎನ್ನುವ ವಿವರಣೆ ಅವರದ್ದು.ಮೈಸೂರಿನಲ್ಲಿ ಹುಟ್ಟಿ ಬೆಳೆದ ವಾಸು ಬಾಲ್ಯದಲ್ಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತವರು. ಹೈಸ್ಕೂಲ್‌ಗೆ ಬರುವ ಹೊತ್ತಿಗೆ ಸಂಗೀತದ ಆಸಕ್ತಿ ರಂಗಭೂಮಿ ಮತ್ತು ಕ್ರೀಡೆಯತ್ತ ಹೊರಳಿತು. ರಂಗಕರ್ಮಿ ಮೈಮ್ ರಮೇಶ್ ಅವರ ಒಡನಾಟಕ್ಕೆ ಬಂದ ಮೇಲೆ ವಾಸು ಅವರನ್ನು ಸೆಳೆದದ್ದು ಜನಪದ ಸಂಗೀತ. ‘ಕಾವಾ’ದಲ್ಲಿ ಓದುತ್ತಲೇ, ಗಾಯಕ, ಅಣ್ಣ ರಘು ದೀಕ್ಷಿತ್ ಅವರಿಂದ ಗಿಟಾರ್ ಕಲಿಯಲು ಯತ್ನಿಸಿ ವಾಸು ವಿಫಲರಾಗಿದ್ದೂ ಉಂಟು. ಅಲ್ಲಿಗೆ ಗಿಟಾರ್ ಕಲಿಕೆಗೂ ಗುಡ್‌ ಬೈ ಹೇಳಿದರು. ಆರೇಳು ತಿಂಗಳು ಬಿಟ್ಟು ಬ್ಯಾಂಡ್‌ಮೇಟ್ ಅಭಿನಂದ್ ಕುಮಾರ್ ಜತೆಗೂಡಿ ಮತ್ತೆ ಗಿಟಾರ್ ಮೋಡಿಗೊಳಗಾದರು. ಆಗಲೇ ‘ನೀಲಮೇಘ ಶ್ಯಾಮ’ ಹಾಡಿನ ಬೇಸಿಕ್ ಟ್ಯೂನ್ ರೆಡಿಯಾಗಿದ್ದು ಎಂದು ನೆನಪಿಸಿಕೊಳ್ಳುತ್ತಾರೆ ವಾಸು.ಇದೆಲ್ಲಾ ಹದಿನೈದು ವರ್ಷಗಳ ಹಿಂದಿನ ಮಾತು. ಆ ದಿನಗಳಲ್ಲೇ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ನಲ್ಲಿ ಬಿಂದುಮಾಲಿನಿ ಮತ್ತು ವಾಸು ಓದುತ್ತಿದ್ದರು. ಗ್ರಾಫಿಕ್ ಡಿಸೈನರ್ ಆಗಬೇಕೆಂಬ ಆಸೆಯ ಬಿಂದು, ಫಿಲಂ ಮೇಕರ್ ಆಗಬೇಕೆಂಬ ವಾಸು ಅವರನ್ನು ಒಂದುಗೂಡಿಸಿದ್ದು ಸಂಗೀತದ ಅಭಿರುಚಿ. ಇಷ್ಟದ ಕ್ಷೇತ್ರದ ವಿರುದ್ಧ ಧ್ರುವಗಳಲ್ಲಿ ಕೆಲಕಾಲ ಕೆಲಸ ಮಾಡಿದ್ದ ಇಬ್ಬರೂ ನಂತರ ಸಂಗೀತದತ್ತಲೇ ಏಕಾಗ್ರಚಿತ್ತರಾದರು. ‘ನನಗಿನ್ನೂ ಫಿಲಂ ಮಾಡುವ ಉಮೇದು ಕಮ್ಮಿಯಾಗಿಲ್ಲ. ಖಂಡಿತಾ ಸಿನಿಮಾ ಮಾಡ್ತೀನಿ’ ಅನ್ನುವ ವಾಸು ಅವರ ಸಂಗೀತಕ್ಕೆ ಪತ್ನಿ ಬಿಂದುಮಾಲಿನಿಯೇ ಮೊದಲ ವಿಮರ್ಶಕಿ.‘ಬಿಂದು ಹಾಡುವುದನ್ನು ಕೇಳಿ ನಾನು ಬಹಳಷ್ಟು ಕಲಿತಿದ್ದೇನೆ. ಅವಳು ತನ್ನ ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳುವಾಗ ತದೇಕಚಿತ್ತದಿಂದ ಆಲಿಸುವ ನನಗೆ ಅದರ ಪ್ರಭಾವ ಖಂಡಿತಾ ಇದ್ದೇ ಇದೆ. ಬಿಂದು ತುಂಬಾ ಸೆನ್ಸಿಬಲ್. ನಾನು ಏನೇ ಹೊಸ ಹಾಡು ಮಾಡಿದರೂ, ಸಂಗೀತ ನಿರ್ದೇಶಿಸಿದರೂ ನನಗೆ ಅವಳ ಅಭಿಪ್ರಾಯ ತುಂಬಾ ಮುಖ್ಯ. ಅವಳ ಟೀಕೆ–ಟಿಪ್ಪಣಿ ನನ್ನನ್ನು ಮೌಲ್ಡ್ ಮಾಡಿವೆ. ಹಾಗಂತ ಅವಳು ಹೇಳಿದ್ದನ್ನೆಲ್ಲ ತಿದ್ದುವ ಜಾಯಮಾನ ನನ್ನದಲ್ಲ. ಕೆಲವೊಮ್ಮೆ ನನಗೆ ಸರಿ ಅನಿಸಿದರೆ ಸಾಕು’ ಎಂದು ತಮ್ಮ ಸಂಗೀತ– ಸಾಂಗತ್ಯದ ಪಯಣ ಬಿಚ್ಚಿಡುತ್ತಾರೆ ವಾಸು.ಬ್ಯಾಂಡ್ ಸಂಗೀತ ಅಂದಾಗ ಅಬ್ಬರದ ಸಂಗೀತವೇ ಕಿವಿಗಪ್ಪಳಿಸುವುದು ಸಹಜ. ಆದರೆ, ಇವೆಲ್ಲವನ್ನೂ ತಿರುವು–ಮುರುವು ಮಾಡುವಂಥದ್ದು ವಾಸು ಅವರ ಸಂಗೀತ. ಅವರೇ ಹೇಳುವಂತೆ ‘ರಾಕ್ ಸಂಗೀತದ ಜತೆಗೆ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತದಿಂದಲೂ ನಾನು ಪ್ರಭಾವಿತನಾಗಿದ್ದೇನೆ. ಎಲ್ಲದರಲ್ಲೂ ಇರೋದು ಏಳೇ ಸ್ವರಗಳು. ಅವೆಲ್ಲವನ್ನೂ ಬೇರೆ ಬೇರೆ ಫರ್ಮುಟೇಷನ್ ಕಾಂಬಿನೇಷನ್ ಮಾಡ್ತೀವಿ. ಹಾಗಂತ ನನ್ನ ಸಂಗೀತ ಅಬ್ಬರವಿರಬೇಕು ಅಂತಾಗಲೀ ಅಥವಾ ಮೆಲೋಡಿಯಂತಿರಬೇಕು ಅಂತಾಗಲೀ ಅಲ್ಲ. ಏನೇ ಮಾಡಿದರೂ ಅದು ಮೊದಲು ನನಗಿಷ್ಟವಾಗಬೇಕಲ್ಲವೆ’ ಅನ್ನೋ ಪ್ರಶ್ನೆಯನ್ನೂ ಎಸೆಯುತ್ತಾರೆ.ವಾಸು ಅವರ ಆಲ್ಬಂನಲ್ಲಿರುವ ಪುರಂದರದಾಸರ ‘ತಾರಕ್ಕ ಬಿಂದಿಗೆ’ ಬಹು ಸರಳವಾದ ಹಾಡು. ಅದನ್ನು ಕೇಳಿರುವ ಕೇಳುಗರ ಸಂಖ್ಯೆ ಐದು ಲಕ್ಷಕ್ಕೂ ಅಧಿಕ! ಯಾವ ಹಾಡು ಯಾರಿಗೆ ಹೇಗೆ ಇಷ್ಟವಾಗುತ್ತೆ ಹೇಳಲಾಗದು ಅನ್ನುವ ವಾಸು ಅವರ ಮಾತಿಗೆ ಇದು ಸಾಕ್ಷಿ. ‘ಬೆಂಗಳೂರ್ಡ್‌’ ಅನ್ನುವ ಇಂಗ್ಲಿಷ್ ಸಿನಿಮಾ ಮೂಲಕ ಸಿನಿಮಾ ಸಂಗೀತ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿರುವ ವಾಸು, ‘ಸೈಬರ್ ಯುಗದೊಳ್ ನವಯುಗ ಪ್ರೇಮಕಾವ್ಯಂ’ ಸಿನಿಮಾದ ಹಾಡಿಗೆ;ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.‘ರಸ್ತೆಯಲ್ಲಿ ನಡ್ಕೊಂಡು ಹೋಗ್ತಾ ಇದ್ದೆ… ನನ್ನ ಪೆಟ್ರೋಲ್ ಟ್ಯಾಂಕ್ ಖಾಲಿಯಾಗಿತ್ತು…’ ಇಂಥ ಧಾಟಿಯ ಹಾಡುಗಳೆಲ್ಲಾ ನನಗಿಷ್ಟವಾಗದು. ಸಾಹಿತ್ಯದಲ್ಲಿ ತುಸುವಾದರೂ ಭಾರ ಬೇಡವೆ? ಉತ್ತಮ ಸಾಹಿತ್ಯವಿರದಿದ್ದರೆ ಸಂಗೀತ ನಿರ್ದೇಶನ ಮಾಡಲು ಮನಸು ಬಾರದು. ಅಂತೆಯೇ ನಾನಂತೂ ಹಿನ್ನೆಲೆ ಗಾಯಕ ಅಲ್ಲ. ಏಕೆಂದರೆ ಬೇರೆಯವರ ಟ್ಯೂನ್‌ಗಳಿಗೆ ಹಾಡುವಂಥ ಕೌಶಲ ನನಗಿಲ್ಲ. ಇಷ್ಟಾದರೂ ಹಾಡಬೇಕಾದಾಗ ನನಗೆ ತುಸು ಸಮಯ ಬೇಕಾಗುತ್ತೆ. ತಕ್ಷಣವೇ ಅವರ ಬೇಡಿಕೆಗೆ ಸ್ಪಂದಿಸುವುದು ನನ್ನ ಪಾಲಿಗೆ ಕಷ್ಟದ ಕೆಲಸ’ ಅನ್ನುವ ವಾಸು ಅವರಿಗೆ ತಮ್ಮ ಶೈಲಿಯ ಸಂಗೀತ ಮುಖ್ಯವಾಹಿನಿಯ ಸಿನಿಮಾಗಳಿಗೆ ಹೊಂದುವುದಿಲ್ಲ ಅನ್ನುವ ವಾಸ್ತವದ ಅರಿವೂ ಇದೆ. ಪರಭಾಷೆಯ ಒಂದು ಸಿನಿಮಾ ಸೇರಿದಂತೆ ಕನ್ನಡದ ನಾಲ್ಕೈದು ಸಿನಿಮಾಗಳ ಸಂಗೀತದ ಕೆಲಸ ಸದ್ಯಕ್ಕೆ ವಾಸು ಅವರ ಕೈಯಲ್ಲಿದೆ.

courtsey:prajavani.net

https://www.prajavani.net/artculture/art/vasu-dixith-new-album-637280.html

Leave a Reply