“ಸುಗಮ ಸಂಗೀತದ ಮೋಡಿಗಾರ ಅರುಣ್‌ ಕುಮಾರ್”,

ಚಾಮರಾಜನಗರ: ‘ಸುಗಮ ಸಂಗೀತ’ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಜಿಲ್ಲೆಯ ಗಾಯಕ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ಎಂ.ಅರುಣ್‌ ಕುಮಾರ್‌. ಭರತ ನಾಟ್ಯ, ಬೀದಿ ನಾಟಕ, ಸಿನಿಮಾ ನಟನೆ.. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಅವರಿಗೆ ಸುಗಮ ಸಂಗೀತ ಎಂದರೆ ಅಚ್ಚುಮೆಚ್ಚು. ಹಾಗಾಗಿ ಐದು ದಶಕಗಳ ತಮ್ಮ ಜೀವನದಲ್ಲಿ ಸುಗಮ ಸಂಗೀತಕ್ಕೆ ಹೆಚ್ಚಿನ ಸಮಯ ಮೀಸಲಿರಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಹಾಡುಗಳನ್ನು ಹಾಡುತ್ತಾ ಅವುಗಳ ಅರ್ಥವನ್ನು ಕೇಳುಗರ ಮನಸ್ಸಿಗೆ ಇಳಿಯುವಂತೆ ಮಾಡುವ ಕಲೆ ಇವರಿಗೆ ಸಿದ್ಧಿಸಿದೆ. ಕವಿತಾ ಸಂಗೀತದ ಸ್ವರಗಳ ಬಣ್ಣದಲ್ಲಿ ಕಾವ್ಯದ ಚಿತ್ರವನ್ನು ಯಥಾವತ್ತಾಗಿ, ಸುಂದರವಾಗಿ, ಅರ್ಥಪೂರ್ಣವಾಗಿ ಹಾಡಿ ಬಿಂಬಿಸುತ್ತಾರೆ ಸುಗಮ ಸಂಗೀತ ಗಾಯನದೊಂದಿಗೆ ವಚನಗಳು, ಜಾನಪದ ಗೀತೆ, ತತ್ವಪದ, ಗೀಗಿ ಪದ, ಭಾವಗೀತೆ, ದೇಶ ಭಕ್ತಿ ಗೀತೆ… ಹೀಗೆ ಅವರು ಎಲ್ಲ ಪ್ರಕಾರಗಳ ಹಾಡುಗಾರಿಕೆಯಲ್ಲಿಯೂ ಪಳಗಿದ್ದಾರೆ. ಎಂಟು ವರ್ಷಗಳ ಹಿಂದಿನವರೆಗೂ ಅರುಣ್‌ ಕುಮಾರ್‌ ಆಕಾಶವಾಣಿಯ ಸುಗಮ ಸಂಗೀತಗಾರರಾಗಿದ್ದರು. ದೂರದರ್ಶನದಲ್ಲೂ ಹಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಇವರ ಗಾಯನಕ್ಕೆ ಮನಸೋತು ಗೌರವಿಸಿವೆ. ರಾಜ್ಯದ ರಾಯಚೂರು, ಕಲಬುರ್ಗಿ, ಬೆಂಗಳೂರು, ಬೀದರ್‌ಗಳಲ್ಲಿ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಹಾಡಿದ್ದಾರೆ ಹಾಗೂ ದೆಹಲಿ, ಒಡಿಶಾ, ಬಿಹಾರದಲ್ಲೂ ಸುಗಮ ಸಂಗೀತದ ಇಂಪನ್ನು ಪ‍ಸರಿಸಿದ್ದಾರೆ. ‘ಬಾಲ್ಯದಿಂದಲೂ ನನಗೆ ಹಾಡು, ನೃತ್ಯ, ನಾಟಕ, ಮಿಮಿಕ್ರಿ, ಚಿತ್ರಕಲೆ ಎಂದರೆ ಆಸಕ್ತಿ. ಸಸಿಗಳನ್ನು ನೆಡುವುದು, ಪರಿಸರಕ್ಕೆ ಸಂಬಂಧಿಸಿದ ಹಲವಾರು ಸಂಸ್ಥೆಗಳಲ್ಲಿ ದುಡಿದಿದ್ದೇನೆ. ಇತ್ತೀಚೆಗೆ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ‘ಬಯಲಾಟದ ಬೀಮಣ್ಣ’ ಚಿತ್ರದಲ್ಲಿ ಪಾತ್ರವನ್ನೂ ಮಾಡಿದ್ದೇನೆ. ಅಲ್ಲದೆ, ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳ ಸದಸ್ಯರೊಂದಿಗೆ ಬೀದಿ ನಾಟಕ, ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ’ ಎಂದು ಅರುಣ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಬೇಸಿಗೆ ಶಿಬಿರ, ಎನ್‌ಎಸ್‌ಎಸ್‌ ಶಿಬಿರ, ಪರಿಸರ ಸಂಬಂಧಿಸಿದ ಕಾರ್ಯಕ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ಬೀದಿ ನಾಟಕದ ಮೂಲಕ ಸಾಕ್ಷರ ವಾಹಿನಿ, ಅರಣ್ಯ ಸಂರಕ್ಷಣೆ ಸೇರಿದಂತೆ ಎಲ್ಲ ಬಗೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ’ ಎಂದು ಹೇಳುತ್ತಾರೆ ಅವರು. ಲಾವಣಿ ವೈರಲ್: ‘ಸಾಹಿತ್ಯ ರಚಿಸಿ ನಾನೇ ಹಾಡಿರುವ ‘ವಾಹನ ಓಡಿಸುವ ಚಾಲಕರೇ ನನ್ನ ಲಾವಣಿಯ ಕೇಳಿ…’ ಎಂಬ ಜಾಗೃತಿ ಮೂಡಿಸುವ ಗೀತೆ ವೈರಲ್‌ ಆಗಿದೆ. ದ್ವಿಚಕ್ರ ವಾಹನ ಚಾಲಕರು ಹಾಡು ಕೇಳಿ ಹೆಲ್ಮೆಟ್‌ ಧರಿಸುತ್ತಿದ್ದಾರೆ’ ಎಂದು ಅವರು ಹೇಳಿದರು. ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ವಚನ, ತತ್ವಪದಗಳು, ಜಾನಪದ ಗೀತೆ ದೂರವಾಗುತ್ತಿರುವ ಬೆನ್ನಲ್ಲೇ, ಈ ಎಲ್ಲ ಪ್ರಕಾರಗಳನ್ನು ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಹಳೇ ಬೇರು ಹೊಸ ಚಿಗುರು ಎನ್ನುವಂತೆ ಮಕ್ಕಳು, ಯುವಕರಲ್ಲಿ ಚೈತನ್ಯ ತುಂಬಬೇಕು. ಆಗಮಾತ್ರ ನಮ್ಮ ಸಂಸ್ಕೃತಿ ಉಳಿಯಲಿದೆ’ ಎಂದು ಹೇಳುತ್ತಾರೆ ಅರುಣ್‌. ‘ವೃಂದಗಾನ, ಗಮಕ, ಪರಸರ ಪ್ರಜ್ಞೆ, ಸ್ವಚ್ಛತೆ ಬಗ್ಗೆ ಮಕ್ಕಳಿಗೆ ಶಿಬಿರಗಳಲ್ಲಿ ಉಚಿತವಾಗಿ ಹೇಳಿಕೊಟ್ಟಿದ್ದೇನೆ. ಪ್ರತಿಭೆ ಇದ್ದರೆ ಅದನ್ನು ಪಸರಿಸಬೇಕು. ಆ ಮೂಲಕ ಬೆಳಕಿಗೆ ಬರಬಹುದು. ಯಾವುದೇ ಕಲೆಯನ್ನು ಮುಚ್ಚಿಡಬಾರದು’ ಎಂಬುದು ಅವರು ನೀಡುವ ಸಲಹೆ.

“author”: “ಎನ್‌. ರವಿ”,

https://www.prajavani.net/artculture/music/desi-sadhakaru-650080.html

Courtsey:prajavani.net

Leave a Reply