ಸುಂದರ ನಟಿ ಸಾಧನಾ ಇನ್ನು ಬರಿ ನೆನಪು
ಕಳೆದ ಶತಮಾನದ ಆರನೆ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದಿಂದ ಮೋಡಿ ಮಾಡಿದ ಹಿಂದಿ ಚಲನಚಿತ್ರರಂಗದ ಸುಂದರಿ ಸಾಧನಾ ಇನ್ನು ಬರಿ ನೆನಪು ಮಾತ್ರ. ತೀವ್ರವಾದ ಕ್ಯಾನ್ಸರ್ ಕಾಯಿಲೆಯಿಂದಾಗಿ ನಿಧನಳಾಗಿದ್ದಾಳೆ. ತನ್ನ ೭೪ ವರ್ಷದ ಸುಧೀರ್ಘ ಪಯಣದಲ್ಲಿ ಕಾಯಿಲೆಯ ತೀವ್ರತೆಯಿಂದಾಗಿ ತನ್ನ ಫ್ಲಾಟ್ ನಲ್ಲಿ ಏಕಾಂಗಿಯಾಗಿ ಜೀವಿತಾವಧಿ ಕಳೆದು ಬದುಕಿಗೆ ವಿದಾಯ ಹೇಳಿದ್ದಾಳೆ. ತನ್ನ ರೊಮ್ಯಾಂಟಿಕ್ ಪಾತ್ರಗಳಿಂದ ಅಭಿಮಾನಿಗಳನ್ನು ರಂಜಿಸಿದ್ದ ಆಕೆ ಹಿಂದಿ ಚಿತ್ರರಂಗದ ದುರಂತ ನಾಯಕಿಯ ಪಾತ್ರದಂತೆ ನಿಜ ಜೀವನದಲ್ಲಿ ಅದೂ ತನ್ನ ಕೊನೆಯ ದಿನಗಳಲ್ಲಿ ಸಂಯಮದಿಂದ ಬದುಕಿ ಇಹಲೋಕ ಯಾತ್ರೆಯನ್ನು ಮುಗಿಸಿದ್ದು ಮನ ಮಿಡಿವ ಸಂಗತಿ. ಹಲೆಯ ತಲೆಮಾರಿನ ಎಲ್ಲ ನಟ ನಟಿಯರು ಒಬ್ಬೊಬ್ಬರಾಗಿ ನಮ್ಮನ್ನಗಲಿ ಹೋಗುತ್ತಿದ್ದಾರೆ. ಅವರು ತಮ್ಮ ನಟನಾ ಕೌಶಲ್ಯದಿಂದ ನಿರ್ಮಿಸಿದ ಸುಂದರ ಗಂಧರ್ವ ಲೋಕದಿಂದ ನಿರ್ಗಮಿಸುತ್ತಿದ್ದಾರೆ. ಇದು ಜಗದ ನಿಯಮವಾದರೂ ಅವರನ್ನು ಆರಾಧಿಸಿ ತಮ್ಮ ಹೃದಯ ಸಿಂಹಾಸನದಲ್ಲಿ ಸ್ಥಾಪಿಸಿಕೊಂಡಿದ್ದ ಅವರ ಅಭಿಮಾನಿಗಳಿಗೆ ಶಾಶ್ವತ ವಿಯೋಗದ ನೋವು. ಸಾಧನಾಳ ನಿರೀಕ್ಷಿತ ಸಾವು ಸಹ ಆ ಸಾಲಿಗೆ ಸೇರುವಂತಹುದು.
ಸಾಧನಾಳ ನಿಜ ಹೆಸರು ಸಾಧನಾ ಶಿವದಾಸನಿ, ಆಕೆಯ ತಂದೆ ಹರಿ ಶಿವದಾಸನಿ ಆತ ಸಹ ಕೆಲ ಹಿಂದಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾನೆ. ಈಕೆ ೧೯೪೧ ನೇ ಇಸವಿ ಸಪ್ಟಂಬರೆ ೨ ರಂದು ಸ್ವಾತಂತ್ರ ಪೂರ್ವದ ಸಿಂಧ ಪ್ರಾಂತದ ಕರಾಚಿಯ;ಲ್ಲಿ ಜನಿಸಿದಳು. ಬಾಲ್ಯದಿಂದಲೆ ಆಕೆಗೆ ಅಭಿನಯದ ಕಡೆಗೆ ಒಲವು. ಕಾರಣ ತನ್ನ ಹದಿನೈದನೆ ವಯಸ್ಸಿನಲ್ಲಿ ಆಕೆ ರಾಜಕಪೂರ ಅಭಿನಯದ ಶ್ರೀ ೪೨೦ ಚಿತ್ರದಲ್ಲಿ ಸಹ ನಟಿ ನಾದಿರಾ ಮೇಲೆ ಚಿತ್ರಿಸಲಾದ ‘ಮುಡ ಮುಡಕೆ ನ ದೇಖ ಮುಡ ಮುಡಕೆ’ ನೃತ್ಯ ಸನ್ನಿವೇಶದಲ್ಲಿ ಸಹ ನರ್ತಕಿಯರಲ್ಲಿ ಒಬ್ಬಳಾಗಿ ನಟಿಸಿದ್ದಾಳೆ. ಮುಂದೆ ಅದೇ ಸಾಧನಾ ಖ್ಯಾತ ನಟ ರಾಜಕಪೂರ್ ಗೆ ನಾಯಕಿಯಾಗಿ ದುಲ್ಹಾ ದುಲ್ಹನ್ ಚಿತ್ರದಲ್ಲಿ ನಟಿಸಿದಳು. ಸಾಧನಾ ಹಿಂದಿ ಚಿತ್ರರಂಗದಲ್ಲಿ ನಾಯಕಿಯಾಗ ಬೇಕೆಂಬ ಕನಸು ಹೊತ್ತು ಮುಂಬೈಗೆ ಬಂದವಳು. ಆಗಿನ ಕಾಲದ ಸುಂದರ ಭಿನ್ನ ನಟನಾ ಶೈಲಿಯ ಮೂಲಕ ಜನಮನ ಗೆದ್ದಿದ್ದ ದೇವ ಆನಂದನಲ್ಲಿಗೆ ಅವಕಾಶ ಕೇಳಿ ಹೋದಾಗ ಆಕೆಯ ಪೀಚು ದೇಹವನ್ನು ನೋಡಿದ ಆತ ಸ್ವಲ್ಪ ಕಾಲ ಕಾಯುವಂತೆ ಸಲಹೆ ನೀಡುತ್ತಾನೆ. ಆದರೆ ಮುಂದೆ ೧೯೬೦ ರಲ್ಲಿ ಆರ್.ಕೆ.ನಯ್ಯರ್ ತನ್ನ ಬ್ಯಾನರಿನಲ್ಲಿ ಆತನದೆ ನಿರ್ಮಾಣ ಮತ್ತು ನಿರ್ದೇಶನದ ಚಿತ್ರ ‘ಲವ್ ಇನ್ ಸಿಮ್ಲಾ’ ದಲ್ಲಿ ಅವಕಾಶ ನೀಡುತ್ತಾನೆ. ಆಕೆಯ ಜೊತೆ ನಟಿಸಿದ ನಟ ಜಾಯ್ ಮುಖರ್ಜಿ. ಸಿಮ್ಲಾ ಮತ್ತು ಕಾಶ್ಮೀರ್ ಗಳ ಸುಂದರ ಹೊರಾಂಗಣದಲ್ಲಿ ಚಿತ್ರಣಗೊಂಡ ಈ ಚಿತ್ರ ಹೊಸ ಜೋಡಿ ಓ.ಪಿ.ನಯ್ಯನ್ ರ ಮಾಧುರ್ಯಪೂರ್ಣ ಸಂಗೀತ ಸಂಯೋಜನೆಗಳಿಂದಾಗಿ ಗಮನ ಸೆಳೆಯುತ್ತದೆ. ಅದು ಆ ವರ್ಷದ ಶ್ರೇಷ್ಟ ಯಶಸ್ವಿ ಹತ್ತು ಚಿತ್ರಗಳ ಪೈಕಿ ಇದೂ ಒಂದ್ರೆಂದು ಪರಿಗಣಿಸಲ್ಪಡುತ್ತದೆ.
ಮುಂದೆ ಖ್ಯಾತ ನಿರ್ದೇಶಕ ಬಿಮಲ್ ರಾಯ್ರ ‘ಪರಖ’ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮನೊಜ್ಞ ಅಭಿನಯ ನೀಡಿ ತಾನೊಬ್ಬ ಶ್ರೇಷ್ಟ ನಟಿ ಉದಯಿಸಿದ್ದೇನೆ ಎಂದು ತೊರಿಸಿ ಕೊಡುತ್ತಾಳೆ. ೧೯೬೧ ರಲ್ಲಿ ‘ನವ ಕೇತನ’ ದವರ ನಿರ್ಮಾಣದ ಚಿತ್ರ ‘ಹಮ್ ದೋನೋ’ದಲ್ಲಿ ಅವಕಾಶ ದೊರೆಯುತ್ತದೆ. ದೇವ ಆನಂದನ ದ್ವಿಪಾತ್ರದ ಅಭಿನಯವಿದ್ದ ಈ ಚಿತ್ರದಲ್ಲಿ ಒಂದು ಪಾತ್ರಕ್ಕೆ ನಂದಾ ಜೋಡಿಯಾಗಿದ್ದರೆ ಇನ್ನೊಂದು ಪಾತ್ರಕ್ಕೆ ಸಾಧನಾ ಜೋಡಿ ಯಾಗುತ್ತಾಳೆ. ಚಿತ್ರ ಅದ್ಭುತ ಯಶಸ್ಸು ಕಾಣುತ್ತದೆ. ಮುಂದೆ ಆಕೆ ತನ್ನ ವತ್ತಿ ಬದುಕಿನಲ್ಲಿ ಹಿಂದಿರುಗಿ ನೋಡಿದ್ದೆ ಇಲ್ಲ. ಇದೇ ಚಿತ್ರ ೨೦೧೧ ರಲ್ಲಿ ವರ್ಣದಲ್ಲಿ ಮರು ತೆರೆ ಕಾಣುತ್ತದೆ. ಈ ಚಿತ್ರದಲ್ಲಿ ದೇವ ಮತ್ತು ಸಾಧನಾರ ಮೇಲೆ ಚಿತ್ರೀಕರಿಸಲಾದ ‘ಅಭಿ ನ ಜಾವೋ ಛೋಡಕರ್ ಅಭಿ ಏ ದಿಲ್ ಭರಾ ನಹೀ’ ಒಂದು ಸಾರ್ವಕಾಲಿಕ ಮನ ಮುಟ್ಟುವ ಗೀತೆ. ೧೯೬೨ ರಲ್ಲಿ ಕಿಶೋರ್ ಕುಮಾರ ಜೊತೆಗೆ ‘ಮುನೀಮ್ ಜಿ’ ಎಂಬ ಹಾಸ್ಯ ಪ್ರಧಾನ ಚಿತ್ರದಲ್ಲಿ ಅಭಿನಯಿಸಿ ಎಂತಹ ಪಾತ್ರಗಳಲ್ಲೂ ತಾನು ಅಭಿನಯಿಸಬಲ್ಲೆ ಎಂಬುದನ್ನು ಸಾಬೀತು ಪಡಿಸುತ್ತಾಳೆ. ಅಲ್ಲದೆ ಅದೆ ವರ್ಷ ಹೃಷಿಕೇಶ ಮುಖರ್ಜಿ ನಿರ್ದೇಶನದ ‘ಅಸಲಿ ನಕಲಿ’ ಚಿತ್ರದಲ್ಲಿ ದೇವ ಆನಂದ ಜೊತೆ ಮತ್ತು ರಾಜ್ ಖೋಸ್ಲಾ ನಿರ್ದೇಶನದ ‘ಏಕ ಮುಸಾಫಿರ್ ಏಕ್ ಹಸೀನಾ’ ಚಿತ್ರದಲ್ಲಿ ಜಾಯ್ ಮುಖರ್ಜಿ ಜೊತೆ ನಟಿಸುತ್ತಾಳೆ.
೧೯೬೩ ರಲ್ಲಿ ಹೆಚ್.ಎಸ್.ರಾವಲ್ ನಿರ್ಮಾಣ ನಿರ್ದೇಶನದ ಚಿತ್ರ ‘ಮೆರೆ ಮೆಹಬೂಬ್’ ಚಿತ್ರದಲ್ಲಿ ರಾಜೇಂದ್ರ ಕುಮಾರ ಜೊತೆಗೆ ಅಭಿನಯಿ ಸುತ್ತಾಳೆ. ಸತ್ವಪೂರ್ಣ ಕಥೆ ನೌಶಾದರ ಮನಿ ಮಿಡಿವ ಸಂಗೀತ ಸಂಯೋಜನೆ ಪಾತ್ರಧಾರಿಗಳ ಅಭಿನಯದಿಂದಾಗಿ ಚಿತ್ರ ಅಭೂತಪೂರ್ವ ಯಶಸ್ಸು ಪಡೆಯುತ್ತದೆ. ೧೯೬೪ ರಲ್ಲಿ ಮತ್ತೆ ರಾಜ್ ಖೋಸ್ಲಾ ನಿರ್ದೇಶನದ ‘ ವೋ ಕೌನ್ ಥಿ’ ಚಿತ್ರದಲ್ಲಿ ಮನೋಜ ಕುಮಾರ ಶಶಿಕಲಾ ಜೊತೆಗೆ ಅಭಿನಯಿಸುತ್ತಾಳೆ. ಮದನ ಮೋಹನರ ಸುಮಧುರ ರಾಗ ಸಂಯೋಜನೆ ಲತಾ ಹಾಡಿದ ‘ನೈನಾ ಬರಸೆ ರಿಮ್ ರುಮ್ ರಿಮ್ ರುಮ್’ ಮತ್ತು ಆಶಾ ಹಾಡಿದ ‘ಲಗಜಾ ಗಲೆ’ ಹಾಡುಗಳು ಕೇಳುಗನನ್ನು ಮೋಡಿ ಮಾಡುತ್ತವೆ. ಈ ಚಿತ್ರದಲ್ಲಿ ಸಾಧನಾ ಸಂಧ್ಯಾ ಮತ್ತು ಸೀಮಾ ಎಂಬ ದ್ವೀಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದು ಉತ್ತಮ ನಾಯಕಿ ನಟಿ ಎಂದು ಫಿಲಂ ಫೇರ್ ಪ್ರಶಸ್ತ್ತಿ ಪಡೆಯುತ್ತಾಳೆ. ೧೯೬೫ ರಲ್ಲಿ ಬಿಆರ್ ಛೋಪ್ರಾ ಬ್ಯಾನರಿನ ಬಹು ತಾರಾಗಣದ ಚಿತ್ರ ‘ವಖ್ತ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾಳೆ. ಇದರಲ್ಲಿ ನಾಯಕನಾಗಿ ಸುನಿಲ್ದತ್ ಪೂರಕ ಪಾತ್ರಗಳಲ್ಲಿ ರಾಜಕುಮಾರ, ಬಲರಾಜ ಸಹಾನಿ, ಅಚಲಾ ಸಚದೇವ, ಶಶಿ ಕಪೂರ, ಶರ್ಮಿಳಾ ಟ್ಯಾಗೋರ್, ಮದನಪುರಿ, ಶಶಿಕಲಾ ನಟಿಸಿದ್ದಾರೆ. ಈ ಚಿತ್ರದಲ್ಲಿನ ತನ್ನ ಅಭಿನಯಕ್ಕಗಿ ಆಕೆ ಮತ್ತೆ ಫಿಲಂ ಫೇರ್ ಪ್ರಶಸ್ತಿ ಪಡೆಯುತ್ತಾಳೆ. ಮುಂದೆ ಅದೇ ರಾಜ್ ಖೋಸ್ಲಾ ನಿರ್ದೇಶನದ ‘ಮೆರಾ ಸಾಯಾ’ ಚಿತ್ರದಲ್ಲಿ ಪುನಃ ಸುನಿಲ್ ದತ್ ಜೊತೆ ಅಭಿನಯಿಸುತ್ತಾಳೆ. ಇದು ಸಹ ಜನ ಮನ್ನಣೆ ಪಡೆದ ಚಿತ್ರ. ಈ ಚಿತ್ರದಲ್ಲಿ ಮದನ್ ಮೋಹನ್ ರಾಗ ಸಂಯೋಜನೆಯಲ್ಲಿ ಲತಾ ಹಾಡಿದ ‘ನಯನೋ ಮೆ ಬದರಾ ಛಾಯೆ ಬಿಜಲೀ ಸೀ ಛಮಕೆ ಹಾಯೆ’ ಮತ್ತು ‘ತೂ ಜಂಹಾ ಜಂಹಾ ಚಲೇಗಾ ಮೇರಾ ಸಾಯಾ ಸಾಥ ಹೋಗಾ’ ಮತ್ತು ಆಶಾ ಹಾಡಿದ ‘ಝೂಮಕಾ ಗಿರಾರೆ ಬರೇಲಿ ಕಿ ಬಾಜಾರ್ ಮೆ’ ಗೀತೆಗಳು ಸಾರ್ವಕಾಲಿಕ ಗೀತೆಗಳಾಗಿವೆ. ಈ ಹಾಡಿಗೆ ನೃತ್ಯ ಸಂಯೋಜನೆಯನ್ನು ಸೋಹನ್ಲಾಲ್ ಮಾಡಿದ್ದು ಅವರಿಗೆ ಸಹಾಯಕಳಾಗಿ ಸರೋಜ್ ಖಾನ್ ಇದ್ದಳು ಎಂಬುದು ಗಮನಿಸ ಬೇಕಾದ ಸಂಗತಿ. ಅದೇ ರೀತಿ ಮನೋಜ ಕುಮಾರ ಜೊತೆಗೆ ಅನಿತಾ ಚಿತ್ರದಲ್ಲಿ ಅಭಿನಯಿಸುತ್ತಾಳೆ.
ಮುಂದೆ ಥೈರಾಯಿಡ್ ಕಾಯಿಲೆಗೆ ತುತ್ತಾದ ಈಕೆ ಅಮೇರಿಕಾದ ಬೋಸ್ಟನ್ ಆಸ್ಪತ್ರೆಯಲ್ಲಿ ಪಡೆಯಲು ಹೋಗುತ್ತಾಳೆ. ಕಾರಣ ೧೯೬೭-೬೮ ರಲ್ಲಿ ಆಕೆಯ ಅಭಿನಯದ ಯಾವ ಚಿತ್ರಗಳೂ ತೆರೆಗೆ ಬರುವುದಿಲ್ಲ. ೧೯೬೯ ರಲ್ಲಿ ಸಂಜಯ್ ಜೊತೆಗೆ ಆರ್.ಕೆ.ನಯ್ಯರ ನಿರ್ದೇಶನದ ‘ಇಂತಕಾಮ್’, ರಮಾನಂದ ಸಾಗರ ನಿರ್ಮಾಣ ನಿರ್ದೇಶನದ ದ’ ಏಕ್ ಫೂಲ್ ದೋ ಮಾಲಿ’ ಚಿತ್ರಗಳಲ್ಲಿ ಅಭಿನಯಿಸುತ್ತಾಳೆ. ಎರಡೂ ಚಿತ್ರಗಳೂ ಯಶಸ್ಸು ಪಡೆಯುತ್ತವೆ. ೧೯೭೧ ರಲ್ಲಿ ‘ಆಪ್ ಆಯೆ ಬಹಾರ್ ಆಯೆ’, ೧೯೭೨ ರಲ್ಲಿ ರಾಜೇಶ ಖನ್ನಾ ಜೊತೆಗೆ ‘ದಿಲ್ ದೌಲತ್ ದುನಿಯಾ’ ಚಿತ್ರಗಳಲ್ಲಿ ನಟಿಸುತ್ತಾಳೆ. ೧೯೭೪ ರಲ್ಲಿ ‘ಗೀತಾ ಮೇರಾ ನಾಮ್’ ಚಿತ್ರದಲ್ಲಿ ನಟಿಸಿ ನಿರ್ದೇಶಿಸುತ್ತಾಳೆ. ಅಲ್ಲದೆ ೧೯೫೯ ರಲ್ಲಿ ‘ಅಬಾನಾ’ ಮತ್ತು ೧೯೬೮ ರಲ್ಲಿ ‘ಸ್ತ್ರೀ’ ಎಂಬ ಹೆಸರಿನ ಪಂಜಾಬಿ ಮತ್ತು ಓರಿಯಾ ಚಿತ್ರಗಳಲ್ಲಿ ನಟಿಸುತ್ತಾಳೆ. ಅವು ಆಕೆಯ ಅಭಿನಯದ ಕ್ಲಾಸಿಕ್ ಚಿತ್ರಗಳೆಂದು ಹೆಸರು ಪಡೆದಿವೆ. ಆಕೆ ತನ್ ವೃತ್ತಿ ಬದುಕಿನಲ್ಲಿ ಸುಮಾರು ೩೩ ಚಿತ್ರಗಳಲ್ಲಿ ಅಭಿನಯಿಸಿದ್ದಾ ಪೈಕಿ ೨೭ ಚಿತ್ರಗಳು ಯಶಸು ಪಡೆದ ಚಿತ್ರಗಳು.
೧೯೬೦ ರಲ್ಲಿ ಲವ್ ಇನ್ ಸಿಮ್ಲಾ ಚಿತ್ರದ ಚಿತ್ರೀಕರಣದ ವೇಳೆ ಆರ್.ಕೆನಯ್ಯರ್ ಮತ್ತು ಸಾಧನಾರ ಮಧ್ಯೆ ಪ್ರೇಮಾಂಕುರವಾಗುತ್ತದೆ. ಆದರೆ ಸಾಧನಾಗೆ ಇನ್ನೂ ಸಣ್ಣ ವಯಸ್ಸು ಎಂದು ಆಕೆಯ ತಂದೆ ಒಪ್ಪಿಗೆ ಸೂಚಿಸುವುದಿಲ್ಲ. ಮುಂದೆ ೧೯೬೬ರ ಮಾರ್ಚ ತೀಮಗಳ ಏಳರಂದು ಅವರಿಬ್ಬರೂ ಮದುವೆ ಯಾಗುತ್ತಾರೆ. ಅವರ ದಾಂಪತ್ಯಕ್ಕೆ ಮಕ್ಕಳಾಗುವುದಿಲ್ಲ ಅದೊಂದು ಕರೆತಯಾಗಿ ಅವರನ್ನು ಕಾಡುವುದಿಲ್ಲ. ಮುಂದೆ ಹೈಪರ್ ಥೈಯೋರೈಡಿನಂ ಕಾಯಿಲೆ ತೀವ್ರವಾಗಿ ಕಾಡಿ ಎರಡೂ ಕಣ್ಣುಗಳಿಗೆ ತೊಂದರೆಯಾಗುತ್ತದೆ ಆಕೆಯ ವಿಪರೀತ ದೇಹ ತೂಕವನ್ನು ಪಡೆಯುತ್ತದೆ. ಆ ಸುಂದರ ನಟಿ ಮತ್ತೆ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅನಾಮಿಕಳಂತೆ ಬಾಳಿದಳು. ೧೯೯೫ ರಲ್ಲಿ ಆಕೆಯ ಪತಿ ನಯ್ಯರ್ ಅಸ್ತಮಾ ಕಾಯಿಲೆಯಿಂದಾಗಿ ನಿಧನವಾಗುತ್ತಾನೆ. ಮುಂದೆ ಆಕೆಯದು ಒಂಟಿ ಬದುಕು. ಆಕೆ ತನ್ನ ಚಿತ್ರಗಳನ್ನು ತೆಗೆದು ಪತ್ರಿಕೆಗಳಲ್ಲಿ ಪ್ರಕಟಿಸಲು ಅವಕಾಶ ಕೊಡುವುದಿಲ್ಲ ತನ್ನ ನಟನಾ ಬದುಕಿನ ಸುಂದರ ಚಿತ್ರ ಸಿನೆ ಪ್ರಿಯರ ಮನದಲ್ಲಿದೆ ಅದಕ್ಕೆ ತಾನು ಧಕ್ಕೆ ತರಲು ಇಚ್ಚಿಸುವುದಿಲ್ಲ ಎಂದು ಸ್ಪಷ್ಟ ನಿಲುವು ತಳೆದು ಬಿಡುತ್ತಾಳೆ. ಆಕೆ ತನ��ನ ಇಳಿವಯದಲ್ಲಿ ಮುಂಬೈನ ಸಾಂತಾಕೃಜ್ ನಲ್ಲಿ ಆಶಾ ಭೋಸಲೆ ಮಾಲಿಕತ್ವದ ಅಪಾರ್ಟಮೆಂಟ್ ಒಂದರಲ್ಲಿ ಸಾಯುವ ಕ್ಷಣದ ವರೆಗೂ ಇದ್ದಳು. ತನ್ನ ಇಳಿ ವಯದಲ್ಲಿ ಆಕೆ ತನ್ನ ಸೋದರ ಸಂಬಂಧಿ ಬಬಿತಾಳ ಜೊತೆ ಅಷ್ಟಾಗಿ ಒಡನಾಟವಿಟ್ಟು ಕೊಳೂವುದಿಲ್ಲ, ಆದರೆ ತನ್ನ ಜಮಾನಾದ ನಟಿಯರಾದ ಆಶಾ ಪಾರೇಖ, ವಹಿದಾ ರೆಹಮಾನ್ ನಂದಾ ಮತ್ತು ಹೆಲೆನ್ ಜೊತೆಗೆ ಒಡನಾಟವಿಟ್ಟು ಕೊಂಡಿದ್ದಳು.
ಸಾಧನಾ ಒಂದು ಮರೆಯಲಾಗದ ಸುಂದರ ಕನಸು. ಈಕೆ ತನ್ನ ಅಭಿನಯ ಕಾಲದಲ್ಲಿ ಎಲ್ಲ ತರಹದ ಉಡುಪುಗಳಲ್ಲಿ ಕಾಣಿಸಿ ಕೊಂಡರೂ ಆಕೆಯ ಪ್ರೀತಿಯ ಉಡುಪು ಚೂಡಿದಾರ, ಕುರ್ತಾ ಮತ್ತು ಸಲ್ವಾರ್ ಕಮೀಜ್ ಆಕೆಗೆ ವಿಶೇಷವಾಗಿ ಒಪ್ಪುತ್ತಿದ್ದವು. ಅವಳ ಫ್ಯಾಷನ್ ಡಿಸೈನರ್ ಆಸ್ಕರ್ ವಿಜೇತೆ ಭಾನು ಅತ್ತಯ್ಯ. ಆಕೆ ತನ್ನ ಹಣೆಯ ಮೇಲೆ ವಿಶೇಷ ವಿನ್ಯಾಸದಲ್ಲಿ ಹರಡಿ ಕೊಂಡಿರುತ್ತಿದ್ದ ಕೇಶ ವಿನ್ಯಾಸ ಸಾಧನಾ ಹೇರ್ ಸ್ಟೈಲ್ ಎಂದು ಹೆಸರು ಪಡೆದಿತ್ತು. ಅದು ಆಕೆಯ ಮುಖಕ್ಕೆ ಒಂದು ವಿಶೇಷ ಮೆರುಗನ್ನು ನೀಡಿತ್ತು. ಆಕೆ ಈ ವಿಷಯದಲ್ಲಿ ಆಗಿನ ಕಾಲದ ಹಾಲಿವುಡ್ ನ ಖ್ಯಾತ ತಾರೆ ಆಡ್ರಿ ಹೆಪ್ವರ್ನಳ ಅನುಕರಣೆ ಮಾಡುತ್ತಾಳೆ ಎಂಬ ಗಾಸಿಪ್ ಸಹ ಇತ್ತು.. ಅದು ಅಷ್ಟು ನಿಜವಾಗಿರಲಿಲ್ಲ ಅವಳ ಕೇಶ ವಿನ್ಯಾಸವೆ ಹಾಗಿತ್ತು. ೨೦೦೨ ರಲ್ಲಿ ಆಕೆಗೆ ಐಐಎಫ್ಎ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ ನೀಡಿ ಗೌರವಿಸಿತು.
ಆ ಕಾಲದ ಜನಪ್ರಿಯ ತಾರೆಯರಾದ ವೈಜಯಂತಿ ಮಾಲಾ, ವಹೀದಾ ರೆಹಮಾನ್, ಆಶಾ ಪಾರೇಖ, ಸಾಯಿರಾಬಾನು, ನಂದಾ, ಶರ್ಮಿಳಾ ಟ್ಯಾಗೋರ್ ಮುಂತಾದ ಖ್ಯಾತನಾಮರ ಮಧ್ಯೆ ತನ್ನದೆ ಛಾಪನ್ನು ಮೂಡಿಸಿ ಜನಮನ ಗೆದ್ದಿದ್ದ ನಟಿ ಈಕೆ. ವೈಜಯಂತಿ ಮಾಲಾಳನ್ನು ಹಿಂದಿ ಚಿತ್ರರಂಗದ ಸೋಫಿಯಾ ಲಾರೆನ್ ಮತ್ತು ಸಾಧನಾಳನ್ನು ಎಲಿಜಬೆತ್ ಟೇಲರ್ ಎಂದು ಸಿನೆ ಪ್ರಿಯರು ಆರಾಧಿಸುತ್ತಿದ್ದರು. ಈಕೆ ಆ ಕಾಲದ ಎಲ್ಲ ಖ್ಯಾತ ನಟರ ಜೊತೆಗೆ ನಟಿಸಿದ್ದಳು.. ಆದರೆ ದಿಲೀಪ ಕುಮಾರ ಜೊತೆ ಅಭಿನಯಿಸಬೇಕೆಂದಿದ್ದ ಆಕೆಯ ಆಶೆ ಕೈಗೂಡದೆ ಹೋದುದು ಒಂದು ಬೇಸರದ ಸಂಗತಿ. ಆಕೆ ತನ್ನ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಸಂಘರ್ಷ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಬಂದಿದ್ದುದು ಕಾರಣಾಂತರದಿಂದ ಆ ಪಾತ್ರ ವೈಜಯಂತಿಮಾಲಾಳ ಪಾಲಿಗೆ ಹೋಯಿತು. ವಯಸ್ಸಾದಂತೆ ಆಕೆ ತೆರೆಯ ಹಿಂಬದಿಗೆ ಸರಿದು ಹೋದಳು. ಆ ಜಮಾನಾದ ಪ್ರೇಕ್ಷಕರಿಗೆ ಸಾಧನಾ ಒಂದು ಸುಂದರ ನೆನಪು.
– ಹ.ಅ.ಪಾಟೀಲ.