ಸರಳವಾಗಿ ಸಾಗುವ ಕತೆಗಳ ನಿರುತ್ಸಾಹದಿಂದ ನೋಡಬಾರದು
ಕತೆಗಳು ವಿಚಿತ್ರವಾಗಿರುತ್ತವೆ. ಬಹಳಷ್ಟು ಕತೆಗಳಲ್ಲಿ ನಾವು ನಿರೀಕ್ಷಿಸುವಂಥ ನಾಟಕೀಯತೆಯೇನೂ ಇರುವುದಿಲ್ಲ. ಜೀವನ ಕಾಸರವಳ್ಳಿಯವರ ಸಿನಿಮಾದಂತೆ ಒಂದು ಲಯದಲ್ಲಿ ಸಾಗುತ್ತಲೇ ಇರುತ್ತದೆ. ಥಟ್ಟನೇ ಏನೋ ಬದಲಾವಣೆಯಾಗಬೇಕು. ಅಚ್ಚರಿಗಳು ಬೇಕು, ದಿಗ್ಭ್ರಮೆ ಹುಟ್ಟಿಸುವಂತ ತಿರುವುಗಳು ಬೇಕು. ಒಂದೊಂದು ಪಾತ್ರದ ವರ್ತನೆಯೂ ಬೆಚ್ಚಿ ಬೀಳಿಸಬೇಕು ಎಂದು ನಿರೀಕ್ಷಿಸುವವರಿಗೆ ಇಂಥ ಕತೆಗಳು ಇಷ್ಟವಾಗಲಾರವು.
ಆದರೆ ನಮ್ಮ ಪರಿಸರ, ನಾವು ದಿನನಿತ್ಯ ನೋಡುವ ಸೀರಿಯಲ್ ಸಿನಿಮಾಗಳು ನಮ್ಮನ್ನು ಒಂದು ರೀತಿಯ ಅನಿರೀಕ್ಷಿತತೆಗೆ ಅಣಿಮಾಡಿವೆ. ಕಾಲೇಜಿಗೆ ಹೋಗುವ ಹುಡುಗಿಗೊಂದು ಪ್ರೇಮಪ್ರಕರಣ ಇರಬೇಕು. ಆ ಪ್ರೇಮಿ ಆಕೆಗೆ ಕೈಕೊಡಬೇಕು, ಆಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು, ಅಥವಾ ಅವಿವಾಹಿತ ತಾಯಿಯಾಗಿ ಕಷ್ಟಕಾರ್ಪಣ್ಯದಲ್ಲಿ ಬದುಕಬೇಕು. ಕಾಲೇಜಿಗೆ ಹೋಗುವ ಹುಡುಗನಿಗೆ ಡ್ರಗ್ , ಕುಡಿತ ಎರಡರಲ್ಲೊಂದು ಚಟ ಇರಬೇಕು. ಮನೆಯಾತನಿಗೆ ಇನ್ನೊಂದು ಹೆಣ್ಣಿನ ಸಂಪರ್ಕ ಇರಬೇಕು. ಹೆಂಡತಿ ಗಂಡನನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು. ಮಾವ ಶಕುನಿಯಂಥವನಾಗಿರಬೇಕು..
ಹೀಗೆ ನಮ್ಮ ಮನಸ್ಸು ಕ್ರಮೇಣ ಕೇವಲ ಅಚ್ಚರಿಗಳನ್ನೂ ಷಾಕ್ ಗಳನ್ನೂ ಸ್ವೀಕರಿಸುವುದಕ್ಕಷ್ಟೇ ಸಿದ್ಧವಾಗಿಬಿಡುತ್ತದೆ. ಆಗ ಸಹಜವಾದ ನಡೆಗಳೂ ನುಡಿಗಳೂ ನೀರಸವಾಗಿ ಕಾಣಿಸತೊಡಗುತ್ತವೆ. ವಿಕ್ಷಿಪ್ತ ನಡವಳಿಕೆಗಳೂ ಸಿನಿಕತೆಯೂ ಅತಿರೇಕಗಳೂ ಇಷ್ಟವಾಗುತ್ತವೆ. ಮಾಸ್ತಿಯವರ ಕತೆಗಳಲ್ಲಿ ನಾವು ಆಸಕ್ತಿ ಕಳೆದುಕೊಳ್ಳುತ್ತೇವೆ.
ಆದರೆ ಜಗತ್ತಿನ ಅತ್ಯುತ್ತಮ ಕತೆಗಳು ಸರಳವಾದದ್ದೇ ಆಗಿರುತ್ತವೆ. ರಾಮಾಯಣ ಅಚ್ಚರಿಯನ್ನು ಒಳಗೊಂಡಿದ್ದೂ ಸರಳವಾಗಿದೆ. ಅಲ್ಲಿ ಒದಗುವ ಅಚ್ಚರಿ ಬದುಕಿನ ವಿಕೃತಿಯಿಂದ ಹುಟ್ಟಿದ್ದೇನೂ ಅಲ್ಲ. ವಿಕೃತಿಯನ್ನೂ ಪ್ರಕೃತಿ ಎಂದು ತೋರಿಸುವ ಪ್ರಯತ್ನಕ್ಕೆ ಸಾಕ್ಷಿ ಮಂಥರೆ. ತಪ್ಪು ಮಾಡಿದ ತಾಯಿ ಸ್ಪಲ್ಪ ಹೊತ್ತಲ್ಲೇ ತನ್ನ ತಪ್ಪನ್ನು ಅರಿತುಕೊಂಡು ಮಾನವೀಯಳಾಗುತ್ತಾಳೆ. ಶ್ರೀರಾಮ ತಂದೆಯ ಆಸೆಯನ್ನು ಪೂರೈಸಲು ಕಾಡಿಗೆ ಹೋಗುತ್ತಾನೆ. ಆದರೆ ಭರತ ತಾಯಿಯ ಆಸೆಯನ್ನು ಪೂರೈಸುವ ಸಲುವಾಗಿ ಪಟ್ಟವೇರುವುದಿಲ್ಲ. ಇಂಥ ಬೆರಗುಗೊಳಿಸುವ ವಿವರಗಳೊಂದಿಗೆ ಅದು ಸಾಗುತ್ತದೆ.
ನಾರ್ವೆಯ ಲೇಖಕಿ ಸಿಂಗ್ರಿದ್ ಉಂದ್ ಸೆತ್ ಕೂಡ ಯಾವುದೇ ಅತಿರೇಕಗಳಿಲ್ಲದ ಕತೆಗಳನ್ನು ಬರೆದಿದ್ದಾಳೆ. ಬಯಲುಸೀಮೆಯ ಅನಂತಹಾದಿಯಲ್ಲಿ ನಿಧಾನವಾಗಿ ಸಾಗುವ ರೇಲುಗಾಡಿಯಲ್ಲಿ ಪಯಣಿಸಿದ ಅನುಭವಗಳನ್ನು ಇಂಥ ಕತೆಗಳು ಕೊಡುತ್ತವೆ. ಅಲ್ಲಲ್ಲಿ ಕಣ್ಣುತೂಗುತ್ತದೆ. ನಿದ್ದೆ ಸೆಳೆಯುತ್ತದೆ. ಆದರೆ ಸಾವರಿಸಿಕೊಂಡು ಕುಳಿತು ಓದಿದರೆ ಈಕೆಯ ಜೆನ್ನಿ ಕಾದಂಬರಿ ಖಂಡಿತ ಇಷ್ಟವಾಗುತ್ತದೆ.
ಈಕೆಯ ಕತೆಯೊಂದನ್ನು ಎಸ್. ದಿವಾಕರ್ ಅನುವಾದಿಸಿಕೊಟ್ಟಿದ್ದಾರೆ. ಉಂದ್ ಸೆತ್ ಬದುಕಿನತ್ತ ತಿರುಗಿ ನೋಡಿದರೆ ಆಶ್ಚರ್ಯವಾಗುತ್ತದೆ. ಕೆಥೊಲಿಕ ಧರ್ಮಕ್ಕೆ ಮತಾಂತರಗೊಂಡ ಈಕೆ, ಹಿಟ್ಲರನ ಭಯಕ್ಕೆ ನಾರ್ವೆ ತೊರೆದು ಅಮೆರಿಕಾಕ್ಕೆ ಓಡಿಹೋಗಿದ್ದಳು. ಈ ಹಿನ್ನೆಲೆಯಲ್ಲಿ ಈ ಕತೆ ಅವಳ ಕತೆಯೂ ಹೌದು.
ಕತೆಯ ನಾಯಕಿ ಇಂಗರ್ ವೈಲ್ಡ್ ನಿರ್ವಿಣ್ಣಳಾಗಿದ್ದಾಳೆ. ಕಾರಣ ಆಕೆಗೇ ಗೊತ್ತಿಲ್ಲ. ನೆಚ್ಚಿಕೊಳ್ಳುವುದಕ್ಕೇನೂ ಇಲ್ಲ ಅನ್ನುವುದು ಆ ಬೇಸರಕ್ಕೊಂದು ಕಾರಣ ಎನ್ನುವ ಊಹೆ ಮಾತ್ರ ಆಕೆಗಿದೆ. ಆಕೆಯ ಅಮ್ಮ ಕೆಲಸ ಕಳಕೊಂಡಿದ್ದಾಳೆ. ಹೀಗಾಗಿ ಅವರು ಕಡಿಮೆ ಬಾಡಿಗೆಯ ಸಣ್ಣ ಅಪಾರ್ಟಮೆಂಟಿಗೆ ಹೋಗಬೇಕಿತ್ತು. ಅದಕ್ಕೂ ಮುಂಚೆ ಮನೆಯಲ್ಲಿದ್ದ ವಸ್ತುಗಳನ್ನು ಮಾರಬೇಕಾಗಿತ್ತು. ಹೀಗೆ ಎಲ್ಲವನ್ನೂ, ಕಪಾಟಿನಲ್ಲಿದ್ದ ಕಥೆಪುಸ್ತಕಗಳನ್ನೂ ಮಾರಿದ ನಂತರ ಇಡೀ ಮನೆ ಅಣಕಿಸುವಂತೆ ಖಾಲಿಖಾಲಿಯಾಗಿ ಕಾಣಿಸುತ್ತಿತ್ತು.
ಇಷ್ಟಕ್ಕೇ ಆಕೆಯ ಕಷ್ಟಗಳು ನಿಲ್ಲಲಿಲ್ಲ. ಯಾವುದೋ ಒಂದು ಸ್ಕೂಲಲ್ಲಿ ಇಂಗರ್ ವೈಲ್ಡಳನ್ನು ಬಿಟ್ಟಿಯಾಗಿ ಓದಿಸುವ ನಿರ್ಧಾರಕ್ಕೆ ಅಮ್ಮ ಬಂದಿದ್ದಳು. ಅದಕ್ಕಿಂತ ಅವಮಾನ ಮತ್ತೊಂದಿಲ್ಲ ಎಂದು ಮಗಳು ನಂಬಿದ್ದಳು. ಅಲ್ಲದೇ ಬೇರೆ ಸ್ಕೂಲಿಗೆ ಹೋದರೆ ಇಷ್ಟವಿಲ್ಲದ ಸಬ್ಜೆಕ್ಟುಗಳನ್ನು ಉರುಹೊಡೆಯಬೇಕು ಎಂಬ ಭಯವೂ ಆಕೆಗಿತ್ತು.
ನಿಧಾನವಾಗಿ ಅವಳು ಅಮ್ಮನ ಜೊತೆ ಹೊಸಮನೆಗೆ ಹೋದಳು. ಅಲ್ಲಿಯ ವಾತಾವರಣ ಚೆನ್ನಾಗಿತ್ತು. ಯಾವುದೇ ಮುಜುಗರವಿಲ್ಲದೇ ಓಡಾಡಬಹುದಾದಂಥ ಮನೆಗಳಿದ್ದವು. ಮನೆಯಿಂದ ಬೆಟ್ಟಗುಡ್ಡ ಕಣಿವೆ ಕಾಣಿಸುತ್ತಿತ್ತು. ಮನೆಯೊಳಗೆ ಸೊಗಸಿಲ್ಲದೇ ಇದ್ದರೂ ನೆಮ್ಮದಿಗೆ ಕೊರತೆಯಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆಕೆಗೆ ಖುಷಿಕೊಟ್ಟದ್ದು ಬಡತನವನ್ನು ಮುಚ್ಚಿಟ್ಟುಕೊಳ್ಳುವ ಅಗತ್ಯ ಇಲ್ಲ ಎನ್ನುವುದು.
ಮನೆಯನ್ನು ಇಂಗರ್ ವೈಲ್ಡ್ ಜೋಡಿಸುತ್ತಾಳೆ. ಅಮ್ಮ ರಚಿಸಿದ ವರ್ಣಚಿತ್ರಗಳನ್ನು ಗೋಡೆಗೆ ಹಾಕುತ್ತಾಳೆ. ಮರುದಿನ ಬೆಳಗ್ಗೆ ಬಹುಬೇಗ ಏಳುತ್ತಾಳೆ. ಆಗ ಆಕೆಗಾಗುವ ಸಣ್ಣ ಸಂತೋಷವನ್ನು ವಿವರಿಸಿರುವ ರೀತಿ ನೋಡಿ. ಇಲ್ಲಿ ಯಾವ ಬೆರಗೂ ಇಲ್ಲ, ಅತಿರೇಕವೂ ಇಲ್ಲ, ಅಚ್ಚರಿಯೂ ಇಲ್ಲ, ಕತೆಯಲ್ಲಿ ಇರಬೇಕು ಎಂದು ಹೇಳುವ ತಿರುವು, ಸಂದಿಗ್ಧ ಏನೂ ಇಲ್ಲ. ಬ್ರಹ್ಮಾನಂದದ ಒಂದು ತುಣುಕಿನಂತಿರುವ ಈ ಸಾಲುಗಳನ್ನು ಸುಮ್ಮನೆ ಓದಿ;
`ಹೊರಗೆ ಎಳೆಬಿಸಿಲು ಮುಡಿದುಕೊಂಡ ಬೆಟ್ಟ. ಅದರ ಮೇಲೆ ಬೆಳೆದಿದ್ದ ಹುಲ್ಲು, ಕಾಡುಗಿಡಗಳು ಹಳದಿಯಾಗಿ ಹೊಳೆಯುತ್ತಿದ್ದವು. ಬೆಟ್ಟದ ಮೇಲೆ ತಿಳಿಯಾಗಿದ್ದ ನೀಲಿ ಆಕಾಶ. ಇದೆಲ್ಲ ನೋಡಿದ್ದೇ ಅವಳಿಗೆ ಎಷ್ಟು ಸಂತೋಷವಾಯಿತೆಂದರೆ ಎದೆಯಲ್ಲಿ ಒಂದು ಬಗೆಯ ನೋವು ಕಾಣಿಸಿಕೊಂಡಿತು.
ಹಾಗೆ ನೋಡಿದರೆ ಇಷ್ಟು ಸಂತೋಷಪಟ್ಟು ಅದೆಷ್ಟು ದಿನವಾಗಿತ್ತೋ. ತಕ್ಷಣ ಅಪ್ಪನ ನೆನಪಾಯಿತು. ಅವಳಿಗೆ ಅಪ್ಪ ಎಂದರೆ ಪಂಚಪ್ರಾಣ. ಅಷ್ಟು ಯಾರನ್ನೂ ಹಚ್ಚಿಕೊಂಡಿರಲಿಲ್ಲ. ಅವರನ್ನು ಇನ್ನಷ್ಟು ಹಚ್ಚಿಕೊಂಡು ಅವರಿಗೆ ಸಂತೋಷವಾಗುವ ಹಾಗೆ ನಡಕೊಳ್ಳಬೇಕಿತ್ತು ಅಂದುಕೊಂಡಳು. ಆದರೆ ಈಗ ಕಾಲ ಮಿಂಚಿಹೋಗಿದೆ. ಅಲ್ಲದೇ ಕಾಲ ನಿಲ್ಲುವುದಿಲ್ಲ ಎಂದೂ ಅವಳಿಗೆ ಗೊತ್ತಾಗಿಬಿಟ್ಟಿದೆ. ಬದುಕಬೇಕಾದವರ ಮತ್ತು ಸಾಯಬೇಕಾದವರ ನಡುವೆ ಇರುವ ಗೆರೆಯನ್ನು ಯಾರೂ ಅಳಿಸಲಾರರು. ಪ್ರಪಂಚದಲ್ಲಿ ಎಷ್ಟೆಲ್ಲ ಕೆಡುಕಿದೆ, ತನಗೆ ಎಟುಕದ ಎಷ್ಟೆಲ್ಲ ಸುಖವಿದೆ ಎಂದು ಅವಳಿಗೆ ತಿಳಿದುಹೋದಂತಿತ್ತು. ಕೆಡುಕನ್ನು ನೋಡಿ ನಡುಗಬೇಕು. ಸುಖ ಬಂದಾಗ ಕುಣಿಯಬೇಕು. ಇದನ್ನು ನೆನೆದೇ ಅವಳು ಸಾಕಷ್ಟು ದಣಿದುಹೋದಳು. ಹೊರಗಡೆ ಬಿಸಿಲಿನಲ್ಲಿ ಮಿಂಚುತ್ತಿರುವ ಬೆಟ್ಟ. ತನ್ನ ದುರಂತದ ಗಾಯವನ್ನು ವಾಸಿಮಾಡಿಕೊಂಡು ಹತ್ತಿರ ಹತ್ತಿರ ಬರುತ್ತಿರುವ ಮನೆ, ಬಯಲಲ್ಲಿ ತನಗಾಗಿ ಕಾಯುತ್ತಿರುವ ಸ್ವಾತಂತ್ರ…
ಆಹಾ… ಎಷ್ಟು ಸಂತೋಷವಾಯಿತೆಂದರೆ ಆ ಸಂತೋಷವನ್ನು ಸಹಿಸುವ ಶಕ್ತಿಯೇ ಅವಳಿಗಿರಲಿಲ್ಲ.’