ರಂಗ ಸಂಗೀತವೇ ನನ್ನುಸಿರು…

ರಂಗ ಸಂಗೀತವೇ ನನ್ನುಸಿರು…

ವರ್ಷಗಟ್ಟಲೇ, ದಶಕಗಟ್ಟಲೆ ಒಂದೇ ಕ್ಷೇತ್ರದಲ್ಲಿ ಕಾಯಕಯೋಗಿಗಳಾಗಿ ದುಡಿದ ಎಷ್ಟೋ ಸಾಧಕರು ನಮ್ಮ ನಡುವೆ ಇದ್ದಾರೆ. ತಮ್ಮ ಕರ್ಮಭೂಮಿ ಮತ್ತು ಬದುಕಿನ ಆಪ್ತ ಕ್ಷಣಗಳನ್ನು ‘ ನಾ ಕಂಡ ಬದುಕು’ ಅಂಕಣದಲ್ಲಿ ಮೆಲುಕು ಹಾಕಿದ್ದಾರೆ. ಹಿರಿಯ ರಂಗಕರ್ಮಿ ಆರ್. ಪರಮಶಿವನ್ ಈ ವಾರ ನಮ್ಮೊಂದಿಗೆ…

ನಾನು ಹುಟ್ಟಿದ್ದು 1931ರಲ್ಲಿ. ನಮ್ಮ ತಂದೆಮೈಸೂರಿನಲ್ಲಿ ದೇವಸ್ಥಾನದ ಅರ್ಚಕರಾಗಿದ್ದರು. ಮನೆಯಲ್ಲಿ ಬಡತನ. ಸೋದರಮಾವ ಸೀನ ಮಾಮನ ಭಿಕ್ಷಾನ್ನದಿಂದ ಒಂದು ಹೊತ್ತಿನ ಹಸಿವು ನೀಗುತ್ತಿತ್ತು. ನನ್ನ ತಂದೆಗೆ ನಾಟಕದ ಬಗ್ಗೆ ಒಲವಿರಲಿಲ್ಲ. ನಾನೂ ಈ ಕ್ಷೇತ್ರಕ್ಕೆ ಬರುತ್ತೇನೆಂದು ಅಂದುಕೊಂಡಿರಲಿಲ್ಲ. ಆದರೆ, ವಿಧಿ ನಾಟಕದ ಮೂಲಕವೇ ನನ್ನ ಬದುಕು ಕಟ್ಟಿಕೊಟ್ಟಿದ್ದು ಅಚ್ಚರಿ.

1935ರಲ್ಲಿ ಬೆಂಗಳೂರಿನ ಗುಬ್ಬಿ ವೀರಣ್ಣ ಅವರ ಶಿವಾನಂದ ಥಿಯೇಟರ್‌ನಲ್ಲಿ (ಈಗಿನ ಮೂವಿಲ್ಯಾಂಡ್ ಟಾಕೀಸ್‌) ‘ಚಾಮುಂಡೇಶ್ವರಿ’ ಕಂಪನಿಯ ‘ಮೃಚ್ಛಕಟಿಕ’ ನಾಟಕದಲ್ಲಿ ಚಾರುದತ್ತನ ಮಗ ರೋಹಸೇನನ ಪಾತ್ರದ ಮೂಲಕ ರಂಗಪ್ರವೇಶ ಮಾಡಿದೆ. ಗುಬ್ಬಿ ಕಂಪನಿಯ ಕಿಟ್ಟಪ್ಪ ಮಾಮ ನನ್ನನ್ನು ಚಾಮುಂಡೇಶ್ವರಿ ಕಂಪನಿಗೆ ಸೇರಿಸಿದ್ರು. ರೋಹಸೇನನ ಪಾತ್ರದಲ್ಲಿ ನಾಲ್ಕು ಸಾಲಿನ ಸಂಭಾಷಣೆ, ಎರಡು ಸಾಲಿನ ಎರಡು ಹಾಡುಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೆ. ಇದನ್ನು ನೋಡಿ ಮೆಚ್ಚಿದ ಪ್ರೇಕ್ಷಕರು ಆಗಿನ ಕಾಲದಲ್ಲಿ ಮೂರು ರೂಪಾಯಿ ಬೆಳ್ಳಿ ನಾಣ್ಯ ಆಯೇರಿ (ಉಡುಗೊರೆ) ಕೊಟ್ಟಿದ್ದರು. ನಾಟಕದಿಂದ ಹೊಟ್ಟೆ ತುಂಬುತ್ತೆ, ದುಡ್ಡು ಬರುತ್ತೆ ಅಂತ ತಿಳಿದು ಅದೇ ಕಂಪನಿಯಲ್ಲಿ ಮುಂದುವರಿದೆ. ಕಂಠ ಚೆನ್ನಾಗಿದ್ದುದದರಿಂದ ಹಾಡುಗಾರಿಕೆ ಇರುವ ಪಾತ್ರಗಳನ್ನೇ ಕೊಡುತ್ತಿದ್ದರು. ‘ದಾನಶೂರ ಕರ್ಣ’ದಲ್ಲಿ ಕರ್ಣನ ಮಗ ವೃಷಕೇತು, ‘ರಾಜಸೂಯಯಾಗ’ದಲ್ಲಿ ಜರಾಸಂಧನ ಮಗ ಸಹದೇವ, ‘ತುಕಾರಾಮ’ ನಾಟಕದಲ್ಲಿ ತುಕಾರಾಮನ ಮಗ ಮಹದೇವ, ‘ಭಕ್ತ ಪ್ರಹ್ಲಾದ’ದಲ್ಲಿ ಪ್ರಹ್ಲಾದನಾಗಿ ಅಭಿನಯಿಸಿದೆ. ಆ ಕಂಪನಿಯಲ್ಲಿ ಎಂ.ಶಿವಪ್ಪ ಎನ್ನುವ ಹಾರ್ಮೋನಿಯಂ ಮೇಷ್ಟ್ರು ಸಂಗೀತದ ಓಂ ನಾಮ ಕಲಿಸಿದರು.

ಒಮ್ಮೆ ಹೀಗೇ ನಾಟಕವೊಂದರಲ್ಲಿ ಹಾಡುತ್ತಿದ್ದಾಗ ನನ್ನ ದನಿ ಮೈಸೂರು ಮಹಾರಾಜರ ಆಸ್ಥಾನ ವಿದ್ವಾಂಸರಾಗಿದ್ದ ಡಾ.ಬಿ. ದೇವೇಂದ್ರಪ್ಪ ಅವರ ಕಿವಿಗೆ ಬಿತ್ತು. ಯಾರು ಈ ಹುಡುಗ ಎಂದು ವಿಚಾರಿಸಿದ ಅವರು ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದರು. ದೇವೇಂದ್ರಪ್ಪ ಅವರು ನಾಯಕ ಜಾತಿಗೆ ಸೇರಿದವರಾಗಿದ್ದರು. ನನ್ನಂಥ ಅನೇಕ ಬ್ರಾಹ್ಮಣ ಶಿಷ್ಯಂದಿರು ಅವರಿಗಿದ್ದರು. ನಮಗಾಗಿಯೇ ಬ್ರಾಹ್ಮಣ ಅಡುಗೆ ಭಟ್ಟನನ್ನೂ ನೇಮಿಸಿದ್ದರು. ನನ್ನನ್ನು ತಮ್ಮ ಮನೆಯಲ್ಲಿಟ್ಟುಕೊಂಡೇ ಸಂಗೀತ ಕಲಿಸಿ ವಿದ್ವತ್ ಪರೀಕ್ಷೆ ಪಾಸು ಮಾಡಿಸಿದ ಪುಣ್ಯಾತ್ಮ ಅವರು. ಅಂಥ ಗುರುವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಅವರಿಲ್ಲದಿದ್ದರೆ ನನ್ನಂಥ ಬಡಪಾಯಿಗೆ ಫೀಸು ಕೊಟ್ಟು ಸಂಗೀತ ಕಲಿಯಲು ಸಾಧ್ಯವಿರಲಿಲ್ಲ. ‘ನಿನಗೆ ನನಗಿಂತ ಹೆಚ್ಚು ಅದೃಷ್ಟ ಬರಲಿ ಕಣೋ. ನನ್ನ ವಿದ್ಯೆ ಎಲ್ಲಾ ನಿನಗೆ ಬರಲಿ ಕಣಯ್ಯಾ’ ಎಂದು ಅವರು ಹರಸುತ್ತಿದ್ದರು.

ಎಂ.ಎಸ್.ಸುಬ್ಬುಲಕ್ಷ್ಮಿ ಆಶೀರ್ವಾದ
1942ರಲ್ಲಿ ಮದ್ರಾಸ್‌ಗೆ ಕಾರ್ಯನಿಮಿತ್ತ ಹೋಗಿದ್ದೆ. ಆಗ ಅಲ್ಲಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸತ್ಯಮೂರ್ತಿ ಅವರ ಮಗಳ ಮದುವೆಯಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಸಂಗೀತ ಕಛೇರಿ ಆಯೋಜಿಸಲಾಗಿತ್ತು. ಅವರು ಬರುವುದು ಹದಿನೈದು ನಿಮಿಷ ತಡವಾಯಿತು. ಆಗ ಅಲ್ಲಿಯೇ ಇದ್ದ ಕೆ.ಸುಬ್ರಹ್ಮಣ್ಯಂ (ಪದ್ಮಾ ಸುಬ್ರಹ್ಮಣ್ಯಂ ಅವರ ತಂದೆ) ನನ್ನನ್ನು ವೇದಿಕೆಗೆ ಹಾಡಲು ಕಳುಹಿಸಿದರು. ಅಲ್ಲಿ ನೆರೆದಿದ್ದ ನೂರಾರು ಜನರ ಮುಂದೆ ನಾನು ‘ನಗುಮೋಮ’. ‘ರಾ ರಾ ರಾಜೀವಲೋಚನ’ ಎನ್ನುವ ಎರಡು ಕೀರ್ತನೆಗಳನ್ನು ಹಾಡಿದೆ. ಪ್ರೇಕ್ಷಕರು ಭಾರಿ ಕರತಾಡನದ ಮೂಲಕ ಮೆಚ್ಚುಗೆ ಸೂಚಿಸಿದರೆ, ಅಷ್ಟು ಹೊತ್ತಿಗೆ ಬಂದಿದ್ದ ಎಂ.ಎಸ್.ಸುಬ್ಬುಲಕ್ಷ್ಮಿ ಅವರು ‘ಇಂದ ಪೈಯ್ಯನ ಪಾಡಿಂದು ನಲ್ಲದು ತಂಬಿ’ ಎಂದು ಬೆನ್ನುತಟ್ಟಿ ನನಗೆ ಆಶೀರ್ವದಿಸಿದರು. ಅದು ನನ್ನ ಜೀವನದಲ್ಲಿ ಸಿಕ್ಕ ದೊಡ್ಡ ಬಹುಮಾನ.

ಈ ಕಾರ್ಯಕ್ರಮಕ್ಕೆ ಬಂದಿದ್ದ ಮದ್ರಾಸ್ ಆಲ್ ಇಂಡಿಯಾ ರೇಡಿಯೊದ ನಿರ್ದೇಶಕರು ನನ್ನನ್ನು ಮದ್ರಾಸ್ ಆಕಾಶವಾಣಿಗೆ ನಾಲ್ಕು ಸಂಗೀತ ಕಾರ್ಯಕ್ರಮಗಳಿಗೆ ಆಹ್ವಾನಿಸಿದರು. ಅಲ್ಲಿಂದ ಸಂಗೀತದ ಮೇಲಿನ ಒಲವು ಮತ್ತಷ್ಟು ಹೆಚ್ಚಾಯಿತು. 1941–42ರಲ್ಲಿ ಕೆ. ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿದ್ದೆ. ಆಗ ಹಾಸನ, ಶಿವಮೊಗ್ಗ, ಹೊಸದುರ್ಗ, ದಾವಣಗೆರೆಯಲ್ಲಿ ಮೊಕ್ಕಾಂ ಮಾಡಿದ್ದ ನೆನಪು. 1943ರಲ್ಲಿ ಮತ್ತೆ ಚಾಮುಂಡೇಶ್ವರಿ ಕಂಪನಿ ಸೇರಿದೆ.

ಸಂಗೀತದ ಮೂಲಕ ಪಿ.ಕಾಳಿಂಗರಾಯರು, ಬೀಚಿ, ಮಳವಳ್ಳಿ ಸುಂದರಮ್ಮ ಸೇರಿದಂತೆ ಅನೇಕರ ಪರಿಚಯವಾಯಿತು. 1944ರಲ್ಲಿ ’ಕೃಷ್ಣಲೀಲಾ‘ ಚಿತ್ರದಲ್ಲಿ ಮಕರಂದ ಪಾತ್ರದ ಜತೆಗೆ ಹಿನ್ನೆಲೆ ಗಾಯನ, ಸಹಾಯಕ ಸಂಗೀತ ನಿರ್ದೇಶನ ಮಾಡಿದೆ. ನಾಟಕಗಳಲ್ಲಿ ಪಾತ್ರ ಮಾಡುತ್ತಲೇ ಹಾರ್ಮೋನಿಯಂ ಅನ್ನೂ ನುಡಿಸುವ ಕಲೆ ಕರಗತವಾಗಿಬಿಟ್ಟಿತು. ಹಿರಿಯ ರಂಗಕರ್ಮಿಗಳಾದ ಕೊಟ್ಟೂರಪ್ಪ, ನಾಗೇಶರಾಯರು, ಗಂಗಾಧರರಾಯರು, ಮುರಾರಾಚಾರ್, ಮಳವಳ್ಳಿ ಸುಂದರಮ್ಮ, ಬಿ.ಜಯಮ್ಮ ಮೊದಲಾದವರಿಗೆಲ್ಲಾ ಹದಿನೈದನೇ ವಯಸ್ಸಿನಲ್ಲಿ ಹಾರ್ಮೋನಿಯಂ ನುಡಿಸಿ ಸೈ ಎನಿಸಿಕೊಂಡೆ. ಶೇಷಕಮಲ ನಾಟಕ ಮಂಡಳಿ, ಭಾರತ ಲಲಿತಕಲಾ ಸಂಘ, ಚಾಮುಂಡೇಶ್ವರಿ ನಾಟಕ ಕಂಪನಿಗಳಲ್ಲಿ ಹಾರ್ಮೋನಿಯಂ ನುಡಿಸುತ್ತ ರಂಗಗೀತೆಗಳನ್ನು ಹಾಡುತ್ತಲೇ ಜೀವನ ಸಾಗಿತು.

ಒಮ್ಮೆ ಹೊಳೆನರಸೀಪುರಕ್ಕೆ ನಾಟಕ ನೋಡಲೆಂದು ಹೋದಾಗ ಅಲ್ಲಿನ ಹಾರ್ಮೋನಿಯಂ ಮಾಸ್ತರ್ ‘ಎರಡು ದೃಶ್ಯಗಳಿಗೆ ನೀನು ನುಡಿಸುವೆ ಅಂತ ಹೇಳಿ ಬರುತ್ತೇನೆ’ ಎಂದು ಹೇಳಿ ಹೋದವರು ವಾಪಸ್ ಬರಲೇ ಇಲ್ಲ. ಅಂದು ‘ರಾಮಾಯಣ’ ನಾಟಕಕ್ಕೆ ಪೂರ್ತಿ ನಾನೇ ಹಾರ್ಮೋನಿಯಂ ನುಡಿಸಬೇಕಾಯಿತು. ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಅಂದಿನಿಂದ ನಾನು ‘ಹಾರ್ಮೋನಿಯಂ ಪರಮಶಿವನ್’ ಆಗಿಬಿಟ್ಟೆ. ಮುಂದೆ ಹಾರ್ಮೋನಿಯಂ ವಾದನವೇ ನನ್ನ ಜೀವನವಾಯಿತು. ಮುಂದೆ ಕರ್ನಾಟಕದ ಬಹುತೇಕ ವೃತ್ತಿ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದೆ. ನನ್ನಕ್ಕ ಆರ್. ನಾಗರತ್ನಮ್ಮ ಅವರ ‘ಸ್ತ್ರೀ’ ನಾಟಕ ಮಂಡಳಿಯಲ್ಲೂ ಕೆಲಸ ಮಾಡಿದೆ.

ಅಲ್ಲಿ ಕೃಷ್ಣಲೀಲಾ, ದಾನಶೂರ ಕರ್ಣ, ಗುಲೇಬಕಾವಲಿ, ಮಕ್ಮಲ್ ಟೋಪಿ, ದೇವದಾಸಿ, ಸಂಪೂರ್ಣ ರಾಮಾಯಣ ಮೊದಲಾದ ನಾಟಕಗಳನ್ನು ಪ್ರಯೋಗಿಸಿ ಹೆಸರು ತಂದುಕೊಟ್ಟೆ.

ಕೇರಳಪುರದ ಶ್ರೀನಿವಾಸ ಥಿಯೇಟ್ರಿಕಲ್ ಕಂಪನಿಯಲ್ಲಿ ಡಾ.ರಾಜ್‌ಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯ ಅವರ ಜತೆಗೆ ಹಾರ್ಮೋನಿಯಂ ನುಡಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ನನ್ನ ಮತ್ತು ರಾಜ್‌ ಕುಟುಂಬದ ಒಡನಾಟ ಗಟ್ಟಿಯಾಯಿತು. 1948ರಲ್ಲಿ ರಾಜ್ ಕುಟುಂಬ ಕನಕಪುರದ ಗುರಿಕಾರರ ಮನೆಯಲ್ಲಿ ವಾಸವಾಗಿತ್ತು. ಅವರಿಗೂ ಬಡತನ, ನನಗೂ ಬಡತನ. ಗುರಿಕಾರರು ಕೊಟ್ಟ ರಾಗಿಹಿಟ್ಟಿನಿಂದ ಮುದ್ದೆ ಮಾಡಿ ರಾಜ್‌ಕುಮಾರ್ ಅವರ ಅಮ್ಮ ನಮಗೆ ಬಡಿಸುತ್ತಿದ್ದರು.

ಮರ್ಯಾದೆಗೆ ಅಂಜಿ ಕುಡಿತ ಬಿಟ್ಟೆ

ನಾನು, ಮುಸುರಿ ಕೃಷ್ಣಮೂರ್ತಿ, ಮಾಸ್ಟರ್ ಹಿರಣ್ಣಯ್ಯ ಮೂವರೂ ಕುಡಿಯುತ್ತಿದ್ದೆವು. ಆಗೆಲ್ಲಾ ನಮ್ಮ ಮುಂಜಾವು ಶುರುವಾಗುತ್ತಿದ್ದುದೇ ಕುಡಿತದಿಂದ. ಒಮ್ಮೆ ಬಳ್ಳಾರಿ ಲಲಿತಮ್ಮ ಕಂಪನಿ ಹೊಸಪೇಟೆಯಲ್ಲಿ ಕ್ಯಾಂಪು ಮಾಡಿತ್ತು. ಆಗ ರಾಜ್ಯದಲ್ಲಿ ಮದ್ಯಪಾನ ನಿಷೇಧವಿತ್ತು. ನಾವು ಮೂರು ಜನ ಮುನಿರಾಬಾದ್ ಡ್ಯಾಂ ದಾಟಿ ಪಕ್ಕದ ಆಂಧ್ರಕ್ಕೆ ಹೋಗಿ ಚೆನ್ನಾಗಿ ಕುಡಿದೆವು.

ವಾಪಸ್ ಬರುವಾಗ ಪೊಲೀಸ್‌ ಹಿಡಿದುಕೊಂಡು ಬಿಟ್ಟ. ಸಂಜೆ 6ಕ್ಕೆ ‘ದೇವದಾಸಿ’ ನಾಟಕ. ನಾನು ಹಾರ್ಮೋನಿಯಂ ನುಡಿಸಬೇಕು. ಮುಸುರಿ ಮತ್ತು ಮಾಸ್ಟರ್ ಮುಖ್ಯಪಾತ್ರ ಮಾಡಬೇಕು. ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ನಾನು ತಕ್ಷಣವೇ ಕರ್ನಾಟಕದ ಗಡಿಯಲ್ಲಿ ನಿಂತು ಕುಡಿದ ಮತ್ತಿನಲ್ಲೇ ಪೊಲೀಸ್‌ಗೆ ಆವಾಜ್ ಹಾಕಿದೆ. ಪೊಲೀಸ್‌ಗೆ ಸಿಟ್ಟು ಬಂದು ಯಾರನ್ನು ಬಿಟ್ಟರೂ ಇವನನ್ನು ಬಿಡಲ್ಲ ಅಂತ ನನ್ನ ಮೇಲೆ ರೋಪ್ ಹಾಕಿದ. ಕೊನೆಗೆ ಮುಸುರಿ ಪೊಲೀಸ್‌ಗೆ 20 ರೂಪಾಯಿ ಲಂಚ ಕೊಟ್ಟ ಮೇಲೆ ನಮ್ಮನ್ನು ಬಿಟ್ಟರು. ಸರಿಯಾದ ಸಮಯಕ್ಕೆ ನಾಟಕ ಕಂಪನಿ ತಲುಪಿದೆವು. ಕುಡಿದಿದ್ದರೂ ನಾಟಕ ಎಲ್ಲೂ ಲೋಪವಾಗದಂತೆ ನೋಡಿಕೊಂಡೆವು. ಮುಂದೆ ಸರ್ಕಾರಿ ನೌಕರಿ ಸಿಕ್ಕಮೇಲೆ ಶಾಲಾ ಮಕ್ಕಳ ಮುಂದೆ ಅವಮಾನಕ್ಕೀಡಾಗಬಾರದೆಂದು ಮರ್ಯಾದೆಗೆ ಅಂಜಿ ಕುಡಿತ ಬಿಟ್ಟುಬಿಟ್ಟೆ.

**
ರಾಜ್ ‘ಅಣ್ಣಾವ್ರೇ’ ಅಂತ ಕರೀತಿದ್ದರು
ರಾಜ್‌ಕುಮಾರ್ ಅವರಿಗೆ ನನ್ನ ಕಂಡರೆ ತುಂಬಾ ಇಷ್ಟ. ಅವರು ನನ್ನನ್ನು ‘ಅಣ್ಣಾವ್ರೇ’ ಅಂತ ಕರೆಯುತ್ತಿದ್ದರು. ಸಿನಿಮಾದಲ್ಲಿ ಜನಪ್ರಿಯರಾದ ಮೇಲೂ ಅವರು ಕಾರು ಕಳುಹಿಸಿಕೊಟ್ಟು ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದರು. ಅವರೇ ಸ್ವತಃ ನನಗೆ ಊಟಕ್ಕೆ ಬಡಿಸುತ್ತಿದ್ದರು. ಅವರ ಪ್ರೀತಿಯನ್ನು ಮರೆಯಲಾಗದು. ರಾಜ್‌ಗೆ ತಮ್ಮ ತಂದೆ ಪುಟ್ಟಸ್ವಾಮಯ್ಯ ಹಾಡುತ್ತಿದ್ದ ರಂಗಗೀತೆಗಳನ್ನು ಸಿ.ಡಿ. ಮಾಡಿಸಬೇಕೆಂಬ ಆಸೆ ಇತ್ತು. ಆದರೆ, ಅದು ನೇರವೇರಲೇ ಇಲ್ಲ.
**
ಇನ್ನಷ್ಟು ವಿವರ
ಪತ್ನಿ: ಜಯಲಕ್ಷ್ಮಿ
ಮಕ್ಕಳು: ದೀಪಕ್, ಸ್ಮಿತಾ
ಪ್ರಶಸ್ತಿ: ರಾಜ್ಯೋತ್ಸವ, ಕೇಂದ್ರ ಸಂಗೀತ ನಾಟಕ ಪ್ರಶಸ್ತಿ, ಡಾ.ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ
ಸಂಪರ್ಕಕ್ಕೆ: 94488 51730

Courtesy : Prajavani.net

http://www.prajavani.net/news/article/2018/03/26/561774.html

Leave a Reply