ಆಷಾಢದ ಆರ್ಭಟ ಮುಗಿದಿದೆ. ಮಳೆಗೂ ಕೊಂಚ ಬಿಡುವಾದಂತಿದೆ. ಬೀಸಿ ಜಪ್ಪಿ ಜಡಿದು ಹೊಡೆದ ಮಳೆಗೆ ಈಗ ತನ್ನದು ಸ್ವಲ್ಪ ಜಾಸ್ತಿ ಆಯಿತೇನೋ ಅನಿಸಿದಂತಿದೆ. ಗಾಳಿಯ ಕೈಯಲ್ಲಿ ಜುಟ್ಟು ಎಳೆದಾಡಿಸಿಕೊಂಡು ಸೋತ ಮರಗಳು, ಹರಿದ ಎಲೆಗಳನ್ನೂ, ಸುರಿದ ನೀರನ್ನೂ ಕೊಡವುತ್ತ ನಿಂತಿವೆ. ಸೂಜಿಮೊನೆಯಂಥ ಸಹಸ್ರಾರು ಹನಿಗಳು ಕೊರೆದ ಹಲವಾರು ಹಂಗಾಮಿ ಕಾಲುವೆಗಳಲ್ಲಿ ಹರಿವ ಕೆಂಪು ನೀರಿನ ರಭಸ ಎಂದೋ ಕಡಿಮೆಯಾಗಿ, ಕದಡಿ ತಿಳಿಯಾಗಿ ಅವಕ್ಕೆ ಆಗೀಗ ಮಗುವೊಂದರ ಕಾಗದದ ದೋಣಿಯನ್ನು ಆಚೆಗೆ ದಾಟಿಸುವ ಸೌಮ್ಯತೆ ಬಂದಿದೆ. ಹಸಿರು ಹೆದಹೆದರಿಯೇ ಅಲ್ಲಲ್ಲಿ ಗರಿಗೆದರಿ ಅಲ್ಲಿ ಮೂಡಲೇ? ಇಲ್ಲಿ ಹಬ್ಬಲೇ? ಎಂದು ಇಣುಕುತ್ತಿದೆ. ಹೆದರಿಕೆಯ ಸೋಂಕೂ ಇಲ್ಲದ ಅಸಂಖ್ಯ ಪುಟ್ಟ ಹೂಗಳು ಮಾತ್ರ ಅದೃಶ್ಯ ಕಲಾವಿದನೊಬ್ಬನ ಕುಂಚದಿಂದ ಸಿಡಿದಂತೆ ದೂರದೂರದವರೆಗೂ ಅರಳಿ ತಮ್ಮ ಮುಗ್ಧ ನಗುವಿನಿಂದಲೇ ತಂಟೆಕೋರ ಹನಿಗಳನ್ನು ಒಲಿಸಿಕೊಳ್ಳುತ್ತಿವೆ, ದೋಸ್ತಿ ಮಾಡುತ್ತಿವೆ. ಇಲ್ಲಿಯವರೆಗೂ ಮೋಡದ ಮುಸುಕು ಹೊದ್ದು, ಮಳೆಯ ಮರ್ದನಕ್ಕೆ ಹಾಯೆಂದು ನರಳುತ್ತ ಬಿದ್ದುಕೊಂಡಿದ್ದ ಬೆಟ್ಟಗಳಿಗೆ ಮೋಡಗಳ ಪರದೆ ಸರಿಸಿ ತೂರಿ ಬಂದ ಒಂದೇ ಒಂದು ಕಿರಣ, ತಿವಿದು ತಿವಿದು ಎಬ್ಬಿಸಲು ನೋಡುತ್ತಿದೆ. ಕೊಂಚ ಕಿರಿಕಿರಿಯಿಂದಲೇ ಕಣ್ಣು ಬಿಟ್ಟ ಬೆಟ್ಟಗಳ ಮೇಲೆಲ್ಲಾ- ಮಲಗಿದ್ದ ಅಜ್ಜನ ಮೇಲೆ ಕುಣಿದಾಡುವ ಮಕ್ಕಳಂತೆ- ಹಸಿರೋ ಹಸಿರು! ಈ ವಿಸ್ಮಯಕ್ಕೆ ಬೆಟ್ಟಗಳಿಗೇ ಅಚ್ಚರಿಯಾದಂತಿದೆ. ಇಷ್ಟು ದಿನ ಇದ್ದ ಮಳೆ ಈಗಿಲ್ಲ, ಏನೋ ಬದಲಾವಣೆ- ಗಾಳಿಯಲ್ಲಿ, ಬೆಳಕಿನಲ್ಲಿ, ಎಲ್ಲೆಲ್ಲೂ…. ಓ! ಶ್ರಾವಣ ಬಂದಿದೆ! ಹಸಿರು ಮೊಳೆಯುವ ಸಮಯ. ಮೋಡಗಳಿಗೊಂದಿಷ್ಟು ಬಿಡುವು! ಮಸುಕು ಹಸಿರು ಬೆಟ್ಟ ಸಾಲುಗಳ ಹಿಂದೆ, ಕಾಲದೇಶಗಳಾಚೆ ಆಕಾಶರಾಯ ಭೂಮಿಯ ಕಡಲ ತುಟಿಗಳನ್ನು ಮುತ್ತಿಕ್ಕುವಲ್ಲೆಲ್ಲೋ ಎದ್ದ ಹಬೆಯನ್ನೇ ತುಂಬಿಕೊಂಡು ಮೆರವಣಿಗೆ ಹೊರಟ ಮೂಟೆಗಳು ಈ ಮೋಡಗಳು. ನಾವೆಲ್ಲ ಇಲ್ಲಿ ಏನೆಲ್ಲ ಕೆಲಸಗಳಲ್ಲಿ ಮಗ್ನರಾಗಿದ್ದಾಗ, ಇಲ್ಲಾ ಮಲಗಿ ನಿದ್ರಿಸುತ್ತಿದ್ದಾಗ ಈ ಮೋಡಗಳು ವಿಶಾಲ ಬಯಲುಗಳನ್ನು, ಮಲಗಿಬಿದ್ದ ಬೆಟ್ಟಗಳನ್ನೂ, ಜನನಿಬಿಡ ಪೇಟೆಗಳನ್ನೂ ದಾಟಿ ಕಾಡು, ನದಿ, ಹಳ್ಳ ಕೊಳ್ಳಗಳಿಗೆಲ್ಲ ಸಾಕಾಗಿ ಮಿಗುವಷ್ಟು ನೀರು ಹೊತ್ತು ತಂದಿವೆ. ಇಲ್ಲಿ ಬಂದು ದೂಳೆದ್ದು ರಚ್ಚೆಹಿಡಿದ ಇಳೆಯನ್ನು ಪುಟ್ಟ ಮಗುವೇನೋ ಎಂಬಂತೆ ಮೀಯಿಸಿ, ಜಿಟಿಜಿಟಿ ಮಳೆಯ ಏಕತಾನದ ಜೋಗುಳ ಹಾಡಿ ಮಲಗಿಸಿ ತಾವೂ ಹಗುರಾಗಿವೆ. ಎರಡು ತಿಂಗಳು ಸತತ ಸುರಿದ ಮೇಲೆ ಈಗ ಚಾ ಕುಡಿಯಲು ಬಿಡುವಾದ ಕೆಲಸಗಾರರಂತೆ ಅಲ್ಲಲ್ಲಿ ಗುಂಪಾಗಿ ನಿಂತು ಹರಟೆ ಹೊಡೆಯುತ್ತಿವೆ. ‘ದೊಡ್ಡ ಹೊಡೆತದ ಕೆಲಸ ಮುಗಿಯಿತು ಮಾರಾಯಾ!’ ಎಂದು ನಿರಾಳವಾಗಿ ನಗುತ್ತಿವೆ. ಹಸಿರು ಬಿರಿಬಿರಿದು ಹರಡಿರುವ ಭತ್ತದ ಗದ್ದೆಗಳಲ್ಲಿ ಒಂಟಿಗಾಲಲ್ಲಿ ನಿಂತ ಬೆಳ್ಳಕ್ಕಿಗಳು, ಏನು ಕೆಲಸವೋ ಏನೋ ಇಡೀ ದಿನ ಹಾರಾಡುವ ಬಿಂಬಿಗಳು (ಏರೋಪ್ಲೇನ್ ಚಿಟ್ಟೆ), ಧ್ಯಾನಕ್ಕೆ ಕೂತ, ಪುಳಕ್ಕನೆ ಒಳಸರಿಯುವ ಏಡಿಗಳು. ಭತ್ತದ ಗದ್ದೆಯ ಬದಿಗೆ ತುಂಬಿ ಹರಿವ ಕಾಲುವೆಗೆ ಕಾವಲು ನಿಂತ ಒಂಟಿ ಅರಳಿ ಮರ, ಅದರಡಿಗೆ ಹಳದಿ ಪಾತರಗಿತ್ತಿಯ ಶಾಲೆ. ಶ್! ಸದ್ದು ಮಾಡಬೇಡಿ, ಪಾಠ ನಡೆಯುತ್ತಿದೆ. ರೆಕ್ಕೆ ಹೀ…ಗೆ ಅಗಲಿಸಬೇಕು, ಹಾ…ಗೆ ಮುಚ್ಚಬೇಕು! ರೆಕ್ಕೆಗಳೇಕೋ ಬಣ್ಣದ ಕೈಗಳಂತೆ ಮೋಡದ ಜರಡಿಯಿಂದ ಸುರಿಯುತ್ತಿರುವ ಬಿಸಿಲಿಗೆ ಮುಗಿದಂತೆ ಕಾಣುತ್ತವಲ್ಲ! ಕಿಲಕಿಲ ನಗುವ ಕಾಲುವೆಯಲ್ಲಿ ಅರೆರೆ! ಯಾರದು ಬಿಳಿಯ ಮೋಡದ ದೋಣಿ ಬಿಟ್ಟಿದ್ದು?! ಕುಕ್ಕುರುಗಾಲಲ್ಲಿ ಕೂತು ಕಾಲುವೆಯೊಳಗಿನ ಏಡಿಯೊಂದಕ್ಕೆ ಕಡ್ಡಿಯೊಂದನ್ನು ತಾಗಿಸಿ ತಾಗಿಸಿ ಆನಂದಪಡುತ್ತಿರುವ ಮಗುವಿಗೆ ಸಣ್ಣ ಅನುಮಾನ. ಕಾಲುವೆ ಇಡೀ ಮೂಡಿದ ಬೇಲಿ ಗೂಟದ ಒಂದು ಬಿಂಬಕ್ಕೂ ಬಿಳಿ ಮೋಡದ ದೋಣಿ ಸಿಕ್ಕಿಕೊಳ್ಳುವುದೇ ಇಲ್ಲವಲ್ಲ! ಸೃಷ್ಟಿಯ ಆಟ ಎಲ್ಲೆಲ್ಲೂ. ಎಳೆ ಚಿಗುರಿನಲ್ಲಿ ಹಳೆಯ ಹೆಮ್ಮರದಲ್ಲಿ ಹಸಿರಾಗಿ, ನಗುವ ಹೂಗಳಲ್ಲಿ ಬಣ್ಣಗಳಾಗಿ, ಭೂತಾಯಿ ಮುಗುಳ್ನಕ್ಕಂತೆ ಅಲ್ಲಲ್ಲಿ ಉಕ್ಕುವ ಒರತೆಗಳಾಗಿ, ಮಲೆಗಳೆಲ್ಲ ಮದುಮಕ್ಕಳಾಗಿ, ಹಾಡಾಗಿ, ಹಸೆಯಾಗಿ, ಹಬ್ಬ ದಿಬ್ಬಣವಾಗಿ ಎಲ್ಲೆಲ್ಲೂ ಹೊಸ ಹುಟ್ಟಿನ ಸಂಭ್ರಮ. ಇನ್ನೇನು ಹಬ್ಬಗಳ ಸಾಲೇ ಮೆರವಣಿಗೆ ಹೊರಡುತ್ತದೆ. ಕೃಷಿಕರ ಹಬ್ಬಗಳು ಶ್ರಾವಣದಿಂದಲೇ ಶುರುವಾಗಬೇಕು. ಕೃಷಿಯ ಹೊಸ ವರ್ಷದ ಬಾಗಿಲಿಗೆ ಹಬ್ಬಗಳ ತೋರಣ ಕಟ್ಟಿ ಅಲಂಕರಿಸುವ ಮಣ್ಣಿನ ಮಕ್ಕಳು. ಪ್ರತಿ ಹಜ್ಜೆಯನ್ನೂ ಹಾಡಾಗಿಸುವ ಹಬ್ಬಗಳು. ಮನೆಯ ಹೆಂಗಸರಿಗೆ ಕಜ್ಜಾಯ ಮಾಡುವ ಸಂಭ್ರಮವಾದರೆ, ಗಂಡಸರಿಗೆ ಗದ್ದೆ ತೋಟದ ಗಡಿಬಿಡಿ. ಮಕ್ಕಳೆಲ್ಲ ಗಿಲಿಗುಟ್ಟಿಕೊಂಡು ತೋಟಕ್ಕೂ, ಅಡುಗೆಮನೆಗೂ ಓಡಾಡಿ, ಮನೆಯೆಲ್ಲ ಮೂಡಿದ ಮಣ್ಣಿನ ಹೆಜ್ಜೆಗಳು. ಊರ ತುಂಬ ಕಂಬಳಿ ಕೊಪ್ಪೆಯ ಬೆರ್ಚಪ್ಪಗಳು, ಕವಳ ತುಂಬಿದ ಕೆಂಪು ಬಾಯಿಗಳು, ಒಲೆಯೊಳಗೆ ಬೇಯುವ ಹಲಸಿನ ಬೀಜ, ಎಳೆ ಈರುಳ್ಳಿಗಳು. ಮಲೆನಾಡಿನ ಮಕ್ಕಳಿಗೆ ಮನೆಯೊಳಗೆ ಹಬ್ಬದ ಹೊಸ ಹೊಸ ಅಡುಗೆ ಕಜ್ಜಾಯಗಳ ಸೆಳೆತವಾದರೆ, ಹೊರಗೆ- ಅರಳಿರುವ ಹೊಸ ಹೊಸ ಹೂಗಳ ಸೆಳೆತ. ಕೃಷ್ಣಾಷ್ಟಮಿಗೆ ಗೋವಿಂದ ಹೂಗಳನ್ನು ಕೊಯ್ಯಲು ಪುಟ್ಟ ಕೈಗಳಿಗೆ ಬರವಿಲ್ಲ, ಆ ಆಸೆಗೋ ಏನೋ ಮೈತುಂಬ ಬಿಳಿ ಗೋವಿಂದ ಹೂಗಳನ್ನು ಅರಳಿಸಿ ಮೆರೆಯುತ್ತಿರುವ ಹಸಿರು ಬೆಟ್ಟ. ಚೀಲ ಹಿಡಿದು ಹೊರಟ ಪುಟ್ಟ ಪೋರನಿಗೇಕೋ ಚೀಲ ಸಣ್ಣದೆನಿಸಿಬಿಟ್ಟಿದೆ. ಇಡೀ ಬೆಟ್ಟವೇ ಇಕೋ ಎಷ್ಟು ಬೇಕು ನಿನಗೆ? ಎಂದು ಕೇಳಿದಂತಿದೆ. ಹಸಿರಿನ ನಡುವೆ ಹಚ್ಚಿಟ್ಟ ಬಿಳಿ ಚುಕ್ಕೆಗಳಂಥ ಹೂ ರಾಶಿಗೆ ಬರುವ ಬಗೆಬಗೆಯ ದುಂಬಿ, ನೊಣಗಳು. ಹೆಸರೇ ಗೊತ್ತಿಲ್ಲದ ಚಿತ್ರ ವಿಚಿತ್ರ ಬಣ್ಣ- ಆಕಾರದ ಹೂಗಳು! ಮೇಲೆ ಹತ್ತಿದಂತೆ ಮತ್ತೂ ಹೆಚ್ಚುವವು. ಹತ್ತುತ್ತ ಹತ್ತುತ್ತ ಇನ್ನೇನು ತಲುಪಿದ ನೆತ್ತಿ. ನೆತ್ತಿಯ ಮೇಲೆ ಮಜ್ಜಿಗೆಯಂತೆ ಕದಡಿದ ನೀರು ನೀರು ಮೋಡ. ಅದರಾಚೆ ಬೆಟ್ಟದ ಮಗ್ಗುಲು, ಮಗ್ಗುಲಲ್ಲಿ ಮತ್ತೊಂದು ಪುಟ್ಟ ಮನೆ ಇರುವುದೆಲ್ಲ ಬರೀ ಸುಳ್ಳೇ, ಅದರಾಚೆಗಿರುವುದು ಬರೀ ಅನಂತ ಆಕಾಶ, ಇಡೀ ಬೆಟ್ಟವೇ ತೇಲುವ ಹಸಿರು ಮೋಡ. ಯಾರ ಕಲ್ಪನೆಯ ಯಾವ ಊರಿಗೆ ಹೊರಟಿದೆಯೋ ಯಾರಿಗೆ ಗೊತ್ತು? ಛಕ್ಕನೆ ಹಿಂತಿರುಗಿದರೆ ಇಡೀ ಊರಿಗೆ ಊರೇ ಹಸಿರಿನ ಮಧ್ಯ ಪುಟ್ಟ ಕರ್ಛೀಫಿನಂತೆ ಹಾಸಿ ಬಿದ್ದಿದೆಯಲ್ಲ! ಅದೋ ಆ ಚುಕ್ಕೆ ಶಾಲೆ(!), ಅದರ ಬುಡಕ್ಕೆ ಆಸ್ಪತ್ರೆ, ಹಾವಿನಂತೆ ಹರಿವ ದಾರಿಯಲ್ಲಿ ಕೋಡಿಗದ್ದೆಯ ಲಟಾರಿ ಬಸ್ಸು. ನಗುವೇ ಬರುತ್ತದೆ. ಇಲ್ಲಿ ಮಣ್ಣು ದಾರಿಯಲ್ಲಿ ಕಣ್ಣು ಹಾಯಿಸಿದರೆ ಮನೆ! ಅರೆ ನಮ್ಮ ಮನೆ! ಪುಟ್ಟ ತಂಗಿಯನ್ನೆತ್ತಿಕೊಂಡ ಅಮ್ಮ ಹೂ ಕೊಯ್ಯತಿದ್ದಾಳೆ, ಕೂಗಿದರೆ ಕೇಳದಷ್ಟು ದೂರದಲ್ಲಿದ್ದಾಳೆ. ಊರಾಚೆ, ಅದನ್ನು ಬಳಸಿದ ರಸ್ತೆಯಾಚೆ ಹಬ್ಬದ ಮಲೆಯ ದಿಬ್ಬ ಸಾಲುಗಳು. ಮೋಡವೊಂದು ಕರಗಿ ಅಲ್ಲೊಂದು ಬೆಟ್ಟದ ಮೇಲೆ ಸುರಿಯುತ್ತಿದೆ. ಮರಳು ತುಂಬಿದ ಚೀಲ ಮಧ್ಯದಲ್ಲೇ ಪಿಸಿದಂತೆ. ಬೀಸುವ ಗಾಳಿಗೂ ಏನೋ ತೇವ. ಒಳಗೆಳೆದುಕೊಂಡ ಉಸಿರು ಒಳಗಲ್ಲೋ ಮೊಳೆತು ನಗುವಾಗಿ ಹೊರಬರುತ್ತಿದೆ! ಸೃಷ್ಟಿಯ ನಾಟಕದ ಮತ್ತೊಂದು ಅಂಕ ಭವ್ಯವಾಗಿ ತೆರೆಯೇರುವ ತಿಂಗಳು ಶ್ರಾವಣ. ನಾಟಕದಲ್ಲಿ ಮುಂದೆ ಏನೇನೋ ಆಗಬಹುದು, ಕಂಡವರಿಲ್ಲ. ಆದರೆ, ಶುರು ಮಾತ್ರ ಎಂದಿಗೂ ನವನವೀನ, ಅಪ್ಯಾಯಮಾನ.
courtsey:prajavani.net
“author”: “ಸ್ವಯಂಪ್ರಭಾ ಹೆಗಡೆ”,
https://www.prajavani.net/artculture/art/shravana-655322.html