ಸಾರ್ಥಕ ಬದುಕು
ತಿಪ್ಪ ಒಬ್ಬ ಕೂಲಿ. ಅವನು ಒಬ್ಬಂಟಿ, ಅವನಿಗೆ ಹೆಂಡತಿ ಮಕ್ಕಳು ಇರಲಿಲ್ಲ. ಬೆಟ್ಟದ ತಪ್ಪಲಿನ ಪುಟ್ಟ ಮನೆಯಲ್ಲಿ ಅವನು ವಾಸವಾಗಿದ್ದ. ತಿಪ್ಪ ಬಹಳ ಶ್ರಮ ಜೀವಿ. ಸೋಮಾರಿಯಾಗಿ ಅವನು ಎಂದೂ ಸಮಯ ಕಳೆಯುತ್ತಿರಲಿಲ್ಲ. ಊರವರು ಕೆಲಸಕ್ಕೆ ಕರೆದಾಗ ಅವನು ಹೋಗುತ್ತಿದ್ದ. ಹೇಳಿದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದ. ಅವರು ಕೊಟ್ಟದ್ದನ್ನು ಪಡೆದು, ಮನೆಗೆ ಮರಳುತ್ತಿದ್ದ. ಕೆಲಸವಿಲ್ಲದ ದಿನಗಳಲ್ಲೂ ಅವನು ತೆಪ್ಪಗೆ ಕೂಡುತ್ತಿರಲಿಲ್ಲ. ಆಗ ಅವನು ತನ್ನ ಜಮೀನಿನಲ್ಲೇ ಏನಾದರೂ ಕೆಲಸದಲ್ಲಿ ತೊಡಗುತ್ತಿದ್ದ. ತಿಪ್ಪನ ಮನೆಯ ಸುತ್ತಮುತ್ತಲಿನ ಜಾಗ ಸಮತಟ್ಟಾಗಿತ್ತು. ಹಿಂದೆ ಅದು ಸರಕಾರಕ್ಕೆ ಸೇರಿದ ಭೂಮಿಯಾಗಿತ್ತು.
ತಿಪ್ಪ ಅಲ್ಲಿ ಸಣ್ಣದೊಂದು ಗುಡಿಸಲು ಕಟ್ಟಿಕೊಂಡಿದ್ದ. ಬಳಿಕ ಅಲ್ಲಿದ್ದ ಬಳ್ಳಿ ಪೊದೆಗಳನ್ನೆಲ್ಲ ಸವರಿದ. ಮಳೆಗಾಲ ಆರಂಭವಾದಾಗ ಮಾವು, ಹಲಸು, ಗೇರು, ನೇರಳೆ, ಪೇರಲ, ತೆಂಗು ಇತ್ಯಾದಿ ಗಿಡಗಳನ್ನು ನೆಟ್ಟ. ಮತ್ತೆ ಆ ಜಾಗದ ಸುತ್ತ ಬೇಲಿ ಹಾಕಿದ. ಬಿಡುವಿನ ವೇಳೆಯಲ್ಲಿ ಅವನು ತಾನು ನೆಟ್ಟ ಗಿಡಗಳ ಆರೈಕೆ ಮಾಡಿದ. ಗಿಡಗಳು ಹುಲುಸಾಗಿ ಬೆಳೆದವು.
ಕೆಲವು ಮರಗಳೂ ಹೂ ಬಿಟ್ಟವು. ಹಣ್ಣುಗಳನ್ನೂ ಕೊಟ್ಟವು. ಅಷ್ಟರಲ್ಲಿ ಆ ಜಾಗವು ತಿಪ್ಪನ ಹೆಸರಲ್ಲಿ ನೋಂದಣಿಯಾಗಿತ್ತು. ಅದು ಅವನ ಸ್ವಂತ ಆಸ್ತಿ ಎನಿಸಿತು.
ತಿಪ್ಪನಿಗೆ ಮಕ್ಕಳೆಂದರೆ ತುಂಬಾ ಇಷ್ಟ. ಅವರನ್ನು ಕಂಡರೆ ಅವನ ಮುಖ ಅರಳುತ್ತಿತ್ತು. ಅವನು ಪ್ರೀತಿಯಿಂದ ಮಕ್ಕಳನ್ನು ಮಾತನಾಡಿಸುತ್ತಿದ್ದನು. ತಾನು ಬೆಳೆಸಿದ ಹಣ್ಣು ಹಂಪಲುಗಳನ್ನು ಅವರಿಗೆ ನೀಡುತ್ತಿದ್ದನು. “ಬನ್ನಿ ಮಕ್ಕಳೆ, ನನ್ನ ತೋಟಕ್ಕೆ ಬನ್ನಿ. ಅಲ್ಲಿ ಖಾಲಿ ಜಾಗ ಇದೆ. ತಂಪಾದ ನೆರಳಿದೆ. ಬನ್ನಿ ಅಲ್ಲಿ ಆಡಿಕೊಳ್ಳಿ” ಎಂದು ಅವನು ಅವರನ್ನು ಕರೆಯುತ್ತಿದ್ದ. ಮಕ್ಕಳು ಅವನ ತೋಟದಲ್ಲಿ ಆಡುತ್ತಿದ್ದರೆ ಅವನಿಗಾಗುವ ಸಂತೋಷ ಅಷ್ಟಿಷ್ಟಲ್ಲ.
ಆಟವಾಡುವ ಮಕ್ಕಳು ಬಾಯಾರಿದರೆ, ತಿಪ್ಪ ಅವರಿಗೆ ಬೆಲ್ಲ-ನೀರು ಕೊಡುತ್ತಿದ್ದ. ಅವರು ಆಡುವ ಜಾಗವನ್ನು ಗುಡಿಸಿ, ಚೊಕ್ಕಟವಾಗಿ ಇಡುತ್ತಿದ್ದ. ಆಡುವ ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡರೆ, ತಿಪ್ಪನೇ ಅವರನ್ನು ಉಪಚರಿಸುತ್ತಿದ್ದ. ಮಕ್ಕಳಿಗೂ ಹಾಗೆಯೇ. ತಿಪ್ಪನಲ್ಲಿ ಅವರಿಗೆ ಎಲ್ಲಿಲ್ಲದ ಪ್ರೀತಿ, ಸಲುಗೆ. “ತಿಪ್ಪಣ್ಣಾ, ತಿಪ್ಪಣ್ಣಾ” ಎಂದು ಅವರು ಅವನನ್ನು ಮುತ್ತಿಕೊಳ್ಳುತ್ತಿದ್ದರು. ಸಹಾಯ ಬೇಕಾದಾಗ ಅವನನ್ನು ಕೇಳುತ್ತಿದ್ದರು. ತಮಗೆ ಬೇಕಾದುದನ್ನು ಅವನಿಂದ ಪಡೆಯುತ್ತಿದ್ದರು. ಹೀಗೆ ತಿಂಗಳುಗಳು ಕಳೆದವು, ವರುಷಗಳು ಉರುಳಿ ಹೋದವು.
ತಿಪ್ಪ ಮುದುಕನಾದ. ಅವನಿಗೆ ಒಂದು ಚಿಂತೆ ಹತ್ತಿತು. “ನನಗೆ ಹೆಂಡತಿಯೂ ಇಲ್ಲ, ಮಕ್ಕಳೂ ಇಲ್ಲ. ನಾನು ಸತ್ತಮೇಲೆ ಈ ತೋಟ ಯಾರಿಗೋ ಸೇರಿ ಬಿಡುತ್ತದೆ. ಮತ್ತೆ ಮಕ್ಕಳು ಇಲ್ಲಿಗೆ ಬರುವಂತಿಲ್ಲ. ಹಿಗ್ಗಿ, ಹಾಡಿ ಇಲ್ಲಿ ನಲಿದಾಡುವಂತಿಲ್ಲ. ಹಾಗೆ ಆಗಬಾರದು. ಈ ತೋಟ ಎಂದೆಂದಿಗೂ ಊರ ಮಕ್ಕಳ ಉಪಯೋಗಕ್ಕೆ ಸಿಗಬೇಕು. ದಿನವೂ ಅವರು ಇಲ್ಲಿಗೆ ಬರಬೇಕು. ಖುಷಿಯಿಂದ ಇಲ್ಲಿ ಓಡಾಡಿಕೊಂಡು ಇರಬೇಕು. ಅದಕ್ಕಾಗಿ ಏನಾದರೊಂದು ವ್ಯವಸ್ಥೆ ಮಾಡಬೇಕು.” ಹೀಗೆ ಅವನು ನಿರ್ಧರಿಸಿದ. ಬಳಿಕ ಊರ ಹಿರಿಯರನ್ನು ಅವನು ಭೆಟ್ಟಿ ಮಾಡಿ, ತನ್ನ ಮನದ ಆಸೆಯನ್ನು ಅವರಲ್ಲಿ ತೋಡಿಕೊಂಡನು.
“ತಿಪ್ಪಾ, ಬಹಳ ಒಳ್ಳೆಯ ಆಸೆ ನಿನ್ನದು. ಅದು ನೆರವೇರುವಂತೆ ವ್ಯವಸ್ಥೆ ಮಾಡೋಣ” ಎಂದು ಹಿರಿಯರು ಭರವಸೆ ನೀಡಿದರು. ಅವನಿಂದ ಅವರು ಅಗತ್ಯವುಳ್ಳ ಕಾಗದ ಪತ್ರ ಮಾಡಿಸಿದರು. ಅಂದೇ ತಿಪ್ಪನ ತೋಟದ ರಕ್ಷಣಾ ಸಮಿತಿ ಎಂಬ ಒಂದು ಸಮಿತಿಯೂ ರಚನೆಗೊಂಡಿತು. ಮುಂದೆ ಕೆಲವೇ ದಿನಗಳಲ್ಲಿ ತಿಪ್ಪ ತೀರಿಕೊಂಡ.
ತಿಪ್ಪನ ಕೊನೆಯಾಸೆ ಇಂದಿಗೆ ಈಡೇರಿದೆ. ಅವನ ತೋಟದಲ್ಲಿ ಮಕ್ಕಳ ಕ್ರೀಡಾವನ ನಿರ್ಮಾಣವಾಗಿದೆ. ಸಂಜೆಯ ಹೊತ್ತು ಊರ ಮಕ್ಕಳೆಲ್ಲ ಅಲ್ಲಿ ಒಟ್ಟು ಸೇರುತ್ತಾರೆ, ಹಿಗ್ಗಿನಿಂದ ಹಾಡಿ, ಓಡಿ, ನಕ್ಕು, ನಲಿದಾಡುತ್ತಾರೆ. ಹೀಗೆ ಕೂಲಿ ತಿಪ್ಪನ ಬದುಕು ಸಾರ್ಥಕವಾಗಿದೆ. ಊರವರ ಮನದಲ್ಲಿ ಅವನ ನೆನಪು ಹಸಿರಾಗಿ ಉಳಿದಿದೆ.
ತಿಪ್ಪ ಧನಿಕನೂ ಆಗಿರಲಿಲ್ಲ: ಭೂಮಾಲೀಕನೂ ಆಗಿರಲಿಲ್ಲ. ಆದರೆ ಆತ ನೂರಾರು ಗಿಡಮರಗಳನ್ನು ನೆಟ್ಟು ಬೆಳೆಸಿದ. ನಾವು……..?