“ಶಾಂತಿ ಬೇಕೇ? ದೋಷ ಕಾಣಬೇಡ!”

‘ಮಗು, ನಿನಗೊಂದು ಮಾತು ಹೇಳುತ್ತೇನೆ ಕೇಳು, ನಿನಗೇನಾದರೂ ಮನಶ್ಶಾಂತಿ ಎನ್ನುವುದು ಬೇಕಿದ್ದರೆ ಇನ್ನೊಬ್ಬರಲ್ಲಿ ದೋಷವನ್ನು ಕಾಣಬೇಡ. ಒಂದು ವೇಳೆ ದೋಷ ಕಾಣುವುದಾದರೆ ನಿನ್ನ ದೋಷವನ್ನೇ ನೋಡಿಕೋ. ಈ ಇಡೀ ಜಗತ್ತನ್ನೇ ನಿನ್ನದನ್ನಾಗಿ ಮಾಡಿ ಕೊಳ್ಳುವುದಕ್ಕೆ ಕಲಿತುಕೋ. ನೋಡು ಪರಕೀಯರು ಎಂಬುದು ಯಾರೂ ಇಲ್ಲ; ಈ ಇಡೀ ಜಗತ್ತೇ ನಿನ್ನದು.’ ಶ್ರೀಶಾರದಾದೇವಿಶಾಂತಿಯೆಂಬುದು ಮನುಷ್ಯ ಜೀವದ ಆತ್ಯಂತಿಕ ಬಯಕೆ. ಬದುಕಿನ ಎಲ್ಲ ಹಪಹಪಿಗಳ ಹಿಂದೆ ಈ ಸಮತೋಲನ (Equilibrium) ಸ್ಥಿತಿ ಮುಟ್ಟುವ ಪ್ರಯತ್ನವಿದೆ. ಅಶಾಂತಿ ಎಂದರೆ ತುಮುಲ, ತಾಕಲಾಟ. ಇದರ ನಿವಾರಣೆಯಾಗುವುದು ಮನಸ್ಸು ಶಾಂತವಾದಾಗ, ಅಂದರೆ ಸಮಸ್ಥಿತಿ ತಲುಪಿದಾಗ. ಎಲ್ಲರ ಬಯಕೆ ಇದಾದರೂ ಇದನ್ನು ಮುಟ್ಟುವುದು ಸುಲಭವಲ್ಲ. ಅದಕ್ಕೆ ಅರ್ಧ ಕಾರಣ ಹೊರಗಿನ ಪ್ರಚೋದನೆಗಳಾದರೆ ಇನ್ನರ್ಧ ಕಾರಣ ನಮ್ಮ ಪ್ರತಿಕ್ರಿಯೆ. ಈ ಪ್ರತಿಕ್ರಿಯೆಗಳೆಂಬವು ಅನೇಕ ಬಾರಿ ಮನಸ್ಸಿನ ಧೋರಣೆಯ ಪ್ರತಿಫಲನವೇ ಆಗಿರುತ್ತವೆ. ಅಂದರೆ ಯಾವುದನ್ನೋ, ಯಾರನ್ನೋ ಕುರಿತ ಅಸಮಾಧಾನವೇ ನಮ್ಮ ಪ್ರತಿಕ್ರಿಯೆಯ ಮೂಲವಾದ್ದರಿಂದ ನಮ್ಮ ಅಸಮತೋಲನ ಮನಃಸ್ಥಿತಿಗೆ, ಅಶಾಂತಿಗೆ ಅದೇ ಕಾರಣವಾಗಿಬಿಡುತ್ತದೆ. ಆದುದರಿಂದ ಈ ಶಾಂತಿ ಎಂಬುದು ನಮಗೆ ಲಭ್ಯವಾಗಬೇಕಾದರೆ ನಾವು ಆ ಅಸಮಾಧಾನವನ್ನು ಹೊಂದಿರಬಾರದು. ನಮ್ಮ ಅಸಮಾಧಾನಕ್ಕೆ ಕಾರಣ ಏನಿರಬಹುದೆಂಬ ಶೋಧ ಮುಂದುವರಿದರೆ ಆಗ ನಮಗೆ ದೊರೆಯುವ ಉತ್ತರವೇ, ನಾವು ಮತ್ತೊಬ್ಬರಲ್ಲಿ ಕಂಡ ದೋಷ, ಶ್ರೀಶಾರದಾ ದೇವಿಯವರು ಇದನ್ನೇ ಬಹಳ ಮಾರ್ಮಿಕವಾಗಿ ಹೇಳಿ ಬಿಟ್ಟಿದ್ದಾರೆ, ನಿಮಗೆ ಮನಶ್ಶಾಂತಿ ಬೇಕಿದ್ದರೆ ಮತ್ತೊಬ್ಬರಲ್ಲಿ ದೋಷ ಕಾಣಬೇಡಿ ಎಂದು.ಮನುಷ್ಯರ ಮನಸ್ಸಿನ ಸ್ವಭಾವವನ್ನು ಚೆನ್ನಾಗಿ ಅರಿತಿರುವ ಶ್ರೀಮಾತೆಯವರು, ದೋಷ ಕಾಣುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಅದು ಬಡಪೆಟ್ಟಿಗೆ ತನ್ನ ಸ್ವಭಾವವನ್ನು ಬದಲಿಸಿಕೊಳ್ಳುವ ಗುಣ ಹೊಂದಿಲ್ಲ ಎಂಬುದನ್ನು ಬಲ್ಲವರಾದ್ದರಿಂದ ದೋಷ ಕಾಣುವುದಿದ್ದರೆ ನಿನ್ನ ದೋಷವನ್ನೇ ನೋಡಿಕೊ ಎಂದು ಕೂಡ ಹೇಳಿದ್ದಾರೆ. ಮನುಷ್ಯ ಇತರರ ದೋಷಗಳನ್ನು ಎಣಿಸುತ್ತಾ ಅದರ ಬಗ್ಗೆ ಕ್ರುದ್ಧನಾಗುತ್ತಲೋ ಜುಗುಪ್ಸೆ ಹೊಂದುತ್ತಲೋ ಇರುವ ಬದಲು ತನ್ನ ದೋಷಗಳನ್ನೇ ತಾನು ಕಂಡುಕೊಳ್ಳುತ್ತ ಹೋದರೆ ಜಗತ್ತಿನಲ್ಲಿ ದೋಷಪೂರಿತ ವ್ಯಕ್ತಿಗಳ ಸಂಖ್ಯೆ ಸಹಜವಾಗಿಯೇ ಕಡಿಮೆಯಾಗುತ್ತ ಬರುತ್ತದೆಯಲ್ಲವೆ? ಭಗವಾನ್ ಕ್ರಿಸ್ತ ಹೇಳಿದ್ದೂ ಇದನ್ನೇ. ಕುಲಟೆಯೆಂದು ಕರೆದು ಕಲ್ಲು ಹೊಡೆಯಲು ಬಂದ ಗುಂಪಿಗೆ, ನಿಮ್ಮಲ್ಲಿ ಯಾರು ಏನೂ ತಪ್ಪು ಮಾಡಿಲ್ಲವೊ ಅವರು ಮೊದಲು ಕಲ್ಲು ಬೀಸಿರಿ ಎಂದ ಕ್ರಿಸ್ತ. ಜನರ ಗುಂಪು ತಲೆತಗ್ಗಿಸಿ ಕರಗಿಹೋಯಿತು. ನಮ್ಮ ದೋಷಗಳನ್ನು ನಾವು ಕಂಡು ಕೊಂಡು ತಿದ್ದಿಕೊಳ್ಳುತ್ತ ಬೆಳೆದರೆ ನಾವು ದಿನದಿಂದ ದಿನಕ್ಕೆ ಉತ್ತಮರಾಗುತ್ತ ಹೋಗುವುದಲ್ಲದೆ ಇತರರ ದೋಷಗಳ ಬಗ್ಗೆ ನಮ್ಮ ಕ್ಷಮಾಭಾವವೂ ಬೆಳೆಯುತ್ತದೆ.ಶ್ರೀಮಾತೆ ಶಾರದಾದೇವಿಯವರ ಬದುಕಂತೂ ಅವರ ಮೇಲಿನ ಹೇಳಿಕೆಗೆ ಭಾಷ್ಯದಂತೆಯೇ ಇತ್ತು. ಒಬ್ಬಂಟಿಯಾಗಿ ಕಾಡಿನಲ್ಲಿ ಪಯಣಿಸುವಾಗ ಎದುರಾದ ಡಕಾಯಿತನನ್ನೂ ‘ಅಪ್ಪಾ, ಈ ನಿನ್ನ ಮಗಳು ಶಾರದೆ, ಸಹ ಪ್ರಯಾಣಿಕರಿಂದ ದೂರಾಗಿ ಒಂಟಿಯಾಗಿ ಬಿಟ್ಟಿದ್ದಾಳೆ. ಅವಳನ್ನು ಸುರಕ್ಷಿತ ಜಾಗೆಗೆ ತಲುಪಿಸಲಾರೆಯಾ?’ ಎಂದು ಸಂಬೋಧಿಸಿ ಅವನಲ್ಲಿನ ತಂದೆಯ ಭಾವವನ್ನು ಜಾಗೃತಗೊಳಿಸಿಬಿಟ್ಟವರು ಅವರು.ಡಕಾಯಿತ ಅಮ್ಜದನಿಗೆ ಊಟವಿಕ್ಕಿ ಅವನ ಎಂಜಲೆಲೆ ಎತ್ತಿದ್ದ ಬಗ್ಗೆ ಸಂಪ್ರದಾಯವಾದಿಗಳು ಟೀಕಿಸಿದಾಗ, ‘ನನಗೆ ಅಮ್ಜದನೂ ಒಂದೇ ಶರತ್ (ಸ್ವಾಮಿ ಶಾರದಾನಂದಜಿ) ಮಹಾರಾಜರೂ ಒಂದೇ’ ಎಂದುಬಿಟ್ಟರು. ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಅವರ ದರ್ಶನಕ್ಕೆ ಬಂದ ಸಾವಿರಾರು ಜನರಲ್ಲಿ ಅವರ ಕೃಪಾದೃಷ್ಟಿ ಬಿದ್ದಿದ್ದು ಆದಿಮೂಲಂ ಎಂಬ ಹರಿಜನ ಬಾಲಕನ ಮೇಲೆ.ಅವನಿಗೆ ಸ್ನಾನ ಮಾಡಿಸಿ, ಒಳ್ಳೆ ಬಟ್ಟೆ ತೊಡಿಸಿ, ತಲೆ ಬಾಚಿ ಆಮೇಲೆ ಅವನಿಗೆ ಮಂತ್ರದೀಕ್ಷೆಯನ್ನೂ ಕೊಟ್ಟು ಬಿಟ್ಟರು. ಅವರಿಗೆ ಪರಕೀಯರು ಯಾರೂ ಇಲ್ಲ, ಎಲ್ಲ ತನ್ನವರೇ ಎಂಬ ಭಾವ. ‘ಸರ್ವ ಖಲ್ವಿದಂ ಬ್ರಹ್ಮ’ ಎಂಬ ಸೂತ್ರವಾಕ್ಯಕ್ಕೂ ಎಲ್ಲರೂ ನಿನ್ನವರೇ ಎಂಬ ಮಾತಿಗೂ ವ್ಯತ್ಯಾಸವೇನಿಲ್ಲ. ಎಲ್ಲವೂ ನಾನೇ, ಎಲ್ಲರೂ ನಾನೇ ಆಗಿರುವಾಗ ದೋಷ ಕಾಣಲು ಹೇಗೆ ಸಾಧ್ಯ? ಶ್ರೀಮಾತೆ ಶಾರದಾದೇವಿಯವರ ಮೇಲಿನ ಸಂದೇಶ ನಮ್ಮ ಬಾಳಿನ ಸೂತ್ರವಾಗಲಿ

courtsey:prajavani.net

“author”: “ರಘು ವಿ.”,

https://www.prajavani.net/artculture/short-story/sharadadevi-638964.html

Leave a Reply