ಸಹಿ ಇದ್ದರೆ ಮಾತು
ಇತ್ತೀಚಿನ ಘಟನೆಗಳನ್ನು, ಮಾರ್ಚ್ ಮಾಸದ ಒತ್ತಡಗಳನ್ನ, ಭಾಗ್ಯಗಳ ಮೂಟೆ ಮುಗಿದಾಗ, ಖಜಾನೆಗಳೆಲ್ಲ ಖಾಲಿಯಾಗುತ್ತಿದ್ದಂತೆಯೇ ಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಾಗ, ಎಲ್ಲವನ್ನು ಗಮನಿಸುತ್ತಿದ್ದ ಹಾಗೆಯೇ ಮರಾಠಿ ಮತ್ತು ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿದ ಯಶವಂತರ ಸಹಿ ರೆ ಸಹಿ ನಾಟಕದ ಹೆಸರು ನೆನಪಾಯಿತು.
ಮಾರ್ಚ್ ಮಾಸವೇ ಹೀಗೆ ಸರ್ಕಾರ್ ಮಾರ್ಚ್ ಫಾಸ್ಟ್ ಆಗಿ ಪ್ರಗತಿ ಅನ್ನುವ ಅಳೆಯಬಹುದಾದ ಕೆಲಸಗಳು ಆಗುವ ತಿಂಗಳು. ಪ್ರತಿ ತಿಂಗಳೂ ಸರಕಾರ ಮತ್ತು ನೌಕರಶಾಹಿ ಮಾರ್ಚ್ದಂತೆ ಕೆಲಸ ಮಾಡಿದರೆ ಒಂದೇ ವರ್ಷದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತದೆ. ಜೀವಂತವಾಗಿ, ವೇಗದಿಂದ ಓಡುವಂತೆ ಮಾಡುವ ಶಕ್ತಿಯೇ ಸಹಿ ರೇ ಸಹಿ. ಫೈಲುಗಳು ತಮ್ಮ ತಮ್ಮ ಟ್ರ್ಯಾಕ್ದಲ್ಲಿ ಗುರಿ ಮುಟ್ಟುವಂತೆ ಓಡಲು ಎಷ್ಟು ಮಿನಿಟುಗಳು, ಎಷ್ಟು ಸಹಿಗಳು ಬೇಕು ಅನ್ನುವುದು ಇಂಟರೆಸ್ಟಿಂಗ್ ಅನುಭವದ ಸುದ್ದಿ ಅಂಥದ್ದರಲ್ಲಿ ಮತ್ತೊಂದು ಖಜಾನೆ ಅಂದರೆ ಎಲ್ಲ ಐಡಿಯಾಗಳು ಅನ್ನುವ ಖಜಾನೆ ಭರ್ಭುಸ ಆದಾಗ ಪವಾಡಗಳು ನಡೆಯಬೇಕು. ಇತಿಹಾಸದ ಕಲ್ಯಾಣದಲ್ಲಿಯೂ ಆಗಿತ್ತು. ಆರೋಪಗಳು ಬಂದಾಗ ಭಕ್ತಿ ಭಂಡಾರಿ ಬಸವಣ್ಣನವರು ತುಂಬಿದ ಖಜಾನೆ ತೋರಿಸಿದರು ಈಗಲೂ ಅಂಥದೇ ಒಂದು ಅಲ್ಪಸಂಖ್ಯಾತತೆ ಹೊಂದುವ ಖಜಾನೆಯಲ್ಲಿ ಏನಿದೆ ಏನಿಲ್ಲ ಗೊತ್ತಿಲ್ಲ ಆದರೆ ಖಜಾನೆ ನೋಡುವುದು, ಮಾಡುವುದು ಇಂದು ಎಲ್ಲರಿಗೂ ಬೇಕು.
ಹೀಗಾಗಿ ಸಹಿ ರೆ ಸಹಿ
ಬೇಕೇ ಬೇಕು. ಕೇವಲ ಮಾತಿನಿಂದ ನಡೆಯುವುದಿಲ್ಲ. ಧರ್ಮ ನೀಡಲು ಸಹಿ ಬೇಕಿಲ್ಲ. ಧರ್ಮ ಒಡೆಯಲು ಸಹಿಬೇಕು. ಮತ ಹಾಕಲು ಸಹಿ ಬೇಕು ಮತ ಒಡೆಯಲು ಇಲ್ಲಿಯವರೆಗೆ ಸಹಿ ಬೇಕಾಗಿರಲಿಲ್ಲ, ಒಡೆಯ ಬೇಕೆಂಬ ವಿಚಾರದ ಬೀಜಗಳ ಬಿತ್ತಿದಾಗಲೇ ಕೆಲವು ಬೀಜಗಳಾದರೂ ಮೊಳಕೆ ಒಡೆಯುತ್ತವೆ. ಎಲ್ಲ ಜಾತಿ ಜನಾಂಗಗಳ ಜನರನ್ನು ಕೂಡಿಸಲು ಬಸವಣ್ಣನವರು ಶ್ರಮಿಸಿ ಏಕತೆಯನ್ನು ತರುವುದಕ್ಕಾಗಿ, ಬಹುಸಂಖ್ಯಾತ ಕುಶಲಕರ್ಮಿಗಳನ್ನು, ಶರಣರ ಪದವಿ ಬೋಧನೆಯ ಮೂಲಕ ಅನುಭವ ಮಂಟಪದ ಬಯಲು ವಿಶ್ವ ವಿದ್ಯಾಲಯ ಮಾಡಿ ಶ್ರೇಷ್ಠ ಶರಣ ಧರ್ಮ ಸ್ಥಾಪಿಸಿದರು. ಆಗ ಧರ್ಮಕ್ಕೆ ರಾಜರ ಸಹಿ ಬೇಕಾಗಿರಲಿಲ್ಲ, ಅವರ ಅನುಕರಣೆ ಸಾಕಾಗಿತ್ತು ಈಗ ಹಾಗಿಲ್ಲ ಎಲ್ಲದಕ್ಕೂ ಆಜ್ಞೆಬೇಕು. ಆಜ್ಞೆಗೊಂದು ಸಹಿ ಬೇಕು. ಮಂತ್ರಿಮಂಡಲವೇ ವಿವಿಧ ಧರ್ಮಗಳ ಸ್ವಾಮಿಗಳೇ? ಮಂತ್ರಿಗಳೇ ಸ್ವಾಮಿ ಅಂತ ಸ್ವೀಕರಿಸಿದರೆ ಪರಿಸ್ಥಿತಿ ಹೇಗಿರುತ್ತದೆ? ಅಂತೂ ಕುರುಕ್ಷೇತ್ರ ಶುರುವಾಗಿದೆ. ಕುಂತಿ ಕರ್ಣನ ಹತ್ತಿರ ಬಂದಾಗಿದೆ. ಯಾರು ಕುಂತಿ? ಯಾರು ಅರ್ಜುನ? ಯಾರು ಕರ್ಣ? ಯಾರ ರಥ ಚುನಾವಣಾ ರಣಭೂಮಿಯಲ್ಲಿ ಕುಸಿಯುತ್ತದೆ ಅವರೇ ಕರ್ಣ ಅನ್ನುವ ಸ್ಥಿತಿ. ಒಡೆದು ಯುದ್ಧ ಮಾಡುವ ಮಹಾಭಾರತ, ರಾಮಾಯಣದಲ್ಲಿಯೂ ಇತ್ತು. ಈಗಲೂ ಇದೆ. ಬೇರೆ ಬೇರೆ ರೀತಿಯಲ್ಲಿ ಪುನರಾವರ್ತನೆ ಅಷ್ಟೇ. ಇದು ಕಲಿಯುಗ. ಕಲಿಯುವುದು ಇತಿಹಾಸದಿಂದ ಇದ್ದೇ ಇದೆ. ಅಲ್ಪಸಂಖ್ಯಾತ ಅನಿಸಿಕೊಳ್ಳುವುದಕ್ಕಾಗಿ, ಬಹು ಸಂಖ್ಯೆಯ ಸಮಾವೇಶಗಳಾಗಬೇಕು, ಬಹು ಸಂಖ್ಯೆಯ ಮಾಧ್ಯಮಗಳ ಪ್ರಚಾರ ಸಿಗಬೇಕು. ಅದಕ್ಕೆ ಕ್ಯಾಬಿನೆಟ್ ದರ್ಜೆಯ ವಿಭಜನಾ ಮಂತ್ರಿಯಾಗಬೇಕು. ಮುಖ್ಯಮಂತ್ರಿ ಆಗಲೇ ಬೇಕೆನ್ನುವರು ಮತಗಳ ಗುಣಕದಲ್ಲಿದ್ದರೆ, ಚುನಾವಣೆಯಲ್ಲಿ ಗೆಲ್ಲಬೇಕೆನ್ನುವರು ವಿಭಜನೆ, ಭಾಗಾಕಾರದಲ್ಲಿರುವುದು ಇಂದಿನ ಗಣಿತ ಪ್ರಜಾಪ್ರಭುತ್ವದ ಸತ್ಯ. ಎಲ್ಲ ವರ್ಗದ ಜನರನ್ನು ಕೂಡಿಸುವುದಕ್ಕೆ ಅಂದು ಇಷ್ಟ ಲಿಂಗ ಬೇಕಾಗಿತ್ತು. ಇಂದು ಅದೇ ಎಲ್ಲ ವರ್ಗದವರನ್ನು ಒಡೆಯಲು ಕನಕ ಬೇಕು. ಕನಕದಾಸರಿಗೆ ಮಾತ್ರ ಕಲ್ಲಿನ ಗೋಡೆ ಒಡೆದು ಶ್ರೀಕೃಷ್ಣ ಪರಮಾತ್ಮ ದರ್ಶನ ನೀಡಿದ. ಈಗ ಮತದರ್ಶನ ಭಗವಂತ ತಿರುಗುತ್ತಾನೋ ಇಲ್ಲವೋ ಗೊತ್ತಿಲ್ಲ. ಉಡುಪಿಯ ದೇವಾಲಯಕ್ಕೆ ಹೋಗದೆ “ಬಾಗಿಲನು ತೆರೆದು ಸೇವೆಯನ್ನು ನೀಡು ಮತದಾರ ಪ್ರಭುವೇ, ಕೂಗಿದರೂ ಧನಿ ಕೇಳಲಿಲ್ಲವೇ” ಅಂತಾ ಹಾಡು ಶುರುವಾಗಿದೆ. ಭಕ್ತ ಕನಕದಾಸ ಸಿನಿಮಾದ ಕ್ಲೈಮ್ಯಾಕ್ಸ್ ಆಗುತ್ತದೋ ಇಲ್ಲೋ ಗೊತ್ತಿಲ್ಲ. ಕಾಲ ಬದಲಾಗಿದೆ. ಮನುಷ್ಯ ತಿಳಿದುಕೊಂಡಂತೆ ಎಲ್ಲವೂ ಜರಗುವುದಿಲ್ಲ. “ಮ್ಯಾನ್ ಪ್ರಪೋಜಸ್ ಗಾಡ್ ದಿಸ್ಪೋಜಿಸ್” ಅಂತಾರಲ್ಲ ಹಾಗೆ. ಕನಕ ಪ್ರಾರ್ಥನೆ ಪ್ರಸ್ತಾವನೆಗೆ ಸಹಿ ಹಾಕಾಗಿದೆ. ಇನ್ನೂ ಉತ್ತರದ ದೇವರು ಹೂ ಅಂತಾನೋ, ಹೂ ಹೂ ಅಂತಾನೋ ಗೊತ್ತಿಲ್ಲ. ಇಂದು ಭಾರತದಲ್ಲಿ ರಾಜ್ಯಗಳಲ್ಲಿ ಎಲ್ಲ ನಿರ್ಣಯಗಳನ್ನು, ಅದರಲ್ಲೂ ವಿಶೇಷ ಅಪಾಯಕಾರಿ ನಿರ್ಧಾರಗಳನ್ನು ತಾವು ಯಾವ ಜವಾಬುದಾರಿ ತೆಗೆದುಕೊಳ್ಳದೆ ದಿಲ್ಲಿಯ ದೊರೆಗೆ ಬಿಡುವ ರಾಜಕೀಯ ಧೂರ್ತತನ ಆರಂಭವಾಗಿದೆ. ಅವರ ಮೇಲೆ ಹಾಕಿ ಪಾರು ಆಗುವ ಚಾಲಾಕಿ ಬುದ್ಧಿ ತೋರಿಸುವುದು. ಅದು ನದಿ ನೀರಾಗಿರಬಹುದು, ಗಡಿ ಸಮಸ್ಯೆ ಇರಬಹುದು, ಕೇಂದ್ರ ಕೊಟ್ಟ ಹಣ, ಮೀಸಲಾತಿ ವಿಷಯ, ಬಜೆಟ್ ವಿತರಣೆ ಏನೇ ಇದ್ದರೂ ಇರಬಹುದು. ನಮ್ಮ ಭಾಷೆಯಲ್ಲಿ ಮತ್ತೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಗುರಿಯತ್ತ ಗುಂಡು ಹಾರಿಸುವುದು ಅಂತಾರೆ.
ಬಹಳ ಜನ ಮತಾಂತರದ ಬಗ್ಗೆ ಆಮಿಷಗಳನ್ನು ಒಟ್ಟಿ ಮತಾಂತರ ಮಾಡುತ್ತಾರೆ. ಮಾಡಬಾರದು ಅಂತಾರೆ. ಆದರೆ ಈಗ ಆಗುತ್ತಿರುವುದೇನು? ಅಲ್ಪಸಂಖ್ಯಾತರಿಗೆ ಮೀಸಲಾತಿ ಆಮಿಷಗಳೇ ಅಲ್ಲವೇ? ಇನ್ನೊಂದು ರೀತಿಯ ಸಾಮೂಹಿಕ ಮತಾಂತರ. ಜಗತ್ತಿನಲ್ಲಿ ಭಾರತ ಮುಂದುವರಿದ ರಾಷ್ಟ್ರವಾಗಬೇಕು ಅಂತಾರೆ. ಆದರೆ ಭಾರತದಲ್ಲಿಯೇ ಜನ ಸಮೂಹವೆಲ್ಲ ಹಿಂದುಳಿದವರಾಗಬೇಕು ಅನ್ನುತ್ತಿರುವುದು ನಮ್ಮ ಭಾರತೀಯ ವೈರುಧ್ಯಗಳಲ್ಲಿ ಒಂದು. ನಿಜವಾದ ಬುದ್ಧಿವಂತ ವರ್ಗ ಮಾತ್ರ ಅಲ್ಪಸಂಖ್ಯಾತ ವರ್ಗವಾಗಿರುವುದು, ಮಹಾನ ಭಾರತದಲ್ಲಿ ಮಾತ್ರ. ಚಿನ್ನ ಯಾವಾಗಲೂ ಚಿನ್ನವೇ? ಅಲ್ಪ ಪ್ರಮಾಣವೇ. ಜಾಗತಿಕ ಇತಿಹಾಸದಲ್ಲಿ ಯಾವುದೇ ಲೋಹವನ್ನು ಚಿನ್ನ ಮಾಡುವ ಎಲ್ಕೆಮಿ ಪ್ರಯತ್ನಗಳು ಯಾವುದೇ ದೇಶದಲ್ಲಿಯೂ ಸಫಲವಾಗಿಲ್ಲ. ಕೇವಲ ಹಳದಿ ಬಣ್ಣ ಬಂದರೆ ಯಾರೂ ಇದು ಚಿನ್ನ ಅಂತ ಸಹಿ ಹಾಕಿ ಸರ್ಟಿಫಿಕೇಟ್ ನೀಡುವುದೂ ಇಲ್ಲ. ಅದು ಮಾತ್ರ ಅಲ್ಪಸಂಖ್ಯಾತವೇ.
ಇನ್ನೂ ದಿಲ್ಲಿ ದೊರೆಯ ಸುದ್ದಿ ಎಲ್ಲದಕ್ಕೂ ನಿರ್ಣಯ ತೆಗೆದುಕೊಳ್ಳುವುದು ಅಷ್ಟು ಸುಲಭವೇ? ಅಷ್ಟು ಸುಲಭವಾಗಿದ್ದರೇ ದೊರೆ ಆಗದೆ ದೇವರಾಗಿರುತ್ತಿದ್ದ. ಧಾರ್ಮಿಕ ಭಾವನೆಗಳು, ನಂಬಿಕೆ, ಶ್ರದ್ಧೆ, ಪರಂಪರೆ ಸಂಸ್ಕೃತಿಗಳ ಮೇಲೆ ಮೂಲಭೂತವಾಗಿ ನಿಂತಿದ್ದರೂ, ಬಲವಂತವಾಗಿ ಕ್ರಿಶ್ಚಿಯನ್, ಮುಸ್ಲಿಂ, ಜೈನ, ಬೌದ್ಧ ಧರ್ಮಗಳೆಲ್ಲ ಕಾಲಕಾಲಕ್ಕೆ ಇತಿಹಾಸದಲ್ಲಿ ಆಯಾಕಾಲದ ದೊರೆಗಳಿಂದ ಮತಾಂತರ ಆಗುವುದನ್ನು ನೋಡಿಲ್ಲವೇ? ಕೇಳಿಲ್ಲವೇ? ಓದಿಲ್ಲವೇ? ಇದೇನೂ ವಿಶೇಷವಲ್ಲ. ಆಗ ಚುನಾವಣೆ ಇರಲಿಲ್ಲ. ರಾಜಾಜ್ಞೆ ಒಂದೇ ಸಾಕಾಗಿತ್ತು. ಅಂದರೆ ರಾಜನ ಅಂಗೀಕಾರದ ಸಹಿ ಬೇಕಾಗಿತ್ತು. ಈಗಲೂ ಅಷ್ಟೇ; ಒಂದಿಷ್ಟು ಸಹಿಗಳು ಆದ ನಂತರ ಇನ್ನೊಂದು, ಇನ್ನೊಂದರ ನಂತರ ಮಗದೊಂದು ಸಹಿ ಬೇಕೇ ಬೇಕು. ಗರಿಷ್ಠ ವರಿಷ್ಠ ಸಹಿಗಳು ಎಂಥದೇ ಶಿಷ್ಟ, ಆರಿಷ್ಟ ಕೆಲಸಕ್ಕೂ ಬೇಕೇ ಬೇಕು. ಈಗಾಗಲೇ ಸಹಿ ಸಮೂಹಗಳನ್ನೆಲ್ಲ ಪಡೆದು ದಿಲ್ಲಿ ದೊರೆಯ ಸಹಿಗಾಗಿ ಕಾಯುತ್ತ ಕುಳಿತ ಎಲ್ಲ ಕಾರ್ಯ ಪ್ರಸ್ತಾವನೆಗಳು ಶಿಷ್ಟ ಅಥವಾ ಆರಿಷ್ಠ ಅನ್ನುವುದನ್ನು ಕಾಲವೇ ಹೇಳಬೇಕು. ಕಾಲ ಅನ್ನುವುದು ಸಹ ಮತಗಾಲದ ಮೇಲೆ ನಿಂತಿದೆ ಮತಗಾಲ ಅನ್ನುವುದು ಐದು ವರ್ಷಕ್ಕೊಮ್ಮೆ ಬರುವ ಕಾಲ. ಮಳೆ, ಚಳಿ, ಬೇಸಿಗೆ ಕಾಲಗಳಾವು ಸಹಿ ಮೇಲೆ ನಿಂತಿಲ್ಲ. ಆದರೆ ಮತಗಾಲ ಮಾತ್ರ ಸಹಿ ಮೇಲೆ ನಿಂತಿದೆ ಅದಕ್ಕಾಗಿ ಸಹಿ ರೆ ಸಹಿ! ಸಹಿ ಬಿದ್ದರೂ ಹಿಂದಿಯ “ಸಹಿಬಾತ” ಆಗಿರಲಿಕ್ಕಿಲ್ಲ. ಕನ್ನಡದ ಸಿಹಿಮಾತು ಆಗಿರಲಿಕ್ಕಿಲ್ಲ.
Courtesy : Samyukta Karnataka