ವೈರಸ್

ವೈರಸ್

“ಸಂಧ್ಯಾ….” ಅತ್ಯಂತ ಸಾವಕಾಶವಾಗಿ ಕರೆದ ಅತ್ತೆಯ ದನಿ ಕೇಳಿಸಿತು ಅವಳಿಗೆ. ಆದರೆ ಸಂಧ್ಯಾಳಿಗೇಕೋ ಎದ್ದು ಮಾತನಾಡಬೇಕೆನ್ನಿಸಲಿಲ್ಲ. ಮತ್ತೊಂದು ಬಾರಿ ಕರೆದು ಅವರು ಹಿಂತಿರುಗಿ ಹೋದರು. ಹೊರಬಾಗಿಲಿನ ಕೀಲಿ ಹಾಕಿ ಅವರು ಹೊರಟುಹೋಗಿದ್ದು ತಿಳಿಯಿತು. ವಿವರಣೆ ಇರುವ ಚೀಟಿ ಹೊರಗೆ ಟೇಬಲ್ ಮೇಲೆ ಇರುತ್ತದೆ. ಬೇಕೆಂದಾಗ ತಾನು ತನ್ನಲ್ಲಿರುವ ಕೀಲಿಯಿಂದ ತೆಗೆದು ಹೋಗಬಹುದು. ಮತ್ತೆ ನಿದ್ರಿಸಲು ಪ್ರಯತ್ನಿಸಿದಳು ಸಂಧ್ಯಾ. ಊಹೂಂ, ರಾತ್ರಿಯೇ ಬಾರದ ನಿದ್ದೆ ಈಗಲೂ ಹತ್ತಿರ ಸುಳಿಯಲಿಲ್ಲ.
ಮನಸ್ಸು ಹಿಂದೆ ಜಾರಿತು. ಎರಡು ವರ್ಷದ ಹಿಂದೆ ಇಂಥದೇ ಒಂದು ಮಧ್ಯಾಹ್ನ ಸಂಧ್ಯಾ ಮತ್ತು ಅವಳ ಅಜ್ಜಿಯ ನಡುವೆ ಯುದ್ಧವೇ ನಡೆದಿತ್ತು. ಸಂಧ್ಯಾಳ ಅಜ್ಜಿಯ ಆರೋಗ್ಯ ಸ್ವಲ್ಪ ಏರುಪೇರಾಗಿತ್ತು. ಅವರಿಗೆ ಒಬ್ಬಳೇ ಮೊಮ್ಮಗಳ ಮದುವೆ ನೋಡುವ ಆಸೆ.
ಸಂಧ್ಯಾಳ ವಾದ-“ನಿಂಗ ಸಾಯೋ ಮೊದಲು ನನ್ನ ಮದುವಿ ನೋಡೋ ಆಶಾ ಅಂತ, ನಾ ನೀ ಹೇಳಿದವ್ರನ್ನ ಮಾಡಿಕೊಳ್ಳುವಾಕೆ ಅಲ್ಲ. ಯಾರೋ ಬಂದು ನನ್ನ 10 ನಿಮಿಷ ನೋಡಿ – ಚಹಾ ಕುಡಿದು, ಅವಲಕ್ಕಿ ತಿಂದು ಕನ್ಯಾ ಪಾಸು ಮಾಡಿದರ, ಈ ಕನ್ಯಾ ಅವನ್ನ ಪಾಸು ಮಾಡಬೇಕಲ್ಲಾ, ನೀ ಇಲ್ಲದ್ದು ತಲ್ಯಾಗ ತುಂಬಿ ನಮ್ಮ ಅಪ್ಪಾಜಿ ತಲಿ ತಿನ್ನಬ್ಯಾಡಾ…”
“ನಿಂಗ ಅಚ್ಛಾ ಜಾಸ್ತಿ ಆಗೇದ, ನೀ ಏನು ಸಣ್ಣಾಕೀನ ಇನ್ನೂ? ಇಪ್ಪತ್ತೆರಡು ಮುಗೀತಾ ಬಂತು. ನಾವೂ ಏನು ನಿನ್ನ ಕೆಟ್ಟದಕ್ಕ ಹೇಳ್ತೀವಾ? ಏನೋ ನಿನ್ನ ತಲೀಮ್ಯಾಲ ನಾಲ್ಕು ಅಕ್ಷತಾ ಹಾಕೋ ಇಚ್ಛಾ ಅಂದ್ರ, ಹತ್ತು ಮಾತಾಡ್ತೀ. ಏನಾದ್ರೂ ಮಾಡ್ಕೋ ಹೋಗು…” ಎಂದು ಸುಮ್ಮನಾದರು ಅವಳ ಅಜ್ಜಿ.
ನಾಲ್ಕು ದಿನ ಇರಲು ಬಂದಿದ್ದ ಅವಳ ಮೆಚ್ಚಿನ ಕಾಕಾ ಸಂಧ್ಯಾಳನ್ನು ತನ್ನೊಂದಿಗೆ ಬೆಂಗಳೂರಿಗೆ ಕರೆದೊಯ್ದಿದ್ದ. ಅವಳ ಮೆಚ್ಚಿನ ಸಂಜೂ ಕಾಕಾನ ಮುಂದೆ ಸಂಧ್ಯಾ ತನ್ನ ಮನಸ್ಸನ್ನು ತೆರಡದಿಟ್ಟಿದ್ದಳು-
“ಕಾಕಾ, ನಾನೇನೂ ಮದುವಿ ಆಗೂದಿಲ್ಲಾ ಅಂತ ಹೇಳೂದಿಲ್ಲಾ. ಆದರ ಈ ಸಂಪ್ರದಾಯ, ವಧೂ ಪರೀಕ್ಷಾ ಎಲ್ಲಾ ವಿಚಿತ್ರ ಅನಿಸ್ತದ ಅಷ್ಟೇ. ನಮ್ಮ ಒಂದು ನಿರ್ಧಾರ ಜೀವನ ಪೂರ್ತಿ ನಮಗ ಸಂತೋಷ ಕೊಡಬೇಕೇ ಹೊರತು ಅನಿವಾರ್ಯದ ಬಿಸಿ ತುಪ್ಪ ಆಗಬಾರದು. ಅದಕ್ಕ ನಾವು ಆಯ್ಕೆ ಮಾಡೋ ಸಂಗಾತಿಯ ಮನಸ್ಸನ್ನು ಅರಿಯೋದು ಬಹಳ ಮುಖ್ಯ ಅಲ್ಲಾ ಕಾಕಾ?”
ಸಂಜೀವ ಅವಳ ಮಾತಿಗೆ ತಲೆದೂಗಿದ್ದ ಆಗಲೇ ಅವನಿಗೆ ಮತ್ತೊಂದು ವಿಷಯ ಹೊಳೆಯಿತು. ಅದನ್ನೇ ಸಂಧ್ಯಾಳಿಗೆ ಹೇಳಿದ-
“ಸಂಧ್ಯಾ, ವಿ.ಆರ್.ಎಸ್ ತಗೊಂಡಮ್ಯಾಲ ನಾ ಒಂದು ಬಿಜಿನೆಸ್ ಶುರೂ ಮಾಡೆನಿ. ಯಾವುದೇ ಲಾಭದ ಆಸೆಯಿಂದಲ್ಲ. ವೇಳೆಯ ಸದುಪಯೋಗ ಮತ್ತ ಸ್ವಲ್ಪ ಸಮಾಜ ಸೇವಾ ಮಾಡೋಣಾಂತ. ಮ್ಯಾರೇಜ್ ಬೂರೋ ಒಂದು ಶುರು ಮಾಡೇನಿ. ಈಗ ಸ್ವಲ್ಪ ದಿನದ ಹಿಂದ ಅರುಣ ಅಂತ ನನ್ನ ಗೆಳೆಯಾ ಒಬ್ಬ ಇದ್ದಾನ. ಒಂದು ಸೈಬರ್ ಕೆಫೆ ನಡಿಸ್ತಾನ. ಮಾಹಿತಿ ತಂತ್ರಜ್ಞಾನ ಅವನ ಬಿಜಿನೆಸ್ ಒಂದss ಅಲ್ಲಾ ಒಂದು ಹವ್ಯಾಸ, ಅವನದೊಂದು ವೆಬ್ ಸೈಟ್ ಅದ. ಈ ನನ್ನ ಬಿಜಿನೆಸ್ ಸಲುವಾಗಿ ಒಂದು ವೆಬ್ ಪೇಜ್ ಅದರಾಗ ತೆಗೆದುಕೊಟ್ಟಾನ. ಸದ್ಯಕ್ಕ ಸುರು ಮಾಡು ಬೇಕಂದ್ರ, ಮುಂದ ನಿಂದ ಒಂದು ವೆಬ್ ಸೈಟ್ ತಗದೀಯಂತ ಅಂದ. ಸದ್ಯಕ್ಕ ವೆಬ್ ಸೈಟ್ ಗೆ ಬೇಕಾಗೊ ಲೀಗಲ್ ಕೆಲಸಕ್ಕೆಲ್ಲಾ ವೇಳೆ ಇಲ್ಲಂತ ಅದನ್ನ ಮುಂದುವರಿಸೀನಿ. ಈಗ ಸ್ವಲ್ಪ ಮಾಹಿತೀನ ನಾನು ಸಂಗ್ರಹಿಸಿ ಇಟ್ಟೇನಿ. ಇನ್ನೂ ಸಾಕಷ್ಟು ವಿವರ ಸಂಗ್ರಹ ಮಾಡಬೇಕಾಗೇದ. ನೀನೂ ಸ್ವಲ್ಪ ನಂಗ ಸಹಾಯ ಮಾಡು. ಹಿಂಗ ನಿನಗ ಒಪ್ಪೋ ಸಂಗಾತಿ ಮಾಹಿತೀನೂ ಸಿಗಬಹುದು” ಎಂದು ಚೇಷ್ಟೆ ಮಾಡಿದ.
ಮೊದಲು ಸುಮ್ಮನೆ ವೇಳೆ ಕಳೆಯಲು ಪ್ರಾರಂಭ ಮಾಡಿದ ಸಂಧ್ಯಾಗೆ ಅದೊಂದು ಮೆಚ್ಚಿನ ಹವ್ಯಾಸವೇ ಆಯಿತು. ವಿವಿಧ ಜನರ ವಿವಿಧ ಅಭಿಪ್ರಾಯಗಳು ಅವಳಿಗೆ ಅಚ್ಚರಿ ತರಿಸುತ್ತಿದ್ದವು. ಹೀಗೆಯೇ ಒಂದು ದಿನ ಕಂಪ್ಯೂಟರ್ ನಲ್ಲಿ ಒಬ್ಬ ವ್ಯಕ್ತಿಯ ವಿವರ ಓದುತ್ತಿದ್ದಳು.
ಹೆಸರು: ಮಧುಸೂದನ್ ರಾವ್
ಉದ್ಯೋಗ: ಸಾಫ್ಟ್ ವೇರ್ ಇಂಜಿನಿಯರ್ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್
ಆದಾಯ: ವಾರ್ಷಿಕ ಎಂಟು ಲಕ್ಷ.
ಮನೆಯಲ್ಲಿ ಸದಸ್ಯರು: ತಾಯಿ ಮಾತ್ರ
ಇನ್ನೂ ಅನೇಕ ಸಾಧನೆಯ ವಿವರಗಳು. ಕೊನೆಗೆ ಅವಳ ಲಕ್ಷ್ಯ ಸೆಳೆದದ್ದು
ಮದುವೆಯ ಬಗೆಗಿನ ನನ್ನ ಅನಿಸಿಕೆಗಳು- ಮನುಷ್ಯನ ಸ್ವಭಾವಕ್ಕೆ ಸಾಮಾನ್ಯವಾದ ಗುಣವೆಂದರೆ- “ಇರುವುದನ್ನು ಬಿಟ್ಟು ಇಲ್ಲದುದರೆಡೆಗೆ ತುಡಿಯುವುದು” ಎನ್ನುತ್ತಾರೆ. ಆದರೆ ಇತರ ವಿಷಯಗಳ ಬಗ್ಗೆ ಇದು ನಿಜವಿರಬಹುದು. ಪ್ರೀತಿ, ಮಮತೆ ಪ್ರತಿಯೊಬ್ಬ ವ್ಯಕ್ತಿಗೂ ಸಂತಸ ತರುವ ವಿಷಯವೇ. ಆದರಿಂದ ವಿಮುಖಗೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಪ್ರೀತಿ ಯಾವುದೇ ರೀತಿಯದಿರಬಹುದು. ತಾಯಿ, ತಂದೆ, ಸೋದರ, ಸೋದರಿ, ಸ್ನೇಹಿತರು ಯಾರಿಂದಲೂ. ಆದರೆ ಮನುಷ್ಯನ ಸಂಬಂಧ ಅತಿ ಹೆಚ್ಚು ಅವಧಿಯೆಂದರೆ ತನ್ನ ಜೀವನ ಸಂಗಾತಿಯೊಂದಿಗಿನದು. ಪ್ರೀತಿಯ ಉತ್ಕಟತೆಯನ್ನು ಹೋಲಿಸಲಾಗದು. ಆದರೆ ಜೀವನದ ಬಹಳಷ್ಟು ಏರಿಳಿತಗಳನ್ನು ಜತೆಯಾಗಿ ಕಂಡಾಗ ಜೀವನ ಸಂಗಾತಿಯ ಪ್ರೀತಿ ದಿನದಿಂದ ದಿನಕ್ಕೆ ಪಕ್ವಗೊಳ್ಳುತ್ತದೆ. ಮದುವೆಗೆ ಮೊದಲು ವಿಚಾರ ಮಾಡಿದ ಆರ್ಥಿಕ ಭದ್ರತೆ, ರೂಪದ ಸೆಳೆತ ಕ್ರಮೇಣ ಅರ್ಥ ಕಳೆದುಕೊಂಡು ಪ್ರೀತಿಯ ದೈವಿಕತೆಯೆಡೆಗೆ ಸಾಗುತ್ತದೆ. ಬಾಳಿನ ಸಂಜೆಯಲ್ಲಿ, ಅಂತೆಯೇ ಯಾವುದೇ ದೈಹಿಕ ಆಕರ್ಷಣೆಯ ಸೆಳೆತವಿಲ್ಲದೆಯೂ ಜೀವನದ ಸಂಗಾತಿ ಅತಿ ಪ್ರಿಯನೆನಿಸುತ್ತಾನೆ.
ಸಂಧ್ಯಾಳ ಮನಸ್ಸು ತುಂಬಿ ಬಂದಿತ್ತು. ಬರಹ ಇನ್ನೂ ಮುಂದುವರಿದಿತ್ತು. ಪ್ರತಿ ವಾಕ್ಯದಲ್ಲಿಯೂ ಆ ವ್ಯಕ್ತಿಯ ಮದುವೆಯ ಬಗೆಗಿನ ಸುಂದರ ಭಾವನೆಗಳು, ಗೌರವ ವ್ಯಕ್ತವಾಗುತ್ತಿದ್ದವು. ಅವಳ ಮನಸ್ಸು ಸೆರೆ ಹಿಡಿಯಲ್ಪಟ್ಟಿತ್ತು.
ಸಂಜೀವ ಅವಳನ್ನು ಆ ವಿಳಾಸದ ಮನೆಗೆ ಕರೆದೊಯ್ದ. ತನ್ನ ಬಿಜಿನೆಸ್ ವಿವರ ನೀಡಿ ತಾನು ಕನ್ಯಾಪಿತೃಗಳ ಬೇಡಿಕೆಯ ಮೇರೆಗೆ ಅವರನ್ನು ಭೇಟಿಯಾಗಲು ಬಂದಿರುವುದಾಗಿ ಹೇಳಿದ. ಮಧುಸೂದನನ ತಾಯಿ ಮಾತ್ರವಿದ್ದರು. ತಾವೂ ಮಗನಿಗಾಗಿ ಯೋಗ್ಯ ಹುಡುಗಿಯನ್ನು ಹುಡುಕುತ್ತಿರುವುದಾಗಿ ಹೇಳುತ್ತಿದ್ದಾಗ ಅವರ ನೋಟ ಸಂಧ್ಯಾಳನ್ನು ಅಳೆಯುತ್ತಿದ್ದುದು ಸಂಜೀವನ ಲಕ್ಷ್ಯಕ್ಕೆ ಬಂದಿತು. ಸಂಧ್ಯಾಳ ದೃಷ್ಟಿ ಅವರ ಮನೆಯ ಗೋಡೆಯ ಮೇಲಿದ್ದ ರಾಧಾಕೃಷ್ಣರ ಪೈಂಟಿಂಗ್ ನ ಮೇಲಿತ್ತು. ಅದರ ಕೆಳಗಿನ ಸಣ್ಣ ಬರಹ-
‘ರಾಧಾ ಮಾಧವ ವಿನೋದ ಹಾಸ
ಯಾರೂ ಮರೆಯದ ಪ್ರೇಮ ವಿಲಾಸ’
ಅವಳಿಗೆ ಮಧುಸೂದನನ ಬರಹವನ್ನೇ ಜ್ಞಾಪಿಸಿತು. ಮುಂದಿನದೆಲ್ಲಾ ಹೂವಿನ ಸರವೆತ್ತಿದಂತೆ ಸಲೀಸಾಗಿ ನಡೆದುಹೋಗಿತ್ತು. ಅವಳ ಅಜ್ಜಿಯ ಸಂಭ್ರಮವಂತೂ ಹೇಳತೀರದ್ದು.
ಆದರೆ ಎಲ್ಲ ಕಥೆಗಳಂತೆ ‘ಅನಂತರ ಅವರು ಸುಖವಾಗಿ ಬಾಳಿದರು’ ಎಂದು ಕಥೆ ಮುಗಿಯಲಿಲ್ಲ. ಸಂಧ್ಯಾಳ ಕನಸು ತುಂಬಿದ ಕಣ್ಣುಗಳಿಗೆ ಸತ್ಯ ಬೇಗನೆ ಗೋಚರಿಸಲಾರಂಭಿಸಿತು. ಮೊದಲ ದಿನವೇ ಮಧು ಮಾತನಾಡಿದುದು ತನ್ನ ವೃತ್ತಿ, ಸಾಧನೆ ಮತ್ತು ಸಣ್ಣ ವಯಸ್ಸಿನಲ್ಲಿಯೇ ತಾನು ಗಳಿಸಿದ ಸಂಪತ್ತಿನ ಬಗೆಗೆ, ಕೊನೆಯಲ್ಲಿ ತನ್ನ ಪತ್ನಿ ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಬೇಕೆಂಬ ಆಶಯದ ಬಗೆಗೆ. ಸ್ವಲ್ಪ ನಿರಾಶೆಯಾದರೂ ಸಂಧ್ಯಾ ಉತ್ಸಾಹದಿಂದಲೇ ಕೇಳಿದ್ದಳು. ಆದರೆ ದಿನಗಳು ಉರುಳಿದಂತೆ ಅವಳ ನಿರಾಶೆ ಬೆಳೆಯಿತು. ಒಂದು ದಿನ ಮನಸ್ಸು ತಡೆಯದೆ ಅವನ ಅನಿಸಿಕೆಯ ಬಗೆಗೆ ಕೇಳಿ, ಅದು ಆಷಾಢಭೂತಿತನವೇ ಎಂದು ರೇಗಿದಳು. ಅವನು ನಕ್ಕು ಬಿಟ್ಟ.
“ಇಂಥ ಹುಚ್ಚು ವಿಚಾರಗಳು ನನ್ನಲ್ಲಿ ಇರಲಿಕ್ಕೆ ಸಾಧ್ಯವೇ ಇಲ್ಲ. ತನ್ನ ಬಯಾಲಾಜಿಕಲ್ ನೀಡ್ಸ್ ಪೂರೈಸಿಕೊಳ್ಳಲಿಕ್ಕೆ ಪ್ರೀತಿ, ಪ್ರೇಮ ಅಂತ ವೈಭವೀಕರಿಸಿ ನೋಡೋದು ನನ್ನ ದೃಷ್ಟಿಯಲ್ಲಿ ಹುಚ್ಚುತನ.”
ಸಂಧ್ಯಾಳ ಕೋಪ ಏರಿತ್ತು. “ನಿಂಗ ಮದುವೆಯ ಅವಶ್ಯಕತೆ ಏನಿತ್ತು? ಬಯಾಲಾಜಿಕಲ್ ನೀಡ್ಸ್ ಪೂರೈಸಿಕೊಳ್ಳಲಿಕ್ಕೆ ಇನ್ನೂ ಬೇರೆ ರೀತಿ ಇರಲಿಲ್ಲೇನು?”
ಅವಳ ಕೋಪವೂ ಅವನಿಗೆ ಹಾಸ್ಯಾಸ್ಪದವೆನಿಸುತ್ತಿತ್ತು. “ಯೂ ಫೂಲ್-ಇದು ಸ್ವಲ್ಪ ಉಳಿತಾಯದ ಕ್ರಮ ಅಲ್ಲೇನು? ಒಬ್ಬ ಅಡುಗೆಯವಳು, ಒಬ್ಬ ವಿಶ್ವಾಸದ ಮನೆಯಾಳು, ಕಾಳಜಿಯಿಂದ ನಮ್ಮನ್ನು ನೋಡಿಕೊಳ್ಳೋ ಒಬ್ಬ ದಾಯಿ ಇಷ್ಟೆಲ್ಲಾ ಕೆಲಸ ಒಬ್ಬ ಪತ್ನಿಯಿಂದ ನಡೆದರೆ ಏನು ಕೆಟ್ಟದ್ದು?”
ಅವನು ಹಾಸ್ಯಕ್ಕೆ ನುಡಿದಿರಬಹುದಾದರೂ ಅವಳ ಮನಸ್ಸು ನೊಂದಿತ್ತು. ಅತ್ತೆಯ ಪ್ರೀತಿಯಿಂದ ಮನಸ್ಸು ತಂಪಾಗುತ್ತಿತ್ತು. ಆದರೆ ಅವಳ ಕನಸುಗಳು ಚದುರಿದ್ದವು. ತನ್ನ ಪತಿಯಲ್ಲಿ ಯಾವುದೇ ಮಧುರ ಭಾವನೆಗಳಿಲ್ಲ ಎನ್ನುವುದು ಅರಿವಾಗಿತ್ತು.
ಹೀಗೇ ಬೇಸರ ಕಳೆಯಲು ತನ್ನ ಮೆಚ್ಚಿನ ಸಂಜೂ ಕಾಕಾನ ಮನೆಗೆ ಹೋಗಿದ್ದಳು. ಆಗ ಮಾತಿನ ನಡುವೆ ಅವಳಿಗೆ ಸಂಜೀವ ಹೇಳಿದ್ದ-
“ಸಂಧ್ಯಾ, ನಿನಗೊಂದು ವಿಷಯ ಗೊತ್ತೇನು? ಈ ಮಾಹಿತಿ ತಂತ್ರಜ್ಞಾನ ಬೆಳೆದ ರೀತಿ ನೋಡಿದ್ರ ಅಗಾಧ ಅನಿಸ್ತದ. ಆದರ ಕೆಲವೊಮ್ಮೆ ಅಷ್ಟೇ ಅಪಾಯಕಾರಿನೂ. ಕೆಲವು ದಿನಗಳ ಹಿಂದೆ ಅಂದ್ರ, ನಾ ಸುರು ಮಾಡಿದ ಪ್ರಾರಂಭ ಇರಬಹುದು, ಅರುಣನ ವೆಬ್ಸೈಟಿನೊಳಗ ವೈರಸ್ ಸೇರಿತ್ತಂತ. ನಮ್ಮ ಡಾಟಾ ಎಲ್ಲಾ ಅಲ್ಲೋಲಕಲ್ಲೋಲ ಆಗಿ ಎಲ್ಲಾ ಅದಲೀಬದಲೀ ಆಗಿ ಹೋಗಿದ್ವು, ಮತ್ತ ಎಲ್ಲಾ ಮಾಹಿತೀನೂ ಡಿಲೀಟ್ ಮಾಡಿ, ಮತ್ತ ಹೊಸದು ಪ್ರಾರಂಭ ಮಾಡಿದೆ.”
ಸಂಧ್ಯಾಳಿಗೆ ತತ್ ಕ್ಷಣ ಮಧುವಿನ ಮಾತು ನೆನಪಾಗಿತ್ತು. “ನಾ ಯಾಕ ಸುಳ್ಳು ಮಾಹಿತಿ ಕೊಡಲಿ? ನನಗ ಅನಿಸಿದ್ದನ್ನ ನಾ ಬರೆದು ಕೊಟ್ಟಿದ್ದೆ. ಸುಳ್ಳು ಮಾಹಿತಿ ಕೊಟ್ಟು ನಿನ್ನ ಪಡಿಯೋ ಅವಶ್ಯಕತಾ ನಂಗೇನಿತ್ತು? ನಿಜಾ ಹೇಳಬೇಕಂದ್ರ ನನಗ ಮದುವೆ ಅವಶ್ಯಕತೇನ ಅನ್ನಿಸಿರ್ಲಿಲ್ಲಾ. ಈಗ ಮೂರು ವರ್ಷ ನನ್ನ ಪ್ರೊಜೆಕ್ಟ್ ಸಲುವಾಗಿ ನಾನು ವಿದೇಶಕ್ಕ ಹೋದ್ರ ಅವ್ವನ ಹತ್ತಿರ ಯಾರಾದ್ರೂ ಬೇಕಂತ ಹ್ಞೂ ಅಂದಿದ್ದು ಅಷ್ಟೇ. ಇಷ್ಟಕ್ಕೂ ನಿನಗೇನು ಕಡಿಮೆ ಆಗಿದ್ದು ಇಲ್ಲಿ?”
“ಹೌದು ಏನು ಕಡಿಮೆ? ತುಂಬಿದ ಆಭರಣದ ಪೆಟ್ಟಿಗೆ, ವಾರ್ಡರೋಬ್, ತಿರುಗಲು ಕಾರು, ಡ್ರೈವರ್, ಇರಲು ಸುಂದರ ಮನೆ, ನೋಡಲು ಟಿ.ವಿ, ಕೇಳಲು ಸಂಗೀತ ಎಲ್ಲಕ್ಕೂ ಮೀರಿ ಬ್ಯಾಂಕ್ ಬ್ಯಾಲೆನ್ಸ್…”
ಸಂಧ್ಯಾಳಿಗೆ ನಗು ಬಂದಿತು. ವೈರಸ್ ಕೇವಲ ಕಂಪ್ಯೂಟರ್ ಡಾಟಾ ಅಲ್ಲೋಲಕಲ್ಲೋಲ ಮಾಡಿರಲಿಲ್ಲ. ತನ್ನ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿತ್ತು.
ಇಂದು ಸಂಜೆಯ ಸಮಾರಂಭದಲ್ಲಿ ಮಧುಸೂದನನಿಗೆ ‘ಬೆಸ್ಟ್ ಪರ್ ಫಾರ್ಮರ್’ ಅವಾರ್ಡ ಸಿಗುವುದಿತ್ತು. ಇದು ಅವನಿಗೆ ಸಿಗುತ್ತಿರುವುದು ಸತತ ಮೂರನೆಯ ಬಾರಿ. ಮತ್ತೊಂದು ವಾರದಲ್ಲಿ ಅವನು ವಿದೇಶಕ್ಕೆ ಹೊರಡುತ್ತಾನೆ. ಮಾಹಿತಿ ತಂತ್ರಜ್ಞಾನದಲ್ಲಿ ಇನ್ನೂ ಹೆಚ್ಚಿನ ಸಾಧನೆಗಾಗಿ. ಆದರೆ ತಾನು? ಮತ್ತೊಮ್ಮೆ ತನ್ನ ಮನವೊಪ್ಪುವ ವಿವರಗಳಿಗೆ ವೆಬ್ ಪೇಜ್ ಹುಡುಕಲೇ ಎಂಬ ಹುಚ್ಚು ವಿಚಾರ ಮನಸ್ಸಿಗೆ ಹೊಳೆದು ನಗು ಬಂದಿತು.
ಗಡಿಯಾರದ ಗಂಟೆ ನಾಲ್ಕು ಬಾರಿಸಿತು. ಯಾಂತ್ರಿಕವಾಗಿ ಎದ್ದು, ಸಂಜೆಯ ಸಮಾರಂಭಕ್ಕೆ ತಯಾರಿ ನಡೆಸಿದಳು ಸಂಧ್ಯಾ.

Leave a Reply