ಸರಬಡಗಿ ಆಟ!
ಬಂದೇ ಬಂತು ಮೇ ರಜೆ
ಆಟಕೆ ಇರದು ಸಜೆ
ಓದಲು ಬರೆಯಲು ಇರದು ಯಾರದೂ ಕಾಟ
ದಿನವೆಲ್ಲ ಬರೆ ಭಿನ್ನ ವಿಭಿನ್ನ ಆಟ
ಊಟ ಗೀಟ ನೆನಪಾಗದು ಈಗ
ಪಾಟೀಚೀಲ ಮರೆತೆವು ಬೇಗ
ಅಪ್ಪ, ಅಮ್ಮ, ಯಾರೇ ಬಂದರು
ಜಗ್ಗುವುದಿಲ್ಲ ಏನೇ ಬೈದರು
ದಿನವಿಡಿ ಹಿಡಿಯುತ ಬಡಗಿ ಕೈಯಲ್ಲಿ
ದೂರದೂರಕೆ ತೂರುತ ಹಾದಿಯಲಿ
ದೊಡ್ಡ ಗುಂಪನು ಕಟ್ಟಿಹೆವು
ನಿರ್ಜನ ಹಾದಿ ಹಿಡಿಯುವೆವು
ಅಕ್ಕ, ಪಕ್ಕದ ಮನೆಯ ಹುಡುಗರು
ಪಕ್ಕದ ಬೀದಿಯ ಹಳೆಯ ಗೆಳೆಯರು
ಶತೃತ್ವವನು ಮರೆತು ಒಂದಾಗಿಹೆವು
ಒಬ್ಬರಿಗೊಬ್ಬರು ಸಹಕರಿಸುವೆವು
ಸಾಗುವ ಹಾದಿಲಿ ಎದ್ದು ಬಿದ್ದು
ಗಲಗಲ ಮಾಡುತ ಜೋರಲಿ ಸದ್ದು
ಬಳಲಿ ಬಾಯಾರಿ ಎಷ್ಟೇ ಆಗಲಿ ಸುಸ್ತು
ಆಟಕೆ ಮಾತ್ರ ಎನ್ನೆವು ಅಸ್ತು
ಎಲ್ಲರ ಚಿಲ್ಲರೆ ಕೂಡಿಸಿ ಬಗೆಬಗೆ ತಿಂಡಿ ಖರೀದಿಸಿ
ದೊಡ್ಡಾಲದ ಮರದಡಿ ಕುಳ್ಳಿರಿಸಿ
ಶಾಂತಗೊಳಿಸುವೆವು ಉದರಣ್ಣನಿಗೆ
ತೀರಿಸಿಕೊಳ್ಳುವೆವು ಹಸಿವಿನ ಬೇಗೆ
ಸೋತವರಿಗೆ ಸಮಾಧಾನವ ಮಾಡಿ
ಮರುಸುತ್ತಲಿ ಮತ್ತೊಂದವಕಾಶವ ನೀಡಿ
ಸೋಲು ಗೆಲುವಿಗೆ ಸಮಾನತೆಯು ಇಲ್ಲಿ
ಒಬ್ಬರಿಗೊಬ್ಬರು ನೆಲೆಸುವೆವು ಹೃದಯದಲ್ಲಿ
ಹುಡುಕುತ ನೂತನ ಬಡಗಿಗಳ
ನುಸುಳುತ್ತಾ ಕಂಟಿ ಪೊದೆಗಳ
ಅಡ್ಡ ದಿಡ್ಡಿ ಅಡ್ಡಾಡಿ
ಹೊರೆಗಳ ಕಟ್ಟಿ ಸೆಣಸಾಡಿ
ಮರಳುವುದೆಂದರೆ ಮನೆಗಳಿಗೆ
ಮುಖ ಕಿವುಚುವೆವು ಅರೆಗಳಿಗೆ
ಬೇಸರದಲಿ ಮನೆ ಹಾದಿ ಹಿಡಿಯುವೆವು
ಬೆಳಗಾಗುವುದನೆ ಕಾಯುವೆವು
ರಾತ್ರಿ ಕನಸದು ಆಟದ್ದೇ ಕಾಣುತ್ತ
ಪಕ್ಕದವರನು ಜಾಡಿಸಿ ಒದೆಯುತ್ತಾ
ಕಿರುಚಿ ಕೂಗಾಡಿ ನಿದ್ದೆಯಾಯಿತು ಭಂಗ
ಮನೆಯವರೆಂದರು ನಾಳೆ ಬೇಡ ಇಂಥ ಗೆಳೆಯರ ಸಂಗ
– ಉಮಾ ಭಾತಖಂಡೆ .