ಸುರಲೋಕದ ಪಾರಿಜಾತ ಬಂದಿತೊ ಕೆಳಗಿಳಿದು
ಬಿರಿದ ಮಲ್ಲಿಗೆ ಮೊಗ್ಗು ತುಟಿಯ ಮೇಲರಳಿತೊ
ಈ ಜಗದ ಹಿಗ್ಗನ್ನು ಸೂರೆಗೊಂಡಿತೊ ಹೇಗೆ
ಎಲ್ಲಿಂದ ಬಂದಿರುವೆ ಬಾಲೆ, ಯಾರನರಸುವೆ ಇಲ್ಲಿ?
ಯಾರ ಮನೆಯಂಗಳದಿ ಬಿರಿದ ಮಲ್ಲಿಗೆ ನೀನು
ಯಾರ ಉದರದಲವಿತ ಚೆಲುವ ಗುಟ್ಟು
ಯಾರು ನಿನ್ನನು ಪಡೆದ ಭಾಗ್ಯವಂತರು ಹೇಳು
ಯಾರ ಪ್ರೇಮಗೀತೆಯ ಪಲ್ಲವಿಯು ನೀನು
ಚಂದ್ರಮುಖಿ ನೀನಹದು, ಕಣ್ಣಲವಿತಿಹ ತಾರೆ
ಅರೆ ಬಿರಿದ ತುಟಿಗಳಿಗೆ ಹವಳ ಬಣ್ಣ
ಜಿಂಕೆಮರಿ ಜಿಗಿವಂತೆ, ನವಿಲು ಕುಣಿವಂತೆ
ಇತ್ತೆ ಸೊಬಗನು ನಿನ್ನ ಕಾಂಬ ಕಂಗಳಿಗೆ
ನಾ ಬರೆದ ಕವಿತೆಯದು ನಾಚಿ ಮೊಗ ತಗ್ಗಿಸಿತು
ಸಾಟಿಯಲ್ಲವದು ನಿನ್ನ ಸಿರಿಮೊಗದ ನಗೆಗೆ
ಹೀಗೊಂದು ಸಲ ನಕ್ಕು ಬಿಡು ಸುಮ್ಮನೆ
ಹುಣ್ಣಿಮೆಯ ಚಂದಿರನು ಮೂಡಿ ಬರಲಿ.
ಇದ್ದು ಬೀಡು ಹೀಗೆಯೆ, ಜೋಪಾನ ಅನುಕ್ಷಣವು
ನಿನಗರುಹದೆ ಬಾಲ್ಯ ಕಳೆದು ಹೋದಿತು
ಬಾಲ್ಯವೆಂಬುದು ನೋಡು ದೇವನಿತ್ತಿಹ ಸಮಯ
ಕಳೆದು ಹೋದರೆ ಮತ್ತೆ ಮರಳಿ ಬರದು