ಒಂದು ವರುಷದ ಹಿಂದೆ ನೋಡಿದ ವೀಡಿಯೊ ಕೆಲವು ದಿನದ ಹಿಂದೆ ಮತ್ತೆ ನೋಡಬೇಕೆನಿಸಿ ನೋಡಿದೆ. ಮೊದಲು ನೋಡಿದಾಗ ಬಂದಂತೆ ನೂರಾರು ವಿಚಾರಗಳು ತಲೆಯಲ್ಲಿ ಸುತ್ತ ತೊಡಗಿದವು.
ವಿಜ್ಞಾನಿ ರೇಮಂಡ್ ಕುರ್ಜ್ ವೀಲ್ ಹೇಳುತ್ತಾರೆ “ಹಿಂದಿನ ಕಾಲದ ಜನರು ಹುಟ್ಟಿದಾಗ ಯಾವ ಜಗತ್ತನ್ನು ಕಾಣುತ್ತಿದರೊ ಸಾಯುವಾಗ ಹೆಚ್ಚುಕಡಿಮೆ ಅದೇ ಜಗತ್ತಿನ ಸುತ್ತಣದಲ್ಲಿ ಕಣ್ಣು ಮುಚ್ಚುತ್ತಿದ್ದರು, ಬದುಕಿನ ನೂರು ವರುಷದಲ್ಲಿ ಹೆಚ್ಚಿನ ಅಂತರ ಕಾಣುತ್ತಿರಲಿಲ್ಲ. ಆದರೆ ೨೧ನೆಯ ಶತಮಾನದಲ್ಲಿ ಜನರು ಹುಟ್ಟಿದ ಹಾಗು ಸಾಯುವ ಅಂತರದಲ್ಲಿ ಸಾವಿರಾರು ವರುಷದ ಪ್ರಗತಿ ಕಾಣುತ್ತಾರೆ”. ಇತ್ತೀಚಿನ ಜಗತ್ತು ಯಾವ ವೇಗದಲ್ಲಿ ಸಾಗುತ್ತಿದೆ ಎಂದು ಇದು ಎರಡು ವಾಕ್ಯದಲ್ಲಿ ತಿಳಿಸುತ್ತದೆ. ಈ ವೇಗದಲ್ಲಿ ಸಾಗುವಾಗ ನಾವು ಕಲಿಯುವ ಶಿಕ್ಷಣವೂ ಅದೇ ವೇಗದಲ್ಲಿ ಬದಲಾಗುವದು ಅತ್ಯವಶ್ಯಕ. ಸಾಮಾಜಿಕ, ಕಲೆ, ಸಂಸ್ಕೃತಿ ಮುಂತಾದ ಪಠ್ಯ ವಿಷಯಗಳು ಇಷ್ಟು ಪ್ರಗತಿ ತೋರಿಸದಿದ್ದರೂ ವಿಜ್ಞಾನ, ತಂತ್ರಜ್ಞಾನ ಇತ್ಯಾದಿ ಪಠ್ಯ ವಿಷಯಗಳು ಕ್ಷಿಪ್ರ ಗತಿಯಲ್ಲಿ ಬದಲಾಗಬೇಕು.
ಈಗಿನ ತಲೆಮಾರಿಗೆ ಯಾವುದೇ ವಿಷಯದ ಬಗ್ಗೆ ಕೇಳಿದಾಗ ಗೊತ್ತಿರದ್ದಿದ್ದರೆ ಅವರು ಹೇಳುವದು ಒಂದೇ – ಗೂಗಲ್ ಮಾಡಿ. ಗೂಗಲ್ ಪ್ರಾರಂಭವಾಗಿದ್ದು ೧೯೯೮ರಲ್ಲಿ, ೧೯೯೮ರಲ್ಲಿ ದಿನಕ್ಕೆ ೧೦೦೦೦ ಪ್ರಶ್ನೆಗಳನ್ನು ಉತ್ತರಿಸಿದ ಗೂಗಲ್ ೨೦೦೬ರಲ್ಲಿ ಒಂದು ನಿಮಿಷಕ್ಕೆ ೧೦೦೦೦ ಕ್ಕೂ ಹೆಚ್ಹಿನ ಪ್ರಶ್ನೆಗೆ ಉತ್ತರ ಕೊಟ್ಟಿದೆ. ಗೂಗಲ್ ಕ್ರಾಂತಿ ಎಂತಹ ಬದಲಾವಣೆ ತಂದಿದೆ ಎಂದರೆ, ೨೦೧೬ ರಲ್ಲಿ ಜಗತ್ತಿನ ಯಾವುದೇ ವಿಷಯವನ್ನು ತಿಳಿಯಲು ನೀವು ಮಾಡುವ ಕೆಲಸ ಒಂದೇ – ಗೂಗಲ್ ಮಾಡುವುದು. ಗೂಗಲ್ ಒಂದು ಸಣ್ಣ ಉದಾಹರಣೆ, ಇದನ್ನು ಮೊದಲು ಹೇಳಿದ್ದು ಯಾಕೆಂದರೆ ಇದು ಎಂಥಹ ಸಾಮಾನ್ಯ ವ್ಯಕ್ತಿಗೂ ತಿಳಿಯುವ ಉದಾಹರಣೆ.
ಇಂತಹದೆ ಇನ್ನೊಂದು ಉದಾಹರಣೆ – ಫೇಸ್ಬುಕ್. ಇದರ ಹುಟ್ಟು ೨೦೦೪ರಲ್ಲಿ, ಆದರೆ ಕೇವಲ ೧೨ ವರುಷದಲ್ಲಿ ದೈತ್ಯಾಕಾರವಾಗಿ ಬೆಳೆದ ಸಂಸ್ಥೆ. ಇದರ ಉದಾಹರಣೆ ಕೊಡಲು ಕಾರಣ, ಇದು ಕಮ್ಯುನಿಕೇಷನ್ ಅಥವಾ ಸಂಪರ್ಕ ಮಾಧ್ಯಮದ ಚಿತ್ರಣ ಬದಲಿಸಿದೆ. ಅದು ಸಮಾಜಕ್ಕೆ ಲಾಭವೂ ಆಗಿದೆ , ಅದರ ಇನ್ನೊಂದು ಮಗ್ಗಲು ಅನಾಹುತಕ್ಕೂ ಕಾರಣವಾಗಿದೆ.
ಭೂಕಂಪದಂತ ವಿಪತ್ತು ಬಂದಾಗ ಅದು ಜನರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ತಲುಪಿಸುವಲ್ಲಿ ಸಹಾಯಕವಾಗಿದೆ, ವಿಪತ್ತು ಕಾಲದ ಒಂದು ಸಹಾಯಕ ಉಪಕರಣವಾಗಿದೆ……..ಅದರಂತೆ ಸುದ್ದಿ ಮಾಧ್ಯಮದ ಇನ್ನೊಂದು ಮುಖವಾಗಿದೆ, ಅದರಲ್ಲಿ ಬರುವ ಸುದ್ದಿ ಸರಿಯೋ ….ತಪ್ಪೋ … ಸಮೂಹ ಮಾಧ್ಯಮದ ಒಂದು ಮುಖ್ಯ ಭಾಗವಾಗಿದೆ.
೧೯೦೦ ರಲ್ಲಿ ಹುಟ್ಟಿದ ತಲೆಮಾರಿನ ಜನರ ಬಾಳಪರಿ ಕೊನೆವರೆಗೂ ಒಂದೇ ರೀತಿಯದಾಗುತ್ತಿತ್ತು. ೧೯೭೦-೮೦ ರಲ್ಲಿ ಹುಟ್ಟಿದವರು ಪ್ರತಿ ದಶಕಕ್ಕೂ ಬದಲಾದ ಜೀವನ ಪರಿಯನ್ನು ಕಂಡಿದ್ದಾರೆ….ಆದರೆ ೨೦೦೦ರಲ್ಲಿ ಹುಟ್ಟಿದ ತಲೆಮಾರಿನವರು ಪ್ರತಿ ೧-೨ ವರುಷಕ್ಕೆ ಒಂದು ದೊಡ್ಡ ಆವಿಷ್ಕಾರ ನೋಡುತ್ತಿದ್ದಾರೆ. ಈ ವೀಡಿಯೊ ಅಥವಾ ಚಿತ್ರ ಮುದ್ರಣದ ಸಂದೇಶ. ನಾವು ಸಾಗುತ್ತಿರುವ ವೇಗ ನಮ್ಮನ್ನು ಎಲ್ಲಿಗೆ ತಲುಪಿಸುತ್ತದೋ ನಾವು ಊಹೆ ಮಾಡುವುದು ಅಸಾಧ್ಯವಾಗಿದೆ.
ಮ್ಯಾನೇಜ್ಮೆಂಟ್ (ಕನ್ನಡದಲ್ಲಿ ವ್ಯವಸ್ಥಾಪಕ ಅನ್ನಬಹುದೇ?) ಕ್ಷೇತ್ರದ ಚಿಂತಕರು ಅಂದಂತೆ – ನಾವು ಈಗ ಭವಿಷ್ಯತ್ಕಾಲವನ್ನು ಅನಿಶ್ಚತೆ ಇಂದ ನೋಡುತ್ತೇವೆ. ನಾವು ಅಪರಿಚಿತ ರಸ್ತೆಯಲ್ಲಿ ನಮ್ಮ ಪಯಣ ಸಾಗಿಸಲು ತಯಾರಿ ನಡೆಸುತ್ತಿದ್ದೇವೆ, ಅದಕ್ಕೆ ತಕ್ಕದಾದ ವಾಹನ ಇರಬೇಕು…ಬೇರೆಯ ರೀತಿಯ ಚಲನೆಯ ಶೈಲಿ….ಎಲ್ಲಕ್ಕಿಂತಲೂ ಮುಖ್ಯವಾಗಿ ಹೊಸ ದಿಕ್ಕಿನ ಅರಿವು ಇರಬೇಕು….ಹೊಸ ವೇಗಕ್ಕೆ ತಕ್ಕುದಾದ ನಿಯಂತ್ರಣ ಇರಬೇಕು.
ಭವಿಷ್ಯತ್ ……ಅಂದರೆ ನಮ್ಮ ಕಲ್ಪನೆಯ ಊಹೆಗೂ ನಿಲುಕದ ಜಗತ್ತು…..
(ವೀಡಿಯೊ ತಪ್ಪದೆ ವೀಕ್ಷಿಸಿ)
1 Comment
ಸಮಯೋಚಿತ ಅಥ೯ಪೂಣ೯ ಲೇಖನ.
ನಾವು ಅಪರಿಚಿತ ರಸ್ತೆಯಲ್ಲಿ ನಮ್ಮ ಪಯಣ ಸಾಗಿಸಲು ತಯಾರಿ ನಡೆಸುತ್ತಿದ್ದೇವೆ, ಅದಕ್ಕೆ ತಕ್ಕದಾದ ವಾಹನ ಇರಬೇಕು…ಬೇರೆಯ ರೀತಿಯ ಚಲನೆಯ ಶೈಲಿ….ಎಲ್ಲಕ್ಕಿಂತಲೂ ಮುಖ್ಯವಾಗಿ ಹೊಸ ದಿಕ್ಕಿನ ಅರಿವು ಇರಬೇಕು….ಹೊಸ ವೇಗಕ್ಕೆ ತಕ್ಕುದಾದ ನಿಯಂತ್ರಣ ಇರಬೇಕು.
ಈ ವೇಗದಲ್ಲಿ ಸಾಗುವಾಗ ನಾವು ಕಲಿಯುವ ಶಿಕ್ಷಣವೂ ಅದೇ ವೇಗದಲ್ಲಿ ಬದಲಾಗುವದು ಅತ್ಯವಶ್ಯಕ. ಸಾಮಾಜಿಕ, ಕಲೆ, ಸಂಸ್ಕೃತಿ ಮುಂತಾದ ಪಠ್ಯ ವಿಷಯಗಳು ಇಷ್ಟು ಪ್ರಗತಿ ತೋರಿಸದಿದ್ದರೂ ವಿಜ್ಞಾನ, ತಂತ್ರಜ್ಞಾನ ಇತ್ಯಾದಿ ಪಠ್ಯ ವಿಷಯಗಳು ಕ್ಷಿಪ್ರ ಗತಿಯಲ್ಲಿ ಬದಲಾಗಬೇಕು.
ಇಂಥ ಇನ್ನಷ್ಟು ಲೇಖನಗಳು ಬರಲಿ.