“ಸೈನಿಕರಿಗೆ ಸಂಗೀತ: ಕದ್ರಿ ಕನಸು”
ಕದ್ರಿ ಗೋಪಾಲನಾಥ್ ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕ. ಕನ್ನಡನಾಡಿನ ಸಂಗೀತದ ಅಪ್ಪಟ ಪ್ರತಿಭೆ. ಸಂಗೀತದ ಕನಸು ಹಚ್ಚಿಕೊಂಡು ಚೆನ್ನೈಗೆ ಹೋಗಿ ಅಲ್ಲಿಯೇ ನೆಲೆ ನಿಂತವರು. 30ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡನಾಡಿನಿಂದ ದೂರವಾಗಿದ್ದರೂ ಎಂದೆಂದಿಗೂ ಅವರಿಗೆ ಇಲ್ಲಿಯ ತುಡಿತ ತಪ್ಪಿದ್ದಲ್ಲ. ಕದ್ರಿ ಸಂಗೀತ ಕಛೇರಿಯಲ್ಲಿ ಸ್ಯಾಕ್ಸೊಫೋನ್ ಸಂಗೀತದ ಅಲೆ ಏಳುತ್ತದೆ. ಹಾಗೆಯೇ ಮಾತುಕತೆಗೆ ಕುಳಿತರೆ ನಗುವಿನ ತರಂಗಗಳು ಹರಡುತ್ತವೆ. ಹಾಸ್ಯ ಚಟಾಕಿಗಳು ಸಿಡಿಯುತ್ತವೆ. ಜೋರಾದ ನಗು ನಮ್ಮನ್ನೂ ಆವರಿಸಿಕೊಳ್ಳುತ್ತದೆ. ಅವರ ಸಂಗೀತಕ್ಕೂ ಕಾಲದ ಹಂಗಿಲ್ಲ. ಹರಟೆಗೆ ಕುಳಿತರೂ ಸಮಯದ ಹಂಗಿಲ್ಲ. ಎರಡೂ ನಮ್ಮ ಮೈಮರೆಸುತ್ತವೆ. 70 ರ ಹರೆಯದಲ್ಲಿ ಬೆನ್ನು ನೋವಿನಿಂದ ನರಳುತ್ತಿದ್ದರೂ ಕೈಗೆ ಸ್ಯಾಕ್ಸೊಫೋನ್ ಬಂದರೆ ಸಂಗೀತ ಅವರ ಮೈ ಮರೆಸುತ್ತದೆ. ಪ್ರೇಕ್ಷಕರನ್ನೂ ಕೂಡ. ಹಾಗೆಯೇ ಮಾತಿಗೆ ಕುಳಿತರೂ ಅವರು ಮೈಮರೆಯುತ್ತಾರೆ. ಮೈ ಮರೆಸುತ್ತಾರೆ.
ಅವರ ಸಂಗೀತದಂತೆ ಹರಟೆಯೂ ಖುಷಿ ಕೊಡುತ್ತದೆ. ಮೊನ್ನೆ ಮೊನ್ನೆಯಷ್ಟೇ ಬೆಂಗಳೂರು ಚಾಮರಾಜಪೇಟೆ ರಾಮಸೇವಾ ಮಂಡಳಿಯ ರಾಮನವಮಿ ಸಂಗೀತೋತ್ಸವಕ್ಕೆ ಬಂದಿದ್ದ ಅವರು ಹರಟೆಗೂ ಸಿಕ್ಕಿದ್ದರು. ಎಂದಿನ ತಮ್ಮ ಗಹಗಹಿಸುವ ನಗುವಿನ ಜೊತೆಗೇ ಮಾತಿನ ಅರಮನೆಯನ್ನೂ ಕಟ್ಟಿದರು. ಕನಸುಗಳನ್ನೂ ಬಿಚ್ಚಿಟ್ಟರು.
ಈಗಂತೂ ಕಲಾವಿದರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚು ಇರಬೇಕು ಎಂದು ಹೇಳುವ ಅವರು ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕದ್ರಿ ಗೋಪಾಲನಾಥ್ ಅವರಿಗೆ ಪದ್ಮಶ್ರೀ ಜೊತೆಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಕರ್ನಾಟಕದ ಎರಡು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಗಳು ಬಂದಿಲ್ಲವಾದರೆ ಆ ಬಗ್ಗೆ ಅವರಿಗೆ ಬೇಸರವೇನೂ ಇಲ್ಲ. ದೇಶ ವಿದೇಶಗಳಲ್ಲಿ ಸ್ಯಾಕ್ಸೊಫೋನ್ ಕಛೇರಿಗಳನ್ನು ನಡೆಸಿ ವಿಶ್ವಪ್ರಸಿದ್ಧರಾಗಿದ್ದಾರೆ. ‘ನಿಮ್ಮನ್ನು ಕಂಡರೆ ವಿದೇಶಿಗರಿಗೆ ಯಾಕೆ ಪ್ರೀತಿ‘ ಎಂದು ಕೇಳಿದರೆ ‘ವಾದ್ಯ ಅವರದ್ದು, ಸಂಗೀತ ಭಾರತದ್ದು, ಅದಕ್ಕೇ ಪ್ರೀತಿ ಜಾಸ್ತಿ’ ಎಂದು ಗಹಗಹಿಸುತ್ತಾರೆ. ಅಂದಹಾಗೆ ಅವರಿಗೆ ವಿದೇಶಿ ಶಿಷ್ಯರೂ ಇದ್ದಾರೆ. ಅದರಲ್ಲಿ ಅನಿವಾಸಿ ಭಾರತೀಯರು, ವಿದೇಶಿ ಮೂಲದವರೂ ಇದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಓಗುಟ್ಟು ಸ್ವಚ್ಛ ಭಾರತ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ದಕ್ಷಿಣ ಕನ್ನಡ ಜಿಲ್ಲೆಯ ಶತಮಾನೋತ್ಸವ ಕಂಡಿರುವ ಸರ್ಕಾರಿ ಶಾಲೆಗೆ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ‘ಈಗ ನಾನು ಊರಿಗೆ ಹೋದರೆ ಶಾಲಾ ಮಕ್ಕಳು ನನಗೆ ನಮಸ್ಕಾರ್ ಮಾಡುತ್ತಾ ನನ್ನ ಕೊಡುಗೆಯನ್ನು ಕೊಂಡಾಡುತ್ತಾರೆ. ಅದರಿಂದ ಎಷ್ಟು ತೃಪ್ತಿ ಸಿಗುತ್ತದೆ ಎಂದರೆ ಅದು ಸಂಗೀತಕ್ಕಿಂತ ಹೆಚ್ಚು’ ಎಂದು ಹೇಳುತ್ತಾರೆ.
ಈ ಹಿಂದೆ ಕೂಡಾ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಅಟಲ್ ಬಿಹಾರ್ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕಾರ್ಗಿಲ್ ಯುದ್ಧ ನಡೆಯಿತಲ್ಲ ಆಗ ಅವರು ಯುದ್ಧ ಸಂತ್ರಸ್ತರ ನೆರವಿಗೆ ಮನೆ ಮನೆಗೆ ತೆರಳಿ ಹಣ ಸಂಗ್ರಹಿಸಿದ್ದರು. ‘‘ವಾಜಪೇಯಿ ಪ್ರಧಾನಿಯಾಗಿದ್ದಾಗ ಒಂದು ದಿನ ಟಿವಿಯಲ್ಲಿ ಕಾರ್ಗಿಲ್ ಯುದ್ಧದ ಪರಿಣಾಮ ಮತ್ತು ಸೈನಿಕರ ದುಃಸ್ಥಿತಿಯ ಬಗ್ಗೆ ನೋಡಿದೆ. ಆಗಲೆ ನನಗೆ ಅನ್ನಿಸಿಬಿಟ್ಟಿತು. ಛೇ ನಾನ್ಯಾಕೆ ಹೀಗಿರಬೇಕು. ಇದಕ್ಕೆ ಏನಾದರೂ ಮಾಡಬೇಕು ಎಂದು ನನ್ನ ತಂಡದ ಸದಸ್ಯರನ್ನು ಕೇಳಿದೆ. ಅವರೂ ಒಪ್ಪಿದರು. ನಾವೆಲ್ಲ ಸೇರಿ ನಮ್ಮ ಸಲಕರಣೆಗಳೊಂದಿಗೆ ಚೆನ್ನೈಯಲ್ಲಿ ಮನೆ ಮನೆಗೆ ತೆರಳಿದೆವು. ಕಾರ್ಗಿಲ್ ಸಂತ್ರಸ್ತರಿಗೆ ಮತ್ತು ಸೈನಿಕರಿಗೆ ನೆರವಾಗಿ ಎಂದು ಕೇಳಿಕೊಂಡೆವು. ‘ಅಯ್ಯೋ ನೀವ್ಯಾಕೆ ಮನೆಗೆ ಬರಲು ಹೋದಿರಿ. ನೀವು ಹೇಳಿದ್ದರೆ ನಾವೇ ಬಂದು ನೆರವು ಕೊಡುತ್ತಿದ್ದೆವು’ ಎಂದರು. ಇಲ್ಲ, ಇಲ್ಲ, ಇದು ನನ್ನ ಕರ್ತವ್ಯ ಎಂದು ನಾನು ಬೇಡಿಕೊಂಡೆ. ಅವರು ಹಣ ಕೊಟ್ಟರು. ಒಟ್ಟು 10.50 ಲಕ್ಷ ಸಂಗ್ರಹವಾಯಿತು. 300ಕ್ಕೂ ಹೆಚ್ಚು ಕಲಾವಿದರನ್ನು ಸೇರಿಸಿ ಕಾರ್ಯಕ್ರಮವನ್ನೂ ಮಾಡಿ ಹಣ ಸಂಗ್ರಹಿಸಿ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಕೊಟ್ಟೆವು’ ಎಂದು ತಮ್ಮ ಸಾಹಸವನ್ನು ವಿವರಿಸುತ್ತಾರೆ.
‘ನಾವು ಇವತ್ತು ಇಲ್ಲಿ ಸಂಗೀತ ಕಚೇರಿಯನ್ನು ನೆಮ್ಮದಿಯಿಂದ ನಡೆಸುತ್ತಿದ್ದೇವೆ ಎಂದರೆ ಅಥವಾ ನೀವು ಆನಂದದಿಂದ ಸಂಗೀತವನ್ನು ಕೇಳುತ್ತಿದ್ದೀರಿ ಎಂದರೆ ಅದಕ್ಕೆ ನಮ್ಮನ್ನು ಸದಾ ಕಾಲ ಕಾಯುವ ಸೈನಿಕರು ಕಾರಣ’ ಎಂದು ಅವರು ಹೆಮ್ಮೆ ಪಡುತ್ತಾರೆ. ‘ಸೈನಿಕರು ಇರುವ ಕಡೆಗೇ ತೆರಳಿ ಅವರಿಗಾಗಿಯೇ ಸಂಗೀತ ಕಛೇರಿ ನಡೆಸುವ ಕನಸು ನನಗೆ ಇದೆ. ಆದರೆ ಅದಕ್ಕೆ ಯಾರನ್ನು ಸಂಪರ್ಕಿಸಬೇಕು ಎನ್ನುವುದು ನನಗೆ ಗೊತ್ತಿಲ್ಲ. ಸೈನಿಕರು ಕರೆದರೆ ನಾನು ಹೋಗಿ ಸಂಗೀತ ಕಛೇರಿ ಕೊಟ್ಟು ಬರುತ್ತೇನೆ. ಜೈಲಿನಲ್ಲಿ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಸಂಗೀತ ಕಛೇರಿ ನಡೆಸುವ ಹುಮ್ಮಸ್ಸು ನನಗೆ ಇದೆ. ಸಂಗೀತದಿಂದ ಮನಸ್ಸು ಪರಿವರ್ತನೆ ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ’ ಎಂದರು ಅವರು. ‘ನಾವು ಸಂಗೀತ ಕಲಾವಿದರೇ ಆಗಲಿ, ಸಾಹಿತಿಯೇ ಆಗಲಿ ನಮ್ಮ ದುಡಿಮೆಯಲ್ಲಿ ಸತ್ ಕರ್ಮದ ಪಾಲು ಅಂತ ಒಂದಿಷ್ಟು ಮೀಸಲಿಡಬೇಕು. ಅದು ನಮಗೆ ತೃಪ್ತಿ ಕೊಡುತ್ತದೆ. ನಾವು ಸಮಾಜದ ಋಣ ತೀರಿಸಲು ನೆರವಾಗುತ್ತದೆ’ ಎಂದು ಮುಂದುವರಿದರು.
‘ನಾನು ನುಡಿಸುವುದು ವಿದೇಶಿ ವಾದ್ಯ ಸ್ಯಾಕ್ಸೊಫೋನ್. ಆದರೆ ಅದರಿಂದ ಹೊರಹೊಮ್ಮುವುದು ಕರ್ನಾಟಕಿ ಸಂಗೀತ. ಒಮ್ಮೆ ಲಂಡನ್ ನಲ್ಲಿ ಬಿಬಿಸಿಯವರು ಏರ್ಪಡಿಸಿದ್ದ ಸಂಗೀತ ಕಛೇರಿಗೆ ಭಾರತದಿಂದ ನಾಲ್ಕು ಮಂದಿ ಹೋಗಿದ್ದೆವು. ಅದರಲ್ಲಿ ಮೂವರು ಹಿಂದೂಸ್ತಾನಿ. ನಾನು ಮಾತ್ರ ಕರ್ನಾಟಕಿ. ಮೊದಲ ಅವಕಾಶವನ್ನು ಯಾರಿಗೆ ಕೊಡಬೇಕು ಎಂದು ಕೇಳಿದಾಗ ಅಲ್ಲಿನವರು ನನ್ನನ್ನೂ ಆಯ್ಕೆ ಮಾಡಿದರು. ಯಾಕೆ ಗೊತ್ತೆ. ನಾನು ನುಡಿಸುವ ವಾದ್ಯ ಅವರದ್ದಾಗಿತ್ತು. ಸಂಗೀತ ನಮ್ಮದಾಗಿತ್ತು ಅದಕ್ಕೆ. ಅದು ನನ್ನ ಜೀವನದ ಮರೆಯಲಾಗದ ಘಟನೆ’ ಎಂದು ನೆನಪಿಸಿಕೊಂಡರು.
ನಮ್ಮದು ಭಕ್ತಿ ಸಂಗೀತ. ವಿದೇಶದ್ದು ಉನ್ಮಾದದ ಸಂಗೀತ. ಅದಕ್ಕೇ ನಮ್ಮ ಸಂಗೀತಕ್ಕೆ ಬೆಲೆ ಜಾಸ್ತಿ. ವಿದೇಶದಲ್ಲಿ ಕೂಡ ಸಂಗೀತ ಕಲಿಯಲು ಬರುವವರು ನಮ್ಮ ವಸ್ತ್ರ ಸಂಹಿತೆಯನ್ನೂ ಅನುಸರಿಸುತ್ತಾರೆ. ಚಪ್ಪಲಿಯನ್ನು ದೂರದಲ್ಲಿಯೇ ಬಿಟ್ಟು, ಮಹಿಳೆಯರಾದರೆ ಸೀರೆ ಉಟ್ಟುಕೊಂಡು ಪುರುಷರಾದರೆ ಪಂಚೆ ಉಟ್ಟುಕೊಂಡು ಕಲಿಯಲು ಬರುತ್ತಾರೆ. ಸಂಗೀತ ಕಲಿಯಲು ಇದೇ ವಸ್ತ್ರ ಬೇಕು. ಯುವತಿಯೊಬ್ಬಳು ಹೊಕ್ಕಳು ಕಾಣುವಂತೆ ಆಧುನಿಕ ವಸ್ತ್ರ ತೊಟ್ಟು ಬಂದರೆ ನನಗೆ ಸಂಗೀತ ಕಲಿಸುವುದು ಕಷ್ಟ. ಸಂಗೀತ ಕಲಿಯಲು ಮತ್ತು ಕಲಿಸಲು ಮನೋವಿಕಾಸದ ವಾತಾವರಣ ಇರಬೇಕು. ಸಂಗೀತ ಕೂಡ ಮನೋವಿಕಾಸಕ್ಕೆ ಪೂರಕವಾಗಿರಬೇಕು’ ಎನ್ನುವುದು ಅವರ ಸ್ಪಷ್ಟ ವಾದ.
ಈಗೆಲ್ಲಾ ಆನ್ ಲೈನ್ ನಲ್ಲಿ ಸಂಗೀತ ಕಲಿಸಲಾಗುತ್ತದೆ. ನೀವೂ ನಿಮ್ಮ ಶಿಷ್ಯರಿಗೆ ಆನ್ ಲೈನ್ ಕಲಿಸುತ್ತೀರಾ ಎಂದು ಕೇಳಿದರೆ ‘ಇಲ್ಲ. ಯಾಕೆಂದರೆ ಗುರು ಶಿಷ್ಯ ಸಂಬಂಧ ಬಹಳ ಮುಖ್ಯ. ಗುರು ಸ್ಪರ್ಷ, ಗುರು ಸ್ಪಂದನ ಎಲ್ಲವೂ ಬೇಕು ಶಿಷ್ಯರಿಗೆ’ ಎಂದು ಹೇಳಿ ‘ನನಗೆ ನೋಡಿ ಗುರು ಬಲ ಜಾಸ್ತಿ’ ಎಂದು ಮತ್ತೊಮ್ಮೆ ಜೋರಾಗಿ ನಕ್ಕರು. ‘ನಮ್ಮ ಗುರುಗಳು ಎಂದರೆ ಹಣ್ಣು ನೀಡುವ ಮರ ಇದ್ದಂತೆ. ಮರ ಯಾವಾಗಲೂ ತನಗಾಗಿ ಏನನ್ನೂ ಉಳಿಸಿಕೊಳ್ಳುವುದಿಲ್ಲ. ಎಲ್ಲವನ್ನೂ ಕೊಟ್ಟುಬಿಡುತ್ತದೆ. ತೆಗೆದುಕೊಳ್ಳುವವರು ಯಾರೂ ಇಲ್ಲ ಎಂದರೆ ಅದು ತನ್ನ ಫಲವನ್ನು ಭೂಮಿಗಾದರೂ ಕೆಡವುತ್ತದೆ. ಹಾಗೆಯೇ ಇದ್ದರು ನನ್ನ ಗುರುಗಳಾದ ಗೋಪಾಲಕೃಷ್ಣ ಅಯ್ಯರ್ ಅವರು. ಅವರ ದೆಸೆಯಿಂದಲೇ ನಾನು ಮಂಗಳೂರು ಬಿಟ್ಟು ಮದ್ರಾಸಿಗೆ ಹೋಗಿದ್ದು’ ಎಂದು ಕೊಂಚ ಭಾವುಕರೂ ಆದರು.
ತಕ್ಷಣಕ್ಕೆ ಸುಧಾರಿಸಿಕೊಂಡು ಚಟಾಕಿ ಹಾರಿಸಿದರು. ಈಗಿನ ಜನಕ್ಕೆ ಸಿನೆಮಾ ಸಂಗೀತದ ಹುಚ್ಚು. ವಾದ್ಯಗಳಲ್ಲಿಯೂ ಅದನ್ನೇ ನುಡಿಸುತ್ತಾರೆ. ಕೆಲವರಿಗೆ ಯಾವ ಸಂದರ್ಭದಲ್ಲಿ ಯಾವುದನ್ನು ನುಡಿಸಬೇಕು ಎನ್ನುವುದೂ ಗೊತ್ತಿಲ್ಲ. ಹುಡುಗ ಹುಡುಗಿಗೆ ತಾಳಿ ಕಟ್ಟುವ ಸಂದರ್ಭದಲ್ಲಿ ಈತ ‘ವಿರಹಾ ನೂರು ನೂರು ತರಹ’ ಎಂದು ನುಡಿಸುತ್ತಾನೆ ಎಂದು ಮತ್ತೆ ಜೋರಾದ ಹ್ಹಹ್ಹಹ್ಹಾ. ಮತ್ತೆ ಮತ್ತೊಂದು ಜೋಕು. ‘ನಮ್ಮವರಿಗೆ ಗಟ್ಟಿಮೇಳ ಎಂದರೇನು ಮತ್ತು ಅದು ಯಾಕೆ ಎನ್ನುವುದೂ ಗೊತ್ತಿಲ್ಲ. ಮೊದಲೆಲ್ಲಾ ಮದುವೆ 3–4 ದಿನ ನಡೆಯುತ್ತಿತ್ತು. ಬೆಳಗಿನ ಜಾವವೇ ಎದ್ದು ಸ್ನಾನ ಮಾಡಿ ತಯಾರಾಗುತ್ತಿದ್ದರು. ಆಗ ಯಾರಿಗಾದರೂ ಶೀತ ಆಗಿ ತಾಳಿ ಕಟ್ಟುವ ವೇಳೆಯಲ್ಲಿಯೇ ಆಕ್ಸೀ ಎಂದು ಸೀನಿಬಿಟ್ಟರೆ ಅದು ಅಪಶಕುನ ಎಂದಾಗುತ್ತಿತ್ತು. ಅದಕ್ಕೇ ಯಾವುದೇ ಅಪಶಬ್ದ ಕೇಳದೇ ಇರಲಿ ಎಂದು ಗಟ್ಟಿ ಮೇಳ ನುಡಿಸುತ್ತಿದ್ದರು. ಗಟ್ಟಿಮೇಳಕ್ಕೆ ಸಂಗೀತದ ಹಂಗಿಲ್ಲ. ಶಬ್ದದ ಆಡಂಬರವೇ ಜಾಸ್ತಿ.
ಅಂದಮಾತ್ರಕ್ಕೆ ಕದ್ರಿ ಅವರು ಸಿನೆಮಾ ವಿರೋಧಿ ಏನಲ್ಲ. ಅವರು ತಮಿಳುನಾಡಿನಲ್ಲಿ ಫೇಮಸ್ ಆಗಿದ್ದೇ ಸಿನೆಮಾ ಸಂಗೀತದಿಂದ. ಒಂದು ಸಿನಿಮಾಕ್ಕೆ ಸ್ಯಾಕ್ಸೊಫೋನ್ ನುಡಿಸಿದ್ದರೂ ಅದು ಅವರಿಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿತು. ಆದರೂ ಅವರು ಸಿನೆಮಾಕ್ಕಿಂತ ಶಾಸ್ತ್ರೀಯ ಸಂಗೀತವೇ ಖುಷಿ ಕೊಡುತ್ತದೆ ಎನ್ನುತ್ತಾರೆ.
ಸಂಗೀತ ಕಛೇರಿ ಎಂದರೂ ಅದೊಂದು ತರಹ ಊಟದ ಕತೆ. ಕೆಲವರಿಗೆ ಅಡುಗೆ ಮಾಡಲು ಚೆನ್ನಾಗಿ ಬರುತ್ತದೆ. ಆದರೆ ಬಡಿಸಲು ಬರುವುದಿಲ್ಲ. ಅಡುಗೆ ಮಾಡುವುದು ಬಂದರೆ ಸಾಲದು. ಚೆನ್ನಾಗಿ ಬಡಿಸಲೂ ಬರಬೇಕು. ಆಗ ಊಟಕ್ಕೆ ಒಂದು ಅಂದ. ಅಡುಗೆ ಮಾಡಿದವನಿಗೂ ತೃಪ್ತಿ. ಉಂಡವನಿಗೂ ತೃಪ್ತಿ. ಹಾಗೆಯೇ ಸಂಗೀತ ಕಛೇರಿ. ನಮಗೆ ಬೇಕಾದಷ್ಟು ಗೊತ್ತಿದ್ದರೂ ಎಷ್ಟು ಬಡಿಸಬೇಕು ಎನ್ನುವ ಅರಿವು ಇರಬೇಕು ಎಂದು ಒಂದಿಷ್ಟು ಒಗ್ಗರಣೆ ಹಾಕಿದರು.
ಸ್ಯಾಕ್ಸೊಫೋನ್ ಅನ್ನು ಕೆಲವರು ನುಡಿಸುವುದು ಎನ್ನುತ್ತಾರೆ. ಇನ್ನು ಕೆಲವರು ಭಾರಿಸುವುದೂ ಅಂತಲೂ ಹೇಳುತ್ತಾರೆ. ನಮ್ಮಲ್ಲಿ ಕೆಲವರು ಊದುವುದು ಎಂದೂ ಹೇಳ್ತಾರೆ ಮಾರಾಯ್ರೆ ಎಂದು ಗಹಗಹಿಸಿದರು. ನೀವು ನುಡಿಸುವುದು ಎನ್ನಿ, ಭಾರಿಸುವುದು ಎಂದಾದರೂ ಹೇಳಿ ಅಡ್ಡಿಲ್ಲ. ಊದುವದು ಎನ್ನಬೇಡಿ ಪ್ಲೀಸ್. ಅಲ್ಲಿ ಮತ್ತೆ ನಗುವಿನ ಅಲೆ.
Courtesy : Prajavani.net
https://www.prajavani.net/artculture/music/music-soldgers-kadri-dreams-635274.html