ವಸಂತದಲ್ಲಿ ಆರೋಗ್ಯ ಪಾಲನೆ
ಡಾ. ಸತ್ಯನಾರಾಯಣ ಭಟ್ ಪಿ.
ಆಯುರ್ವೇದಶಾಸ್ತ್ರದಲ್ಲಿ ‘ವಸಂತವಮನ’ ಎಂಬ ಒಂದು ಸಂಗತಿ ಇದೆ. ವಸಂತಕಾಲದ ಕಫ ಸಂಚಯ ಹೋಗಲಾಡಿಸಲು ಕೈಗೊಳ್ಳುವ ಉಪಾಯ. ಪಂಚಕರ್ಮದ ಮೊದಲ ಚಿಕಿತ್ಸೆಯಾದ ವಮನ, ಎಂದರೆ ದೋಷ ಹೊರಹಾಕುವ ವಾಂತಿ ಮಾಡಿಸುವ ಚಿಕಿತ್ಸೆ. ಅದು ರೋಗಿಗಳಿಗೆ ಮಾತ್ರ ಅಲ್ಲ, ರೋಗ ಬರದಿರಲು ಮಾಡುವ ಸ್ವಸ್ಥರಿಗೆ ಕೈಗೊಳ್ಳುವ ಚಿಕಿತ್ಸೆ.
ಇದೀಗ ಮತ್ತೆ ಮಾಮರಗಳು ಹೂಬಿಟ್ಟಿವೆ. ವಸಂತದ ಹಬ್ಬವನ್ನು ಕುಹೂ ಕುಹೂ ಎಂದು ಸಂಗಾತಿಯನ್ನು ಕರೆಯುತ್ತಾ ಕೋಗಿಲೆ ಆಚರಿಸತೊಡಗಿದೆ. ಈ ಋತುವಿಗೆ ‘ಮಧುದೂತಿ’ ಎಂಬ ಪರ್ಯಾಯ ಹೆಸರಿದೆ. ವಸಂತದ ವರ್ಣನೆಯಂತೂ ಕವಿಗಳಿಗೆ ಹಬ್ಬ. ಆದರೆ ವೈದ್ಯರಿಗೆ ಇನ್ನೊಂದು ರೀತಿಯ ಹಬ್ಬ. ಅರ್ಥಾತ್ ವಸಂತ ಋತುವಿನ ಹೊಸ ಹೊಸ ಕಾಯಿಲೆಗಳು ಆಸ್ಪತ್ರೆ, ಚಿಕಿತ್ಸಾಲಯಗಳ ಮುಂದೆ ರೋಗಿಗಳ ಸರತಿಯ ಸಾಲು ಹೆಚ್ಚಿಸುತ್ತವೆ. ಹೀಗಿರುವ ವಸಂತಋತುವಿನಲ್ಲಿ ಆರೋಗ್ಯಪಾಲನೆ ಸೂತ್ರಗಳೇನಿವೆ? ರೋಗ ಬರದಂತೆ ತಡೆಯಲು ಸಾಧ್ಯವೇ?
ಒಂದೆಲಗ ಎಂಬ ಎಲೆಗಳು ನೀರಾಸರೆಯವು. ಒಗರು ಕಹಿ ರಸದ ಎಲೆಗಳು ಅವು. ಗದ್ದೆ ಬದುವಿನ ಅಂತಹ ಸೊಪ್ಪು ಆಯ್ದು ತಂದು ಹಸಿ ಗೊಜ್ಜು(ತಂಬುಳಿ) ಸೇವನೆಗಿದೆ ಅವಕಾಶ. ಅತ್ತ ಪರೀಕ್ಷೆಯ ಆತಂಕ ಕಳೆಯಲು ಅದು ಸಹಕಾರಿ. ಬ್ರಾಹ್ಮಿ ಎಂಬ ಇನ್ನೊಂದು ಸಸ್ಯವೂ ಇದೇ ತೆರನಾದುದು. ನೀರಾಸರೆಯ ಪುಟಾಣಿ ಸಸ್ಯ. ಇವೆರಡೂ ಕಹಿ ಮತ್ತು ಒಗರು ರಸದವು. ಇವನ್ನು ನಿತ್ಯ ಬಳಸಿರಿ. ಕಫ ಮತ್ತು ತಮೋ ಗುಣ ಗೆಲ್ಲಿರಿ. ಮನೆಯ ದುಗುಡ ದುಮ್ಮಾನ, ಒತ್ತಡದ ಕ್ಷಣಗಳನ್ನು ಬಗೆಹರಿಸಲು ಪ್ರಕೃತಿ ನೀಡಿದ ವರವೇ ಒಂದೆಲಗ ಮತ್ತು ಬ್ರಾಹ್ಮಿ. ಇದನ್ನು ಮನೆಯಂಗಳದಲ್ಲಿ ಬೆಳೆಸಿರಿ. ನಿತ್ಯ ಬಳಸಿರಿ. ಬೇಸಿಗೆಯ ದಿನಗಳ ಬವಣೆ, ಬೇಗುದಿಗಳಿಂದ ಪಾರಾಗಿರಿ. ಕಷಾಯ ಅಂದರೆ ಒಗರು ರಸ. ತಿಕ್ತ ಎಂದರೆ ಕಹಿ. ಕಟು ಎಂದರೆ ಖಾರ. ಇವು ಮೂರು ರಸಗಳಿಂದ ಕಫ ದೋಷ ಸಂಚಯಕ್ಕೆ ಕಡಿವಾಣ. ಅಂತಹ ಮೂರು ರಸಗಳು ಬ್ರಾಹ್ಮಿ ಮತ್ತು ಒಂದೆಲಗದಲ್ಲಿವೆ.
ಬೇವಿಗಿಂತ ಕಹಿ ವಸ್ತು ಬೇರಾವುದಿದೆ. ಅಂತಹ ಬೇವಿನ ಬಳಕೆ ಯುಗಾದಿಯ ಸಂದರ್ಭದಲ್ಲಿ ಪ್ರಸಿದ್ಧ! ಬೇವಿನ ಮರದ ಎಳೆ ಚಿಗುರುಗಳನ್ನು ಬೆಲ್ಲದ ಸಂಗಡ ಕೂಡಿಸಿ ಸಾಂಕೇತಿಕವಾಗಿ ತಿನ್ನುವುದರಲ್ಲಿಯೇ ಯುಗಾದಿಯ ಹಬ್ಬವನ್ನು ಮುಗಿಸುತ್ತೇವೆ. ಆದರೆ ಸತ್ಯ ಅಷ್ಟೆ ಅಲ್ಲ. ಇಡಿಯ ವಸಂತಋತು ಪರ್ಯಂತ ಬೇವಿನಂತಹ ಕಹಿವಸ್ತುಗಳನ್ನು ನಿತ್ಯ ಸೇವಿಸಬೇಕಾದ ಅನಿವಾರ್ಯತೆಯ ಆರೋಗ್ಯ ಸೂತ್ರ ಆಚರಣೆ ಅದರಲ್ಲಿದೆ. ಅದನ್ನು ಒಂದು ದಿನ ಮಾತ್ರ ಸೇವಿಸಿ ಬಿಡುವುದಲ್ಲ. ನಿತ್ಯವೂ ಬೇವಿನಂತಹ ಕಹಿಪದಾರ್ಥ ಸೇವಿಸಿದರಾಯಿತು. ಅದೇನು ಮುಷ್ಟಿಗಟ್ಟಲೆ ಬೇಡ. ಕಫ ಕರಗಿಸಲು ಒಂದೈದು ಗ್ರಾಂ ಸೇವನೆ ಮಾತ್ರ ಸಾಕು. ಅಮೃತಬಳ್ಳಿಯ ಎಲೆ, ಕಾಂಡ ಕೂಡ ಅತ್ಯಂತ ಕಹಿ. ಅದರ ಸೇವನೆಯಿಂದ ಬಿಸಲುಗಾಲದ ಬೇಗೆ, ಬವಣೆ ಮತ್ತು ಜ್ವರ, ನೆಗಡಿ ಕಾಯಿಲೆ ತಪ್ಪಿಸಲಾದೀತು.
ಶಿಶಿರ ಎಂದರೆ ಶೀತ ಋತುಗಳಲ್ಲಿ ದೇಹದ ತುಂಬ ಸಂಚಯಗೊಂಡ ಕಫವು ಸೂರ್ಯನ ಪ್ರಖರತೆಯಿಂದ ಕರಗತೊಡಗುವ ಋತುವೇ ವಸಂತ. ಹಾಗಾಗಿ ಜಠರಾಗ್ನಿ ಎಂದರೆ ಹೊಟ್ಟೆ ಹಸಿವೆ ಕೆಡುತ್ತದೆ. ಆಗ ಆಮ ಸಂಚಯ. ಆಮಯ(ರೋಗ)ಗಳ ಸರಮಾಲೆ ಉದ್ಭವ. ಆದ್ದರಿಂದ ಲಘು ಆಹಾರಗಳಷ್ಟೆ ಇದೀಗ ಸಾಕಾಗುತ್ತದೆ. ಮೆಣಸುಕಾಳು ಪುಡಿ(ಪೆಪ್ಪರ್) ಹಾಕಿದ ಬೆಲ್ಲದ ಪಾನಕ ಕೊಡುವ ಸಂಪ್ರದಾಯ ವಸಂತೋತ್ಸವದಲ್ಲಿತ್ತು. ಅದಕ್ಕೆ ಬೇರೇನೂ ಸೇರದು. ಬಿಸಿ ಬಿಸಿ ನೀರು, ಬೆಲ್ಲ ಮತ್ತು ಕಾಳುಮೆಣಸು ಪುಡಿಗಳಷ್ಟೆ ಇರುತ್ತವೆ. ಮನೆಗೆ ಬಂದ ಅತಿಥಿಗಳಿಗೆ, ಮನೆಯವರಿಗೆ ಅಂತಹ ಕಷಾಯ ಆರೋಗ್ಯದಾಯುಕ. ಕಡುಬಿಸಿಲಿನ ಬೇಗೆ ಮತ್ತು ಆಯಾಸ ಪರಿಹಾರಿ. ಕಫ ವಿಲಯನಕಾರಿ. ಬಿಸಿ ನೀರಿಗೆ ಶುಂಠಿ ಹಾಕಿ ಕುಡಿದರೆ ಕೂಡ ಅದೇ ತರಹದ ಗುಣಗಳಿವೆ. ಶುಂಠಿಯ ಪಾನಕ ಸೇವನೆಗೆ ಯೋಗ್ಯ.
ಹಿತಮಿತವಾದ ಲಘು ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿರಿ. ನಡಿಗೆ, ಸೂರ್ಯ ನಮಸ್ಕಾರಗಳು ಶಕ್ತಿ ಇದ್ದವರಿಗೆ ಸಲೀಸು. ಹಾಗೆಂದು ಕಿಲೋಮೀಟರ್ಗಟ್ಟಲೆ ಏದುಬ್ಬಸ ಪಡುತ್ತಾ ದೂರದ ನಡಿಗೆ ಖಂಡಿತ ತರವಲ್ಲ. ಹಣೆ ಮತ್ತು ಕಂಕುಳಲ್ಲಿ ಬೆವರೊಡೆದರೆ ಸಾಕು. ಅದು ಕೂಡಲೆ ನಡಿಗೆ ನಿಲ್ಲಿಸುವ ಮುನ್ಸೂಚನೆ. ಅಷ್ಟು ಮಾತ್ರ ನಿಮ್ಮ ಶಕ್ತಿಯನ್ನು ವಿನಿಯೋಗಿಸಿರಿ. ಉಳಿದರ್ಧ ದೇಹ ಶಕ್ತಿ ಉಳಿಸಿಕೊಳ್ಳಿರಿ. ನಿಜ ಅರ್ಥದಲ್ಲಿ ಅದು ದೇಹದ ರೋಗ ನಿರೋಧಕಶಕ್ತಿಯ ಪೋಷಣೆಗೆ ಅಗತ್ಯವಿದೆ. ಎಣ್ಣೆಸ್ನಾನಕ್ಕಿಂತ ಹದ ಉಗುರು ಬಿಸಿ ನೀರಿನ ಸ್ನಾನ ಸಾಕು. ಮೈಗೆ ಕಡಲೆಯ ಅಥವಾ ಸೀಗೆಯ ಹಿಟ್ಟು ಉಜ್ಜಿಕೊಳ್ಳುತ್ತಾ ಮೈತೊಳೆಯಿರಿ. ಕಫ ಸಂಚಯ ಮತ್ತು ಅನಗತ್ಯ ಕೊಬ್ಬು ಕರಗಲು ಅದು ಉಪಾಯ. ಸ್ನಾನದ ಅನಂತರ ಕರ್ಪೂರ, ಶ್ರೀಗಂಧ, ಅಗುರು, ಕುಂಕುಮ ಕೇಸರದ ಲೇಪನದ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ಅದರಿಂದ ಮನೋಲ್ಲಾಸ; ಚರ್ಮಕಾಯಿಲೆಗೆ ತಡೆ. ಆಯುರ್ವೇದ ಶಾಸ್ತ್ರದಲ್ಲಿ ‘ವಸಂತವಮನ’ ಎಂಬ ಒಂದು ಸಂಗತಿ ಇದೆ. ವಸಂತಕಾಲದ ಕಫ ಸಂಚಯ ಹೋಗಲಾಡಿಸಲು ಕೈಗೊಳ್ಳುವ ಉಪಾಯ. ಪಂಚಕರ್ಮದ ಮೊದಲ ಚಿಕಿತ್ಸೆಯಾದ ವಮನ, ಎಂದರೆ ದೋಷ ಹೊರಹಾಕುವ ವಾಂತಿ ಮಾಡಿಸುವ ಚಿಕಿತ್ಸೆ. ಅದು ರೋಗಿಗಳಿಗೆ ಮಾತ್ರ ಅಲ್ಲ, ರೋಗ ಬರದಿರಲು ಮಾಡುವ ಸ್ವಸ್ಥರಿಗೆ ಕೈಗೊಳ್ಳುವ ಚಿಕಿತ್ಸೆ. ಮೂಗಿಗೆ ಹಾಕುವ ತೀಕ್ಷ್ಣ ತೈಲಾದಿಗಳ ನಸ್ಯಕರ್ಮ ಚಿಕಿತ್ಸೆ ಕೂಡ ಸಮಯೋಚಿತ. ತಲೆಯ ದೋಷಸಂಗ್ರಹವನ್ನು ಹೊರಹಾಕುವ ಉಪಾಯ.
ಮಡೆಹಾಗಲ, ಹಾಗಲ, ಬೂದುಗುಂಬಳ, ಹೀರೆ, ಸೋರೆ, ಬದನೆ, ಬಾಳೆಯಕಾಯಿಗಳಂತಹ ಕಹಿ, ಒಗರು ರಸದ ತರಕಾರಿಗಳು ವಸಂತಋತುವಿನಲ್ಲಿ ಅಡುಗೆಗೆ ಸೂಕ್ತ. ಮಾವಿನ ಕಾಯಿ ಮತ್ತು ಹಣ್ಣುಗಳೊದಗುವ ಕಾಲವಿದು, ಇಷ್ಟಾನುಸಾರ ಮೆಣಸುಕಾಳು, ಶುಂಠಿ ಸಂಗಡ ಬಳಸಬಹುದು. ಅದರಿಂದ ಹೃದಯಕ್ಕೆ ಬಲ ಹೆಚ್ಚುತ್ತದೆ. ದ್ರಾಕ್ಷಿಯ ಹುಳಿಬರಿಸಿದ ಆಸವ ಸೇವನೆ ಸೂಕ್ತ. ಕೋಕಂ ಎಂಬ ಹುಳಿ ಹಣ್ಣಿನ ಕಾಲ ಇದು. ಮುರುಗಲ ಎಂದರೂ ಅದೇನೆ. ಅದರ ಶರಬತ್ ಸೇವಿಸಿರಿ. ಹೃದಯದ ಕಸುವು ಹೆಚ್ಚಿಸಿಕೊಳ್ಳಿರಿ. ಜೇನಿಗೆ ಜಲ ಕೂಡಿಸಿ ಬೇಸಿಗೆಯ ತಾಪ ಕಳೆಯಲು ಮತ್ತು ದೇಹ ತಂಪಾಗಿಸಲು ಸೇವಿಸಬಹುದು. ಕೇವಲ ಜೇನು ಮಾತ್ರ ಬಳಸುವುದು ಸರಿಯಲ್ಲ. ಅದು ವಾಸ್ತವವಾಗಿ ತುಂಬ ಕೆಡುಕು ಮಾಡುತ್ತದೆ. ಬೇಸಿಗೆಯಲ್ಲಿ ಜೇನಿನ ಅತಿ ಬಳಕೆ ನಿಷಿದ್ಧ. ಸೂರ್ಯ ತಲುಪದ ಘನ ಕಾನನದಲ್ಲಿ ವನವಿಹಾರ, ತಂಪು ಜಾಗದಲ್ಲಿ(ಸಮ್ಮರ್ ಕಾಟೇಜ್) ವಾಸದ ಸಂದೇಶಗಳು ಆಯುರ್ವೇದ ಸಂಹಿತೆಗಳಲ್ಲಿವೆ. ನಡು ಮಧ್ಯಾಹ್ನದ ಬಿಸಿಲ ಧಗೆಗೆ ಅಂತಹ ನೆರಳಡಿಯಲ್ಲಿ ಕಾಲಕ್ಷೇಪ ಸೂಕ್ತ. ಹಿಂದೆ ವನಭೋಜನ ಎಂಬ ಪರಿಕಲ್ಪನೆ ಇತ್ತು. ಊರಿನ ಮಂದಿಯೆಲ್ಲ ಕಾಡಿನ ಪರಿಸರದಲ್ಲಿ ಸೇರಿ ಕೂಡಿ ಕಲೆತು ಹಬ್ಬ ಮಾಡುತ್ತಿದ್ದರು. ಅಂತಹ ಗೋಷ್ಠಿ ಕಲಾಪವು ಇಂದು ನಿನ್ನೆಯದಲ್ಲ. ಗುಪ್ತರ ಯುಗದ ಪಳಿಯುಳಿಕೆ. ಇಂದಿಗೂ ಗ್ರಾಮಾಂತರ ಪ್ರದೇಶದ ಎಲ್ಲ ಜಾತ್ರೆ, ಊರಹಬ್ಬ ಆಚರಣೆ ಕಡು ಬೇಸಿಗೆಯಲ್ಲಿಯೇ ತಾನೆ? ಹೀಗೆ ದೇಹದ ಮತ್ತು ದೇಶದ, ಗ್ರಾಮದ ಆರೋಗ್ಯ ಪರಿಕಲ್ಪನೆ ನಮ್ಮ ಸಂಸ್ಕೃತಿಯ ಪ್ರತೀಕ. ಬೇಸಿಗೆಯ ದಿನಗಳಲ್ಲಿ ಹಗಲು ನಿದ್ದೆ ಸಲ್ಲದು. ಎಳೆಯ ಮಕ್ಕಳು ಮತ್ತು ವೃದ್ಧರಿಗೆ ಮಾತ್ರ ಅದು ಓಕೆ. ಉಳಿದವರಿಗೆ ಬೇಡ. ಹೊಟ್ಟೆ ಬಿರಿವಷ್ಟು ಉಣದಿರಿ. ಶೀತದ ಮತ್ತು ಹುಳಿ ರಸದ ಆಹಾರ ಖಂಡಿತ ಬೇಡ. ಆಹಾರದಲ್ಲಿ ಕೊಬ್ಬಿನಂಶಕ್ಕೆ ಸಹ ಅಂಕುಶವಿರಲಿ. ಹೀಗೆ ಈ ಬಾರಿಯ ಬೇಸಿಗೆಯ ಬೇಗೆ ನೀಗೋಣ. ರೋಗವಿಲ್ಲದಂತಹ ಸ್ವಸ್ಥರಾಗೋಣವೆ?