ಸಂಸದ ಆದರ್ಶ ಗ್ರಾಮ ಯೋಜನೆಯು ಇತರೆ ಗ್ರಾಮಗಳಿಗೆ ಮಾದರಿಯಾಗಬಲ್ಲುದೇ?

ಸಂಸದ ಆದರ್ಶ ಗ್ರಾಮ ಯೋಜನೆಯು ಇತರೆ ಗ್ರಾಮಗಳಿಗೆ ಮಾದರಿಯಾಗಬಲ್ಲುದೇ?

ಭಾರತದಲ್ಲಿ ಗ್ರಾಮ ಅಥವಾ ಹಳ್ಳಿ, ವ್ಯವಸ್ಥೆಯು ಇತಿಹಾಸ ಕಾಲದಿಂದಲೂ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ರಾಜ ಮನೆತನಗಳ ಕಾಲದಲ್ಲಿ ಗ್ರಾಮ, ದಶಗ್ರಾಮ ಹಾಗೂ ಮಹಾಗ್ರಾಮಗಳೆಂದು ಮೂರು ಪಂಗಡಗಳಿದ್ದವು. ಗ್ರಾಮ ಕೇವಲ ಒಂದು ಗ್ರಾಮವಾಗಿರದೇ ದಶಗ್ರಾಮ (10 ಗ್ರಾಮಗಳನ್ನೊಳಗೊಂಡು) ಮತ್ತು 25 ಗ್ರಾಮಗಳನ್ನು ಒಳಗೊಂಡು ಇಂದಿನ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು. ಗ್ರಾಮಗಳು ನಗರ ಪ್ರದೇಶಗಳಿಗೆ ಕೃಷಿ ಉತ್ಪನ್ನ ತೋಟಗಾರಿಕೆ, ಹೈನುಗಾರಿಕೆ ಸಂಸ್ಕೃತಿ ಮತ್ತು ಕಾರ್ಮಿಕರ ಪೂರೈಕೆಯಿಂದ ಅವುಗಳು ಇಂದಿಗೂ ತಮ್ಮ ವೈಶಿಷ್ಟ್ಯತೆ ಉಳಿಸಿಕೊಂಡಿದೆ. ಇಂದಿಗೂ ಎಷ್ಟೋ ನಗರದ ಉದ್ಯಮಿಗಳು ತಮ್ಮ ವ್ಯವಹಾರಕ್ಕಾಗಿ ಗ್ರಾಮವನ್ನೇ ಅವಲಂಬಿಸಿದ್ದಾರೆ. ನಮ್ಮ ದೇಶದ ರಾಷ್ಟ್ರಪಿತರಾದ ಮಹಾತ್ಮಾಗಾಂಧೀಜಿಯವರು ಈ ಗ್ರಾಮಗಳ ಅಭಿವೃದ್ಧಿಯ ಬಗ್ಗೆ ತಮ್ಮದೇ ಆದ ಕಲ್ಪನೆಯನ್ನು ಹೊಂದಿದ್ದರು. ಸಮಗ್ರ ದೇಶದ ಅಭಿವೃದ್ಧಿ ಸಾಧಿಸಬೇಕಾದರೆ ಗ್ರಾಮಗಳು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದ್ದಾರೆ. ಇದಲ್ಲದೇ ತಮ್ಮ ‘ಗ್ರಾಮ ಸ್ವರಾಜ್’ ಕಲ್ಪನೆಯಲ್ಲಿ ಅದನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಗ್ರಾಮದ ಪ್ರತಿ ಕುಟುಂಬದ ಸದಸ್ಯರ ಅಭಿವೃದ್ಧಿ ಜೊತೆಗೆ, ಅವರಿಗೆ ಉತ್ತಮ ಶಿಕ್ಷಣ, ಆರೋಗ್ಯ, ಗ್ರಾಮೀಣ ಕೈಗಾರಿಕಾಭಿವೃದ್ಧಿ, ನೈರ್ಮಲೀಕರಣ, ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಪ್ರತಿ ಗ್ರಾಮದ ಸಮಗ್ರ ಏಳ್ಗೆಯಿಂದ ಮಾತ್ರ ಸಮಗ್ರ ರಾಜ್ಯದ ಮತ್ತು ದೇಶದ ಅಭಿವೃದ್ಧಿಯನ್ನು ಸಾಧಿಸಬಹುದು ಎಂದು ಪ್ರತಿಪಾದಿಸಿದರು. ಅಲ್ಲದೇ ಸಮಗ್ರ ಗ್ರಾಮದ ಅಭಿವೃದ್ಧಿ ಸಾಧಿಸಲು ಮಾರ್ಗೋಪಾಯಗಳನ್ನು ಸಹ ಅವರು ಸೂಚಿಸಿದ್ದರು. ಸ್ವಾತಂತ್ರ್ಯ ಕಳೆದು 68 ವರ್ಷ ಮುಗಿದರೂ ಅವರ ಗ್ರಾಮಾಭಿವೃದ್ಧಿ ಕಲ್ಪನೆ ಕೇವಲ ಕಲ್ಪನೆಯಾಗಿಯೇ ಉಳಿಯಿತು. ಅಲ್ಲದೇ ಬೆರಳೆಣಿಕೆಯಷ್ಟೇ ಗ್ರಾಮಗಳು ಅಭಿವೃದ್ಧಿ ಹೊಂದಿದ್ದು ಅದರಲ್ಲಿ ಕೆಲವೇ ಗ್ರಾಮಗಳು ಅಭಿವೃದ್ಧಿಯಲ್ಲಿ ಮಾದರಿ ಎನಿಸಿಕೊಂಡಿವೆ.

1985ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ದಿ. ರಾಮಕೃಷ್ಣ ಹೆಗ್ಗಡೆ ಹಾಗೂ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಸನ್ಮಾನ್ಯ ದಿ. ಅಬ್ದುಲ್ ನಜೀರಸಾಬ್ರವರು ಈ ಗಾಂಧೀಜಿ ಕಲ್ಪನೆಯ ಬಗ್ಗೆ ಒತ್ತು ನೀಡಿ ಗ್ರಾಮ ಸ್ವರಾಜ್ಯ ಕೆಲವೊಂದು ಉತ್ತಮ ಅಂಶಗಳನ್ನು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರು. ಇದಲ್ಲದೇ 2009-10ರಲ್ಲಿ ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯನ್ನು ಕೇಂದ್ರ ಸರ್ಕಾರ ಸುಮಾರು 4 ರಾಜ್ಯಗಳಲ್ಲಿ (ತಮಿಳುನಾಡು, ಹರಿಯಾಣ, ಗುಜರಾತ್ ಮತ್ತು ರಾಜಸ್ಥಾನ,) ಶೇ. 50ರಷ್ಟು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಇರುವ ಸುಮಾರು 1000 ಗ್ರಾಮಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಯಿತು. ಕೇವಲ ಕೆಲವೇ ರಾಜ್ಯಗಳಲ್ಲಿ ಈ ಯೋಜನೆ ಘೋಷಣೆಯಾದ್ದರಿಂದ ಅಷ್ಟೊಂದು ಪ್ರಚಾರಗಿಟ್ಟಿಸಿಕೊಳ್ಳಲಿಲ್ಲ. ಇದಲ್ಲದೇ ದೇಶದ ಕೆಲವು ರಾಜ್ಯಗಳಲ್ಲಿ ಸರ್ಕಾರೇತರ ಸಂಸ್ಥೆಗಳು, ಜನ ಪ್ರತಿನಿಧಿಗಳು, ಅಧಿಕಾರಿಗಳ ಸ್ವ-ಇಚ್ಛೆಯಿಂದ ಉತ್ತಮ ಕಾರ್ಯ ನಿರ್ವಹಿಸಿ ಕೆಲವೊಂದು ಗ್ರಾಮ ಪಂಚಾಯತ್ಗಳು ಮಾದರಿ ಗ್ರಾಮ ಪಂಚಾಯತ್ ಎನ್ನಿಸಿಕೊಂಡು ಈಗಾಗಲೇ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪಂಚಾಯತ್ ಸಬಲೀಕರಣ ಮತ್ತು ಉತ್ತರಾಧಿಕಾರತ್ವ ಪ್ರಶಸ್ತಿಯನ್ನು, ರಾಜ್ಯದ ವತಿಯಿಂದ ಗಾಂಧಿ ಪುರಸ್ಕಾರ ಹಾಗೂ ಇನ್ನಿತರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇಂತಹ ಗ್ರಾಮ ಪಂಚಾಯತ್ಗಳು ಜನರ ಕನಿಷ್ಟ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ನೈರ್ಮಲೀಕರಣ ಸೇವೆ ಒದಗಿಸುವ ಮೂಲಕ ಅವರಿಂದ ಸಂಪನ್ಮೂಲ ಕ್ರೋಢೀಕರಣವನ್ನು ಉತ್ತಮ ರೀತಿಯಲ್ಲಿ ಸಂಗ್ರಹಣೆ ಮಾಡಿ, ಆದರ್ಶ ಗ್ರಾಮ ಪಂಚಾಯತ್ ಎನಿಸಿಕೊಂಡಿದೆ.

ಇಂತಹ ಸಂದರ್ಭದಲ್ಲಿ ದೇಶದ ಜನಪ್ರಿಯ ಪ್ರಧಾನಮಂತ್ರಿಯಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಸಂಸದ ಆದರ್ಶ ಗ್ರಾಮ ಯೋಜನೆಯನ್ನು ಅಕ್ಟೋಬರ್ 2014 ರಂದು ಶ್ರೀ ಜಯಪ್ರಕಾಶ ನಾರಾಯಣರವರ ಜನ್ಮದಿನದಂದು ಪ್ರಕಟಿಸಿದರು. ಈ ಯೋಜನೆಯ ಪ್ರಕಾರ ದೇಶದಲ್ಲಿನ ಎಲ್ಲಾ ಸಂಸದರು (ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ) ತಲಾ ಒಂದೊಂದು ಗ್ರಾಮ ಪಂಚಾಯತನ್ನು ದತ್ತು ತೆಗೆದುಕೊಂಡು ಅದನ್ನು ಮಾದರಿ ಗ್ರಾಮವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಹಾಗೆಯೇ 2016ರ ವೇಳೆಗೆ ಒಂದು ಗ್ರಾಮ ಪಂಚಾಯತನ್ನು ಹಾಗೂ 2019ರ ವೇಳೆ ಮತ್ತೆರಡು ಗ್ರಾಮ ಪಂಚಾಯತಗಳನ್ನು ಮಾದರಿಯನ್ನಾಗಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈಗಾಗಲೇ ಸಂಸದರು ಗ್ರಾಮಗಳನ್ನು ದತ್ತು ತೆಗೆದುಕೊಂಡು ಸಂಸದರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ, ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು, ಎನ್.ಜಿ.ಓ.ಗಳು ಇದರಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಈಗಾಗಲೇ ಪ್ರಾಥಮಿಕ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಿದ್ದು, ಜನರಿಗೆ ಈ ಆದರ್ಶ ಗ್ರಾಮದ ಬಗ್ಗೆ ತಿಳುವಳಿಕೆ, ಸ್ವಚ್ಛತಾ ಬಗ್ಗೆ ತಿಳುವಳಿಕೆ ಮೂಡಿಸಲು ಜಾಗೃತಾ ಕಾರ್ಯಕ್ರಮ ಹಾಗೂ ಗ್ರಾಮದ ಅಭಿವೃದ್ಧಿ ಯೋಜನೆ ನಕ್ಷೆಯನ್ನು ತಯಾರಿಸಲಾಗುತ್ತಿದೆ. ಅಲ್ಲದೇ ಈ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಅವಶ್ಯವಿರುವ ಹಣಕಾಸಿನ ಮತ್ತು ಸೌಲಭ್ಯಗಳನ್ನು ನೀಡುವ ಕುರಿತು ಇಲಾಖಾವಾರು ಮಾಹಿತಿ ನೀಡಿದ್ದು, ಪ್ರತಿ ಇಲಾಖೆಯು ಅಭಿವೃದ್ಧಿಗೆ ಅವಶ್ಯವಿರುವ ಅನುದಾನ ಪತ್ರ ಸೌಲಭ್ಯಗಳನ್ನು ಸಂಸದರ ಆದರ್ಶ ಗ್ರಾಮ ಪಂಚಾಯತ್ಗೆ ಮೊದಲ ಆದ್ಯತೆ ನೀಡಲಾಗಿದೆ.

ಸಂಸದ ಆದರ್ಶ ಗ್ರಾಮದ ಲೋಪ-ದೋಷಗಳು

ನಮ್ಮ ದೇಶದಲ್ಲಿ ಸುಮಾರು 2,50,000 ಗ್ರಾಮ ಪಂಚಾಯತಗಳಿದ್ದು ಕೇವಲ 2500 ಗ್ರಾಮ ಪಂಚಾಯತಗಳನ್ನು ಮಾತ್ರ ಮಾದರಿಯನ್ನಾಗಿಸಲು ಬಳಸಿಕೊಳ್ಳಲಾಗಿದೆ. ಅಂದರೆ ಎಲ್ಲಾ ಗ್ರಾಮಗಳನ್ನು ಮತ್ತು ಪಂಚಾಯತಗಳನ್ನು ಅಭಿವೃದ್ಧಿಪಡಿಸಲು ಇನ್ನೂ ಸುಮಾರು ನೂರಾರು ವರ್ಷಗಳೇ ಬೇಕಾಗುತ್ತದೆ. ಇದಲ್ಲದೇ ಒಂದು ಗ್ರಾಮ ಪಂಚಾಯತ್ ಅಭಿವೃದ್ಧಿಗೋಸ್ಕರ ಎಲ್ಲಾ ಇಲಾಖೆಗಳ ಅನುದಾನ ಮತ್ತು ಸೌಲಭ್ಯಗಳು ಕೇವಲ ಈ ಗ್ರಾಮದ ಅಭಿವೃದ್ಧಿಗೆ ಕೇಂದ್ರಿಕೃತವಾಗಿರುವುದರಿಂದ ಜಿಲ್ಲೆಯಲ್ಲಿನ ಇತರೇ ಹಳ್ಳಿಗಳಿಗೆ ಅನುದಾನ ಸೌಲಭ್ಯಗಳು ಕಡಿಮೆಗೊಂಡು ಅವುಗಳ ಅಭಿವೃದ್ಧಿ ಕುಂಠಿತಗೊಳ್ಳುವ ಸಾಧ್ಯತೆಗಳಿವೆ. ನಮ್ಮ ದೇಶದಲ್ಲಿ ವಿಪರೀತ ಭ್ರಷ್ಟಾಚಾರ, ಲಂಚಗುಳಿತನ ಇರುವುದರಿಂದ ಈ ಸಂಸದರ ಆದರ್ಶಗಳಿಗೆ ಗ್ರಾಮಗಳ ನೆಪದಲ್ಲಿ ಹಣಕಾಸಿನ ದುರುಪಯೋಗವಾಗುವ ಬಗ್ಗೆಯೂ ಸಂದೇಹಗಳಿವೆ.
ಕೇವಲ ಸಂಸದರ ಆದರ್ಶ ಗ್ರಾಮ ಯೋಜನೆಯ ನೆಪ ಇಟ್ಟುಕೊಂಡು ಈಗಾಗಲೇ ಸಂಸದರು ತಮ್ಮ ಕ್ಷೇತ್ರದ ಅಭಿವೃದ್ಧಿ ಅನುದಾನವನ್ನು 5 ಕೋಟಿಯಿಂದ 25 ಕೋಟಿಗೆ ಹೆಚ್ಚಿಸಲು ಒತ್ತಡ ತರುತ್ತಿದ್ದಾರೆ. ಇದಕ್ಕಾಗಿ ಕೇಂದ್ರ ಹಣಕಾಸು ವಿಭಾಗ ಸದ್ಯದಲ್ಲೇ ಅನುಮೋದನೆ ನೀಡುವ ಸಾಧ್ಯತೆಗಳಿವೆ. ಸಂಸದರಲ್ಲದೇ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ರಾಜ್ಯ ತರಬೇತಿ ಸಂಸ್ಥೆ, ಎನ್.ಜಿ.ಓ.ಗಳು ಹಾಗೂ ಜನಪ್ರತಿನಿಧಿಗಳು ಎಲ್ಲಾ ಸೇರಿ ಒಂದು ಗ್ರಾಮ ಪಂಚಾಯತಿ ಅಭಿವೃದ್ಧಿಗೊಳಿಸಿದರೆ ಇತರೆ ಗ್ರಾಮ ಪಂಚಾಯತಿಗಳು ಇದನ್ನು ಮಾದರಿಯಾಗಿಸಿಕೊಂಡರೆ ಮುಂದಿನ ದಿನಗಳಲ್ಲಿ ಅವುಗಳಿಗೂ ಸಹ ಇದೇ ತರಹದ ಅನುದಾನ, ಸಹಕಾರ ಮತ್ತು ಸೌಲಭ್ಯಗಳು ಅಭಿವೃದ್ಧಿಪಡಿಸಲು ಸಿಗುತ್ತದೆಯೇ ಎನ್ನುವುದು ಅನುಮಾನವಾಗಿದೆ. ಇದಲ್ಲದೇ 2016ರ ಒಳಗೆ ಸಂಸದರು ಒಂದೊಂದು ಗ್ರಾಮ ಪಂಚಾಯತನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ಸದ್ಯದ ಪರಿಸ್ಥಿತಿ ನೋಡಿದರೆ ಅಸಾಧ್ಯವೇ ಸರಿ.

ಈಗಾಗಲೇ ನಮ್ಮ ದೇಶದಲ್ಲಿ ಒಬ್ಬ ಸಮರ್ಥ ಹಾಗೂ ಉತ್ತಮ ಗ್ರಾಮ ಪಂಚಾಯತ್ ಅಧ್ಯಕ್ಷರು, ಉತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕೆಲವು ಎನ್.ಜಿ.ಓ.ಗಳು ಉತ್ತಮ ಕಾರ್ಯ ನಿರ್ವಹಿಸಿ, ಆ ಪಂಚಾಯತ್ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿ ಮತ್ತು ಸ್ವಂತ ಸಂಪನ್ಮೂಲಗಳ ಕ್ರೋಢೀಕರಣದಿಂದ ಕೆಲವು ಮಾದರಿ ಅಥವಾ ಆದರ್ಶ ಗ್ರಾಮ ಪಂಚಾಯತಗಳಾಗಿ ರೂಪಿಸಿದ ಪಂಚಾಯತ್ಗೆ ಹೋಲಿಸಿದರೆ ಸಂಸದ ಆದರ್ಶ ಗ್ರಾಮ ಯೋಜನೆಯು ಕೇವಲ ಸಂಸದರ ನಾಯಕತ್ವದಲ್ಲಿ ಜಿಲ್ಲೆಯ ಹಾಗೂ ತಾಲೂಕು ಸರ್ಕಾರೇತರ ಸಂಸ್ಥೆಗಳ ಪರಿಶ್ರಮದಿಂದ ಮಾದರಿ ಗ್ರಾಮ ಪಂಚಾಯತ್ ಎನಿಸಿಕೊಳ್ಳುತ್ತದೆ. ಒಂದು ಯೋಜನೆ ಎಂದರೆ ಲೋಪದೋಷಗಳಿರುವುದು ಸಹಜ. ಇಷ್ಟೆಲ್ಲಾ ಲೋಪದೋಷಗಳಿದ್ದರೂ ಸಹ ಸಂಸದ ಆದರ್ಶ ಗ್ರಾಮ ಯೋಜನೆಯು ಉತ್ತಮ ಯೋಜನೆಯಾಗಿದ್ದು ಇದನ್ನು ಮಹಾತ್ಮಾ ಗಾಂಧಿಯವರ ಅಭಿವೃದ್ಧಿ ಕಲ್ಪನೆ ಆಧಾರದಲ್ಲಿ ರಚಿಸಲಾಗಿದ್ದು, ಈ ಗ್ರಾಮ ಪಂಚಾಯತ್ ಅಭಿವೃದ್ಧಿ ಮಾದರಿಯನ್ನು ಬೇರೆ ಪಂಚಾಯತ್ಗೆ ಅಳವಡಿಸಿಕೊಳ್ಳಲು ಒಂದು ಮಾರ್ಗಸೂಚಿಯಾಗಲಿದೆ. ಸಂಸದ ಆದರ್ಶ ಗ್ರಾಮ ಯೋಜನೆಗೆ ನೀಡುತ್ತಿರುವ ಸಹಕಾರ, ಸಹಾಯ ಇತರೇ ಗ್ರಾಮ ಪಂಚಾಯತಗಳಿಗೂ ನೀಡಿ ದೇಶದ ಎಲ್ಲಾ ಗ್ರಾಮಗಳ ಅಭಿವೃದ್ಧಿಗಳನ್ನು ಶೀಘ್ರದಲ್ಲಿ ಸಾಧಿಸಿದರೆ ಮಾಜಿ ರಾಷ್ಟ್ರಪತಿಗಳಾದ ಶ್ರೀ ಅಬ್ದುಲ್ ಕಲಾಂರವರ ‘ಇಂಡಿಯಾ ವಿಜನ್ 2020’ ಯನ್ನು ಸಾಧಿಸುವುದರ ಜೊತೆಗೆ ಯು.ಎನ್.ಡಿ.ಪಿ.ಯ ಸಹಸ್ರಮಾನ ಗುರಿಯನ್ನೂ ಸಹ ಭಾರತ ಶೀಘ್ರದಲ್ಲಿ ತಲುಪುವುದರಲ್ಲಿ ಸಂದೇಹವಿಲ್ಲ. ಇದಲ್ಲದೇ ಕರ್ನಾಟಕ ರಾಜ್ಯದಲ್ಲಿ 5ನೇ ಅವಧಿಯ ಪಂಚಾಯತ್ ಚುನಾವಣೆ ಘೋಷಣೆಯ ಜೊತೆಗೆ ಮಹಿಳಾ ಮೀಸಲಾತಿಯನ್ನು ಶೇ. 50ಕ್ಕೆ ಹೆಚ್ಚಿಸಿರುವುದು ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳೆಯರು ಮತ್ತು ಯುವಕರು ಭಾಗವಹಿಸಲು ಹೆಚ್ಚಿನ ಅವಕಾಶ ನೀಡುತ್ತದೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳು ಅಭಿವೃದ್ಧಿ ಸಾಧಿಸುವುದರ ಜೊತೆಗೆ ರಾಜ್ಯವು ದೇಶಕ್ಕೆ ಮಾದರಿಯಾಗಲಿ ಎಂದು ಆಶಿಸೋಣ.

ಲೇಖಕರು:-
ಡಾ. ನಾರಾಯಣ ಬಿಲ್ಲವ

Leave a Reply