‘ರಂಗಪರಿಕರ ನಿರ್ವಹಣೆ ವಸ್ತು ಕಾಯೋದು ಅಲ್ಲ’
ನೇಪಥ್ಯ ಕಲಾವಿದ ಚಂದ್ರಕಾಂತ ಅವರಿಗೆ ರಂಗಭೂಮಿಯೊಂದಿಗೆ ನಾಲ್ಕು ದಶಕಗಳ ಒಡನಾಟ. ಹೊಸ ತಲೆಮಾರಿನ ರಂಗಚಟುವಟಿಕೆಯನ್ನು ಕೂತೂಹಲದಿಂದ ನೋಡುತ್ತಾ ಇರುವ ಚಂದ್ರಕಾಂತ್ ಅವರೊಂದಿಗೆ ‘ವಿಶ್ವರಂಗಭೂಮಿ’ ದಿನದ (ಮಾರ್ಚ್ 27) ಹಿನ್ನೆಲೆಯಲ್ಲಿ ನಡೆಸಿದ ಮಾತಿನ ಮಂಥನ ಇಲ್ಲಿದೆ.
ಮೈಸೂರಿನ ಒಂಟಿಕೊಪ್ಪನಲ್ಲಿ ಲಗೋರಿ, ಮರಕೋತಿ ಆಟಗಳಲ್ಲಿ ಮೈಮರೆತು ಬಾಲ್ಯವನ್ನು ಸವಿಯುತ್ತಿದ್ದ ರಸಗಳಿಗೆಯ ಸಮಯ 1969ರ ಕಾಲಘಟ್ಟ. ಆಗ ಮೈಸೂರಿನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ‘ಚೌಕದ ದ್ವೀಪ’ ಎನ್ನುವ ಸಿನಿಮಾದಲ್ಲಿ ಬಾಲ ನಟನಾಗಿ ಸಣ್ಣ ಪಾತ್ರದಲ್ಲಿ ಅಭಿನಯಿಸುವ ಅವಕಾಶದಿಂದ ಬಣ್ಣದ ನಂಟು ಬೆಳೆಯಿತು.
ಮುಂದೆ; ಮಿಡ್ಲ್ ಸ್ಕೂಲ್ ಓದುವ ಸಮಯದಲ್ಲಿ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಪಿಯು, ಬೆಂಗಳೂರಿನ ಎಪಿಎಸ್ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರ್ ಮುಗಿಸಿ 1974ರಲ್ಲಿ ಬೆಂಗಳೂರಿನಲ್ಲಿ ಬಿಇಎಂಎಲ್ನಲ್ಲಿ ಗುಣಮಟ್ಟ ನಿಯಂತ್ರಣಾಧಿಕಾರಿಯಾಗಿ ಕೆಲಸ ಸಿಕ್ಕಿತು..
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಂಗಾಸಕ್ತ ಗೆಳೆಯರ ಸಂಪರ್ಕದಿಂದ 1979ರಲ್ಲಿ ರವೀಂದ್ರ ಕಲಾಕ್ಷೇತ್ರದ ಅಂಗಳಕ್ಕೆ ಕಾಲಿಟ್ಟೆ. ರಂಗ ಸಂಪದ ತಂಡದಲ್ಲಿ ಆರ್.ನಾಗೇಶ್ ನಿರ್ದೇಶನದ ‘ಚೋಮ’ ನಾಟಕದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ಹವ್ಯಾಸಿ ರಂಗಭೂಮಿ ಸೆಳೆತ ಚಿಗುರೊಡೆಯಿತು.
ಕಲಾಕ್ಷೇತ್ರದ ಸಂಜೆ ಕ್ಷಣಗಳು ರಂಗಭೂಮಿಯ ಹಲವು ಆಯಾಮಗಳನ್ನು ಅರಿಯಲು ನೆರವಾಯಿತು. ಪ್ರಸಿದ್ಧ ರಂಗ ನಿರ್ದೇಶಕರು, ನಟರ ಸಂಪರ್ಕದಿಂದ ಕಲಾವಿದನಾಗಿ, ಬೆಳಕು ಸಂಯೋಜಕನಾಗಿ, ರಂಗಪರಿಕರ ನಿರ್ವಹಣೆಕಾರನಾಗಿ ಈ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಾಯಿತು.
ಸಿಜಿಕೆ ನಿರ್ದೇಶನದ ‘ಒಡಲಾಳ’ ಮತ್ತು ‘ಮಹಾಚೈತ್ರ’, ಆರ್.ನಾಗೇಶರ ‘ಹರಕೆಯ ಕುರಿ’, ನಾಗಾಭರಣ ನಿರ್ದೇಶನದ ‘ಸಂಗ್ಯಾಬಾಳ್ಯಾ’, ಗಿರೀಶ್ ಕಾರ್ನಾಡರ ‘ಯಯಾತಿ’ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸುವ ಸುದೈವ ಸಿಕ್ಕಿತು.
ಟೆಕ್ನಿಕಲ್ನಲ್ಲಿ ಆಸಕ್ತಿ ಇದ್ದರಿಂದ ರಂಗಪರಿಕರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ. ರಂಗಪರಿಕರಗಳ ಸೃಜನಾತ್ಮಕ ಕಲೆಯಲ್ಲಿ ಪರಿಣಿತರಾದ ಪದ್ದಣ್ಣ, ಶಶಿಧರ ಅಡಪ ಅವರೇ ನನಗೆ ಸ್ಫೂರ್ತಿ. ಅವರಿಂದ ಕಲಿತಿದ್ದು ಸಾಕಷ್ಟು ಇದೆ. ನಾಟಕವೊಂದಕ್ಕೆ ಬಳಸಲಾಗುವ ಕುರ್ಚಿ, ಮೇಜು, ಪುಸ್ತಕ, ನೀರಿನ ಬಾಟಲಿ, ಲೋಟ, ಸಿಗರೇಟು, ಮದ್ಯದ ಬಾಟಲಿ, ಉಡುಪುಗಳು, ಸೈಕಲ್ ಹೀಗೆ ಯಾವುದೇ ವಸ್ತು ನಿಸ್ತೇಜವಾಗಿ ವೇದಿಕೆ ಮೇಲೆ ಬಣಗುಡುವ ಬದಲು ಅದನ್ನು ಬಳಕೆ ಮಾಡುವ ಮೂಲಕ ಜೀವಂತಿಕೆ ಸೃಷ್ಟಿಸಬೇಕಾಗುತ್ತದೆ. ನಿರ್ದೇಶಕ ಸೃಜನಾತ್ಮಕವಾಗಿ ಯೋಚಿಸಿದಾಗ ವಸ್ತುಗಳಿಗೆ ಜೀವ ಬರುತ್ತದೆ. ಇಂತಹ ಹಲವು ರಂಗಸೂಕ್ಷ್ಮಗಳು ಇಲ್ಲಿ ಕಲಿಯಲು ಸಾಧ್ಯವಾಯಿತು.
ರಂಗ ಪರಿಕರ ನಿರ್ವಹಣೆ ಎಂದರೆ ಕೇವಲ ವಸ್ತುಗಳನ್ನು ಕಾಯೋದು ಅಲ್ಲ; ಪರದೆ ಕಟ್ಟುವುದರಿಂದ ಹಿಡಿದು, ಮೊಳೆ ಹೊಡೆಯುವ ತನಕ ತಿಳಿದಿರಬೇಕು. ಯಾವ ಟ್ರಂಕ್ನಲ್ಲಿ ಪಂಚೆ, ಪೈಜಾಮಾ ಇದೆಯೆಂಬ ಸೂಕ್ಷ್ಮ ಜ್ಞಾನ ಅವಶ್ಯ. ಕಲಾವಿದ ತೊಡುವ ಅಂಗಿಯಲ್ಲಿ ಗುಂಡಿ ಇಲ್ಲದಿದ್ದರೆ ಕಸಿವಿಸಿ ಆಗುವ ಸಂದರ್ಭ ಇರುತ್ತದೆ. ಇದೆಲ್ಲಾವನ್ನೂ ಮೊದಲೇ ಗಮನಿಸಿ ವ್ಯವಸ್ಥೆ ಮಾಡಬೇಕಾಗುತ್ತದೆ. ರಂಗಪ್ರವೇಶ ಮಾಡುವ ಕಲಾವಿದನ ಮನಸ್ಸು ನಿರ್ಮಲವಾಗಿದ್ದಾಗ ಮಾತ್ರ ಲೀಲಾಜಾಲವಾಗಿ ಅಭಿನಯಿಸಲು ಸಾಧ್ಯ. ಇದಕ್ಕೆ ನೇಪಥ್ಯದಲ್ಲಿ ಕೆಲಸ ಮಾಡುವವರ ಸಹಕಾರವೂ ಅವಶ್ಯ.
ಮೊದಲೆಲ್ಲಾ ಆಸಕ್ತಿಗೆ ಅನುಗುಣವಾಗಿ ನೇಪಥ್ಯದಲ್ಲಿ ಕೆಲಸ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ; ನೇಪಥ್ಯದಲ್ಲಿ ಕೆಲಸ ಮಾಡಲು ಯಾರೂ ಆಸಕ್ತಿ ತೋರುವುದಿಲ್ಲ. ನಾಟಕದಲ್ಲಿ ಅಭಿನಯಿಸಿ ಧಾರಾವಾಹಿ, ಸಿನಿಮಾಗೆ ಜಿಗಿಯುವ ಹೊಸ ತಲೆಮಾರಿನ ಯುವ ಜನರು ದಿಢೀರನೇ ಯಶ್ ಅಥವಾ ದರ್ಶನ್ ತರಹ ಹೀರೊ ಆಗಬೇಕೆಂಬ ಹುಚ್ಚು ಕನಸಿನವರು. ಆದರೆ, ರಂಗಭೂಮಿಯಲ್ಲಿ ಯಶ್, ದರ್ಶನ್ ಕೂಡ ಟ್ರಂಕ್ ಹೊತ್ತು, ಸೈಕಲ್ ತುಳಿದು ಮೇಲೆ ಬಂದ ಕಷ್ಟ ಸಹಿಷ್ಣುತೆ ಬಗ್ಗೆ ಅರಿವು ಇರೋದಿಲ್ಲ. ಇದನ್ನೇ ವೃತ್ತಿಯಾಗಿ ಮಾಡಿಕೊಂಡು, ಹಣ ಗಳಿಸಲು ಸಾಧ್ಯವೇ ಇಲ್ಲ.
ಈ ರಂಗದಲ್ಲಿ ಸಂಯಮ, ಶಿಸ್ತು, ಬದ್ಧತೆ ಇದ್ದರೆ ಮೇಲೇರಲು ಸಾಧ್ಯ. ಇದಕ್ಕೆ ನಟಿ ಉಮಾಶ್ರೀ ಅವರೇ ಸಾಕ್ಷಿ. ಇಬ್ಬರೂ ಒಂದೇ ಕಾಲಘಟ್ಟದಲ್ಲಿ ರಂಗಭೂಮಿಗೆ ಕಾಲಿಟ್ಟೆವು. ಅವರು ಅಭಿನಯಿಸುತ್ತಲೇ ಕಷ್ಟ ಕೋಟಲೆಗಳ ನಡುವೆ ದೊಡ್ಡ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬಂದರು.
ರಂಗಭೂಮಿಯಲ್ಲಿ ಮೈದಂಡಿಸಿದರೆ ಮನಸ್ಸು ಮಾಗುತ್ತದೆ. ಇದು; 40 ವರ್ಷಗಳ ರಂಗಭೂಮಿ ಒಡನಾಟದಿಂದ ಕಲಿತ ಪಾಠ. ವೃತ್ತಿಯಿಂದ ನಿವೃತ್ತನಾಗಿದ್ದೇನೆ. ಪ್ರವೃತ್ತಿ ರಂಗ ಚಟುವಟಿಕೆಯಿಂದಲೂ ಸದ್ಯಕ್ಕೆ ವಿರಾಮ ಘೋಷಿಸಿದ್ದೇನೆ. ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನನಾಗಿದ್ದೇನೆ.
ಸಂಪರ್ಕ ಸಂಖ್ಯೆ– 98450 61991