ವಾಸ್ತು ಅಂದ್ರ ಮನೆ-ಮನಸ್ಸು ಮುರಿಯುದಲ್ಲ

ವಾಸ್ತು ಅಂದ್ರ ಮನೆ-ಮನಸ್ಸು ಮುರಿಯುದಲ್ಲ

                                                                       – ರಘೋತ್ತಮ್ ಕೊಪ್ಪರ್

ವಾಸ್ತು ಶಾಸ್ತ್ರ ಹಾಗೂ ಅದರ ಅನ್ವಯಿಕೆಯ ನಿಯಮ, ವಿಧಿ ವಿಧಾನಗಳನ್ನು ಕುರಿತು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜಿಜ್ಞಾಸೆ ನಡೆದಿದೆ. ಈಗಾಗಲೇ ಎಷ್ಟೋ ಜನರು ಇಮಾರತುಗಳನ್ನು ಕಟ್ಟಿದ ಮೇಲೆ ಕೆಡವಿದ್ದಾರೆ. ಅದಕ್ಕೆ ಕಾರಣ ವಾಸ್ತು ಕುರಿತು ಅನೇಕ ಆತಂಕಕಾರಿ ಭಾವನೆಗಳನ್ನು ಬೆಳೆಸಿಕೊಂಡು ಕಳವಳ, ಭೀತಿಗೊಂಡು ಯಾರೋ ಏನೋ ಹೇಳಿದರೆಂದು ಮನ ಕೆಡಿಸಿಕೊಂಡು ಮನೆ ಕೆಡವಿದವರು ಹಲವರು.  ತಮ್ಮ ವೃತ್ತಿಯಲ್ಲಿ ಕಂಟಕ ಬರುತ್ತಿದೆ, ವ್ಯಾಪಾರದಲ್ಲಿ ನಷ್ಟವಾಗಿದೆ, ಆರೋಗ್ಯದಲ್ಲಿ ಸಮಸ್ಯೆಯುಂಟಾಗಿದೆ ಎಂದು ಚಿಂತಿಸುವರು ಬಹಳ.
ನೀವು ಒಂದು ಮನೆ ಕಟ್ಟಿಸಿದ್ದೀರಿ. ಯಾರೋ ಬಂದು ಏನೋ ಹೇಳಿದೊಡನೆ ಮನಸ್ಸು ಕೆಡಿಸಿಕೊಳ್ಳಬೇಡಿ. ವಾಸ್ತು ಎನ್ನುವುದು ಮೂಢನಂಬಿಕೆಯಾಗಬಾರದು.
ಆದರೆ ಇಲ್ಲಿ ವಾಸ್ತು ಅನ್ನುವುದು ಸುಳ್ಳು ಅಂತಲ್ಲ. ಅದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ. ಈಶಾನ್ಯದಲ್ಲಿ ನೀರಿನ ತೊಟ್ಟಿ ಇದ್ದರೆ ಮುಂಜಾನೆ ಬೀಳುವ ಸೂರ್ಯನ ಕಿರಣಗಳು ನೇರವಾಗಿ ಯಾವುದೇ ಅಡೆ ತಡೆ ಯಿಲ್ಲದೆ ನೀರಿಗೆ ಬೀಳುತ್ತವೆ. ಆ ಕಿರಣಗಳಲ್ಲಿ ನೀರಿನಲ್ಲಿರುವ ಬ್ಯಾಕ್ಟೇರಿಯಾಗಳನ್ನು ಕೊಲ್ಲುವ ಶಕ್ತಿ ಇರುವುದರಿಂದ ನೀರು ಶುದ್ಧಗೊಳ್ಳುತ್ತದೆ. ಇಷ್ಟೆ. ಅದಕ್ಕೆ ಬೇರೆ ಯಾವ ಕಾರಣವೂ ಇಲ್ಲ. ನಿಮ್ಮ ನೀರಿನ ಟ್ಯಾಂಕ್ ಬೇರೆ ಕಡೆಗೆ ಇದ್ದರೆ ಅದನ್ನು ಮುಚ್ಚಿ ಈಶಾನ್ಯದ ಕಡೆಗೇ ಮಾಡಬೇಕೆಂಬ ಶಾಸನ ಎಲ್ಲಿಯೂ ಇಲ್ಲ. ಹಾಗೆ ಮಾಡಲೂ ಬೇಡಿ.
ಇಂದು ಜೀವನಾಧಾರಕ್ಕೋಸ್ಕರ ಅಲ್ಪ ಸ್ವಲ್ಪ ಓದಿದವರು ವಾಸ್ತು ಶಾಸ್ತ್ರದ ಬಗ್ಗೆ ಮಾತನಾಡುತ್ತಾರೆ. ಯಾರದಾದರೂ ಮನೆಗೆ ಹೋದರೆ ಅಯ್ಯೋ ಇದೇನು ಮಾಡಿಬಿಟ್ಟಿರಿ ಎಂದು ಉದ್ಗಾರ ತೆಗೆದು ಅವರ ತಲೆ ಕೆಡಿಸಿ, ಅವರ ಮಾನಸಿಕ ನೆಮ್ಮದಿ ಹಾಳು ಮಾಡಿ ಹೋಗಿಬಿಡುತ್ತಾರೆ. ಈ ಲೇಖನ ಬರೆಯಲು ಕಾರಣವೂ ಅದೆ. ನಾವು ಗದುಗಿನಲ್ಲಿ ನಮ್ಮ ಮನೆಯ ಮೇಲೆ ಸಿಂಗಲ್ ಬೆಡ್ ರೂಮ್ ಮನೆ ಕಟ್ಟಿಸಿದೆವು. ನಮ್ಮ  ಮನೆಯ ಕಡೆಗೆ ಇರುವ ಒಬ್ಬರು (ಅವರು ವಾಸ್ತು ಶಾಸ್ತ್ರ ಓದಿದವರಲ್ಲ) ನಮ್ಮ ಮನೆಗೆ ಬಂದು ನೋಡಿದಾಗ ಅಯ್ಯೋ ಇದೇನು ಅಡುಗೆ ಮನೆ ಈ ದಿಕ್ಕಿನಲ್ಲಿದೆ ಹೀಗಾದರೆ ತಪ್ಪು ನೋಡಿ ಏನಾದರೂ ತೊಂದರೆಗಳು ಬರುತ್ತವೆ ಎಂದು ನನಗೆ ಜೋರಾಗಿ ಗದರಿದ. ನಾನು ನಕ್ಕು ಸುಮ್ಮನಾದೆ. ಅವನಿಗೆ ಗೊತ್ತಿಲ್ಲ, ನಾನು ಇದುವರೆಗೂ ಆರವತ್ತಕ್ಕೂ ಹೆಚ್ಚು ಮನೆಗೆ ಮತ್ತು ಫ್ಯಾಕ್ಟರಿಗಳಿಗೆ ವಾಸ್ತು ಹೇಳಿದ್ದೇನೆ ಅಂತ.
ನಿಮಗೆ ಈ ದಿಕ್ಕು ಆಗುವುದಿಲ್ಲ ಎಂದು ಯಾರಾದರೂ ಹೇಳಿದರೆ ಸುಮ್ಮನೆ ನಕ್ಕು ಬಿಡಿ. ತಲೆ ಕೆಡಿಸಿಕೊಳ್ಳಬೇಡಿ. ಎಲ್ಲ ದಿಕ್ಕುಗಳು ನಮಗೆ ಬೇಕು. ಈ ಪ್ರಪಂಚದಲ್ಲಿ ಹುಟ್ಟುವುದೇ ಒಂದು ಪುಣ್ಯ. ಅಂದ ಮೇಲೆ ಯಾವ ದಿಕ್ಕು ಆದರೇನು.. ಅದೇ ನಮಗೆ ಲಕ್ಕು…ಅಲ್ಲವೇ… ಏನಂತೀರಿ?

2 Comments

  1. ರಘೋತ್ತಮ ಲೇಖನ ಛಂಧ ಅದ. ಲೇಖನಗಳಲ್ಲಿ ನಮ್ಮ ಗದಗ ಭಾಷಾ ಬಳಕೆ ಇರಲಿ.

  2. ಒಳಗಿನ ವಸ್ತು ವ್ಯವಸ್ಥಿತವಾಗಿದ್ದರೆ ಅದುವೇ ವಾಸ್ತು
    ಶರೀರವಾಗಲಿ ಮನೆಯೇ ಆಗಲಿ, ಕಟ್ಟಿದ ಮನೆ ಸಿಕ್ಕ ಶರೀರ ಪ್ರಕೃತಿಯ ನಿಯಮಕ್ಕೊಳಪಟ್ಟಿದ್ದರೆ
    ಅದುವೇ ವಾಸ್ತು ಇಲ್ಲದಿದ್ದರೆ ಎಲ್ಲವೂ ಸುಸ್ತು

    ಅಲ್ಲೇ ನೆಲೆಸುವುದು ಆಯುರಾರೋಗ್ಯ ಐಶ್ವರ್ಯ

Leave a Reply