ಸ್ವಧರ್ಮವೆಂಬ ತನ್ನತನ ಬಿಡಬಾರದು
ಸ್ವಧರ್ಮದ ವಿಷಯವನ್ನೇ ಮತ್ತೆ ಪ್ರಸ್ತಾವಿಸಲಾರಂಭಿಸಿದ್ದ ಕೃಷ್ಣ;
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ |
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ || 3.35
ಸ್ವಧರ್ಮ ಎಂಬ ಪದವನ್ನು ವೃತ್ತಿಧರ್ಮ, ಪ್ರವೃತ್ತಿಧರ್ಮ, ನಾಡು-ನುಡಿ- ಕುಲ-ಮತ-ಪಂಥಗಳಲ್ಲಿಡುವ ನಿಷ್ಠೆ ಮುಂತಾದ ಹಲವಾರು ನೆಲೆಗಳಲ್ಲಿ ಅರ್ಥಮಾಡಿಕೊಳ್ಳಬಹುದು ಎನ್ನುವುದನ್ನು ನೋಡಿದ್ದೇವೆ. ಆದರೆ ಈ ಸಂದರ್ಭದಲ್ಲಿ ಕೃಷ್ಣನು ಸ್ವಧರ್ಮವೆನ್ನುವ ಪದವನ್ನು ‘ಸ್ವವೃತ್ತಿ’ಯೆಂಬರ್ಥದಲ್ಲೇ ಹೇಳುತ್ತಿದ್ದಾನೆ. ಪ್ರತಿ ಮಾನವನೂ ತನ್ನ ಸ್ವಧರ್ಮವನ್ನು ಅರಿತು ಆಚರಿಸಿದರೆ ಅವನ ಆತ್ಮವಿಕಾಸವೂ ಸಾಮೂಹಿಕ-ಹಿತವೂ ಸಿದ್ಧಿಸುತ್ತದೆ.
ಕೃಷ್ಣ ಹೇಳುತ್ತಿದ್ದಾನೆ, ‘ವಿಗುಣವಾಗಿದ್ದರೂ ಪರವಾಗಿಲ್ಲ, ಸ್ವಧರ್ಮವೇ ಶ್ರೇಯಸ್ಕರ’ (ಅರ್ಥಾತ್ ತನ್ನ ಧರ್ಮ/ಕರ್ತವ್ಯ ಅಷ್ಟೇನೂ ಆಕರ್ಷಕವೆಂದೋ ಲಾಭದಾಯಕವೆಂದೋ ಅನಿಸದಿದ್ದರೂ ಪರವಾಗಿಲ್ಲ, ಅದರಲ್ಲೇ ನಿಲ್ಲುವುದು ಶ್ರೇಯಸ್ಕರ) ಎಂದು. ‘ತನ್ನ ಕೆಲಸಕ್ಕಿಂತ ಮತ್ತೊಬ್ಬರ ಕರ್ಮ ಚೆನ್ನಾಗಿರಬಹುದು, ಮೇಲಾಗಿರಬಹುದು’ ಎನ್ನುವ ಭ್ರಾಂತಿ ಮನುಷ್ಯನನ್ನು ಸ್ವಧರ್ಮನಿಷ್ಠೆಯಿಂದ ವಿಚಲಿತಗೊಳಿಸುತ್ತದೆ. ಆದರೆ ತನ್ನ ಕರ್ತವ್ಯಗಳಿಂದ ಮನುಷ್ಯನು ಒಮ್ಮೆಲೆ ಹಾರಿ ಬೇರೆಯದನ್ನು ಹಿಡಿಯುವುದು ಸಮಂಜಸವಲ್ಲ. ತಾನು ಹುಟ್ಟಿ ಬೆಳೆದು ಪಳಗಿರುವ ಪರಿಚಿತವೂ ಆತ್ಮೀಯವೂ ಆದ ಪರಿಸರ-ವೃತ್ತಿ-ಪ್ರವೃತ್ತಿಗಳಲ್ಲೇ ನಿಂತು, ಅಲ್ಲಿಂದಲೇ ಕಾರ್ಯಾರಂಭ ಮಾಡುವುದರಲ್ಲಿ ಮನುಷ್ಯನಿಗೆ ಅನುಕೂಲಗಳು ಹೆಚ್ಚು. ಅದರಲ್ಲೇ ಬೆಳೆದು ಕಾಲಾಂತರದಲ್ಲಿ ಅದನ್ನೂ ಮೀರಿ ನಿಲ್ಲುತ್ತ ಆತ್ಮವಿಸ್ತಾರವನ್ನೂ ಹೊಂದಲೂ ನಿಸರ್ಗವೇ ದಾರಿಯನ್ನು ತೆರೆಯುತ್ತದೆ.
ಕೆಲವು ವ್ಯಕ್ತಿಗಳಿಗೆ ಕೆಲವೊಮ್ಮೆ ತಮ್ಮ ವೃತ್ತಿಗಿಂತಗಿಂತ ಭಿನ್ನವಾದ ಪ್ರವೃತ್ತಿಯು ಅಂತರಂಗದಿಂದ ಭುಗಿಲೇಳುವುದುಂಟು, ಭಗವಾನ್ ಬುದ್ಧನಲ್ಲಿ ಕ್ಷಾತ್ರಕ್ಕಿಂತ ಹೆಚ್ಚಾಗಿ ತಪಶ್ಚರ್ಯೆಯ ಪ್ರವೃತ್ತಿಯಿದ್ದರಿಂದ ಆತ ತನ್ನ ರಾಜಧರ್ಮವನ್ನು ಬಿಟ್ಟು ಯತಿಧರ್ಮವನ್ನು ಆಶ್ರಯಿಸಿದ. ಇಂತಹ ಸಂದರ್ಭಗಳಲ್ಲಿ ‘ಪ್ರವೃತ್ತಿ’ಯೆಂಬ ಸ್ವಧರ್ಮವು ಪ್ರಬಲವಾಗಿ ಕಾರ್ಯವೆಸಗುತ್ತಿದೆ’ ಎಂದರ್ಥಮಾಡಿಕೊಳ್ಳಬಹುದು. ಆದರೆ ಹುಟ್ಟಿದ ಪರಿಸರ ಹಾಗೂ ಕುಲವೃತ್ತಿಧರ್ಮಗಳಿಗಿಂತ ವಿಭಿನ್ನವಾದ ಪ್ರವೃತ್ತಿಧರ್ಮವು ಎಲ್ಲೋ ಕೆಲವರಲ್ಲಿ ಮಾತ್ರ ಮೂಡುತ್ತದೆ. ಲೋಕಜನರು ಸಿದ್ಧವಾದ ಪಥದಲ್ಲಷ್ಟೇ ನಡೆಯಬಯಸುತ್ತಾರೆ. ಅದರಲ್ಲೇ ಅವರಿಗೆ ಸುರಕ್ಷೆ ಹಾಗೂ ಹಿತ. ಅದು ಮೇಲ್ನೋಟಕ್ಕೆ, ಕಣ್ಮನಗಳನ್ನು ಸೆಳೆಯುವಂಥ ಕರ್ಮವಾಗಿಲ್ಲದಿದ್ದರೂ, ಹೆಚ್ಚು ಲಾಭದಾಯಕವೆನಿಸದಿದ್ದರೂ ಅದರಲ್ಲಿ, ಪಳಗುತ್ತ ಪರಿಣತಿ ಹೊಂದುತ್ತ ವಿಕಾಸವಾಗಲು ಹೆಚ್ಚು ಅವಕಾಶ. ಅದನ್ನೇ ಕೃಷ್ಣನು ‘ಶ್ರೇಯಾನ್ ಸ್ವಧರ್ಮೋ ವಿಗುಣಃ’ ಎಂದಿರುವುದು.
ಮನಸ್ಸಿಗೆ ತಕ್ಷಣ ಇಷ್ಟವಾದದ್ದೆಲ್ಲ ‘ಪ್ರವೃತ್ತಿ’ಯೆಂಬ ‘ಸ್ವಧರ್ಮ’ವಲ್ಲ! ವೇತನ ಹೆಚ್ಚೆಂದೋ, ಆಕರ್ಷಕವಾಗಿ ಕಾಣುತ್ತದೆಂದೋ ಲೆಕ್ಕಾಚಾರ ಹಾಕಿ ಬಾಹ್ಯವಿವರಗಳನ್ನಷ್ಟೇ ನೋಡಿ ಬೇರೆ ವೃತ್ತಿಗೆ ಹಾರುವ ವ್ಯಕ್ತಿಯು ನಿಸರ್ಗದತ್ತವಾದ ತನ್ನ ಪ್ರತಿಭೆ ಸಾಮರ್ಥ್ಯಗಳನ್ನೂ, ತನಗೆ ಒಲಿದುಬಂದ ಪರಿಸರ-ಹಿನ್ನೆಲೆ-ಅನುಕೂಲಗಳನ್ನೂ ತಾನೇ ಅಲಕ್ಷಿಸಿದಂತಾಗುತ್ತದೆ. ಅದಲ್ಲದೆ, ಪರೀಕ್ಷಿಸದೆ ಮುಂದಾಲೋಚಿಸದೆ ಅಪರಿಚಿತವಾದ ಹೊಸ ಕ್ಷೇತ್ರದಲ್ಲಿ ತೊಡಗಿಕೊಂಡಾಗ, ಅನಿಶ್ಚಿತತೆ, ಪ್ರತಿಕೂಲತೆಗಳು ಕಾಡುವುದುಂಟು. ಅದಕ್ಕೇ ಕೃಷ್ಣನು ‘ಪರಧರ್ಮೋ ಭಯಾವಹಃ’ ಎಂದಿರುವುದು!
ತನ್ನ ಸ್ವಧರ್ಮವನ್ನು ಇತರರ ಸ್ವಧರ್ಮದೊಂದಿಗೆ ಹೋಲಿಸಲಾರಂಭಿಸಿದಾಗ ಮನುಷ್ಯನಲ್ಲಿ ‘ತನ್ನದಕ್ಕಿಂತ ಇತರರದೇ ಧರ್ಮ ಚೆನ್ನಾಗಿದೆ’ ಎಂಬ ಭ್ರಾಂತಿ ಮೂಡಿ, ಸ್ವಧರ್ಮನಿಷ್ಠೆ ಕುಗ್ಗಲಾರಂಭಿಸುತ್ತದೆ. ಹೀಗೆ ಆತ್ಮನಿರೀಕ್ಷಣೆಯನ್ನೂ ಮಾಡಿಕೊಳ್ಳದೆ, ಆ ಹೊಸವೃತ್ತಿಯ ವಾಸ್ತವಿಕಸ್ವರೂಪಗಳನ್ನೂ ಅರ್ಥಮಾಡಿಕೊಳ್ಳದೆ, ಹಠಾತ್ತನೆ ಅದನ್ನು ಹಿಡಿದುಬಿಡುವುದು ಅವಿವೇಕ. ಅಭಿರುಚಿಯೂ ಇಲ್ಲದ, ಹಿನ್ನೆಲೆಯೂ ಇಲ್ಲದ ವೃತ್ತಿಯಲ್ಲಿ, ವ್ಯಕ್ತಿಯ ನಿಜವಾದ ನೈಪುಣ್ಯ ಅರಳದು. ಆ ‘ಪರಧರ್ಮ’ವನ್ನು ಅದೆಷ್ಟೇ ಚೆನ್ನಾಗಿ ಮಾಡಿದರೂ, ಅದು ಅವನ ಆತ್ಮಶಕ್ತಿಯ ನೈಜ ಅಭಿವ್ಯಕ್ತಿಯಂತೂ ಆಗದೆ ಆರೋಪಿತಭಾವವಷ್ಟೇ ಆಗುಳಿಯುತ್ತದೆ. ಅದನ್ನೇ ಕೃಷ್ಣನು ‘ಪರಧರ್ಮಾತ್ ಸ್ವನುಷ್ಠಿತಾತ್ – ಶ್ರೇಯಾನ್ ಸ್ವಧರ್ಮೋ ವಿಗುಣಃ’ ಎಂದಿದ್ದು. ಮಾನವರೆಲ್ಲರೂ ತಮ್ಮೊಳಗಿನ ನಿಸರ್ಗದತ್ತ ಸಾಮರ್ಥ್ಯವನ್ನು ಗುರುತಿಸಿಕೊಂಡು, ಲಭ್ಯ ಕೌಶಲ-ಸಂಪನ್ಮೂಲಗಳನ್ನೇ ಬಳಸಿಕೊಂಡು ಅರಳಬೇಕು. ಅದನ್ನು ಬಿಟ್ಟು ಬೇರೆಯವರದನ್ನು ಕೃತಕವಾಗಿ ಆರೋಪಿಸಿಕೊಂಡರೆ, ಶ್ರಮವೂ ಸಮಯವೂ ವ್ಯರ್ಥ, ಸಾಫಲ್ಯವೂ ಅನಿಶ್ಚಿತ. ಆಲ್ಬರ್ಟ್ ಐನ್ ಸ್ಟೀನ್ ರ ಮಾತು ಮಾರ್ವಿುಕವಾಗಿದೆ – Everybody is a genius. But if you judge a fish by its ability to climb a tree, then it will live its whole life believing that it is stupid! (ಪ್ರತಿಯೊಬ್ಬರೂ ಪ್ರಾಜ್ಞರೇ, ಆದರೆ ಮೀನನ್ನು ಅದರ ‘ಮರ ಹತ್ತುವ ಸಾಮರ್ಥ್ಯ’ದಿಂದ ಅಳೆದುನೋಡಿದರೆ, ಆಗ ಅದು ಜೀವನವಿಡಿ ‘ನಾನು ಪೆದ್ದ’ ಎಂದೇ ನಂಬುತ್ತ ಇರಬೇಕಾಗುತ್ತದೆ!)
ಟ್ರೆಂಡ್ ಹಿಂದೆ ಓಡುವ, ಜಾಹೀರಾತುಗಳನ್ನು ಪ್ರಶ್ನಾತೀತವಾಗಿ ನಂಬುವ, ಮನಸ್ಸಿಗೆ ಇಷ್ಟವಾಗುತ್ತಿದ್ದಂತೆ ಒಮ್ಮೆಲೆ ಅದನ್ನೇ ‘ವೃತ್ತಿ’ ಎಂದು ಹಿಡಿದು ಬಿಡುವ ಇಂದಿನ ದುಡುಕುತನದ ಪೀಳಿಗೆಗೆ ಕೃಷ್ಣನ ಈ ಮಾತು ಅತ್ಯಂತ ಪ್ರಸ್ತುತ. ಅದಲ್ಲದೆ ಹಿಡಿದ ವೃತ್ತಿಯಲ್ಲಿನ ಏಳುಬೀಳುಗಳನ್ನು ಕಂಡು ಹೆದರಿ ಬೇರೊಂದು ವೃತ್ತಿಗೆ ಪಲಾಯನಗೈಯುವ ಹೇಡಿಗಳಿಗೂ ಈ ಮಾತು ಮಾರ್ಗದರ್ಶಕ. ‘ಹಿಡಿದದ್ದನ್ನು ಸತ್ತರೂ ಬಿಡದ ಕರ್ಮನಿಷ್ಠೆಯಿದ್ದರೆ ಮಾತ್ರವೇ ಗೆಲುವು’ ಎನ್ನುವುದನ್ನೇ ಕೃಷ್ಣನು ‘ಸ್ವಧರ್ಮೇ ನಿಧನಂ ಶ್ರೇಯಃ’ ಎನ್ನುವ ಮಾತುಗಳಲ್ಲಿ ಒಕ್ಕಣಿಸಿದ್ದಾನೆ.
ಡಾ. ಆರತೀ ವಿ. ಬಿ.
ಕೃಪೆ : ವಿಜಯವಾಣಿ