ವಸುಧೈವ ಕುಟುಂಬಕಂ
ವೈವಿಧ್ಯಮಯವಾದ ಭಾರತೀಯ ಸಂಪ್ರದಾಯದಲ್ಲಿಯ ಉಪನಿಷತ್ತಿನ ಒಂದು ವಾಕ್ಯವಿದು. ಇದರ ವಿಶೇಷ ಅರ್ಥದಿಂದಾಗಿ ಇಂದಿಗೂ ಈ ವಾಕ್ಯ ತನ್ನದೇ ಆದ ಒಂದು ವಿಶೇಷತೆಯನ್ನು ಹೊಂದಿದೆ. ಅನೇಕ ಸಂಸ್ಕೃತಿಗಳು, ಅವುಗಳನ್ನು ಅನುಸರಿಸುವ ಅನೇಕ ಕುಟುಂಬಗಳು… ಆದರೂ ಇವೆಲ್ಲವನ್ನೂ ಮೀರಿದ ನಾವು ವಿಶ್ವ ಕುಟುಂಬಿಗಳು. ವಿಶ್ವವೇ ಒಂದು ಕುಟುಂಬ ಎಂದು ಹೇಳವ ಈ ಕುಟುಂಬ ವ್ಯವಸ್ಥೆ ನಮ್ಮದು.
ಮಗು ಹುಟ್ಟದಿ ಕೂಡಲೇ ಕಣ್ಣು ತೆರೆಯುವುದೇ ತನ್ನ ಕುಟುಂಬದ ಸದಸ್ಯರ ನಡುವೆ. ಹೀಗೆ ಮಗುವಿನ ಏಳ್ಗೆಗೆ ಕುಟುಂಬವೇ ಭದ್ರ ಬುನಾದಿ ಎನ್ನಬಹುದು. ಕುಟುಂಬ ವ್ಯವಸ್ಥೆಯ ಬಗ್ಗೆ ಅಷ್ಟೇನೂ ಆಸ್ಥೆ ಹೊಂದಿರದ ವಿದೇಶೀಯರಿಗೂ ಇತ್ತೀಚೆಗೆ ಈ ವ್ಯವಸ್ಥೆಯ ಮಹತ್ವದ ಅರಿವುಂಟಾಗಿರುವುದರ ಫಲವಾಗಿ ವಿಶ್ವಸಂಸ್ಥೆ 1993 ರ ಮೇ 15ರಂದು ಜನರಲ್ ಅಸೆಂಬ್ಲಿಯಲ್ಲಿ ಅಂತರರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸುವ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಂದಿನಿಂದ ವಿಶ್ವಿವಡೀ ಪ್ರತಿ ವರ್ಷ ಮೇ 15ನ್ನು ಅಂತರರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನಾಗಿ ಆಚರಿಸುತ್ತ ಬಂದಿದ್ದೇವೆ. ಹೀಗೆ ಸಾವಿರಾರು ವರ್ಷಗಳಿಂದ ನಮ್ಮಲ್ಲಿ ಚಾಲ್ತಿಯಲ್ಲಿರುವ, ಈ ವಸುಧೈವ ಕುಟುಂಬಕಂ ವಾಕ್ಯದ ಮಹತ್ತರ ಉದ್ದೇಶದ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ವಿಚಾರವನ್ನು ವಿಶ್ವ ಸಂಸ್ಥೆಯು ಕೂಡ ದಶಕಗಳ ಹಿಂದೆಯೇ ಒಪ್ಪಿಕೊಂಡಂತಾಗಿದೆ. ಇಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಭೌಗೋಳಿಕವಾಗಿ ಕುಟುಂಬಗಳ ಮೇಲೆ ಪರಿಣಾಮ ಬೀರುವ ವಿಷಯದಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯಕ್ಕೆ ಒತ್ತು ಕೊಡಲಾಗಿದೆ. ಕುಟುಂಬದ ಪ್ರತಿ ಸದಸ್ಯರ ಶಿಕ್ಷಣ, ಆರೋಗ್ಯ, ಯೋಗಕ್ಷೇಮಕ್ಕೆ ಉತ್ತೇಜನ ನೀಡುವುದು, ಮಗುವಿನ ಕಲ್ಯಾಣಕ್ಕೆ ಪೂರಕವಾಗಿ ಬಾಲ್ಯದಲ್ಲಿ ಮನೆಯಲ್ಲಿಯೇ ಮೌಲ್ಯಗಳ ಬಗೆಗಿನ ವಿಶೇಷ ಆದ್ಯತೆ ಇವೇ ಮುಂತಾದ ಉದ್ದೇಶಗಳನ್ನು ಈ ದಿನಾಚರಣೆ ಹೊಂದಿದೆ. ಪ್ರತಿ ವ್ಯಕ್ತಿಯ ಸುಸ್ಥಿರ ಅಭಿವೃದ್ಧಿಗಾಗಿ ವಿಶ್ವ ಸಂಸ್ಥೆಯು ಅನೇಕ ಪರಿಣತರೊಂದಿಗೆ ಚರ್ಚೆ ಮಾಡಿ ಮಾನವ ಹಕ್ಕುಗಳು, ಲಿಂಗಸಮಾನತೆ, ಶಾಂತಿ ಮತ್ತು ಅಹಿಂಸೆ ಇತ್ಯಾದಿಗಳನ್ನು ಶಿಕ್ಷಣದ ಮೂಲಕ ಪ್ರಸಾರ ಮಾಡುವ ಕಾರ್ಯ ಹಾಗೂ ಜಾಗತಿಕ ಪೌರತ್ವಗಳಿಗೆ ಇಲ್ಲಿ ಒತ್ತು ನೀಡಲಾಗಿದೆ.
ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಸಮಾಜ ಎಂದು ನಾವೆಲ್ಲ ಎಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡಿದರೂ ಇವೆಲ್ಲವುಗಳಿಗೂ ಅಡಿಪಾಯ ನಮ್ಮ ನಮ್ಮ ಕುಟುಂಬಗಳು. ಅಂಥ ಕುಟುಂಬದ ಸಂಬಂಧಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಇಂದು ಹಣ, ಕೀರ್ತಿ, ಅಂತಸ್ತುಗಳ ಬೆನ್ನು ಹತ್ತಿ ಓಡುತ್ತಾ ಪ್ರೀತಿ, ಮಮತೆ, ವಿಶ್ವಾಸ, ನಂಬಿಕೆಗಳಂಥ ಅಪೂರ್ವ ಸಂಪತ್ತಿನ ಬಗ್ಗೆ ಅನಾದರ ಹೊಂದುತ್ತಲಿದ್ದಾರೆ. ಕ್ಷುಲ್ಲಕ್ಕ ಕಾರಣಕ್ಕೆ, ಕ್ಷಣೀಕ ಸಂತೋಷಕ್ಕಾಗಿ ಸಂಬಂಧಗಳು ಹಳಸುತ್ತಲಿವೆ. ರಕ್ತ ಸಂಬಂಧಿಗಳು ದಾಯಾದಿಗಳು ಬದುಕುತ್ತಿದ್ದಾರೆ. ‘ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೇ ಸಾರಿದ ನಾವಿಂದು ಕೌಟುಂಬಿಕ ಮೌಲ್ಯಗಳನ್ನು ಕಳೆದುಕೊಳ್ಳುವತ್ತ ನಡೆದಿದ್ದೇವೆ. ಈ ಎರಡು ಪದಗಳ ಹಿಂದೆ ಇನ್ನೆರಡು ಪದಗಳಿವೆ. ‘ಉದಾರ ಚರಿತಾನಾಂತು’- ಉದಾರ ಮನಸ್ಸು ಹೊಂದಿರುವವನಿಗೆ ವಿಶ್ವವೇ ಒಂದು ಕುಟುಂಬ. ಈ ಅದ್ಭುತ ಕಲ್ಪನೆಯ ಬೇರುಗಳು ಪ್ರತಿಯೋರ್ವರ ಕುಟುಂಬದಲ್ಲಿವೆ. ನಾನು, ನನ್ನ ಕುಟುಂಬ, ನನ್ನ ಬಂಧುಗಳು, ನನ್ನ ಊರು, ನನ್ನ ರಾಜ್ಯ, ನನ್ನ ದೇಶ… ಇವೆಲ್ಲವುಗಳಿಗೂ ಮೀರಿ ನನ್ನ ವಿಶ್ವ.
ಇಂದು ನಮಗೆ ಬೇಕಾಗಿರುವುದು ಮಾನವಪ್ರೀತಿಯ ನೆಲೆಗಟ್ಟಿನ ಸಮಾಜ. ಯಾವುದೇ ಭೇದ-ಭಾವ, ಜಾತಿ ಸಿದ್ಧಾಂತಗಳ ಭಿನ್ನಾಭಿಪ್ರಾಯವಿಲ್ಲದ ಸಮಾಜ. ಹಲವಾರು ಸವಾಲುಗಲ ನಡುವೆಯೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಬಂಧುತ್ವದ ಮೂಲಮಂತ್ರ, ವೈವಿಧ್ಯತೆ ನಮ್ಮ ವಿಶೇಷತೆಯಾದರೂ ಏಕತೆ ನಮ್ಮ ಆಧಾರಸ್ತಂಭ. ನಾನಾ ಸಂಸ್ಕೃತಿ, ಪರಂಪರೆ, ಪರಿಸರಗಳ ನಡುವೆಯೂ ಸಮಕಾಲೀನ ಜ್ಞಾನ ವಿಜ್ಞಾನ ಮುಂದುವರಿಯಬೇಕಿದೆ.
ಮಾಲತಿ ಮುದಕವಿ,ಧಾರವಾಡ- 580007