ಒಬ್ಬ ಸನ್ಯಾಸಿಯಿದ್ದ. ಅವನಿಗೆ ಯಾಕೋ ದುಡ್ಡಿನ ಮೇಲೆ ತುಂಬ ವ್ಯಾಮೋಹ ಬಂದಿತು. ದುಡ್ಡನ್ನು ಸಂಗ್ರಹಿಸಲು ತೊಡಗಿದ. ಅದನ್ನು ಎಲ್ಲಿಡುವುದು? ಒಂದು ಬೊಂತೆಯನ್ನು ತಯಾರಿಸಿ ಹಣದ ಸಂಗ್ರಹವನ್ನೆಲ್ಲ ಅದರಲ್ಲಿ ತುಂಬುತ್ತಹೋದ. ಎಲ್ಲಿಗೆ ಹೋದರೂ ಅವನು ಬೊಂತೆಯನ್ನು ಬಿಟ್ಟಿರುತ್ತಿರಲಿಲ್ಲ. ಸನ್ಯಾಸಿಯ ಈ ದುಡ್ಡಿನ ವ್ಯಾಮೋಹದ ಬಗ್ಗೆ ಆ ಊರಿನ ಒಬ್ಬ ಠಕ್ಕನಿಗೆ ಸುಳಿವು ಸಿಕ್ಕಿತು. ಅವನು ಅದನ್ನು ಬೊಂತೆಯಲ್ಲಿ ಜೋಪಾನ ಮಾಡುತ್ತಿರುವ ಸಂಗತಿಯನ್ನು ಪತ್ತೆ ಮಾಡಿದ. ಒಂದು ದಿನ ಆ ಠಕ್ಕನು ಸನ್ಯಾಸಿಯ ಸಮೀಪಕ್ಕೆ ಬಂದ. ‘ಗುರುಗಳೇ! ನನಗೆ ಸಂಸಾರದ ಬಗ್ಗೆ ವಿರಕ್ತಿ ಬಂದಿದೆ. ಎಲ್ಲವನ್ನೂ ಬಿಟ್ಟು ನಿಮ್ಮಲ್ಲಿಗೆ ಬಂದಿದ್ದೇನೆ. ದಯವಿಟ್ಟು ನಿಮ್ಮ ಶಿಷ್ಯನನ್ನಾಗಿ ನನ್ನನ್ನು ಸ್ವೀಕರಿಸಿ. ನಿಮ್ಮ ಸೇವೆ ಮಾಡಿಕೊಂಡು ನನ್ನ ಜೀವನದ ಆಯುಷ್ಯವನ್ನು ಕಳೆಯುತ್ತೇನೆ’ ಎಂದು ಅಂಗಲಾಚಿದ. ಅವನ ಮಾತುಗಳಿಂದ ಸನ್ಯಾಸಿಯ ಮನಸ್ಸು ಕರುಗಿತು. ಅವನನ್ನು ತನ್ನ ಶಿಷ್ಯನನ್ನಾಗಿ ಸ್ವೀಕರಿಸಿದ. ಗುರು–ಶಿಷ್ಯರು ಅನ್ಯೋನ್ಯವಾಗಿದ್ದರು. ಒಮ್ಮೆ ಗುರು–ಶಿಷ್ಯರಿಬ್ಬರೂ ಪಕ್ಕದ ಊರಿನಲ್ಲಿ ಒಬ್ಬ ಭಕ್ತರ ಮನೆಗೆ ಊಟಕ್ಕೆ ಹೋಗಿದ್ದರು. ಅಲ್ಲಿಂದ ಹಿಂದಿರುಗುವಾಗ ದಾರಿಯ ನಡುವೆ ಶಿಷ್ಯ ಗಾಬರಿಯಿಂದ ಒಂದು ಕಡೆ ನಿಂತ. ಗುರುವನ್ನು ಉದ್ದೇಶಿಸಿ ‘ಗುರುಗಳೇ ನಾನು ಪಕ್ಕದ ಊರಿಗೆ ಹೋಗಿ ಬರಬೇಕಿದೆ. ಕಾರಣ ಆ ಭಕ್ತರ ಮನೆಯ ಹುಲ್ಲಿನ ತುಂಡೊಂದು ನನ್ನ ವಸ್ತ್ರಕ್ಕೆ ಅಂಟಿಕೊಂಡಿದೆ. ಅದು ಬೆಟ್ಟದಷ್ಟು ಭಾರವಾಗಿ ನನಗೆ ಹೆಜ್ಜೆ ಇಡುವುದಕ್ಕೂ ಕಷ್ಟವಾಗಿದೆ. ಪರರ ವಸ್ತು ವಿಷಕ್ಕೆ ಸಮ ಅಲ್ಲವೆ? ತಾವು ಅಪ್ಪಣೆ ಕೊಡಿಸಬೇಕು. ಈ ಕೂಡಲೇ ಅವರ ಮನೆಗೆ ಹೋಗಿ, ಈ ಹುಲ್ಲುನ್ನು ಹಿಂದಿರುಗಿಸಿ ಬರುತ್ತೇನೆ’ ಎಂದ. ಗುರುಗಳಿಗೆ ತುಂಬ ಸಂತೋಷವಾಯಿತು. ಎಂಥ ಶಿಷ್ಯ ನನಗೆ ಸಿಕ್ಕಿದ್ದಾನೆ ಎಂದು ಉಬ್ಬಿದರು. ‘ಹಾಗೇ ಆಗಲಿ, ಹೋಗಿ ಬಾ’ ಎಂದು ಹೇಳಿ ಕಳುಹಿಸಿದರು. ಶಿಷ್ಯ ಹಿಂದಿರುಗಿ ಬಂದ. ಈಗ ಗುರುಗಳಿಗೆ ಅವನ ಬಗ್ಗೆ ನಂಬಿಕೆಯೋ ನಂಬಿಕೆ. ಗುರುಗಳು ಎಲ್ಲೋ ಹೊರಗೆ ಹೋಗಬೇಕಾಗಿ ಬಂತು. ಬೊಂತೆಯನ್ನು ಅವರು ಎಲ್ಲ ಕಡೆಗೂ ಹೊತ್ತು ತಿರುಗುತ್ತಿದ್ದರಷ್ಟೆ! ಆದರೆ ಈಗ ಅವರಿಗೆ ನಂಬಿಕೆಯ ವ್ಯಕ್ತಿಯೊಬ್ಬ ಸಿಕ್ಕಿದ್ದ. ಹೀಗಾಗಿ ಅದನ್ನು ಅವರು ಆ ಶಿಷ್ಯನ ಕೈಗೆ ಕೊಡುತ್ತ ‘ನಾನು ಹಿಂದಿರುಗಿ ಬರುವವರೆಗೂ ಇದನ್ನು ಜೋಪಾನವಾಗಿ ನೋಡಿಕೊಂಡಿರು’ ಎಂದರು. ಶಿಷ್ಯ ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು. ಬೊಂತೆಯನ್ನು ಸಂತೋಷದಿಂದ ಸ್ವೀಕರಿಸಿದ. ಗುರುಗಳು ಆ ಕಡೆ ಹೊರಟ ಕೂಡಲೇ ಅವನು ಈ ಕಡೆ ಓಡಿಹೋದನು. ಗುರುಗಳು ಸಂಗ್ರಹಿಸಿದ್ದ ದುಡ್ಡೆಲ್ಲ ಠಕ್ಕನ ಪಾಲಾಯಿತು. ರಾಮಾಯಣದಲ್ಲಿ ಒಂದು ಮಾತು ಬರುತ್ತದೆ: ಸುಲಭಾಃ ಪುರುಷಾ ರಾಜನ್ ಸತತಂ ಪ್ರಿಯವಾದಿನಃ ಅಪ್ರಿಯಸ್ಯ ತು ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ಇದರ ತಾತ್ಪರ್ಯ:‘ಪ್ರಿಯವಾದ ಮಾತುಗಳನ್ನು ಆಡುವವರು ಯಾವಾಗಲೂ ದೊರೆಯುತ್ತಾರೆ. ಆದರೆ ಅಪ್ರಿಯವಾದರೂ ಹಿತವಾದ ಮಾತುಗಳನ್ನು ಆಡುವವರೂ ಕೇಳುವವರೂ ಸಿಗುವುದು ಕಷ್ಟ’. ಕೇಳಲು ಹಿತವಾದ ಅಥವಾ ನಮ್ಮ ಪರವಾದ ಮಾತುಗಳನ್ನು ಆಡುವವರನ್ನು ನಾವು ಸುಲಭವಾಗಿ ನಂಬುತ್ತೇವೆ. ಅವರನ್ನೇ ನಮ್ಮ ಹತ್ತಿರದವರು ಎಂದೂ ನಂಬುತ್ತೇವೆ. ಆದರೆ ನಮ್ಮ ಹಿತವನ್ನು ಬಯಸುವವರು ನಮಗೆ ಹೇಳುವ ಬುದ್ಧಿಮಾತುಗಳನ್ನು ಕೇಳಲು ನಾವು ಬಯಸುವುದಿಲ್ಲ. ಅವು ನಮ್ಮ ಕಠೋರವಾಗಿ ಕೇಳುತ್ತವೆ! ಪ್ರಿಯವಾದ, ಆದರೆ ಮೋಸದ ಮಾತುಗಳನ್ನು ಕೇಳೀಯೇ ಆ ಸನ್ಯಾಸಿ ತನ್ನ ಹಣವನ್ನು ಕಳೆದುಕೊಂಡಿದ್ದು.
courtsey:prajavani.net
“author”: “ಛಾಯಾಪತಿ”,
https://www.prajavani.net/artculture/short-story/neeti-kathe-653746.html