ಎಲೆಮನೆಯನ್ನು, ಮನೆಯ ಮುಂದಿನ ಅಂಗಳವನ್ನೂ ಸಾರಿಸಿದ್ದೆಷ್ಟೋ ಸಲ. ಅವನು ಬರುತ್ತಾನೆಂದು ನಡುಗುವ ಕೈಗಳಿಂದ ರಂಗವಲ್ಲಿಯಿಟ್ಟು ಕಾದದ್ದು ಎಷ್ಟು ಸಲವೋ, ಕಾಡಿನಿಂದ ಅವನ ಪೂಜೆಗೆಂದು ಆಯ್ದು ತಂದ ಹೂಗಳು ನಿರ್ಮಾಲ್ಯವಾದದ್ದು, ಅವನಿಗಾಗಿ ತಂದ ತನಿವಣ್ಣುಗಳು ಬಾಡಿಹೋದದ್ದು ಎಷ್ಟು ಸಲವೋ, ಲೆಕ್ಕವಿಟ್ಟವರಾರು? ಹಣ್ಣು ಹಣ್ಣು ಮುದುಕಿ, ಅವನ ಕೋಮಲ ಪಾದಗಳಿಗೆ ನೋವಾಗಬಾರದೆಂದು ಅಗಸ್ತ್ಯರ ಆಶ್ರಮಕ್ಕೆ ಸಾಗುವ ದಾರಿಯ ಗುಂಟ ಕಲ್ಲು ಮುಳ್ಳುಗಳನ್ನು ಕಿತ್ತೆಸೆದದ್ದೆಷ್ಟು ಸಲವೊ? ಅವನು ಬರುವ ದಾರಿಗೆ ನೆರಳಾಗಬೇಕೆಂದು ಹಲ ವರುಷಗಳಿಂದ ನೆಟ್ಟ ಗಿಡಗಳು ಮರಗಳಾಗಿ ಹೂಹಣ್ಣುಗಳನ್ನು ತುಂಬಿಕೊಂಡು ದಾರಿಯ ಇಕ್ಕೆಲಗಳಲ್ಲಿ ಬಾಗಿ ನಿಂತದ್ದು ಕಣ್ಣಿಗೆ ಕಾಣುವ ಸತ್ಯ. ಕಾನನದಲ್ಲಿ ನೂರಾರು ವರುಷಗಳು ನಿದ್ರಾಹಾರಗಳನ್ನು ತ್ಯಜಿಸಿ ಘನಘೋರ ತಪಗೈಯ್ಯುವ ತಾಪಸಿಗಳಿಗೆ ಒಲಿಯದವನು ಇವಳ ಗುಡಿಸಲಿಗೆ ಬರುತ್ತಾನೇನು. ಮುದುಕಿಗೆಲ್ಲೋ ಹುಚ್ಚು. ಹೀಗಳೆದವರು ಬಹಳ ಮಂದಿ.
ದೇವಶಾಪಕ್ಕೆ ತುತ್ತಾಗಿ ವ್ಯಾಧಕುಲದಲ್ಲಿ ಜನಿಸಿದ ಅಪ್ಸರೆಯೊಬ್ಬಳ ಕಥೆಯಿದು. ಶಬರ ಕುಲದವಳಾದುದರಿಂದ ಶಬರಿ. ಬಾಲ್ಯ ಕಳೆದ ಷೋಡಶಿಗೆ ಅನುರೂಪ ವರನನ್ನು ಹುಡುಕಿ ಹೆತ್ತವರು ಮದುವೆಯ ಸಿದ್ಧತೆಯನ್ನೇನೋ ಮಾಡಿದರು. ಬೇಡರ ಹಟ್ಟಿಯಲ್ಲಿ ಮದುವೆಯ ದಿನ ಬೆಳಗಿನ ಜಾವ ನೂತನ ವಧುವಿಗೆ ಅರಿಶಿನ ಹಚ್ಚಿ ನೀರೆರೆವ ಸಂಭ್ರಮ. ವಧುವನ್ನೆಬ್ಬಿಸಲು ಹೋದವರು ಕಂಡದ್ದು ಬರಿದಾದ ಹಾಸಿಗೆ! ಮಧ್ಯರಾತ್ರಿ ಎದ್ದ ಶಬರಿ ಕಂಡದ್ದು, ತನ್ನಪ್ಪ ತನ್ನ ವಿವಾಹದೌತಣಕ್ಕೆ ಕಡಿಯಲು ತಂದ ನೂರಾರು ಕುರಿ ಮೇಕೆಗಳ ಆರ್ತನಾದ. ಕಂಡದ್ದು ಮೂಕ ಜೀವಿಗಳನ್ನು ಕಡಿದು ಕೊಲ್ಲುವ ಬೀಭತ್ಸ ದೃಶ್ಯ. ಒಂದು ಸಂತೋಷಕ್ಕಾಗಿ, ಒಂದು ಸಂಭ್ರಮಕ್ಕಾಗಿ ಇಷ್ಟೊಂದು ಮೂಕ ಪ್ರಾಣಿಗಳ ಬಲಿಯೇ? ವ್ಯಾಧ ಕುಲಕ್ಕೆ ಇದೇನು ಹೊಸತಲ್ಲ. ಮಾಂಸವೂ ಕೂಡ ಒಂದು ಆಹಾರವೇ. ಆದರೇ.. ಶಬರ ಕನ್ಯೆ ಯಾಕೋ ಅಂಜಿದಳು. ಅದು ಯಾವಜನ್ಮದ ಸುಕೃತಗಳ ವಾಸನೆಯೋ? ಈ ಬದುಕು ತನ್ನ ಬದುಕಲ್ಲ, ಈ ಬದುಕು ತನ್ನ ಬದುಕಾಗಬಾರದು. ತನ್ನ ಬದುಕಿಗೊಂದು ಬೇರೆ ಅರ್ಥವಿದೆ. ಯೋಚಿಸಲು ಸಮಯವಿರಲಿಲ್ಲ. ಕಾಲಿಗೆ ಬುದ್ಧಿ ಹೇಳುವುದೊಂದೇ ಉಳಿದ ದಾರಿ. ನಡು ರಾತ್ರಿಯ ಕತ್ತಲಲ್ಲಿ, ಘನಘೋರ ಅಡವಿಯಲ್ಲಿ ಆಕೆಯ ಓಟ ಶುರುವಾಗಿತ್ತು. ಬೆಟ್ಟಗುಡ್ಡಗಳನ್ನು ಬಳಸಿ ಕಾಡು ಜನರು ಸವೆಸಿದ ಹಾದಿಯ ಪರಿಚಯವಿತ್ತು ಆಕೆಗೆ. ಕಾಡಲ್ಲಿ ಬೆಳೆದವಳಿಗೆ ಕಾಡುಮೃಗಗಳ ಅಂಜಿಕೆಯಿರಲಿಲ್ಲ. ಭೀತಿಯಿದ್ದದ್ದು ತನ್ನವರೇ ಆದ ಈ ನರರೂಪಿ ಮೃಗಗಳು ಬೆಂಬತ್ತಿಯಾರೇ ಎಂದು. ತಾನೊಲ್ಲದ ಈ ವಿವಾಹಕ್ಕೆ ತನ್ನನ್ನು ನಿರ್ಬಂಧಿಸಿಯಾರೇ ಎಂದು.
ರಾತ್ರಿಯೆಲ್ಲ ಓಡೋಡಿ ಅರುಣೋದಯದ ಹೊತ್ತಿಗೆ ಆಕೆ ತಲುಪಿದ್ದು ಋಷ್ಯಮುಖ ಪರ್ವತದ ತಪ್ಪಲಿನ ಆಶ್ರಮಕ್ಕೆ. ಸೋತು ಬಳಲಿ ಕುಸಿದಾಕೆಗೆ ಈ ಲೋಕದ ಪರಿವೆಯಿರಲಿಲ್ಲ. ಎಚ್ಚರಗೊಂಡದ್ದು ಮುಖದ ಮೇಲೆ ತಣ್ಣನೆಯ ಜಲಸಿಂಚನವಾದಾಗ. ಅದು ವಯೋವೃದ್ಧ ಮಾತಂಗ ಮುನಿಗಳ ಕಮಂಡಲುವಿನಿಂದ ಪ್ರೋಕ್ಷಿಸಲ್ಪಟ್ಟ ಜೀವಜಲ, ಮಂತ್ರಜಲ. ಕಾಲಿಗೆರಗಿದ ಶಬರಿಯನ್ನು ಕೈಹಿಡಿದು ಮಾತಂಗ ಮುನಿಗಳು ತಮ್ಮ ಆಶ್ರಮಕ್ಕೆ ಕರೆದೊಯ್ದರು. ಶಬರಿಯ ಕತೆಯನ್ನು ಕೇಳಿದರು, ಅವಳಿಗೆ ಅಭಯವಿತ್ತರು. ಶಬರಿ ಮಾತಂಗ ಮುನಿಗಳ ಮಾನಸಪುತ್ರಿಯಾದಳು.ಕೆ ಲದಿನಗಳು ಕಳೆದವು ಅಚ್ಚರಿಪಟ್ಟಳು ಶಬರಿ. ಹೀಗೂ ಬದುಕಲು ಸಾಧ್ಯವೇ? ಎಲ್ಲೆಲ್ಲೂ ಪ್ರೀತಿ ತುಂಬಿದ ಬದುಕು. ಜಪತಪಾನುಷ್ಟಾನ, ದೈವ ಚಿಂತನದ ಜತೆಗೆ ಲೋಕಹಿತದ ಚಿಂತನೆ. ಚಿಗರೆಯ ಮೈ ನೆಕ್ಕಿ ಮುದ್ದಿಸುವ ಹುಲಿ, ಹಾವ ಮೈಮೇಲೆ ಹರಿದಾಡುವ ಕಪ್ಪೆ, ಕಾಡಲ್ಲಿ ನಿರ್ಭೀತಿಯಿಂದ ಮೇದು ಸಂಜೆ ಗೋದಲಿ ಸೇರುವ ಗೋವುಗಳು. ಅಲ್ಲಿ ಹಿಂಸೆಯಿರಲಿಲ್ಲ, ಒಂದಾಗಿ ಬಾಳುವ ಪ್ರೀತಿಯಿತ್ತು, ಪ್ರೇಮವಿತ್ತು. ದಿನಕಳೆದಂತೆ ಮನಸ್ಸಿನ ದುಗುಡಗಳು ನೀಗಿ ಭರವಸೆಯ ಹೊಸಬೆಳಕೊಂದನ್ನು ಅವಳು ಆಶ್ರಮದಲ್ಲಿ ಕಂಡಳು. ವೃದ್ಧ ಮಾತಂಗರ ಸೇವೆಯಲ್ಲಿ ಕಾಲಕಳೆಯುತ್ತ ಬದುಕಿನ ಸಾರ್ಥಕತೆಯನ್ನು ಕಂಡಳಾಕೆ. ಕಾಲಕಳೆದಂತೆ ಮಾತಂಗರಿಗನಿಸಿತು, ಇವಳು ಸಾಮಾನ್ಯ ಶಬರ ಕನ್ಯೆಯಲ್ಲ. ಇವಳು ಭಕ್ತಿ ಪಂಥಕ್ಕೊಂದು ಹೊಸ ವ್ಯಾಖ್ಯೆಯನ್ನು ಬರೆಯಬೇಕಾದವಳು, ರಾಮಚರಿತೆಯಲ್ಲೊಂದು ಪಾತ್ರವಾಗಬೇಕಾದವಳು. ಹಲವರುಷಗಳು ಕಳೆದವು. ಧ್ಯಾನಾಸಕ್ತ ಮಾತಂಗರೊಂದು ದಿನ ಸಮಾಧಿಮಗ್ನರಾಗಿರುತ್ತಲೇ ತಮ್ಮ ಜಡ ದೇಹವನ್ನು ಬಿಟ್ಟು ಪರಮ ಆತ್ಮನಲ್ಲಿ ಲೀನವಾದರು.
ಶಬರಿಯ ಮುಂದಿನ ಬದುಕು ತಾನೇ ನಿರ್ಮಿಸಿಕೊಂಡ ಪರ್ಣಕುಟೀರವೊಂದರಲ್ಲಿ ಪ್ರಾರಂಭವಾಯಿತು.ಇಹದ ಮೇಲೆ ಆಸಕ್ತಿಯಿಲ್ಲ. ಪರದ ಚಿಂತೆ. ಋಷ್ಯಾಶ್ರಮಗಳ ಬಳಿ ಸುಳಿದಾಗೆಲ್ಲ ಆಕೆಗೆ ಕೇಳಿ ಬರುತ್ತಿದ್ದುದು ‘ರಾಮ ರಾಮೇತಿ ರಾಮೇತಿ ರಮೆ ರಾಮೇ ಮನೋರಮೇ…’ ಎಂಬ ಗುಣಗಾನ. ಮುನಿಗಳು ಶಿಷ್ಯರಿಗೆ ವಿವರಿಸುತ್ತಿದ್ದರು ‘ರಮಯತೇ ಇತಿ ರಾಮಃ’ ಯಾರು ಮನಸ್ಸನ್ನು ಮುದಗೊಳಿಸುತ್ತಾನೋ ಅವನೇ ರಾಮ. ಯಾರು ತನ್ನ ದರ್ಶನ ಮಾತ್ರದಿಂದ ಈ ಭವದ ಪಾಪವನ್ನು ನೀಗುತ್ತಾನೊ ಅವನೇ ರಾಮ. ರಾಮನೀಗ ಸೀತಾನ್ವೇಷಣೆಯಲ್ಲಿದ್ದಾನಂತೆ. ತಮ್ಮ ಲಕ್ಷ್ಮಣನೊಡಗೂಡಿ ಈ ಕಾನನಕ್ಕೂ ಬರುವವನಿದ್ದಾನಂತೆ. ಒಂದೆಡೆ ಅವನು ಧರೆಯ ಭಾರವನ್ನು ಇಳುಹಲು ಬಂದ ದೇವನೆನ್ನುವ ಋಷಿಮುನಿಗಳು ಇನ್ನೊಂದೆಡೆ ಹೆಂಡತಿಯನ್ನು ಕಳೆದುಕೊಂಡ ಸಾಮಾನ್ಯ ಮನುಷ್ಯನ ಕತೆಯಂತೆ ಅವನ ಬದುಕಿನ ಘಟನೆಯನ್ನು ವಿವರಿಸುತ್ತಿದ್ದಾರಲ್ಲ! ಅಚ್ಚರಿಯೆನಿಸುತ್ತಿತ್ತು ಶಬರಿಗೆ.
ಏನು ದೈವದ ಸ್ವರೂಪ?ಹರಿವ ನೀರು, ಸುಡುವ ಬೆಂಕಿ, ಉರಿವ ಸೂರ್ಯ, ಬೀಸುವ ಗಾಳಿ, ಕಾನನದ ಈ ವೃಕ್ಷಗಳೇ ದೇವರು ಶಬರಿಗೆ. ಪ್ರತ್ಯಕ್ಷ ಅನುಭವಕ್ಕೆಳಸುವ ವಿಚಾರಗಳಿವು. ಬೆಳಗಾದೊಡನೆ ಈ ಪ್ರಕೃತಿ ವಿಸ್ಮಯಗಳಿಗೆ ಕೈಮುಗಿದು ಕಾಯಕ್ಕಕ್ಕಿಳಿಯುವುದಷ್ಟೇ ತನಗೆ ಗೊತ್ತಿರುವ ಪೂಜೆ. ಧ್ಯಾನವಿಲ್ಲ, ತಪವಿಲ್ಲ, ಪೂಜೆಯಿಲ್ಲ. ಈ ಕಾನನವನ್ನುಳಿಸುವುದೇ ನನಗೆ ತಿಳಿದಿರುವ ಪೂಜೆ. ಒಂದೆಡೆ ಅವನನ್ನು ನಿರ್ಗುಣನೆನ್ನುವ, ನಿರಾಕಾರನೆನ್ನುವ ಈ ಗಡ್ಡ ಬಿಟ್ಟವರು ಇನ್ನೊಂದೆಡೆ ಅವನಿಗೆ ಸಾಕಾರ ರೂಪವನ್ನು ನೀಡುತ್ತಿದ್ದಾರಲ್ಲ? ಯಾವುದು ಸತ್ಯ? ಗೊಂದಲದ ಗೂಡಾಯಿತು ಶಬರಿಯ ಮನಸು.
ಶಬರಿಗೀಗ ರಾಮದರ್ಶನದ ಕಾತುರ. ಈ ಧರೆಯ ಬಾರವನಿಳುಹಲು ಅವತರಿಸಿದವನಂತೆ, ಪಿತೃವಾಕ್ಯ ಪರಿಪಾಲಕನಂತೆ, ಏಕಪತ್ನಿ ವ್ರತಸ್ಥನಂತೆ, ಶಿಲೆಯಾದ ಅಹಲ್ಯೆಯನ್ನು ತನ್ನ ಪಾದ ಸ್ಪರ್ಶದಿಂದ ಪಾವನಗೊಳಿಸಿದವನಂತೆ. ಬದುಕಿನ ಒಂದೇ ಒಂದು ಆಸೆ ಒಮ್ಮೆ ಅವನನ್ನು ಕಾಣಬೇಕು. ಬರಿಯ ಒಂದು ಕುತೂಹಲ. ಹೀಗೂ ಒಬ್ಬನಿರಬಹುದೇ ಎನ್ನುವುದಕ್ಕಾಗಿ. ಅವನಿಂದ ನನಗೆ ಆಗಬೇಕಾದ್ದೇನು ಇಲ್ಲ. ಬಂದರೆ ನನ್ನಪರ್ಣಕುಟೀರಕ್ಕೆ ನಾನೇ ಅವನಿಗೆ ಕೊಡಬಲ್ಲೆ. ಕುಡಿಯಲೊಂದಿಷ್ಟು ನೀರು, ಹಸಿವಿಗೊಂದಿಷ್ಟು ಹಣ್ಣು.
ಕೊನೆಗೂ ಹಲವು ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸುವ ಆ ಅಮೃತ ಗಳಿಗೆ ಕೂಡಿಬಂತು. ಬಂದ ರಾಮ, ಲಕ್ಷಮಣ ಸಮೇತನಾಗಿ. ಯಾರಲ್ಲಿ ಗುಡಿಸಲಲ್ಲಿ? ಬಾಯಾರಿದ್ದೇನೆ, ಹಸಿವಾಗುತ್ತಿದೆ. ಕುಡಿಯಲೊಂದಿಷ್ಟು ನೀರು, ಹಸಿವೆಗೊಂದಿಷ್ಟು ಹಣ್ಣು ಸಿಗಬಹುದೇ? ಹಣ್ಣು ಹಣ್ಣು ಮುದುಕಿ ಶಬರಿ ಒಂದು ಕೈಯಲ್ಲಿ ತನಿವಣ್ಣುಗಳನ್ನು ಪಿಡಿದು, ಇನ್ನೊಂದು ಕೈಯ್ಯಲ್ಲಿ ಕೋಲೂರಿಕೊಂಡು ಗುಡಿಸಲ ಹೊರಗೆ ಬಂದು ನಿಂತಳು. ಕಣ್ಣನ್ನು ಕಿರಿದುಗೊಳಿಸಿ ಪಿರಿದಾದ ಮೂರ್ತಿಯನ್ನು ತನ್ನ ಕಣ್ಣೊಳಗೆ ತುಂಬಿಕೊಂಡಳು. ವಿವರಣೆ ಬೇಡವಿತ್ತು ಬಂದವನು ರಾಮನೆಂಬುದಕ್ಕೆ.
ಅವನು ಬಂದ ದಾರಿಯೆಡೆ ಹೊರಳಿ ಕಂಡಳು. ಅಚ್ಚರಿಯಾಯಿತವಳಿಗೆ, ಬೆಳಿಗ್ಗೆ ಬಿದ್ದ ಇಬ್ಬನಿ ಪದಾಘಾತಕ್ಕೆ ಕರಗಲಿಲ್ಲ, ದಾರಿಗುಂಟ ಬೆಳೆಸಿದ ಹುಲ್ಲುಹಾಸು ನಲುಗಲಿಲ್ಲ, ನಾಳೆ ಅರಳಬೇಕಾಗಿದ್ದ ಮೊಗ್ಗುಗಳಿಗೆ ಏನು ಅವಸರವಿತ್ತೋ ಇಂದೇ ಅರಳಿ ಬಿಟ್ಟಿವೆ. ಶುಕಪಿಕಗಳ ಗಾನ, ಮಯೂರ ನರ್ತನ, ಸುಗಂಧ ಭರಿತ ಮಲಯಮಾರುತ ವಹನ ಎಲ್ಲವೂ ಅವನಿಗಾಗಿ.
ತನಿವಣ್ಣುಗಳನ್ನಿತ್ತು, ಸಿಹಿನೀರನುಣಿಸಿ ಕಾಲಿಗೆರಗಿದಳು ಶಬರಿ. ಶ್ರೀರಾಮಾ ನನ್ನಲಿರುವುದೇ ಇಷ್ಟು. ಜಪ, ತಪ, ಧ್ಯಾನ, ಪೂಜೆ ಒಂದು ನಾನರಿಯೆ. ನನ್ನನನುಗ್ರಹಿಸು. ಕಾಲಿಗೆರಗಿದ ಶಬರಿಯ ತೋಳನೆತ್ತಿ ಶ್ರೀರಾಮನೆಂದ, ಮಾತೆ, ಈ ಪ್ರಕೃತಿಯನ್ನು ಆರಾಧಿಸುತ್ತ ಅದರಲ್ಲೇ ದೈವತ್ವನ್ನು ಅರಸುತ್ತಿದ್ದೀಯಲ್ಲ ತಾಯಿ. ಇದಕ್ಕಿಂತ ದೊಡ್ಡ ತಪಸ್ಸಿದೆಯೇ? ಪೂಜೆಯಿದೆಯೇ? ಧ್ಯಾನವಿದೆಯೆ? ಈ ಎಲ್ಲದರಲ್ಲಿಯೂ ನನ್ನ ಕಂಡೆಯಲ್ಲ ಎಂದವನೆ ಶಬರಿಯ ಕಾಲಿಗೆರಗಿದ ಶ್ರೀರಾಮಚಂದ್ರ.
-ದಿವಾಕರ ಡೋಂಗ್ರೆ ಎಂ.